Thursday, 12th December 2024

ಅಂತರ್ಜಲ ಏರಿಸಿಕೊಟ್ಟ ವಾರಾಹಿ ನದಿ !

ಶಶಾಂಕಣ

shashidhara.halady@gmail.com

ಬಾವಿಗಳೆಲ್ಲಾ ಬೇಸಗೆಯಲ್ಲಿ ಬತ್ತಿಹೋಗಿ ಹಳ್ಳಿಯ ಜನರೆಲ್ಲಾ ಆದೇ ಚಿಂತೆಯಲ್ಲಿದ್ದಾಗ, ವಾರಾಹಿ ಏತನೀರಾವರಿ ಯೋಜನೆಯ ಫಲವಾಗಿ ಈಗ ಆರೆಂಟು ವರ್ಷಗಳ ಹಿಂದೆ ಕಾಲುವೆಗಳಲ್ಲಿ ನೀರು ಹರಿದುಬಂತು! ಕಾಲುವೆಯ ನೀರು, ತನಗೆ ಗೊತ್ತಿಲ್ಲದೇ ಅಂತರ್ಜಲದತ್ತ ಧಾವಿಸಿತು.

ಬೆಂಗಳೂರಿನಂಥ ವ್ಯವಸ್ಥಿತವಾದ, ಮೊದಲಿನಿಂದಲೂ ನೀರಿನ ಸಮೃದ್ಧಿಯಿದ್ದ ನಗರದಲ್ಲಿ ಈಗ ಹನಿಹನಿ ನೀರಿಗೂ ತತ್ವಾರ ಎಂಬ ಸುದ್ದಿ ಓದಿದಾ
ಗಲೆಲ್ಲಾ ನನಗೆ ನೆನಪಾಗುವುದು ನಮ್ಮ ಹಳ್ಳಿಯಲ್ಲಿದ್ದ ನೀರಿನ ವ್ಯವಸ್ಥೆ. ಕೆರೆಗಳ ನಗರ ಬೆಂಗಳೂರಿನಲ್ಲಿ ಈಗ ನೀರಿನ ಅಭಾವ; ಆದರೆ, ಅತ್ತ ಹಳ್ಳ ತೊರೆಗಳ ಹಳ್ಳಿಯಾದ ನಮ್ಮೂರಿನಲ್ಲಿ ಬೇಸಗೆ ಬಂದತಕ್ಷಣ ನೀರಿನ ತೊಂದರೆಯಾಗುತ್ತಿತ್ತು.

ಮಳೆಗಾಲದಲ್ಲಿ, ಚಳಿಗಾಲದಲ್ಲಿ ನಮ್ಮ ಹಳ್ಳಿಯಲ್ಲಿ ನೀರಿಗೆ ಬರವಿರಲಿಲ್ಲ; ಬದಲಿಗೆ ವಿಪರೀತ ಮಳೆ, ಹಳ್ಳ, ನೆರೆಯಿಂದಾಗಿ ಅದೊಂದು ರೇಜಿಗೆಯ
ವಿಷಯವೇ ಆಗಿತ್ತು ಎನ್ನಬಹುದು. ಆದರೆ, ಬೇಸಗೆ ಬಂತೆಂದರೆ, ಅರ್ಧಕ್ಕರ್ಧ ಮನೆಗಳವರಿಗೆ ತೊಂದರೆ ತಪ್ಪಿದ್ದಲ್ಲ. ಮಾತ್ರವಲ್ಲ, ನೀರಿಗೆ ಏನಪ್ಪಾ ಮಾಡುವುದು, ಮನೆಗೆ ಯಾರಾದರೂ ಬಂದರೆ ಅವರಿಗೆ ಕುಡಿಯಲು ಶುದ್ಧ ನೀರನ್ನು ಕೊಡಬೇಕಲ್ಲಾ, ಸ್ನಾನಕ್ಕೆ, ಬಟ್ಟೆ ಒಗೆಯಲು ನೀರು ಎಲ್ಲಿಂದ ತರು
ವುದು ಎಂಬ ಯೋಚನೆ!

