Sunday, 24th November 2024

ರಾಜಕಾರಣಿಗಳ ಕಣ್ಣೀರಿಗೆ ಕಾರಣ- ಚುನಾವಣಾ ಕ್ರೈಸಿಸ್

ತುಂಟರಗಾಳಿ

ಸಿನಿಗನ್ನಡ

ಸೋಷಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ಪ್ರಚಾರ ಪ್ರಿಯರ ವರಸೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿನಿಮಾದವರನ್ನ ಬಳಸಿ ಕೊಂಡ್ರೆ ನಮ್ಮ ಹೆಸರು ಹೆಚ್ಚು ಜನರಿಗೆ ಗೊತ್ತಾಗುತ್ತೆ ಅನ್ನೋದು ಇವರ ಪ್ಲ್ಯಾನು. ಇತ್ತೀಚೆಗೆ ಸುದೀಪ್, ದರ್ಶನ್ ಅವರನ್ನು ಟೀಕಿಸುವ ಅಹೋರಾತ್ರ ಅವರಿಂದ ಹಿಡಿದು ಹಲವರು ರಾತ್ರೋರಾತ್ರಿ ಫೇಮಸ್ ಆಗೋ ಚಟ ಬೆಳೆಸಿಕೊಳ್ಳುತ್ತಿದ್ದಾರೆ.

ಅಂಥದ್ದೇ ಸೆಲ್ಫಿಶ್ ಕೆಲಸ ವನ್ನು ಈಗ ಸೆಲ ಡಿಕ್ಲೇರ್ಡ್ ಸಾಹಿತಿಯೊಬ್ಬ ಮಾಡಿದ್ದಾನೆ. ಈತ ಬರೆದ ಒಂದು ಪುಸ್ತಕ ಇತ್ತೀಚೆಗೆ ಸದ್ದಿಲ್ಲದೆ ಬಿಡುಗಡೆ ಆಗಿದೆ. ಆದರೆ ಬಿಡುಗಡೆ ಆದ ಮೇಲೂ ಯಾವ ಸದ್ದೂ ಮಾಡುತ್ತಿಲ್ಲ ಎಂಬ ಹತಾಶೆಯಲ್ಲಿ ಈತ ಈಗ ಕನ್ನಡ ಸಿನಿಮಾಗಳನ್ನು ಬಳಸಿಕೊಂಡಿದ್ದಾನೆ. ಹಾಗೆ ನೋಡಿದರೆ ಈತನಿಗೆ ಯಾವ ಸಿದ್ಧಾಂತವೂ ಇಲ್ಲ. ಮೋದಿಯಿಂದ ಹಿಡಿದು, ಮಧುಗಿರಿ ಮೋದಿವರೆಗೆ ಎಲ್ಲರನ್ನೂ ಹೀಗಳೆಯುತ್ತಾನೆ.

ರೈತರನ್ನು ವಿರೋಧಿಸುತ್ತಾನೆ. ಹೀಗೆ ಮಾಡಿದರೆ ಭಕ್ತರಾದರೂ ಬಂದು ನನಗೆ ಪ್ರಚಾರ ದಯಪಾಲಿಸುತ್ತಾರೆ ಎಂಬ ಆಸೆ ಈತನ ದ್ದಾಗಿತ್ತು. ಆದರೆ ಅವರ್ಯಾರೋ ಕ್ಯಾರೇ ಅನ್ನಲಿಲ್ಲ. ಕರೋನಾ ಕಾಲದಲ್ಲಿ ನಡೆದಿದ್ದ ಈತನ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಯಾವ ನಿಯಮಗಳನ್ನೂ ಪಾಲಿಸದ ಈತ ಈಗ ಕನ್ನಡ ಸಿನಿಮಾಗಳ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿದ್ದಾನೆ. ಅಂದಹಾಗೆ ಈತ ಆಕ್ಟ್ ೧೯೭೮ ಚಿತ್ರ ತಂಡ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿತು ಅನ್ನೋ ಕಾರಣಕ್ಕಾಗಿ ಅದೊಂದು ಕಳಪೆ ಚಿತ್ರ ಎಂದು ಬೊಂಬಡಾ ಬಜಾಯಿಸಿದ್ದ. ಈ ಮೂಲಕ ಯಾವನಿಗೂ ಅರ್ಥವಾಗದ ಹೆಸರಿರುವ ಈತನ ಪುಸ್ತಕ ಮಾರ್ಕೆಟ್‌ನಲ್ಲಿ ಸೇಲ್ ಆಗುತ್ತದೆ ಅನ್ನೋ ಭ್ರಮೆ ಈತನದ್ದಾಗಿತ್ತು.

