Saturday, 23rd November 2024

ಇದು ಹಿಂದೂಗಳ ಅಸ್ಮಿತೆಯ ಸಂಕೇತ

ಸ್ಥಳಪುರಾಣ

ಕೆ.ಶಶಿಕುಮಾರ್‌

ಕಾಶಿಯ ಜ್ಞಾನವಾಪಿ ಮಸೀದಿಯ ಕುರಿತಂತೆ ಹಿಂದೂ ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಗೆಲುವು ಲಭಿಸಿದೆ. ಇದುವರೆಗಿನ ನಿರ್ಣಾಯಕ ಗೆಲುವು ಇದಾಗಿತ್ತು. ಜ್ಞಾನವಾಪಿ ಮಸೀದಿಯಲ್ಲಿ ನಾಲ್ಕು ತೆಹಕಾನಗಳಿವೆ. ಇವುಗಳಲ್ಲಿ ಒಂದನ್ನು ಪುರೋಹಿತರ ಕುಟುಂಬ ಬಿಟ್ಟುಕೊಟ್ಟಿಲ್ಲ. ಇನ್ನುಳಿದ ಮೂರು ತೆಹಕಾನಗಳಿಗೆ ಬೀಗ ಜಡಿಯಲಾಗಿತ್ತು.

೧೯೯೨ರಲ್ಲಿ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಇವುಗಳಿಗೆ ಬೀಗ ಹಾಕಿಸಿದ್ದರು. ಇವುಗಳ ಬೀಗ ತೆಗೆದು ಇಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ವಾರಾಣಸಿಯ ಜಿಲ್ಲಾ ನ್ಯಾಯಾಲಯ ಜನವರಿ ೩೧ರಂದು ತೀರ್ಪು ನೀಡಿತು. ಹರಿಶಂಕರ್ ಜೈನ್ ಮತ್ತು ವಿಷ್ಣುಶಂಕರ್ ಜೈನ್ ಎಂಬ ತಂದೆ-ಮಕ್ಕಳು ಈ ಪ್ರಕರಣದಲ್ಲಿ ವಾದ
ಮಾಡಿದ ಪರಿಣಾಮ ಹಿಂದೂ ಕಕ್ಷಿದಾರರಿಗೆ ಗೆಲುವು ಲಭಿಸಿತು. ಈ ಗೆಲುವಿಗೆ ಕಾರಣವಾದದ್ದು ‘ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ’ (ಎಎಸ್‌ಐ) ವರದಿ.

೮೩೯ ಪುಟಗಳ ಈ ವರದಿಯನ್ನು ಫೋಟೋಗಳ ಸಹಿತ ಕೋರ್ಟ್‌ಗೆ ಸಲ್ಲಿಸಲಾಯಿತು. ಜ್ಞಾನವಾಪಿ ಮಸೀದಿಯ ಸರ್ವೆ
ಸಂದರ್ಭದಲ್ಲಿ ದೇವನಾಗರಿ, ಕನ್ನಡ, ತೆಲುಗು ಭಾಷೆಯ ಶಿಲಾಶಾಸನಗಳು ಪತ್ತೆಯಾಗಿದ್ದವು. ಜತೆಗೆ ಪರ್ಷಿಯನ್ ಭಾಷೆಯ ಶಿಲಾಶಾಸನವೂ ದೊರಕಿದ್ದು ವಿಶೇಷವೆನ್ನಬೇಕು. ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳ ಸಂದರ್ಭದಲ್ಲಿ ಎಎಸ್‌ಐ ವರದಿಯು ಇದುವರೆಗಿನ ಎಲ್ಲಾ ಸುಳ್ಳುಗಳನ್ನು ಜಗತ್ತಿನ ಮುಂದೆ ಬಯಲುಗೊಳಿಸಿತು.