ಆಗಿನ್ನೂ ನಮ್ಮ ಹಳ್ಳಿಗೆ ಸರಕಾರ ಒದಗಿಸುವ ‘ಯೋಜನೆ’ಗಳು, ಕಾಮಗಾರಿಗಳು ಪ್ರವೇಶಿಸಿರಲಿಲ್ಲ. ಆದ್ದರಿಂದ, ನಮ್ಮ ಬದುಕು ಪುರಾತನ ದಿನಚರಿಯ ತಳಹದಿಯ ಮೇಲೆ ನಿಂತಿತ್ತು. ನೀರು ಮಾತ್ರವಲ್ಲ, ಗಾಳಿ, ಬೆಂಕಿ, ಆಹಾರ ಎಲ್ಲವೂ ಪುರಾತನ ಪರಂಪರೆಯ ಬಳುವಳಿ, ಪರಸ್ಪರ ಸಹಕಾರ ತತ್ವದ ಮೇಲೆ ದೊರೆತ ಸೌಲಭ್ಯ. ಬಸ್ ನಿಲ್ದಾಣ ದಿಂದ ಸುಮಾರು ೨ ಕಿ.ಮೀ. ದೂರದಲ್ಲಿದ್ದ ನಮ್ಮ ಮನೆಗೆ ಯಾವ ವಾಹನವೂ ಬರುವಂತಿರಲಿಲ್ಲ; ನಡೆದೇ ಸಾಗುವ ಗದ್ದೆಯಂಚಿನ ದಾರಿ. ಫೆಬ್ರವರಿ, ಅಂದರೆ, ಶಿವರಾತ್ರಿ ಕಳೆಯುವ ಸಮಯಕ್ಕೆ ನಿಧಾನ ವಾಗಿ ಅಂತರ್ಜಲದ ಮಟ್ಟ ಕುಸಿಯಲು ಆರಂಭಿಸುತ್ತಿತ್ತು. ನಮ್ಮ ಮನೆಗೆ ಕುಡಿಯುವ ನೀರು, ಸ್ನಾನಕ್ಕೆ, ಬಟ್ಟೆ ಒಗೆಯಲು, ದನಕರುಗಳಿಗೆ ಎಲ್ಲಕ್ಕೂ ನೀರು ಒದಗಿಸಲು ಒಂದು ಹಳೆಯ ಕಾಲದ ಬಾವಿ ಇತ್ತು.

ಅಂಗಳದ ಒಂದು ಮೂಲೆಯಲ್ಲಿದ್ದ ಆ ಬಾವಿ ಸುಲಭದಲ್ಲಿ ಕಣ್ಣಿಗೆ ಬೀಳುತ್ತಿರಲಿಲ್ಲ; ಆದ್ದರಿಂದ, ತುಸು ಮೈಮರೆತರೆ ನಾವೇ ಅದಕ್ಕೆ ಬೀಳುವ
ಸಾಧ್ಯತೆ! ನೆಲದ ಮಟ್ಟದಲ್ಲಿದ್ದ ಅದರ ಸುತ್ತಲೂ ಒಂದು ಅಡಿ ಎತ್ತರದ, ಒರಟು ಕಲ್ಲುಗಳ ಸಣ್ಣ ತಡೆ ಇತ್ತು. ಅದನ್ನು ಗಮನಿಸದೆ, ಚೆಂಗು ಬಂದ ಕರು
ಗಳು ಒಂದೆರಡು ಬಾರಿ ಅದರೊಳಗೆ ಬಿದ್ದಿದ್ದವು! ಕೂಡಲೇ ಅವುಗಳನ್ನು ಎತ್ತುತ್ತಿದ್ದರು ಎಂಬುದು ಬೇರೆ ಮಾತು.

