Sunday, 15th December 2024

ವಿಕಾಸವೋ ವಿನಾಶವೋ ಆಯ್ಕೆ ನಮ್ಮದು

ಜನತಂತ್ರ

ಡಾ.ಸಿ.ಜೆ.ರಾಘವೇಂದ್ರ ವೈಲಾಯ

‘ಯಥಾ ರಾಜಾ, ತಥಾ ಪ್ರಜಾ’ ಎಂಬ ನಾಣ್ಣುಡಿಯು ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಅಕ್ಷರಶಃ ಸತ್ಯವೆಂದೆನಿಸುತ್ತಿದೆ. ವಿಪರ್ಯಾಸವೆಂದರೆ, ೧೯೪೭ರಲ್ಲಿ ರಾಜಪ್ರಭುತ್ವವನ್ನು ಕೈಬಿಟ್ಟು ಪ್ರಜಾಪ್ರಭುತ್ವವನ್ನು ಒಪ್ಪಿದ ನಮಗೆ ಇಂದಿಗೂ ಅದರ ಮೂಲ ಆಶಯವನ್ನೇ ಅರ್ಥಮಾಡಿಕೊಳ್ಳಲು ಆಗಿಲ್ಲ. ಹಿಂದಿದ್ದ ವ್ಯವಸ್ಥೆಯ ಎಲ್ಲಾ ನ್ಯೂನತೆಗಳೂ ನಮ್ಮ ಇಂದಿನ ವ್ಯವಸ್ಥೆಯಲ್ಲೂ ಹಿಂಬಾಗಿಲಿನಿಂದ ಪ್ರವೇಶಿಸಿ ಅದನ್ನು ಸಂಪೂರ್ಣವಾಗಿ ನಿಸ್ಸತ್ವಗೊಳಿಸಿವೆ.

ಸ್ವಾತಂತ್ರ್ಯ ಪಡೆಯಲು ನಾವಿನ್ನೂ ಅಪ್ರಬುದ್ಧರೆಂದು ಒಪ್ಪಿಕೊಳ್ಳಲೇಬೇಕು. ನಮ್ಮ ವ್ಯವಸ್ಥೆಯು ಹಳ್ಳ ಹಿಡಿಯಲು ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರಗಳೇ ಮೂಲಕಾರಣ. ಈಗ ಅದು ನಮ್ಮೀ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಅದಕ್ಕೆ ರಾಜಕಾರಣಿಗಳೇ ಮುಖ್ಯ ಕಾರಣ ವೆಂಬುದು ಬಹುಜನರ ಅಭಿಪ್ರಾಯ. ಆದರೆ ನನ್ನ ಪ್ರಕಾರ ಅದರ ತಾಯಿಬೇರು ಜನರ ಮನಸ್ಸಿನಲ್ಲಿದೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ
ಭ್ರಷ್ಟತೆಯು ಇಷ್ಟು ಹಾಸುಹೊಕ್ಕಾಗಿರುವುದಕ್ಕೆ ನಾವೇ ಪರೋಕ್ಷವಾಗಿ ಕಾರಣರು.

ಯಾವಾಗ ನಾವು ವೋಟಿಗಾಗಿ ನೋಟಿಗೆ ಮರುಳಾದೆವೋ, ಸರಕಾರಿ ಕಚೇರಿಗಳಲ್ಲಿ ನಮ್ಮ ದೈನಂದಿನ ಕೆಲಸಗಳಿಗಾಗಿ ಲಂಚದ ಮೊರೆಹೋದೆವೋ, ಹಣ-ಹೆಂಡ- ಜಾತಿ-ಮತಗಳ ಕಾರಣಕ್ಕಾಗಿ ಭ್ರಷ್ಟರನ್ನು ಚುನಾಯಿಸಿ ಕಳುಹಿಸಿದೆವೋ ಅಂದೇ ನಮ್ಮ ಅಧಃ ಪತನವು ಆರಂಭವಾಯಿತು. ದೇಶವೆಂಬ ವಟವೃಕ್ಷದ ತಾಯಿಬೇರಿಗೆ ನಾವೇ ಹೀಗೆ ವಿಷಪ್ರಾಶನ ಮಾಡಿ ಅಮೃತಫಲವನ್ನು ನಿರೀಕ್ಷಿಸುವುದೆಂತು? ಇದು ಕೂಡಾ, ‘ಮೊಟ್ಟೆಯಿಂದ ಕೋಳಿಯೋ,
ಕೋಳಿಯಿಂದ ಮೊಟ್ಟೆಯೋ?’ ಎಂಬ ಆದಿಮ ಪ್ರಶ್ನೆಯಂತೆಯೇ.