ಇತಿಹಾಸದ ಪ್ರಕಾರ, ೧೬೬೯ರ ಸೆಪ್ಟೆಂಬರ್ ೨ರಂದು ಮೊಘಲ್ ಸುಲ್ತಾನ ಔರಂಗಜೇಬ್ ಕಾಶಿಯ ವಿಶ್ವನಾಥ ಮಂದಿರವನ್ನು ಒಡೆದುಹಾಕುವಂತೆ ತನ್ನ ಸೈನ್ಯಕ್ಕೆ ಆದೇಶಿಸಿದ. ಈ ವಿಷಯವನ್ನು ಔರಂಗಜೇಬನು ಸ್ವತಃ ತನ್ನ ‘ನಾಸಿರ್ -ಇ-ಅಲಂಗೀರ್’ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ. ಇವನ ಆದೇಶದ ಮೇರೆಗೆ ಮೊಘಲ್ ಸೈನಿಕರು ವಿಶ್ವನಾಥ ಮಂದಿರವನ್ನು ಧ್ವಂಸ ಗೊಳಿಸಿದರು. ಇದಾದ ಆರು ವರ್ಷಗಳ ನಂತರ, ಅಂದರೆ ೧೬೭೬ರಲ್ಲಿ, ಔರಂಗಜೇಬ ಸುಲ್ತಾನನಾದ ೨೦ನೇ ವರ್ಷದ ಸಂಭ್ರಮಾ ಚರಣೆಯ ವೇಳೆ, ಕಾಶಿ ವಿಶ್ವನಾಥ ಮಂದಿರವು ಧ್ವಂಸಗೊಂಡ ಸ್ಥಳದಲ್ಲಿ ಮಸೀದಿಯ ನಿರ್ಮಾಣ ವಾಯಿತು.

ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಪಾರ್ಸಿ ಭಾಷೆಯ ಶಿಲಾಶಾಸನವು ಈ ಕುರಿತು ಮಾಹಿತಿ ನೀಡುತ್ತದೆ. ಆಗಿನಿಂದ ಈತನಕ ಈ ಸ್ಥಳಕ್ಕಾಗಿ ಬಡಿದಾಟ ನಡೆಯುತ್ತಲೇ ಬಂದುದು ವಿಪರ್ಯಾಸ. ಇತಿಹಾಸದ ಪ್ರಕಾರ, ಕಾಶಿ ವಿಶ್ವನಾಥ ಮಂದಿರದ ಮೇಲೆ ಮೊಟ್ಟಮೊದಲ ದಾಳಿ ನಡೆದಿದ್ದು ೧೧೯೪ರಲ್ಲಿ. ಇದನ್ನು ಕೈಗೊಂಡವನು ದೆಹಲಿ ಸುಲ್ತಾನರ ಗುಲಾಮ ಕುತ್ಬುದ್ದೀನ್
ಐಬಕ್. ಆದರೆ, ದೇವಾಲಯ ನಾಶವಾಯಿತು ಎಂದು ಆಗಿನ ನಮ್ಮ ಹಿರಿಯರು ಕೈಕಟ್ಟಿ ಕೂರದೆ ಮತ್ತೊಂದು ದೇವಾಲಯವನ್ನು ನಿರ್ಮಿಸಿದರು.

ತರುವಾಯದಲ್ಲಿ, ೧೨೩೬-೪೦ರ ಅವಧಿಯಲ್ಲಿ ರಜಿಯಾ ಸುಲ್ತಾನ್ ಮತ್ತೊಮ್ಮೆ ಆ ದೇಗುಲವನ್ನು ಧ್ವಂಸಗೊಳಿಸಿದಳು. ೧೩೯೦-೧೪೦೦ರ ಅವಧಿಯಲ್ಲಿ ಅವಿಮುಕ್ತೇಶ್ವರ ಜಾಗದಲ್ಲಿ ಹಿಂದೂಗಳು ಮತ್ತೆ ವಿಶ್ವನಾಥನ ದೇಗುಲವನ್ನು ನಿರ್ಮಿಸಿದರು; ಆದರೆ ೧೪೩೬-೫೮ರ ನಡುವೆ ಜಾನ್ಪುರದ ರಾಜ ಹುಸೇನ್ ಶಾರ್ಕಿ ಇದನ್ನು ಮತ್ತೊಮ್ಮೆ ನಾಶಗೊಳಿಸಿದ. ೧೪೭೫-೮೦ರ ನಡುವೆ ಹಿಂದೂ ರಾಜರೆಲ್ಲರೂ ಒಟ್ಟಿಗೆ ಸೇರಿ ಈ ದೇಗುಲವನ್ನು ಮರುನಿರ್ಮಿಸಿದರು. ಆದರೆ ೧೪೯೦ರಲ್ಲಿ ದೆಹಲಿಯ ಸುಲ್ತಾನ ಸಿಕಂದರ್ ಲೂಧಿ ಮತ್ತೆ ಅದನ್ನು ಹಾಳುಗೆಡವಿದ. ೧೫೮೫ರಲ್ಲಿ ರಾಜ ಮಾನ್‌ಸಿಂಗ್ ನಿಂದ ಕಾಶಿ ದೇಗುಲ ಮತ್ತೆ ರೂಪುಗೊಂಡಿತು.