ಅದೊಂದು ಬಗ್ಗು ಬಾವಿ; ಮಳೆಗಾಲದಲ್ಲಿ ನೀರು ಕೈಗೆ ಸಿಗುತ್ತಿತ್ತು. ಕೊಡವನ್ನು ಹಿಡಿದು, ಬಾವಿಯ ಒಂದು ಬದಿಯಲ್ಲಿ ಹಾಕಿದ್ದ ಹಲಗೆಯ ಮೇಲೆ ಬಗ್ಗಿ ನಿಂತು ನೀರನ್ನು ಎತ್ತಬಹುದು! ನವೆಂಬರ್-ಡಿಸೆಂಬರ್ ಸಮಯಕ್ಕೆ ಆರೆಂಟು ಅಡಿ ಕೆಳಗೆ ನೀರು ಹೋದಾಗ, ಹಗ್ಗಕ್ಕೆ ಕೊಡ ಕಟ್ಟಿ ನೀರೆತ್ತುವ ಸಂಪ್ರ ದಾಯ. ಇವೆಲ್ಲಾ ನಮಗೆ ತೊಂದರೆ ಎನಿಸುತ್ತಿರಲಿಲ್ಲ; ನೂರಾರು ವರ್ಷಗಳಿಂದ ನಮ್ಮ ಹಳ್ಳಿಯವರು ನೀರನ್ನು ಎತ್ತುತ್ತಿದ್ದುದೇ ಹಾಗೆ. ಆ
ಪುಟ್ಟ ಬಾವಿಯನ್ನು ತೋಡುವ ಸಂದರ್ಭದ ಬಿಕ್ಕಟ್ಟು ಗಳನ್ನು ನಮ್ಮ ಅಮ್ಮಮ್ಮ ಆಗಾಗ ನೆನಪಿಸಿಕೊಳ್ಳುತ್ತಿದ್ದುದುಂಟು.

ಬಾವಿ ತೋಡುತ್ತಾ ಹೋದಾಗ, ತಳದಲ್ಲಿ ಸೇಡಿ ಮಣ್ಣು ಕಾಣಿಸಿದ್ದರಿಂದ, ಬೇಗನೆ ಕುಸಿಯುವ ಸಾಧ್ಯತೆ ಎದುರಾಯಿತು. ತಕ್ಷಣ, ಬಾವಿಯ ತಳ
ದಲ್ಲಿ ಬಾಗಾಳು ಮರದ ಹಲಗೆಗಳಿಂದ ಮಾಡಿದ ಒಂದು ಚೌಕಟ್ಟನ್ನು ಇಟ್ಟು, ಅದರ ಮೇಲೆ ಒರಟು ಕಲ್ಲುಗಳನ್ನು ಕಟ್ಟಿ ಭದ್ರ ಮಾಡಿದ್ದರು. ಆ ಒರಟು
ಕಲ್ಲುಗಳೆಂದರೆ, ಒಳ್ಳೆ ಹಾವುಗಳಿಗೆ ಬಹಳ ಇಷ್ಟ. ಆ ಸಂದಿಯಲ್ಲಿ ಅವು ಮನೆ ಮಾಡಿಕೊಂಡು, ಬಾವಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದವು, ಆಟವನ್ನೂ
ಆಡುತ್ತಿದ್ದವು. ಆ ಬಾವಿಯಲ್ಲಿ ಕನಿಷ್ಠ ಇಪ್ಪತ್ತು ಒಳ್ಳೆ ಹಾವುಗಳಾದರೂ ಇದ್ದವು ಎನಿಸುತ್ತದೆ! ಆದರೆ, ಅವು ಒಳ್ಳೆಯ ಬುದ್ಧಿಯವು, ಅಂದರೆ, ಮನುಷ್ಯನಿಗೆ ಕಚ್ಚುತ್ತಿರಲಿಲ್ಲ; ನಮ್ಮೂರಿನವರಿಗೆ ಒಳ್ಳೆ ಹಾವು ಗಳೆಂದರೆ ಸ್ನೇಹಿತರಿದ್ದಂತೆ!

