ಅಶ್ವತ್ಥಕಟ್ಟೆ
ranjith.hoskere@gmail.com
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಇಡೀ ದೇಶದ ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರವೆಂದರೆ ತಪ್ಪಾಗುವುದಿಲ್ಲ. ಎಲ್ಲ ಕ್ಷೇತ್ರ
ಗಳಲ್ಲಿರುವಂತೆ ಬಿಜೆಪಿ-ಕಾಂಗ್ರೆಸ್, ಕಾಂಗ್ರೆಸ್-ಜೆಡಿಎಸ್, ಜೆಡಿಎಸ್-ಬಿಜೆಪಿ ನಡುವೆ ನೇರ ಹಣಾಹಣಿ ಅಥವಾ ತ್ರಿಕೋನ ಸ್ಪರ್ಧೆಯಿದ್ದರೆ ಮಂಡ್ಯ ಅಂದು ಆ ಮಟ್ಟದಲ್ಲಿ ‘ಗಮನ’ ಸೆಳೆಯುತ್ತಿರಲಿಲ್ಲ. ಅಂದು ಮಂಡ್ಯ ಕ್ಷೇತ್ರವು ಹಾಗೆ ದೇಶದ ಗಮನ ಸೆಳೆಯಲು ಪ್ರಮುಖ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ ಸುಮಲತಾ ಅಂಬರೀಶ್.
ಕೇವಲ ಸ್ಪರ್ಧಿಸಿದ್ದು ಮಾತ್ರವಲ್ಲದೆ, ‘ಸ್ವಾಭಿಮಾನ’ದ ದಾಳ ಹೂಡಿ, ಅಂದಿನ ಮುಖ್ಯಮಂತ್ರಿಗಳ ಮಗನನ್ನು ಮಕಾಡೆ ಮಲಗಿಸಿದ ಈ ಪಕ್ಷೇತರ ಅಭ್ಯರ್ಥಿಯ ಗೆಲುವು ಇಡೀ ದೇಶದ ರಾಜಕಾರಣದಲ್ಲಿ ಬಹುದೊಡ್ಡ ಅಚ್ಚರಿಯಾಗಿತ್ತು ಹಾಗೂ ಚರ್ಚೆಗೆ ಗ್ರಾಸವಾದ ಅಂಶವಾಗಿತ್ತು. ಗೆದ್ದ ಬಳಿಕ ಸುಮಲತಾ ಅವರು ಬಿಜೆಪಿಗೆ ಬೆಂಬಲಿಸಿದ್ದು, ಐದು ವರ್ಷ ಆಡಳಿತ ನಡೆಸಿದ್ದು ಒಂದು ಭಾಗ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಸುಮಲತಾ ಅವರು ಮತ್ತೆ ಮುನ್ನೆಲೆಗೆ ಬಂದರು. ಅದರಲ್ಲಿಯೂ, ಯಾರ ಹಾಗೂ ಯಾವ ಪಕ್ಷದ ವಿರುದ್ಧ ಸುಮಲತಾ ಹೋರಾಡಿ ಗೆಲುವು ಸಾಧಿಸಿದ್ದರೋ ಅದೇ ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡ ಕಾರಣಕ್ಕೆ.