ಅದೇನೇ ಇರಲಿ, ಈ ರೀತಿ ತಮ್ಮ ವೈಯಕ್ತಿಕ ತೆವಲುಗಳನ್ನ ತೀರಿಸಿಕೊಳ್ಳುವ ಕಾರಣಕ್ಕೆ ಸಾವಿರಾರು ಜನ ನೋಡಿ ಮೆಚ್ಚಿದ ಚಿತ್ರಗಳನ್ನು ಹೀಗಳೆದು, ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವವರನ್ನು ನೋಡಿದಾಗ ಸೋಷಿಯಲ್ ಮೀಡಿಯಾ ಗಳನ್ನು ಕಂಟ್ರೋಲ್ ಮಾಡಬೇಕು ಎನ್ನುವ ಕಾನೂನಿನ ಬಗ್ಗೆ ಯೋಚನೆ ನಡೆಯುತ್ತಿರುವುದು ಸರಿಯಾಗಿಯೇ ಇದೆ ಎನಿಸುತ್ತದೆ.

ಪೊಲೀಸ್ ಕಾನ್ಸ್ ಟೇಬಲ್

ಏನ್ ಸಾರ್, ನಿಮಗೆ ಜನರ ಮೇಲೆ ಲಾಠಿ ಚಾರ್ಜ್ ಮಾಡೋಕೆ ಅವಕಾಶ ಕೊಟ್ಟಿದ್ದಾರಂತೆ. ಮತ್ತೆ ಐಪಿಎಲ, ಐ ಮೀನ್, ಇಂಡಿಯನ್ ಪೊಲೀಸ್ ಲೀಗ್ ಶುರುನಾ?
-ಮತ್ತೆ, ಛಾ ಸಿಕ್ರೆ ಬಿಟ್ಬಿಡ್ತೀವಾ, ಜನ ನಮ್ಮನ್ನ ಬರೀ ಲೂಟಿಕೋರರು ಅಂತ ತಿಳ್ಕೊಂಡಿದ್ದಾರೆ. ನಾವು ಲಾಠಿಕೋರರು ಕೂಡಾ ಅಂತ ತೋರಿಸಬೇಕಲ್ಲ.

ಅದ್ಸರಿ, ಜನಗಳ ಮೇಲೆ ಲಾಠಿ ಬೀಸೋದು ಅಂದ್ರೆ ನಿಮಗೇನ್ ಅಷ್ಟೊಂದು ಖುಷಿ? ಜನ ನಿಮ್ಮನ್ನ ಬ್ಯಾಕ್ ಫಂಗಸ್ ಅಂತ ಬಯ್ತಾ ಇದ್ದಾರೆ ಗೊತ್ತಾ?
-ನೋಡ್ರೀ, ಇದೆ ನಮಗೆ ಮಾಮೂಲು. ನಮಗೆ ಸಂಬಳ, ಮಾಮೂಲು ಕೊಡದೇ ಇದ್ರೂ ಪರವಾಗಿಲ್ಲ, ಕೈಗೆ ಲಾಠಿ ಕೊಟ್ಟು
ಪರವಾನಗಿ ಕೊಟ್ರೆ ಸಾಕು. ಹಬ್ಬ ಮಾಡ್ತೀವಿ.

ಅಲ್ಲಾ, ಜನ ಹಿಂಗೆ ಹೊಡೆದು ಬಡಿದು ಹೇಳಿದ್ರೆ ಮಾತು ಕೇಳ್ತಾರಾ?
-ಇದೇ ಕಣ್ರೀ ಕರೋನಾ ಕಾಲದಲ್ಲಿ ವರ್ಕ್ ಆಗಿದ್ದು, ಸುಮ್ನೆ ಆ ಡಾಕ್ಟರ್ಸ್ ಕೊಡೋ ಎರಡೆರಡು ಡೋಸ್ ವ್ಯಾಕ್ಸಿನ್ ಎ ವೇ
ಆಗಿತ್ತು. ನಾವ್ ಒಂದ್ ಡೋಸ್ ಕೊಟ್ರೆ ಸಾಕು, ಕರೋನಾ ಅಲ್ಲ, ಎಲ್ಲಾ ಖಾಯಿಲೆನೂ ಮಂಗಮಾಯ ಆಗುತ್ತೆ.

