Friday, 22nd November 2024

ಎಲ್ಲ ಹೋರಾಟಗಾರರಂತಲ್ಲ ಈ ಪಾಸ್ವಾನ್

ಅಭಿವ್ಯಕ್ತಿ

ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಲೋಕಸಭೆಗೆ ಎಂಟು ಸಲ ಆಯ್ಕೆ. ರಾಜ್ಯಸಭೆಗೆ ಎರಡು ಬಾರಿ ಸದಸ್ಯ. ಆರು ಪ್ರಧಾನ ಮಂತ್ರಿಗಳ ಸಚಿವ ಸಂಪುಟದಲ್ಲಿ ಎಂಟು ಬಾರಿ ಮಂತ್ರಿ. ಲೋಕಸಭೆಯ ಆಡಳಿತ ಪಕ್ಷದ ನಾಯಕ. ಇಷ್ಟೂ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದವರು ರಾಮ ವಿಲಾಸ್ ಪಾಸ್ವಾನ್. ಹುಟ್ಟಿದ್ದು ಬಿಹಾರದ ಅತ್ಯಂತ ದುರ್ಬಲ ಹಾಗೂ ಕಡೆಗಣಿಸಲ್ಪಟ್ಟ ವರ್ಗದಲ್ಲಿ. ಸ್ವಾತಂತ್ರ್ಯ ಸಿಗುವುದಕ್ಕಿಂತ ಒಂದು ವರ್ಷ ಮೊದಲು ಜನನ.

ಸಾರ್ವಜನಿಕ ಜೀವನದಲ್ಲಿ ಸುದೀರ್ಘ 51 ಅರ್ಥಪೂರ್ಣ ವರ್ಷಗಳನ್ನು ಕಳೆದು ಅಕ್ಟೋಬರ್ 8ರಂದು ಇಹಲೋಕ ತ್ಯಜಿಸಿದ್ದಾರೆ.  ಅಂಕಿಅಂಶಗಳು ಅವರಿಗೊಂದು ವಿಶಿಷ್ಟ ನಾಯಕತ್ವವನ್ನೂ, ರಾಜಕೀಯದಲ್ಲಿ ಒಂದು ಅನುಪಮ ವ್ಯಕ್ತಿತ್ವವನ್ನೂ ಹಾಗೂ ಸಮಾಜದ ದುರ್ಬಲ ವರ್ಗಗಳಿಗೆ ಧ್ವನಿಯಾಗುವ ವಿಶೇಷ ಅವಕಾಶಗಳನ್ನೂ ನೀಡಿದ್ದವು.

ದೇಶದಲ್ಲಿ ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯ ನೀಡಲು ನಡೆದ ಕಸರತ್ತುಗಳ ಹಿನ್ನೆಲೆಯಲ್ಲಿ ಪಾಸ್ವಾನ್ ಅವರ ಬದುಕು ಹಾಗೂ ರಾಜಕೀಯವನ್ನು ಅರ್ಥೈಸಬೇಕು. 23 ವರ್ಷಕ್ಕೇ ರಾಜಕೀಯ ದೀಕ್ಷೆ ಪಡೆದವರು ಪಾಸ್ವಾನ್. 1969ರಲ್ಲಿ ಯುವಕ
ಪಾಸ್ವಾನ್ ಬಿಹಾರದ ವಿಧಾನಸಭೆಗೆ ಮೊದಲ ಬಾರಿ ಪ್ರವೇಶಿಸಿದರು. ಅದು ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥೆ ಸ್ಪಷ್ಟ ರೂಪ ವೊಂದನ್ನು ಪಡೆಯುತ್ತಿದ್ದ ಕಾಲ.

