Thursday, 12th December 2024

ಹೆಣಗಿದಷ್ಟು ಇದ್ದೇ ಇದೆ, ಆದಷ್ಟು ಖುಷಿಯಾಗಿರೋಣ !

ಶ್ವೇತಪತ್ರ

shwethabc@gmail.com

ನಮ್ಮ ಆಕಾಂಕ್ಷೆಗಳಲ್ಲಿ,ಆಲೋಚನೆಗಳಲ್ಲಿ ಒಂದು ಓಟವಿದೆ. ಸ್ವಲ್ಪ ನಿಧಾನಿಸೋಣ ಇನ್ನೂ ಹೆಚ್ಚು ಹೆಚ್ಚು ನಮ್ಮ ದಾಗಿಸಿಕೊಳ್ಳಬೇಕೆಂಬ ವಿಪರೀತದ ಈ ಓಟಕ್ಕೆ ಬ್ರೇಕ್ ಹಾಕೋಣ. ನಮ್ಮ ಆಸೆಗಳು, ಆಯ್ಕೆಗಳು, ಕ್ರಿಯೆಗಳು, ಪ್ರತಿ ಕ್ರಿಯೆಗಳು ಎಲ್ಲವನ್ನೂ ನಮ್ಮ ಜವಾಬ್ದಾರಿಗಳಾಗಿ ಒಪ್ಪಿಕೊಳ್ಳೋಣ ಈ ಅನುಭವಗಳ ಮೂಲಕ ಬದುಕಿನ ಪಾಠ ಗಳನ್ನು ಕಲಿಯೋಣ.

‘ಬದುಕಲ್ಲಿ ನೋವು ಎಂಬ ಗಿಡವನ್ನು ತಾಳ್ಮೆಯೆಂಬ ಹೊಲದಲ್ಲಿ ಬಿತ್ತಿದಾಗ ಹುಟ್ಟುವ ಹಣ್ಣೇ ಸಂತೋಷ’. ಕಲೀಲ್ ಗಿಬ್ರಾನ್ ಮಾತುಗಳು ಈ ಹೊತ್ತಿಗೆ ಎಷ್ಟು ಪ್ರಸ್ತುತವಲ್ಲವೇ? ಸಂತೋಷವನ್ನು ಹುಡುಕುವುದೆಂದರೆ ನಮ್ಮನ್ನು ನಾವು ಹುಡುಕಿಕೊಂಡಂತೆ. ಸಂತೋಷ ನಮಗೆ ಎ ಸಿಗುವುದಲ್ಲ, ಅದನ್ನು ನಾವು ಕಂಡುಕೊಳ್ಳಬೇಕು. ನಮ್ಮ ಬದುಕಲ್ಲಿ ಏನು ಸಂಭವಿಸುತ್ತಿದೆಯೋ ಅದರ ಆಧಾರದಲ್ಲಿ ನಮ್ಮ ಸಂತೋಷಗಳು ನಿರ್ಧಾರವಾಗುವುದಿಲ್ಲ. ಬದುಕಿನ ಸಂಭವಿಸುವಿಕೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಸಂತೋಷವನ್ನು ಮುಖ್ಯವಾಗಿ ನಿರ್ಧರಿಸುತ್ತದೆ.

