Thursday, 12th December 2024

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ…

ಶ್ವೇತಪತ್ರ

shwethabc@gmail.com

ಪ್ರೀತಿ ಕಾಯಮ್ಮಾಗಬೇಕಾದರೆ ನಾವು ಈ ಕ್ಷಣದಲ್ಲಿ ಬದುಕುವುದನ್ನು ಕಲಿಯಬೇಕು. ಹೆಚ್ಚು ಹೆಚ್ಚು ಧ್ಯಾನಸ್ಥ ರಾಗಬೇಕು. ಮನಸ್ಸಿನ ಆಚೆಗೆ ಬಂದು ಗಾಳಿಗೆ ಮೈಯೊಡ್ಡಬೇಕು. ಭೂತ ಮತ್ತು ಭವಿಷ್ಯಗಳಿಂದ ಬಿಡುಗಡೆ ಗೊಳ್ಳಬೇಕು.

ನಮ್ಮೊಳಗೆ ಸದಾ ಹಂಬಲವಾಗಿ ಕಾಡುವ ಸಂಗತಿಯೆಂದರೆ ಪ್ರೀತಿ. ಹಾಗಿದ್ದರೆ ಆ ಪ್ರೀತಿಯು ಕಾಯಮ್ಮಾ? ಪ್ರೀತಿಯ ಅಸ್ತಿತ್ವಕ್ಕೆ ಎರಡು ಆಯಾಮಗಳಿವೆ. ಒಂದು ಸಮತಲವಾದರೆ, ಮತ್ತೊಂದು ಲಂಬತೆ. ಪ್ರೀತಿಯು ನಮಗೆ ಹೆಚ್ಚು ಪರಿಚಿತವಾಗುವುದು ಸಮತಲವೆಂಬ ಆಯಾಮದಲ್ಲಿ. ಅಂದರೆ ಪ್ರೀತಿಯು ಸಮಯದ ಹಿಂದೆ ಓಡುವ ಭಾವವದು. ಈ ಆಯಾಮದಲ್ಲಿ ನಮಗೆ ಅರ್ಥವಾಗುವ ಸಾಧ್ಯತೆ ಎಂದರೆ, ಒಂದೋ ಪ್ರೀತಿ ಕ್ಷಣಿಕವಾದದ್ದು ಇಲ್ಲವೇ ಶಾಶ್ವತವಾದದ್ದು ಎಂಬ ಸಂಗತಿ.

ಇಲ್ಲಿ ಅನೇಕ ಕ್ಷಣಗಳೇ ಶಾಶ್ವತವಾಗುತ್ತಾ ಹೋಗುವುದು. ಶಾಶ್ವತವೆಂದಿಗೂ ನಿರಂತರವಲ್ಲ. ಸಮಯದ ಮುಂದೆ ಯಾವುದೂ
ಚಿರಾಯುವಲ್ಲ. ಎಲ್ಲ ಶುರುಗಳಿಗೂ ಕೊನೆ ಇದ್ದೇ ಇರುತ್ತದೆ ಮತ್ತು ನಮ್ಮ ಪ್ರೀತಿ ಅರಳುತ್ತದೆ. ಅದ್ಯಾವುದೋ ಒಂದು ಕ್ಷಣದಲ್ಲಿ ಮುಂದೆ ಅದು ಎಲ್ಲೋ ಕೊನೆಗೊಳ್ಳಬೇಕು. ಪ್ರೀತಿಯು ಬೇಗನೆ ಮುಗಿದುಹೋದರೆ ಅದು ಕ್ಷಣಿಕ, ಎಂದೂ ಮುಗಿಯದಾದರೆ ಅದು ಶಾಶ್ವತ. ಮನಸ್ಸಿಗೆ ಯಾವ ಶಾಶ್ವತತೆಗಳ ಬಗ್ಗೆಯೂ ತಿಳಿದಿಲ್ಲ. ಪ್ರೀತಿಯ ಹರಿವು ಹೆಚ್ಚಿದ್ದರೂ ಅದರ ಹಿಂದೆಯೇ ಆವರಿಸುವುದು ಭಯ. ಮನುಷ್ಯರು ಹೆಚ್ಚು ಬುದ್ಧಿವಂತರಾದಂತೆ ಪ್ರೀತಿ ಎಂಬ ಅನನ್ಯತೆ ಕಡಿಮೆಯಾಗುತ್ತಾ ಬರುತ್ತಲಿದೆ.

