Thursday, 19th September 2024

ಇಂದಿನಿಂದ ಎರಡನೇ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು: ಕರ್ನಾಟಕದಲ್ಲಿ ಇದೇ ಏ.27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ದಿನದಿಂದ ದಿನಕ್ಕೆ ಕಾವು ಏರುತ್ತಿರುವ ಮಧ್ಯೆಯೇ ಎರಡನೇ ಹಂತದ 14 ಕ್ಷೇತ್ರಗಳಿಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಚುನಾವಣೆ ಘೋಷಣೆಯಾಗಿ, ಅಭ್ಯರ್ಥಿಗಳು ಆಖೈರಾದ ಬಳಿಕವೂ ಕಾಂಗ್ರೆಸ್-ಬಿಜೆಪಿಯಲ್ಲಿ ಅತೃಪ್ತಿ-ಬಂಡಾಯ ಶಮನ ವಾಗಿಲ್ಲ.

ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಕೈತಪ್ಪಿದವರು, ಅಭ್ಯರ್ಥಿ ಜತೆ ಕಾಣಿಸಿಕೊಂಡಿಲ್ಲ. ಪ್ರಚಾರದಲ್ಲೂ ಭಾಗಿಯಾಗುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಬಿರುಸುಗೊಳ್ಳುತ್ತಿದ್ದರೆ, ಅತೃಪ್ತರು ಒಳೇಟು ಕೊಡಲಿದ್ದಾರೆಯೇ ಎಂಬ ಆತಂಕ ನಾಯಕರಲ್ಲಿ ಮೂಡಿದೆ.

ಕರಾವಳಿಯ ಉತ್ತರ ಕನ್ನಡ, ಮಲೆನಾಡಿನ ಶಿವಮೊಗ್ಗ, ಮಧ್ಯ ಕರ್ನಾಟಕದ ದಾವಣಗೆರೆ, ಕಲ್ಯಾಣ ಹಾಗೂ ಕಿತ್ತೂರು ಕರ್ನಾ ಟಕದ ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್‌ ನಡುವೆ ಲೋಕಸಭಾ ಚುನಾವಣಾ ಮೈತ್ರಿ ಯಾಗಿ ಕ್ಷೇತ್ರಗಳ ಹಂಚಿಕೆ ಮಾಡಿಕೊಂಡಿವೆ. ಜೆಡಿಎಸ್‌ಗೆ ಬಿಟ್ಟುಕೊಟ್ಟ ಯಾವ ಕ್ಷೇತ್ರಗಳೂ ಎರಡನೇ ಹಂತದಲ್ಲಿ ಇಲ್ಲ. ಹೀಗಾಗಿ, ಎಲ್ಲ 14 ಕ್ಷೇತ್ರಗಳಲ್ಲೂ ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ನಾಲ್ಕು ಕ್ಷೇತ್ರಗಳಲ್ಲಿ ಬಂಡಾಯದ ಕಹಳೆ ಮೊಳಗಿಸಿ ರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಹಾಗೂ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಶಿವಮೊಗ್ಗ ಹಾಗೂ ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿಗೆ, ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಕಾವು ಎದುರಾಗಿದೆ.

ದಾವಣಗೆರೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿನಯ್‌ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಘೋಷಣೆ ಮಾಡಿದ್ದಾರೆ. ಕೆಪಿಸಿಸಿ ಖಜಾಂಚಿಯೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಅವರ ಎದುರು ಸೆಣಸುತ್ತಿರುವ ಅವರು ವಿನಯ್‌ ಅವರ ಬಂಡಾಯದ ಬಿಸಿ ಎದುರಿಸುತ್ತಿದ್ದಾರೆ.

ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಮಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಎಲ್ಲ 28 ಕ್ಷೇತ್ರಗಳ ಗೆಲುವು ಪ್ರತಿಷ್ಠೆಯಾಗಿದ್ದರೂ, ತವರು ಕ್ಷೇತ್ರ ಶಿವಮೊಗ್ಗ ಗೆಲ್ಲುವುದು ಇಬ್ಬರಿಗೂ ಸವಾಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಇನ್ನೊಬ್ಬ ಪುತ್ರ, ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅಭ್ಯರ್ಥಿ. ಯಡಿಯೂರಪ್ಪ ಕುಟುಂಬದ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ನಾಯಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಕ್ಷೇತ್ರದಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾ ಲೇಶ್ವರ ಸ್ವಾಮೀಜಿ ನಡೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸವಾಲಾಗಿದೆ.

Leave a Reply

Your email address will not be published. Required fields are marked *