ರಾಜಕಾರಣದಲ್ಲಿ ಮೇಲ್ಜಾತಿಗಳ ಬಿಗಿಹಿಡಿತ ನಿಧಾನವಾಗಿ ಕ್ಷೀಣಿಸುತ್ತಾ ಬರುತ್ತಿತ್ತು. ಅದರಿಂದಾಗಿ ಉತ್ತರ ಭಾರತದ ಕೆಲ ರಾಜ್ಯ ಗಳಲ್ಲಿ ಪರ್ಯಾಯ ಸರಕಾರಗಳು ರಚನೆಯಾಗಿದ್ದವು. ಸಮಾಜದಲ್ಲಿ ಸಾಕಷ್ಟು ತಾರತಮ್ಯವನ್ನು ಎದುರಿಸಿದ್ದ ಹಾಗೂ ಸ್ವತಃ ಅದರ ಪರಿಣಾಮವಾಗಿ ಬಹಳಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದ ಪಾಸ್ವಾನ್‌ರ ಜಾಗತಿಕ ದೃಷ್ಟಿಕೋನವು ತನಗೂ,
ತನ್ನಂತಹ ಎಲ್ಲರಿಗೂ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪಡೆಯಬೇಕು ಎಂಬುದೇ ಆಗಿತ್ತು. ಎಲ್ಲರಿಗೂ ಗೌರವ ಮತ್ತು ಸ್ವಾತಂತ್ರ್ಯ ಸಮಾನವಾಗಿ ದೊರೆಯಬೇಕು ಎಂಬ ಅವರ ಬಲವತ್ತರ ಆಗ್ರಹ ಮೊದಲ ಬಾರಿ ಬಹಿರಂಗವಾಗಿ ವ್ಯಕ್ತವಾ ಗಿದ್ದು 1975ರಲ್ಲಿ ತುರ್ತುಸ್ಥಿತಿಯನ್ನು ವಿರೋಧಿಸಿ ಅವರು ಹೋರಾಟ ನಡೆಸಿದಾಗ.

ಆ ಹೋರಾಟದಿಂದಾಗಿ ಅವರು ಬಂಧನಕ್ಕೊಳಗಾಗಿ ಸುದೀರ್ಘ ಜೈಲುವಾಸ ಅನುಭವಿಸಬೇಕಾಯಿತು. ಪಾಸ್ವಾನ್ ಮೊದಲ ಬಾರಿ 1977ರಲ್ಲಿ ಬಿಹಾರದ ಹಾಜಿಪುರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಭಾರಿ ಬಹುಮತದೊಂದಿಗೆ ಜಯ ಗಳಿಸಿ ದರು. ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ.89ರಷ್ಟು ಮತಗಳು ಪಾಸ್ವಾನ್‌ಗೆ ಲಭಿಸಿದ್ದು ಗಿನ್ನೆಸ್ ದಾಖಲೆಯನ್ನು ಸೃಷ್ಟಿಸಿತು. ಅದು ಸಣ್ಣ ಸಂಗತಿಯಲ್ಲ. ಅದಕ್ಕೂ ಹಿಂದಿನ ಎಂಟು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಅವರು ಮಾಡಿದ ಕೆಲಸ, ಅವರ ಮಾತಿಗೆ ಕ್ಷೇತ್ರದ ಜನರು ನೀಡುತ್ತಿದ್ದ ಗೌರವ ಹಾಗೂ ಪಾಸ್ವಾನ್‌ರಲ್ಲಿ ಜನರಿಗೆ ಕಾಣಿಸಿದ್ದ ಭವಿಷ್ಯದ ನಾಯಕನ ಚಿತ್ರವೇ ಈ ಅಭೂತ ಗೆಲುವಿಗೆ ಕಾರಣವಾಗಿತ್ತು.

ಭಾರತದ ಸಂವಿಧಾನದ ತಳಹದಿಯೇ ಸಾಮಾಜಿಕ ನ್ಯಾಯದ ದೃಷ್ಟಿಕೋನ ಮತ್ತು ಸ್ಫೂರ್ತಿಯ ಮೇಲೆ ನಿಂತಿದೆ. ಸಂವಿಧಾನದ ತತ್ತ್ವಗಳಿಗೆ ಅನುಗುಣವಾಗಿ ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವುದು ಹಾಗೂ ಪ್ರೋತ್ಸಾಹಿಸುವುದು
ಸರಕಾರದ ಕರ್ತವ್ಯ. ಪ್ರತಿಯೊಂದಕ್ಕೂ ಸ್ಪಷ್ಟ ನಿಯಮಗಳನ್ನು ಹೊಂದಿರುವ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ನಮ್ಮದು. ಸಮಾಜದ ದುರ್ಬಲ ಹಾಗೂ ನಿರ್ಲಕ್ಷಿತ ವರ್ಗದ ಜನರೂ ಸೇರಿದಂತೆ ಪ್ರತಿಯೊಬ್ಬರಿಗೂ ಅವರ ಆಶೋತ್ತರಗಳನ್ನು ಈಡೇರಿಸಿ ಕೊಳ್ಳಲು ಸಾಧ್ಯವಾಗುವಂತೆ ಸಾಮಾಜಿಕ ನ್ಯಾಯ ಲಭಿಸಬೇಕು ಎಂಬ ಉದ್ದೇಶದಿಂದಲೇ ಸಂವಿಧಾನದಲ್ಲಿ ಸಾಕಷ್ಟು ನಿಬಂಧನೆ ಗಳನ್ನೂ ಕರ್ತವ್ಯಗಳನ್ನೂ ವಿಧಿಸಲಾಗಿದೆ.