ಫೆಬ್ರವರಿ ಕಳೆಯುತ್ತಾ ಬಂದಂತೆ, ಮನೆ ಎದುರಿನ ಆ ಬಗ್ಗುಬಾವಿಯಲ್ಲಿ ನೀರು ತಳಕ್ಕೆ ಹೋಗುತ್ತಿತ್ತು. ಮಾರ್ಚ್ ಮೊದಲ ವಾರದಲ್ಲಿ, ಕೆಳಗೆ ಹತ್ತೆಂಟು
ಕೊಡ ನೀರು ಮಾತ್ರ. ತಳದ ಸೇಡಿಮಣ್ಣಿನ ಕಲ್ಮಶ ಕರಗಿ, ಆ ನೀರು ಬಿಳಿಯ ಲೇಪನವನ್ನು ಪಡೆಯುತ್ತಿತ್ತು! ಮಾರ್ಚ್ ಕೊನೆಯ ತನಕ ಅದನ್ನೇ ಕುಡಿಯು
ತ್ತಿದ್ದೆವು; ಕೊನೆ ಕೊನೆಗೆ, ನೀರನ್ನು ಲೋಟದಲ್ಲಿ ಹಿಡಿದರೆ, ಸೇಡಿ ಮಣ್ಣಿನ ಮಿಶ್ರಣ ಕಾಣುತ್ತಿತ್ತು, ಮಣ್ಣಿನ ವಾಸನೆಯೂ ಸಣ್ಣಗೆ ಬರುತ್ತಿತ್ತು. ಇನ್ನು ಇದನ್ನು ಕುಡಿದರೆ ಸರಿಯಾಗೊಲ್ಲ ಎಂದು, ಒಂದು ಫರ್ಲಾಂಗ್ ದೂರದ ಹಂಜಾರರ ಮನೆಯಿಂದ ಕುಡಿಯುವ ನೀರನ್ನು ತರುತ್ತಿದ್ದೆವು. ಸ್ವಲ್ಪ ಎತ್ತರದ
ಜಾಗದಲ್ಲಿದ್ದ ಅವರ ಬಾವಿಯು, ರಾಟೆ ಹಗ್ಗದ ಬಾವಿ. ನೀರೂ ಚೆನ್ನಾಗಿರುತ್ತಿತ್ತು, ರುಚಿಯಾಗಿ ತಿಳಿಯಾಗಿರುತ್ತಿತ್ತು.

ಜೂನ್ ಮೊದಲ ವಾರ ಮಳೆ ಸುರಿ ಯುವ ತನಕ, ನಮಗೆ ಕುಡಿಯಲು ಅದೇ ನೀರು. ಅಡುಗೆಗೆ ಮನೆ ಎದುರಿನ ಬಗ್ಗು ಬಾವಿಯ ಸೇಡಿ ಮಿಶ್ರಿತ ನೀರು ಮತ್ತು ಬೈಲು ಬಾವಿಯ ನೀರೇ ಗತಿ; ಹಸುಕರುಗಳಿಗೆ ಬೈಲು ಬಾವಿಯ ನೀರು. ಮನೆ ಎದುರಿನ ಬಗ್ಗುಬಾವಿಯು, ಮಾರ್ಚ್ ಕೊನೆಯಲ್ಲಿ ಒಣಗಿ ಹೋಗು ವುದನ್ನು ಕಂಡು, ಪಕ್ಕದ ಮನೆಯ ನಮ್ಮ ಚಿಕ್ಕಪ್ಪ, ಸನಿಹದ ಬೈಲಿನಲ್ಲಿ ಒಂದು ಬಾವಿ ತೋಡಿಸಿದರು. ಅದು ತುಸು ತಗ್ಗಿನಲ್ಲಿದ್ದುದರಿಂದ, ಬೇಸಗೆಯಲ್ಲಿ ಬತ್ತುತ್ತಿರಲಿಲ್ಲ. ಅದು ಕೂಡ ಮನೆ ಬಾವಿಯ ರೀತಿಯ ಬಗ್ಗುಬಾವಿ; ಒರಟು ಕಲ್ಲುಗಳ ಕಟ್ಟೋಣ ಹೊಂದಿತ್ತು. ಆ ಕಲ್ಲುಗಳ ನಡುವೆ ದೊಡ್ಡ ದೊಡ್ಡ ಸಂದಿಗಳಿದ್ದವು. ಆದ್ದ ರಿಂದ, ಒಳ್ಳೆ ಹಾವುಗಳಿಗೆ ಇನ್ನಷ್ಟು ಖುಷಿ!

