ಚದುರಂಗ
ಸಿಂಚನ ಎಂ.ಕೆ
ಯಾವ ಒಂದು ನಿರ್ದಿಷ್ಟ ವಸ್ತು ಇಲ್ಲದೆ ನಮ್ಮ ಚುನಾವಣೆಗಳು ನಡೆಯಲು ಸಾಧ್ಯವಿಲ್ಲ ಹೇಳಿ? ಅದುವೇ ಹಣ, ಝಣಝಣ ಕಾಂಚಾಣ. ನಮ್ಮ ಜನರು ತಾವು ಮಾಡುವ ಸಣ್ಣ ದಾನದ ಬಗೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿ ಪ್ರಚಾರ ಪಡೆಯಲು ಇಚ್ಛಿಸುತ್ತಾರೆ. ದೇವಸ್ಥಾನಕ್ಕೋ ಅಥವಾ ಶಾಲೆಗೋ ಒಂದು ಫೋನ್ ಅನ್ನು ಕೊಡುಗೆಯಾಗಿ ನೀಡಿದರೂ, ಅದರ ಮೇಲೆ ಒಂದೆರಡು ಕಡೆಯಾದರೂ ತಮ್ಮ ಹೆಸರು ಇರುವಂತೆ ನೋಡಿಕೊಳ್ಳುತ್ತಾರೆ.
ಅಂಥದ್ದರಲ್ಲಿ, ರಾಜಕೀಯ ಪಕ್ಷಗಳಿಗೆ ಕೋಟಿ ಗಟ್ಟಲೆ ಹಣವನ್ನು ದೇಣಿಗೆ ನೀಡುವಾಗ ಮಾತ್ರ ಯಾಕೆ ತಮ್ಮ ಹೆಸರನ್ನು ಬಹಿರಂಗ ಪಡಿಸಲೇಬಾರದು ಎನ್ನುತ್ತಾರೆ? ೨೦೦೦ ರು.ಗಿಂತ ಹೆಚ್ಚಿನ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರು ಅಷ್ಟು ಮೌಲ್ಯದ ಚುನಾವಣಾ ಬಾಂಡ್ಗಳನ್ನು ಖರೀದಿಸಿ ತಮ್ಮ ಹೆಸರನ್ನು ರಹಸ್ಯವಾಗಿರಿಸಬಹುದು. ೫ಜಿ ನೆಟ್ವರ್ಕ್ನಲ್ಲಿ ದೊರೆಯುವ ಅನ್ ಲಿಮಿಟೆಡ್ ಡೇಟಾದಂತೆ ಈ ಬಾಂಡ್ಗಳಿಂದ ಅನ್ ಲಿಮಿಟೆಡ್ ದಾನವನ್ನು ಮಾಡಬಹುದು.
ಬಾಂಡ್ಗಳ ವಿಚಾರವಾಗಿ ಆರ್ಬಿಐ ಹೊಂದಿದ್ದ ಏಕಸ್ವಾಮ್ಯತೆಯನ್ನು ತೊಡೆದುಹಾಕಿ ಎಸ್ಬಿಐಗೂ ಅದರ ಅಧಿಕಾರವನ್ನು ನೀಡಲಾಯಿತು. ಎಸ್ಬಿಐನ ನಿಗದಿತ ೨೯ ಶಾಖೆಗಳಲ್ಲಿ ಈ ಬಾಂಡ್ ಗಳ ಖರೀದಿಗೆ ಅವಕಾಶ ಮಾಡಿಕೊಡಲಾಯಿತು. ೨೦೧೭ ರಲ್ಲಿ ಚುನಾವಣಾ ಸುಧಾರಣೆಗಾಗಿ ಪಾರದರ್ಶಕತೆ, ಹೊಣೆಗಾರಿಕೆಗಳನ್ನು ಹೆಚ್ಚಿಸಲು ಈ ಚುನಾವಣಾ ಬಾಂಡ್ಗಳನ್ನು (೧ ಸಾವಿರ, ೧೦ ಸಾವಿರ, ೧ ಲಕ್ಷ, ೧೦ ಲಕ್ಷ, ೧ ಕೋಟಿ ಮೌಲ್ಯದ್ದು) ಜಾರಿಗೆ ತರಲಾಯಿತು. ೨೦೧೭ಕ್ಕಿಂತ ಮೊದಲಿದ್ದ ಕಾನೂನಿನ
ಅನ್ವಯ ೨೦,೦೦೦ಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಾದರೆ ಅವರ ಗುರುತನ್ನು ಬಹಿರಂಗಪಡಿಸಬೇಕಿತ್ತು.
