ಚಿಕ್ಕಮಗಳೂರು: ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ಗಿರಿ ಸ್ವಾಮಿ ದರ್ಗಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಉರೂಸ್ ಆಚರಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
17 ವರ್ಷಗಳ ಬಳಿಕ ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ಆಚರಣೆಗೆ ಮುಸ್ಲಿಂ ಸಮುದಾಯ ಸಿದ್ಧತೆ ನಡೆಸಿದೆ. ಗೋರಿಗಳ ಮೇಲೆ ಹಸಿರು ಬಟ್ಟೆ ಹಾಕಿ, ಗಂಧದ ಲೇಪನಕ್ಕೆ ಅವಕಾಶ ನೀಡುವಂತೆ ಶಾಖಾದ್ರಿ ಕುಟುಂಬ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ, ಜಿಲ್ಲಾಡಳಿತ ಶಾಖಾದ್ರಿಗೆ ಗುಹೆಯೊಳಗೆ ಹೋಗಿ ಪೂಜಾ ಕಾರ್ಯ ನೆರವೇರಿಸಲು ಅವಕಾಶ ನೀಡಿದೆ. ಎರಡು ವರ್ಷಗಳ ಹಿಂದೆ ನಡೆದ ಉರೂಸ್ ಮಾದರಿಯಲ್ಲಿಯೇ ಈಗಲು ಉರೂಸ್ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಬಾಬಾ ಬುಡನ್ ಗಿರಿ ಉರೂಸ್ ಗೆ ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದಲು ಜನರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.