ವೀಕೆಂಡ್ ವಿತ್ ಮೋಹನ್
camohanbn@gmail.com
ಹತ್ತು ವರ್ಷಗಳ ಹಿಂದೆ ೧ ಜಿಬಿ ಇಂಟರ್ನೆಟ್ ಬೆಲೆ ೨೬೯ ರುಪಾಯಿಯಷ್ಟಿತ್ತು. ತಿಂಗಳಿಗೆ ೧ ಜಿಬಿ ಇಂಟರ್ನೆಟ್ ಅಳವಡಿಸಿ ಕೊಂಡು ಮೊಬೈಲ್ ಬಳಸಲಾಗುತ್ತಿತ್ತು. ಇಂಟರ್ನೆಟ್ ಖಾಲಿಯಾಗುವ ಭಯದಿಂದ ಕೇವಲ ಕರೆ ಮಾಡಲು ಮೊಬೈಲ್ ಬಳಸು ತ್ತಿದ್ದ ದಿನಗಳವು. ಮೊಬೈಲ್ ರಿಚಾರ್ಜ್ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ವಿವಿಧ ಇಂಟರ್ನೆಟ್ ಸೌಲಭ್ಯಗಳ ಮಾಹಿತಿ ಪಡೆದು ಮನೆಯಲ್ಲಿ ಕಾಡಿ-ಬೇಡಿ ಒಂದು ತಿಂಗಳ ಇಂಟರ್ನೆಟ್ ಬಳಕೆಗೆ ರಿಚಾರ್ಜ್ ಮಾಡಿಸಲಾಗುತ್ತಿತ್ತು.
ಕಚೇರಿಗಳಲ್ಲಿ ಕೇಬಲ್ ಮೂಲಕ ಇಂಟರ್ನೆಟ್ ಸೇವೆ ಪಡೆಯುವುದು ಸಾಮಾನ್ಯವಾಗಿತ್ತು. ತಿಂಗಳ ಟೆಲಿಫೋನ್ ಬಿಲ್ ಕಟ್ಟಲು ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಿತ್ತು. ಮನೆ ಖರ್ಚಿನ ಬಿಲ್ಲುಗಳನ್ನು ಕಟ್ಟುವುದೇ ಒಂದು ದಿನದ ಕೆಲಸವಾಗಿರುತ್ತಿತ್ತು. ವಿದ್ಯುತ್ ಬಿಲ್ ಕಟ್ಟಲು ದೊಡ್ಡ ಸರತಿ ಸಾಲುಗಳಲ್ಲಿ ೨-೩ ಗಂಟೆ ನಿಲ್ಲುವ ಪರಿಸ್ಥಿತಿಯಿತ್ತು. ಜಗತ್ತಿನ ಹಲವು ಮುಂದುವರಿದ ದೇಶಗಳು ೧೯೯೦ರ ದಶಕದಲ್ಲಿ ತಂತ್ರಜ್ಞಾನ ಆಧರಿತ ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದರೂ ಭಾರತಕ್ಕೆ ಮಾತ್ರ ಅದು ಸಾಧ್ಯವಾಗಿರಲಿಲ್ಲ.
‘ಲೈಸೆನ್ಸ್ ರಾಜ್’ ಸಂಸ್ಕೃತಿ ಯಿಂದ ಹೊರಬರಲು ಭಾರತಕ್ಕೆ ಸುಮಾರು ೫ ದಶಕಗಳೇ ಹಿಡಿದವು. ಮಾಹಿತಿ ತಂತ್ರಜ್ಞಾನ ಕ್ಷೇತ್ರ ದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಲು ತೆಗೆದುಕೊಂಡ ಕ್ರಮಗಳ ಫಲವಾಗಿ ಇಂದು ಅಂಗೈಯಲ್ಲಿ ಜಗತ್ತನ್ನೇ ಕಾಣುವ ತಂತ್ರಜ್ಞಾನಗಳು ಭಾರತಕ್ಕೆ ಕಾಲಿಟ್ಟಿವೆ. ಶ್ರೀಸಾಮಾನ್ಯರ ಬಳಿ ನೂತನ ತಂತ್ರಜ್ಞಾನಗಳನ್ನು ಹೊತ್ತೊಯ್ಯಲು ಬೇಕಿರುವ ಪ್ರಮುಖ ಮಾರ್ಗವೆಂದರೆ ಇಂಟರ್ನೆಟ್. ಇದರ ಬಳಕೆ ಹೆಚ್ಚಾದಷ್ಟೂ ನೂತನ ತಂತ್ರಜ್ಞಾನಗಳು ಜನರ ಬಳಿ ಬಹು ಬೇಗ ತಲುಪುತ್ತವೆ. ಕಳೆದ ಹತ್ತು ವರ್ಷಗಳನ್ನು ಭಾರತದ ಇಂಟರ್ನೆಟ್ ಯುಗವೆಂದರೆ ತಪ್ಪಿಲ್ಲ.
