ಇಸ್ಲಾಮಾಬಾದ್: ಪಾಕಿಸ್ತಾನದ ಅಫ್ಘಾನಿಸ್ತಾನದ ಗಡಿಯಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯವನ್ನು ಪಾಕ್ ಕೆಡವಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೂ ದೇವಾಲಯ ಕೆಡವಿದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಐತಿಹಾಸಿಕ ದೇವಾಲಯವಿದೆ. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದ ಬಳಿಕ ಈ ದೇವಸ್ಥಾನವನ್ನು ಮುಚ್ಚಲಾಗಿತ್ತು. ಇದೀಗ ಅದೇ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಪಾಕ್ ಸರಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಇಲ್ಲಿ ಯಾವುದೇ ಹಿಂದೂ ದೇವಾಲಯ ಇರಲಿಲ್ಲ ಎಂದು ಆಡಳಿತ ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ.
ಪತ್ರಕರ್ತ ಇಬ್ರಾಹಿಂ ಶಿನ್ವಾರಿ ಅವರ ಹೇಳಿಕೆಯಂತೆ ಹಿಂದೂ ದೇವಾಲಯವು ಲಾಂಡಿ ಕೋಟಾಲ್ ಮಾರುಕಟ್ಟೆಯ ಮಧ್ಯಭಾಗ ದಲ್ಲಿತ್ತು ಮತ್ತೆ ಇದು 1947 ರಲ್ಲಿ ಮುಚ್ಚಲಾಯಿತು. 1992 ರಲ್ಲಿ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸಗೊಳಿಸಿದ ನಂತರ ಇಲ್ಲಿನ ಕುಟುಂಬಗಳು ಭಾರತಕ್ಕೆ ವಲಸೆ ಬಂದರು. ಬಳಿಕ ದೇವಾಲಯವನ್ನು ಕೆಡವಿ ಹಾಕಲಾಯಿತು. ಇದೀಗ ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೋಟಾಲ್ ನಲ್ಲಿ ಖೈಬರ್ ಟೆಂಪಲ್ ಎಂಬ ಹೆಸರಿನ ದೇವಸ್ಥಾನವಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮೇತರರಿಗೆ ಧಾರ್ಮಿಕ ಪ್ರಾಮುಖ್ಯತೆಯ ಐತಿಹಾಸಿಕ ಕಟ್ಟಡಗಳ ರಕ್ಷಣೆ ಮತ್ತು ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳು ವುದು ಜಿಲ್ಲಾಡಳಿತ ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಪಾಕಿಸ್ತಾನ್ ಹಿಂದೂ ಮಂದಿರ ನಿರ್ವಹಣಾ ಸಮಿತಿಯ ಹರೂನ್ ಸರಬ್ದಿಯಾಲ್ ಹೇಳಿದ್ದಾರೆ.