Thursday, 12th December 2024

ಇದು ಪ್ರಜ್ಞಾವಂತರ ನಾಡೋ, ಗೊಂದಲಿಗರ ಬೀಡೋ ?!

ಲೋಕಸಮರ

ಪಿ.ಚಿದಂಬರಂ

ಇವತ್ತು ನಡೆಯುತ್ತಿರುವ ರಾಜಕೀಯವನ್ನು ನೋಡುತ್ತಿದ್ದರೆ ತಲೆಯು ಅರೆಕ್ಷಣ ‘ಗಿರ್’ ಎನ್ನುತ್ತದೆ. ಕಾರಣ, ನಿರ್ದಿಷ್ಟ ಪರಿಕಲ್ಪನೆ ಗಳು, ತತ್ವ-ಸಿದ್ಧಾಂತಗಳು ಇರಬೇಕಾದ ಜಾಗವನ್ನು ಐಟಿ, ಸಿಬಿಐ, ಇ.ಡಿ., ಎಸ್‌ಎ-ಐಒ, ಎನ್‌ಸಿಬಿ, ಎನ್‌ಐಎ ಇಂಥ ‘ಪ್ರಥಮಾಕ್ಷರಿ ಗಳು’ ಆಕ್ರಮಿಸಿಕೊಂಡುಬಿಟ್ಟಿವೆ!

ಇನ್ನೂ ಬಿಡಿಸಿ ಹೇಳುವುದಾದರೆ, ನಾವು ಕೇವಲ ಇಂಥ ವರ್ಣಮಾಲೆಗಳ ಪೇಚಾಟದ ಫಲಾನುಭವಿಗಳಾಗಿ ಬಿಟ್ಟಿದ್ದೇವೆ. ಹೀಗಾಗಿ, ಇಲ್ಲಿ ದೊಡ್ಡಣ್ಣ ಯಾರು? ಧರ್ಮ -ದಯೆ-ದಾಕ್ಷಿಣ್ಯಗಳ ಸೋಗುಹಾಕಿದ ಸರ್ವಾಧಿಕಾರಿ ಯಾರು? ದುರಹಂಕಾರದಿಂದ ವರ್ತಿ ಸುವ ‘ನವ- ಕುಬೇರ’ ಯಾರು? ಅನಧಿಕೃತವಾಗಿ ಮಧ್ಯಪ್ರವೇಶಿಸಿದ ಅಧಿಕ ಪ್ರಸಂಗಿ ಯಾರು? ಅನಧಿಕೃತ ವ್ಯಾಪಾರಿ ಯಾರು? ಇಲ್ಲಿ ಯಾರು ಹೆಚ್ಚು ಅಧಿಕಾರವಂತ, ಶಕ್ತಿವಂತ? ಮುಂದೆ ಒದಗಲಿರುವ ಅಧಿಕಾರ ಗದ್ದುಗೆಗೆ ‘ಫೇವರಿಟ್’ ಎನಿಸಿ ಕೊಂಡವರು ಯಾರು? ಎಂಬ ಪ್ರಶ್ನೆಗಳೇ ನಮ್ಮ ತಲೆಯಲ್ಲಿ ಗಿರಕಿ ಹೊಡೆಯುತ್ತವೆ.