ಅದ್ಸರಿ, ನಿಮ್ಮ ಅಟ್ಯಾಕ್ ಎಲ್ಲ ಬರೀ ಸಿಟಿ ಕಡೆ ಮಾತ್ರ ಸುದ್ದಿ ಆಗ್ತಾ ಇದೆ. ಹಳ್ಳಿ ಕಡೆ ಹೆಂಗೆ ನಿಮ್ ಡ್ಯೂಟಿ?
-ಅಯ್ಯೋ, ಹಳ್ಳಿಗಳಿಗೆ ಹೋಗುವಾಗ ಊರು ಹತ್ರ ಬರ್ತಾ ಇದ್ದಂಗೆ, ನಮ್ ಜೀಪ್ ಸೈರನ್ ಆನ್ ಮಾಡ್ಕೊಂಡೇ ಹೋಗ್ತೀವಿ.
ಯಾರಾದ್ರೂ ರೋಡಲ್ಲಿ ತರ್ಲೆ ಮಾಡ್ತಾ ಇದ್ರೆ, ಮನೆ ಸೇರಿಕೊಳ್ಳಲಿ ಅಂತ. ಹಳ್ಳಿ ಜನರ ‘ಬ್ಯಾಕ್’ ಮುಟ್ಟೋದು ಅಂದ್ರೆ ಅವರನ್ನ
ಎದುರು ಹಾಕ್ಕೊಂಡಂಗೆ. ಯಾಕ್ ಬೇಕು?

ಆಹಾ ಬುದ್ಧಿವಂತ್ರು, ಅಲ್ಲಾ, ಹಿಂಗೆ ಹೊಡಿತೀರಲ್ಲ, ಅದಕ್ಕೆ ನಿಮಗೆ ಅವಾರ್ಡ್ ಏದ್ರೂ ಕೊಡ್ತಾರಾ ಅಂತ?
-ಹ್ಞೂ, ಕಣ್ರೀ. ನಮ್ಮ ಡಿಪಾರ್ಟ್ ಮೆಂಟ್ ಕಡೆಯಿಂದ ನಂಗೆ ಮೊನ್ನೆ ತಾನೇ ‘ಬ್ಯಾಕ್ ಬಸ್ಟರ್ ಆಫ್ ದಿ ವೀಕ್’ ಅಂತ ಅವಾರ್ಡ್ ಬಂತು.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಸಣ್ಣ ಹುಡುಗ ಆಗಿದ್ದಾಗ ಅವರ ಅಪ್ಪ ಅಮ್ಮ ಹಳ್ಳಿಯಲ್ಲಿ ಇದ್ದರು. ಮನೆಯ ಸುತ್ತ ಕಾಡುಮೇಡಿನಂಥ ಪ್ರದೇಶ. ಖೇಮು  ಆಗಾಗ ಕಾಡಿನೊಳಗೆ ಹೋಗಿ ಓಡಾಡಿಕೊಂಡು ಬರುತ್ತಿದ್ದ. ಹೀಗೇ ಒಂದು ದಿನ ಕಾಡಿನೊಳಗೆ ಬಹುದಾರ ಹೋದಾಗ ಅಲ್ಲಿ ಅವನ ಕಣ್ಣಿಗೆ ಆಗ ತಾನೇ ಹುಟ್ಟಿದಂತಿದ್ದ ಸಣ್ಣ ಬೆಕ್ಕಿನ ಮರಿ ಕಾಣಿಸಿತು. ಸುತ್ತಮುತ್ತ ಯಾರೂ ಇರಲಿಲ್ಲ. ಬಹುಷಃ ತಾಯಿಬೆಕ್ಕು ಅದನ್ನು ಅಲ್ಲಿಯೇ ಬಿಟ್ಟು ಹೋಗಿತ್ತು. ಅದನ್ನು ನೋಡಿದ ಖೇಮು ಕೂಡಲೇ ಅದನ್ನು ಎತ್ತಿಕೊಂಡು ಅದನ್ನು ಎತ್ತಿಕೊಂಡು ಸುತ್ತಮುತ್ತ ಅಲೆದಾಡಿದ.

