Thursday, 12th December 2024

ಯುಗಾದಿ ಹಬ್ಬದ ವಿಶೇಷ

ನವಪಲ್ಲವ

ಬಿ.ಎಸ್.ಚೈತ್ರ, ಚಿತ್ರದುರ್ಗ

ಪ್ರಕೃತಿಯು ಸಹ ಆಚರಿಸುವ ಹಬ್ಬ ಯುಗಾದಿ. ದ. ರಾ. ಬೇಂದ್ರೆಯವರು ಹೇಳಿರುವಂತೆ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ; ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’. ಯುಗಾದಿ ಎಂದರೆ ಎಲ್ಲೆಡೆ ಸಂಭ್ರಮದ ವಾತಾವರಣ. ಯುಗಾದಿ ಎಂದರೆ ವಿಶೇಷವಾಗಿ
ಬೇವು-ಬೆಲ್ಲದ ಮಿಶ್ರಣ.

ಯುಗಾದಿ ಎನ್ನುವ ಪದವು ಸಂಸ್ಕೃತದ್ದು. ಇದು ‘ಯುಗ’ ಮತ್ತು ‘ಆದಿ’ ಎಂಬ ಪದಗಳ ಸಂಯೋಜನೆಯಿಂದ ಹುಟ್ಟಿದ್ದು. ಯುಗ ಎಂದರೆ ಅವಧಿ, ಆದಿ ಎಂದರೆ ಪ್ರಾರಂಭ. ಇದರ ಅರ್ಥ- ಹೊಸ ಸಮಯದ ಆರಂಭ ಎಂದು. ಹಿಂದೂ ಕ್ಯಾಲೆಂಡರ್ ಪ್ರಕಾರ ಚಾಂದ್ರಮಾನ ಯುಗಾದಿಯು (ಚೈತ್ರ ಶುದ್ಧ ಪಾಡ್ಯ) ಹೊಸ ವರ್ಷದ ಆರಂಭವಾಗಿದೆ. ಇದನ್ನು ಸಾಮಾನ್ಯವಾಗಿ ನಮ್ಮ ಕನ್ನಡಿಗರು ಮತ್ತು ತೆಲುಗು ಮಾತನಾಡುವ ಜನರು ಹೆಚ್ಚು ಆಚರಿಸುತ್ತಾರೆ. ಮಹಾರಾಷ್ಟ್ರದ
ಜನರು ಕೂಡ ಯುಗಾದಿ ಆಚರಿಸುತ್ತಾರೆ ಮತ್ತು ಈ ಹಬ್ಬ ವನ್ನು ಅವರು ‘ಗುಡಿ ಪಾಡ್ವ’ ಎಂದು ಕರೆಯುತ್ತಾರೆ.