ಎಲ್ಲೋ ಓದಿದ ನೆನಪು- ಕಡಿಮೆ ಶಿಕ್ಷಣವಿರುವ ದೇಶಗಳಲ್ಲಿ ವಿಚ್ಛೇದನದ ಪರಿಕಲ್ಪನೆಗಳೇ ಇಲ್ಲವೆಂದು. ವ್ಯಕ್ತಿಗಳು ಸುಶಿಕ್ಷಿತರೂ ಸುಸಂಸ್ಕೃತವಂತರೂ ಆದಷ್ಟೂ ಪ್ರೀತಿಯಲ್ಲಿ ಬದುಕುಗಳು ಮುದುಡತೊಡಗುತ್ತವೆ. ಅದರ ಸರಳ ಕಾರಣವಿಷ್ಟೇ- ಒಬ್ಬರಿ ಗೊಬ್ಬರು ಬೇಗ ಬೋರ್ ಹೊಡೆಸಿಕೊಂಡು ಬಿಡುತ್ತೇವೆ. ಅಲ್ಲಿಗೆ ಸಂಬಂಧವನ್ನು ಎಳೆಯುವುದರಲ್ಲಿ ಅರ್ಥವಿಲ್ಲವೆಂದು
ಅದನ್ನು ಅಲ್ಲಿಗೇ ಮುಗಿಸಿಬಿಡುತ್ತೇವೆ. ಒಂಥರಾ ಕಥೆ ಮುಗಿದ ಮರುಗಳಿಗೆಯೇ ಮನಸ್ಸು ಬದಲಿ ಭ್ರಮೆಗೆ ಮತ್ತೆ ಮತ್ತೆ ಒಳಗೊಳ್ಳುತ್ತಲೇ ಸಾಗುತ್ತದೆ.

ಪ್ರೀತಿಯನ್ನು ನಾವು ಹಂಬಲಿಸಬೇಕಿರುವುದು ಲಂಬತೆ ಎಂಬ ಧ್ಯಾನದ ಆಯಾಮದಲ್ಲಿ. ಆದರೆ ನಮ್ಮ ಮನಸ್ಸು ಎಂದಿಗೂ ಬದುಕುವುದು ಸಮಯದ ಆಧಾರದಲ್ಲಿ. ಅದಕ್ಕೇ ಹಿಂದಿನ ಋಷಿ-ಮುನಿಗಳು ಮನಸ್ಸು ಮತ್ತು ಸಮಯವನ್ನು ಒಂದೇ ಎಂದು ಪರಿಭಾವಿಸುತ್ತಾರೆ. ಮನಸ್ಸು ಧ್ಯಾನಸ್ಥ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ಏಕೆಂದರೆ ಮನಸ್ಸು ಒಂದೋ ಭೂತಕಾಲದಲ್ಲಿ ಬದುಕುತ್ತದೆ, ತಪ್ಪಿದರೆ ಭವಿಷ್ಯತ್ಕಾಲದಲ್ಲಿ ಬದುಕ ಹೊರಡುತ್ತದೆ. ಮನಸ್ಸಿಗೆ ಆ ಕ್ಷಣದ ಅರಿವು ಅಸ್ತಿತ್ವದಲ್ಲೇ ಇರುವುದಿಲ್ಲ.