ಕೈಗೆಟುಕುವ ಬೆಲೆಯಲ್ಲಿ ಇಂಟರ್ನೆಟ್ ಸೇವೆ ಸಿಗುವಂತೆ ಮಾಡಿ ಕೋಟ್ಯಂತರ ಜನರ ಮನೆ ಬಾಗಿಲಿಗೆ ಹಲವು ಸೇವೆಗಳನ್ನು ತಲುಪಿಸಲು ಸಾಧ್ಯವಾಗಿದೆ. ೧ ಜಿಬಿ ಇಂಟರ್ನೆಟ್ ಬೆಲೆ ೧೩ ರುಪಾಯಿಗೆ ಇಳಿದಿದೆ. ದಿನದ ೨೪ ಗಂಟೆಯೂ ಪ್ರತಿಯೊಬ್ಬರ ಮೊಬೈಲ್ ಫೋನಿನ ಇಂಟರ್ನೆಟ್ ಚಾಲ್ತಿಯಲ್ಲಿರುತ್ತದೆ. ಒಂದು ಕಾಲದಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ಹಾಡು ಕೇಳಬೇಕಾದರೆ ಟೇಪ್ ರೆಕಾರ್ಡರ್ ಇರಬೇಕಿತ್ತು. ನಂತರ ಸಿಡಿ ಬಂದವು, ತರುವಾಯ ಪೆನ್‌ಡ್ರೈವ್ ಸರದಿ. ಆದರೀಗ ಯಾವುದೂ ಬೇಡ, ಮೊಬೈಲ್ ನಲ್ಲಿ ಇಂಟರ್ನೆಟ್ ಇದ್ದರೆ ಸಾಕು, ಯಾವ ಹಾಡನ್ನು ಬೇಕಾದರೂ ಕೇಳಬಹುದು.
ಇಂಟರ್ನೆಟ್ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಗಣನೀಯ ಏರಿಕೆಯಾಯಿತು. ಸುಳ್ಳು ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಪರಿಶೀಲಿಸಿ ಸುದ್ದಿ ಹರಡಿದವನ ಬಣ್ಣ ಬಯಲು ಮಾಡಲಾಗುತ್ತಿದೆ. ಇಂಟರ್ನೆಟ್ ಬೆಲೆಯಲ್ಲಿ ಗಣನೀಯ ಇಳಿಕೆ ಯಾದ ಕಾರಣ ಕೋಟ್ಯಂತರ ಉದ್ಯೋಗಗಳು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿವೆ. ಕೇವಲ ಅಡುಗೆ ಮಾಡುವ ವಿಡಿಯೋಗಳ ಮೂಲಕ ತಿಂಗಳಿಗೆ ಲಕ್ಷಾಂತರ ದುಡಿಯುವ ಹೆಣ್ಣುಮಕ್ಕಳಿದ್ದಾರೆ. ತಮಿಳುನಾಡಿನ ೭೦ರ ವಯಸ್ಸಿನ ಅಜ್ಜ ನಡೆಸಿಕೊಡುವ ಮಾಂಸಾಹಾರ ಅಡುಗೆಯ ವಿಡಿಯೋಗಳು ಕೋಟ್ಯಂತರ ಜನರನ್ನು ತಲುಪುತ್ತಿವೆ.