ಆ ಬೈಲು ಬಾವಿಯ ನೀರಿನಲ್ಲಿ, ಕಲ್ಲಿನ ಪೊಟರೆಗಳಲ್ಲಿ ಮೂವತ್ತಕ್ಕಿಂತ ಹೆಚ್ಚು ಒಳ್ಳೆ ಹಾವುಗಳು ಮನೆಮಾಡಿಕೊಂಡು, ಆ ದಾರಿಯಲ್ಲಿ ಹೋಗಿ ಬರುವವರನ್ನೇ ಇಣುಕಿ ನೋಡುತ್ತಿದ್ದವು. ಆ ಒಳ್ಳೆ ಹಾವುಗಳು ಕಲ್ಲಿನ ಪೊಟರೆಯಿಂದ ತಲೆ ಎತ್ತಿ ನೋಡುವುದನ್ನು ನೋಡಲು, ನಾವು ಮಕ್ಕಳು ಆ ಬಾವಿಯ ಬಳಿ ಸುಳಿದಾಡುವುದಿತ್ತು. ಬೈಲು ಬಾವಿಯು, ಬೇಸಗೆಯಲ್ಲಿ ನಮ್ಮ ಎರಡೂ ಮನೆಗಳಿಗೆ ನೀರನ್ನು ಕೊಡುತ್ತಿದ್ದರೂ, ಊರಿನವರಿಗೆ ಆ ಬಾವಿಯ ಮೇಲೆ ಒಂದು ದೂರು ಇತ್ತು. ಸಾಮಾನ್ಯ ಜ್ಞಾನದ ಕೊರತೆಯಿಂದಲೋ, ನೀರನ ಒರತೆ ಇದೆ ಎಂಬ ಯೋಚನೆಯಿಂದಲೋ, ಆ ಬಾವಿಯನ್ನು ದಾರಿಯ ಪಕ್ಕದಲ್ಲೆ ತೋಡಿಸಿದ್ದರು.

ನಮ್ಮ ಮನೆಯಿಂದ ಪೂರ್ವದಿಕ್ಕಿನಲ್ಲಿರುವ ಚೇರ್ಕಿಗೆ ಸಾಗುವ ಕಾಲ್ದಾರಿಯು ಆ ಬಾವಿಯ ಪಕ್ಕದಲ್ಲೇ ಮುಂದುವರಿದಿತ್ತು. ಎರಡು ಗದ್ದೆಯಂಚಿನ ನಡುವೆ ಸಾಗುವ ಆ ದಾರಿಯಲ್ಲಿ ಚೇರ್ಕಿಗೆ ಹೋಗುವವರೆಲ್ಲರು ಬೈಲು ಬಾವಿಯ ಪಕ್ಕದಲ್ಲೇ ನಡೆಯಬೇಕಿತ್ತು. ‘ಇದೆಂತಕೆ ಇವರು ದಾರಿ ಹೊಕ್ಕಡವೇ
ಬಾವಿ ತೋಡೀರ್.. ಯಾರಾದ್ರೂ ಬಿದ್ರೆ ದೇವರೇ ಗತಿ’ ಎಂದು ಕೆಲವರು ಗೊಣಗಿಕೊಳ್ಳುತ್ತಾ, ಎಚ್ಚರಿಕೆಯಿಂದ ಮುಂದೆ ಸಾಗುತ್ತಿದ್ದರು. ಪ್ರತಿದಿನ ಹತ್ತಿಪ್ಪತ್ತು ಶಾಲೆ ಮಕ್ಕಳು, ಹಾಲಾಡಿ ಪೇಟೆಗೆ ಹೋಗುವ ಹತ್ತಾರು ಜನರು ನಡೆಯುವ ದಾರಿ ಅದು. ಅದೃಷ್ಟವಶಾತ್, ಅಷ್ಟೊಂದು ಜನ ಓಡಾಡು ತ್ತಿದ್ದರೂ, ಆ ಬಾವಿಯ ಇತಿಹಾಸದಲ್ಲಿ ಯಾರೂ ಅದಕ್ಕೆ ಬೀಳಲಿಲ್ಲ!

