ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಭ್ಯರ್ಥಿ ವಿ.ಸೋಮಣ್ಣ ಬುಧವಾರ ನಾಮಪತ್ರ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಜನಾರ್ಧನ ರೆಡ್ಡಿ, ಸಂಸದ ಜಿ.ಎಸ್.ಬಸವರಾಜು ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ನಗರದ ಬಿ.ಎಚ್.ರಸ್ತೆಯ ವಿನಾಯಕ ನಗರದ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ವಿ.ಸೋಮಣ್ಣ ಹಾಗೂ ಬಿಜೆಪಿ, ಜೆಡಿಎಸ್ ನಾಯಕರು ನಂತರ ಎರಡೂ ಪಕ್ಷಗಳ ಬೆಂಬಲಿಗರು ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಉದ್ದಕ್ಕೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷಗಳ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಎರಡೂ ಪಕ್ಷಗಳ ಬೆಂಬಲಿಗರು ಸಾಗಿಬಂದರು.
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸೋಮಣ್ಣನವರ ನಾಮಪತ್ರ ಸಲ್ಲಿಕೆಗೆ ಎರಡೂ ಪಕ್ಷಗಳ ಇಷ್ಟೊಂದು ಜನ ಸೇರಿರುವುದು ದೊಡ್ಡ ದಾಖಲೆ, ಇದು ಸೋಮಣ್ಣ ಅವರ ಗೆಲುವಿನ ಮುನ್ಸೂಚನೆ, ಸೋಮಣ್ಣ ಎರಡು ಲಕ್ಷ ಮತಗಳ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡುವ ಆರು ಸಾವಿರ ಜತೆಗೆ ನಾವು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಸಾವಿರ ಸೇರಿಸಿ ಹತ್ತು ಸಾವಿರ ರೈತರ ಬ್ಯಾಂಕ್ ಅಕೌಂಟಿಗೆ ಹಾಕುತ್ತಿದ್ದೆವು. ಈಗಿನ ಸಿದ್ದರಾ ಮಯ್ಯ ಸರ್ಕಾರ ಆ ಹಣ ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ವಿ.ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರದ ಎರಡೂ ಪಕ್ಷದ ಜನ ಅಭೂತಪೂರ್ವವಾಗಿ ಬೆಂಬಲ ನೀಡಿದ್ದೀರಿ, ಇಷ್ಟು ಜನ ಸೇರಿರುವುದು ಐತಿಹಾಸಿಕ ದಾಖಲೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗೆ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದವರು ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿವುದು ಬಿಟ್ಟರೆ ಜನರ ಸಂಕಷ್ಟ ನಿವಾರಣೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಮಂಡ್ಯದಿಂದ ತಾವು ಸ್ಪರ್ಧೆ ಮಾಡಿದ್ದು, ತಾವೂ ಸೋಮಣ್ಣ ಜತೆಯಲ್ಲಿ ಈ ಬಾರಿ ಲೋಕಸಭೆಯನ್ನು ಪ್ರವೇಶ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಾವಿಬ್ಬರೂ ಸೇರಿ ಸೇರಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಿ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಪ್ರಯತ್ನ ಮಾಡುತ್ತೇವೆ, ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಟ 16,500 ರುಪಾಯಿ ಬೆಂಬಲ ಬೆಲೆ ಕೊಡಿಸುತ್ತೇವೆ. ಈ ಚುನಾವಣೆ ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ. ಇದು ಜಾತಿಯ ಚುನಾವಣೆ ಅಲ್ಲ, ಎಲ್ಲಾ ಜಾತಿಯವರೂ ಸೋಮಣ್ಣ ಅವರಿಗೆ ಮತ ನೀಡಿ ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯದಲ್ಲಿ ಬರಗಾಲ ಬರುತ್ತದೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೊದಲ ಕ್ಯಾಬಿನೆಟ್ ಸಭೆ ನಡೆಸಿ ಹೊರಬರುತ್ತಿದ್ದಂತೆ ಮಳೆಯಾಯಿತು. ಕಾಂಗ್ರೆಸ್ ಬಂದರೆ ಬರ, ಬಿಜೆಪಿ ಅಧಿಕಾರಕ್ಕೆ ಮಳೆ ಎಂದರು.
ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ದೇಶದ ಇವತ್ತಿನ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ಮುನ್ನಡೆಸಲು ಯೋಗ್ಯ ನಾಯಕ ಬೇಕು, ಭವಿಷ್ಯದ ಜನರಿಗೆ ಕನಸಿನ ಭಾರತ ನಿರ್ಮಾಣ ಮಾಡಬೇಕು ಎಂಬ ದೂರಾಲೋಚನೆಯಿಂದ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವಾರು ನಾಯಕರು ಮೋದಿರವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಚಿಂತನೆ ಮಾಡಿ ಈ ಚುನಾವಣೆಗೆ ಸಜ್ಜಾಗಿದ್ದಾರೆ. ಇದೇ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಈ ಚುನಾವಣೆಯ ಗೆಲುವಿನೊಂದಿಗೆ ರಾಜ್ಯದಲೂ ಹೊಸ ಶಕೆ ಆರಂಭವಾಗಲಿದೆ. ಇದೇ ಏಪ್ರಿಲ್ ತಿಂಗಳ 26ರಂದು ನಡೆಯುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.
ನಾಮಪತ್ರ ಸಲ್ಲಿಕೆ ವೇಳೆ
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಸಂಸದ ಜಿ.ಎಸ್.ಬಸವ ರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್ಗೌಡ, ಎಂ.ಟಿ.ಕೃಷ್ಣಪ್ಪ, ಸುರೇಶ್ಬಾಬು, ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ, ಮಾಜಿ ಸಚಿವರಾದ ಸೊಗಡು ಶಿವಣ್ಣ, ಬಿ.ಸಿನಾಗೇಶ್, ಮಾಜಿ ಶಾಸಕರಾದ ಎಂ.ಡಿ.ಲಕ್ಷಿö್ಮÃನಾರಾಯಣ, ಸುಧಾಕರಲಾಲ್ ಸೇರಿದಂತೆ ಬಿಜೆಪಿ, ಜೆಡಿಎಸ್ನ ಹಲವಾರು ನಾಯಕರು ಭಾಗವಹಿಸಿದ್ದರು.