Sunday, 15th December 2024

ಸದ್ಗುಣಗಳ ಮೇರುಶಿಖರ ಶ್ರೀರಾಮ

ರಾಮರಥ

ವಿದ್ಯಾಶಂಕರ್‌ ಶರ್ಮ

ರಾಮನ ವ್ಯಕ್ತಿತ್ವದಲ್ಲಿ ನಮಗೆ ಸಿಗುವಷ್ಟು ಸದ್ಗುಣಗಳು, ಬದುಕಿನ ಮೌಲ್ಯಗಳು ಬೇರೆ ಯಾರಲ್ಲೂ ಕಾಣಸಿಗುವುದು ದುಸ್ತರವೇ. ಹಾಗೆ ನೋಡಿದರೆ, ರಾಮಾಯಣದಲ್ಲಿ ಕಾಣಬರುವ ಒಂದೊಂದು ಪಾತ್ರವೂ ಒಂದೊಂದು ರೀತಿಯಲ್ಲಿ ತಮ್ಮ ವೈಶಿಷ್ಟ್ಯವನ್ನು ಅನಾವರಣಗೊಳಿಸುತ್ತಾ ಹೋಗುತ್ತವೆ.

ಇಂದು ಶ್ರೀರಾಮನವಮಿ. ಹೀಗಾಗಿ ರಾಮನ ಸದ್ಗುಣಗಳನ್ನು ಮೆಲುಕುಹಾಕಿ ಪುನೀತರಾಗೋಣ. ಶ್ರೀರಾಮನು ಮನುಕುಲಕ್ಕೆ ಆದರ್ಶಪ್ರಾಯ ಪರಮಪುರುಷ. ಎಲ್ಲ ಸದ್ಗುಣಗಳ ಎರಕಹೊಯ್ದ ಮೂರ್ತಿಯೇ ಈ ರಘುಕುಲತಿಲಕ. ಶ್ರೀರಾಮನ ಹಲವು ಉದಾತ್ತ ಗುಣಗಳು ರಾಮಾಯಣ ದಲ್ಲಿ ಕೆನೆಗಟ್ಟಿವೆ. ಎಂಥ ವಿಷಮ ಪರಿಸ್ಥಿತಿಯಲ್ಲೂ ತನ್ನ ಸೌಹಾರ್ದಯುತ ನಡವಳಿಕೆಗೆ
ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಂಡವನು ಶ್ರೀರಾಮ. ಕೈಕೇಯಿಗೆ ಕೊಟ್ಟ ಮಾತಿನಂತೆ ವನವಾಸಕ್ಕೆ ತೆರಳುವಂತೆ
ಶ್ರೀರಾಮನಿಗೆ ಹೇಳುವ ಸಂದರ್ಭದಲ್ಲಿ ದಶರಥನು ಕೈಕೇಯಿಯ ವರ್ತನೆಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದರೂ, ರಾಮನು
ಕೈಕೇಯಿಯ ಬಗ್ಗೆ ಒಂದೇ ಒಂದು ಆಕ್ಷೇಪವನ್ನೂ ಎತ್ತುವುದಿಲ್ಲ.

ಲಕ್ಷ್ಮಣನು ಕೈಕೇಯಿಯ ಮೇಲೆ ಕೋಪಗೊಂಡಾಗ, ಕೈಕೇಯಿಗೆ ನೋವಾಗುವಂತೆ ನಡೆದುಕೊಳ್ಳಬೇಡ ಎಂದು ಅವನಿಗೆ ಬುದ್ಧಿಮಾತು ಹೇಳುವ ರಾಮ, ಮುಂದೆ ಭರತ ಮತ್ತು ಶತ್ರುಘ್ನರು ತನ್ನನ್ನು ಕಾಣಲು ಬಂದಾಗಲೂ ಕೈಕೇಯಿಯ ಮೇಲೆ
ಬೇಸರ ಪಟ್ಟುಕೊಳ್ಳದೆ ಗೌರವದಿಂದ ಕಾಣುವಂತೆ ಅವರಿಗೆ ಉಪದೇಶಿಸುತ್ತಾನೆ. ಬೇರೆಯವರು ನಮ್ಮ ಜತೆ ಸ್ವಲ್ಪ ತಪ್ಪಾಗಿ ನಡೆದುಕೊಂಡರೂ ಸಿಟ್ಟಾಗುವ ನಾವು, ಶ್ರೀರಾಮನ ಈ ಸೌಹಾರ್ದ ಗುಣಕ್ಕೆ ತಲೆಬಾಗಲೇಬೇಕು.