ಇದಕ್ಕೆ ಪೂರಕವಾಗಿ ನಿಮಗೊಂದು ಘಟನೆಯನ್ನು ವಿವರಿಸುತ್ತೇನೆ. ಗೋಪಿ-ಶಾಮ ಎಂಬ ಇಬ್ಬರು ಗೆಳೆಯರು ಅನಿರೀಕ್ಷಿತವಾಗಿ ಕೆಲಸ ಕಳೆದುಕೊಳ್ಳುತ್ತಾರೆ. ಕೆಲಸ ಕಳೆದುಕೊಂಡ ನಂತರ ಗೋಪಿ ತನ್ನ ಅನುಭವದ ಮೂಲಕ ಅತ್ಯಾಕರ್ಷಕವಾದ ಬದುಕಿನ ಹೊಸ ಸಾಧ್ಯತೆಗಳನ್ನು, ಅವಕಾಶಗಳನ್ನು ಅನ್ವೇಷಿಸ ತೊಡಗುತ್ತಾನೆ. ಅದೇ ಶಾಮ ಕೆಲಸ ಕಳೆದುಕೊಂಡನೆಂಬ ಉದ್ವಿಗ್ನತೆ, ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸತೊಡಗುತ್ತಾನೆ. ಮೇಲಿನ ಘಟನೆಯಲ್ಲಿ ಸಂದರ್ಭ ಒಂದೇ ಯಾಗಿದ್ದರೂ ಇಬ್ಬರು ವ್ಯಕ್ತಿಗಳು ಅದನ್ನು ಅರ್ಥೈಸಿದ ರೀತಿಯಲ್ಲಿ ಅದರ ಗ್ರಹಿಕೆ ಮತ್ತು ದೃಷ್ಟಿಕೋನದಲ್ಲಿ ವಿಭಿನ್ನತೆ ಇದೆ. ಒಬ್ಬ ಬದುಕನ್ನ ಅಂತ್ಯಗೊಳಿಸ ಬಯಸಿದರೆ ಮತ್ತೊಬ್ಬ ಆ ನಕಾರಾತ್ಮಕ ಪರಿಸ್ಥಿತಿಯ ನಡುವೆಯೂ ಹೊಸ ಹೊಳಹುಗಳ ಮೂಲಕ ಬದುಕನ್ನ ಮತ್ತೆ ಕಟ್ಟ ಬಯಸುತ್ತಾನೆ.

ಆಯ್ಕೆಗಳು ನಮ್ಮವು, ಮನಸ್ಥಿತಿ ನಮ್ಮದು, ಅದರೊಟ್ಟಿಗೆ ಸಂತೋಷ-ಅಸಂತೋಷಗಳು ನಮ್ಮವೇ. ಬದುಕಿನ ಒತ್ತಡಗಳು, ಹತಾಶೆಗಳು ನಮ್ಮನ್ನು ನಮ್ಮ ಆಲೋಚನೆಗಳನ್ನು ನಿರ್ಧಾರಗಳನ್ನು ಡಿಸ್ಟರ್ಬೆನ್ಸ್‌ಗೆ ಒಳಪಡಿಸುತ್ತಲೇ ಇರುತ್ತವೆ. ಆಗೊಂದಿಷ್ಟು ಮನಸ್ಸಿಗೆ ಮಧ್ಯಂತರ ಬಿಡುವು ತೆಗೆದುಕೊಳ್ಳಿ ಪುಟ್ಟ ಪುಟ್ಟ ಸಂಗತಿಗಳನ್ನು ಆನಂದಿಸಿ. ಸಂತೋಷ ಮತ್ತೆ ಬುಗ್ಗೆಗಳಾಗಿ ತಂಪ ನೆರೆಯುತ್ತವೆ. ಸದಾ ಸಂತೋಷವಾಗಿರುವುದು ಹೇಳಿದಷ್ಟು , ಬರೆದಷ್ಟು ಸುಲಭದ ಮಾತಲ್ಲ. ಅದೊಂದು ಬಹುದೊಡ್ಡ ಸವಾಲು ಸಂಯಮವನ್ನು ನಿರಂತರತೆಯನ್ನು ಬೇಡುವ ಕೆಲಸ.

ಪ್ರಬುದ್ಧತೆಯ ಬಗ್ಗೆ ನಾವೆ ದೊಡ್ಡದೊಡ್ಡ ಮಾತನಾಡುತ್ತಾ ಇರುತ್ತೀವಿ ಬದುಕಿನ ನಿಜವಾದ ಮನೋವೈಜ್ಞಾನಿಕ ಆಧ್ಯಾತ್ಮಿಕ ಪ್ರಬುದ್ಧತೆ ಎಂದರೆ ನಮ್ಮ ನಮ್ಮ ಬದುಕಿನ ಸಂತೋಷದ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುವುದು. ಇಲ್ಲದಿರುವ ಬಗ್ಗೆ ತುಡಿಯುವುದಕ್ಕಿಂತ ಇರುವುದರಲ್ಲಿ ಮತ್ತಷ್ಟು ಮಗದಷ್ಟು ಖುಷಿಯ ಬದುಕಿನ ಚೀಲಕ್ಕೆ ತುಂಬಿಕೊಳ್ಳಬೇಕು. ನಮ್ಮ ಸಂತೋಷ ಗಳು ಖಂಡಿತವಾಗಿಯೂ ನಮ್ಮ ನಿಯಂತ್ರಣದಲ್ಲಿರುತ್ತವೆ. ಹೇಗೆಂದರೆ ನಮ್ಮ ಆಲೋಚನೆಗಳ ಮೂಲಕ.