ಇವು ಕೇವಲ ಒಬ್ಬರಿಗಷ್ಟೇ ಸೀಮಿತ ಎಂದುಕೊಳ್ಳಬೇಡಿ; ಯಾರೇ ಇಬ್ಬರು ವ್ಯಕ್ತಿಗಳು ಕಾಫಿ ಹೀರುವುದಕ್ಕೋ, ಕುರುಕಲು ಮೆಲ್ಲುವುದಕ್ಕೋ ಅಥವಾ ಸುಮ್ಮನೆ ಹರಟುವುದಕ್ಕೋ ಭೇಟಿಯಾದಾಗ ಪರಸ್ಪರರು ಕೇಳಿಕೊಳ್ಳುವುದು ಈ ಪ್ರಶ್ನೆಗಳನ್ನೇ!
ಆದರೆ ಮೂವರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಂದೆಡೆ ಜಮೆಯಾದಾಗ, ಅವರಲ್ಲಿ ಪ್ರತಿಯೊಬ್ಬರೂ ಮೌನಕ್ಕೆ ಶರಣಾಗಿ ಬಿಡುತ್ತಾರೆ. ಒಂದು ರೀತಿಯಲ್ಲಿ ಅಲ್ಲಿನ ವಾತಾವರಣವು ‘ಒಮರ್ಟಾ’ದಂಥ ಸಾಮೂಹಿಕವಾಗಿ ಹೇರಲ್ಪಟ್ಟ ‘ಮೌನ ಸಂಹಿತೆ’ ಯಂತೆ ತೋರುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬೇಕೆಂದರೆ ಅಥವಾ ಅವು ಶಾಂತಗೊಳ್ಳಬೇಕೆಂದರೆ ಒಂದು ಮಾರ್ಗವಿದೆ. ಅದೆಂದರೆ, ಪ್ರತಿಯೊಂದು ಮತಗಟ್ಟೆಯಲ್ಲಿ ಒಂದು ವಿದ್ಯುನ್ಮಾನ ಮತಯಂತ್ರವನ್ನು (ಅಂದರೆ ಇವಿಎಂ ಅನ್ನು) ಇರಿಸಿ ಬಿಡುವುದು, ಅಭ್ಯರ್ಥಿಗಳನ್ನು ಮುಂದುಮಾಡಿರುವ ಎಲ್ಲಾ ಪಕ್ಷದವರನ್ನೂ ಪಟ್ಟಿಮಾಡುವುದು ಮತ್ತು ತಮ್ಮ ಆದ್ಯತೆಯ ಅಭ್ಯರ್ಥಿಗೆ/ಪಕ್ಷಕ್ಕೆ ಮತ ಚಲಾಯಿಸುವಂತೆ ಮತದಾರರಿಗೆ ಕೇಳಿಕೊಳ್ಳುವುದು.

೮೫ ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳು ತಂತಮ್ಮ ಮನೆಯಲ್ಲಿದ್ದುಕೊಂಡೇ ಮತ ಚಲಾಯಿಸಬಹುದು; ಇಲ್ಲಿ ‘ನೋಟಾ’ ಆಯ್ಕೆಗೆ ಆಸ್ಪದವಿರುವುದಿಲ್ಲ! ಈ ಲೇಖನದ ಶುರುವಿನಲ್ಲಿ ಉಲ್ಲೇಖಿಸಲಾದ ‘ಪ್ರಥಮಾಕ್ಷರಿಗಳ ಸಾಂಬಾರ್’ಗೆ ಹೊಸ ಸೇರ್ಪಡೆ- ‘ಸಿಎಎ’ ಮತ್ತು ‘ಎನ್‌ಆರ್‌ಸಿ’. ಬೇಕಿದ್ದರೆ ನೀವು ಇದನ್ನು ಈ ಸೆಣಸಾಟದಲ್ಲಿನ ಹೊಸ ಖಾದ್ಯಗಳು ಎಂದೂ ಕರೆದುಕೊಳ್ಳಬಹುದು! (ಈ ಪೈಕಿ ಎನ್‌ಆರ್‌ಸಿ ಕುರಿತು ಸಂಕ್ಷಿಪ್ತವಾಗಿ ವಿವರಿಸಿಬಿಡುತ್ತೇನೆ.

ರಾಷ್ಟ್ರೀಯ ನೋಂದಣಿಯಲ್ಲಿ ಎಲ್ಲಾ ನಾಗರಿಕರನ್ನು ನಮೂದಿ ಸುವುದು ಅಥವಾ ಎಣಿಕೆ ಮಾಡುವುದು ಎನ್‌ಆರ್‌ಸಿ ಉಪಕ್ರಮ ದ ಆಶಯವಾಗಿತ್ತು. ಆದರೆ ಇದರಲ್ಲೀಗ ಒಂದು ಪೈಶಾಚಿಕ ಅಥವಾ ಕುಟಿಲತಂತ್ರದ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳ ಲಾಗಿದೆ. ಲಕ್ಷಗಟ್ಟಲೆ ಹಿಂದೂಗಳಿಗೆ ಇಂಥದೊಂದು ಪರಿಗಣನೆ/ನಮೂದಿಸುವಿಕೆಯನ್ನು ನಿರಾಕರಿಸಲಾಗಿದೆ ಎಂಬ ಸಂಗತಿಯು ‘ದೇಶಭಕ್ತ ಲೇಖಕರು’ ಎನಿಸಿಕೊಂಡವರ ಗಮನಕ್ಕೆ ಬರುತ್ತಿದ್ದಂತೆ, ಅವರು ಆವಿಷ್ಕರಿಸಿದ್ದೇ ಈ ‘ಸಿಎಎ’ ಎಂಬ ಮಂತ್ರದಂಡ ವನ್ನು; ಅಂದರೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಮರನ್ನು ಹೊರತುಪಡಿಸಿದ ಮಿಕ್ಕೆಲ್ಲರಿಗೂ ಭಾರತದ ಪೌರತ್ವವನ್ನು ನೀಡಲು ಹಾಗೂ ತತ್ಪರಿಣಾಮವಾಗಿ ಎನ್‌ಆರ್‌ಸಿಯಲ್ಲಿ ಅವರು ಪರಿಗಣಿಸಲ್ಪಡುವಂತಾಗಲು ಈ ‘ಸಿಎಎ’ ಮಂತ್ರದಂಡ ಅನುವುಮಾಡಿಕೊಡುತ್ತದೆ.