ಸಂಜೆಯಾದ ನಂತರ ಹಾಲಾಡಿಗೆ ಹೋಗುವ ಅಂತು ಹಾಂಡನಂಥ ಕೆಲವರು, ಶೇಂದಿ ಕುಡಿದು ನಶೆ ಏರಿಸಿಕೊಂಡು ಬಂದರೂ, ರಾತ್ರಿಯ ಕತ್ತಲಿ
ನಲ್ಲೂ ಎಚ್ಚರಿಕೆಯಿಂದ ನಡೆದದ್ದರಿಂದ, ಯಾರೂ ಬಾವಿಗೆ ಹಾರವಾಗಲಿಲ್ಲ! ಕ್ರಮೇಣ ನಮ್ಮ ಮನೆಯ ಸುತ್ತಲಿನ ಹಕ್ಕಲು, ಹಾಡಿಯ ಮರಗಳನ್ನು ಹೆಚ್ಚು ಹೆಚ್ಚು ಕಡಿದು ಸಾಗಿಸಿದಂತೆಲ್ಲಾ, ಬೇಸಗೆಯಲ್ಲಿ ಬಾವಿಯ ನೀರು ಬಹುಬೇಗನೆ ಒಣಗಿಹೋಗಲು ಆರಂಭವಾಯಿತು; ಮನೆಗೆ ಸಾಕಷ್ಟು ನೀರು ಇರದಿದ್ದರೆ ಹೇಗೆ ಎಂಬ ಯೋಚನೆಯಲ್ಲಿ, ನಮ್ಮ ಮನೆ ಎದುರೇ ಒಂದು ದೊಡ್ಡ ಬಾವಿಯನ್ನು ತೋಡಿಸಲು ನಮ್ಮ ಅಮ್ಮಮ್ಮ ನಿರ್ಧರಿಸಿದರು.

‘ಬಳಾಲ’ ನೀರು ಬೇಕು ಎಂಬ ಅಭಿಲಾಷೆಯಿಂದ, ಅಗಲವಾದ ಬಾವಿಯನ್ನು, ಮನೆ ಎದುರಿನ ಅಗೇಡಿಯಲ್ಲಿ, ಮನೆಯ ಕೊಟ್ಟಿಗೆಗೆ ಹದಿನೈದು ಅಡಿ ದೂರದಲ್ಲಿ ತೋಡುವ ಕೆಲಸ ಆರಂಭವಾಯಿತು. ಕೆಲಸಗಾರರೇನೋ ಭರದಿಂದ ತೋಡಿದರು; ಆದರೆ, ಅದೂ ಸೇಡಿಮಣ್ಣಿನ ನೆಲ. ಬಾವಿಯು ಯೋಜಿಸಿದ್ದಕ್ಕಿಂತ ಇನ್ನಷ್ಟು ಅಗಲವಾಯಿತು, ಸುತ್ತಲಿನ ಮಣ್ಣು ಹಿಸಿದು ಬೀಳತೊಡಗಿತು. ಇನ್ನೂ ಒಂದೆರಡು ದಿನ ತೋಡಿದರೆ, ಮಣ್ಣು
ಕುಸಿಯುತ್ತಾ, ಹತ್ತಿರದ ಕೊಟ್ಟಿಗೆ ಮತ್ತು ಮನೆಯನ್ನೇ ಆಪೋಶನ ತೆಗೆದುಕೊಳ್ಳಬಹುದು ಎಂಬ ದಿಗಿಲು ಶುರುವಾಗಿ, ಬೇಗನೆ ಕಲ್ಲು ಕಟ್ಟಿ, ಬಾವಿಯ ಕೆಲಸ ಮುಗಿಸಿದರು.

ಈ ಬಾವಿಯಲ್ಲಿ ನೀರು ಸಾಕಷ್ಟಿತ್ತು. ಆದರೆ, ಮನೆ ಎದುರಿನ ಬಗ್ಗು ಬಾವಿಯ ನೀರಿನಷ್ಟು ರುಚಿ ಇರಲಿಲ್ಲ. ‘ಒಂದೊಂದು ಬಾವಿಯ ನೀರು ಒಂದೊಂದು ರುಚಿ; ಎಂತ ಮಾಡುಕಾತ್’ ಎಂದು ಅಮ್ಮಮ್ಮ ಸಮಾಧಾನ ಹೇಳಿಕೊಂಡರು. ನಮ್ಮ ಹಳ್ಳಿಯ ಒಂದೊಂದು ಮನೆಯ ಬಾವಿಯ ನೀರಿನ ರುಚಿಯೂ ವಿಭಿನ್ನ; ಯಾವುದೇ ರೀತಿಯ ಶುದ್ಧೀ ಕರಣ, ಫಿಲ್ಟರ್, ಆರ್‌ಒ ವ್ಯವಸ್ಥೆ ಇಲ್ಲದೇ ಇದ್ದರೂ, ಸವಿ ರುಚಿ, ಸಿಹಿ ರುಚಿಯ ನೀರನ್ನು ನೀಡುವ ಬಾವಿಗಳು ಅವು. ಆದರೆ, ಕೆಲವು ಬಾವಿಗಳ ನೀರು ಥಂಡಿ ಎಂಬ ನಂಬಿಕೆ ಇತ್ತು. ಅಪರೂಪಕ್ಕೆ ಬಂದವರು ಆ ನೀರನ್ನು ಕುಡಿದರೆ, ಮರುದಿನ ನೆಗಡಿ ಖಚಿತ!