ಇದರ ಮೇಲೆ ಕಟ್ಟಕಡೆಯ ದಾಳಿ ಸಂಭವಿಸಿದ್ದು ಔರಂಗಜೇಬನ ಕಾಲಘಟ್ಟದಲ್ಲಿ (೧೬೬೯). ನಂತರವೂ ಈ ದೇವಾಲಯವನ್ನು ಮರಳಿ ಪಡೆಯಲು ಅನೇಕ ಪ್ರಯತ್ನಗಳಾದವು. ಹಣವನ್ನು ಕೊಟ್ಟು ಜಾಗ ಖರೀದಿಸಲು ಯತ್ನಿಸಿದರೂ ಆಗಲಿಲ್ಲ, ಹಿಂದೂ ರಾಜರು ಸೈನ್ಯ ಕಟ್ಟಿಕೊಂಡು ಬಂದು ಕಸರತ್ತು ಮಾಡಿದರೂ ಗಿಟ್ಟಲಿಲ್ಲ. ಕೊನೆಗೆ ಆ ಜ್ಞಾನವಾಪಿ ಮಸೀದಿಯ ಪಕ್ಕದಲ್ಲೇ, ಇಂದೋರ್ ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ೧೭೭೬-೮೦ರ ಅವಧಿಯಲ್ಲಿ ಸಣ್ಣದೊಂದು ದೇವಾಲಯವನ್ನು ನಿರ್ಮಿಸಿದರು (ಪ್ರಸ್ತುತ, ಕಾಶಿ ವಿಶ್ವನಾಥ ಕಾರಿಡಾರ್ ಪಕ್ಕದಲ್ಲಿ ಅಹಲ್ಯಾ ಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ). ಈ ದೇವಾಲಯದ ಗೋಪುರಕ್ಕೆ ಮಹಾರಾಜ ರಣಜಿತ್ ಸಿಂಗ್ ಅವರು ೧೮೩೫ರಲ್ಲಿ ಚಿನ್ನದ ಹೊದಿಕೆ
ಹಾಕಿಸಿದರು.

ಅಂದಿನಿಂದಲೂ ಅಲ್ಲಿ ಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾದ ನಂತರ, ಅಕ್ಕಪಕ್ಕದ ದೇಗುಲಗಳನ್ನೆಲ್ಲಾ ಸೇರಿಸಿಕೊಂಡು ವಿಶಾಲವಾದ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ನಿರ್ಮಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಜ್ಞಾನವಾಪಿ ಮಸೀದಿಯ ದಿಕ್ಕಿಗೆ ನೋಡುತ್ತಾ ನಂದಿ ಕುಳಿತಿದ್ದಾನೆ. ‘ಕಾಶಿಯ ಇತಿಹಾಸವನ್ನು ಈ ನಂದಿಯ ಕಣ್ಣುಗಳಲ್ಲಿ ನೋಡಬಹುದು’ ಎಂದಿದ್ದಾರೆ ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು. ಮಸೀದಿಯ ಕೆಳಮಹಡಿಯಲ್ಲಿನ ವಿಗ್ರಹಗಳಿಗೆ ವ್ಯಾಸ ಕುಟುಂಬ ಪೂಜೆ ಸಲ್ಲಿಸುತ್ತಾ ಬರುತ್ತಿತ್ತು.