ವಿಪರ್ಯಾಸವೆಂದರೆ, ಈ ಪ್ರಕ್ರಿಯೆಯಲ್ಲಿ, ಕಿರುಕುಳಕ್ಕೆ ಒಳಗಾದ ಶ್ರೀಲಂಕಾದ ತಮಿಳರು ಹಾಗೂ ನೇಪಾಳ ಮತ್ತು ಮ್ಯಾನ್ಮಾರ್‌ನ ಭಾರತೀಯ ಮೂಲದ ಜನರ ಹಿತಾಸಕ್ತಿಗಳಿಗೆ ದ್ರೋಹ ಬಗೆಯಲಾಯಿತು). ಎನ್‌ಆರ್ ಸಿಯು ಅಸ್ಸಾಂನಲ್ಲಿ ಮಾತ್ರವೇ ಲಭ್ಯವಿದೆ. ೨೦೨೪ರ ಮಾರ್ಚ್ ೧೧ರಂದು ‘ಸಿಎಎ’ ಅನ್ನು ಮೇಲೆ ಉಲ್ಲೇಖಿಸಲಾಗಿರುವ ಊಟದ ಮೆನುವಿನಲ್ಲಿ ಸೇರಿಸಲಾಯಿತು. ಎನ್‌ಆರ್‌ ಸಿ- ಸಿಎಎ ಎಂಬ ಖಾದ್ಯಗಳ ಮಾದರಿಯೊಂದನ್ನು ಪ್ರಸ್ತುತ ಉಚ್ಚ ನ್ಯಾಯಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ.

ಇದುವರೆಗೂ ನಾನು ಹೇಳಿದ್ದು ‘ಪ್ರಥಮಾಕ್ಷರಿಗಳ ಸಾಂಬಾರ್’ ಕುರಿತಾಗಿ. ಈಗ ‘ಸಂಖ್ಯೆಗಳ ಸಾಂಬಾರ್’ ಕಡೆಗೆ ಗಮನ ಹರಿಸೋಣ. ಇಂಥದೊಂದು ‘ಸಂಖ್ಯಾ ಸಾಂಬಾರ್’ನಲ್ಲಿ ನಾವು ಕೂಡ ಸೇರಿಕೊಂಡುಬಿಟ್ಟಿದ್ದೇವೆ ಎಂಬುದು ನಮಗೆ ತಡವಾಗಿ ಅರಿವಾಗುತ್ತಿದೆ. ಒಂದು ಕಾಲಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಅರಿತಿದ್ದ ಏಕೈಕ ಸಂಖ್ಯೆಯೆಂದರೆ ಬೋರ್ಡ್ ಪರೀಕ್ಷೆಗಳಲ್ಲಿ ನೀಡಲಾಗುತ್ತಿದ್ದ ‘ರೋಲ್ ನಂಬರ್’ ಮಾತ್ರ. ನೋಡ ನೋಡುತ್ತಿದ್ದಂತೆಯೇ ಇಂಥ ಅನೇಕ ಸಂಖ್ಯೆಗಳು ನಮ್ಮ ಬದುಕಿನೊಳಗೆ ತೂರಿಕೊಂಡುಬಿಟ್ಟವು- ಪಡಿತರ ಚೀಟಿ ಸಂಖ್ಯೆ, ಮತದಾರರ ಗುರುತಿನ ಚೀಟಿಯ ಸಂಖ್ಯೆ, ದ್ವಿಚಕ್ರ ವಾಹನ ಅಥವಾ ಕಾರಿನ ನೋಂದಣಿ ಸಂಖ್ಯೆ, ಸ್ಥಿರ ದೂರವಾಣಿ ಸಂಖ್ಯೆ, ಸಾಗರೋತ್ತರ ಸಾಹಸಗಳಿಗೆ ಒಡ್ಡಿಕೊಳ್ಳುವವರಿಗೆ ಪಾಸ್‌ಪೋರ್ಟ್ ಸಂಖ್ಯೆ, ಸರ್ವತ್ರ ಹರಡಿರುವ ಮೊಬೈಲ್ ಸಂಖ್ಯೆ ಮತ್ತು ಸಾಕ್ಷಾತ್ ದೇವರ ರೀತಿಯಲ್ಲೇ ಸರ್ವಶಕ್ತನೂ ಸರ್ವಾಂತರ್ಯಾಮಿಯೂ
ಆಗಿರುವ ಆಧಾರ್ ಸಂಖ್ಯೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು.

