ಮತಸಮರ
ರೋಹಿಣಿ ನಿಲೇಕಣಿ
ಎಲ್ಲೆಡೆ ಲೋಕಸಭಾ ಚುನಾವಣೆಯ ಗಾಳಿ ಬೀಸುತ್ತಿದೆ, ದಿನಗಳೆದಂತೆ ಅದರ ಕಾವೂ ಏರುತ್ತಿದೆ. ಈ ಸಂದರ್ಭದಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟ ವಾಗುವ ಸುದ್ದಿಶೀರ್ಷಿಕೆಗಳು ಮತ್ತು ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುವ ಬ್ರೇಕಿಂಗ್ ನ್ಯೂಸ್‌ಗಳ ಭರಾಟೆಯನ್ನು ನೋಡಿದಾಗ, ಇಂಥದೇ ಸುಡು ಬಿಸಿಲಿಗೆ, ಬಿಸಿಗಾಳಿಗೆ ಒಡ್ಡಿಕೊಂಡು ನಾವೂ ಚುನಾವಣಾ ಪ್ರಚಾರಕಾರ್ಯದಲ್ಲಿ ವ್ಯಸ್ತರಾಗಿದ್ದ ಕ್ಷಣಗಳು ನೆನಪಾದವು.
ನಿಮಗೆ ನೆನಪಿರಬಹುದು, ಸರಿಯಾಗಿ ೧೦ ವರ್ಷ ಗಳ ಹಿಂದೆ, ಅಂದರೆ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ನನ್ನ ಪತಿ ನಂದನ್ ನಿಲೇಕಣಿಯವರು
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು; ಅವರ ಪರವಾಗಿ ನಮ್ಮ ತಂಡದವರು, ದೇಹದ ಶಕ್ತಿಯನ್ನೆಲ್ಲಾ ಉಡುಗಿಸಿಬಿಡುವ ಬಿರುಸಿನ ಚುನಾವಣಾ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆವು. ಈ ಒಂದಿಡೀ ಕಥಾನಕ ಹಾಗೂ ಆಯ್ಕೆಯ ಕಸರತ್ತು ಹೇಗೆ ಸಂಪನ್ನಗೊಂಡಿತು ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ; ಆದರೆ ಈ ಪ್ರಸಂಗದಿಂದ ನಾವು ಕಲಿತ ಪಾಠ ಬಹಳಷ್ಟಿದೆ. ದೇಶಾದ್ಯಂತ ಮತ್ತೊಮ್ಮೆ ‘ಚುನಾವಣಾ ಜ್ವರ’ ವ್ಯಾಪಿಸಿರುವ ಈ ಸಂದರ್ಭದಲ್ಲಿ ಆ ಪಾಠಗಳನ್ನು ನಿಮ್ಮೊಂದಿಗೆ ಹಂಚಿ ಕೊಳ್ಳುವುದು ಸುಸಂಗತವಾಗಬಹುದು ಎಂದು ಕೊಂಡಿರುವೆ..
ಈ ಪೈಕಿ, ದೇಶದ ೯೦ ಕೋಟಿಗೂ ಹೆಚ್ಚಿನ ಮತದಾರರು ಒಪ್ಪಿಕೊಳ್ಳಬಹುದಾದ ಮೊಟ್ಟಮೊದಲ ಪಾಠವೆಂದರೆ, ರಾಜಕೀಯ ಎಂಬುದು ಪ್ರಪಂಚದ
ಅತ್ಯಂತ ಕಷ್ಟಕರವಾದ ವೃತ್ತಿ ಎಂಬುದು. ಮತದಾರರ ಬೇಡಿಕೆಗಳನ್ನು ಪೂರೈಸಲೆಂದು ರಾಜಕಾರಣಿಗಳು ವರ್ಷದ ೩೬೫ ದಿನಗಳೂ ‘೨೪/೭’ ಶೈಲಿಯಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನಾವು ಈ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಹೀಗೆ ಕಾರ್ಯನಿರ್ವಹಿಸುವ ವೇಳೆ ಕೆಲವೊಮ್ಮೆ ಅವರಿಗೆ
ಯಾವ ಪ್ರತಿ-ಲವೂ ದಕ್ಕಿರುವುದಿಲ್ಲ ಎಂಬುದು ಅರಿವಾದಾಗಲಂತೂ ನಾವು ನಿಬ್ಬೆರಗಾಗಿದ್ದೇವೆ.