ಆರೋಗ್ಯದ ಕುರಿತಾದ ವಿಡಿಯೋಗಳನ್ನು ಜನರಿಗೆ ತಲುಪಿಸಿ ದುಡಿಯುವ ಸಾವಿರಾರು ಮಂದಿ ಯುವಕ-ಯುವತಿಯರಿದ್ದಾರೆ. ಮಾತು ಮಾತಿಗೂ ಅಂಬಾನಿಯನ್ನು ಜರಿಯುವವರು, ಅಂಬಾನಿ ಸಂಸ್ಥೆಯ ಜಿಯೋ ಸಿಮ್ ಮೂಲಕ ಇಂಟರ್ನೆಟ್ ಬಳಸುತ್ತಿರು ತ್ತಾರೆ. ಈಗಂತೂ ‘ರೀಲ್ಸ್’ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೈದರಾಬಾದಿನ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಮಾಂಸಾಹಾರ ಮಾರಿ ಜೀವನ ನಡೆಸುತ್ತಿದ್ದರು. ರೀಲ್ಸ್ ಮಾಡುವವರು ಈಕೆಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ದಲ್ಲಿ ಹರಿಬಿಟ್ಟ ಕಾರಣ, ಬೇರೆ ಬೇರೆ ಊರುಗಳಿಂದ ಜನರು ಅಲ್ಲಿಗೆ ಬಂದು ಊಟ ಮಾಡಿ ಹೋಗುತ್ತಿದ್ದಾರೆ. ರಸ್ತೆ ಬದಿಯ ತಳ್ಳುಗಾಡಿಯವರು ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಪಾದಿಸಲು ಕಾರಣವಾದದ್ದು ಸಾಮಾಜಿಕ ಜಾಲತಾಣ ಮತ್ತು ಇಂಟರ್ನೆಟ್. ‘ವರ್ಷಕ್ಕೆ ೨ ಕೋಟಿ ಉದ್ಯೋಗವೆಲ್ಲಿ?’ ಎಂದು ಮೋದಿಯವರನ್ನು ಕೇಳುವವರು ತಿಳಿಯಬೇಕಾದ ವಿಷಯ ವೆಂದರೆ, ಕೇವಲ ಇಂಟರ್ನೆಟ್ ಬಳಕೆಯಿಂದ ವರ್ಷಕ್ಕೆ ಅಂದಾಜು ೫೦ ಲಕ್ಷ ಜನರಿಗೆ ಉದ್ಯೋಗ ಸಿಗುತ್ತಿದೆ.
ಇಂಟರ್ನೆಟ್ ಕ್ರಾಂತಿಯಿಂದಾಗಿ ಮನರಂಜನಾ ಉದ್ಯಮದ ದಿಕ್ಕು ಬದಲಾಗಿದೆ. ಮನೆಯಲ್ಲೇ ಕುಳಿತು ವರ್ಷಕ್ಕೆ ನೂರಾರು ಸಿನಿಮಾಗಳನ್ನು ನೋಡಬಹುದಾಗಿದೆ. ಟೇಪ್ ರೆಕಾರ್ಡರ್, ವಿಡಿಯೋ ಪ್ಲೇಯರ್ ಮೂಲೆಗೆ ಸೇರಿವೆ. ಇಂಟರ್ನೆಟ್ ಇದ್ದರೆ ಸಾಕು ಯೂಟ್ಯೂಬ್‌ನಲ್ಲಿ ಬೇಕಾದಷ್ಟು ಹಳೆಯ ಸಿನಿಮಾಗಳನ್ನು ನೋಡಬಹುದು. ೨೦೦೯ರಲ್ಲಿ ಯೂಟ್ಯೂಬ್ ಪ್ರಾರಂಭವಾದಾಗ ಕೇವಲ ೨ ವಿಡಿಯೋಗಳಿದ್ದವು. ಆದರೀಗ ಕೋಟ್ಯಂತರ ವಿಡಿಯೋಗಳಿವೆ. ಇಂಟರ್ನೆಟ್ ಬೆಲೆಯಲ್ಲಿ ಗಣನೀಯ ಇಳಿಕೆಯಾದ ಪರಿಣಾಮ, ಬಳಕೆದಾರರ ಸಂಖ್ಯೆ ಹೆಚ್ಚಾಗಿ ವಿಡಿಯೋಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ಮಕ್ಕಳ ಮನರಂಜನೆಗೆ ಇಂಟರ್ನೆಟ್‌ನಲ್ಲಿ ಹಲವು ವಿಡಿಯೋಗಳಿವೆ. ಮನೆಯ ಹಿತ್ತಲಲ್ಲಿ ನಾಯಿಯನ್ನು ಆಟವಾಡಿಸುವ
ವಿಡಿಯೋಗಳ ಮೂಲಕ ಲಕ್ಷಾಂತರ ರುಪಾಯಿ ಸಂಪಾದಿಸುವ ಮಂದಿ ಇದ್ದಾರೆ. ರಸ್ತೆ ಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ ಬಂಗಾಳದ ವ್ಯಕ್ತಿ ಹಾಡಿದ ‘ಕಚ್ಚಾ ಬಾದಾಮ್’ ಹಾಡು ಕೋಟ್ಯಂತರ ಜನರಿಗೆ ತಲುಪಿದ್ದು ಇಂಟರ್ನೆಟ್ ಮೂಲಕ. ನೋಡ ನೋಡುತ್ತಲೇ ಆತ ಖ್ಯಾತನಾಮನಾಗಿಬಿಟ್ಟ.