ವಸಂತ ಋತು ಎಂದರೆ ಪ್ರಕೃತಿಯು ಹಸಿರಿನಿಂದ ಸಜ್ಜಾಗುವ ಸುಂದರವಾದ ಸಮಯ. ಈ ಋತುವಿನ ಚೈತ್ರ ಮಾಸದ ಮೊದಲ ದಿನವೇ ಯುಗಾದಿ. ಚಿಗುರೊಂದು ಮುಂದೆ ಹಣ್ಣಾಗಿ ಪೂರ್ಣತೆಯನ್ನು ಪಡೆಯಲು ಸಾಧ್ಯವಾಗುವಂಥ ಪ್ರಕ್ರಿಯೆಯ ಆರಂಭದ ಕ್ಷಣವಿದು. ಉದುರುವಿಕೆ, ಅರಳುವಿಕೆ, ಚಿಗುರುವಿಕೆ ಇವುಗಳು ಪರಿಪೂರ್ಣವಾದ ಕಾರ್ಯಚಕ್ರದ ಬೇರೆ ಬೇರೆ ಗತಿಗಳಷ್ಟೇ. ಇಂಥ ಸಂದೇಶವನ್ನು ನಮಗೆ ಪ್ರಕೃತಿ ನೀಡುತ್ತದೆ. ಇದು ಕೇವಲ ಒಂದು ಧಾರ್ಮಿಕ
ಹಬ್ಬ ಅಷ್ಟೇ ಅಲ್ಲ, ಬದಲಾಗಿ ವೈಜ್ಞಾನಿಕ ಕಾರಣಗಳನ್ನು ಒಳಗೊಂಡಿರುವ ವಿಶೇಷ ಆಚರಣೆಯ ದಿನ. ಇದು ಕೇವಲ ಕ್ಯಾಲೆಂಡರ್‌ನ ಬದಲಾವಣೆಯಾಗಿರದೆ ನೈಸರ್ಗಿಕವಾಗಿರುವ ಬದಲಾವಣೆಯೂ ಆಗಿದೆ. ಈ ಸಮಯದಲ್ಲಿ ಮರದ ಎಲೆಗಳು ಉದುರುತ್ತವೆ ಮತ್ತು ಹೊಸ ಚಿಗುರು ಪ್ರಾರಂಭ ವಾಗುತ್ತದೆ. ಹಾಗಾಗಿ ಹೊಸತನದ ಸಂಕೇತವನ್ನು ಪ್ರಕೃತಿಯು ಕೂಡ ನೀಡಲು ಪ್ರಾರಂಭಿಸುವ ಸುದಿನವಿದು.

ಸೂರ್ಯನನ್ನು ಭೂಮಿಯು ಸುತ್ತುವ ಸಮಯವು, ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಒಮ್ಮೆ ಪರಿಪೂರ್ಣವಾಗುತ್ತದೆ ಮತ್ತು ಭೂಮಿಯ ಉತ್ತರ
ಗೋಳಾರ್ಧವು ಸೂರ್ಯನ ಅತ್ಯುನ್ನತ ಶಕ್ತಿಯನ್ನು ಪಡೆದು ಕೊಳ್ಳುವುದರಿಂದಾಗಿ ಆ ಹೆಚ್ಚಿನ ತಾಪಮಾನವು ಮನುಷ್ಯನಿಗೆ ಸ್ವಲ್ಪ ಅನಾನುಕೂಲವಾಗಿರುತ್ತದೆ. ಅದೇ ಕಾರಣಕ್ಕೆ ನಾವು ಹರಳೆಣ್ಣೆಯಂಥ ‘ಕೂಲಿಂಗ್ ಏಜೆಂಟ್’ ಅನ್ನು ಬಳಕೆ ಮಾಡಬೇಕಾಗುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದ್ದು, ಯುಗಾದಿಯು ಇದರ ಪ್ರಾರಂಭವಾಗಿದೆ.

ಬೇವು-ಬೆಲ್ಲ ತಿನ್ನುವುದರ ವಿಶೇಷ: ಜೀವನವು ಸಿಹಿ-ಕಹಿಗಳ ಮಿಶ್ರಣ, ಇದನ್ನು ನಿಭಾಯಿಸಲು ಕಲಿಯಬೇಕು ಎನ್ನುವುದು ಇದರ ಅರ್ಥ. ಒಳ್ಳೆಯದು ಮತ್ತು ಕೆಟ್ಟದ್ದು, ಸಂತೋಷ ಮತ್ತು ದುಃಖ, ಯಶಸ್ಸು ಮತ್ತು ನಿರಾಶೆ ಇವುಗಳನ್ನು ಒಂದೇ ರೀತಿ ಪರಿಗಣಿಸಬೇಕು ಎಂಬುದು ಇದರ ಆಂತರಿಕ ಮಹತ್ವ ಮತ್ತು ಧಾರ್ಮಿಕ ಕಾರಣ. ಈ ಋತುವಿನಲ್ಲಿ, ದಡಾರ, ಟೈಫಾಯಿಡ್ ಜ್ವರ ಮತ್ತು ಸೋಂಕುಗಳಂಥ ಅನೇಕ ಅಪಾಯಕಾರಿ ರೋಗಗಳು ಅಪ್ಪಳಿಸುವ ಸಾಧ್ಯತೆ ಇರುತ್ತದೆ.

