Friday, 22nd November 2024

ಭೂಮಿಯ ಮೇಲಿರುವ ದೇಗುಲಗಳಿಗಿಂತ ಹೆಚ್ಚು ದೇಗುಲಗಳು ಬಾಲಿಯಲ್ಲಿವೆ !

ಇದೇ ಅಂತರಂಗ ಸುದ್ದಿ

vbhat@me.com

ಇಂಡೋನೇಷಿಯಾ ಒಂದು ದೇಶವಲ್ಲ. ದ್ವೀಪಗಳ ಸಮೂಹ (Archipelago). ಹಾಗೆಂದು ಹೇಳುವುದನ್ನು ಕೇಳಿರಬಹುದು. ಯಾವುದೇ ದೇಶ ಒಂದು ನಿರ್ದಿಷ್ಟ ಗಡಿಭಾಗವನ್ನು ಹೊಂದಿರುವ ಭೂ ಪ್ರದೇಶವಾಗಿರುವುದು ಸಹಜ. ಆದರೆ ಇಂಡೋನೇಷಿ ಯಾ ಹಾಗಲ್ಲ. ಅದು ಸಣ್ಣ ಸಣ್ಣ ದ್ವೀಪಗಳನ್ನು ಹೊಂದಿರುವ ಒಂದು ವಿಶಾಲ ಸಮೂಹ. ಜಕಾರ್ತದಿಂದ ಕಾಲಬಹಿ ದ್ವೀಪದ ತನಕ ಇಂಡೋನೇಷಿಯಾ ವಿಸ್ತರಿಸಿಕೊಂಡಿದೆ.

ಆಗ್ನೇಯ ಏಷ್ಯಾ ದೇಶಗಳಲ್ಲಿ ಇಂಡೋನೇಷಿಯಾ ಅತ್ಯಂತ ದೊಡ್ಡ ದೇಶ. ಆ ದೇಶದ ಪೂರ್ವ ತುದಿಯಿಂದ ಪಶ್ಚಿಮದ ತುದಿಯ ನಡುವಿನ ಅಂತರ ೫,೧೦೦ಕಿಮೀ. (ಗೊತ್ತಿರಲಿ, ಭಾರತದ ಕನ್ಯಾಕುಮಾರಿಯಿಂದ ಕಾಶ್ಮೀರದ ನಡುವಿನ ಅಂತರ ೩,೨೧೪ ಕಿಮೀ) ಹಾಗೂ ಉತ್ತರದಿಂದ ದಕ್ಷಿಣಕ್ಕೆ ೧,೭೬೦ ಕಿಮೀ ಅಂತರ. ಇಂಡೋನೇಷಿಯಾದ ರಾಜಧಾನಿ ಜಕಾರ್ತದಿಂದ ಮೆರೌಕೆಗೆ, ಗರುಡಾ ಇಂಡೋನೇಷಿಯಾ ವಿಮಾನದಲ್ಲಿ ಮಕ್ಕಸರ್ ಮತ್ತು ಜಯಪುರ ಮಾರ್ಗವಾಗಿ ಪ್ರಯಾಣಿಸಲು ಬರೋಬ್ಬರಿ ಒಂಬತ್ತು ಗಂಟೆ (ಎರಡು ಸ್ಟಾಪುಗಳು) ಬೇಕು.

ಇಂಡೋನೇಷಿಯಾದಲ್ಲಿ ಸುಮಾರು ಹದಿನೆಂಟು ಸಾವಿರ ದ್ವೀಪಗಳಿವೆ. ಆ ಪೈಕಿ ಮನುಷ್ಯರು ವಾಸವಾಗಿರುವುದು ಆರು ಸಾವಿರ ದ್ವೀಪಗಳಲ್ಲಿ ಮಾತ್ರ. ಆ ಪೈಕಿ ಬಾಲಿಯೂ ಒಂದು. ಇಂಡೋನೇಷಿಯಾದಲ್ಲಿ ಹದಿನೆಂಟು ಸಾವಿರ ದ್ವೀಪಗಳಿದ್ದರೂ, ಬಾಲಿಯೇ ವಿಭಿನ್ನ. ಉಳಿದ ಪ್ರದೇಶಗಳಲ್ಲಿರುವ ಭಾಷೆ, ಸಂಸ್ಕೃತಿ, ಸಂಪ್ರದಾಯಗಳಿಗೂ ಬಾಲಿಯುದಕ್ಕೂ ಸಾಕಷ್ಟು ವ್ಯತ್ಯಾಸ.