ಸಂತೋಷವಾಗಿರುವುದಕ್ಕೆ ಸಂತೋಷದ ಆಲೋಚನೆಗಳನ್ನು ನಮ್ಮವಾಗಿಸಿಕೊಳ್ಳಬೇಕು, ಆದರೆ ನಾವು ಇದಕ್ಕೆ ತದ್ವಿರುದ್ಧವಾಗಿ
ಅಸಂತೋಷವನ್ನು ಮನಸ್ಸಿಗೆ ಮಿದುಳಿಗೆ ಆವರಿಸಿಕೊಂಡು ಬಿಟ್ಟಿದ್ದೇವೆ. ಎಂದೋ ನಡೆದ ಕಹಿ ಅನುಭವಗಳು ಮನಸ್ಸಿನ ತುಂಬಾ ವಾರಗಳ ಕಾಲ ತಿಂಗಳುಗಳ ಕಾಲ ಆಕ್ಯುಪೈ ಆಗಿಬಿಟ್ಟರೆ ನಮ್ಮ ಸಂತೋಷಕ್ಕೆ ಖುಷಿಗೆ ಜಾಗವೆಲ್ಲಿ? ನಮ್ಮೆಲ್ಲರ ಬದುಕಿ ನಲ್ಲಿಯೂ ಬದಲಾಯಿಸಲು ಆಗ ದಂತಹ ನೋವುಗಳು, ಕಹಿ ಘಟನೆಗಳು, ಒಂಟಿತನಗಳಿವೆ. ಅವುಗಳೊಟ್ಟಿಗೆ ಖುಷಿಯ ಆಲೋಚನೆಗಳನ್ನು ನಮ್ಮದಾಗಿಸಿಕೊಂಡು ಬದುಕಬೇಕಿದೆ. ನಮ್ಮೆಲ್ಲರ ಹೈಟೆಕ್ ಜೀವನಶೈಲಿ ನಮ್ಮ ಅರಿವಿಗೆ ಬಾರದಂತೆ ನಮ್ಮೆಲ್ಲರ ನೆಮ್ಮದಿಯ ಮೂಲವನ್ನೇ ಅಲುಗಾಡಿಸಿ ಬಿಟ್ಟಿದೆ.

ವಸ್ತುಗಳ ವ್ಯಾಮೋಹಗಳು ಜಾಸ್ತಿಯಾಗಿ ಅದರ ಹಿಂದೆಯೇ ಸಾಲಗಳು ಜಾಸ್ತಿಯಾಗಿವೆ. ಮನೆ ತುಂಬಿದೆ ಆದರೆ ಮನಸ್ಸಿನ ಖುಷಿ ಮಾತ್ರ ಖಾಲಿಯಾಗಿದೆ. ನಾವು ಯೋಚಿಸುವುದು ಹೇಳುವುದು ಮತ್ತು ನಡೆದುಕೊಳ್ಳುವುದರಲ್ಲಿ ಸಾಮರಸ್ಯ ಮೂಡಿದರೆ ಸಂತೋಷ ತಾನಾಗೇ ಒಡಮೂಡುತ್ತದೆ. ಮುಖ್ಯವಾಗಿ ನಮ್ಮ ಅಸಂತೋಷಗಳಿಗೆ ಕಾರಣ ಬದುಕು ನಮ್ಮ ನಿರೀಕ್ಷೆಯಂತೆ ನಮಗೆ ಹೇಗೆ ಬೇಕೋ ಹಾಗಿಲ್ಲ ಎನ್ನುವ ಕಾರಣಕ್ಕಾಗಿ. ನಮ್ಮಲ್ಲಿ ಎಷ್ಟೋ ಜನ ಅಂದುಕೊಳ್ಳುತ್ತಿರುತ್ತೇವೆ, ಇದೊಂದು ಸರಿ ಹೋಗಲಿ ನಾನು ಎಷ್ಟು ಖುಷಿಯಾಗಿರುತ್ತೀನಿ ನೋಡು ಅಂತ.