ಭರತನು ಶ್ರೀರಾಮನನ್ನು ಕಾಣಲು ಬಂದಾಗ ಲಕ್ಷ್ಮಣನು ಕೋಪದಿಂದ ಮಾತನಾಡುತ್ತಾನೆ. ಆಗ ಶ್ರೀರಾಮ, ‘ಲಕ್ಷ್ಮಣಾ, ನಿನ್ನ ಹಾಗೂ ಭರತ-ಶತ್ರುಘ್ನರ ಹೊರತಾಗಿ ಬೇರೆ ಯಾವುದಾದರೂ ಸುಖವಿದ್ದರೆ ಅದು ನನಗೆ ಬೇಕಿಲ್ಲ’ ಎನ್ನುತ್ತಾನೆ. ಈ ಮಾತುಗಳು ರಾಮನಲ್ಲಿದ್ದ ಸೋದರ ವಾತ್ಸಲ್ಯಕ್ಕೆ ದ್ಯೋತಕ ಎನ್ನಬಹುದು. ತನ್ನ ಮಿತ್ರರನ್ನು ಬಹಳ ಆದರದಿಂದ ಕಾಣುತ್ತಿದ್ದ ಶ್ರೀರಾಮ, ಅವರು ಮಾಡಿದ ಚಿಕ್ಕ ಕೆಲಸವನ್ನೂ ದೊಡ್ಡ ದೆಂಬಂತೆ ಪ್ರಶಂಸಿಸುತ್ತಿದ್ದ ಮತ್ತು ತಾನು ಮಿತ್ರರಿಗಾಗಿ ಏನು ಮಾಡಿದರೂ ಅದು ಚಿಕ್ಕದೆಂಬಂತೆ ಭಾವಿಸುತ್ತಿದ್ದ.

ತನ್ನ ಪಟ್ಟಾಭಿಷೇಕದ ನಂತರ ಕಪಿಶ್ರೇಷ್ಠರನ್ನು ಬೀಳ್ಕೊಡುವಾಗ, ‘ನಿಮ್ಮಂಥವರ ಸಖ್ಯವನ್ನು ಪಡೆದ ಸುಗ್ರೀವನೇ ಧನ್ಯ’ ಎನ್ನುತ್ತಾನೆ ಶ್ರೀರಾಮ. ವನವಾಸದಲ್ಲಿದ್ದಾಗ ಸೀತೆ ಯನ್ನು ರಾವಣನು ಅಪಹರಿಸುವ ಸಮಯದಲ್ಲಿ ಅವನನ್ನು ತಡೆಯಲು ಪ್ರಯತ್ನಿಸಿದ ಜಟಾಯು ಪಕ್ಷಿಯು ರಾವಣನಿಂದ ಅಂಗಛೇದನಕ್ಕೆ ಒಳಗಾಗಿ ತರುವಾಯದಲ್ಲಿ ಅಸುನೀಗಿದಾಗ, ಶ್ರೀರಾಮನು ತಾನೇ ಮುಂದೆ ನಿಂತು ಜಟಾಯುವಿನ ಅಂತ್ಯಸಂಸ್ಕಾರವನ್ನು ಮಾಡುತ್ತಾನೆ. ಅವನ ದಯಾಗುಣಕ್ಕೆ ಸರಿಸಾಟಿಯಿಲ್ಲ!

