Monday, 25th November 2024

ಕೆ.ಎಸ್. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಏ. 12 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ 25,000 ಬೆಂಬಲಿಗರು ಸಾಕ್ಷಿಯಾಗಲಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಸದಸ್ಯ ಇ. ವಿಶ್ವಾಸ್ ಹೇಳಿದರು.

ಯಾವ ಸಂಧಾನಗಳಿಗೂ ಅವರು ಬಗ್ಗಿಲ್ಲ. ಅವರಿಗಾದ ಅನ್ಯಾಯದ ಬಗ್ಗೆ ಸಾವಿರಾರು ಜನರು ಪ್ರತಿಕ್ರಿಯಿಸಿ ಚುನಾವಣೆಗೆ ನಿಲ್ಲುವಂತೆ ಪ್ರೋತ್ಸಾಹ ನೀಡಿದ್ದಾರೆ. ಹಾಗಾಗಿ ನಾಮಪತ್ರ ಸಲ್ಲಿಸುವರು ಎಂದರು.

ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಗೋಪಿ ವೃತ್ತಕ್ಕೆ ಬಂದು ಸಭೆ ನಡೆಸಲಾಗುವುದು. ನಂತರ ನಾಮಪತ್ರ ಸಲ್ಲಿಸುವರು. ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ಕಡೆಗಳಿಂದ ರಾಷ್ಟ್ರಭಕ್ತರು ಬರಲಿದ್ದಾರೆ ಎಂದರು.

‘ಅಮಿತ್ ಶಾ ಅವರು ಈಶ್ವರಪ್ಪನವರಿಗೆ ದೆಹಲಿಗೆ ಬರಲು ಹೇಳಿ ಭೇಟಿಗೆ ಅವಕಾಶ ಕೊಡದೇ ಅವಮಾನ ಮಾಡಿದ್ದಾರೆ. ಈಶ್ವರಪ್ಪ ಅಮಿತ್ ಶಾ ಅವರಿಗಿಂತ ವಯಸ್ಸಿನಲ್ಲಿ ಹಿರಿಯರು. ರಾಜಕಾರಣದಲ್ಲಿಯೂ ಹಿರಿಯರು. ಭೇಟಿಯಾಗದ ಮೇಲೆ ಏಕೆ ಕರೆಸಿಕೊಳ್ಳ ಬೇಕಿತ್ತು’ ಎಂದು ಪ್ರಶ್ನಿಸಿದರು.

ಪ್ರಮುಖರಾದ ಶಂಕರ್ ಗನ್ನಿ, ಏಳುಮಲೈ ಬಾಬು, ಸುವರ್ಣಾ ಶಂಕರ್, ಬಾಲು, ಲಕ್ಷ್ಮೀ ಶಂಕರನಾಯ್ಕ, ಆರತಿ ಆ.ಮ.ಪ್ರಕಾಶ್, ರಾಜು, ರವಿ, ಚಿದಾನಂದ ಇದ್ದರು.