ಈಗ ಇವೆಲ್ಲವನ್ನೂ ಬಡಿದು ಬಾಯಿಗೆ ಹಾಕಿಕೊಳ್ಳಬಲ್ಲ ಅಥವಾ ಹಣಿಯಬಲ್ಲ ಒಂದು ಸಂಖ್ಯೆಯು ದಾಂಗುಡಿಯಿಟ್ಟಿದೆ. ಅದುವೇ ಚುನಾವಣಾ ಬಾಂಡ್ (ಎಲೆಕ್ಟೋರಲ್ ಬಾಂಡ್- ಇಬಿ) ಸಂಬಂಧಿತ ‘ಆಲಾ-ನ್ಯೂಮರಿಕ್’ ಸಂಖ್ಯೆ! ಅಕ್ಷರ ಮತ್ತು ಅಂಕಿ
ಎಂಬ ಎರಡು ಸಂಕೇತಗಳಿಂದ ಕೂಡಿದ ಈ ಸಂಖ್ಯೆಯು ಈಗ ಜನರ ಹರಟೆಮಾತಿಗೆ ಗ್ರಾಸವಾಗಿಬಿಟ್ಟಿದೆ. ಅತ್ಯಂತ ಬಲಶಾಲಿ ಎನ್ನಲಾಗುವ ಭಾರತದ ಸರ್ವೋಚ್ಚ ನ್ಯಾಯಾಲಯ ಕೂಡ ಈ ಆಲಾ-ನ್ಯೂಮರಿಕ್ ಸಂಖ್ಯೆಗಳನ್ನು, ಭಯಗ್ರಸ್ತ ಎಸ್‌ಬಿಐನ ಬಿಗಿಮುಷ್ಟಿಯಿಂದ ಮೀಟಿ ಹೊರತೆಗೆಯುವುದಕ್ಕೆ ಹರಸಾಹಸ ಪಡಬೇಕಾಯಿತು ಎಂದರೆ ಇದರ ಶಕ್ತಿಯನ್ನು ನೀವೇ ಊಹಿಸಿ ಕೊಳ್ಳಿ. ಸದರಿ ‘ಇಬಿ-ಎಸ್‌ಬಿಐ’ನ ಬಂಧವು ಕೆಲವು ದಿನಗಳವರೆಗೆ ‘ಇಡಿ-ಸಿಬಿಐ’ನ ಬಂಧಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿ
ಕಂಡಿದ್ದುಂಟು.