ತಾಯಿಬೆಕ್ಕು ಕಾಣಿಸಲೇ ಇಲ್ಲ. ಕೊನೆಗೆ ಖೇಮು ಆ ಮರಿಯ್ನು ಮನೆಗೆ ಕರೆದುಕೊಂಡು ಬಂದ. ಅಂದಿನಿಂದ ಆ ಬೆಕ್ಕಿನ ಮರಿ ಅವನ ಜೊತೆ ಅನ್ಯೋನ್ಯವಾಗಿ ಹೊಂದಿಕೊಂಡಿತು. ಖೇಮು ಮತ್ತು ಅದು ಒಬ್ಬರನ್ನೊಬ್ಬರು ಬಿಟ್ಟಿರಲಾರದಂಥ ಮಟ್ಟಿಗೆ ಅವರ ಮಧ್ಯೆ ಬಾಂಧವ್ಯ ಇತ್ತು. ಒಂದು ದಿನ ಅರಣ್ಯಾಧಿಕಾರಿಗಳು ಖೇಮು ಮನೆಗೆ ಬಂದರು. ಅವರಬ್ಬ ಆಫೀಸರ್ ಈ ಬೆಕ್ಕಿನ ಮರಿ ಯನ್ನು ಹತ್ತಿರದಿಂದ ನೋಡಿ, ಇದು ಬೆಕ್ಕಲ್ಲ, ಇದು ಹುಲಿ ಮರಿ, ಇದನ್ನು ಮನೆಯಲ್ಲಿ ಸಾಕಬಾರದು, ಮರಿಯನ್ನು ಸರಕಾರದ
ವಶಕ್ಕೆ ಕೊಡಬೇಕು ಎಂದು ಹೇಳಿ, ಅದನ್ನು ಹತ್ತಿರದ ಇದ್ದ ಝೂಗೆ ತೆಗೆದುಕೊಂಡು ಹೋದರು.

ಕೆಲವು ದಿನಗಳವರೆಗೆ ಖೇಮು ಅಲ್ಲಿಗೆ ಹೋಗಿ ಆಗಾಗ ಮರಿಯನ್ನು ನೋಡಿಕೊಂಡು ಬರುತ್ತಿದ್ದ. ಆನಂತರ ಕೆಲವು ವರ್ಷಗಳ ನಂತರ ಆ ಮರಿಯನ್ನು ದೇಶದ ಇನ್ಯಾವುದೋ ಝೂಗೆ ಕರೆದುಕೊಂಡು ಹೋಗಲಾಯಿತು. ನಂತರ ಖೇಮು ಬೆಳೆದು ದೊಡ್ಡವ ನಾದ. ಒಮ್ಮೆ ಕಾಲೇಜು ಟ್ರಿಪ್‌ನಲ್ಲಿ ಅವನನ್ನು ಆಲ್ ಇಂಡಿಯಾ ಟೂರ್‌ಗೆ ಕರೆದುಕೊಂಡು ಹೋದರು. ಅಲ್ಲಿ ಉತ್ತರಭಾರತದ ಒಂದು ಝೂಗೆ ಹೋದಾಗ ಅಲ್ಲಿನ ಪಂಜರದೊಳಗಿದ್ದ ಹುಲಿಯೊಂದು ಖೇಮುವನ್ನೇ ದಿಟ್ಟಿಸಿ ನೋಡುತ್ತಿತ್ತು.