೧೯೯೨ರಲ್ಲಿ ಬಾಬ್ರಿ ಮಸೀದಿಯ ಧ್ವಂಸದ ನಂತರ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ.ನರಸಿಂಹರಾವ್ ಸರಕಾರವು ‘ಪೂಜಾ
ಸ್ಥಳಗಳ ಕಾಯ್ದೆ’ಯನ್ನು ಜಾರಿಗೊಳಿಸಿ, ‘೧೯೪೭ರ ಆಗಸ್ಟ್ ೧೫ಕ್ಕೂ ಮುಂಚೆ ಯಾವ ಸ್ಥಳವು ಮಸೀದಿಯಾಗಿತ್ತೋ ಅದು ಮಸೀದಿ ಯಾಗಿಯೇ ಮುಂದುವರಿಯಬೇಕು; ಯಾವ ಸ್ಥಳವು ಮಂದಿರವಾಗಿತ್ತೋ ಅದು ಮಂದಿರವಾಗಿಯೇ ಮುಂದುವರಿಯಬೇಕು, ಅಯೋಧ್ಯೆಯನ್ನು ಹೊರತು ಪಡಿಸಿ’ ಎಂದಿತ್ತು. ಅಯೋಧ್ಯೆ ಕುರಿತಾದ ತೀರ್ಮಾನವು ಕೋರ್ಟಿನಲ್ಲಿ ಆಗಬೇಕೆಂದು ಕಾನೂನು ಹೇಳಿತು. ಆದರೆ ಇದರ ವ್ಯಾಪ್ತಿಗೆ ಜ್ಞಾನವಾಪಿ ಮಸೀದಿ ಬರುತ್ತದೋ ಇಲ್ಲವೋ ಎಂಬ ಜಿಜ್ಞಾಸೆ ಹಾಗೆಯೇ ಇತ್ತು. ಆದರೆ ಪೂಜಾ ಸ್ಥಳಗಳ ಕಾಯ್ದೆಯಲ್ಲಿ ಒಂದು ಕಲಂ ಅನ್ನು ಸೇರಿಸಲಾಗಿದ್ದು, ಅದರನ್ವಯ ಎಎಸ್‌ಐ ಅಡಿಯಲ್ಲಿ ಬರುವಂಥ ಸ್ಮಾರಕಗಳು
ಈ ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಲಾಗಿದೆ. ನೂರು ವರ್ಷಗಳಿಗಿಂತಲೂ ಹಳೆಯದಾದ ಸ್ಮಾರಕಗಳು ಎಎಸ್‌ಐ ವ್ಯಾಪ್ತಿಗೆ ಬರುತ್ತವೆ. ಪೂಜಾ ಸ್ಥಳಗಳ ಕಾಯ್ದೆ ಜಾರಿಗೆ ಬಂದಾಗಲೂ ಜ್ಞಾನವಾಪಿ ಮಸೀದಿಯ ಕೆಳಮಹಡಿಯಲ್ಲಿ ಪೂಜಾಕಾರ್ಯಗಳು ನಡೆಯುತ್ತಿದ್ದವು.

ಆದರೆ ೧೯೯೩ರಲ್ಲಿ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಅವರು ಏಕಾಏಕಿ ದೇಗುಲಕ್ಕೆ ಬೀಗ ಹಾಕಿಸಿದರು. ಇಂದು ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು ೧೯೯೩ರ ತನಕ ಅಲ್ಲಿ ಪೂಜಾಕಾರ್ಯಗಳು ನಡೆಯುತ್ತಿತ್ತು ಎಂಬ ಕಾರಣದಿಂದ. ಜ್ಞಾನವಾಪಿ ಮಸೀದಿಯ ಪ್ರಕರಣವು ಮೊದಲು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ೧೯೯೧ರಲ್ಲಿ. ಈ ಪ್ರಕರಣವನ್ನು ೧೯೯೮ರಲ್ಲಿ ವಾರಾಣಸಿಯ ಸಿವಿಲ್ ಕೋರ್ಟ್ ವಜಾಗೊಳಿಸಿತು. ೨೦೧೯ರಲ್ಲಿ ಈ ಮಸೀದಿಯಲ್ಲಿ
ಎಎಸ್‌ಐ ಸರ್ವೆ ನಡೆಸುವುದಕ್ಕಾಗಿ ವಾರಾಣಸಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು. ಅಲ್ಲಿ ಈ ಕಾರ್ಯಕ್ಕೆ ಅನುಮತಿ ನೀಡಿದರೂ ಅಲಹಾಬಾದ್ ಹೈಕೋರ್ಟ್ ಅದಕ್ಕೆ ತಡೆ ನೀಡಿತ್ತು. ೨೦೨೧ರಲ್ಲಿ, ಐವರು ಹಿಂದೂ ಮಹಿಳೆಯರು ಜ್ಞಾನವಾಪಿ ಮಸೀದಿಯ ಕೆಳಮಹಡಿಯಲ್ಲಿನ ದೇಗುಲದಲ್ಲಿ ತಮಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿಅರ್ಜಿ ಸಲ್ಲಿಸಿದರು.

