Friday, 15th November 2024

ವಾಣಿಜ್ಯ ವಿಭಾಗ: ವಿದ್ಯಾನಿಧಿ ಕಾಲೇಜಿನ ಜ್ಞಾನವಿ ರಾಜ್ಯಕ್ಕೆ ಪ್ರಥಮ

ತುಮಕೂರು: ನಗರದ ವಿದ್ಯಾನಿಧಿ ಕಾಲೇಜಿನ ವಾಣಿಜ್ಯ ವಿಭಾಗದ ಪಿಯುಸಿ ವಿದ್ಯಾರ್ಥಿನಿ ಎಂ.ಜ್ಞಾನವಿ 600ಕ್ಕೆ 597 ಅಂಕ ಗಳಿಸುವ ಮೂಲಕ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಡಿ.ಎಲ್. ಮಂಜುನಾಥ್, ಡಿ.ಮಂಜುಳಾ ದಂಪತಿಯ ಪುತ್ರಿ ಜ್ಞಾನವಿ. ಈಕೆಯ ಪೋಷಕರು ಬೀಚನಹಳ್ಳಿಯಲ್ಲಿ ಸಣ್ಣದೊಂದು ಹೋಟೆಲ್ ನಡೆಸುತ್ತಿದ್ದಾರೆ. ಪ್ರಥಮ ಪಿಯುಸಿಯಲ್ಲಿ 600ಕ್ಕೆ 600 ಅಂಕ ಗಳಿಸಿದರು.

ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಉತ್ತಮ ವಾತಾವರಣವಿದೆ. ಪರೀಕ್ಷೆಯ ತಯಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ನಿರಂತರ ಅಭ್ಯಾಸದಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ವಾರ್ಷಿಕ ಪರೀಕ್ಷೆಗೂ ಮುನ್ನ 8 ಪೂರ್ವಭಾವಿ ಪರೀಕ್ಷೆಗಳು ನಡೆಸಿ ದ್ದರು. ಅಂತಿಮ ಪರೀಕ್ಷೆಗೆ ಇದರಿಂದ ಅನುಕೂಲವಾಯಿತು ಜ್ಞಾನವಿ ತಿಳಿಸಿದರು.

ಕಾಲೇಜಿನ ಹಾಸ್ಟೆಲ್ ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದೆ. ಪೋಷಕರ ಸಹಕಾರ , ಉಪನ್ಯಾಸಕರ ಮಾರ್ಗದರ್ಶನದಿಂದ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಯಿತು.ಒಂದು ವಿಷಯವನ್ನು ಓದಲು ಕುಳಿತರೆ ಅದು ಪೂರ್ತಿಯಾಗುವ ತನಕ ಬಿಡುತ್ತಿರಲಿಲ್ಲ. ಫಲಿತಾಂಶ ನೋಡಿ ಸಂತೋಷವಾಯಿತು. ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದು ವಿದ್ಯಾರ್ಥಿನಿ ಅಭಿಪ್ರಾಯವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.

ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿನಿ ಜ್ಞಾನವಿಯನ್ನು ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಅಧ್ಯಕ್ಷ ಜಯಣ್ಣ, ಕಾರ್ಯ ದರ್ಶಿ ಪ್ರದೀಪ್ ಕುಮಾರ್, ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ, ಉಪನ್ಯಾಸಕರು ಅಭಿನಂದಿಸಿದ್ದಾರೆ.

*
ವಿದ್ಯಾನಿಧಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಸಹಕಾರದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ನನ್ನ ತಂದೆ, ತಾಯಿ ಸಣ್ಣದೊಂದು ಹೋಟೆಲ್ ನಡೆಸುತ್ತಿದ್ದಾರೆ. ಚಾರ್ಟೆಡ್ ಅಕೌಟೆಂಟ್ ಆಗುವ ಕನಸಿದೆ. ವಿದ್ಯಾವಾಹಿನಿ ಕಾಲೇಜಿ ನಲ್ಲಿ ಚಾರ್ಟೆಡ್ ಅಕೌಟೆಂಟ್‌ ಕೋರ್ಸ್‌ಗೆ ದಾಖಲಾಗುತ್ತೇನೆ.

ಎಂ.ಜ್ಞಾನವಿ, ವಾಣಿಜ್ಯ ವಿಭಾಗದ ಟಾಪರ್.