Monday, 25th November 2024

ಜೀವಜಗತ್ತಿಗೆ ಸವಾಲಾಗಿದೆ ಜಲಸಮಸ್ಯೆ

ಜಲಸಂಕಷ್ಟ 

ಎಸ್.ಜೆ.ಹೆಗಡೆ

ಜಗತ್ತಿನ ಸುಮಾರು ೧೮ ಪ್ರತಿಶತದಷ್ಟು ಜನಸಂಖ್ಯೆಯಿರುವ ನಮ್ಮಲ್ಲಿ, ಜಗತ್ತಿನ ೪ ಪ್ರತಿಶತ ನೀರಿನ ಮೂಲವಷ್ಟೇ ಇರುವುದು ಅಸಾಮಾನ್ಯ ಸ್ಥಿತಿಗೆ ಕಾರಣ. ಮಾನ್ಸೂನ್ ಮಳೆಯನ್ನು ಅವಲಂಬಿಸಿರುವ ನಮ್ಮಲ್ಲಿ ಅದರ ಅನಿಶ್ಚಿತತೆಯಿಂದಾಗಿ ನೀರಿನ ಬರದ ಜತೆಗೆ ನೆರೆಹಾವಳಿಯೂ ಒದಗುತ್ತಿದೆ.

Thousands have lived without love, not one without water – W.H. AUDEN. ಪ್ರೀತಿಯನ್ನು ಕಳೆದುಕೊಂಡ ಪ್ರಾಣಿಗಳು ಬದುಕುವ ಬಗೆಯನ್ನು ಕಂಡುಕೊಳ್ಳುತ್ತವೆ, ಕಂಡುಕೊಳ್ಳಲೇಬೇಕು. ನೀರಿಲ್ಲದೆ ಬದುಕಿಲ್ಲ, ಜೀವಸೃಷ್ಟಿಯೂ ಆಗುವುದಿಲ್ಲ. ಆಕಾಶದಲ್ಲಿರುವ ಮಿಕ್ಕ ಗ್ರಹ-ಉಪಗ್ರಹಗಳಲ್ಲಿ ‘ಜೀವ’ದ ಕುರುಹು ಕಂಡಿರುವ ನಿದರ್ಶನಗಳಿಲ್ಲ, ಏಕೆಂದರೆ ಎಲ್ಲೂ ನೀರೇ ಸಿಕ್ಕಿಲ್ಲ. ಜೀವದ ಕುರುಹಿಗಿಂತ ಮೊದಲು ಹವೆಯಲ್ಲಿ ನೀರಿನ ಆರ್ದ್ರತೆಯ ಅಂಶವಿದೆಯೇ ಎಂಬುದು ವೈಜ್ಞಾನಿಕ ಚರ್ಚಾವಿಷಯದ ಮೂಲವಾಗುತ್ತಿದೆ.

ಮಿಕ್ಕ ಆಕಾಶಕಾಯಗಳಲ್ಲಿ ಎಲ್ಲಾದರೂ ನೀರು ಸಿಕ್ಕಿದ್ದಿದ್ದರೆ ಭೂಮಿಯ ಜನಸಂಖ್ಯೆಯನ್ನು ವಿತರಣೆ ಮಾಡಿಕೊಳ್ಳಬಹುದಿತ್ತು, ಅಲ್ಲಿಗೂ- ಇಲ್ಲಿಗೂ ನಂಟು ಬಿಗಿಯಬಹುದಿತ್ತು! ಅವೆಲ್ಲ ಬರೀ ಕಾಲ್ಪನಿಕ. ವಸ್ತುಸ್ಥಿತಿಯೆಂದರೆ, ನಮ್ಮ ಗ್ರಹವೊಂದೇ ನೀರು ಹೊಂದಿರುವುದು; ನೀರಿನ ವಿಚಾರದಲ್ಲಿ ನಮಗೆ ನಾವೇ ರಾಜರು. ಭೂಮಿಯ ಸುಮಾರು ೭೧ ಪ್ರತಿಶತ ಭಾಗವನ್ನು ನೀರು ಆವರಿಸಿಕೊಂಡಿದೆ, ನಿಜ. ಆದರೆ ಉಪಯೋಗಿಸಬಲ್ಲ ನೀರಿನ ಕೊರತೆಯು
ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ, ಜಗತ್ತಿನ ಉಷ್ಣವಲಯದ ಭಾಗದಲ್ಲಿರುವ ನಮ್ಮ ದೇಶದಲ್ಲಿ ಈ ಕೊರತೆ ತೀವ್ರವಾಗಿದೆ. ಕಳೆದ
ಮಾರ್ಚ್‌ನಲ್ಲಿ, ಜಗತ್ತಿನ ನೀರಿನ ಸ್ಥಿತಿಯ ಕುರಿತಾದ ವರದಿಯೊಂದನ್ನು ‘ಯುನೆಸ್ಕೊ’ ಪ್ರಕಟಿಸಿತ್ತು.