ಅದರಲ್ಲಿಯೂ ಬಿಜೆಪಿಯನ್ನು ಬೆಂಬಲಿಸಿದ್ದ ಹಾಲಿ ಸಂಸದೆ ಸ್ಪರ್ಧಿಸುವ ಮಂಡ್ಯ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದ ಬಳಿಕ, ಸುಮಲತಾ ಅವರ ನಡೆಯೇ ನಾಗಿರಬಹುದು ಎನ್ನುವ ಕುತೂಹಲ ಅನೇಕರಲ್ಲಿತ್ತು. ಆರಂಭದಲ್ಲಿ ಸುಮಲತಾ ಹಾಗೂ ಅವರ ಬೆಂಬಲಿಗರು ನಡೆದುಕೊಂಡ ರೀತಿಯನ್ನು ಗಮನಿಸಿದರೆ, ಅವರು ಮತ್ತೊಮ್ಮೆ ‘ಪಕ್ಷೇತರ’ರಾಗಿ ಸ್ಪರ್ಧಿಸುವರೇನೋ ಎನ್ನುವ ಅನುಮಾನ ಕೆಲವರಲ್ಲಿ ಹುಟ್ಟಿದ್ದು ಸುಳ್ಳಲ್ಲ. ಆದರೆ
ಅಂತಿಮವಾಗಿ ವಾರದ ಹಿಂದೆ ಮಂಡ್ಯದಲ್ಲಿಯೇ ಬೃಹತ್ ಕಾರ್ಯಕ್ರಮ ಆಯೋಜಿಸಿ, ‘ಈ ಬಾರಿ ಸ್ಪರ್ಧಿಸುವುದಿಲ್ಲ; ಬಿಜೆಪಿಯನ್ನು ಅಧಿಕೃತವಾಗಿ ಸೇರುತ್ತೇನೆ. ಪಕ್ಷ ಸೂಚಿಸಿದವರಿಗೆ ನಾನು ಬೆಂಬಲಿಸುವೆ’ ಎನ್ನುವ ಘೋಷಣೆ ಮಾಡುವ ಮೂಲಕ ಪಕ್ಷ ಸೇರುವ ಮೊದಲೇ ಪಕ್ಷದ ತೀರ್ಮಾನಕ್ಕೆ ತಾವು ಬದ್ಧ ಎನ್ನುವ ಸ್ಪಷ್ಟ ಸಂದೇಶವನ್ನು ಸುಮಲತಾ ರವಾನಿಸಿದರು.
ಸುಮಲತಾ ಅವರ ಈ ತೀರ್ಮಾನದ ಹಿಂದೆ ಹಲವು ಕಾರಣಗಳಿವೆ. ಅವುಗಳ ಬಗ್ಗೆ ಮಾತನಾಡುವ ಮೊದಲು, ಸುಮಲತಾ ಅವರ ಈ ತೀರ್ಮಾನ ಹಲವು ನಾಯಕರಿಗೆ ಅಚ್ಚರಿ ತರಿಸಿದ್ದು ಸುಳ್ಳಲ್ಲ. ಏಕೆಂದರೆ, ಪಕ್ಷಗಳಲ್ಲಿ ದಶಕಗಳ ಕಾಲ ಆಯಕಟ್ಟಿನ ಹುದ್ದೆಯಲ್ಲಿದ್ದು, ಎಲ್ಲ ರೀತಿಯ ಅಧಿಕಾರವನ್ನು ಅನುಭವಿಸಿದ ಬಳಿಕವೂ ಟಿಕೆಟ್ ಕೊಡಲಿಲ್ಲವೆಂದರೆ ಪಕ್ಷಾಂತರ, ಬಂಡಾಯ, ಬೆಂಬಲಿಗರಿಂದ ಪ್ರತಿಭಟನೆ ನಡೆಸುವ ಈ ಕಾಲದಲ್ಲಿ, ಹಾಲಿ ಸಂಸದೆಯಾಗಿದ್ದವರಿಗೆ ಟಿಕೆಟ್ ಕೊಡುವ ಭರವಸೆಯೊಂದಿಗೆ ಪಕ್ಷಕ್ಕೆ ಸೇರಿಸಿಕೊಂಡು ಬಳಿಕ ಜೆಡಿಎಸ್‌ಗೆ ಬಿಟ್ಟುಕೊಟ್ಟರೂ ‘ಮೌನ’ ವಾಗಿಯೇ ಸಮ್ಮತಿಸಿ, ಅಗತ್ಯಬಿದ್ದರೆ ಕುಮಾರಸ್ವಾಮಿ
ಪರವಾಗಿ ಪ್ರಚಾರ ನಡೆಸುವ ಮಾತುಗಳನ್ನು ಆಡುವ ಮೂಲಕ ಸುಮಲತಾ ಅವರು ಹಲವು ಹಿರಿಯ ನಾಯಕರಿಗಿಂತ ಭಿನ್ನವಾಗಿ ನಿಂತರು ಎನ್ನುವುದು ಸುಳ್ಳಲ್ಲ.