ಮೇಲ್ನೋಟಕ್ಕೆ ಬಾಲಿಯೇ ಪ್ರತ್ಯೇಕ ದೇಶವಿದ್ದಿರಬಹುದು ಎಂಬ ಸಂದೇಹ ಬಂದರೆ ಆಶ್ಚರ್ಯವಿಲ್ಲ. ಬಾಲಿಯ ಸಂಸ್ಕೃತಿ,
ಇತಿಹಾಸ, ಸಂಪ್ರದಾಯ, ಜನಜೀವನ, ಜೀವನ ಪದ್ಧತಿ ಅದನ್ನು ಇಂಡೋನೇಷಿಯಾದ ಉಳಿದ ಭಾಗಗಳಿಂದ ಪ್ರತ್ಯೇಕಿಸಿದೆ. ಬಾಲಿಯಲ್ಲಿ ಓಡಾಡುವಾಗ, ಪ್ರತ್ಯೇಕ ದೇಶದಲ್ಲಿದ್ದೇವೇನೋ ಎಂಬ ಭಾವನೆ ಬರಲು ಇದೇ ಕಾರಣ. ಬಾಲಿ ಕೇವಲ ದ್ವೀಪವಷ್ಟೇ ಅಲ್ಲ, ಅದೊಂದು ಪ್ರಾಂತ (ಪ್ರೊವಿ) ಕೂಡ. ಜತೆಗೆ ಬಾಲಿ ನಾಲ್ಕು ಪ್ರಾಂತಗಳನ್ನು ಒಳಗೊಂಡಿದೆ. ಆ ಪೈಕಿ ಬಾಲಿ ಮುಖ್ಯ ಭೂಭಾಗ (Mainland) ವನ್ನು ಹೊಂದಿದ್ದರೆ, ಉಳಿದ ಮೂರು ದ್ವೀಪ ಪ್ರಾಂತಗಳೆಂದರೆ – ನುಸ ಸನಿಂಗನ್, ನುಸ ಲೆಂಬೋಂಗನ್ ಮತ್ತು ನುಸ ಪೆನಿಡ. ಅಂದರೆ ಈ ಮೂರು ದ್ವೀಪಗಳು ಬಾಲಿಯ ಅವಿಭಾಜ್ಯ ಅಂಗಗಳೇ. ಆದರೆ ಈ ಮೂರು ದ್ವೀಪಗಳು ಬಾಲಿ ಗಿಂತ ಸಂಪೂರ್ಣ ವಿಭಿನ್ನ.

ಬಾಲಿಯ ಅನನ್ಯ ಸ್ವರೂಪ ಎದ್ದು ಕಾಣುವುದೇ ಇಲ್ಲಿ. ಸ್ಥಳೀಯ ಭಾಷೆಯಲ್ಲಿ ಬಾಲಿ ಅಂದ್ರೆ ತ್ಯಾಗ ಎಂದರ್ಥ. ಹತ್ತನೇ ಶತಮಾ ನದ ರಾಜಶ್ರೀ ಕೇಸರಿವರ್ಮ ಆ ದ್ವೀಪಕ್ಕೆ ಬಾಳಿ ಎಂದು ನಾಮಕರಣ ಮಾಡಿದ. ಬೌದ್ಧ ಧರ್ಮದ ಸಿದ್ಧಾಂತದ ಮೇಲೆ ಸರಕಾರ ರಚಿಸಿದವನೂ ಅವನೇ. ಬೌದ್ಧ ಧರ್ಮ ನಂತರದ ದಿನಗಳಲ್ಲಿ ಹಿಂದೂ ಧರ್ಮವಾಗಿ ರೂಪಾಂತರವಾಗಿದ್ದು ಬೇರೆ ಕತೆ.

ಇಂಡೋನೇಷಿಯಾದ ಎಲ್ಲ ದ್ವೀಪ ಅಥವಾ ಪ್ರಾಂತಗಳ ಪೈಕಿ ಬಾಲಿಯಲ್ಲಿ ಬಹುಸಂಖ್ಯಾತ ಹಿಂದೂಗಳದೇ ಪಾರುಪತ್ಯ. ಬಾಲಿಯ ಹಿಂದುತ್ವಕ್ಕೆ ಭಾರತದ ಹಿಂದೂ ಧರ್ಮವೇ ಪ್ರೇರಣೆ ಮತ್ತು ಅಡಿಪಾಯ. ಆದರೆ ಆಚರಣೆಯಲ್ಲಿ ತನ್ನತನವನ್ನು
ಉಳಿಸಿಕೊಂಡಿದೆ. ಇಂಡೋನೇಷಿಯಾದ ಉಳಿದ ಭಾಗಗಳಲ್ಲಿ ಇಸ್ಲಾಂ ಆಚರಣೆಯಲ್ಲಿದ್ದರೆ, ಬಾಲಿಯಲ್ಲಿ ಮಾತ್ರ ಹಿಂದೂ ಧರ್ಮಿಯರದೇ ಪ್ರಾಬಲ್ಯ. ಬಾಲಿಯ ಜನ ತಮ್ಮ ಪೂರ್ವಿಕರನ್ನು ದೇವಸಮಾನರೆಂದು ಭಾವಿಸಿದ್ದಾರೆ.