ಅದರ ಪ್ರಕಾರ, ಜಗತ್ತಿನ ಪಟ್ಟಣಗಳ ಪೈಕಿ ಅರ್ಧದಷ್ಟರಲ್ಲಿ ನೆಲೆಸಿರುವ ಸುಮಾರು ೨೪೦ ಕೋಟಿ ಜನರು ೨೦೫೦ರ ಅವಽಯೊಳಗೆ ನೀರಿನ ಕೊರತೆ ಯನ್ನು ಅನುಭವಿಸಲಿದ್ದಾರೆ; ನೀರಿನ ಸಮಸ್ಯೆ ಎದುರಿಸುವ ಸುಮಾರು ೮೦ ಪ್ರತಿಶತ ಜನರು ಏಷ್ಯಾ ಖಂಡದಲ್ಲಿ, ಅದರಲ್ಲೂ ಚೀನಾ, ಭಾರತ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವವರಾಗಿರುತ್ತಾರೆ. ನಮ್ಮ ದೇಶವಿರುವುದು ಭೂಗೋಳದ ಉಷ್ಣವಲಯದಲ್ಲಿ. ಜಗತ್ತಿನ ಸುಮಾರು ೧೮ ಪ್ರತಿಶತದಷ್ಟು ಜನಸಂಖ್ಯೆಯಿರುವ ನಮ್ಮಲ್ಲಿ, ಜಗತ್ತಿನ ೪ ಪ್ರತಿಶತ ನೀರಿನ ಮೂಲವಷ್ಟೇ ಇರುವುದು ಅಸಾಮಾನ್ಯ ಸ್ಥಿತಿಗೆ ಕಾರಣ. ಮುಖ್ಯವಾಗಿ ಮಾನ್ಸೂನ್ ಮಳೆ ಯನ್ನು ಅವಲಂಬಿಸಿರುವ ನಮ್ಮಲ್ಲಿ ಅನಿಶ್ಚಿತ, ಅನಿಯಮಿತ ಮಳೆಯು ನೀರಿನ ಕೊರತೆಯ ಜತೆಗೆ ನೆರೆಹಾವಳಿ ಮತ್ತು ಬರಗಾಲವನ್ನೂ ತಂದೊಡ್ಡುತ್ತಿದೆ.