ಭಿಕ್ಷೆ ಬೇಡುತ್ತಿದ್ದ ‘ರೋನು ಮೊಂಡಲ್’ ಸಾಮಾಜಿಕ ಜಾಲತಾಣದ ಮೂಲಕ ತಾರೆಯಾಗಿಬಿಟ್ಟಿದ್ದರು. ಕರೋನ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಟಾರ್ ಆದ ಹಲವರಿದ್ದಾರೆ. ಕೈಗೆಟಕುವ ದರದಲ್ಲಿ ಇಂಟರ್ನೆಟ್ ಸಿಗದಿದ್ದಿದ್ದರೆ, ಕರೋನ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಬಡ ಶಾಲಾಮಕ್ಕಳು ಶಿಕ್ಷಕರ ಪಾಠ ಕೇಳಲಾಗುತ್ತಿರಲಿಲ್ಲ. ಅಗ್ಗದ ಬೆಲೆಯಲ್ಲಿ ಇಂಟರ್ನೆಟ್ ಸಿಗದಿದ್ದಿದ್ದರೆ ಕಚೇರಿಗಳಿಗೆ ಹೋಗದೆ ಮನೆಯಲ್ಲಿ ಕುಳಿತು ಕೆಲಸ ಮಾಡಲಾಗುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುವವರಿದ್ದಾರೆ. ನೂತನ ಹೋಟೆಲುಗಳನ್ನು ಮಾರ್ಕೆಟಿಂಗ್ ಮಾಡಲು ಅಲ್ಲಿಗೆ
ಭೇಟಿಯಿತ್ತು ಅಲ್ಲಿ ಸಿಗುವ ಖಾದ್ಯಗಳ ವಿವರ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಹಣ ಸಂಪಾದಿಸುತ್ತಾರೆ.
ರಸ್ತೆ ಬದಿಯ ಗಾಡಿಯ ಮೇಲೆ ಮೊಟ್ಟೆಗಳಿಂದ ತಯಾರಿಸುವ ಖಾದ್ಯಗಳ ವಿಡಿಯೋ ಮಾಡಿಸಿ ಸಣ್ಣ ಗಾಡಿಯವ ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸುತ್ತಾನೆ. ರೀಲ್ಸ್ ಮಾಡುವ ವ್ಯಕ್ತಿ ತನ್ನ ಮಾರ್ಕೆಟಿಂಗ್ ಶುಲ್ಕ ಪಡೆದು ಹಣ ಸಂಪಾದಿಸುತ್ತಾನೆ. ಹಳೆಯ ಕಾರುಗಳ ಮಾರಾಟ, ಪೀಠೋಪಕರಣಗಳು, ಬಟ್ಟೆಗಳು, ಪುಸ್ತಕಗಳು, ರೈತರು ಬೆಳೆದ ಉತ್ಪನ್ನಗಳು, ನೂತನ ಬಡಾ ವಣೆಯ ನಿವೇಶನಗಳು, ಜಮೀನುಗಳು ಹೀಗೆ ಹಲವು ವ್ಯವಹಾರಗಳು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿವೆ. ಒಂದು ಕ್ಷಣ ಯೋಚಿಸಿ, ಅಗ್ಗದ ಬೆಲೆಯಲ್ಲಿ ಇಂಟರ್ನೆಟ್ ಸಿಗದೇ ಹೋಗಿದ್ದರೆ ಅದೆಷ್ಟು ಜನ ನಿರುದ್ಯೋಗಿಗಳಾಗಬೇಕಿತ್ತು.
