Friday, 13th December 2024

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಏ.17 ರಿಂದ ಶುರು

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಏಪ್ರಿಲ್ 17 ರಿಂದ ಶುರುವಾಗಲಿದ್ದು, ಸಂಚಾರ ಬದಲಾವಣೆ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮೇಲ್ಸೇತುವೆಗಾಗಿ ಎರಡು ಹೊಸ ಲೇನ್‌ಗಳನ್ನು ನಿರ್ಮಿಸುವ ಕಾರಣ ಉತ್ತರ ಬೆಂಗಳೂರಿನಲ್ಲಿ ಸರಣಿ ಸಂಚಾರ ಬದಲಾವಣೆಯಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

“ಬಿಡಿಎ ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಹೆಚ್ಚುವರಿ ಟ್ರ್ಯಾಕ್‌ಗಳನ್ನು ಸೇರಿಸಲು ರಸ್ತೆ ಮೂಲಸೌಕರ್ಯ ಕಾಮಗಾರಿ ಗಳನ್ನು ಪ್ರಾರಂಭಿಸಿದೆ. ಈ ಕಾರಣದಿಂದ ಕೆಆರ್ ಪುರಂ ರ‍್ಯಾಂಪ್ ಮುಖ್ಯ ಟ್ರ್ಯಾಕ್‌ಗೆ ಸೇರುವ ಜಂಕ್ಷನ್‌ನಲ್ಲಿ ಈಗಿರುವ ಎರಡು ಸ್ಪ್ಯಾನ್‌ಗಳನ್ನು ಕಿತ್ತು ಹಾಕುವ ಅಗತ್ಯವಿದೆ” ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಮಂಗಳವಾರ ಮಾಹಿತಿ ನೀಡಿದ್ದಾರೆ.

ಕಾಮಗಾರಿ ಆರಂಭಿಸುವ ಕಾರಣ, ಹೆಬ್ಬಾಳ ಮೇಲ್ಸೇತುವೆಯ ಕೆಆರ್ ಪುರಂ ಅಪ್ ರ‍್ಯಾಂಪ್‌ನಲ್ಲಿ ದ್ವಿಚಕ್ರ ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ಹೇಳಿದ್ದಾರೆ.

1. ನಾಗವಾರದಿಂದ (ORR) ಮೇಖ್ರಿ ವೃತ್ತದ ಮೂಲಕ ನಗರದ ಕಡೆಗೆ ಹೋಗುವ ಪ್ರಯಾಣಿಕರು ಫ್ಲೈಓವರ್ ಕೆಳಗಿನ ಹೆಬ್ಬಾಳ ವೃತ್ತಕ್ಕೆ ಹೋಗಿ, ಕೊಡಿಗೇಹಳ್ಳಿ ಕಡೆಗೆ ಬಲಕ್ಕೆ ತೆಗೆದುಕೊಳ್ಳಬಹುದು, ನಂತರ ಸರ್ವಿಸ್ ರಸ್ತೆಯನ್ನು ಸೇರಲು ಮತ್ತು ಮುಂದೆ ಬೆಂಗಳೂರು ನಗರದ ಕಡೆಗೆ ಚಲಿಸಲು ಯು-ಟರ್ನ್ ತೆಗೆದುಕೊಳ್ಳಬಹುದು.

2. ಕೆಆರ್ ಪುರ ಕಡೆಯಿಂದ ನಗರದ ಕಡೆಗೆ ಹೋಗುವ ವಾಹನ ಸವಾರರು ನಗರವನ್ನು ಪ್ರವೇಶಿಸಲು ಪರ್ಯಾಯ ಮಾರ್ಗಗಳಾದ ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರಂ ಮೇಲ್ಸೇತುವೆ ಮಾರ್ಗ ಮತ್ತು ನಾಗವಾರ-ಟ್ಯಾನರಿ ರಸ್ತೆಯನ್ನು ಬಳಸಬಹುದು.

3. ಹೆಗ್ಡೆನಗರ-ಥಣಿಸಂದ್ರದ ಪ್ರಯಾಣಿಕರು ನಗರವನ್ನು ಪ್ರವೇಶಿಸಲು ಜಿಕೆವಿಕೆ- ಜಕ್ಕೂರು ರಸ್ತೆಯನ್ನು ಬಳಸಬಹುದು.

4. ಕೆಆರ್ ಪುರಂನಿಂದ ಯಶವಂತಪುರ ಕಡೆಗೆ ಹೋಗುವ ಪ್ರಯಾಣಿಕರು ಹೆಬ್ಬಾಳ ಮೇಲ್ಸೇತುವೆಯಿಂದ ನೇರವಾಗಿ ಬಿಇಎಲ್ (BEL) ವೃತ್ತದ ಕಡೆಗೆ ಹೋಗಬಹುದು ಮತ್ತು ಬಿಇಲ್ ವೃತ್ತದಲ್ಲಿ ಎಡ ತಿರುವು ಪಡೆದು ಸದಾಶಿವನಗರ ಪಿಎಲ್‌ ಜಂಕ್ಷನ್‌ಗೆ ತಲುಪಬಹುದು ಮತ್ತು ಬಲ ತಿರುವು ತೆಗೆದುಕೊಂಡು ಐಐಎಸ್‌ಸಿ (IISc) ಕಡೆಗೆ ಮತ್ತು ಯಶವಂತಪುರ ಕಡೆಗೆ ಸಾಗಬಹುದು.

5. ಕೆಆರ್ ಪುರಂ, ಹೆಣ್ಣೂರು, ಎಚ್‌ಆರ್‌ಬಿಆರ್ ಲೇಔಟ್, ಬಾಣಸವಾಡಿ, ಕೆ.ಜಿ.ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕೆಐಎಎಲ್ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಹೆಣ್ಣೂರು-ಬಾಗಲೂರು ರಸ್ತೆಯ ಮೂಲಕ ವಿಮಾನ ನಿಲ್ದಾಣವನ್ನು ತಲುಪುವಂತೆ ಮನವಿ ಮಾಡಲಾಗಿದೆ.

ಮುಂದಿನ ಆದೇಶದವರೆಗೆ ವಾಹನ ಸಂಚಾರ ನಿಷೇಧ ಜಾರಿಯಲ್ಲಿರುತ್ತದೆ, ನಾಗರಿಕರು ಸಹಕರಿಸಬೇಕೆ ಎಂದು ಸಂಚಾರ ಪೊಲೀಸ್ ಇಲಾಖೆ ಮನವಿ ಮಾಡಿದೆ.