ಭೂಮಿಯಾಳದಲ್ಲಿನ ನೀರಿನ ಶೇಖರಣೆಯು ಗ್ರಾಮೀಣ ಭಾರತದ ೮೦ ಪ್ರತಿಶತ ಮತ್ತು ಪಟ್ಟಣಗಳ ೫೦ ಪ್ರತಿಶತ ಭಾಗಕ್ಕೆ ಕುಡಿಯುವ ನೀರನ್ನು
ಪೂರೈಸುತ್ತಿದೆ ಅಷ್ಟೇ. ವಿಶ್ವಬ್ಯಾಂಕ್ ಹೇಳಿದಂತೆ, ಅಮೆರಿಕ ಮತ್ತು ಚೀನಾ ಎರಡೂ ಸೇರಿ ತೆಗೆಯುವ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು
ಭಾರತವು ಭೂಮಿಯೊಳಗಿಂದ ತೆಗೆಯುತ್ತಿದೆ. ಆದ್ದರಿಂದ, ದೇಶದ ೭೦೦ ಜಿಲ್ಲೆಗಳ ಪೈಕಿ ಸುಮಾರು ೨೫೬ ಜಿಲ್ಲೆಗಳು ಅಂತರ್ಜಲದ ತೀವ್ರ ಕೊರತೆ ಹೊಂದಿವೆ. ಇಂಥ ಗಂಭೀರ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇಂದ್ರ ಸರಕಾರವು ಪ್ರಥಮ ಬಾರಿಗೆ ದೇಶದ ಜಲಗಣತಿ ಕೈಗೊಂಡಿರುವು ದಲ್ಲದೆ, ‘ಜಲಶಕ್ತಿ ಅಭಿಯಾನ’ದ ಮೂಲಕ ನೀರಿನ ಪರಿಣಾಮಕಾರಿ ವ್ಯವಸ್ಥೆಯ ನಿರ್ಮಾಣವನ್ನು ಆದ್ಯತೆಯಾಗಿಸಿದೆ. ಜಲಶಕ್ತಿಯ
ವಿಶೇಷ ಮಂತ್ರಾಲಯದ ನಿರ್ಮಾಣವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವುದು ದೊಡ್ಡ ಸುದ್ದಿಯಾಗಿದೆ. ಹಾಗೆ ನೋಡಿದರೆ, ನೀರಿನ ಬರಗಾಲವು ಇಡೀ ಕರ್ನಾ ಟಕ ರಾಜ್ಯವನ್ನೇ ಪೀಡಿಸುತ್ತಿದ್ದು,  ೨೨೦ ತಾಲೂಕುಗಳ ಸುಮಾರು ೭೦೦೦ ಹಳ್ಳಿಗಳಲ್ಲಿ ನೀರಿನ ಕೊರತೆಯಿದೆ. ೨೦೨೩ರಲ್ಲಿ ಸಾಕಷ್ಟು ಮಳೆಯಾಗದಿರು ವುದೇ ಇಂಥ ದುರವಸ್ಥೆಗೆ ಕಾರಣ. ಕೃಷ್ಣರಾಜಸಾಗರ ಜಲಾಶಯದಲ್ಲಿನ ನೀರಿನ ಮಟ್ಟವು ಫೆಬ್ರವರಿಯಲ್ಲಿ ಕಳೆದ ೫ ವರ್ಷದ ಅತಿಕಡಿಮೆ ಮಟ್ಟ ತಲುಪಿದ್ದಲ್ಲದೆ, ಅಂತರ್ಜಲದ ಮಟ್ಟ ಕುಸಿದುಹೋಗಿದೆ.

ಕಳೆದ ೩೦-೪೦ ವರ್ಷಗಳಲ್ಲಿಯೇ ಇಂಥ ಬರಗಾಲವನ್ನು ರಾಜ್ಯ ಕಂಡಿಲ್ಲವೆಂಬ ಉಪಮುಖ್ಯಮಂತ್ರಿಯವರ ಹೇಳಿಕೆಯನ್ನು ಇಲ್ಲಿ ಗಮನಿಸಬಹುದು.
ಈ ಹಿನ್ನೆಲೆಯಲ್ಲಿ, ಬೆಂಗಳೂರು ಅನುಭವಿಸುತ್ತಿರುವ ನೀರಿನ ಕೊರತೆಯನ್ನು ವಿಶ್ಲೇಷಿಸಬಹುದು. ಪ್ರಖರ ಬೇಸಗೆ ಬರುವಷ್ಟರಲ್ಲೇ ಈ ಅಭಾವ ಕಾಣಿಸಿಕೊಂಡಿದೆ. ಬೋರ್ ವೆಲ್ ಮತ್ತು ಕಾವೇರಿ ನೀರಿನ ಮೂಲವನ್ನು ಬೆಂಗಳೂರು ಅವಲಂಬಿಸಿದೆ. ಮಳೆಯ ಕೊರತೆಯಿಂದಾಗಿ, ಬಿಬಿಎಂಪಿ ಕೊರೆಸಿದ ಸುಮಾರು ೧೧,೦೦೦ ಬೋರ್‌ವೆಲ್‌ಗಳಲ್ಲಿ ೧,೩೦೦ ಬತ್ತಿ ಹೋಗಿದ್ದರೆ, ೩,೭೦೦ರಲ್ಲಿ ನೀರಿನ ಮಟ್ಟ ಇಳಿದುಹೋಗಿದೆ. ನೀರನ್ನು ಪೂರೈಸುವ ಇನ್ನೊಂದು ಬಗೆಯಾದ ಟ್ಯಾಂಕರುಗಳ ಬೇಡಿಕೆ ಹೆಚ್ಚಿದ್ದರಿಂದಲೂ ನೀರು ಸುಲಭವಾಗಿ ಸಿಗದಂತಾಯಿತು.