ನನ್ನ ಅಭಿಪ್ರಾಯದಲ್ಲಿ ಭ್ರಷ್ಟ ಜನರೇ ಭ್ರಷ್ಟ ನಾಯಕರ ಉಗಮಕ್ಕೆ ಮೂಲ. ನಾವು ಲಂಚ ಕೊಡದೇ ಹೋದರೆ ಅವರು ಹೇಗೆ ತಾನೇ ತೆಗೆದು ಕೊಂಡಾರು? Corruption begets corruption. ಒಬ್ಬ ಭ್ರಷ್ಟ ನಾಯಕನೇನೂ ಆಕಾಶದಿಂದ ಬೀಳುವುದಿಲ್ಲ ತಾನೇ! ಆತ ನಮ್ಮೆಲ್ಲರ ನಡುವಿನಿಂದಲೇ ಹೊರಹೊಮ್ಮುವವನು. ಹಾಗಾಗಿ ನಾವು ಸಾಚಾಗಳಾಗಿದ್ದಲ್ಲಿ ಅಂಥವರು ನಮ್ಮಿಂದ ಆರಿಸಿ ಬರಲಾರರು. ಕರ್ಮಸಿದ್ಧಾಂತದ ಪ್ರಕಾರ People get what
they deserve. ನಾವು ರೋಗದ ಮೂಲವನ್ನರಿ ಯದೇ ಹೋದಲ್ಲಿ ಅದಕ್ಕೆ ಪರಿಹಾರವನ್ನು ಹೇಗೆ ತಾನೇ ಒದಗಿಸಬಲ್ಲೆವು? ಮೊದಲು ನಾವು ರೋಗಿ ಗಳೆಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು.

ಇಲ್ಲವಾದರೆ ಚಿಕಿತ್ಸೆಯೇ ಅಸಾಧ್ಯ. Acceptance is the first step of every reformation ಅಂತಾರೆ. ಪ್ರತಿ ಬಾರಿಯೂ ಬಜೆಟ್ ಘೋಷಣೆಯಾಗುತ್ತಿದ್ದಂತೆ ‘ನಮಗೇನು ಸಿಕ್ತು?’ ಎಂದು ನಾವು ಜೊಲ್ಲು ಸುರಿಸುತ್ತಾ ಇರುತ್ತೇವೆ. ಕಾರ್ಮಿಕರಿಗೇನು ಲಾಭ? ಕೃಷಿಕರಿಗೇನು ಸಿಕ್ತು? ತೆರಿಗೆದಾರರಿಗೇನು ವಿನಾಯಿತಿ? ಮಧ್ಯಮ ವರ್ಗದವರಿಗೇನು ಲಾಭ? ದಲಿತರಿಗೇನು ಘೋಷಣೆಯಾಯ್ತು? ಅಲ್ಪಸಂಖ್ಯಾತರಿಗೆಷ್ಟು ಕೋಟಿ? ಆ ಜಾತಿಗೆಷ್ಟು…ಈ ಜಾತಿಗೆಷ್ಟು? ಮಠಕ್ಕೆಷ್ಟು? ಹಜ್ ಭವನಕ್ಕೆಷ್ಟು? ಹೀಗೆ… ಮಾಧ್ಯಮಗಳೂ ಅದನ್ನು ಯಥಾಪ್ರಕಾರ ವರದಿ ಮಾಡುತ್ತವೆ.

