ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನೇದಿನೆ ಏರುತ್ತಿದೆ. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯೂ ಭರದಿಂದ ಸಾಗಿದೆ. ರಾಜ್ಯದಲ್ಲಿ ಮೊದಲ ಹಂತದ ಮತದಾನ ಈ ತಿಂಗಳ ೨೬ರಂದು ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಮತಕ್ಷೇತ್ರದಲ್ಲಿ ಮತಬೇಟೆಗೆ ಮುಂದಾಗಿದ್ದಾರೆ, ಅಂದರೆ ಜನರನ್ನು ವೈಯಕ್ತಿಕವಾಗಿ ಭೇಟಿಮಾಡಿ ಮತಯಾಚಿಸುವ ಪ್ರಕ್ರಿಯೆಗೆ ವೇಗ ದಕ್ಕಿದೆ.
ಆದರೆ ಈ ಚಟುವಟಿಕೆಯ ವೇಳೆ ಅವರು ತಮ್ಮೊಂದಿಗೆ ಬಿಸಿಲಿನಲ್ಲಿ ಹೆಜ್ಜೆಹಾಕುವ ಕಾರ್ಯಕರ್ತರಿಗೆ ದಿನಕ್ಕೆ ಇಂತಿಷ್ಟು ಎಂದು ಹಣ ನೀಡುವುದರ ಜತೆಗೆ ಊಟ-ತಿಂಡಿ ಖರ್ಚುಗಳನ್ನೂ ನೋಡಿಕೊಳ್ಳುವುದಿದೆ. ಇದು ಕಾರ್ಯಕರ್ತರ ಪರಿಶ್ರಮಕ್ಕೆ ಅವರು ನೀಡುವ ಪ್ರತಿಫಲವೇ ಇರ ಬಹುದು; ಆದರೆ ಅದೇ ಸಮಯದಲ್ಲಿ ಸದರಿ ಕಾರ್ಯಕರ್ತರು ದುಶ್ಚಟಗಳಿಗೆ ಬಲಿಯಾಗದಂತೆ ಅವರು ನೋಡಿಕೊಳ್ಳಬೇಕಿದೆ.
ಅಂದರೆ ಗುಟ್ಕಾ, ಮದ್ಯ ಇತ್ಯಾದಿಗಳಿಂದ ಅವರು ದೂರ ಉಳಿಯುವಂತೆ ಖಾತ್ರಿಪಡಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಜನರಿಗೆ ಯಾವುದೇ ಪಕ್ಷದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಮೇಲೆ ಪ್ರೀತಿ-ವಿಶ್ವಾಸ ಹುಟ್ಟುವುದಿಲ್ಲ. ಮತ್ತೊಂದೆಡೆ, ಮತದಾರರೂ ತಮ್ಮತನವನ್ನು ಕಾಯ್ದುಕೊಳ್ಳಬೇಕು. ವಿವಿಧ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ಮತಗಳಿಗೆ ಪ್ರತಿಯಾಗಿ ನೀಡುವ ಹಣ, ಸೀರೆ, ಒಡವೆ, ಖಂಡ- ತುಂಡುಗಳಿಗೆ ಮರಳಾಗಬಾರದು.
ಇಂಥ ಆಮಿಷಗಳಿಗೆ ಬಲಿಯಾದರೆ, ಗೆದ್ದ ಜನಪ್ರತಿನಿಽಯಿಂದ ಅಭಿವೃದ್ಧಿಪರವಾದ ಕೆಲಸಗಳನ್ನು ಮಾಡಿಸಿಕೊಳ್ಳಲಾಗುವುದಿಲ್ಲ. ಮತದಾರರು ಆಮಿಷಗಳಿಗೆ ಬಲಿಯಾಗಿ ಮತವನ್ನು ಮಾರಿಕೊಂಡಿದ್ದೇ ಆದಲ್ಲಿ, ರಾಜಕೀಯ ಪಕ್ಷಗಳ ಎದುರು ಅವರು ಹಗುರ ವಾಗಿಬಿಡುತ್ತಾರೆ ಮತ್ತು ಗೆದ್ದವರು ಜನರ ಮಾತುಗಳನ್ನು ಕೇಳಲು ಹಿಂದೇಟು ಹಾಕುತ್ತಾರೆ ಎಂಬುದನ್ನು ಮರೆಯದಿರೋಣ.
ಚುನಾವಣೆ ನಡೆಯುವವರೆಗೆ ಜನರ ಕೈಕಾಲು ಹಿಡಿಯುವ ಕೆಲ ವೊಂದು ಅಭ್ಯರ್ಥಿಗಳು, ಒಂದೊಮ್ಮೆ ಗೆದ್ದರೆ ಮತಕ್ಷೇತ್ರದ ಕಡೆಗೆ
ತಿರುಗಿಯೂ ನೋಡುವುದಿಲ್ಲ. ಜನಪ್ರತಿನಿಧಿ ಸ್ಥಾನವನ್ನು ದಕ್ಕಿಸಿ ಕೊಂಡ ನಂತರ ಮುಂದಿನ ೫ ವರ್ಷಗಳವರೆಗೆ ಅವರದ್ದೇ ದರ್ಬಾರು! ಗೆದ್ದ ಬಳಿಕ ದಕ್ಕುವ ಅಧಿಕಾರವನ್ನು ಬಳಸಿಕೊಂಡು ವಾಮಮಾರ್ಗ ದಲ್ಲಿ ಅಕ್ರಮ ಆಸ್ತಿ ಮತ್ತು ಹಣವನ್ನು ಸಂಪಾದಿಸುವ ಕೆಲ ಜನ ಪ್ರತಿನಿಧಿಗಳಲ್ಲಿ, ಆ ಹಣದ ಬಲದಿಂದಲೇ ಜನರನ್ನೂ ಕೊಂಡು ಕೊಳ್ಳಬಹುದು ಎಂಬ ಧಾರ್ಷ್ಟ್ಯ ರೂಪುಗೊಂಡಿರುತ್ತದೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದಾದರೆ, ಮತದಾರರಾಗಿ ನಾವು ನಮ್ಮ ಸಾಂವಿಧಾ ನಿಕ ಹಕ್ಕನ್ನು ಪ್ರಾಮಾಣಿಕವಾಗಿ ಚಲಾಯಿಸ ಬೇಕು.