ಕಚೇರಿಯಲ್ಲಿ ಮಾಡುವ ಕೆಲಸವಷ್ಟೇ ಉದ್ಯೋಗವಲ್ಲ. ಪರೋಕ್ಷವಾಗಿ ಸಿಗುವ ಕೆಲಸಗಳು ಎಣಿಕೆಗೆ ಸುಲಭವಾಗಿ ಸಿಗುವುದಿಲ್ಲ. ಮೋದಿಯವರು ಅಽಕಾರಕ್ಕೆ ಬಂದ ನಂತರ ಇಂಟರ್ನೆಟ್ ಉದ್ಯಮದಲ್ಲಿ ತಂದಂಥ ಬದಲಾವಣೆಯ ಪರಿಣಾಮ ಇಂದು ಕೋಟ್ಯಂತರ ಜನ ತಮ್ಮ ವ್ಯವಹಾರ ಹೆಚ್ಚಿಸಿಕೊಂಡಿದ್ದಾರೆ. ಪರಿಣಾಮ, ಕೋಟ್ಯಂತರ ಜನರಿಗೆ ಉದ್ಯೋಗ ದೊರೆತಿದೆ. ಸುಖಾ ಸುಮ್ಮನೆ ಭಾರತದ ಆರ್ಥಿಕತೆ ೪ ಟ್ರಿಲಿಯನ್ ಸಮೀಪದಲ್ಲಿಲ್ಲ, ತಂತ್ರಜ್ಞಾನ ಕ್ರಾಂತಿಯ ಕೊಡುಗೆ ಅದರ ಹಿಂದಿದೆ.
ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಭಾರತೀಯರ ತಂತ್ರಜ್ಞಾನ ಅಳವಡಿಕೆಯ ಬಗ್ಗೆ ಸಂಸತ್ತಿನಲ್ಲಿ ವ್ಯಂಗ್ಯವಾಗಿ ಮಾತನಾಡಿ ದ್ದರು. ಹಳ್ಳಿಯಲ್ಲಿರುವ ಭಾರತೀಯನಿಗೆ ಡಿಜಿಟಲ್ ಪೇಮೆಂಟ್ ಪರಿಕಲ್ಪನೆ ಬರಲು ಸಾಧ್ಯವೇ ಇಲ್ಲ, ಭಾರತದ ಆರ್ಥಿಕತೆ ನೋಟುಗಳ ಮೂಲಕವಷ್ಟೇ ನಡೆಯುತ್ತದೆ ಎಂದು ಹೇಳಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ದೇಶ ಯಾವ ರೀತಿ ಬದಲಾಗಿದೆ ಎಂದರೆ, ದೇವಸ್ಥಾನದ ಮುಂದೆ ಚಪ್ಪಲಿ ಕಾಯುವ ಕಾಯಕ ಮಾಡುವವರ ಬಳಿ ‘ಕ್ಯೂಆರ್’ ಕೋಡ್ ಬಂದಿವೆ. ರಸ್ತೆ ಬದಿಯಲ್ಲಿ ಎಳನೀರು ಮಾರುವವನ ಬಳಿ ಗೂಗಲ್ ಪೇ ಮತ್ತು ಫೋನ್ ಪೇ ಇವೆ. ನಮ್ಮ ಜೇಬಿನಲ್ಲಿ ಹಣ ಇಟ್ಟುಕೊಂಡು ಹೋಗಬೇಕಿಲ್ಲ; ಮೊಬೈಲ್ ಇದ್ದು ಇಂಟರ್ನೆಟ್ ಇದ್ದರೆ ಸಾಕು ಎಷ್ಟು ವ್ಯಾಪಾರ ಬೇಕಾದರೂ ಮಾಡಬಹುದು. ಡಿಜಿಟಲ್ ಕ್ರಾಂತಿಯ ಮುನ್ನ ಈ
ವ್ಯವಹಾರಗಳು ಬ್ಯಾಂಕುಗಳಿಗೆ ಬರುತ್ತಿರಲಿಲ್ಲ. ಅಸಂಘಟಿತ ವಲಯದ ವ್ಯವಹಾರಗಳನ್ನು ಭಾರತದ ಆರ್ಥಿಕತೆಯಲ್ಲಿ ಸೇರಿಸಲು ಕಾರಣವಾದದ್ದು ಇಂಟರ್ನೆಟ್.