ಒಮ್ಮೆಯಾದರೂ ನಿರ್ವಿಕಾರ ಭಾವದಿಂದ ಯೋಚಿಸಿದ್ದೀವಾ? ದೇಶದ ಸಂಪತ್ತನ್ನು ಮತ್ತು ಆದಾಯವನ್ನು ರಾಜಕೀಯ ಉದ್ದೇಶಗಳಿಗಾಗಿ ಜನರಿಗೆ ಮನಬಂದಂತೆ ಹಂಚುವುದೇ ಬಜೆಟ್ಟಿನ ಮೂಲ ಉದ್ದೇಶವೇನು? ಬಜೆಟ್ ಎಂದರೆ ಆಯ-ವ್ಯಯಗಳು ಸರಿಹೊಂದುವಂತೆ ದೇಶದ ಪ್ರಗತಿಯ ಸ್ಪಷ್ಟ ಗುರಿ
ಯನ್ನು ಇಟ್ಟುಕೊಂಡು ಮುಂಬರುವ ಆರ್ಥಿಕ ವರ್ಷದಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳನ್ನು ಎಷ್ಟೆಷ್ಟು ವೆಚ್ಚದಲ್ಲಿ ಮಾಡಬಹುದೆಂಬ ಮುನ್ನೋಟವನ್ನು ನೀಡುವುದೇ ಆಗಿದೆ. ವೋಟಿಗಾಗಿ ಆಮಿಷವೆಂಬಂತೆ ತೆರಿಗೆದಾರರ ಹಣವನ್ನು ಬೇಕಾಬಿಟ್ಟಿ ಹರಿದು ಹಂಚುವುದಕ್ಕಾಗಿ ಈ ಬಜೆಟ್ ಇರುವುದಲ್ಲ.

ನಮಗೇನು ಸಿಕ್ತು ಎಂದು ಲೆಕ್ಕಾಚಾರ ಹಾಕುವುದಕ್ಕೆ ನಾವೇನು ಭಿಕ್ಷುಕರೇ? ನಮಗೆ ದುಡಿದು ತಿನ್ನುವ ತಾಕತ್ತಿಲ್ಲವೇ? ಅದನ್ನೂ ಸರಕಾರವೇ ನೀಡಬೇಕಾ? ಕನಿಷ್ಠ ಆತ್ಮಾಭಿಮಾನವಾದರೂ ನಮಗೆ ಇರಬೇಡವೇ? ಮಾಧ್ಯಮಗಳೂ ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಮರೆತು ತಪ್ಪು ಅಜೆಂಡಾವನ್ನು ನಿರೂಪಿ ಸುವ ಮೂಲಕ ಜನರ ದಾರಿತಪ್ಪಿಸುತ್ತಿವೆ. ನಮಗೆ ಸಂವಿಧಾನ ನೀಡಿರುವುದು ಹಕ್ಕುಗಳನ್ನು ಮಾತ್ರವೇ ಎಂದು ನಾವು ಅಂದುಕೊಂಡಂತಿದೆ. ನಾವು ಎಂದಾದರೂ ನಮ್ಮ ಕರ್ತವ್ಯಗಳ ಬಗ್ಗೆ ಯೋಚನೆ ಮಾಡಿದ್ದೇವಾ? ದೇಶದ ಭವಿಷ್ಯದ ಬಗ್ಗೆ ನಮಗೇನೂ ಜವಾಬ್ದಾರಿ ಇಲ್ಲವೇ? ಇದೆ ಎಂದಾದರೆ ಅದರ ಯಶಸ್ವಿ ನಿರ್ವಹಣೆಯು ನಮ್ಮ ಬಾಧ್ಯತೆಯಲ್ಲವೇ? ದೇಶಕ್ಕಂಟಿದ ಈ ಭ್ರಷ್ಟತೆಯೆಂಬ ವ್ಯಾಧಿಗೆ ನಾವಲ್ಲದೆ ಇನ್ಯಾರು ಚಿಕಿತ್ಸೆ ಮಾಡಿಯಾರು? ಹಾಗಾಗಿ ಮೊದಲು ನಮ್ಮ ಮನಸ್ಸಿನಲ್ಲಿ ಮನೆಮಾಡಿದ ಭ್ರಷ್ಟತೆಯ ಕೊಳೆಯನ್ನು ತೊಳೆಯಬೇಕು.