ಆದರೆ ಬದುಕು ಪರಿಪೂರ್ಣವಲ್ಲ, ಇದಾದಮೇಲೆ ಇನ್ನೊಂದು ಬಂತೆಂದರೆ ಇದ್ದಿದ್ದು ಇದ್ದೇ ಇತ್ತು ಅನ್ನುವ ಹಾಗೆ. ಪರಿಪೂರ್ಣ ಬದುಕು ಎನ್ನುವುದಿಲ್ಲ. ಯಾರಾದರೂ ಹಾಗೆಂದುಕೊಂಡಿದ್ದರೆ ಅದು ಭ್ರಮೆಯಷ್ಟೇ. ಕೆಲವೊಮ್ಮೆ ಪುಳಕ ಕೆಲವೊಮ್ಮೆ ಹತಾಶೆ. ಕೆಲವು ಸಲ ಸಾಧಿಸುವುದು, ಕೆಲವು ಸಲ ಕಳೆದುಕೊಳ್ಳುವುದು ಇದು ಬದುಕು ಇದರ ನಡುವೆ ಸಂತೋಷವಾಗಿರಬೇಕು ಎಂಬುದು ನಮ್ಮ ನಿರ್ಧಾರವಾಗಬೇಕು. ಪ್ರತಿದಿನ ನಮಗೆ ನಾವೇ ಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಳ್ಳುತ್ತಾ ಹೋಗಬೇಕು. ಇದು ನನ್ನ ಬದುಕಿನ ಚೌಕಟ್ಟು; ಇ ನಾನು ಸಂತೋಷಗಳನ್ನು ಹುಡುಕಿಕೊಳ್ಳಬೇಕು ಎಂದು ನಮ್ಮ ಪ್ರತಿದಿನದ ನಿರ್ಧಾರವಾಗಿರಬೇಕು.

ಇನ್ನೂ ಉತ್ತಮ ಬದುಕು ನನ್ನದಾದಾಗ ಖುಷಿಯಾಗಿರುತ್ತೀನಿ ಅನ್ನೋದು ಭ್ರಮೆಯೇ ಹೊರತು ಮತ್ತೇನಲ್ಲ! ತುಂಬಾ ಖುಷಿ ಮತ್ತು ನೆಮ್ಮದಿಯಾಗಿ ಬದುಕುತ್ತಿರುವ ಮನುಷ್ಯರು ಅವರ ಜೀವನದ ಏರಿಳಿತಗಳನ್ನು ಶಾಂತವಾಗಿ ಸ್ವೀಕರಿಸುತ್ತಾರೆ. ಪುಟ್ಟ ಪುಟ್ಟ ಖುಷಿಗಳು ಬದುಕಿಗೆ ಬಹುಮುಖ್ಯ ಎಂಬ ಸ್ಥಿತಪ್ರಜ್ಞತೆ ಅವರ ಸಂತೋಷದ ಮನಸ್ಥಿತಿಯ ರಹಸ್ಯವಾಗಿರುತ್ತದೆ. ನಮ್ಮ ಪುರಾಣದಲ್ಲಿ ಕಥೆಯೊಂದಿದೆ, ಒಂದಾನೊಂದು ಕಾಲದಲ್ಲಿ ಭೂಮಿ ಮೇಲಿನ ಎಲ್ಲ ಮನುಷ್ಯರು ತುಂಬಾ ಸಂತೋಷ ವಾಗಿದ್ದ ರಂತೆ ಜೊತೆಗೆ ಆ ಸಂತೋಷವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರಂತೆ. ಇದನ್ನು ಅರಿತ ಬ್ರಹ್ಮ ಸಂತೋಷವನ್ನು ಯಾರು ಹುಡುಕಲಾಗದ ಜಾಗದಲ್ಲಿ ಮುಚ್ಚಿಡಬೇಕು ಎಂದು ಯೋಚಿಸುತ್ತಾನೆ.