ಒಮ್ಮೆ ಬೇಟೆಗಾರನೊಬ್ಬ ಬೇಟೆಗಾಗಿ ಕಾಡಿಗೆ ಹೊರಟಿದ್ದ. ಬೇಟೆಗಾರನಾಗಬಯಸಿದ್ದ ಅವನ ಸ್ನೇಹಿತನೂ ಅವನ ಜತೆಯಾದ. ಏಕೆಂದರೆ, ಸ್ನೇಹಿತನಿಗೆ ಬೇಟೆಯಲ್ಲಿ ಯಾವುದೇ ಪರಿಣತಿ ಇರಲಿಲ್ಲ. ಬೇಟೆಗಾರ ತನ್ನ ಸ್ನೇಹಿತನೊಡನೆ ಕಾಡಿನ ಕೊಳದ
ಬಳಿಗೆ ಬರುತ್ತಾನೆ, ಏಕೆಂದರೆ ದಣಿವಾದ ಪ್ರಾಣಿಗಳು ನೀರು ಕುಡಿಯಲು ಅಲ್ಲಿಗೆ ಬಂದೇ ಬರುತ್ತವೆ ಎಂಬುದು ಅವನಿಗೆ ಗೊತ್ತಿರುತ್ತದೆ. ಸರಿ, ಇಬ್ಬರೂ ಪೊದೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಬೇಟೆಗಾರನು ತನ್ನ ಸ್ನೇಹಿತನನ್ನು ಕುರಿತು, ‘ಯಾವುದಾದರೂ ಪ್ರಾಣಿ ಬಂದರೆ ನಾನು ನಿನಗೆ ಸನ್ನೆ ಮಾಡುತ್ತೇನೆ.

ತಕ್ಷಣವೇ ನೀನು ಕಾರ್ಯಪ್ರವೃತ್ತನಾಗಬೇಕು’ ಎಂದು ತಿಳಿಸುತ್ತಾನೆ. ಸ್ವಲ್ಪ ಸಮಯ ಕಳೆದಿರಬಹುದು, ಹುಲಿಯೊಂದು ಕೊಳದ ಬಳಿ ಬರುತ್ತದೆ. ಬೇಟೆಗಾರ ತನ್ನ ಸ್ನೇಹಿತನಿಗೆ ಸನ್ನೆ ಮಾಡುತ್ತಾನೆ. ಆದರೆ ಹುಲಿಯನ್ನು ನೋಡಿದ ಸ್ನೇಹಿತ ಸಂಪೂರ್ಣವಾಗಿ ಹೆಪ್ಪುಗಟ್ಟಿ ಅಲುಗಾಡದೆ ನಿಂತುಬಿಡುತ್ತಾನೆ. ಹುಲಿಯನ್ನು ಬೇಟೆಯಾಡಲು ಅವನಿಗೆ ಸಾಧ್ಯವಾಗುವುದೇ ಇಲ್ಲ. ‘ಏನಾಯಿತು?’ ಎಂದು ಬೇಟೆಗಾರ ಕೇಳಿದಾಗ, ‘ಹುಲಿ ಎಷ್ಟು ರಭಸವಾಗಿ ಬಂದು ಹೋಯಿತೆಂದರೆ, ಅದು ಹೋದ ಮೇಲಷ್ಟೇ ನನಗೆ ಕಾಣಿಸಿತು’ ಎನ್ನುತ್ತಾನೆ ಸ್ನೇಹಿತ!

ಈ ಕ್ಷಣ ಅದರ ಅರಿವು ಅಷ್ಟೇ. ಅದು ಕಳೆದು ಮುಂದೆ ಹೋದಾಗಲಷ್ಟೇ ನಮ್ಮ ಅನುಭವಕ್ಕೆ ಬರುವುದು. ಈ ಕ್ಷಣದಲ್ಲಿ ಮನಸ್ಸಿಗೆ ಯಾವುದೂ ಎಚ್ಚರವಿರುವುದಿಲ್ಲ. ಅದಕ್ಕೆ ಕೇವಲ ಹಳೆಯ ಇಲ್ಲವೇ ಹೊಸತರ ಗುಂಗು. ಪ್ರೀತಿ ಕಾಯಮ್ಮಾಗಬೇಕಾದರೆ ನಾವು ಈ ಕ್ಷಣದಲ್ಲಿ ಬದುಕುವುದನ್ನು ಕಲಿಯಬೇಕು. ಹೆಚ್ಚು ಹೆಚ್ಚು ಧ್ಯಾನಸ್ಥರಾಗಬೇಕು. ಮನಸ್ಸಿನ ಆಚೆಗೆ ಬಂದು ಗಾಳಿಗೆ ಮೈಯೊಡ್ಡ ಬೇಕು. ಭೂತ ಮತ್ತು ಭವಿಷ್ಯಗಳಿಂದ ಬಿಡುಗಡೆಗೊಳ್ಳಬೇಕು. ಸಮಯವನ್ನು ತಾತ್ಕಾಲಿಕವಾಗಿಸಬೇಕು. ಆಲೋಚನೆ, ಆಸೆ, ನೆನಪು, ಕನಸು, ಕಲ್ಪನೆಗಳನ್ನು ಸ್ತಬ್ಧವಾಗಿಸಬೇಕು. ಎಲ್ಲವೂ ನಿಶ್ಶಬ್ದವಾಗಬೇಕು. ಅಲ್ಲಿ ಹುಟ್ಟಿ ನಿರಂತರವಾಗುವುದೇ ಪ್ರೀತಿ.