ಹಾಗೆಯೇ ದಾನ ಮಾಡುವ ಕಂಪನಿಗಳು ತಮ್ಮ ಕಳೆದ ೩ ವರ್ಷಗಳ ಸರಾಸರಿ ಲಾಭದ ಶೇ.೭.೫ರಷ್ಟು ಹಣವನ್ನು ಮಾತ್ರ ದಾನ ಮಾಡಬಹುದಾಗಿತ್ತು. ಆದರೆ ಈ ಕಾನೂನು ಕಾಗದದ ರೂಪದಲ್ಲಿ ಮಾತ್ರ ಉಳಿಯಿತು. ಕಂಪನಿಗಳು ಅಧಿಕೃತವಾಗಿ ೨೦,೦೦೦
ಕ್ಕಿಂತ ಕಡಿಮೆ ಮೊತ್ತವನ್ನು ದೇಣಿಗೆ ನೀಡುತ್ತಿರುವುದಾಗಿ ಉಲ್ಲೇಖಿಸಿ, ಅನಧಿಕೃತವಾಗಿ ಕೋಟಿಗಟ್ಟಲೆ ನೀಡುತ್ತಿದ್ದವು. ಇದರಿಂದ ಕಂಪನಿ ಮತ್ತು ರಾಜಕೀಯ ಪಕ್ಷಗಳ ಲಾಭಕ್ಕೆ ಕಪ್ಪುಹಣದ ಸಂಚಾರ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಜಾರಿಗೆ ತಂದ ಅನಿಯಮಿತ ಚುನಾವಣಾ ಬಾಂಡ್ಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹಣದ ಹರಿವಿಗೆ ರತ್ನಗಂಬಳಿ ಯನ್ನೇ ಹಾಸಿದವು.
ಒಂದು ಚಾಕೊಲೇಟ್ ಖರೀದಿಸಿದರೂ ನಾವು ತೆರಿಗೆ ಕಟ್ಟಬೇಕು. ಅಂಥದ್ದರಲ್ಲಿ, ಕಂಪನಿಗಳು ಕೋಟಿ ಕೋಟಿ ಮೌಲ್ಯದ ಬಾಂಡ್ ಗಳನ್ನು ಶೇ.೧೦೦ರ ತೆರಿಗೆ ವಿನಾಯಿತಿಯೊಂದಿಗೆ ಖರೀದಿಸಬಹುದು ಮತ್ತು ಅದನ್ನು ರಾಜಕೀಯ ಪಕ್ಷಗಳು ಶೇ.೧೦೦ರಷ್ಟು ತೆರಿಗೆ ವಿನಾಯಿತಿಯೊಂದಿಗೆ ಪಡೆದುಕೊಳ್ಳಬಹುದು. ಹಾಗೆಯೇ ಬಾಂಡ್ ಖರೀದಿಸಿದ ಲೆಕ್ಕವನ್ನು ಕಂಪನಿಯ ವಾರ್ಷಿಕ ಬಜೆಟ್ನಿಂದ ಕೈಬಿಡಬಹುದು. ಇದು ಒಂದು ರೀತಿ ಕಾನೂನಿನ ವಿರುದ್ಧವಾಗಿ ವ್ಯವಹರಿಸಲು ಕಾನೂನೇ ದಾರಿ ಮಾಡಿಕೊಟ್ಟಂತಾಯಿತು.
ಈ ಬಾಂಡ್ಗಳನ್ನು ಎಸ್ಬಿಐನ ನಿಗದಿತ ಶಾಖೆಗಳಿಂದ ತ್ರೈಮಾಸಿಕದ ಮೊದಲ ೧೦ ದಿನಗಳಲ್ಲಿ ಮಾತ್ರ ಖರೀದಿಸಬಹುದು. ಆದರೆ ಕೇಂದ್ರ ಸರಕಾರದ ಸೂಚನೆಯಂತೆ, ವಿಧಾನಸಭಾ ಚುನಾವಣೆ ವೇಳೆ ೧೫ ದಿನ ಹಾಗೂ ಲೋಕಸಭಾ ಚುನಾವಣೆ ವೇಳೆ ೩೦ ದಿನ ಹೆಚ್ಚುವರಿಯಾಗಿ ಖರೀದಿಸಲು ಅವಕಾಶವಿರುತ್ತದೆ. ಇದನ್ನು ಖರೀದಿಸಿದ ೧೫ ದಿನಗಳ ಒಳಗೆ, ಆ ಬಾಂಡ್ ಅನ್ನು ಸ್ವೀಕರಿಸು ತ್ತಿರುವ ರಾಜಕೀಯ ಪಕ್ಷಗಳು ಅದನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬೇಕು. ಇಲ್ಲವಾದರೆ ಅದು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಸೇರುತ್ತದೆ.
ಇದುವರೆಗೂ ಈ ಚುನಾವಣಾ ಬಾಂಡ್ಗಳಿಂದ ಬಿಜೆಪಿ ೬೦೬೦ ಕೋಟಿ (ಶೇ.೪೭.೫), ತೃಣಮೂಲ ಕಾಂಗ್ರೆಸ್ ೧೬೦೯ ಕೋಟಿ (ಶೇ.೧೨.೬) ಮತ್ತು ಕಾಂಗ್ರೆಸ್ ೧೪೨೧ ಕೋಟಿ ರು. ಮೊತ್ತವನ್ನು ಪಡೆದಿವೆ. ಆಡಳಿತಾರೂಢ ಪಕ್ಷ ಬಿಜೆಪಿಗೆ ಹೆಚ್ಚು ದೇಣಿಗೆ ಬಂದಿದೆ. ಎಸ್ಬಿಐನ ಮುಖ್ಯಸ್ಥರು ಸರಕಾರದವರೇ ಆಗಿರುತ್ತಾರಾದ್ದರಿಂದ, ಸರಕಾರಕ್ಕೆ ಮಾತ್ರ ಬಾಂಡ್ನ ಎಲ್ಲಾ ಮಾಹಿತಿಯು ತಿಳಿದಿರುತ್ತದೆ. ‘ಇದು ಅಸಾಂವಿಧಾನಿಕ, ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಹೇಳಿ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೀಫಾರ್ಮ್ಸ್’ (ಎಡಿಆರ್) ಸಂಸ್ಥೆಯು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು.
ಚುನಾವಣಾ ಬಾಂಡ್ ವ್ಯವಸ್ಥೆಯು ಆರ್ಟಿಕಲ್ ೧೯(೧) (ಎ)ನ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್ಟಿಐ) ಉಲ್ಲಂಸುತ್ತದೆ. ಆದರೆ
ಸರಕಾರವು ಆರ್ಟಿಕಲ್ ೨೧ರ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಯ ಅನ್ವಯ, ಬಾಂಡ್ ಖರೀದಿಸುವ ಕಂಪನಿಗಳ ಹೆಸರನ್ನು ಬಹಿರಂಗಗೊಳಿಸಲಾಗದು ಎಂದು ವಾದಿಸುತ್ತಿದೆ. ಆದರೆ ಮನುಷ್ಯರಿಗೆ ನೀಡುವಂತೆ ಕಂಪನಿಗಳಿಗೆ ಜೀವರಕ್ಷಣೆಯ ಹಕ್ಕನ್ನು ನೀಡಲಾಗುವುದಿಲ್ಲ ಎಂಬುದು ತಜ್ಞರ ವಾದ. ಸಾಮಾಜಿಕ ಕಳಕಳಿಯ ವಿಚಾರವು ಮುನ್ನೆಲೆಗೆ ಬಂದಾಗ ಆರ್ಟಿಕಲ್ ೧೯(೧)(ಎ) ಯಾವಾಗಲೂ ಆರ್ಟಿಕಲ್ ೨೧ಕ್ಕಿಂತ ಹೆಚ್ಚಿನ ಪ್ರಾಧಾನ್ಯವನ್ನು ಹೊಂದಿರುತ್ತದೆ.
ಹಾಗೆಯೇ ಹೆಚ್ಚು ಬಾಂಡ್ ಖರೀದಿಸುವ ಕಂಪನಿಗಳು ಹೆಚ್ಚಾಗಿ ಸರಕಾರಿ ಯೋಜನೆಗಳನ್ನು ಪಡೆಯುತ್ತಿವೆ. ಬಾಂಡ್ ಖರೀದಿಸುವ ಅರ್ಧಕ್ಕಿಂತ ಹೆಚ್ಚು ಕಂಪನಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸರಕಾರಿ ಟೆಂಡರ್ನಲ್ಲಿ ಭಾಗವಹಿಸುವ ಕಂಪನಿಗಳೇ ಆಗಿವೆ. ಹಾಗೆಯೇ, ಬಾಂಡ್ ಖರೀದಿಸಿ ದೇಣಿಗೆ ನೀಡದ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿಯಾಗುವುದು ಮತ್ತು ನಂತರದಲ್ಲಿ ಅವು ಬಾಂಡ್ ಖರೀದಿಸಿರುವುದು ಕಂಡುಬಂದಿದೆ.