ಸಮಾಜದಲ್ಲಿ ಇಂತಹದ್ದೊಂದು ಬದಲಾವಣೆ ತರುವುದಕ್ಕೆ ರಾಜಕೀಯ ಶಕ್ತಿ ಎಷ್ಟು ಮುಖ್ಯ ಎಂಬುದನ್ನು ಪಾಸ್ವಾನ್ ಮನ ಗಂಡಿದ್ದರು. ನಿಯಮಗಳಿಗೆ ಬದ್ಧವಾಗಿಯೇ ಆಟ ಆಡುವುದಕ್ಕೆ ಅವರು ನಿರ್ಧರಿಸಿದ್ದರು. ಒಳಗಿನಿಂದಲೇ ಬದಲಾವಣೆ ಆರಂಭ ವಾಗಬೇಕು ಎಂಬುದು ಅವರಿಗೆ ಗೊತ್ತಿತ್ತು. ಆದರೆ ಸಮಾಜದ ವಾಸ್ತವಗಳು ಕಠಿಣವಾಗಿದ್ದವು. ಅಧಿಕಾರದ ಲೆಕ್ಕಾಚಾರ ಗಳು ಸಂಕೀರ್ಣವಾಗಿದ್ದವು. ಹೀಗಾಗಿ ಬದಲಾವಣೆ ತರಬೇಕು ಅಂದರೆ ಹೋರಾಟದ ಮಾರ್ಗ ಹಿಡಿಯುವ ಆಯ್ಕೆಯೂ ಅವರ ಮುಂದಿತ್ತು. ಆದರೆ ಅದರ ಬದಲಿಗೆ ವ್ಯವಸ್ಥೆಯೊಳಗೆ ಇದ್ದುಕೊಂಡೇ ಎಲ್ಲದಕ್ಕೂ ಸ್ಪಂದಿಸುತ್ತಾ ಬದಲಾವಣೆ ತರುವ ಮಾರ್ಗ ವನ್ನು ಅವರು ಆಯ್ದುಕೊಂಡರು.

ಪಾಸ್ವಾನ್ ಬೇರೆ ಬೇರೆ ಸೈದ್ದಾಂತಿಕ ನಿಲುವುಗಳನ್ನು ಹೊಂದಿದ್ದ ಹಲವು ಕೇಂದ್ರ ಸರಕಾರಗಳ ಅವಧಿಯಲ್ಲಿ ಸಚಿವರಾಗಿದ್ದರು. ಅವರಿಗೆ ತಾನೇನು ಮಾಡುತ್ತಿದ್ದೇನೆ ಎಂಬುದು ಸ್ಪಷ್ಟವಾಗಿ ಗೊತ್ತಿತ್ತು. ತಾನು ಯಾವಾಗಲೂ ಸ್ವತಂತ್ರ ಗುರುತು ಉಳಿಸಿಕೊಳ್ಳ ಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ, ಅದೇ ವೇಳೆ ಭಾರತದ ರಾಜಕೀಯ ವಾತಾವರಣದಲ್ಲಿ ಕೆಲಸ ಮಾಡಬೇಕು ಅಂದರೆ ಅದರ ಮಿತಿಗಳೇನು ಎಂಬುದೂ ಅವರಿಗೆ ತಿಳಿದಿತ್ತು. ಎಲ್ಲರೂ ಗುರುತಿಸುವಂತಹ ಶಕ್ತಿಯಾಗಿ ಬೆಳೆಯಬೇಕು ಎಂಬುದು ಒಂದೆಡೆಯಾದರೆ, ತನ್ನ ಸಾಮಾಜಿಕ ನ್ಯಾಯದ ದೃಷ್ಟಿಕೋನವನ್ನು ಪ್ರಚುರಪಡಿಸುವುದು ಅವರ ಇನ್ನೊಂದು ಗುರಿಯಾಗಿತ್ತು.