ಪ್ರತಿದಿನವೂ ತಮ್ಮ ಪೂರ್ವಿಕರಿಗೆ ತರ್ಪಣ ನೀಡುತ್ತಾರೆ. ಬಾಲಿಯಲ್ಲಿ ಪ್ರತಿ ಮನೆಯೂ ದೇವಾಲಯ. ಮೂರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮನೆ ಕಟ್ಟಿದ್ದರೆ, ಸಾವಿರದ ಇನ್ನೂರು ಅಥವಾ ಸಾವಿರದ ಐದುನೂರು ಚದರ ಅಡಿ ಜಾಗ ದೇವಾಲಯಕ್ಕೇ ಮೀಸಲು. ಎಲ್ಲರ ಮನೆಗಳ ಮುಂದೆಯೂ ದೇವಾಲಯ. ಮನೆ ಕಟ್ಟುವಾಗ, ಕಂಪೌಂಡಿನೊಳಗೆ ದೇಗುಲಕ್ಕೂ ಜಾಗವನ್ನು ನಿಗದಿ ಪಡಿಸಿಯೇ ಮನೆ ನಿರ್ಮಿಸುತ್ತಾರೆ. ಅಲ್ಲಿ ಮನೆ ಕಟ್ಟುವುದೆಂದರೆ ಜತೆಯಲ್ಲಿ ದೇವಸ್ಥಾನವನ್ನು ಕಟ್ಟುವುದು ಎಂದೇ ಅರ್ಥ.

ನಮ್ಮಲ್ಲಿ ಮನೆಯಲ್ಲಿ ದೇವರಗುಡಿ ಅಥವಾ ಪೂಜಾ ರೂಮ್ ಇದ್ದರೆ, ಬಾಲಿಯಲ್ಲಿ ಮನೆಯಷ್ಟೇ ದೊಡ್ಡ ದೇವಸ್ಥಾನವನ್ನು
ಕಟ್ಟುತ್ತಾರೆ. ದೇವಸ್ಥಾನವನ್ನು ಪ್ರವೇಶಿಸಿಯೇ ಮನೆಯೊಳಗೇ ಕಾಲಿಡಬೇಕು. ಒಂದು ಊರನ್ನು ಬಳಸಿ ಪ್ರಯಾಣ ಮಾಡುವಾಗ
ರಸ್ತೆಯ ಇಕ್ಕೆಲಗಳಲ್ಲಿ ದೇವಸ್ಥಾನಗಳೇ ಎದ್ದು ಕಾಣುತ್ತವೆ. ಬಹುತೇಕ ಮಂದಿ ತಮ್ಮ ಮನೆಯ ದೇವಾಲಯದಲ್ಲಿ ತ್ರಿಕಾಲವೂ ಪೂಜೆ ಸಲ್ಲಿಸುತ್ತಾರೆ, ಪೂರ್ವಿಕರಿಗೆ ತರ್ಪಣ ನೀಡುತ್ತಾರೆ. ಒಬ್ಬ ವ್ಯಕ್ತಿಯ ಗಳಿಕೆಯ ಶೇ.೪೦ರಷ್ಟು ಹಣ ದೇವಾಲಯ ನಿರ್ವಹಣೆ, ಪೂಜೆ ಹಾಗೂ ಇನ್ನಿತರ ಕೈಂಕರ್ಯಗಳಿಗೆ ವಿನಿಯೋಗವಾಗುತ್ತವೆ. ಈ ಕಾರಣದಿಂದ ಬಾಲಿಯನ್ನು ‘ದೇವಭೂಮಿ’, ’ಸಾವಿರ ದೇಗುಲಗಳ ದ್ವೀಪ’ ಅಥವಾ ‘ದೇವರ ನಾಡು’ ಎಂದು ಕರೆಯುತ್ತಾರೆ.