ಆದ್ದರಿಂದ, ದಂಡಿಯಾಗಿ ತುಂಬಿಕೊಂಡಿರುವ ನಮ್ಮ ರಾಜಕೀಯ ಪಕ್ಷಗಳ ಸಾವಿರಾರು ಅಭ್ಯರ್ಥಿಗಳಿಗೆ ನಾವೊಮ್ಮೆ ‘ಉಘೇ ಉಘೇ’ ಎನ್ನಲೇಬೇಕು. ಈ
ಸಾವಿರಾರು ಆಕಾಂಕ್ಷಿಗಳ ಪೈಕಿ ಗೆಲ್ಲುವುದು ೫೪೩ ಮಂದಿ ಮಾತ್ರ; ಆದರೆ, ಇವರ ಪೈಕಿ ನಮ್ಮ ಪ್ರಜಾಪ್ರಭುತ್ವದ ಮಹತ್ತರ ಚಟುವಟಕೆಯನ್ನು,
ಗತಿಶೀಲತೆಯನ್ನು ಕಾಪಿಟ್ಟುಕೊಂಡು ಹೋಗುವ ವರು, ಅದಕ್ಕಿರುವ ಮಹತ್ವವನ್ನು ಉಳಿಸಿ- ಬೆಳೆಸಿಕೊಂಡು ಹೋಗುವವರು ಎಷ್ಟು ಮಂದಿ?
ಇಲ್ಲಿ ನಮ್ಮ ಅರಿವಿಗೆ ಬಂದ ಎರಡನೇ ಸಮಸ್ಯೆ ಯೆಂದರೆ, ಗಣನೀಯ ಸಂಖ್ಯೆಯ ಮತದಾರರು ಅದರಲ್ಲೂ ವಿಶೇಷವಾಗಿ ನಗರ ಪ್ರದೇಶಗಳ ಗಣ್ಯ
ವರ್ಗಕ್ಕೆ ಸೇರಿದವರು ಚುನಾವಣೆಗಳನ್ನು ಈಗಲೂ ತುಂಬಾ ಲಘುವಾಗಿ ಪರಿಗಣಿಸುತ್ತಿದ್ದಾರೆ.
ಅವರು ಹೀಗೆ ಮಾಡುವುದು ತರವಲ್ಲ. ಜಗತ್ತಿನ ಸುಮಾರು ೨೧ ದೇಶಗಳಲ್ಲಿ ಕಾಣಬರುವಂತೆ ಭಾರತದಲ್ಲಿ ಕಡ್ಡಾಯ ಮತದಾನದ ಪದ್ಧತಿಯಿಲ್ಲ. ನಮ್ಮಲ್ಲಿ ಚುನಾವಣೆ ಎಂಬುದು ಒಂದು ‘ಜವಾಬ್ದಾರಿಯುತ ಕೆಲಸ’ ಆಗುವುದಕ್ಕಿಂತ ಹೆಚ್ಚಾಗಿ ಮತದಾನದ ಹಕ್ಕನ್ನು ಸಂಭ್ರಮಿಸುವುದಕ್ಕಿರುವ ಒಂದು ಸಂದರ್ಭವಾಗಿ ಬಿಟ್ಟಿದೆ. ಆದರೆ, ಭಾರತವು ಹೆಮ್ಮೆಯಿಂದ ಹೇಳಿ ಕೊಳ್ಳುವ ‘ಮುಕ್ತ ಮತ್ತು ನ್ಯಾಯಸಮ್ಮತ’ ಚುನಾವಣೆ ಗಳಲ್ಲಿ ನಾವು ಪಾಲ್ಗೊಂಡು ಮತ ಚಲಾಯಿಸದಿದ್ದರೆ, ಅದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ ವಾಗುತ್ತದೆ, ನಮ್ಮನ್ನು ನಾವೇ ನಿರಾಶೆಗೊಳಿಸಿಕೊಂಡ ಸಂದರ್ಭವಾಗುತ್ತದೆ ಎಂದಿಲ್ಲಿ ಹೇಳಲೇಬೇಕು.
ನಾವು ಅಮೂಲ್ಯವೆಂದು ಪರಿಗಣಿಸಿರುವ ಬೇಸಗೆ ರಜೆಯ ನಡುವೆಯೇ ಈ ಚುನಾವಣೆಗಳು ದಾಂಗುಡಿ ಇಟ್ಟುಬಿಡುತ್ತವೆ ಎಂಬುದೇನೋ ನಿಜ;
ಅಷ್ಟೇಕೆ, ಮತದಾರರ ಪಟ್ಟಿಯಿಂದ ತಮ್ಮ ಹೆಸರು ಗಳು ಬಿಟ್ಟುಹೋಗಿರುವುದೂ ನಮ್ಮಲ್ಲಿ ಅನೇಕರ ಅನುಭವಕ್ಕೆ ಬರಬಹುದು ಎಂಬುದೂ ದಿಟವೇ.