ಮೊದಲು ಅಂತರಂಗ ಶುದ್ಧಿ, ನಂತರ ಬಹಿರಂಗ ಶುದ್ಧಿ. ಇನ್ನು ನಾವು ಮತದಾನವನ್ನು ಒಂದು ಪ್ರಮುಖ ಸಾಂವಿಧಾನಿಕ ಜವಾಬ್ದಾರಿಯಾಗಿ
ಎಂದಾದರೂ ಗಂಭೀರವಾಗಿ ಪರಿಗಣಿಸಿದ್ದುಂಟೇ? ವಿದ್ಯಾವಂತರು ತಮ್ಮೀ ಕರ್ತವ್ಯವನ್ನು ಮರೆತು ಸೋಂಬೇರಿಗಳಂತೆ ಮತದಾನ ಮಾಡದೇ ಹೋದರೆ ಭ್ರಷ್ಟರು ಮತ್ತು ಅವಿದ್ಯಾವಂತರು ಕೂಡಿ ಅಯೋಗ್ಯರನ್ನು ಆರಿಸಿ ಕಳುಹಿಸುತ್ತಾರೆ. ಮತದಾನದ ದಿವಸ ಪ್ರಜ್ಞಾವಂತರು ರಜೆಯ ಮೋಜಿಗಾಗಿ ಮತದಾನದಿಂದ ದೂರವುಳಿದರೆ ದೇಶಕ್ಕಾಗುವ ದೂರಗಾಮಿ ನಷ್ಟದ ಬಗ್ಗೆ ನಮಗೆ ತಿಳಿದಿದೆಯೇ? ನಮ್ಮ ಮಕ್ಕಳಿಗಾಗಿ ಊರು ತುಂಬಾ ಆಸ್ಥೆಯಿಂದ ಆಸ್ತಿ ಮಾಡಿಡುವ ನಮಗೆ ಅವರ ಭವಿಷ್ಯವು ದೇಶದ ಸುಸ್ಥಿತಿಯ ಬುನಾದಿಯ ಮೇಲೆ ನಿಂತಿದೆ ಎಂಬ ಕನಿಷ್ಠ ಜ್ಞಾನವಾದರೂ ಬೇಡವೇ!

ಇದು ಕೂಡಾ ಒಂದು ರೀತಿಯ ಕರ್ತವ್ಯ ಭ್ರಷ್ಟತೆಯಲ್ಲವೇ? ಅತಿ ಹೆಚ್ಚು ವಿದ್ಯಾವಂತರಿರುವ ದೇಶದ ಮಹಾನಗರಗಳಲ್ಲಿ ಚಲಾವಣೆ ಆಗುವ ಶೇಕಡಾ ವಾರು ಮತಗಳೆಷ್ಟು ಗೊತ್ತೇ? ಸರಾಸರಿ ೫೦ಕ್ಕೂ ಕಮ್ಮಿ. ಹೀಗಿದ್ದಾಗ ಇದನ್ನು ನ್ಯಾಯಿಕ ಚುನಾವಣೆ ಎನ್ನಬಹುದೇ? ಅರ್ಧಕ್ಕೂ ಕಮ್ಮಿ ಜನರಿಂದ ಚುನಾಯಿತರಾದವರನ್ನು ಬಹುಮತದ ಆಯ್ಕೆ ಎನ್ನಲು ಹೇಗೆ ಸಾಧ್ಯ? ದೇಶದ ಬಹುಜನರ ಆಯ್ಕೆಯೇ ಒಂದಾದರೆ, ದೆಹಲಿ, ಬೆಂಗಳೂರಿನ ಜನರ ಆಯ್ಕೆ ಇದಕ್ಕೆ ತದ್ವಿರುದ್ಧವಾಗಿರಲು ಕಾರಣ ಇಲ್ಲಿನ ವಿದ್ಯಾವಂತ ಮತದಾರರ ನಿಷ್ಕ್ರಿಯತೆ. ಇದು ಅನ್ಯಾಯವಲ್ಲವೇ? ಇವರನ್ನು ಬುದ್ಧಿವಂತ ರೆನ್ನಬೇಕೋ, ಮೂರ್ಖರೆನ್ನಬೇಕೋ! ಮತದಾನ ಮಾಡದ ಇದೇ ಜನರು ಸಾಮಾಜಿಕ ಜಾಲತಾಣಗಳಲ್ಲಿ ‘ಜಿಎಸ್‌ಟಿ-ಮುಕ್ತ’ ಅಭಿಪ್ರಾಯಗಳನ್ನು ಮಂಡಿಸುವುದನ್ನು ಕಂಡಾಗ ತೀರಾ ಅಸಹ್ಯವೆನ್ನಿಸುತ್ತದೆ.