ಒಂದು ಅಂದಾಜಿನ ಪ್ರಕಾರ, ಭೂಮಿಯ ಮೇಲೆ ಇರುವ ದೇವಾಲಯಗಳನ್ನು ಒಂದು ತಕ್ಕಡಿಯಲ್ಲಿ ಮತ್ತು ಬಾಲಿಯಲ್ಲಿರುವ ದೇವಾಲಯಗಳನ್ನು ಇನ್ನೊಂದು ತಕ್ಕಡಿಯಲ್ಲಿಟ್ಟರೆ, ಬಾಲಿಯಲ್ಲಿರುವ ದೇವಾಲಯಗಳೇ ಜಾಸ್ತಿ ತೂಗುತ್ತದೆ. ಬಾಲಿಯಲ್ಲಿ ಇಲ್ಲದ ಹಿಂದೂ ದೇವ-ದೇವತೆಗಳೇ ಇಲ್ಲ. ಬಾಲಿಯ ಸಮುದ್ರದ ನೀರು ನೈಸರ್ಗಿಕ ರಹಸ್ಯಗಳಂದು. ಅಲ್ಲಿನ ಸಮುದ್ರದಲ್ಲಿ ಮೂರು ಸಾವಿರ ವಿವಿಧ ಮೀನುಗಳಿವೆ. ಇಷ್ಟೊಂದು ವೈವಿಧ್ಯಮಯ ಮತ್ಸ್ಯ ಸಂಕುಲ ಪ್ರಪಂಚದ ಇಲ್ಲ. ಗ್ರೇಟ್ ಬ್ಯಾರಿಯರ್ ರೀ-ನಲ್ಲಿ ಸಹ ಇಷ್ಟೊಂದು ವಿಧಗಳ ಮೀನುಗಳಿಲ್ಲ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬಾಲಿಯನ್ನು ಜಪಾನ್ ಆಕ್ರಮಿಸಿಕೊಂಡಿತ್ತು. ೧೯೪೬ ರಲ್ಲಿ ಡಚ್ಚರು ಮತ್ತು ಪಶ್ಚಿಮ
ಬಾಲಿಯಲ್ಲಿರುವ ಇಂಡೋನೇಷಿಯಾದ ಕ್ರಾಂತಿಕಾರಿ ಪಡೆಗಳ ನಡುವೆ ಕದನ ನಡೆಯಿತು. ಡಚ್‌ರು ಕಾಲ್ಕಿತ್ತ ನಂತರ, ೧೯೫೦ ರಲ್ಲಿ ಬಾಲಿ, ಇಂಡೋನೇಷಿಯಾ ಗಣರಾಜ್ಯದೊಂದಿಗೆ ಸೇರಿಕೊಂಡಿತು. ಬಾಲಿಯ ಶೇ.೮೦ರಷ್ಟು ಆರ್ಥಿಕತೆ ಪ್ರವಾಸೋದ್ಯಮ ವನ್ನು ಅವಲಂಬಿಸಿದೆ. ಹತ್ತು ಡಾಲರ್ ಪೈಕಿ ಎಂಟು ಡಾಲರ್ ವಿದೇಶಿ ಪ್ರವಾಸಿಗರಿಂದಲೇ ಬರುತ್ತವೆ. ಈ ಕಾರಣದಿಂದ ಬಾಲಿ ಯಲ್ಲಿ ಪ್ರವಾಸಿಗನೇ ರಾಜ.

ಬಾಲಿನೀಯರು ತಮ್ಮ ಊರಿಗೆ ಬರುವ ಆಗಮಿಸುವ ಪ್ರವಾಸಿಗರನ್ನು ದೇವರಂತೆ ಸತ್ಕರಿಸುತ್ತಾರೆ, ನೋಡುತ್ತಾರೆ. ಯಾವ
ಕಾರಣಕ್ಕೂ ವಿದೇಶೀಯರೊಂದಿಗೆ ಜಗಳ ವಾಡುವುದಿಲ್ಲ, ಮೋಸ ಮಾಡುವುದಿಲ್ಲ. ಹೊರಗಿನ ಜನರ ವಸ್ತುಗಳನ್ನು ಕಳವು ಮಾಡುವುದಿಲ್ಲ. ಒಂದು ವೇಳೆ ಬಾಲಿಗೆ ವಿದೇಶಿ ಪ್ರವಾಸಿಗರು ಬರುವುದನ್ನು ನಿಲ್ಲಿಸಿದರೆ, ಬಾಲಿಗೆ ಬಾಳಿಲ್ಲ.

ಪ್ರವಾಸಿಯೇ ಮೊದಲ ಪ್ರಜೆ
ಹಿಂದೂ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದರ ಜತೆಗೆ ಬಾಲಿ ಸಾಕಷ್ಟು ಪರಿವರ್ತನೆಯನ್ನು ಕಂಡಿದೆ. ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಪ್ರವಾಸೋದ್ಯಮ ಅನಿವಾರ್ಯ ಎಂಬ ಸಂಗತಿಯನ್ನು ಮನಗಂಡಿದೆ. ‘ಪ್ರವಾಸಿಯೇ ಮೊದಲ ಪ್ರಜೆ’ ಎಂಬ ಘೋಷವಾಕ್ಯವನ್ನು ಜನಜೀವನದಲ್ಲಿ ಅಳವಡಿಸಿಕೊಂಡಿದೆ. ವಿದೇಶಿ ಪ್ರವಾಸಿಗರು ರಸ್ತೆ ದಾಟುವಾಗ ವಾಹನ ಸಂಚಾರ ಸ್ಥಗಿತ ವಾಗುತ್ತದೆ. ಪ್ರವಾಸಿಗರಿಗೆ ಪ್ರಥಮ ಆದ್ಯತೆ. ವಾಹನ ಚಾಲಕರು ಪ್ರವಾಸಿಗರನ್ನು ಗುರಾಯಿಸಿ ನೋಡುವುದಿಲ್ಲ. ಬಾಲಿಯಲ್ಲಿ ಪ್ರವಾಸ ಮಾಡುವಾಗ ಭಾಷೆಯ ತೊಡಕಾಗುವುದಿಲ್ಲ. ಬಹುತೇಕ ಹೆಸರುಗಳು ಸಂಸ್ಕೃತ ಅಥವಾ ಹಿಂದೂ ಮೂಲದವು. ಬಾಲಿ ಜನ ಸಾಮಾನ್ಯವಾಗಿ ಮೂರು ಭಾಷೆಗಳನ್ನು -ಬಹಾಸ ಇಂಡೋನೇಷಿಯಾ, ಬಾಸ ಬಾಲಿ ಮತ್ತು ಇಂಗ್ಲಿಷ್ – ಮಾತಾಡುತ್ತಾರೆ.