ಆದರೆ ಸಂತೋಷನ್ನು ಎಲ್ಲಿ ಬಚ್ಚಿಡುವುದು ಭೂಮಿಯೊಳಗೋ ? ಸಮುದ್ರದ ಆಳದಲ್ಲಿಯೋ? ಎಲ್ಲೇ ಬಚ್ಚಿಟ್ಟರೂ ಮನುಷ್ಯ ತಲುಪದ ಜಾಗವಿಲ್ಲ ಎನ್ನುವುದು ಯೋಚಿಸಿದ ಬ್ರಹ್ಮ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾನೆ. ಸಂತೋಷವನ್ನು ಮನುಷ್ಯನ ಮನಸ್ಸಿನಲ್ಲಿಯೇ ಅಡಗಿಸಿ ಬಿಡುತ್ತಾನೆ. ಏಕೆಂದರೆ ಯಾವಾಗಲೂ ಹೊರಗಡೆ ನೋಡುವುದರ ನಿರತನಾಗಿದ್ದ ಮನುಷ್ಯ ತನ್ನೊಳಗೆ ನೋಡಿಕೊಳ್ಳುವುದನ್ನು ಮರೆತು ಬಿಟ್ಟಿzನೆ. ಅಂದಿನಿಂದ ಇಂದಿನವರೆಗೂ ಮನುಷ್ಯ ದೇವಸ್ಥಾನಗಳಲ್ಲಿ, ನಗೆಕೂಟ ಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಕೋರ್ಸ್‌ಗಳಲ್ಲಿ ಸಂತೋಷಗಳನ್ನು ಹುಡುಕುತ್ತಲೇ ಇದ್ದಾನೆ.

ತನ್ನೊಳಗೆ ಇರುವು ದನ್ನು ಹುಡುಕಲು ನಿರ್ಲಕ್ಷ್ಯ ಮಾಡುತ್ತಾನೆ. ಸಂತೋಷಗಳನ್ನು ಹೇಳಿಕೊಡುವ ಯಾವ ಪಠ್ಯಪುಸ್ತಕಗಳು, ಫಾರ್ಮುಲಾಗಳು ಇಲ್ಲ. ಸಂತೋಷವನ್ನು ಮಾಪನ ಮಾಡುವ ಅವಶ್ಯಕತೆಯೂ ಇಲ್ಲ. ಬದುಕಿನ ಪ್ರತಿ ಕ್ಷಣಕ್ಕೂ ಅರ್ಥವಿದೆ, ಉದ್ದೇಶವಿದೆ ಎಂಬ ಸ್ವಯಂ ಅರಿವನ್ನು ನಮ್ಮದಾಗಿಸಿಕೊಂಡು ನಮ್ಮ ಸಂತೋಷಗಳನ್ನು ನಾವು ಪುನಃ ಪಡೆದುಕೊಳ್ಳಬೇಕಷ್ಟೇ. Happiness is not something readymade it comes from your own actions.

ನಮ್ಮ ಆಕಾಂಕ್ಷೆಗಳಲ್ಲಿ,ಆಲೋಚನೆಗಳಲ್ಲಿ ಒಂದು ಓಟವಿದೆ. ಸ್ವಲ್ಪ ನಿಧಾನಿಸೋಣ ಇನ್ನೂ ಹೆಚ್ಚು ಹೆಚ್ಚು ನಮ್ಮದಾಗಿಸಿ ಕೊಳ್ಳಬೇಕೆಂಬ ವಿಪರೀತದ ಈ ಓಟಕ್ಕೆ ಬ್ರೇಕ್ ಹಾಕೋಣ. ನಮ್ಮ ಆಸೆಗಳು,ಆಯ್ಕೆಗಳು,ಕ್ರಿಯೆಗಳು, ಪ್ರತಿಕ್ರಿಯೆಗಳು ಎಲ್ಲವನ್ನೂ ನಮ್ಮ ಜವಾಬ್ದಾರಿಗಳಾಗಿ ಒಪ್ಪಿಕೊಳ್ಳೋಣ ಈ ಅನುಭವಗಳ ಮೂಲಕ ಬದುಕಿನ ಪಾಠಗಳನ್ನು ಕಲಿಯೋಣ. ಬದುಕಿನ ಬಗೆಗಿನ ಅಸಮಾಧಾನಗಳ ಹೊರಹಾಕುವುದನ್ನು ದೂರುವುದನ್ನು ನಿಲ್ಲಿಸೋಣ ನೆನಪಿಡಿ ನಮ್ಮ ಬದುಕು ಇನ್ನೊಬ್ಬರ ಕನಸಾಗಿರುತ್ತದೆ.