ಮನೆ ಎದುರು ಬಾವಿ ತೋಡುವುದು, ಅದಕ್ಕೆ ಕಲ್ಲು ಕಟ್ಟಿಸುವುದು, ಬೇಸಗೆಯಲ್ಲಿ ನೀರು ಕಡಿಮೆಯಾದಾಗ ತುಸು ಒದ್ದಾಡುವುದು, ಕುಡಿಯಲು ಬೇರೆ ಮನೆಯಿಂದ ನೀರನ್ನು ಹೊತ್ತು ತರುವುದು ಎಲ್ಲವೂ ನಮ್ಮ ಹಳ್ಳಿಯ ದಿನಚರಿಯ ಭಾಗ. ನೂರಾರು ವರ್ಷಗಳ ಹಿಂದೆಯೂ ನಮ್ಮ ಹಳ್ಳಿಯ ನೀರಿನ ವ್ಯವಸ್ಥೆ ಇದೇ ರೀತಿ ಇತ್ತು. ಇವೆಲ್ಲವೂ ಬದಲಾವಣೆಗೆ, ಸ್ಥಿತ್ಯಂತರಕ್ಕೆ ಒಳಗಾದದ್ದು, ಈಗ ಮೂರು ದಶಕಗಳ ಹಿಂದೆ- ಸರಕಾರದ ಬೆಂಬಲದಿಂದ, ಕೊನೆಗೂ ನಮ್ಮ ಹಳ್ಳಿಗೆ ವಿದ್ಯುತ್ ಸಂಪರ್ಕ ಬಂದ ನಂತರ. ಬೇಸಗೆಯಲ್ಲಿ ವಿದ್ಯುತ್ ಮೋಟಾರು ಬಳಸಿ ನೀರನ್ನು ಬೇಗನೆ ಮೇಲೆತ್ತಿ, ಗದ್ದೆಗೆ, ತೋಟಕ್ಕೆ ಹರಿಸುವ ಪದ್ಧತಿ ಆರಂಭವಾಯಿತು. ಇದರಿಂದ ತೋಟಕ್ಕೆ ನೀರೇನೋ ಸಿಕ್ಕಿತು; ಆದರೆ, ಬೇಸಗೆಯ ಕೊನೆಯಲ್ಲಿ ಬಾವಿಗಳು ಬಹುಬೇಗನೆ ಬತ್ತಿ
ಹೋಗಲು ಆರಂಭವಾಯಿತು!

ಇದಾಗಿ ಕೆಲವು ವರ್ಷಗಳ ನಂತರ, ನಮ್ಮ ಮನೆ ಯಿಂದ ತುಸು ಕೆಳಭಾಗದಲ್ಲಿದ್ದ ಅಡಕೆ ತೋಟದ ಮಾಲೀಕರೊಬ್ಬರು ಒಂದು ಬೋರ್ ವೆಲ್ ತೋಡಿಸಿ ದರು. ಅದೇ ವರ್ಷ, ನಮ್ಮ ಸುತ್ತಮುತ್ತಲಿನ ಎಲ್ಲಾ ತೆರೆದ ಬಾವಿಗಳು ಬೇಸಗೆಯಲ್ಲಿ ಬಹುಬೇಗನೆ ಬತ್ತಿ ಹೋದವು! ‘ಹೀಗಾದರೆ ಏನಪ್ಪಾ ಮಾಡು ವುದು, ನಾವು ನೀರಿಗೆ ಏನು ಮಾಡುವುದು, ಅವರ ರೀತಿಯೇ ನಾವೂ ಬೋರ್‌ವೆಲ್ ತೋಡಿಸಬೇಕೆ ಹೇಗೆ? ಅದಕ್ಕೆ ಹಣವೆಲ್ಲಿ’ ಎಂದು ಹಳ್ಳಿಯವರು ಹತಾಶರಾಗ ತೊಡಗಿದರು.