ಈಗ ಹೊಸತೊಂದು ಆಟವು ಚಾಲ್ತಿಯಲ್ಲಿದೆ. ಈ ಆಟದ ಒಂದು ಆವೃತ್ತಿಯನ್ನು, ‘ವರ್ಣಮಾಲೆಗೆ ಸೇರಿಕೊಳ್ಳಿ’ ಎಂಬ ಸಂಕೇತಾ ಕ್ಷರಗಳಲ್ಲಿ ಉಲ್ಲೇಖಿಸಲಾಗುತ್ತದೆ. ‘ಸಿಬಿಐ-ಇ.ಡಿ’ ಜೋಡಿಯು ಈ ಆಟದ ಮೊದಲ ವಿಜೇತನಾಗಿತ್ತು, ಈ ಪೈಕಿ ‘ಇ.ಡಿ’ (ಜಾರಿ ನಿರ್ದೇಶನಾಲಯ) ಕಿರಿಕಿರಿಗೊಳಗಾಗಿ ಕ್ರೋಧಗೊಂಡಿತು. ತಾನೇ ಪ್ರಮುಖ ಪಾಲುದಾರ ಎಂದು ಸಮರ್ಥಿಸಿಕೊಂಡ ‘ಇ.ಡಿ’, ವಿಜೇತರ ಹೆಸರನ್ನು ಘೋಷಿಸುವಾಗ, ಗೆದ್ದಿದ್ದು ‘ಇ.ಡಿ-ಸಿಬಿಐ’ ಎಂಬ ಮಾದರಿಯಲ್ಲೇ ಘೋಷಿಸಬೇಕು ಎಂದು ಪ್ರತಿಪಾದಿಸಿತು. ಹೀಗಾಗಿ ತೀರ್ಪುಗಾರರ ಮಂಡಲಿ ತನ್ನ ಕರ್ತವ್ಯದ ನಿಭಾವಣೆಗಾಗಿ ಸನ್ನದ್ಧವಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಗಳ ಎಣಿಕೆಯಾದಾಗ ಈ ಸಂಬಂಧದ ತೀರ್ಪನ್ನು ನಿರೀಕ್ಷಿಸಬಹುದು!
ದೆಹಲಿಯಲ್ಲಿ ಒಂದು ಗಾಳಿಸುದ್ದಿ ಹಬ್ಬಿದೆ. ಅದೆಂದರೆ, ಇಲ್ಲಿ ‘ಇ.ಡಿ-ಸಿಬಿಐ’ ಮಾದರಿಯೇ ವಿಜಯಶಾಲಿಯಾಗಿ ಹೊರ ಹೊಮ್ಮಿ ದರೆ, ಇದು ಲೋಕಸಭೆಗಾಗಿನ ಕಡೆಯ ಚುನಾವಣೆ ಯಾಗಬಹುದು; ಒಂದೊಮ್ಮೆ ಹಾಗೇ ಆದಲ್ಲಿ, ಚುನಾವಣೆಗಳಿಗೆ ತಗಲುವ ಎಲ್ಲಾ ಖರ್ಚುವೆಚ್ಚಗಳ ಉಳಿತಾಯವಾಗಲಿದೆ ಎಂಬುದು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯನ್ನು ಶಿಫಾರಸು ಮಾಡಿದಾಗ, ಈ ಅಗಾಧ ಪ್ರಮಾಣದ ಉಳಿತಾಯ ವನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.

ಒಂದೊಮ್ಮೆ ಸಮಿತಿಯು ಈ ಉಳಿತಾಯವನ್ನು ಪರಿಗಣಿಸಿದ್ದಿದ್ದರೆ, ಅದು ‘ಒಂದು ರಾಷ್ಟ್ರ, ಯಾವುದೇ ಚುನಾವಣೆ ಬೇಡ’ ಎಂಬ ಶಿಫಾರಸನ್ನು ಮಾಡಿರುತ್ತಿತ್ತೇನೋ?! ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. ‘ಸಿಬಿಐ-ಇ.ಡಿ’ ಅಥವಾ ‘ಇ.ಡಿ-ಸಿಬಿಐ’ ಮಾದರಿಗಿಂತ ‘ಸಿಬಿಐ-ಐಟಿ’ ಮಾದರಿ ತೀರಾ ಹಿಂದೇನೂ ಉಳಿದಿಲ್ಲ. ಒಂದೊಮ್ಮೆ ಸಿಬಿಐ ನಗದನ್ನು ವಶಪಡಿಸಿಕೊಂಡರೆ ಅದು
‘ಐಟಿ’ಗೆ (ಅಂದರೆ ಆದಾಯ ತೆರಿಗೆ ವಿಭಾಗಕ್ಕೆ) ಸೇರುತ್ತದೆ. ಆದರೆ ಒಂದು ವೇಳೆ ‘ಐಟಿ’ಯು ನಗದನ್ನು ವಶಪಡಿಸಿಕೊಂಡರೆ ಏನಾಗುತ್ತದೆ? ಒಂದೊಮ್ಮೆ ‘ಐಟಿ’ಯು ನಗದನ್ನು ವಶಪಡಿಸಿಕೊಂಡರೆ ಅದು ಐಟಿಗೇ ಸೇರುತ್ತದೆ ಎಂದು ಸಾಂಪ್ರದಾಯಿಕ ಬುದ್ಧಿವಂತಿಕೆ ಅಥವಾ ವಿವೇಕ ಹೇಳುತ್ತದೆ. ಆದರೀಗ ಅಸಾಂಪ್ರದಾಯಿಕ ಬುದ್ಧಿವಂತಿಕೆಯು ಈ ಸಾಂಪ್ರದಾಯಿಕ ಬುದ್ಧಿವಂತಿಕೆ ಯನ್ನು ಹಿಂದಿಕ್ಕಿದೆ ಅಥವಾ ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಅದರನ್ವಯ, ಒಂದೊಮ್ಮೆ ‘ಐಟಿ’ಯು ನಗದನ್ನು ವಶಪಡಿಸಿಕೊಂಡರೆ, ಸಿಬಿಐ ಮತ್ತು ಇ.ಡಿ ಎಂಬ ಎರಡು ಹಕ್ಕುದಾರರು ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ‘ಇದು ತಿಳಿದಿರುವ ಆದಾಯದ ಮೂಲಗಳಿಗೆ ಪರಸ್ಪರ ಹೊಂದಿಕೆಯಾಗದ ಆಸ್ತಿ’ ಎಂಬುದಾಗಿ ಸಿಬಿಐ ಸಮರ್ಥಿಸಿಕೊಂಡರೆ, ‘ಇದು ಅಪರಾಧದ ಫಲಿತವಾಗಿ ದಕ್ಕಿದ ಹುಟ್ಟುವಳಿ’ ಎಂಬುದಾಗಿ ಇ.ಡಿ ವಾದಿಸುತ್ತದೆ. ಈ ಚರ್ಚಾ ವಿಷಯದ ಕುರಿತಾಗಿಯೂ ತೀರ್ಪುಗಾರರ ಮಂಡಳಿಯು ತನ್ನ ನಿರ್ಣಯವನ್ನು ಹೊರಹೊಮ್ಮಿಸಬೇಕಿದೆ.