ಬಿಲಿಯನ್‌ಗಟ್ಟಲೆ ವ್ಯವಹಾರಗಳು ಭಾರತದಲ್ಲಿಂದು ಮೊಬೈಲ್ ಮೂಲಕ ನಡೆಯುತ್ತಿವೆ. ಅಗ್ಗದ ಬೆಲೆಯಲ್ಲಿ ಇಂಟರ್ನೆಟ್ ಸಿಕ್ಕ ಹಾಗೆ ಮೊಬೈಲ್ ಫೋನುಗಳೂ ಸಿಗುತ್ತಿವೆ. ಹಿಂದೊಮ್ಮೆ ರಾಜೀವ್ ಗಾಂಧಿಯವರು ‘ಕೇಂದ್ರದಿಂದ ೧೦೦ ರುಪಾಯಿ ಕಳುಹಿಸಿ ದರೆ ಅಂತಿಮ ಫಲಾನುಭವಿಗೆ ಕೇವಲ ೧೫ ರುಪಾಯಿ ತಲುಪುತ್ತದೆ’ ಎಂದು ಹೇಳಿದ್ದರು. ಆದರೆ ಈಗಿನ ತಂತ್ರಜ್ಞಾನ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿಲ್ಲ. ಸರಕಾರದ ಯೋಜನೆಗಳ ಮೂಲಕ ನೀಡುವ ಹಣವು ಮಧ್ಯವರ್ತಿಗಳ ಹಾವಳಿಯಿಲ್ಲದೆ, ಒಂದು ಬಟನ್ ಒತ್ತಿದರೆ ಲಕ್ಷಾಂತರ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮೆಯಾಗುತ್ತದೆ. ಇಂಟರ್ನೆಟ್ ಇಲ್ಲದ ಕಾಲದಲ್ಲಿ ವ್ಯವಸ್ಥೆಯ ಲೋಪದೋಷಗಳನ್ನು ಬಳಸಿಕೊಂಡು ಭ್ರಷ್ಟಾಚಾರ ಮಾಡಿ ಸರಕಾರದ ಹಣ ಲೂಟಿ ಮಾಡುವವರ ಸಂಖ್ಯೆ ಹೆಚ್ಚಿತ್ತು. ನೇರ ಹಣ ವರ್ಗಾವಣೆ ವ್ಯವಸ್ಥೆಯಿಂದಾಗಿ, ಸರಕಾರಕ್ಕೆ ಆಗುತ್ತಿದ್ದಂಥ ನಷ್ಟದಲ್ಲಿ ಭಾರಿ ಇಳಿಕೆಯಾಗಿದೆ.