ಎಪ್ರಿಲ್ ಕೊನೆಯಲ್ಲಿ ಬತ್ತುತ್ತಿದ್ದ ಬಾವಿಗಳು, ಫೆಬ್ರವರಿಗೇ ತಳಕಾಣ ತೊಡಗಿದವು. ನೀರಿನ ಮೂಲವನ್ನು ಹುಡುಕುತ್ತಾ ಹೋದರೆ, ಹೊಸ ವಿಚಾರಗಳ ಸಾಕ್ಷಾತ್ಕಾರವಾಗುತ್ತದೆ ಎಂದು ವಿಶಾಲಾರ್ಥದಲ್ಲಿ ಹೇಳುವುದುಂಟು. ನಮ್ಮ ಹಳ್ಳಿಯ ವಿಚಾರದಲ್ಲಿ ಅದು ನಿಜವಾಯಿತು! ಮೊದಲ ಬೋರ್‌ವೆಲ್‌ ನಿಂದಾಗಿ ತೆರೆದ ಬಾವಿಗಳೆಲ್ಲಾ ಬೇಸಗೆಯಲ್ಲಿ ಬಹುಬೇಗನೆ ಬತ್ತಿ ಹೋಗಿದ್ದು ಸುದ್ದಿಯಾಗಿ, ಅದರ ಗುಂಗಿನಲ್ಲೇ ಹಳ್ಳಿಯ ಜನರು ಇದ್ದಾಗ, ಮತ್ತೊಂದು ಬೆಳವಣಿಗೆ ಯಾಯಿತು. ೧೯೮೦ರ ದಶಕದಿಂದಲೂ ಸರಕಾರದ ಕಾಮಗಾರಿಯ ಭಾಗವಾಗಿ, ನಿಧಾನವಾಗಿ ಮುಂದು ವರಿಯುತ್ತಿದ್ದ ವಾರಾಹಿ ಏತನೀರಾ ವರಿ ಯೋಜನೆಯ ಫಲವಾಗಿ, ಈಗ ಆರೆಂಟು ವರ್ಷಗಳ ಹಿಂದೆ ಕಾಲುವೆಗಳಲ್ಲಿ ನೀರು ಹರಿದುಬಂತು!

ಕಾಲುವೆಯ ನೀರು, ತನಗೆ ಗೊತ್ತಿಲ್ಲದೇ ಅಂತರ್ಜಲ ದತ್ತ ಧಾವಿಸಿತು. ಆ ತಕ್ಷಣ ನಮ್ಮೂರಿನ ಹೆಚ್ಚಿನ ಬಾವಿಗಳಲ್ಲಿ ಅಂತರ್ಜಲ ತುಂಬಿ ಬಂತು; ಎಪ್ರಿಲ್‌ನಲ್ಲಿ ಒಣಗುತ್ತಿದ್ದ ಬಾವಿಗಳಲ್ಲಿ ಜೂನ್ ತನಕವೂ ಸ್ವಲ್ಪವಾದರೂ ನೀರು ಸಂಚಯಗೊಂಡಿತು. ವಾರಾಹಿ ಕಾಲುವೆಯ ಪಕ್ಕದಲ್ಲೇ ಇರುವ ಕೃಷಿಕರು, ಪ್ಲಾಸ್ಟಿಕ್ ಪೈಪ್ ಬಳಸಿ, ಕಾಲುವೆಯ ನೀರಿನ ಅಲ್ಪ ಭಾಗವನ್ನು ತಮ್ಮ ಜಮೀನಿಗೆ ಹರಿಸಿಕೊಂಡರು. ಪ್ರತಿ ಬೇಸಗೆಯಲ್ಲಿ ನೀರಿಗಾಗಿ ಪಡುತ್ತಿದ್ದ ಬವಣೆ ನೀಗಿತು; ಸಹ್ಯಾದ್ರಿಯಿಂದ ಹರಿದುಬಂದ ವಾರಾಹಿಯ ನೀರು ನಮ್ಮ ಹಳ್ಳಿಯ ಭೂಗರ್ಭದಲ್ಲಿ ಇಂಗಿತು! ಬಾವಿಗಳಲ್ಲಿ ನೀರು ಮೇಲೆ ಬಂತು.