ಸುಮಲತಾ ಅವರು ಕಳೆದ ಐದು ವರ್ಷದಲ್ಲಿ ಏನೆಲ್ಲ ಕೆಲಸ ಮಾಡಿದ್ದಾರೆ? ಈ ಬಾರಿ ಮತ್ತೊಮ್ಮೆ ಪಕ್ಷೇತರರಾಗಿ ನಿಂತರೆ ಗೆಲ್ಲುವ ಅವಕಾಶ ಎಷ್ಟಿತ್ತು? ಎನ್ನುವುದು ಬೇರೆ ಮಾತು.
ಹಾಗೆ ನೋಡಿದರೆ, ಸುಮಲತಾ ಅವರು ಅಂಬರೀಶ್ ಹೆಸರಲ್ಲಿ ಈ ಬಾರಿ ಪಕ್ಷೇತರರಾಗಿ ನಿಂತು ಪುನರಾಯ್ಕೆಗೊಳ್ಳುವ ಸಾಧ್ಯತೆ ತೀರಾ ಕಡಿಮೆಯಿತ್ತು
ಎನ್ನುವುದು ಹಲವರ ಅಭಿಪ್ರಾಯವಾಗಿತ್ತು. ಬಿಜೆಪಿ ಹಾಗೂ ಇನ್ನಿತರೆ ಸಮೀಕ್ಷೆಗಳಲ್ಲಿಯೂ ಇದೇ ರೀತಿಯ ವರದಿ ಬಂದಿತ್ತು. ಒಂದು ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗದಿದ್ದಿದ್ದರೆ ಸುಮಲತಾ ಅವರ ತೀರ್ಮಾನ ಇದೇ ರೀತಿಯಲ್ಲಿರುತ್ತಿತ್ತು ಎನ್ನುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಸುಮಲತಾ ಹಾಗೂ ಕಾಂಗ್ರೆಸ್ ನಡುವೆ ಹೇಳಿಕೊಳ್ಳುವ ಸಂಬಂಧ ಉಳಿದಿಲ್ಲ. ಸುಮಲತಾ ಅವರಿಗಿಂತ ಅಂಬರೀಶ್ ಅವರು ಬದುಕಿದ್ದಾಗಲೇ, ಕಾಂಗ್ರೆಸ್‌ನೊಂದಿಗೆ ಸಂಬಂಧ ಹೇಳಿಕೊಳ್ಳುವಷ್ಟು ಗಟ್ಟಿಯಾಗಿರಲಿಲ್ಲ.
ಆದ್ದರಿಂದ ಸುಮಲತಾ ಅವರಿಗೆ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವುದು ಸುಲಭವಾಗಿರಲಿಲ್ಲ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಅವರಿಗೆ ಪಕ್ಷೇತರರಾಗಿ ಸ್ಪರ್ಧಿಸದೇ ಬೇರೆ ಯಾವುದೇ ದಾರಿಗಳಿರಲಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದರೆ ಕಳೆದ ಬಾರಿಯಂತೆ ಗೆಲುವು ನಿಶ್ಚಿತ ಎನ್ನುವ ವಿಶ್ವಾಸ
ವಿದ್ದರೆ ಆ ರಿಸ್ಕ್ ತೆಗೆದುಕೊಳ್ಳುತ್ತಿದ್ದರೇನೋ. ಆದರೆ ಸದ್ಯ ಆ ವಿಶ್ವಾಸವಿಲ್ಲದೆ ಇರುವುದರಿಂದ, ‘ಮುಖ ಕೆಡಿಸಿಕೊಳ್ಳುವುದಕ್ಕಿಂತ’ ಬಿಜೆಪಿ ಸೇರಿ ಸುಮ್ಮನಿರುವುದು ಲೇಸು. ಮುಂದೊಂದು ದಿನ ಸ್ಥಾನಮಾನ, ತಮಗಲ್ಲದಿದ್ದರೂ ತಮ್ಮ ಪುತ್ರನಿಗಾದರೂ ಸಿಗಲಿದೆ ಎನ್ನುವುದು ಅವರ ಲೆಕ್ಕಾಚಾರ ಎನ್ನುವುದು ಇಡೀ ಪ್ರಕರಣದ ಇನ್ನೊಂದು ಮುಖದ ಕಥೆ.