ಆದರೆ, ‘ನಾವು ಮತದಾನ ಮಾಡುವುದಕ್ಕೆ ಇದು ಯೋಗ್ಯ ಸಮಯವಲ್ಲ’ ಎಂದೋ ಅಥವಾ ‘ಮತದಾನದ ಅವಧಿಯು ನಮ್ಮ ಸಮಯಕ್ಕೆ ಅನುಕೂಲ
ಕರವಾಗಿಲ್ಲ’ ಎಂದೋ ಗಣನೀಯ ಸಂಖ್ಯೆಯ ಜನರು ಭಾವಿಸಿಬಿಟ್ಟರೆ ಏನಾಗಬಹುದು ಅಂತ ಒಮ್ಮೆ ಯೋಚಿಸಿ ನೋಡಿ? ಎಲ್ಲರೂ ಹೀಗೆಯೇ ನಡೆದು
ಕೊಂಡರೆ, ಭಾರತ ಎಂಥ ರಾಷ್ಟ್ರವಾಗಿ ಹೊರ ಹೊಮ್ಮಬಹುದು? ದೇಶದ ಭವಿಷ್ಯವೇನಾಗ ಬಹುದು? ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಮ್ಮಲ್ಲಿ
ಸುಳಿದಾಡಿದ ಮೂರನೆಯ ನಿರ್ಣಾಯಕ ಪ್ರಶ್ನೆಯೆಂದರೆ, ‘ಜನರು ತಮ್ಮ ಅಭ್ಯರ್ಥಿಗಳಿಂದ ಏನನ್ನು ನಿರೀಕ್ಷಿಸಬೇಕು?’ ಎಂಬುದು.
‘ಸಮರ್ಥ ಶಾಸನ ಕಾರರಾಗಿ ಸಂಸತ್ತಿಗೆ ಸೇವೆ ಸಲ್ಲಿಸುವುದೇ ಮುಖ್ಯ ಕರ್ತವ್ಯವಾಗಿರುವಂಥವರನ್ನು ನಾವು ಚುನಾಯಿಸುತ್ತಿದ್ದೇವೆ’ ಎಂಬ ಅಂತಃಪ್ರಜ್ಞೆ ಬಹುತೇಕ ಮತದಾರ ರಿಗೆ ಇಲ್ಲದಿರಬಹುದು. ಮಾಧ್ಯಮಗಳು ಕೂಡ ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡುವುದಿಲ್ಲ. ಇನ್ನು ನಮ್ಮ ರಾಜಕಾರಣಿಗಳೂ ಈ ಕುರಿತಾಗಿ ಮಾತನಾಡುವುದೇ ಅಪರೂಪ. ಸಂಸದರು ತಂತಮ್ಮ ಕ್ಷೇತ್ರಗಳ ಮತ ದಾರರ ಹೆಬ್ಬಯಕೆಗಳನ್ನು ಸದನದಲ್ಲಿ ಪ್ರತಿಬಿಂಬಿಸುವ ಪ್ರಾಧಿನಿಧಿಕ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.
ಮಾತ್ರವಲ್ಲದೆ, ಈ ಆಕಾಂಕ್ಷೆಗಳನ್ನು ಈಡೇರಿಸಲು ಸರಕಾರಕ್ಕೆ ಆಗುವ ವೆಚ್ಚವನ್ನು ಅನುಮೋದಿಸುವ ಅಧಿಕಾರ ಹಾಗೂ ಕಾರ್ಯಾಂಗದ ಮೇಲಿನ
ಒಂದಷ್ಟು ಮೇಲ್ವಿಚಾರಣೆಯನ್ನೂ ಅವರು ಹೊಂದಿರುತ್ತಾರೆ. ಆದರೆ, ರಾಷ್ಟ್ರವು ಸುಗಮವಾಗಿ, ನ್ಯಾಯ ಸಮ್ಮತವಾಗಿ ಮತ್ತು ಯಾವುದೇ ಸಂಘರ್ಷ ವಿಲ್ಲದೆ ಕಾರ್ಯನಿರ್ವಹಿಸುವುದಕ್ಕೆ ಅನುವು ಮಾಡಿಕೊಡುವ ಕಾನೂನನ್ನು ಅರ್ಥಮಾಡಿಕೊಳ್ಳುವಿಕೆ, ಆ ಕುರಿತಾಗಿ ಚರ್ಚಿಸುವಿಕೆ ಮತ್ತು ಅದು ಅಂಗೀಕಾರಗೊಳ್ಳುವಲ್ಲಿ ನೆರವಾಗುವಿಕೆಯಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅವರ ಮುಖ್ಯ ಕೆಲಸವಾಗಿರುತ್ತದೆ.