ಇಂಡೋನೇಷಿಯಾದಲ್ಲಿ ಹತ್ತು ಸಾವಿರಕ್ಕೂ ಅಧಿಕ ಭಾಷೆಗಳಿವೆಯಂತೆ. ಜಗತ್ತಿನಲ್ಲಿಯೇ ಭಾಷಾ ವ್ಯತ್ಯಾಸ ಅಧಿಕವಾಗಿರುವ ದೇಶಗಳಲ್ಲಿ ಇಂಡೋನೇಷಿಯಾಕ್ಕೆ ಅಗ್ರಸ್ಥಾನ. ಜಗತ್ತಿನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಅಂದ್ರೆ ಬಾಲಿ. ನೂರರಲ್ಲಿ ನಲವತ್ತೆರಡು ಮಂದಿ ತಾವು ಜೀವನದಲ್ಲಿ ಒಮ್ಮೆಯಾದರೂ ಬಾಲಿಯನ್ನು ನೋಡಬೇಕು ಎಂದು ಕನಸು ಕಾಣುತ್ತಾರಂತೆ. ಬಾಲಿಯಲ್ಲಿ ಐವತ್ತು ಲಕ್ಷ ಜನ ವಾಸವಾಗಿದ್ದರೆ, ಅಲ್ಲಿಗೆ ಪ್ರತಿ ವರ್ಷ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಎಪ್ಪತ್ತು ಲಕ್ಷ. ವರ್ಷದ ಯಾವುದೇ ಸಂದರ್ಭದಲ್ಲಿ ಬಾಲಿಯಲ್ಲಿ ಸ್ಥಳೀಯರಿಗಿಂತ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಬಾಲಿ ಎಲ್ಲ ರೀತಿಯಿಂದಲೂ ಪ್ರವಾಸಿಸ್ನೇಹಿ.

ಬಾಲಿ ಜನರ ಹೆಸರಿನ ರಹಸ್ಯ
ಮೊನ್ನೆ ಇಂಡೋನೇಷಿಯಾದ ಪ್ರಮುಖ ದ್ವೀಪಗಳಂದಾದ ಬಾಲಿಯಲ್ಲಿzಗ, ನಮ್ಮ ಗೈಡ್ ತನ್ನ ದೇಶದಲ್ಲಿ ಜನರಿಗೆ ಯಾವ ರೀತಿ ಹೆಸರಿಡುತ್ತಾರೆ ಎಂಬುದನ್ನು ವಿವರಿಸಿದಾಗ, ಮೊದಲಿಗೆ ಅರ್ಥವಾಗಲಿಲ್ಲ. ಬಾಲಿನೀಸ್ ಜನರು ತಮ್ಮ ಮಕ್ಕಳಿಗೆ ಅವರು ಜನಿಸಿದ ಕ್ರಮವನ್ನು ಅವಲಂಬಿಸಿ ಹೆಸರಿಸುತ್ತಾರೆ ಮತ್ತು ಹೆಸರುಗಳು ಗಂಡು ಮತ್ತು ಹೆಣ್ಣು ಇಬ್ಬರಿಗೂ ಒಂದೇ ಆಗಿರುತ್ತವೆ ಎಂದಾಗ, ‘ಸ್ವಲ್ಪ ವಿವರಿಸಿ, ಅರ್ಥವಾಗುವಂತೆ ಹೇಳಿ’ ಎಂದು ಹೇಳಿದೆ.