ಬಿಟ್ಟಿ ಭಾಗ್ಯಗಳಿಗೆ ಜೊಲ್ಲು ಸುರಿಸಲು ನಾವೇನು ಅಯೋಗ್ಯರೇ? ನಮಗೆ ಕನಿಷ್ಠ ಆತ್ಮಗೌರವವೂ ಇಲ್ಲವೇ? ಕರ್ನಾಟಕದ ರಾಜಕೀಯ ಧುರೀಣ
ರೊಬ್ಬರು ಬಹಿರಂಗ ಸಭೆಯಲ್ಲಿ ‘ನಿಮಗೆ ೧೦ ಕೆ.ಜಿ. ಅಕ್ಕಿ ಬೇಕೋ ಬೇಡ್ವೋ…?’ ಎಂದು ಕೇಳಿದಾಗ ಅದು ನಮಗೆ ಅವಮಾನವೆಂದು ಅನಿಸದೇ
ಇರುವಷ್ಟು ನಾವು ಅಭಿಮಾನ ಶೂನ್ಯರಾಗಿ ಹೋದೆವೇ ಎಂದು ವಿಷಾದವೆನಿಸುತ್ತದೆ. ಯಾವಾಗ ನಾವು ಇಂಥಾ ಜುಜುಬಿ ಬಿಟ್ಟಿ ಭಾಗ್ಯಗಳನ್ನು ನಮ್ಮ ಚುನಾವಣಾ ಪ್ರಣಾಳಿಕೆಗಳ ಪ್ರಮುಖ ಅಂಶವಾಗಿ ಒಪ್ಪಿಕೊಂಡೆವೋ ಅಂದೇ ನಾವು ಮಾನಸಿಕವಾಗಿ ಗುಲಾಮರಾದೆವು. ‘ಕುರಿತವರಲ್ಲದೆ ಮತ್ತಂ ಪೆರರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್’ ಎಂದು ‘ಕವಿರಾಜಮಾರ್ಗ’ ದಲ್ಲಿ ಜಾಣರೆಂದು ಹೊಗಳಿಸಿಕೊಂಡ ಕನ್ನಡಿಗರಿಗೆ ಈಗ ಏನಾಯ್ತು? ‘ಬುದ್ಧಿವಂತರಿಗೆ ಮೂರು ಕಡೆ’ ಎಂಬ ತುಳುನಾಡಿನ ಗಾದೆ ನಮಗೆ ಸರಿಯಾಗಿ ಅನ್ವಯವಾಗುತ್ತದೆ.

ನಮ್ಮ ಆತ್ಮಗೌರವವನ್ನೇ ಅಡವಿಟ್ಟು ದೈನೇಸಿಗಳಾಗಿ ಬದುಕುವುದಕ್ಕಿಂತ ಸಾವೇ ಲೇಸು. ಹೀಗೆ ಕಟ್ಟಿ ಕೊಟ್ಟ ಬುತ್ತಿ ಎಲ್ಲಿಯವರೆಗೆ ಬಂದೀತು? ಕೈಕಾಲು ಗಟ್ಟಿಮುಟ್ಟಾಗಿರುವ ನಾವು ಸ್ವಂತ ಸಂಪಾದನೆಯಲ್ಲಿ ಬದುಕುವುದು ಯಾವಾಗ? ‘ಕಾಯಕವೇ ಕೈಲಾಸ’ ಎಂದ ಬಸವಣ್ಣನ ನಾಡಿನವರು ನಾವೆಂಬು ದನ್ನು ಮರೆಯದಿರೋಣ. ಅವಮಾನದ ವಿರುದ್ಧ ಸಿಡಿದೆದ್ದು ಹೊಸ ಸಾಮ್ರಾಜ್ಯವನ್ನೇ ಕಟ್ಟಿದ ವೀರ ಕದಂಬರ ನಾಡಿನವರಾದ ನಾವುಗಳೇ ಈ ಬಿಟ್ಟಿ ಭಾಗ್ಯಗಳೆಂಬ ಹಳಸಲಿಗೆ ಮರುಳಾದೆವೆಂದರೆ ಇನ್ನು ಯಾರನ್ನೂ ದೂಷಿಸಿ ಫಲವಿಲ್ಲ.