೨೦೧೪ರ ನಮ್ಮ ಚುನಾವಣಾ ಪ್ರಚಾರದ ಸಂದರ್ಭವು ಈ ವಿಷಯದಲ್ಲಿ ನಮಗೆ ಬೇರೆಯದೇ ಅನುಭವವನ್ನು ನೀಡಿತೆನ್ನಬೇಕು; ಅಂದರೆ ಮೇಲೆ
ಉಲ್ಲೇಖಿಸಿರುವ ‘ಹೊಣೆಗಾರಿಕೆಯ ಮಹತ್ವ’ವನ್ನು ಮತದಾರರು ಅರ್ಥಮಾಡಿಕೊಂಡಿಲ್ಲ, ಅಷ್ಟೇಕೆ ಅವರು ಅದನ್ನು ಬಯಸಿಯೂ ಇಲ್ಲ ಎಂಬುದು ಈ ವೇಳೆ ನಮಗೆ ಮನವರಿಕೆಯಾಯಿತು. ಪ್ರಚಾರ ಕಾರ್ಯದ ಅಂಗವಾಗಿ ಅನೇಕ ಕೊಳೆಗೇರಿಗಳು, ಮಧ್ಯಮ ವರ್ಗದ ಜನರ ನೆರೆಹೊರೆಗಳು ಮತ್ತು
ಭವ್ಯ ಅಪಾರ್ಟ್‌ಮೆಂಟುಗಳು ಹೀಗೆ ಎಲ್ಲ ಸ್ತರಗಳ ಜನರ ನೆಲೆಗಳಲ್ಲೂ ತಿಂಗಳುಗಟ್ಟಲೆ ಹೆಜ್ಜೆಹಾಕಿದ ನಾವು, ದಿನವಿಡೀ ಜನರ ಮಾತುಗಳನ್ನು ತನ್ಮಯರಾಗಿ ಆಲಿಸಿದ್ದುಂಟು. ಆ ಪೈಕಿ ನಿರ್ದಿಷ್ಟವಾಗಿ ಒಂದಷ್ಟು ಕ್ಷಣಗಳು ನಮ್ಮ ಕಣ್ಣು ತೆರೆಸುವಂತಿದ್ದವು.
ಅಸಹನೀಯ ಧಗೆಯಿದ್ದ ಒಂದು ದಿನ ಹೀಗೇ ಒಂದು ಭವ್ಯ ಅಪಾರ್ಟ್‌ಮೆಂಟ್‌ಗೆ ಭೇಟಿಯಿತ್ತೆವು. ನಂದನ್ ನಿಲೇಕಣಿಯವರನ್ನು ಒಂದೊಮ್ಮೆ ನೀವು ಚುನಾಯಿ ಸಿದ್ದೇ ಆದರೆ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಅವರು ಹೇಗೆ ನೆರವಾಗುತ್ತಾರೆ ಎಂಬ ಬಗ್ಗೆ ನಾನು ಭಾವಾವೇಶದಲ್ಲೇ ಭಾಷಣ ಮಾಡಿದೆ. ವಿಲಕ್ಷಣವಾಗಿ ತಲೆಯಾಡಿಸುತ್ತಾ ಅದನ್ನು ಕೇಳಿಸಿಕೊಂಡ ವ್ಯಕ್ತಿ ಯೊಬ್ಬರು, ‘ನೀವು ಹೇಳಿದ್ದು ಅದ್ಭುತವಾಗಿತ್ತು.
ಅದೆಲ್ಲಾ ಸರಿ, ರಾತ್ರಿ ೧ ಗಂಟೆಗೆ ಬೀದಿನಾಯಿಗಳಿಗೆ ಆಹಾರ ನೀಡುವ ಒಬ್ಬ ಹುಚ್ಚ ಇಲ್ಲಿದ್ದಾನೆ. ಅವನ ವಿಷಯದಲ್ಲಿ ನಿಮ್ಮವರು ಏನು ಮಾಡುತ್ತಾರೆ?’