ಚೊಚ್ಚಲ ಮಗುವಿಗೆ ವಯನ್, ಪುಟು ಅಥವಾ ಗೆಡೆ ಎಂದು ಹೆಸರಿಡುತ್ತಾರೆ, ಎರಡನೆಯದಕ್ಕೆ ಮಡೆ ಅಥವಾ ಕಡೆಕ್ ಎಂದು ನಾಮಕರಣ ಮಾಡುತ್ತಾರೆ, ಮೂರನೇ ಮಗುವಿಗೆ ನ್ಯೋಮನ್ ಅಥವಾ ಕೊಮಾಂಗ್ ಎಂದು ಹೆಸರಿಡುತ್ತಾರೆ ಮತ್ತು ನಾಲ್ಕನೆಯ
ಮಗುವಿಗೆ ಕೆಟುಟ್ ಎಂದು ನಾಮಕರಣ ಮಾಡುತ್ತಾರೆ ಎಂದು ತಿಳಿಸಿದ. ಒಂದು ವೇಳೆ ಒಂದು ಕುಟುಂಬದಲ್ಲಿ ನಾಲ್ಕಕ್ಕಿಂತ ಹೆಚ್ಚು ಮಕ್ಕಳು ಜನಿಸಿದರೆ, ಐದನೇ ಮಗುವಿಗೆ ‘ವಯನ್ ಬಾಲಿಕ್’ (ಮತ್ತೊಬ್ಬ ವಯನ್) ಎಂದು ಹೆಸರಿಡುತ್ತಾರೆ.

ನೀವು ಭೇಟಿಯಾಗುವ ಜನರ ಹೆಸರಿನಲ್ಲಿ ಈ ನಾಲ್ಕು ಹೆಸರುಗಳು ಇಲ್ಲದಿದ್ದರೆ? ಅಂಥವರು ತಮ್ಮ ಜಾತಿ ಅಥವಾ ಕುಲವನ್ನು ಸೂಚಿಸುವ ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ. ಉದಾಹರಣೆಗೆ, ವೈಶ್ಯ (ವ್ಯಾಪಾರಿಗಳು) ಜಾತಿಯ ಜನರನ್ನು ಗುಸ್ತಿ, ದೇವ ಅಥವಾ ದೇಶಕ್ ಎಂದು ಹೆಸರಿಟ್ಟುಕೊಂಡಿರುತ್ತಾರೆ. ಕ್ಷತ್ರಿಯ (ರಾಜರು ಮತ್ತು ಯೋಧರು) ಜಾತಿಯ ಜನರನ್ನು ಹೆಚ್ಚಾಗಿ ನುರಾಹ, ಅನಕ್ ಅಗುಂಗ್ ಅಥವಾ ತಕೋಡಾರ್ ಎಂದು ಕರೆಯಲಾಗುತ್ತದೆ ಮತ್ತು ಪುರೋಹಿತ ವರ್ಗದ ಜನರನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಪುರುಷರಿಗೆ ಇದಾ ಬಾಗಸ್ ಅಥವಾ ಮಹಿಳೆಯರಿಗೆ ಇದಾ ಆಯು ಎಂದು ಹೆಸರಿಸಲಾಗುತ್ತದೆ. ಒಬ್ಬ ವ್ಯಕ್ತಿ, ಸಾಮಾನ್ಯವಾಗಿ ಒಬ್ಬ ಮಹಿಳೆ, ಉನ್ನತ ಜಾತಿಯವರನ್ನು ಮದುವೆಯಾಗಿದ್ದರೆ, ಅವರ ಹೆಸರಿನಲ್ಲಿ ‘ಜೆರೋ’ ಎಂಬ ಹೆಸರಿರುತ್ತದೆ. ಆದರೂ, ಈ ಯಾವುದೇ ವರ್ಗಗಳಿಗೆ ಹೊಂದಿಕೆಯಾಗದ ಹೆಸರುಗಳುಳ್ಳ ಜನ ನಿಮಗೆ ಸಿಗಬಹುದು. ಅಂಥವರು ತಮ್ಮ ಅಡ್ಡಹೆಸರನ್ನು ಬೇರೆಯದನ್ನೇ ಇಟ್ಟುಕೊಂಡಿರುತ್ತಾರೆ.

ಅನೇಕ ವಯನ್ನರು ಮತ್ತು ಮೇಡೆಸ್‌ಗಳು, ಉಳಿದವರಿಂದ ಪ್ರತ್ಯೇಕಿಸಲು ಬೇರೆಯ ಅಡ್ಡಹೆಸರುಗಳನ್ನು ಇಟ್ಟುಕೊಳ್ಳುವು ದುಂಟು. ಕೆಲವರು ತಮ್ಮ ನಿಕ್ ನೇಮ್‌ಗಳನ್ನು ಹೆಸರಿನ ಮಧ್ಯೆ ತೂರಿಸುವುದುಂಟು. ಮೇಡ್ ಗೆಮುಕ್ (ದಢೂತಿ ವಯನ್), ಕೆಟುಟ್ ಸಾಂತಿ (ಶಾಂತ ಸ್ವಭಾವದ ಕೆಟುಟ) ನಂಥ ಹೆಸರುಗಳು ಭೌತಿಕ ಗುಣಲಕ್ಷಣ ಗಳನ್ನು ಆಧರಿಸಿರಬಹುದು. ವಯನ್ ಜಾನ್ ಅಥವಾ ಮೇಡ್ ಲೆಗು (ಸೊಳ್ಳೆಗಳ ಹಾಗೆ ತೊಂದರೆಕೊಡುವ ಮೇಡ್) ನಂಥ ವಿಚಿತ್ರ ಹೆಸರುಗಳನ್ನೂ ಇಟ್ಟುಕೊಳ್ಳ ಬಹುದು.