೨೦೨೨ರಲ್ಲಿ ಮಸೀದಿಯ ಸರ್ವೆಗೆಂದು ಕೋರ್ಟ್ ಕಮಿಷನರ್‌ರನ್ನು ನೇಮಿಸಿತು. ಅವರು ಸರ್ವೆಗೆ ಹೋದಾಗ ಮಸೀದಿಯ ವಜುಕಾನಾದಲ್ಲಿ ಶಿವಲಿಂಗದ ಆಕೃತಿ ಪತ್ತೆಯಾಯಿತು. ನ್ಯಾಯಾಲಯದ ಆದೇಶದಂತೆ ವಜುಕಾನಾವನ್ನು ಸೀಜ್ ಮಾಡಲಾಯಿತು. ೨೦೨೩ರಲ್ಲಿ ಜ್ಞಾನವಾಪಿ ಮಸೀದಿಯ ಸರ್ವೆಗೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿತು. ಅದರಂತೆ ಎಎಸ್‌ಐ ತಂಡ ಮಸೀದಿಯಲ್ಲಿ ಸರ್ವೆ ನಡೆಸಿ ಆ ನ್ಯಾಯಾಲಯಕ್ಕೆ ಡಿಸೆಂಬರ್ ೧೮ರಂದು ಸಮೀಕ್ಷಾ ವರದಿ ಸಲ್ಲಿಸಿತು. ಎಎಸ್‌ಐ ಸಮೀಕ್ಷೆಯ ಮಾಹಿತಿಯನ್ನು ಬಹಿರಂಗಗೊಳಿಸಲು ಈ ವರ್ಷದ ಜನವರಿ ೨೪ರಂದು ಕೋರ್ಟ್ ಒಪ್ಪಿಗೆ ನೀಡಿತು.

ಎಎಸ್‌ಐ ಸರ್ವೆಯ ವೇಳೆ ಮಸೀದಿಯ ಗೋಡೆಯ ಮೇಲೆ ಹಿಂದೂ ಮಂದಿರಕ್ಕೆ ಸಂಬಂಧಿಸಿದ ೫೫ ಶಿಲ್ಪಕಲಾಕೃತಿಗಳು, ೧೫ ಶಿವಲಿಂಗಗಳು, ವಿಷ್ಣುವಿನ ಮೂರು ವಿಗ್ರಹಗಳು, ಗಣೇಶ ಮತ್ತು ನಂದಿಯ ತಲಾ ಮೂರು ವಿಗ್ರಹಗಳು, ಹನುಮಂತನ ಐದು ವಿಗ್ರಹಗಳು ಪತ್ತೆಯಾಗಿವೆ. ಅಲ್ಲದೆ, ಹಿಂದೂ ದೇವರ ಚಿತ್ರವನ್ನು ಹೊಂದಿರುವ ಎರಡು ನಾಣ್ಯಗಳು ಪತ್ತೆಯಾಗಿವೆ ಮತ್ತು ಗೋಡೆಗಳಲ್ಲಿ ಶ್ರೀರಾಮನ ಚಿತ್ರಬರಹಗಳಿವೆ. ಕನ್ನಡದಲ್ಲಿ ಪತ್ತೆಯಾದ ಶಾಸನವೊಂದರಲ್ಲಿ ‘ದೊಡ್ಡರಸಯ್ಯನ ನರಸಿಂಹನ ಬಿನ್ನಹ’ ಎಂದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅವರ ಸಾಮಂತರಾಗಿದ್ದವರು ಕಾಶಿ ವಿಶ್ವನಾಥನಿಗೆ ಕಾಣಿಕೆಗಳನ್ನು
ಕಳುಹಿಸಿದಾಗ ಬರೆಸಿರುವ ಶಾಸನವಿದು ಎಂಬುದು ಎಎಸ್‌ಐ ವಾದ. ೧೨-೧೭ನೇ ಶತಮಾನದ ಶಿಲಾಶಾಸನಗಳಿವು ಎಂದು ಹೇಳಲಾಗುತ್ತಿದೆ.

ದೇಶದ ೧೨ ಜ್ಯೋತಿರ್ಲಿಂಗಗಳ ಪೈಕಿ ಕಾಶಿ ವಿಶ್ವನಾಥ ದೇಗುಲವೂ ಒಂದಾಗಿದೆ. ಅಯೋಧ್ಯೆ ಪ್ರಕರಣದ ರೀತಿಯಲ್ಲೇ ಜ್ಞಾನ ವಾಪಿ ಮಸೀದಿಯ ಪ್ರಕರಣವೂ ಸಾಗುತ್ತಿದ್ದು, ಇದಕ್ಕೆ ಯಾವ ರೀತಿಯಲ್ಲಿ ತಾರ್ಕಿಕ ಅಂತ್ಯ ಸಿಗುತ್ತದೆ ಎಂಬುದನ್ನು ಕಾಲವೇ ಹೇಳಬೇಕಿದೆ.

(ಲೇಖಕರು ಹವ್ಯಾಸಿ ಬರಹಗಾರರು)