ಈ ಸ್ವಯಂಕೃತ ಅಪರಾಧದ ಪ್ರಾಯಶ್ಚಿತ್ತಕ್ಕಾಗಿ ನಮ್ಮ ಕೆನ್ನೆಗಳಿಗೆ ನಾವೇ ಹೊಡೆದುಕೊಳ್ಳಬೇಕಷ್ಟೇ. ಸ್ವಾರ್ಥ, ಭಾಷೆ, ಜಾತಿ, ಮತ, ಪಂಥಗಳೆಂಬ ಸಂಕುಚಿತ ದೃಷ್ಟಿಯನ್ನು ತೊರೆದು ವೈಶ್ವಿಕ ದೃಷ್ಟಿಕೋನದಿಂದ ನಾವು ರಾಷ್ಟ್ರೀಯ ಹಿತಾಸಕ್ತಿಯೊಂದನ್ನೇ ಗಮನದಲ್ಲಿಟ್ಟುಕೊಂಡು ಸಾಮುದಾಯಿಕ ವಾಗಿ ಮತ ಚಲಾಯಿಸುವುದು ಸಾಧ್ಯವಿಲ್ಲವೇ? ದೇಶಕ್ಕಾಗಿಯಾದರೂ ನಾವು ಒಂದಾಗುವುದು ಅಸಾಧ್ಯವೇ? ಒಡೆದು ಆಳುವ ಹುನ್ನಾರಕ್ಕೆ ನಾವಿನ್ನು ಪೂರ್ಣವಿರಾಮ ಹಾಕೋಣ. ‘ಹತ್ತೆಡೆಯಲ್ಲಿ ಒಂದಡಿ ತೋಡಿ ಬರಲಿಲ್ಲ ನೀರೆನ್ನಬೇಡ.

ಒಂದೆಡೆಯಲ್ಲೇ ಹತ್ತಡಿ ತೋಡು ಬರುವುದು ನೀರಲ್ಲಿ ನೋಡ’. ನಾವು ೨೦೨೪ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ದೇಶವೂ ಶತಮಾನ ಗಳ ದೌರ್ಬಲ್ಯಗಳನ್ನೆಲ್ಲಾ ಮೆಟ್ಟಿ ನಿಂತು ಪ್ರಗತಿಯ ಹೆದ್ದಾರಿಗೆ ಬಂದು ತಲುಪಿದೆ. ಇಂಥ ಅಭೂತಪೂರ್ವ ಅವಕಾಶ ಮತ್ತೊಮ್ಮೆ ದೊರಕದು. ಭಾರತ ವನ್ನು ಪ್ರಗತಿಶೀಲ ಮತ್ತು ವಿಶ್ವಗುರುವಾಗಿಸುವ ಏಕೈಕ ಗುರಿ ಹೊಂದಿದ ಓರ್ವ ಕರ್ಮಯೋಗಿಯ ತಂಡ ಮತ್ತು ಪಾರಂಪರಿಕವಾಗಿ ಭ್ರಷ್ಟತೆ, ನಿಷ್ಕ್ರಿಯತೆ, ಸ್ವಜನಪಕ್ಷ ಪಾತ, ವಂಶಪಾರಂಪರ್ಯದ ರಾಜಕಾರಣವನ್ನೇ ಮೂಲವಾಗುಳ್ಳ ಅವಕಾಶವಾದಿಗಳ ತಂಡಗಳೆರಡೂ ಮತದಾರರ ಮುಂದೆ ಬಂದು ಮತವನ್ನು ಯಾಚಿಸುತ್ತಿವೆ. ಒಂದೆಡೆ ಭವ್ಯ ವಿಕಸಿತ ಭಾರತದ ಕನಸಿದೆ, ಇನ್ನೊಂದೆಡೆ ನಾನಾ ಗ್ಯಾರಂಟಿಗಳೆಂಬ ವಿನಾಶಕಾರಿ ಆಮಿಷಗಳಿವೆ.