ಆದರೆ ಯಾರ ವಿರುದ್ಧ ಹೋರಾಡಿ, ವಾಕ್ಸಮರ ನಡೆಸಿದ್ದರೋ ಅವರ ಪರವಾಗಿ ಪ್ರಚಾರಕ್ಕೆ ಹೋಗಬೇಕು ಎನ್ನುವ ಸ್ಥಿತಿಯಲ್ಲಿಯೂ ಈ ರೀತಿಯ ತೀರ್ಮಾನ
ಕೈಗೊಂಡಿದ್ದು ಅವರ ಪ್ರೌಢಿಮೆ ಎನ್ನುವುದು ಹಲವರ ಮಾತಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬಂಡಾಯವೆದ್ದಿರುವ ಅನೇಕ ಉದಾಹರಣೆಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರು ಬಾರಿ ಬಿಜೆಪಿಯಿಂದ ಶಾಸಕರಾಗಿ, ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ಅನುಭವಿಸಿದ್ದ ಜಗದೀಶ್ ಶೆಟ್ಟರ್ ಅವರು ಟಕೆಟ್ ಸಿಗಲಿಲ್ಲವೆಂದು ಕಾಂಗ್ರೆಸ್ ಹೋಗಿದ್ದು, ಉಪಮುಖ್ಯಮಂತ್ರಿಯಾಗಿ, ಪಕ್ಷದ ರಾಜ್ಯಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಲಿಲ್ಲವೆಂದು ಈಗ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿ ಬಂಡಾಯವಾಗಿ
ಸ್ಪಽಸುವ ಎಚ್ಚರಿಕೆ ನೀಡಿರುವುದನ್ನು ನೋಡಿದರೆ ಸುಮಲತಾ ನೂರು ಪಾಲು ವಾಸಿ ಎನಿಸದೇ ಇರುವುದಿಲ್ಲ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ರೀತಿಯಲ್ಲಿಯೇ ‘ಟಿಕೆಟ್ ಸಿಗದಿದ್ದರೂ ಪಕ್ಷದ ಪರವಾಗಿ ನಿಲ್ಲುತ್ತೇನೆ’ ಎನ್ನುವ ಮಾತುಗಳನ್ನು ಆಡಿರುವ
ಮತ್ತೊಬ್ಬ ಸಂಸದ ಎಂದರೆ ಅದು ಪ್ರತಾಪ್ ಸಿಂಹ. ಎರಡು ಬಾರಿ ಮೈಸೂರು-ಕೊಡಗು ಸಂಸದರಾಗಿ, ಈ ಬಾರಿ ಹ್ಯಾಟ್ರಿಕ್ ಗೆಲುವು ನಿಶ್ಚಿತ ಎನ್ನುವುದು ಗೊತ್ತಿದ್ದರೂ, ಟಿಕೆಟ್ ತಪ್ಪಿದರೂ ಪಕ್ಷದ ವಿರುದ್ಧ ಒಂದೂ ಮಾತಾಡದೆ, ಯದುವೀರ್ ಅವರೊಂದಿಗೆ ಪ್ರಚಾರದಲ್ಲಿ ಸಿಂಹ ತೊಡಗಿಸಿಕೊಂಡರು. ಇದೇ ರೀತಿ ಸಿ.ಟಿ. ರವಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ನೀಡದಿದ್ದರೂ ಏನು ಮಾತನಾಡದೇ ಮೌನ ವಾಗಿದ್ದಾರೆ. ಆದರೆ ಅದೇ ಪಕ್ಷದ ಸಂಗಣ್ಣ ಕರಡಿ, ದಾವಣ
ಗೆರೆಯಲ್ಲಿ ರೇಣುಕಾಚಾರ್ಯ ಗ್ಯಾಂಗ್, ಚಿತ್ರದುರ್ಗದಲ್ಲಿ ಚಂದ್ರಪ್ಪ, ತುಮಕೂರಿನಲ್ಲಿ ಮಾಧುಸ್ವಾಮಿ ಇವರೆಲ್ಲ ‘ಮೌನ’ವಾಗುವ ಮೊದಲು ಕೆಲದಿನಗಳ ಕಾಲ ಸದ್ದು ಮಾಡಿ, ಗದ್ದಲ ಎಬ್ಬಿಸಿದ್ದಾರೆ.