ಏರುತ್ತಿರುವ ಬೆಂಗಳೂರಿನ ಜನಸಂಖ್ಯೆ ಮತ್ತು ಬಹುಮಾಳಿಗೆಯ ಅಪಾಟ್ ಮೆಂಟ್‌ಗಳ ಬಾಹುಳ್ಯದಿಂದಾಗಿ ನಗರಿಯಲ್ಲಿ ನೀರಿನ ಅಭಾವ ಹೆಚ್ಚಿದೆ. ಬೆಂಗಳೂರು ಶೀಘ್ರಗತಿಯಲ್ಲಿ ವಿಸ್ತರಿಸುತ್ತಿದ್ದು, ಅತ್ತ ವಿಮಾನ ನಿಲ್ದಾಣವಿರುವ ದೇವನಹಳ್ಳಿ, ಇತ್ತ ತಮಿಳುನಾಡಿನ ಗಡಿಯ ತನಕ, ಇನ್ನೊಂದೆಡೆ
ನೆಲಮಂಗಲ ಮತ್ತು ಮೈಸೂರು ದಿಕ್ಕಿನಲ್ಲಿ ನಗರಿಯು ಚಾಚಿಕೊಳ್ಳುತ್ತಿದೆ. ಈ ವಿಸ್ತರಣೆಗೆ ತಕ್ಕಂತೆ ನೀರನ್ನು ಒದಗಿಸುವುದು ಸವಾಲಾಗಿದೆ. ಬೆಂಗಳೂರಿನ ಹರಹು ಮತ್ತು ಜನಸಂಖ್ಯೆ ಹೀಗೆಯೇ ಬೆಳೆಯುತ್ತ ಹೋದರೆ, ೨೦೩೧ರ ಹೊತ್ತಿಗೆ ಸುಮಾರು ೨೦.೩ ಮಿಲಿಯನ್‌ಗೆ ಜನಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ; ವರ್ಷಕ್ಕೆ ಸರಾಸರಿ ೩ ಪ್ರತಿಶತ ಜನಸಂಖ್ಯಾ ಹೆಚ್ಚಳಕ್ಕೆ ಬೇಕಿರುವ ನೀರಿನ ಅಗತ್ಯವನ್ನು ಈಡೇರಿಸಲು ಬರೀ ಕಾವೇರಿ ನೀರಿನ ಮೂಲವನ್ನು ಅವಲಂಬಿ ಸುವುದು ಅಸಾಧ್ಯದ ಮಾತೆಂಬುದು ತಿಳಿಯದ ವಿಚಾರವೇನೂ ಅಲ್ಲ.