ದೇಣಿಗೆ ನೀಡುವ ಕಂಪನಿಗಳಿಗೆ ಅನುಕೂಲವಾಗುವಂತೆ ಸರಕಾರವು ವಾಣಿಜ್ಯ ನೀತಿಗಳನ್ನು ರೂಪಿಸುವುದು, ವ್ಯಾವಹಾರಿಕ
ಅಂಕಿ-ಅಂಶಗಳ ಅನುಸಾರ ನಷ್ಟದಲ್ಲಿರುವ ಕಂಪನಿಗಳು ಕೂಡ ಬೃಹತ್ ಮೊತ್ತದ ಬಾಂಡ್ಗಳನ್ನು ಖರೀದಿಸಿರುವುದು- ಇವಿಷ್ಟು ಚುನಾವಣಾ ಬಾಂಡ್ಗಳ ಮೇಲೆ ಇರುವ ಆರೋಪಗಳು. ಆದ್ದರಿಂದ ಸುಪ್ರೀಂ ಕೋರ್ಟ್ ಈಗಾಗಲೇ ಈ ಬಾಂಡ್ಗಳನ್ನು ರದ್ದು ಮಾಡಿದೆ. ಬಿಡುಗಡೆಯಾಗದ ಬಾಂಡ್ಗಳನ್ನು ದಾನಿಗಳಿಗೆ ಹಿಂದಿರುಗಿಸಿ ವೆಚ್ಚವನ್ನು ಭರಿಸುವಂತೆ ಎಸ್ಬಿಐಗೆ ನಿರ್ದೇಶಿಸಿದೆ.
ಇದು ಪ್ರಜಾಪ್ರಭುತ್ವಕ್ಕೆ ಸಂದ ಅತಿದೊಡ್ಡ ಜಯ. ಆದರೆ ಎಲ್ಲಾ ಚುನಾವಣಾ ಬಾಂಡ್ಗಳು ಭ್ರಷ್ಟಾಚಾರದಿಂದಲೇ ಕೂಡಿವೆ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಕೆಲವು ಕಂಪನಿಗಳು ತಮ್ಮ ನೆಚ್ಚಿನ ಪಕ್ಷ ಗೆಲ್ಲಲಿ ಎಂಬ ಪ್ರಾಮಾಣಿಕ ಆಶಯದಿಂದಲೇ ಅವಕ್ಕೆ ಬಲ ತುಂಬಲು ಬಾಂಡ್ ಅನ್ನು ಖರೀದಿಸುತ್ತವೆ. ಹಾಗೆಯೇ, ಬಾಂಡ್ ಖರೀದಿಸಿ ದೇಣಿಗೆ ನೀಡಿರುವ ಕಂಪನಿಗಳ ಮೇಲೂ ‘ಇ.ಡಿ’ ದಾಳಿ ಮಾಡಿರುವ ಅಥವಾ ಮುಂದುವರಿಸಿರುವ ಉದಾಹರಣೆಗಳೂ ಇವೆ.
ಈ ಬಾಂಡ್ಗಳು ಮೇಲ್ನೋಟಕ್ಕೆ ಮಾತ್ರ ದೇಣಿಗೆಯ ಮುಖವಾಡ ಹಾಕಿಕೊಂಡು ಕಂಪನಿಗಳ ಕೆಲಸ ಮಾಡಿ ಕೊಡಲು ಹಣ ವಸೂಲಿ ಮಾಡುತ್ತಿರುವ ಏಜೆಂಟ್ಗಳಾಗಿ ಹೋಗಿವೆ. ಈ ವಿಚಾರವಾಗಿ ಸರಕಾರದೆಡೆಗೆ, ರಾಜಕೀಯ ಪಕ್ಷಗಳ ಕಡೆಗೆ ಬೆರಳುಮಾಡಿ ತೋರಿಸುವಂತೆ ನಾವೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ದೇಶದಲ್ಲಿ ಒಂದು ಚುನಾವಣೆ ಗೆಲ್ಲಲು ಎಷ್ಟೊಂದು ಹಣವನ್ನು ಖರ್ಚುಮಾಡಬೇಕಾದ ವಿವಶತೆಯನ್ನು ಸೃಷ್ಟಿಸಿಬಿಟ್ಟಿದ್ದೇವೆ. ಇದುವೇ ಸಮಸ್ಯೆಯ ಮೂಲವಾಗಿದೆ. ಈಗಾಗಲೇ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ತಂದು ದಿಟ್ಟ ಹೆಜ್ಜೆಗಳನ್ನಿಡುತ್ತಿರುವ ಆದರಣೀಯ ಪ್ರಧಾನಿ ಮೋದಿಯವರು, ‘ಒಂದು
ದೇಶ, ಒಂದು ಚುನಾವಣೆ’ಯಂಥ ಮತ್ತೊಂದು ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದರೆ, ಚುನಾವಣಾ ಖರ್ಚುಗಳೂ ಕಡಿಮೆಯಾಗಿ ಈ ಸಮಸ್ಯೆಯು ಹಂತಹಂತವಾಗಿ ನಿವಾರಣೆಯಾಗಬಹುದು.
(ಲೇಖಕಿ ಹವ್ಯಾಸಿ ಬರಹಗಾರ್ತಿ)