ಖೇಮು ಕೂಡ ಅದರ ಕಣ್ಣುಗಳನ್ನೇ ನೋಡುತ್ತಿದ್ದ. ಆ ಕಣ್ಣುಗಳು ಏನೋ ಹೇಳುತ್ತಿವೆ ಎಂದು ಖೇಮುಗೆ ಅನಿಸಿತು. ಹಾಗಾಗಿ ಪಂಜರದ ಹತ್ತಿರ ಹೋಗಿ ನಿಂತ. ಆ ಹುಲಿ ಅವನನ್ನೇ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿತ್ತು. ಆಗ ಖೇಮು ಅಲ್ಲಿನ ಮೇಲಧಿ ಕಾರಿಗಳನ್ನು ಕರೆದು ಈ ಹುಲಿಯನ್ನು ನಾನು ಒಳಗೆ ಹೋಗಿ ನೋಡಬೇಕು ಅಂತ. ಮೊದಮೊದಲು ಅವರು ಒಪ್ಪಲಿಲ್ಲ. ನಂತರ ಖೇಮು ಎಮೋಷನಲ್ ಆಗಿ ಹೇಳಿದ ಮಾತುಗಳನ್ನೆ ಕೇಳಿ, ಖೇಮುವನ್ನು ಪಂಜರದ ಒಳಗೆ ಹೋಗಲು ಬಿಟ್ಟರು. ಪಂಜರದ ಬಾಗಿಲು ತೆರೆದು ಖೇಮು ಒಳಗೆ ಹೋದ. ಎರಡೇ ನಿಮಿಷ, ಆ ಹುಲಿ ಛಂಗನೆ ಖೇಮು ಮೇಲೆ ಹಾರಿ ಅವನನ್ನು ಕೊಂದು ತಿಂದು ಹಾಕಿತು. ಮೋ ಲೀ ಅದು ಆ ಹುಲಿ ಅಲ್ಲ ಅನ್ಸುತ್ತೆ ಹೋಗ್ಲಿ ಬಿಡಿ.

ಲೈನ್ ಮ್ಯಾನ್
ನಮ್ಮ ಪ್ರೀತಿಯ ರಾಮು ಸಿನಿಮಾ ನೋಡಿ ದರ್ಶನ್ ಅಭಿಮಾನಿಯಾದವನು
-‘ಅಂಧಾ’ ಭಿಮಾನಿ

ಆಸ್ಪತ್ರೆಗೆ ಹೋಗದೇ ಮನೆಯ ಆಗುವ ಹೆರಿಗೆ
-ಹೋಮ್ ಡೆಲಿವರಿ

ಪೊಲೀಸರೇ ಹೆಚ್ಚಾಗಿ ಇರುವ ಜಾಗ
-ಪೊಲೀಸ್ ‘ಬೆಲ್ಟ್’

ಆಸ್ತಿಕರನ್ನು ಗಲ್ಲಿಗೇರಿಸುವ ಪ್ರಕ್ರಿಯೆಗೊಂದು ಧಾರ್ಮಿಕ ಹೆಸರು
-‘ಉರುಳು’ ಸೇವೆ

೧೦೦ಕ್ಕೆ ನೂರು ಅಂಕ ತೆಗೆಯುವ ವಿದ್ಯಾರ್ಥಿ
-‘ಉತ್ತರ’ ಕುಮಾರ

ಅವರು ಅತ್ತರೆ ಅವರ ಅಭಿಮಾನಿಗಳ ಕಣ್ಣಲ್ಲೂ ನೀರು ಬರುತ್ತಂತೆ
-ಅದು ‘ಭಕ್ತ’ ಕಣ್ಣೀರು ಬಿಡಿ

ರಾಜಕಾರಣಿಗಳ ಕಣ್ಣೀರಿಗೆ ಕಾರಣವಾದ್ರೂ ಏನು?
-ಚುನಾವಣಾ ‘ಕ್ರೈ’ ಸಿಸ್

ಮನೆಯಲ್ಲಿ ಸಾಕಿದ ಕೋಳಿ ಸತ್ರೆ ಶ್ರದ್ಧಾಂಜಲಿ ಸಲ್ಲಿಸುವ ಬಗೆ 
-ರೆಸ್ಟ್ ಇನ್ ‘ಪೀಸ್’

ವಾಟ್ಸಾಪ್‌ನಲ್ಲಿ ಒಂದ್ ಟಿಕ್ ಬಂದ್ರೆ ಹಂಗೆ, ಎರಡು, ಮೂರು ಟಿಕ್ ಬಂದ್ರೆ ಹಿಂಗೆ ಅಂತ ಬರ್ತಾ ಇರೋ ಫೇಕ್ ಮೆಸೇಜ್ ಹಿಂದಿರೋದು
-ಸೋಷಿಯಲ್ ಮೀಡಿಯಾ ಪೊಲಿಟಿಕ್ಸ್

ಲೇಟೆಸ್ಟ್ ಟ್ರೆಂಡ್
-ಕೆಲವರು ಐ ಸ್ಟಾಂಡ್ ವಿತ್ ಅನ್ನೋಕೆ ತುದಿಗಾಲ ನಿಂತಿರ್ತಾರೆ.