ಹೀಗಾಗಿ ಬೇರೆ ಬೇರೆ ಅವಧಿಯಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಹಾಗೂ ಮೈತ್ರಿಕೂಟಗಳ ಜೊತೆಗೆ ಅವರು ಗುರುತಿಸಿಕೊಂಡಿ ದ್ದರು. ಆ ಅವಸರದಲ್ಲಿ ಅವರು ಕೇವಲ ಬಿಹಾರದಲ್ಲಿ ಮಾತ್ರವಲ್ಲ, ರಾಜ್ಯದ ಹೊರಗೂ ಸಾಮಾಜಿಕ ನ್ಯಾಯದ ದೊಡ್ಡ ಧ್ವನಿ ಯಾಗಿ, ದುರ್ಬಲ ವರ್ಗದವರ ಉದಾತ್ತ ನಾಯಕನಾಗಿ ರೂಪುಗೊಂಡರು. ಯಾವ ರಾಜಕಾರಣಿಗೂ ಮಹತ್ವಾಕಾಂಕ್ಷೆ ಇಲ್ಲದಿ ರುವುದಿಲ್ಲ. ಆದರೆ, ಪಾಸ್ವಾನ್ ಅವರ ವಿಷಯದಲ್ಲಿ ನೋಡುವುದಾದರೆ ಅವರಿಗೆ ಅವರದೇ ಧ್ಯೇಯೋದ್ದೇಶಗಳಿದ್ದವು. ಅದನ್ನೇ ಅವರು ಮಾತನಾಡುತ್ತಿದ್ದರು ಮತ್ತು ಅದನ್ನೇ ಮಾಡುತ್ತಿದ್ದರು.

ಹೀಗಾಗಿ ಅವರೊಬ್ಬ ಭಿನ್ನ ವ್ಯಕ್ತಿಯಾಗಿ ತೋರುತ್ತಿದ್ದರು. ನನ್ನ ಪ್ರಕಾರ, ಅವರು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿರುವ ಸಾಧ್ಯತೆಗಳನ್ನು ಎತ್ತಿ ತೋರಿಸುವ ಹಾಗೂ ಅದರ ಭಾಗವಾಗಿದ್ದು ಕೊಂಡೇ ಬದಲಾವಣೆಯನ್ನು ಬಯಸುವ ಮಾದರಿ ಯೊಂದನ್ನು ಸಿದ್ಧಪಡಿಸಿ ಪ್ರದರ್ಶಿಸಲು ಬಯಸಿದ್ದರು. ಅವರ ಅಗಾಧ ಬೆಳವಣಿಗೆಯು ದುರ್ಬಲ ವರ್ಗಗಳಲ್ಲಿ ಹೊಸ ಭರವಸೆ ಯೊಂದನ್ನು ಮೂಡಿಸಿತ್ತು. ಹೀಗಾಗಿ ಅದು ನಮ್ಮ ರಾಜಕೀಯ ವ್ಯವಸ್ಥೆ ಯನ್ನೂ ಅದರ ಮೇಲೆ ನಿಂತಿರುವ ಪ್ರಜಾಪ್ರಭುತ್ವ ವನ್ನೂ ಬಲಪಡಿಸಿತು.

ರಾಮವಿಲಾಸ್ ಪಾಸ್ವಾನ್ ಅವರು ಧನಾತ್ಮಕ ತಾರತಮ್ಯದಿಂದ ಕೂಡಿದ ರಾಜಕೀಯ ವ್ಯವಸ್ಥೆೆಯ ಫಲಾನುಭವಿ. ಆದರೆ, ಅವರು ನಾಯಕನಾಗಿ ಹೊರಹೊಮ್ಮಿದ್ದು ಹಾಗೂ ಸಮಾಜದ ದುರ್ಬಲ ವರ್ಗಗಳ ಪ್ರತಿನಿಧಿಯಾಗಿ ರೂಪುಗೊಂಡಿದ್ದು ಅವರದೇ ನಿರಂತರ ಪರಿಶ್ರಮ ಮತ್ತು ಏಕಾಗ್ರತೆಯ ಫಲದಿಂದ. ಕೇಂದ್ರ ಸಚಿವರಾಗಿದ್ದಾಗ ಅಗತ್ಯ ಬಿದ್ದಾಗಲೆಲ್ಲ ಅವರು ದುರ್ಬಲ ವರ್ಗ ಗಳ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ತಮ್ಮೆಲ್ಲಾ ಶಕ್ತಿ ಬಳಸಿ ಪ್ರಯತ್ನಿಸುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿ ದ್ದೇನೆ. ಅದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಕೇಂದ್ರ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಮೂಲ ಸ್ವರೂಪದಲ್ಲಿ ಜಾರಿಗೊಳಿಸಲು ಹೊರಟಾಗ ಅದರಲ್ಲಿ ಪಾಸ್ವಾನ್ ಮಧ್ಯಪ್ರವೇಶ ಮಾಡಿದ್ದರು. ತನ್ಮೂಲಕ, ನಮ್ಮ ಗುರಿ ಈಡೇರಿಸಿಕೊಳ್ಳಲು ಅಧಿಕಾರದಲ್ಲಿರುವುದು ಒಳ್ಳೆಯದು ಎಂಬ ದೃಷ್ಟಿಕೋನವನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಆದ್ದರಿಂದಲೇ ಅವರು ದುರ್ಬಲ ವರ್ಗಗಳ ಧ್ವನಿಯಾಗಿ ರೂಪುಗೊಳ್ಳುವಲ್ಲಿ ಯಶಸ್ವಿಯಾದರು.

ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದಾಗ ಪಾಸ್ವಾನ್ ತಾವು ನಂಬಿಕೊಂಡು ಬಂದ ಸಿದ್ದಾಂತಕ್ಕೆ ಎಷ್ಟು ಬದ್ಧರಾಗಿದ್ದರು ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಸಾಮಾಜಿಕ ನ್ಯಾಯ, ಶಾಂತಿ, ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಯಂತಹ ವಿಷಯಗಳ ಕುರಿತು ಅವರ ಜೊತೆಗೆ ಸಾಕಷ್ಟು ಬಾರಿ ಚರ್ಚಿಸಿ ದ್ದೇನೆ.

ಅವರೊಬ್ಬ ಸಮರ್ಥ ಆಡಳಿತಗಾರ, ಅದ್ಭುತ ವಾಗ್ಮಿ ಹಾಗೂ ಅತ್ಯಂತ ಪರಿಣಾಮಕಾರಿ ಸಂಸದೀಯ ಪಟುವಾಗಿದ್ದರು. ಆಡಳಿತ ಪಕ್ಷದಲ್ಲಿದ್ದಾಗಲೂ ವಿರೋಧ ಪಕ್ಷದಲ್ಲಿದ್ದಾಗಲೂ ಆಗ್ರಹಪೂರ್ವಕವಾಗಿ ಮಧ್ಯಪ್ರವೇಶ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು.
ಒಟ್ಟಾರೆ ಹೇಳುವುದಾದರೆ ಪಾಸ್ವಾನ್ ಅವರು ಅಧಿಕಾರ ರಾಜಕಾರಣ ಮತ್ತು ಸಾಮಾಜಿಕ ನ್ಯಾಯದಲ್ಲಿ ಸಮತೋಲನ ತರಲು ಸಾಕಷ್ಟು ಶ್ರಮಿಸಿದರು. ಈ ಕಾರಣಕ್ಕಾಗಿಯೇ ಅವರೊಬ್ಬ ಅನುಪಮ ರಾಜಕಾರಣಿಯಾಗಿ ಕಾಣಿಸಿದರು. ಇದೇ ಕಾರಣಕ್ಕಾಗಿಯೇ ಅವರ ನಿಲುವು ಹಾಗೂ ಒಲವುಗಳ ಬಗ್ಗೆೆ ನಾನಾ ವ್ಯಾಖ್ಯಾನಗಳು ಕೇಳಿಬರುತ್ತಿದ್ದವು.

ನೆಲ್ಸನ್ ಮಂಡೇಲಾ ಒಮ್ಮೆ ಹೇಳಿದ್ದರು: ನೀವು ಸಣ್ಣ ಆಟ ಆಡುತ್ತಿದ್ದರೆ ಅದರಿಂದ ಜಗತ್ತಿಗೇನೂ ಪ್ರಯೋಜನಲ್ಲ. ನೀವು ಬೃಹತ್ತಾಗಿ ಬೆಳೆಯುವುದಕ್ಕೆ ಏನು ಅಡ್ಡಿ? ರಾಮವಿಲಾಸ್ ಪಾಸ್ವಾನ್ ಕೂಡ ಅದ್ಭುತವಾಗಿ ಬೆಳೆಯಲು ಬಯಸಿದ್ದರಲ್ಲಿ ಯಾವ
ತಪ್ಪೂ ಇಲ್ಲ. ತಾವು ಆಯ್ದುಕೊಂಡಿದ್ದ ದಾರಿಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಅವರು ಬಿಟ್ಟುಹೋಗಿದ್ದಾರೆ. ಅವರ ದಿಢೀರ್ ನಿಧನ ದೇಶಕ್ಕೂ, ದೇಶದ ದುರ್ಬಲ ವರ್ಗಗಳಿಗೂ ದೊಡ್ಡ ಹಿನ್ನಡೆ ಉಂಟುಮಾಡಿದೆ. ನಾನೊಬ್ಬ ಆತ್ಮೀಯ ಸ್ನೇಹಿತ ನನ್ನು ಕಳೆದುಕೊಂಡಿದ್ದೇನೆ.