ಎಂದು ಕೇಳಿದರು. ಮತ್ತೊಂದೆಡೆ, ಮಧ್ಯಮ ವರ್ಗದವರ ನೆಲೆಗಳಿಗೆ ಭೇಟಿಯಿತ್ತಾಗ, ‘ಬೀದಿದೀಪಗಳ ವಿಷಯದಲ್ಲಿ ಅಥವಾ ನಮ್ಮ ಉದ್ಯಾನವನ್ನು
ಹಸಿರಾಗಿಡುವಲ್ಲಿ ನೀವೇನು ಮಾಡಬಲ್ಲಿರಿ?’ ಎಂದು ಜನರು ಕೇಳಿದ್ದುಂಟು. ಇದೇ ರೀತಿಯಲ್ಲಿ ಉದ್ಯಾನದಲ್ಲಿದ್ದ ಜನರೊಂದಿಗೆ ಸಂಭಾಷಿಸಿದಾಗ ಮಹಿಳೆ
ಯೊಬ್ಬರು, ‘ನೀವು ನನ್ನ ಮತವನ್ನು ಪುಕ್ಕಟೆಯಾಗಿ ಬಯಸುತ್ತೀರೇನು? ಅದಕ್ಕೆ ಪ್ರತಿಯಾಗಿ ನನಗೇನು ಕೊಡುತ್ತೀರಿ?’ ಎಂದು ಚುಚ್ಚಿ ಕೇಳುವುದೇ?! ಅದಕ್ಕೆ ನಾನು, ‘ನನ್ನ ಪತಿ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ, ಅವರು ನೈತಿಕತೆಯಿರುವ ಅಭ್ಯರ್ಥಿ…’ ಎಂದೆಲ್ಲಾ ಗೊಣಗತೊಡಗಿದಾಗ ಆಕೆಗೆ ಅದು ತಮಾಷೆಯಂತೆ ಕಂಡಿದ್ದುಂಟು!
ಇನ್ನು ಕೊಳೆಗೇರಿ ಪ್ರದೇಶಗಳಿಗೆ ಭೇಟಿಯಿತ್ತಾಗ ಲಂತೂ, ಅಲ್ಲಿನ ನಿವಾಸಿಗಳು ಮೂಲಭೂತ ಸೇವೆಗಳಿಲ್ಲದೆ ಹತಾಶರಾಗಿದ್ದುದು ಕಣ್ಣಿಗೆ ಬಿತ್ತು. ‘ಬರೀ ನೀರು ಕೊಡಿ, ಅಷ್ಟೇ ಸಾಕು’ ಎಂದು ಅವರು ಬೇಡಿದ್ದುಂಟು. ಮತ್ತಿತರರು ವಿದ್ಯುಚ್ಛಕ್ತಿ, ಸಾರಿಗೆ, ಆಸ್ಪತ್ರೆ ಇತ್ಯಾದಿ ವ್ಯವಸ್ಥೆಗಳ ಬಗ್ಗೆ ಮಾತನಾಡಿದರು. ಇದು ಅಭ್ಯರ್ಥಿ ಗಳು ಮತ್ತು ಅವರ ಸಹವರ್ತಿಗಳ ಸಮ್ಮುಖದಲ್ಲಿ ತಂತಮ್ಮ ಹತಾಶೆಗಳನ್ನು ಸುರಿಯಲು ಅವರಿಗಿದ್ದ ಒಂದು ಅವಕಾಶವಾಗಿತ್ತು.
ಇವಿಷ್ಟೂ ನಿದರ್ಶನಗಳನ್ನು ನೋಡಿದಾಗ, ‘ಬೆಂಗಳೂರಿನಂಥ ಅಭಿವೃದ್ಧಿ ಹೊಂದಿದ ಮತ್ತು ವಿದ್ಯಾ ವಂತರು ತುಂಬಿದ ನಗರದಲ್ಲೂ ಜನರು, ಸಂಸದರೇ ಖುದ್ದಾಗಿ ಬಂದು ತಮ್ಮೆಲ್ಲ ಕೆಲಸ-ಕಾರ್ಯಗಳನ್ನು ಮಾಡಿಕೊಡಬೇಕು ಎಂದು ಬಯಸುತ್ತಾರೆ; ತಾವು ಸಂಘಟಿತರಾಗಿ ವ್ಯವಸ್ಥೆ ಮಾಡಿಕೊಳ್ಳ ಬಹುದಾದ ಅಥವಾ ತಂತಮ್ಮ ನಗರಸಭಾ ಸದಸ್ಯರು, ಸ್ಥಳೀಯ ಅಧಿಕಾರಿಗಳು ಅಥವಾ ಶಾಸಕರಿಂದ ಮಾಡಿಸಿಕೊಳ್ಳಬಹುದಾದ ಕಾರ್ಯಗಳಿಗೂ ಸಂಸದರೇ ಬರಬೇಕೆಂದು ಜನ ಅಪೇಕ್ಷಿಸುತ್ತಾರೆ. ಅವರು ತಮ್ಮ ಸ್ಥಳೀಯ ಕಿರಿಕಿರಿಗಳಿಗೆ ಬಯಸುವುದು ಪ್ರತ್ಯಕ್ಷ ಪರಿಹಾರವನ್ನೇ ವಿನಾ, ಯಾವುದೇ ಅಮೂರ್ತ- ಅಪ್ರಾಯೋಗಿಕ ಪ್ರತಿಫಲಗಳನ್ನಲ್ಲ’ ಎಂಬ ಅಪ್ರಿಯ ಸತ್ಯವು ನಮ್ಮ ತಂಡಕ್ಕೆ ಮನವರಿಕೆಯಾಯಿತು.
ಸಮಾಜದ ಈ ವಿವಿಧ ಸ್ತರಗಳ ಜನರು ಮುಂದಿಟ್ಟ ಬೇಡಿಕೆಗಳ ಪೈಕಿ ಯಾವುದೂ ಅಸಮಂಜಸವಾದುದಾಗಿರಲಿಲ್ಲ. ಅವುಗಳಲ್ಲಿ ಹೆಚ್ಚಿನವನ್ನು, ಅದರಲ್ಲೂ ವಿಶೇಷವಾಗಿ ಮೂಲಭೂತ ಸೇವೆಗಳಿಗೆ ಸಂಬಂಧಿಸಿ ದಂಥವನ್ನು ನೆರವೇರಿಸಲೇಬೇಕಿತ್ತು. ಹಾಗಾದರೆ, ಅವನ್ನು ನೆರವೇರಿಸಬೇಕಾದವರು ಯಾರು? ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ಸಂಸದರಿಗಂತೂ ಇದು ಸಾಧ್ಯವಿಲ್ಲ; ಕಾರಣ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ (IPಔಅಈ) ಅಡಿ ಸಿಗುವ ಅತ್ಯಲ್ಪ ಮೊತ್ತದ ನಿಧಿಯನ್ನು ಹೊರತು ಪಡಿಸಿದರೆ, ಜನರ ಈ ಯಾವುದೇ ಬಯಕೆಗಳನ್ನು ಈಡೇರಿಸುವುದಕ್ಕೆ ಸಂಸದರ ಬಳಿ ಯಾವುದೇ ಅಧಿಕಾರವಾಗಲೀ, ಕಾನೂನುಬದ್ಧವಾಗಿ ಮಂಜೂ ರಾದ ಸಂಪನ್ಮೂಲ ಗಳಾಗಲೀ ಇರುವುದಿಲ್ಲ.
ಹೀಗಾಗಿ, ಇಂಥ ಮತದಾರರನ್ನು ಮೆಚ್ಚಿಸಬೇಕೆಂದರೆ, ಗೆಲ್ಲುವ ಅಭ್ಯರ್ಥಿಯು ‘ಜನಪೋಷಣೆ ಮತ್ತು ದಲ್ಲಾಳಿ ರಾಜಕಾರಣ’ವನ್ನು ಮಾಡಬೇಕಾಗುತ್ತದೆ, ಅಷ್ಟೇ! ಸಂಕೀರ್ಣ ಸಮಸ್ಯೆ ಗಳನ್ನು ಶಾಶ್ವತವಾಗಿ ಪರಿಹರಿಸ ಲೆಂದು, ದಕ್ಷ ಅಧಿಕಾರಿಗಳೊಡನೆ ಕೆಲಸ ಮಾಡಬಲ್ಲ ಪ್ರಬುದ್ಧ ರಾಜಕಾರಣಿಗಳು ವರ್ತಮಾನದ ಪ್ರಜಾ ಪ್ರಭುತ್ವಕ್ಕೆ ಬೇಕಾಗಿದ್ದಾರೆ. ಇಲ್ಲಿ ಮತ್ತೊಂದು ವಿಷಯವನ್ನು ಹೇಳಲೇಬೇಕು. ಯಾವುದೇ ಚರ್ಚೆಯಿಲ್ಲದೆ ನಮ್ಮ ಕಾನೂನುಗಳು ಮತ್ತು ಕಾರ್ಯನೀತಿಗಳಿಗೆ ಸಮ್ಮತಿಸಿಬಿಡುವುದು ನಮ್ಮಲ್ಲಿ ವಾಡಿಕೆಯಾಗಿಬಿಟ್ಟಿದೆ. ಅಷ್ಟೇ ಅಲ್ಲ, ಅದು ನಮ್ಮ ದೈನಂದಿನ ಜೀವನದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬು ದನ್ನು ಪ್ರಜೆಗಳಾದ ನಾವು ಕೂಡ ಅವಲೋಕಿಸಲಾಗುತ್ತಿಲ್ಲ.
ಇದಕ್ಕೊಂದು ಉದಾಹರಣೆ ನೋಡೋಣ. ಅಂತರ್ಜಾಲದ ಸೇವೆಗಳನ್ನು ಅಮಾ ನತುಗೊಳಿಸುವ ಸರಕಾರದ ಅಧಿಕಾರವನ್ನು ‘ದೂರ ಸಂಪರ್ಕ ಕಾಯ್ದೆ
೨೦೨೩’ ದೃಢಪಡಿಸುತ್ತದೆ. ಕೆಲವೇ ಗಂಟೆಗಳವರೆಗೆ ಅಂತರ್ಜಾಲ ವ್ಯವಸ್ಥೆಯು ಸ್ಥಗಿತ ಗೊಂಡರೆ ಬದುಕುವುದು ಹೇಗೆಂಬುದು ನಗರ ಪ್ರದೇಶದ
ಯಾವುದೇ ಮತದಾರರಿಗೆ ಗೊತ್ತಿಲ್ಲ. ಹೀಗಾಗಿ, ವಿರಳಾತಿವಿರಳ ಸಂದರ್ಭಗಳಲ್ಲಿ ಮಾತ್ರ ಅಂತರ್ಜಾಲ ವ್ಯವಸ್ಥೆಯ ಸ್ಥಗಿತಗೊಳಿಸುವಿಕೆಗೆ ಆದೇಶಿಸಬಹುದು ಎಂಬುದನ್ನು ಖಾತ್ರಿಪಡಿಸಲು ನಮ್ಮ ಸಂಸದರು ಮಧ್ಯಪ್ರವೇಶಿಸುವ ಅಗತ್ಯವಿದೆ ಯಲ್ಲವೇ? ಸರಿ ಸುಮಾರು ೨ ಕೋಟಿಯಷ್ಟಿರುವ ಹೊಸ/ ಯುವ ಮತದಾರರಿಗೆ, ಅವರು ಹೆಚ್ಚು ಕಾಳಜಿ ವಹಿಸುವ ಕೆಲಸದ ಭವಿಷ್ಯಕ್ಕೆ ಸಂಬಂಧಿಸಿದ ಕಾರ್ಯ ನೀತಿಯ ಸಮಸ್ಯೆಗಳನ್ನು ಪರಿಹರಿಸು ವುದು ನಿರ್ಣಾಯಕ ಅಂಶವಾಗಿರಬಹುದು.
ಹಿಂದೆಂದಿ ಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಮತದಾನಕ್ಕೆ ನೋಂದಾಯಿಸಿಕೊಳ್ಳುತ್ತಿರುವ ಮಹಿಳೆಯರ ವಿಷಯದಲ್ಲಿ, ಸುರಕ್ಷತೆ ಮತ್ತು ಆರೋಗ್ಯ, ಸಮಾನತೆ ಮತ್ತು ಪ್ರವೇಶಾವಕಾಶ ಕುರಿತಾದ ಕಾನೂನುಗಳು ಹಾಗೂ ನಿಯಮಗಳ ಜಾರಿ ಮುಖ್ಯವಾಗಿರುತ್ತದೆ; ಇವು ತಕ್ಷಣದ ಪರಿಹಾರಕ್ಕಿಂತಲೂ ಹೆಚ್ಚು ಮುಖ್ಯ ವಾಗಬಹುದು. ಆದ್ದರಿಂದ, ೧೭ನೇ ಲೋಕಸಭೆಯ ಜವಾಬ್ದಾರಿ ಯುತ ಮತದಾರರಾಗಿ ಹಳೆಯ ಮಾನಸಿಕ ಮಾದರಿ ಅಥವಾ ಚಿತ್ತಸ್ಥಿತಿಯನ್ನು ಬದಲಿಸಲು ನಮಗೊಂದು ಅವಕಾಶ ಸಿಕ್ಕಿದೆ. ಹೊಸ ಕಾನೂನುಗಳನ್ನು ವಿನ್ಯಾಸ ಗೊಳಿಸಿದಾಗ ಅಥವಾ ಹಳೆಯವನ್ನು ಮಾರ್ಪಡಿಸಿ
ದಾಗ, ನಮ್ಮ ಸ್ವಾತಂತ್ರ್ಯಗಳಿಗಾಗಿ ಹೋರಾಡುವುದಕ್ಕೆ ಮತ್ತು ಸಂಭಾವ್ಯ ತಲ್ಲಣಗಳಿಂದ ನಮ್ಮನ್ನು ರಕ್ಷಿಸುವುದಕ್ಕಾಗಿ ಸಂಸತ್ತಿನಲ್ಲಿ ದನಿಯೆತ್ತುವವರು ಬೇಕಿದ್ದಾರೆ.