ಏಕಪತ್ನೀವ್ರತದಿಂದ ನಮ್ಮ ಮನದಲ್ಲಿ ಗೌರವಾದರಗಳನ್ನು ಮೂಡಿಸುವ ಶ್ರೀರಾಮನು, ಸೀತಾಪಹರಣವಾದಾಗ ಶೋಕಗೊಂಡು ಮರ-ಗಿಡಗಳ ಬಳಿಯಲ್ಲಿ ಶೋಕಿಸುತ್ತಾನೆ, ರೋದಿಸುತ್ತಾನೆ. ಇದು ಸೀತೆಯಲ್ಲಿ ಅವನಿಗಿದ್ದ ಅಪಾರ ಪ್ರೀತಿಯನ್ನು ತೋರಿಸುತ್ತದೆ. ಹನುಮಂತನ ಸಹಾಯಕ್ಕಾಗಿ ಶ್ರೀರಾಮನು ಅವನಿಗೆ ಹೇಳುವ ಮಾತುಗಳೂ ಅದ್ಭುತವಾಗಿವೆ. ‘ಹೇ
ಆಂಜನೇಯ, ನಿನ್ನ ಪ್ರತಿಯೊಂದು ಉಪಕಾರಕ್ಕೂ ಪ್ರತಿಯಾಗಿ ನನ್ನ ಪ್ರಾಣವನ್ನು ಕೊಟ್ಟರೂ ಕಡಿಮೆಯೇ. ಅವುಗಳಿಗೆ ಪ್ರತ್ಯುಪಕಾರ ಮಾಡಬೇಕಾದಂಥ ಪರಿಸ್ಥಿತಿ ಬಾರದಿರಲಿ, ಏಕೆಂದರೆ ಆಪತ್ತಿಗೆ ಒಳಗಾದಾಗಲೇ ಅವನು ಪ್ರತ್ಯುಪಕಾರಕ್ಕೆ ಪಾತ್ರನಾಗುತ್ತಾನೆ’ ಎಂಬ ಶ್ರೀರಾಮನ ಮಾತುಗಳು ಅವನ ಕೃತಜ್ಞತಾಭಾವ ಎಷ್ಟು ಮಹತ್ತರವಾಗಿತ್ತು ಎಂಬುದನ್ನು ತೋರಿಸುತ್ತವೆ. ತನ್ನ ಕಿರಿಯ ಸಹೋದರ ಶತ್ರುಘ್ನನ ಬಗೆಗೆ ಶ್ರೀರಾಮನು ತೋರುವ ನಡವಳಿಕೆಗಳೂ ಅನುಕರಣೀಯವಾಗಿವೆ.
ಲವಣಾಸುರ ಎಂಬ ರಾಕ್ಷಸನ ಸಂಹಾರಕ್ಕೆ ಶತ್ರುಘ್ನನನ್ನೇ ಆರಿಸುವ ಶ್ರೀರಾಮ, ‘ಲವಣಾಸುರನನ್ನು ಕೊಂದು ಅಲ್ಲಿ ನಗರಸ್ಥಾಪನೆ ಮಾಡಿ ರಾಜ್ಯವಾಳು’ ಎಂದು ಆದೇಶಿಸುತ್ತಾನೆ.

ಶ್ರೀರಾಮನ ವ್ಯಕ್ತಿತ್ವದಲ್ಲಿ ನಮಗೆ ಸಿಗುವಷ್ಟು ಸದ್ಗುಣಗಳು ಹಾಗೂ ಬದುಕಿನ ಮೌಲ್ಯಗಳು ಬೇರೆ ಯಾರಲ್ಲೂ ಕಾಣಸಿಗುವುದು ದುಸ್ತರವೇ. ಹಾಗೆ ನೋಡಿದರೆ, ರಾಮಾಯಣದಲ್ಲಿ ಕಾಣಬರುವ ಒಂದೊಂದು ಪಾತ್ರವೂ ಒಂದೊಂದು ರೀತಿಯಲ್ಲಿ ತಮ್ಮ ವೈಶಿಷ್ಟ್ಯವನ್ನು ಅನಾವರಣಗೊಳಿಸುತ್ತಾ ಹೋಗುತ್ತವೆ. ಹೀಗಾಗಿ ರಾಮಾಯಣವೆಂಬುದು ಅನನ್ಯ ಗುಣಗಳ ಮತ್ತು ವ್ಯಕ್ತಿತ್ವಗಳ ರಸಪಾಕ ಎಂದರೆ ಅತಿಶಯೋಕ್ತಿ ಆಗಲಾರದು. ಮೊದಲಿಗೆ ಸೀತೆಯನ್ನೇ ಈ ನಿಟ್ಟಿನಲ್ಲಿ ಪರಿಗಣಿಸೋಣ. ತನ್ನ ರಾಜ್ಯದ ಪ್ರಜೆಯೊಬ್ಬ ಸೀತೆಯ ಚಾರಿತ್ರ್ಯದ ಬಗ್ಗೆ ಮಾತನಾಡಿದ ಎಂಬ ಕಾರಣಕ್ಕೆ ರಾಮ ನೊಂದುಕೊಳ್ಳುತ್ತಾನೆ, ಮುಂದೇನು ಮಾಡಬೇಕೆಂದು ಗೊತ್ತಾಗದೆ ಅರೆಕ್ಷಣ ಪರಿತಪಿಸುತ್ತಾನೆ. ಆಗ ಸೀತೆಯು ರಾಮನ ಆದರ್ಶಗಳಿಗೆ ಭಂಗ ತರಬಾರದೆಂದು ರಾಜ್ಯವನ್ನು ಮತ್ತು ಅರಮನೆಯ ವೈಭವವನ್ನು ತೊರೆದು ಕಾಡಿಗೆ ಹೊರಟೇಬಿಡುತ್ತಾಳೆ. ಸೀತೆಯ ಈ ನಡೆಯಲ್ಲಿ ಆಕೆಯ ತ್ಯಾಗ ಮನೋಭಾವ ಕೆನೆಗಟ್ಟಿದೆ ಎನ್ನಬಹುದು.