ಬಾಲಿನೀಸ್ ಜನರು ತಮ್ಮ ಮಕ್ಕಳಿಗೆ ಸಕಾರಾತ್ಮಕ ಅರ್ಥವನ್ನು ಹೊಂದಿರುವ ಎರಡನೇ ಅಥವಾ ಮೂರನೇ ಹಿಂದೂ ಹೆಸರನ್ನು ಇಡುವ ಸಂಪ್ರದಾಯವಿದೆ. ಉದಾಹರಣೆಗೆ ಸೌರ್ದಿಕಾ, (ಇದರರ್ಥ ದಾರಿದೀಪ), ಸೆಟಿಯಾವನ್ (ನಿಷ್ಠಾವಂತಳು) ಅಥವಾ ದೇವಿ (ದೇವತೆ). ಕೆಲವೊಮ್ಮೆ ಬಾಲಿನೀಸ್ ಜನರು ಈ ಹಿಂದೂ ಹೆಸರನ್ನು ಸಂಕ್ಷಿಪ್ತಗೊಳಿಸುವುದುಂಟು. ಉದಾಹರಣೆಗೆ, ಬುಡಿಯಾಸಾ ಎಂದು ಕರೆಯುವ ಬದಲು ಬುಡಿ ಎಂದು ಕರೆಯಬಹುದು. ನುರಿಯಾಸಿಹ್ ಹೆಸರನ್ನು ನುರಿ ಎಂದು ಸಂಕ್ಷಿಪ್ತಗೊಳಿಸಬಹುದು. ವಿಡಿಯತರ್ ಎಂಬ ಹೆಸರನ್ನು ವಿಡಿ ಎನ್ನಬಹುದು.

ಸಂಪೂರ್ಣ ಹೆಸರನ್ನು ಬಳಸುವಾಗ, ಬಾಲಿನೀಸ್ ಜನ, ಲಿಂಗವನ್ನು ಸೂಚಿಸಲು ಪೂರ್ವಪ್ರತ್ಯಯವನ್ನು ಕೂಡ ಸೇರಿಸುತ್ತಾರೆ. ಪುರುಷರಿಗೆ ‘ಐ’ ಮತ್ತು ಮಹಿಳೆಯರಿಗೆ ‘ಎನ್‌ಐ’ ಸೇರಿಸುತ್ತಾರೆ. ಐ ವಯನ್ ಧರ್ಮ ಪುತ್ರ ಎಂಬ ಹೆಸರನ್ನು ಓದಿದರೆ, ಅವರು ಪುರುಷ ಮತ್ತು ಮನೆಯಲ್ಲಿ ಹುಟ್ಟಿದ ಮೊದಲ ಮಗ ಎಂದು ಅರ್ಥೈಸಿಕೊಳ್ಳಬಹುದು. ನಿ (ಎನ್‌ಐ) ಅನಕ್ ಅಗುಂಗ್ ರೈ ಹೆಸರನ್ನು ಓದಿದರೆ, ಆಕೆ ಕ್ಷತ್ರಿಯ ಜಾತಿಯ ಮಹಿಳೆ ಎಂದರ್ಥ.

ಮೊನ್ನೆ ನಾನು ಬಾಲಿಯಲ್ಲಿದ್ದಾಗ, ಅಲ್ಲಿನ ಸೆನೆಟರ್ ಡಾ.ಐ ಗುಸ್ತಿ ನುರಾಯ ಆರ್ಯ ವೇದಕರಣ ಅವರನ್ನು ಭೇಟಿಯಾಗಿದ್ದೆ.
ಅವರ ಹೆಸರಿನಲ್ಲಿರುವ ‘ಐ’ ಅವರ ಲಿಂಗವನ್ನು (ಪುರುಷ) ಪ್ರತಿನಿದಿಸಿದರೆ, ಗುಸ್ತಿ ಅವರ ಉದ್ಯೋಗವನ್ನು ಹೇಳುತ್ತದೆ. ನುರಾಯ (ಕ್ಷತ್ರಿಯ) ಅವರ ಜಾತಿಯನ್ನು ಪ್ರತಿನಿಧಿಸುತ್ತದೆ. ಆರ್ಯ ಮತ್ತು ವೇದಕರಣ ಅವರ ಹೆಸರು ಮತ್ತು ಕುಟುಂಬದ ಹೆಸರನ್ನು ಪ್ರತಿನಿಧಿಸುತ್ತವೆ.