ಬೆಂಗಳೂರಿನ ಸುತ್ತಮುತ್ತ ಇರುವ ಅದೆಷ್ಟೋ ಕೆರೆಗಳು ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಮುಖ್ಯಪಾತ್ರ ವಹಿಸುತ್ತವೆ. ವಸ್ತುಸ್ಥಿತಿಯೆಂದರೆ,
ಅವುಗಳಲ್ಲಿ ಹೆಚ್ಚಿನವು ಮಳೆಯ ಅಭಾವದಿಂದ ಬತ್ತಿಹೋಗಿವೆ. ಹೀಗಾಗಿ ಅಂತರ್ಜಲದ ಮಟ್ಟ ಕುಸಿದುಹೋಗಿದೆ. ಸರಕಾರದ ಹೇಳಿಕೆಯ ಪ್ರಕಾರ, ಬೆಂಗಳೂರಿಗೆ ದೈನಂದಿನ ಸುಮಾರು ೨,೬೦೦ ಮಿಲಿಯನ್ ಲೀಟರ್ ನೀರಿನ ಅಗತ್ಯವಿದ್ದು, ಈ ಪೈಕಿ ೧,೪೭೦ ಎಂಎಲ್‌ಡಿಯಷ್ಟು ಕಾವೇರಿಯಿಂದ, ೬೫೦ ಎಂಎಲ್‌ಡಿಯಷ್ಟು ಬೋರ್‌ವೆಲ್‌ನಿಂದ ಸಿಗುತ್ತಿದೆ; ಸುಮಾರು ೫೦೦ ಮಿಲಿಯನ್ ಲೀಟರ್‌ನಷ್ಟು ನೀರಿನ ಕೊರತೆಯಿದೆ. ಅದನ್ನು ಟ್ಯಾಂಕರ್ ಮತ್ತಿತರ
ರೀತಿಯಲ್ಲಿ ನೀಗಲು ಕ್ರಮ ಕೈಗೊಳ್ಳಲಾಗುತ್ತಿದೆ.

ಅಂಕಿ-ಸಂಖ್ಯೆಯ ಪ್ರಕಾರ, ೧೧.೦೪ ಟಿಎಂಸಿ ನೀರು ಕಾವೇರಿಯಲ್ಲಿ ಮತ್ತು ೯.೦೨ ಟಿಎಂಸಿ ನೀರು ಕಬಿನಿಯಲ್ಲಿ ಲಭ್ಯವಿದ್ದು, ಜೂನ್‌ವರೆಗಿನ ಪೂರೈಕೆ ಯನ್ನು ನಿರ್ವಹಿಸಬಹುದೆಂದು ಹೇಳಲಾಗುತ್ತಿದೆ. ಜತೆಗೆ ಹೊಸ ಬೋರ್‌ವೆಲ್‌ಗಳ ಕೊರೆಯುವಿಕೆಯಿಂದ ಹೆಚ್ಚುವರಿ ನೀರನ್ನು ಶೋಧಿಸುವ ಯತ್ನಗಳಾಗುತ್ತಿವೆ. ಕೆ.ಸಿ. ವ್ಯಾಲಿಯಲ್ಲದೆ ಇತರ ಕೆರೆಗಳನ್ನು ನೀರಿನಿಂದ ತುಂಬಿಸಿಟ್ಟು ಅಂತರ್ಜಲವನ್ನು ಹೆಚ್ಚಿಸುವ ಕಡೆ ಗಮನ ಹರಿಸಲಾಗಿದೆ. ಟ್ಯಾಂಕರ್ ಮಾಫಿಯಾ ದಿಂದಾಗಿ ನೀರಿನ ದರವು ಮುಗಿಲು ಮುಟ್ಟ ದಂತಾಗಲು, ಟ್ಯಾಂಕರ್ ಎಷ್ಟು ದೂರದಿಂದ ಬರುವುದು ಎಂಬುದರ ಆಧಾರದ ಮೇಲೆ ಸರಕಾರವು ದರವನ್ನು ನಿಗದಿಪಡಿಸಿದೆ. ನೀರಿನ ಹಾಹಾಕಾರವಿದ್ದಲ್ಲಿ ಕ್ಷಿಪ್ರವಾಗಿ ನೆರವಾಗಲೆಂದು ಸಹಾಯವಾಣಿಯನ್ನು ಸಜ್ಜುಗೊಳಿಸಲಾಗಿದೆ.

ನೀರಿನ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ನಿರ್ದೇಶನಗಳನ್ನು ನೀಡಲಾಗಿದೆ. ಇದು ಬೆಂಗಳೂರಿಗೆ ಒದಗಿರುವ ಜಲಕ್ಷಾಮವನ್ನು
ಎದುರಿಸುವತ್ತ ಆಳುಗ ವ್ಯವಸ್ಥೆ ಕೈಗೊಂಡಿರುವ ಕ್ರಮಗಳು. ಇತ್ತೀಚೆಗೆ ಕೈಗೊಂಡ ಕಾವೇರಿಯ ೫ನೇ ಹಂತದ ಯೋಜನೆಯು ನೀರಿನ ಸಮಸ್ಯೆ ನೀಗಿಸು ವಲ್ಲಿ ದೂರದರ್ಶಿ ಕ್ರಮವೆನ್ನಲಾಗಿದೆ. ಹಾಗೆಂದ ಮಾತ್ರಕ್ಕೆ, ಇದು ಬೆಂಗಳೂರಿಗಷ್ಟೇ ಸೀಮಿತವಾಗಿರುವ ಸಮಸ್ಯೆಯೆಂದು ಭಾವಿಸಬಾರದು; ಬಹುತೇಕ ಮಹಾನಗರಿಗಳು ನೀರಿನ ಅಭಾವದ ಸುಳಿಯಲ್ಲಿ ಸಿಲುಕಿವೆ. ದೇಶದ ಪ್ರಮುಖ ಜಲಾಶಯಗಳು ಮಾರ್ಚ್ ತಿಂಗಳಲ್ಲಿ, ಕಳೆದ ೫ ವರ್ಷ ಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿವೆ. ಕೇಂದ್ರ ಸರಕಾರದ ಅವಗಾಹನೆಯಲ್ಲಿರುವ ೧೫೦ ಭಾರಿ ಜಲಾಶಯಗಳು, ಕಳೆದ ವಾರದ ಅಳತೆ ಯಂತೆ ಪ್ರತಿಶತ ೪೦ರಷ್ಟೇ ತುಂಬಿವೆ ಎನ್ನಲಾಗಿದೆ. ಇವು ಕೃಷಿಕಾರ್ಯ, ಕುಡಿಯುವ ನೀರು ಮತ್ತು ವಿದ್ಯುತ್ ಸ್ಥಾವರಗಳಿಗೆ ನೀರು ಒದಗಿಸುವ
ಜಲಾಶಯ ಗಳು.

ಮಹಾರಾಷ್ಟ್ರ, ಆಂಧ್ರಪ್ರದೇಶ, ಪಂಜಾಬ್ ಮತ್ತು ಉತ್ತರ ಪ್ರದೇಶದಂಥ ಕೃಷಿ ಮತ್ತು ಕೈಗಾರಿಕಾ ಬಾಹುಳ್ಯದ ಪ್ರದೇಶಗಳಲ್ಲಿ ನೀರಿನ ಮಟ್ಟವು ೧೦ ವರ್ಷದ ಸರಾಸರಿ ಮಟ್ಟಕ್ಕಿಂತ ತಳಮುಟ್ಟಿರುವುದಾಗಿ ತಿಳಿದುಬಂದಿದೆ. ‘ಎಲ್ ನಿನೊ’ ಪರಿಣಾಮ, ಕಳೆದ ವರ್ಷದ ಕಡಿಮೆ ಮಳೆ ಈ ಎಲ್ಲ ಸಮಸ್ಯೆ ಗಳಿಗೂ ಮುಖ್ಯಕಾರಣ. ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಮಹಾನಗರಿಗಳೂ ಈ ವರ್ಷ ಒಂದಲ್ಲಾ ಒಂದು ರೀತಿಯಲ್ಲಿ ನೀರಿನ ಬವಣೆ ಕಂಡಿವೆ. ಕೆಲ ನಗರಗಳಿಗೆ ಹೊಂದಿಕೊಂಡಂತಿರುವ ನದಿಗಳು ಮತ್ತು ದೊಡ್ಡ ಜಲಾಶಯಗಳು, ಅಲ್ಲೆಲ್ಲ ನೀರು ಪೂರೈಕೆ ವ್ಯವಸ್ಥೆಯು ಪೂರ್ತಿ ಕುಸಿಯದಿರುವುದಕ್ಕೆ ಕಾರಣಗಳಾಗಿವೆ.