ಅಂಥವರನ್ನೇ ನಾವು ಚುನಾಯಿಸಲು ಸಾಧ್ಯ ವಿದೆ. ಕಾರಣ ಒಳ್ಳೆಯ ಸಂಸದರು ಮಾತ್ರವೇ ಉತ್ತಮವಾದ ಕಾನೂನುಗಳನ್ನು ರೂಪಿಸಬಲ್ಲರು. ಉತ್ತಮ ವಾದ ಕಾನೂನುಗಳು ಒಂದೊಳ್ಳೆಯ ಸಮಾಜವನ್ನು ನಿರ್ಮಿಸುತ್ತವೆ. ಉತ್ತಮವಾದ ಕಾನೂನುಗಳು ಅನುಷ್ಠಾನಗೊಂಡಾಗ, ಅವುಗಳಲ್ಲಿ ಅಡಕವಾಗಿ ರುವ ನ್ಯಾಯ, ಸಮಾನತೆ, ಹಕ್ಕುಗಳು ಮತ್ತು ಸಂರಕ್ಷಣೆಯ ಆಶಯಗಳಿಂದಾಗಿ ಪ್ರಜಾ ಪ್ರಭುತ್ವವು ಸಮೃದ್ಧಗೊಳ್ಳುತ್ತದೆ. ಇಂದು ರೂಪುಗೊಂಡ ಉತ್ತಮವಾದ ಕಾನೂನುಗಳು, ಭವಿಷ್ಯದ ಅಸಂಖ್ಯಾತ ತಲೆಮಾರುಗಳಿಗೆ ಅತ್ಯುತ್ತಮ ಭವಿಷ್ಯ ವನ್ನೇ ಸೃಷ್ಟಿಸುತ್ತವೆ. ನಮ್ಮ ಸಂಸದರು ಸ್ಥಳೀಯ
ಸಮಸ್ಯೆಗಳಿಂದ ವಿಚಲಿತರಾಗಬೇಕಾದ ಅಗತ್ಯವಿಲ್ಲ, ಅವುಗಳಿಗಾಗಿ ನಾವು ಸ್ಥಳೀಯ ಸರಕಾರಗಳನ್ನೇ ಹೊಣೆಗಾರರನ್ನಾಗಿಸಬೇಕು.
ನಾವು ತತ್‌ಕ್ಷಣಕ್ಕೆ ಗ್ರಹಿಸುವ/ಪರಿಹಾರ ಅಪೇಕ್ಷಿಸುವ ಬಾಬತ್ತಿಗಿಂತ ಮಿಗಿಲಾದ ಪರಿಕಲ್ಪನೆಗಳ ಮೇಲೆ ಗಮನ ಕೇಂದ್ರೀ ಕರಿಸುವಂತಾಗಲು ನಾವು ೫೪೩ ನಾಯಕರಿಗೆ ಖಂಡಿತ ಅನುವುಮಾಡಿ ಕೊಡಬಹುದು. ಹತ್ತು ವರ್ಷಗಳ ಹಿಂದೆ, ನಮ್ಮ ತಂಡವು ಭವಿಷ್ಯೋದ್ದೇಶದ ಆಯಕಟ್ಟಿನ ಮತಗಳನ್ನು ದಕ್ಕಿಸಿಕೊಳ್ಳಲೆಂದು ಪ್ರಚಾರ ಮಾಡುತ್ತಾ ಸುಡುಬೇಸಗೆಯ ಧಗೆಯಲ್ಲೂ ಬೀದಿಬೀದಿಗಳಲ್ಲಿ ಹೆಜ್ಜೆ ಹಾಕಿತ್ತು. ಇನ್ನು ಕೆಲವೇ ವಾರ ಗಳಲ್ಲಿ, ವಿಶ್ವದ ಅತಿದೊಡ್ಡ ಹಾಗೂ ಅತಿ ಹೆಮ್ಮೆಯ ಮತದಾರ ಸಮೂಹವಾಗಿ ನಾವು ನಮ್ಮ ಕೈಬೆರಳು ಗಳಿಗೆ ಶಾಯಿಯನ್ನು ಲೇಪಿಸಿಕೊಳ್ಳುವವರಿ ದ್ದೇವೆ.
ಭಾರತದ ಸಮಾಜವೇ ಆಗಿರುವ ನಾವು, ನಮ್ಮೆಲ್ಲರನ್ನೂ ಪಾಲಿಸಿ-ಪೋಷಿಸುವಂಥ ಉತ್ತಮ ವಾದ ಕಾನೂನುಗಳನ್ನು ವಿನ್ಯಾಸಗೊಳಿಸುವ ಅಭ್ಯರ್ಥಿ
ಗಳನ್ನೇ ಚುನಾಯಿಸೋಣ. ತನ್ಮೂಲಕ, ಭಾರತದ ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತಷ್ಟು ಗಟ್ಟಿ ಗೊಳಿಸಲು ಸಾಧ್ಯವಿದೆ ಎಂಬುದನ್ನು ಮರೆಯ ದಿರೋಣ.
(ಸೌಜನ್ಯ: ದಿ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕಿ ‘ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್
ಫೌಂಡೇಷನ್’ನ ಅಧ್ಯಕ್ಷೆ)