ಅದು ಮನಸ್ಸಿನ ವಿದ್ಯಮಾನ. ಅದು ಜೈವಿಕ, ದೈಹಿಕ, ಮಾನಸಿಕ. ಪ್ರೀತಿಯನ್ನು ಉದ್ದಕ್ಕೆ ಎಳೆದಷ್ಟೂ ಅದು ತೆಳುವಾಗುತ್ತಾ ಹೋಗುತ್ತದೆ. ಅದು ಕೊನೆಗೊಳ್ಳಬಯಸಿದರೆ ನಾವು ಮತ್ತಷ್ಟು ಮಗದಷ್ಟು ಎಳೆಯತೊಡಗುತ್ತೇವೆ. ಹೀಗೆ ಎಳೆತಕ್ಕೊಳಗಾದ ಪ್ರೀತಿಯು ಕೊಳೆಯಲು ಶುರುವಿಟ್ಟುಕೊಳ್ಳುತ್ತದೆ. ಒಂದೊಮ್ಮೆ ಸುಂದರ ಸಂಗತಿಯಾಗಿದ್ದ ಪ್ರೀತಿ ಇಂದು ಅರ್ಥವನ್ನು ಕಳೆದುಕೊಂಡಿರುತ್ತದೆ. ಪ್ರೀತಿಯೆಂಬುದು ಕಾಯಮ್ಮಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಶಿವ-ಪಾರ್ವತಿಯರ ಈ ಕಥೆಯು ಒಂದು ರೂಪಕವಾಗಿದೆ. ಶಿವನ ಹೆಂಡತಿ ಪಾರ್ವತಿ ತೀರಿಹೋಗಿರುತ್ತಾಳೆ. ಆಕೆಯ ಶವವನ್ನು ಹೊತ್ತು ಶಿವ ಹನ್ನೆರಡು ವರ್ಷಗಳ ಕಾಲ ಊರೂರು ಅಲೆಯುತ್ತಾನೆ. ಪಾರ್ವತಿಯನ್ನು ಬದುಕಿಸಿಕೊಡುವ ಯಾರಾದರೂ ಮಾಂತ್ರಿಕರೋ, ವೈದ್ಯರೋ ಸಿಗಬಹುದು; ಇಲ್ಲವೇ ಯಾವುದೋ ಪವಾಡದ ಮೂಲಕ ಪಾರ್ವತಿಯು ಮರುಜೀವ ಪಡೆಯಬಹುದು ಎಂಬುದು ಆತನ ಎಣಿಕೆಯಾಗಿರುತ್ತದೆ. ಆದರೆ ಆಕೆಯ ದೇಹದ ಒಂದೊಂದೇ ಭಾಗಗಳು ಉದುರಿಹೋಗತೊಡಗುತ್ತವೆ.

ಶೋಕಿಸುತ್ತಾ ಅಳುತ್ತಾ ಎಲ್ಲೆಡೆ ಓಡಾಡುವ ಶಿವನಿಗೆ ಸಾಧ್ಯವಾಗಿದ್ದು ಶವವನ್ನು ಹೊತ್ತೊಯ್ಯುವುದಷ್ಟೇ. ನಮ್ಮ ಬದುಕಲ್ಲೂ ಅಷ್ಟೇ, ಸತ್ತ ಪ್ರೀತಿಯನ್ನು ನಾವೆಲ್ಲ ಹೊತ್ತು ತಿರುಗುತ್ತಿರುತ್ತೇವೆ. ಮುಂದೆ ಸಾಗುವುದಷ್ಟೇ ಕಾಯಂ!