ಅಂಕಣ ಮುಗಿಸುವ ಮುನ್ನ ಒಂದು ಪುಟ್ಟ ಕಥೆ; ಒಂದೂರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನ ಬದುಕಲ್ಲಿ ಎಲ್ಲವೂ ಇತ್ತು, ಹಣ ಆಸ್ತಿ ಅಂತಸ್ತು ಎಲ್ಲವೂ ಇತ್ತು. ಆದರೆ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಏನೋ ಒಂಥರ ಚಂಚಲತೆ. ಆ ಶ್ರೀಮಂತ ನೆಮ್ಮದಿ ಹುಡುಕಿಕೊಂಡು ಒಬ್ಬ ಸನ್ಯಾಸಿಯ ಆಶ್ರಮಕ್ಕೆ ಬಂದು ತನ್ನ ಸಂಕಟವನ್ನು ಹೇಳಿಕೊಂಡ. ಎಲ್ಲವನ್ನು ಕೇಳಿಸಿಕೊಂಡ ಸನ್ಯಾಸಿ ನಾಳೆ ಮತ್ತೆ ಆಶ್ರಮಕ್ಕೆ ಬಂದರೆ ಶ್ರೀಮಂತನ ಸಮಸ್ಯೆಗೆ ಉತ್ತರ ದೊರಕಿಸಿ ಕೊಡುವುದಾಗಿ ತಿಳಿಸಿದ. ಮರುದಿನ ಶ್ರೀಮಂತ ಮತ್ತೆ ಸನ್ಯಾಸಿಯ ಆಶ್ರಮಕ್ಕೆ ಬಂದ, ಆಶ್ರಮದ ಹೊರಗಿನ ಜಾಗದಲ್ಲಿ ಸನ್ಯಾನಿಸಿ ಏನೋ ಹುಡುಕುತ್ತಲ್ಲಿದ್ದ ಶ್ರೀಮಂತ ಏನನ್ನು ಹುಡುಕುತ್ತಿದ್ದೀರಿ ಸ್ವಾಮಿಗಳೇ ಅಂತ ಕೇಳಿದ ಅದಕ್ಕೆ ಸ್ವಾಮೀಜಿ ನನ್ನ ಉಂಗುರ ಎಲ್ಲಾ ಬಿದ್ದು ಹೋಗಿದೆ ಅದನ್ನು ಹುಡುಕು ತ್ತಿದ್ದೇನೆ ಎಂದ.

ಅದಕ್ಕೆ ಶ್ರೀಮಂತ ತಾವು ಉಂಗುರವನ್ನು ಎಲ್ಲಿ ಬೀಳಿಸಿಕೊಂಡಿರಿ ಸರಿಯಾಗಿ ನೆನಪಿಸಿಕೊಳ್ಳಿ ಎಂದು ಹೇಳಿದ. ಇದಕ್ಕೆ ಸಾಮೀಜಿ ನಾನು ನನ್ನ ಉಂಗುರುವನ್ನು ಆಶ್ರಮದ ಒಳಗೆ ಬೀಳಿಸಿಕೊಂಡೆ ಎಂದು ಉತ್ತರಿಸುತ್ತಾನೆ. ಇದನ್ನು ಕೇಳಿಸಿಕೊಂಡ ಶ್ರೀಮಂತ
ತಕ್ಷಣವೇ ಹಾಗಿದ್ದರೆ, ನೀವು ಉಂಗುರು ಬಿದ್ದಿರುವ ಜಾಗವಾದ ಆಶ್ರಮದ ಒಳಗಡೆ ಹುಡುಕಬೇಕಲ್ಲವೇ ಎಂದು ಪ್ರಶ್ನಿಸುತ್ತಾನೆ? ಮುಗುಳು ನಗುತ್ತಾ ಸನ್ಯಾಸಿ ನಿನ್ನೆಯ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತಲ್ಲವೇ ಎಂದು ಉತ್ತರಿಸುತ್ತಾನೆ. ಬದುಕಿನ ನೆಮ್ಮದಿಯೂ ಹೀಗೆ ಎ
ಹೊರಗಿನ ವಸ್ತುಗಳಲ್ಲಿಲ್ಲ ನಮ್ಮೊಳಗೆ ಇದೆ ಹುಡುಕಬೇಕಷ್ಟೇ!