ಬೆಂಗಳೂರಿಗೆ ಇಂಥ ಜಲಾಶಯಗಳ ಭಾಗ್ಯವಿಲ್ಲದಿದ್ದರೂ, ಇಲ್ಲಿ ತುಂಬಿರುವ ಮರ-ಗಿಡಗಳ ಹಸಿರಿನ ಸಿರಿವಂತಿಕೆಯಿಂದಾಗಿ ‘ಉದ್ಯಾನ ನಗರಿ’ ಯೆಂದು ಬೆಂಗಳೂರು ಹೆಸರಾಗಿದೆ. ಜೀವಜಗತ್ತು ಎದುರಿಸುತ್ತಿರುವ ಜಲಕ್ಷಾಮವನ್ನು ಪ್ರತ್ಯೇಕತೆಯಿಂದ ಕಾಣದೆ ಸಮಗ್ರತೆಯಿಂದ ನೋಡುವುದು ಜವಾಬ್ದಾರಿಯ ದೃಷ್ಟಿಯಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಉಪಯೋಗಯೋಗ್ಯ ನೀರಿನ ವ್ಯವಸ್ಥೆಯನ್ನು ಸರಿಹೊಂದಿಸಬಲ್ಲ ಜಲಾಭಿವೃದ್ಧಿಯು ಆಳುಗ ವ್ಯವಸ್ಥೆಯ ಮಹತ್ತರ ಜವಾಬ್ದಾರಿ. ಈ ನಿಟ್ಟಿನಲ್ಲಿ ಬೇಕಿದೆ ಅಸಾಮಾನ್ಯ ಆವಿಷ್ಕಾರ ಮತ್ತು ಸಂಶೋಧನೆ. ಕಡಿಮೆ ವೆಚ್ಚದಲ್ಲಿ ಉಪ್ಪುನೀರನ್ನು ಶುದ್ಧೀಕರಿಸುವಿಕೆ, ಮಳೆಯ ನೀರನ್ನು ಅಗಾಧವಾಗಿ ಶೇಖರಿಸಿ ಬಳಸಬಲ್ಲ ಜಲಸ್ಥಾವರಗಳ ಸ್ಥಾಪನೆ, ನದಿಜೋಡಣೆ, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವಿಕೆ, ಸರೋವರ ಮತ್ತು ಕೆರೆಗಳ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವಿಕೆ, ಕೃತಕ ಮಳೆ ಇತ್ಯಾದಿ ವಿಚಾರಗಳಲ್ಲಿ ಅಸಾಮಾನ್ಯ ಸಂಶೋಧನೆ ಗಳಾಗಬೇಕಿದೆ.

ಪರ್ಯಾವರಣದ ರಕ್ಷಣೆ ಮತ್ತು ವಾತಾವರಣದ ಸಮತೋಲನವೂ ನೀರಿನ ವ್ಯವಸ್ಥೆಯಲ್ಲಿ ಮಹತ್ವದ ಭಾಗವೆನಿಸಿಕೊಳ್ಳುತ್ತವೆ. ಬಳಸಿದ ನೀರಿನ ಮರುಬಳಕೆಯು ಪರಿಣಾಮಕಾರಿಯಾಗಬೇಕು. ನೀರಿನ ಅಪವ್ಯಯವನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಯಂತ್ರಣ ಬೇಕು. ಇವೆಲ್ಲವೂ ತಿಳಿದಿರುವ
ಸಂಗತಿಗಳೇ. ಆದರೂ ಬೇಕಿರುವುದು ಇನ್ನೂ ತುಳಿಯಲಾಗದ ಹೊಸಹಾದಿ.

(ಲೇಖಕರು ಮುಂಬೈನ ಲಾಸಾ ಸೂಪರ್
ಜೆನರಿಕ್ಸ್‌ನ ನಿರ್ದೇಶಕರು)