ನಾನು ಈ ಪ್ರಥಮಾಕ್ಷರಿಗಳು ಮತ್ತು ಸಂಖ್ಯೆಗಳೊಂದಿಗೆ ಚೆಲ್ಲಾಟವಾಡುತ್ತ ವಿಷಯ ಮಂಡನೆಯನ್ನು ಮತ್ತಷ್ಟು ಮುಂದು ವರಿಸಿದಲ್ಲಿ ಅಥವಾ ಈ ಬಾಬತ್ತಿನಲ್ಲಿ ಮತ್ತಷ್ಟು ಪುರಾವೆಗಳನ್ನು ಒದಗಿಸುತ್ತಾ ಹೋದಲ್ಲಿ ನಿಮಗೆ ಗೊಂದಲವಾಗಬಹುದು. ಹೀಗಾಗಿ, ಅಂತಿಮವಾಗಿ ನಾನು ಹೇಳಲಿಕ್ಕೆ ಹೊರಟಿರುವುದೇನು ಎಂಬುದನ್ನು ಸರಳ ಸಾಲುಗಳಲ್ಲಿ ಮಂಡಿಸಿಬಿಡುವೆ: ಈ ಪ್ರಥಮಾಕ್ಷರಿಗಳು, ಅಂಕಿಗಳು ಮತ್ತು ಆಲ್ಫಾನ್ಯೂಮರಿಕ್ ಸಂಖ್ಯೆಗಳಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟು ಅದೆಷ್ಟು ಅಗಾಧ ವಾಗಿದೆಯೆಂದರೆ, ಅದು ರಾಷ್ಟ್ರೀಯ ಹಿತಾಸಕ್ತಿಗೆ ಅಷ್ಟೇಕೆ ರಾಷ್ಟ್ರೀಯ ಭದ್ರತೆಗೇ ಧಕ್ಕೆ ತರಬಲ್ಲಷ್ಟು ಪ್ರಮಾಣದಲ್ಲಿದೆ.

ಇಂಥ ಕಲಸು  ಮೇಲೋಗರಗಳು ರಾಷ್ಟ್ರ ವ್ಯವಸ್ಥೆಯ ಘಟಕಾಂಶಗಳು ಅಥವಾ ಅಂಗಭಾಗಗಳನ್ನು ಈಗಾಗಲೇ ಸಾಕಷ್ಟು
ಹಾನಿಗೊಳಿಸಿವೆ. ಈ ಸ್ಥಿತಿ ಮತ್ತಷ್ಟು ತಾರಕಕ್ಕೆ ಏರಬಾರದು ಎಂಬುದು ನಿಮ್ಮ ಆಶಯವಾಗಿದ್ದಲ್ಲಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿವೇಚನೆಯಿಂದ ಮತ ಚಲಾಯಿಸಿ.

(ಕೃಪ: ದಿ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ಹಿರಿಯ ಕಾಂಗ್ರೆಸಿಗರು ಹಾಗೂ ಮಾಜಿ
ಅರ್ಥ ಸಚಿವರು)