ಇವರು ಸದ್ದು ಮಾಡಿದ್ದರಿಂದ ಏನೂ ಬದಲಾಗಲಿಲ್ಲ. ಹಾಗೆ ನೋಡಿದರೆ, ಮೌನವಾಗಿದ್ದವರಿಗೆ ಮುಂದೊಂದು ದಿನ ಪಕ್ಷದಲ್ಲಿ ಸ್ಥಾನವಾದರೂ ಸಿಗುವ ಅಶಾ ಭಾವನೆಯಿದೆ. ಆದರೆ ಗದ್ದಲವೆಬ್ಬಿಸಿ, ಬಂಡಾಯದ ಮಾತುಗಳನ್ನು ಆಡಿರುವ ಬಹುತೇಕರಿಗೆ ಪಕ್ಷದಲ್ಲಿ ಅಧಿಕಾರದ ‘ಬಾಗಿಲು’ ಮುಚ್ಚುವುದು ನಿಶ್ಚಿತ. ಈ ಸೂಕ್ಷ್ಮತೆ
ಯನ್ನು ಗಮನಿಸಿಯೇ, ಬಿಜೆಪಿಯ ಹಲವು ನಾಯಕರು ತಮಗಾಗಿರುವುದು ಅನ್ಯಾಯವೆಂದು ಗೊತ್ತಿದ್ದರೂ ‘ಮೌನ’ವಾಗಿಯೇ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ.
ಇನ್ನು ಕೆಲವರು ಮುಂದೆ ನಮಗೆ ಯಾವುದೇ ಸ್ಥಾನ ಸಿಗುವುದಿಲ್ಲ ಎನ್ನುವ ಅರಿವಿದ್ದರೂ ಮೌನವಾಗಿರುವುದಕ್ಕೆ ಮತ್ತೊಂದು ಕಾರಣವಿದೆ. ಬಿಜೆಪಿ ವರಿಷ್ಠರ ತೀರ್ಮಾನದಿಂದ ‘ಅನ್ಯಾಯ’ಕ್ಕೆ ಒಳಗಾಗಿರುವ ನಾಯಕರೊಬ್ಬರ ಪ್ರಕಾರ, ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರೇ ನಿಂತರೂ ಕೆಲವು ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ. ವಿಧಾನಸಭಾ ಚುನಾವಣೆಯಲ್ಲಿ ಆದರೆ, ಬಿಜೆಪಿಯಲ್ಲಿನ ಸ್ಥಳೀಯ ನಾಯಕತ್ವದ ಕೊರತೆಯನ್ನು ಬಳಸಿಕೊಂಡು ಬಂಡಾಯ
ವಾಗಿ ನಿಂತುಕೊಂಡರಾದರೂ ಗೆಲುವು ಸಾಧಿಸಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಯಾವುದಕ್ಕೂ ಅವಕಾಶವಿರುವುದಿಲ್ಲ. ಕಳೆದ ಬಾರಿ ಸುಮಲತಾ ಅವರು ಗೆಲ್ಲುವುದಕ್ಕೆ ‘ಸ್ವಾಭಿಮಾನ’ದ ಅಸದೊಂದಿಗೆ ಅಂಬರೀಶ್ ಅವರ ನಿಧನದ ಅನುಕಂಪ, ಬಿಜೆಪಿಯ ಬಾಹ್ಯ ಬೆಂಬಲ ಹಾಗೂ ಈ ಎಲ್ಲವನ್ನು ಮೀರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕು ಎನ್ನುವ ಮೈತ್ರಿಪಕ್ಷ ಕಾಂಗ್ರೆಸ್‌ನವರ ಹಿತಾಸಕ್ತಿ ಸುಮಲತಾ
ಪರ ಕೆಲಸ ಮಾಡಿದ್ದರಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.