ಬೇವಿನ ಹೂವುಗಳು ಆಂಟಿ-ವೈರಲ್ ಗುಣಗಳನ್ನು ಹೊಂದಿರುತ್ತವೆ. ಇವು ಸಂಧಿವಾತ, ಕಫ ಮತ್ತು ಪಿತ್ತವನ್ನು ನಿಯಂತ್ರಿ ಸುತ್ತವೆ. ಬೆಲ್ಲದಲ್ಲಿ ರೋಗನಿರೋಧಕ ಶಕ್ತಿ ಇದ್ದು ಹೆಚ್ಚು ಕಾಯಿಲೆಗಳನ್ನು ತಡೆಗಟ್ಟುತ್ತದೆ. ಇದು ಬೇವು-ಬೆಲ್ಲ ಸೇವನೆಯ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ ಇನ್ನು ಶಾಸ್ತ್ರಗಳ ಪ್ರಕಾರ, ದ್ವಾಪರ ಯುಗದ ಕೊನೆಯಲ್ಲಿ, ಶ್ರೀಕೃಷ್ಣನ ಪುತ್ರರು ಮತ್ತು ಮೊಮ್ಮಕ್ಕಳು ಜಗಳದಲ್ಲಿ ನಾಶ ವಾದರು. ಈ ಹೋರಾಟವು ಋಷಿಯೊಬ್ಬನ ಶಾಪದ ಪರಿಣಾಮವಾಗಿತ್ತು. ವ್ಯಾಧನೊಬ್ಬ ಬೇಟೆಗಾಗಿ ಬಾಣವನ್ನು ಹೂಡಿದಾಗ ಅದು ಶ್ರೀಕೃಷ್ಣನಿಗೆ ತಗುಲಿ ಆತ ಮರಣವನ್ನ ಪ್ಪುತ್ತಾನೆ. ಧರ್ಮಗ್ರಂಥಗಳಲ್ಲಿನ ಉಲ್ಲೇಖದ ಪ್ರಕಾರ ಕೃಷ್ಣನು
ಯುಗಾದಿ ಹಬ್ಬದ ದಿನದಂದೇ ಮರಣ ಹೊಂದಿದನು. ಅವನ ಮರಣವು ದ್ವಾಪರ ಯುಗದ ಅಂತ್ಯ ಮತ್ತು ಕಲಿಯುಗದ ಪ್ರಾರಂಭವನ್ನು ಸೂಚಿಸುತ್ತದೆ.

ಚೈತ್ರ ಶುದ್ಧ ಪಾಡ್ಯಮಿಯ ದಿನದಂದು ಶ್ರೀಕೃಷ್ಣನು ಮರಣವನ್ನು ಹೊಂದಿದ. ಈ ದಿನವು ಕಲಿಯುಗವು ಪ್ರಾರಂಭವಾದ ದಿನವಾಗಿದೆ. ಹೀಗೆ, ಧಾರ್ಮಿಕ
ವಾಗಿ, ವೈಜ್ಞಾನಿಕವಾಗಿ ಮತ್ತು ಶಾಸಗಳ ಪ್ರಕಾರ ಯುಗಾದಿ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿರುವ ವಿಶೇಷ ಹಬ್ಬ. ಯುಗಾದಿ ಹಬ್ಬವು, ಎಲ್ಲರೂ ತಮ್ಮ ಜೀವನದಲ್ಲಿ ಬರುವ ನೋವು-ನಲಿವುಗಳನ್ನು ಸಮ ನಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ನೀಡುವ ವಿಶೇಷ ವಾದ ಹಬ್ಬ.

(ಲೇಖಕಿ ಹವ್ಯಾಸಿ ಬರಹಗಾರ್ತಿ)