ಇಷ್ಟಾಗಿಯೂ ಹೊರಗಿನವರಿಗೆ ಬಾಲಿನೀಸ್ ಜನರ ಹೆಸರುಗಳನ್ನೂ ಅರ್ಥ ಮಾಡಿಕೊಳ್ಳಲು ತುಸು ಸಮಯ ಬೇಕಾಬಹುದು. ಆದರೆ ಹೆಸರನ್ನು ಕೇಳಿದ ತಕ್ಷಣ ಅವರ ಲಿಂಗ, ಕುಟುಂಬದಲ್ಲಿ ಎಷ್ಟನೆಯವರು, ಯಾವ ಜಾತಿಗೆ ಸೇರಿದವರು, ಯಾವ ಉದ್ಯೋಗ ಮಾಡುತ್ತಿzರೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.

ಊಟ-ಉಪಾಹಾರ
ನೀವು ಯಾವುದೇ ದೇಶಕ್ಕೆ ಹೋಗಿ, ಆ ದೇಶ ಆಪ್ತವಾಗಬೇಕೆಂದರೆ ಊಟ-ಉಪಾಹಾರ ಸರಿ ಹೋಗಬೇಕು. ಹೊಟ್ಟೆ ಕೆಟ್ಟರೆ, ತಲೆಯೂ ಕೆಟ್ಟು ಹೋಗುತ್ತದೆ. ಇದು ಬಹುತೇಕ ಎಲ್ಲರ ಅಭಿಪ್ರಾಯ. ಹೊಟ್ಟೆ ಶಾಂತವಾಗಿದ್ದಷ್ಟೂ ಮನಸ್ಸೂ ಶಾಂತವಾಗಿರು ತ್ತದೆ. ಅದರಲ್ಲೂ ನಮ್ಮ ಆಹಾರ ಸಿಕ್ಕರೆ, ಆ ದೇಶದ ಬಗ್ಗೆ ಮೂಡುವ ಅಭಿಪ್ರಾಯವೇ ಬೇರೆ. ಇದ್ದಕ್ಕಿದ್ದಂತೆ ಆ ದೇಶ ‘ನಮ್ಮದು’ ಎನಿಸಿಬಿಡುತ್ತದೆ.

ಕರ್ನಾಟಕದಿಂದ ಹೋದ ಪ್ರವಾಸಿಗರಿಗೆ ಬಾಲಿಯಲ್ಲಿ ಊಟ-ಉಪಾಹಾರದ ಸಮಸ್ಯೆ ತಲೆದೋರುವುದಿಲ್ಲ. ಯಾವ ಊರಿಗೆ ಹೋದರೂ ಅನ್ನ- ಸಾಂಬಾರು ಲಭ್ಯ. ಕರ್ನಾಟಕದ ಉಡುಪಿ ಹೊಟೇಲುಗಳಿಗೂ ಕೊರತೆಯಿಲ್ಲ. ಸಸ್ಯಾಹಾರಿಗಳಿಗೂ ಯಾವ ಸಮಸ್ಯೆ ಇಲ್ಲ. ದಕ್ಷಿಣ ಭಾರ ಮತ್ತು ಉತ್ತರ ಭಾರತದ ಆಹಾರಗಳನ್ನು ಪೂರೈಸುವ ಸಾಕಷ್ಟು ಹೊಟೇಲುಗಳಿವೆ. ಉಬುದ್ ನಗರದಲ್ಲಿ ನಾವು ಎರಡು ಬಾರಿ ಒಂದೇ ಹೊಟೇಲ್ ಗೆ ಹೋಗಿದ್ದೆವು. ಅದರ ಹೆಸರು – ‘ಗಣೇಶ್ ಏಕ್ ಸಂಸ್ಕೃತಿ’. ಇನ್ನೊಂದು ಹೊಟೇಲ್ ಹೆಸರು – ಮಹಾಭೋಜನ್. ಇಡ್ಲಿ, ದೋಸೆ, ಉಪ್ಪಿಟ್ಟು, ಪೂರಿ ಸಹ ಎಲ್ಲ ಹೊಟೇಲುಗಳಲ್ಲಿ ಸಿಗುತ್ತವೆ. ಊಟಕ್ಕೆ ವ್ಯಂಜನವಾಗಿ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಚಟ್ನಿಪುಡಿ, ತೊಕ್ಕು, ಗುಂಗೂರ್ ಸಹ ಲಭ್ಯ. ಮುನ್ನೂರು ರುಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಬಹುದು.