ನವದೆಹಲಿ: ಏಪ್ರಿಲ್ 19ರ ಬೆಳಿಗ್ಗೆ 7ರಿಂದ ಜೂನ್ 1ರ ಸಂಜೆ 6.30ರವರೆಗೆ ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಚುನಾವಣೋತ್ತರ ಸಮೀಕ್ಷೆ ನಡೆಸುವುದು ಅಥವಾ ಪ್ರಕಟಿಸುವುದಕ್ಕೆ ಎಂದು ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಅಭಿಪ್ರಾಯ ಸಂಗ್ರಹ ಅಥವಾ ಚುನಾವಣಾ ಸಮೀಕ್ಷೆಯ ಫಲಿತಾಂಶವೂ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು, ನಿಗದಿಯಂತೆ ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ಜನಪ್ರತಿ ನಿಧಿಗಳ ಕಾಯ್ದೆ ಅನುಸಾರ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ದೇಶದಾದ್ಯಂತ ಲೋಕಸಭೆ ಚುನಾವಣೆ ನಡೆಯುವ ಹೊತ್ತಿನಲ್ಲೇ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆಗಳಿಗೂ ಚುನಾವಣೆ ನಿಗದಿಯಾಗಿದೆ. 12 ರಾಜ್ಯಗಳ 25 ವಿಧಾನಸಭೆ ಕ್ಷೇತ್ರಗಳಿಗೂ ಇದೇ ವೇಳೆ ಉಪಚುನಾವಣೆ ನಡೆಯಲಿದೆ.
ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಹಾಗೂ ಜೂನ್ 1ರಂದು ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾ ವಣೆ ನಡೆಯಲಿದೆ.
ಅರುಣಾಚಲ ಪ್ರದೇಶ, ಸಿಕ್ಕಿಂ ವಿಧಾನಸಭೆಗಳಿಗೆ ಏಪ್ರಿಲ್ 19ರಂದು ಹಾಗೂ ಆಂಧ್ರ ಪ್ರದೇಶ ವಿಧಾನಸಭೆಗೆ ಮೇ 13ರಂದು ಮತ ದಾನ ನಡೆಯಲಿದೆ. ಒಡಿಶಾದಲ್ಲಿ ಮೇ 13ರಿಂದ ಜೂನ್ 1ರವರೆಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ.
ಸಿಕ್ಕಿಂ, ಅರುಣಾಚಲದಲ್ಲಿ ಜೂನ್ 2ರಂದು ಹಾಗೂ ಆಂಧ್ರ, ಒಡಿಶಾದಲ್ಲಿ ಜೂನ್ 4ರಂದು ಮತ ಎಣಿಕೆ ನಡೆಯಲಿದೆ.