ಒಂದು ಪ್ರಗತಿಪರ ಚಿಂತನೆಯಾದರೆ ಇನ್ನೊಂದು ದೇಶದ ಅಧಃಪತನಕ್ಕೆ ಮುನ್ನುಡಿ ಬರೆಯುವಂತಿದೆ. ಒಂದು ಎಲ್ಲರನ್ನೂ ಒಗ್ಗೂಡಿಸುವ ವಿಚಾರಧಾರೆ
ಯಾದರೆ ಇನ್ನೊಂದು ದೇಶವನ್ನು ಖಂಡತುಂಡವಾಗಿ ಒಡೆದು ಆಳುವ ಮನಸ್ಥಿತಿ. ಒಂದೆಡೆ ದೂರಗಾಮಿ ಹಿತವಿದ್ದರೆ ಇನ್ನೊಂದೆಡೆ ಅಲ್ಪಾವಧಿಯ ಸುಖವಿದೆ. ಒಂದು ಪರಾರ್ಥದ ಲೋಕ ಚಿಂತನೆಯಾದರೆ ಇನ್ನೊಂದು ಸ್ವಾರ್ಥದ ಪರಾಕಾಷ್ಠೆ. ಒಂದೆಡೆ ಸ್ಪಷ್ಟ ನಿಲುವುಗಳಿವೆ. ಇನ್ನೊಂದೆಡೆ ಹುಚ್ಚು ವಿತಂಡವಾದ. ಒಂದೆಡೆ ಸರ್ವಸಮನ್ವಯದ ಭಾವವಿದ್ದರೆ ಇನ್ನೊಂದೆಡೆ ತುಷ್ಟೀಕರಣದ ವಿಷಪ್ರಾಶನವಿದೆ.

ಒಂದೆಡೆ ದೇಶದ ಭದ್ರತೆಯ ನೀಲಿನಕ್ಷೆ ಇದ್ದರೆ ಮತ್ತೊಂದೆಡೆ ವಿಚ್ಛಿದ್ರತೆ. ಹೀಗೆ ತದ್ವಿರುದ್ಧವಾದ ಎರಡು ವಿಚಾರವಾದಗಳು ನಮ್ಮ ಮುಂದಿವೆ.
ವಿಕಾಸವೋ… ವಿನಾಶವೋ.. ಆಯ್ಕೆ ನಮ್ಮದೇ. ನೆನಪಿರಲಿ, ನಿಮ್ಮ ಒಂದು ಮತ ಭಾರತದ ಭವಿಷ್ಯವನ್ನು ಎಂದೆಂದಿಗೂ ಬದಲಿಸಬಲ್ಲದು. ನಿಮ್ಮ ಮುಂದಿನ ಪೀಳಿಗೆಯ ಹಣೆಬರಹವನ್ನು ನಿರ್ಧರಿಸುವ ನಿರ್ಣಾಯಕ ಚುನಾವಣೆಯಿದು. ಇದು ಪಕ್ಕಾ ಧರ್ಮಯುದ್ಧವೇ ಹೌದು. ಮತದಾನ ಮಾಡುವ ಕ್ಷಣ ಒಮ್ಮೆ ಕಣ್ಣು ಮುಚ್ಚಿ ನಿಮ್ಮ ಮಕ್ಕಳ ಭವಿಷ್ಯದ ಚಿತ್ರಣವನ್ನೊಮ್ಮೆ ಕಲ್ಪಿಸಿಕೊಳ್ಳಿ.

ಆತ್ಮವಂಚನೆ ಮಾಡಿಕೊಳ್ಳದೇ ಯೋಚಿಸಿ ನಿಮ್ಮ ಮತಚಲಾಯಿಸಿ. ಸ್ವಲ್ಪವೇ ಯಾಮಾರಿದಿರೋ, ಜೋಕೆ. ದುರ್ಜನರಿಗಿಂತ ಹೆಚ್ಚಾಗಿ ಸಮಾಜದ
ಕೆಡುಕಿಗೆ ಮುಖ್ಯ ಕಾರಣ ಸಜ್ಜನರ ನಿಷ್ಕ್ರಿಯತೆ ಮತ್ತು ಮೌನ ಎಂಬುದನ್ನು ಮರೆಯದಿರಿ. Be the change you want to see in the world. ನಾವು ಬದಲಾದರೆ ಜಗತ್ತೂ ಬದಲಾ ದೀತು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಾವು ಕೂಡಾ ಪ್ರಬುದ್ಧರಾಗೋಣ. ತನ್ಮೂಲಕ ಭಾರತವನ್ನು ಸಮರ್ಥ, ಸ್ವಾಭಿಮಾನಿ, ಶಕ್ತಿಶಾಲಿ ಮತ್ತು ಸಮೃದ್ಧ ದೇಶವಾಗಿಸೋಣ. ಬನ್ನಿ ಎಲ್ಲರೂ ಸೇರಿ ಮತದಾನ ಮಾಡೋಣ. ಬಹುಮತದ ಸುಭದ್ರ ಸರಕಾರ ವನ್ನೇ ಮತ್ತೊಮ್ಮೆ ಆಯ್ಕೆ ಮಾಡೋಣ.

(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)