ತನ್ಮೂಲಕ ಪ್ರಜ್ಞಾವಂತ ನಾಗರಿಕರು ಎನಿಸಿಕೊಂಡು ಆರೋಗ್ಯ ಕರ ಸಮಾಜವನ್ನೂ, ಸದೃಢವಾದ ಪ್ರಜಾಪ್ರಭುತ್ವವನ್ನೂ ಕಟ್ಟಬೇಕು. ಚುನಾವಣೆಯ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳು ಹಣ, ಉಡುಗೊರೆಗಳ ಆಮಿಷವನ್ನು ಒಡ್ಡುವುದರ ಜತೆಗೆ, ಜಾತಿಯ ಬಲವನ್ನು ಮುಂದುಮಾಡಿಯೂ ಮತಗಳನ್ನು ಗಿಟ್ಟಿಸಲು ಕಸರತ್ತು ಮಾಡುವುದಿದೆ. ಹೀಗೆ ನಮ್ಮ ಜಾತಿಯವನು ಎಂಬ ಕಾರಣಕ್ಕೆ ಅದಕ್ಷನೂ ಅಸಮರ್ಥನೂ ಕೈಶುದ್ಧಿ ಇಲ್ಲದವನೂ ಆಗಿರುವ ವ್ಯಕ್ತಿಗೆ ನಾವು ಮತ ಚಲಾಯಿಸಿ ಅದನ್ನು ಮೈಲಿಗೆ ಮಾಡಿಕೊಳ್ಳುವುದು ಬೇಡ. ಇಂದು ನಮಗೆ ಹಣ ಮತ್ತಿತರ ಆಮಿಷ ಒಡ್ಡಿದವನು ಮುಂದೆ ಜನಕಲ್ಯಾಣದ ಮತ್ತು ಅಭಿವೃದ್ಧಿಯ ಕಾರ್ಯಗಳಿಗೆ ಮುಂದಾಗುವ ಬದಲು, ತನ್ನ ಮತ್ತು ತನ್ನ ಕುಟುಂಬಿಕರ ಏಳಿಗೆಗೇ ಒತ್ತುನೀಡುವ ಸಾಧ್ಯತೆ ಇರುತ್ತದೆ.
ಸ್ವಾರ್ಥಸಾಧನೆಯೇ ಇಂಥವರ ಮಂತ್ರವಾಗಿ ಬಿಡುವ ಅಪಾಯವೂ ಇರುತ್ತದೆ. ಆದ್ದರಿಂದ, ನಾವು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಜಾತಿಯ ಸೆಳೆತಕ್ಕೆ ಸಿಲುಕಿ ಅದಕ್ಷರನ್ನು ಚುನಾಯಿಸದಿರೋಣ. ಇನ್ನು ಕೆಲವರು, ಮತದಾನ ಎಂಬುದು ಒಂದು ಅತ್ಯಂತ ಪವಿತ್ರ ಕರ್ತವ್ಯ ಹಾಗೂ ಕಾರ್ಯಭಾರ ಎಂಬುದನ್ನೇ ಮರೆತು ಮತದಾನ ದಿಂದ ವಿಮುಖರಾಗುವುದಿದೆ. ಅಂದು ದಕ್ಕುವ ರಜೆಯನ್ನು ದುರ್ಬಳಕೆ ಮಾಡಿಕೊಂಡು ಕುಟುಂಬ ಸಮೇತ ವಿಹಾರಕ್ಕೆ ತೆರಳು ವುದಿದೆ. ಇಂಥ ನಡೆಯು ಅಪ್ಪಟ ಹೊಣೆಗೇಡಿತನದ ಪರಮಾವಧಿ ಎನಿಸಿಕೊಳ್ಳುತ್ತದೆ ಎನ್ನದೆ ವಿಧಿಯಿಲ್ಲ.
ಮತದಾನದಂಥ ಜವಾಬ್ದಾರಿಯಿಂದ ನುಣುಚಿಕೊಳ್ಳುವವರಿಗೆ ನಮ್ಮ ಆಳುಗ ವ್ಯವಸ್ಥೆಯನ್ನು ಟೀಕಿಸುವ ಅಥವಾ ಪ್ರಶ್ನಿಸುವ ಯಾವ ಹಕ್ಕೂ ಇರುವುದಿಲ್ಲ ಎಂಬುದನ್ನು ಮರೆಯದಿರೋಣ.
(ಲೇಖಕರು ಹವ್ಯಾಸಿ ಬರಹಗಾರರು)