ಇನ್ನು ಹನುಮಂತನಂತೂ ಸ್ವಾಮಿನಿಷ್ಠೆಗೆ ಹಾಗೂ ರಾಮ-ಸೀತೆಯರ ಮೇಲಿನ ಅಸೀಮ ಭಕ್ತಿಗೆ ದ್ಯೋತಕವೇ ಆಗಿಬಿಟ್ಟಿದ್ದಾನೆ. ರಾವಣನ ಜತೆಗಿನ ಯುದ್ಧ ಸಂಪನ್ನಗೊಂಡು, ಆತನ ಸಂಹಾರವಾಗಿ, ವಿಭೀಷಣನಿಗೆ ಲಂಕೆಯ ರಾಜನಾಗಿ ಪಟ್ಟಾಭಿಷೇಕ ಮಾಡಿದ ನಂತರ ಸೀತೆ, ಲಕ್ಷ್ಮಣರ ಸಮೇತನಾಗಿ ಅಯೋಧ್ಯೆಗೆ ಮರಳಲು ರಾಮ ಸನ್ನದ್ಧನಾಗುತ್ತಾನೆ. ಆದರೆ ಹನುಮಂತನು ಮಿಕ್ಕ ಕಪಿಶ್ರೇಷ್ಠರಂತೆ ತನ್ನ ನೆಲೆಯಾದ ಕಿಷ್ಕಿಂದೆಗೆ ಮರಳುವ ಬದಲು, ತಾನೂ ಅಯೋಧ್ಯೆಗೆ ಬರುವುದಾಗಿ ರಾಮನನ್ನು
ಕೋರಿಕೊಳ್ಳುತ್ತಾನೆ. ಅಯೋಧ್ಯೆಯಲ್ಲಿದ್ದರೆ ರಾಮನ ದರ್ಶನ, ಸ್ಪರ್ಶನ, ಸೇವೆ, ಸಾಂಗತ್ಯ, ಪ್ರೀತಿ ನಿರಂತರವಾಗಿ ಮತ್ತು ಪ್ರತ್ಯಕ್ಷವಾಗಿ ಸಿಗುತ್ತವೆ ಎಂಬುದು ಹನುಮಂತನ ಗ್ರಹಿಕೆ.

ಅಂತೆಯೇ ಅವನ ಆಸೆಗೆ ತಣ್ಣೀರು ಎರಚದೆ ರಾಮ-ಸೀತೆಯರು ಅವನನ್ನು ಅಯೋಧ್ಯೆಗೆ ಕರೆತಂದು ತಮ್ಮ ಅರಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ರಘುವಂಶದ ಮನೆಯವರಲ್ಲಿ ಒಬ್ಬನಾಗಿಬಿಡುತ್ತಾನೆ ಹನುಮಂತ! ಇದು ರಾಮ-ಸೀತೆಯರಲ್ಲಿ ಹನುಮಂತ ತೋರಿದ ನಿರ್ವ್ಯಾಜ ಪ್ರೀತಿಯ ಫಲಶ್ರುತಿಯಷ್ಟೇ. ಇಲ್ಲಿ ಇನ್ನೊಂದು ಘಟನೆಯನ್ನು ಅವಲೋಕಿಸಿದರೆ ರಾಮನ ವ್ಯಕ್ತಿತ್ವದ
ಮತ್ತೊಂದು ಮಗ್ಗುಲಿನ ಅರಿವಾಗುತ್ತದೆ.