ಆದರೆ ಈ ಬಾರಿ ಮಂಡ್ಯ ಸೇರಿದಂತೆ ಯಾವ ಕ್ಷೇತ್ರದಲ್ಲಿಯೂ ಈ ರೀತಿಯ ಹಲವಾರು ‘ಫ್ಯಾಕ್ಟರ್’ಗಳು ಒಟ್ಟಿಗೆ ವರ್ಕ್‌ಔಟ್ ಆಗುವ ಸಾಧ್ಯತೆ ತೀರಾ ಕಡಿಮೆಯಿದೆ. ಆದ್ದರಿಂದ ಅನೇಕರು ಬಂಡಾಯದ ಬಾವುಟ ಬೀಸಿ, ಮುಖಕೆಡಿಸಿಕೊಳ್ಳುವ ಬದಲು ಮೌನವಾಗಿದ್ದುಕೊಂಡು ಪಕ್ಷದ ನಿಷ್ಠ ಹಾಗೂ ಹಿರಿಯ ನಾಯಕ ಎನಿಸಿಕೊಳ್ಳೋಣ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೆ ಈ ಬಾರಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ, ಮತದಾರರಿಗೆ ‘ಮೂರನೇ’ ಆಯ್ಕೆ ಎನ್ನುವುದು ಇಲ್ಲವಾಗಿದೆ. ಆದ್ದರಿಂದ ಬಿಜೆಪಿಯಿಂದ ಯಾರೇ ಬಂಡಾಯವಾಗಿ ನಿಂತರೂ ಅದರ ನೇರ ಲಾಭ ಕಾಂಗ್ರೆಸ್‌ಗೆ ಆಗಲಿದೆ. ರಾಜ್ಯದ ೨೮ ಕ್ಷೇತ್ರದಲ್ಲಿ ಎಲ್ಲಿಯೂ ಬಂಡಾಯವಾಗಿ ಸ್ಪರ್ಧಿಸಿ ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಮತದಾರರು, ಅದರಲ್ಲಿಯೂ ಬಿಜೆಪಿಯ ಸಾಂಪ್ರದಾಯಿಕ ಮತದಾರರೂ
ಬಂಡಾಯ ಅಭ್ಯರ್ಥಿಗೆ ಒಲವು ತೋರುವ ಸಾಧ್ಯತೆ ತೀರಾ ಕಡಿಮೆಯಿದೆ.
ಈ ಎಲ್ಲದರ ನಡುವೆಯೂ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ನಾಯಕರು ಬಂಡಾಯ ಅಥವಾ ಅಸಮಾಧಾನವನ್ನು ಹೊರಹಾಕುತ್ತಲೇ ಇದ್ದಾರೆ. ಅವರಲ್ಲಿ ಬಹುತೇಕರು ಈಗ ತಣ್ಣಗಾಗಿದ್ದರೂ ‘ಒಳ ಏಟು’ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ದಶಕಗಳ ಕಾಲ ಪಕ್ಷದಲ್ಲಿದ್ದುಕೊಂಡು, ವಿವಿಧ ಸ್ಥಾನಮಾನ ಅನುಭವಿಸಿದವರೇ ಈ ರೀತಿಯ ಯೋಜನೆಯಲ್ಲಿರುವಾಗ, ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಮೊದಲೇ ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುವ ಹೇಳಿಕೆಯ ಮೂಲಕ ಇಂಥ ಹಲವು ಬಂಡುಕೋರರಿಗಿಂತ ಭಿನ್ನವಾಗಿ ಮಂಡ್ಯ ಸಂಸದೆ ನಿಂತಿರುವುದು ಸುಳ್ಳಲ್ಲ. ಸುಮಲತಾ ಅವರ ಮೌನದ ಪರಿಣಾಮ ಏನಾಗಲಿದೆ, ಮುಂದಿನ ಅವರ
ರಾಜಕೀಯ ಭವಿಷ್ಯ ಏನಿರಬಹುದು ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.