ಅಮೆರಿಕವನ್ನೂ ಮೀರಿಸುವಂತೆ ಭಾರತದ ಡಿಜಿಟಲ್ ವ್ಯವಸ್ಥೆ ಬೆಳೆದಿದೆ. ಅಮೆರಿಕದಲ್ಲಿ ಭಾರತದಷ್ಟು ಡಿಜಿಟಲ್ ಆರ್ಥಿಕ ವ್ಯವಸ್ಥೆ ಜಾರಿಯಲ್ಲಿಲ್ಲ, ಇಂದಿಗೂ ಹಣದ ಮೂಲಕವೇ ಹಲವು ವ್ಯವಹಾರಗಳು ನಡೆಯುತ್ತವೆ. ಭಾರತದ ಯುಪಿಐ ವಿದೇಶ ಗಳಲ್ಲೂ ಬಳಕೆಯಲ್ಲಿದೆ. ಗ್ರೀಸ್, ದುಬೈ ಮತ್ತು ಸಿಂಗಾಪುರ ದೇಶಗಳಲ್ಲಿ ಕ್ಯೂಆರ್ ಕೋಡ್ ಮೂಲಕ ವ್ಯವಹರಿಸ ಬಹುದು. ದೇವಸ್ಥಾನಗಳಲ್ಲಿ ಕ್ಯೂಆರ್ ಕೋಡ್ ಬಳಕೆಯಲ್ಲಿದೆ, ಭಕ್ತರ ಕಾಣಿಕೆಗಳೆಲ್ಲವೂ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಈ ಹಿಂದೆ ಹುಂಡಿಯಲ್ಲಿರುವ ಹಣವನ್ನು ಎಣಿಸಿ, ನಂತರ ಬ್ಯಾಂಕುಗಳಿಗೆ ಜಮೆ ಮಾಡಬೇಕಿತ್ತು. ಹಾಗೆ ಜಮೆ ಮಾಡಲು ಹೋಗುವವರೇ ಇಲ್ಲದಂತಾಗಿದೆ. ಮೊದಮೊದಲು ಎಟಿಎಂ ಕಾರ್ಡುಗಳ ಬಳಕೆ ಇತ್ತು.
ಈಗಂತೂ ಎಟಿಎಂ ಕಡೆಗೆ ಹೋಗುವವರೇ ಇಲ್ಲ. ಒಂದು ಕಾಲದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಡೆಬಿಟ್ ಕಾರ್ಡ್
ಬಳಸಿದರೆ ಶೇ.೨ರಷ್ಟು ಕಮಿಷನ್ ಹಣ ಅಮೆರಿಕದ ಮಾಸ್ಟರ್ ಕಾರ್ಡ್ ಅಥವಾ ವೀಸಾ ಸಂಸ್ಥೆಗಳ ಪಾಲಾಗುತ್ತಿತ್ತು. ಆದರೀಗ ಈ ಸಂಸ್ಥೆಗಳನ್ನು ಕೇಳುವವರಿಲ್ಲದಂತಾಗಿದೆ. ಮೋದಿಯವರು ಪ್ರಧಾನಿಯಾದ ನಂತರ ಕಳೆದ ೧೦ ವರ್ಷಗಳಲ್ಲಿ ಅಸಾಧ್ಯವಾದು ದನ್ನು ಸಾಧ್ಯವಾಗಿಸಿದೆ ಭಾರತ.
ಡಿಜಿಟಲ್ ಕ್ರಾಂತಿಯಲ್ಲಿ ಜಗತ್ತಿನ ದೇಶಗಳಲ್ಲಿ ಮುಂಚೂಣಿಯಲ್ಲಿರುವ ಭಾರತ ಇಂಟರ್ನೆಟ್ ಬಳಕೆ ಯಲ್ಲಿ ನಂಬರ್ ೧ ಸ್ಥಾನ ದಲ್ಲಿದೆ. ಜಗತ್ತಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸಿಗುವುದು ಭಾರತದಲ್ಲಿ. ಪರೋಕ್ಷವಾಗಿ ಇಂಟರ್ನೆಟ್ ಮೂಲಕ ಸೃಷ್ಟಿಯಾಗಿರುವ ಕೋಟ್ಯಂತರ ಉದ್ಯೋಗಗಳಿಗೆ ಲೆಕ್ಕ ಸಿಗುವುದಿಲ್ಲ. ಮುಷ್ಟಿಯಲ್ಲಿ ಜಗತ್ತಿನ ವಿವಿಧ ದೇಶಗಳೊಂದಿಗೆ ವ್ಯವಹರಿ ಸುವ ಮಟ್ಟಕ್ಕೆ ಭಾರತ ಬೆಳೆಯಲು ಕಾರಣವಾದದ್ದು ಕಳೆದ ೧೦ ವರ್ಷಗಳಲ್ಲಿ ದೇಶದಲ್ಲಾದಂಥ ಇಂಟರ್ನೆಟ್ ಕ್ರಾಂತಿ.