ಲಂಕೆಯಿಂದ ಅಯೋಧ್ಯೆಗೆ ಮರಳುವ ಕ್ಷಣ ಸನ್ನಿಹಿತವಾದಾಗ ಲಕ್ಷ್ಮಣನು ತನ್ನ ಸೋದರ ರಾಮನನ್ನು ಕುರಿತು, ‘ಅಣ್ಣಾ, ನಾವು
ಅಯೋಧ್ಯೆಗೆ ಮರಳಿದ ಮೇಲೂ ಅಲ್ಲಿ ನಡೆಸುವುದೂ ರಾಜ್ಯಭಾರವೇ, ಅಲ್ಲಿರುವುದೂ ಅರಮನೆಯೇ. ಹೇಗಿದ್ದರೂ ನಾವು ರಾವಣನನ್ನು ಸಂಹರಿಸಿ ಲಂಕೆಯನ್ನು ಗೆದ್ದಿದ್ದೇವೆ. ಆದ್ದರಿಂದ ಅಯೋಧ್ಯೆಗೆ ಮರಳುವ ಬದಲು ಈ ಸಾಮ್ರಾಜ್ಯದಲ್ಲೇ ಆಳ್ವಿಕೆ
ಮಾಡಿಕೊಂಡು ಇರಬಹುದಲ್ಲಾ?’ ಎಂದು ಕೇಳುತ್ತಾನೆ. ಆಗ ರಾಮ ಮುಗುಳ್ನಕ್ಕು, ‘ಸೋದರ ಲಕ್ಷ್ಮಣಾ, ಜನನಿ ಮತ್ತು ಜನ್ಮ ಭೂಮಿ ಇವುಗಳು ಸ್ವರ್ಗಕ್ಕಿಂತ ಮಿಗಿಲು ಎಂಬ ಮಾತನ್ನು ನೀನು ಕೇಳಿಲ್ಲವೇ? ಈ ಸುವರ್ಣಲಂಕೆಯು ಈಗ ನಮಗೆ ಆಕರ್ಷಣೀಯವಾಗಿಯೇ ತೋರುತ್ತಿರಬಹುದು. ಆದರೆ ಯಾವತ್ತಿದ್ದರೂ ಅಯೋಧ್ಯೆಯೇ ನಮ್ಮ ನೆಲೆ. ಅದು ಈ ಸುವರ್ಣಲಂಕೆ
ಗಿಂತಲೂ ಮಿಗಿಲಾದುದು ಮತ್ತು ಶ್ರೇಷ್ಠವಾದುದು’ ಎಂದು ಹೇಳುವ ಮೂಲಕ ಲಕ್ಷ್ಮಣನ ಕಣ್ಣು ತೆರೆಸುತ್ತಾನೆ.

ಕಾರ್ಯನಿಮಿತ್ತವಾಗಿಯೋ ಅನಿವಾರ್ಯ ಕಾರಣಗಳಿಂದಲೋ ಮತ್ತೊಂದು ಊರಿಗೆ ಬಂದವರು ಅಲ್ಲಿನ ಸಿರಿ-ಸಂಪತ್ತು ಮತ್ತು ವೈಭವಗಳಿಗೆ ಮರುಳಾಗಿ ಹುಟ್ಟೂರಿನಿಂದ ವಿಮುಖರಾಗಬಾರದು ಎಂಬ ಸಾರ್ವಕಾಲಿಕ ಸರಳ ಸತ್ಯವನ್ನು ಶ್ರೀರಾಮ ಬಹಳ ಕಾಲ ಮೊದಲೇ ಮನವರಿಕೆ ಮಾಡಿಕೊಟ್ಟ ಪರಿಯಿದು. ಶ್ರೀರಾಮನ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುವುದು ಈ ಕಾರಣಕ್ಕೇ.
ಶ್ರೀರಾಮನ ಜೀವನವು ತ್ಯಾಗದ ಪರಮೋನ್ನತಿಯ ದಿವ್ಯದರ್ಶನ ಎನ್ನಬಹುದು. ರಾಜನಾಗಬೇಕಿದ್ದವನು ವನವಾಸಕ್ಕೆ ತೆರಳಬೇಕಾಗಿ ಬಂದಾಗಲೂ ನಗುಮೊಗ ದಿಂದಲೇ ಆ ನಿಟ್ಟಿನಲ್ಲಿ ಹೆಜ್ಜೆಹಾಕುವ ಶ್ರೀರಾಮ, ಜೀವನದಲ್ಲಿ ಎಂಥ ದುರ್ಭರ ಪರಿಸ್ಥಿತಿ ಬಂದರೂ ತಾಳ್ಮೆ ಮತ್ತು ಸಂಯಮದಿಂದ ಎದುರಿಸಬೇಕು ಎಂಬ ಉದಾತ್ತ ಮೌಲ್ಯವನ್ನು ಸಾರಿಹೇಳುತ್ತಾನೆ. ಇಂಥ ಮಹಾನ್
ಪುರುಷನಿಗೆ ಭಕ್ತಿಯಿಂದ ಪ್ರಣಾಮಗಳನ್ನು ಅರ್ಪಿಸಿ ಪಾವನರಾಗೋಣ.

(ಲೇಖಕರು ಹವ್ಯಾಸಿ ಬರಹಗಾರರು)