Friday, 22nd November 2024

ಬಂಗಾಳದ ಬೆಂಗಾಡಿನಲ್ಲಿ ಒಂದು ಸ್ಮರಣೀಯ ಪಯಣ

ನೂರೆಂಟು ವಿಶ್ವ

ಇವರಿಬ್ಬರ ಜತೆ ಇದ್ದಾಗ ನೀರಸ ಕ್ಷಣ ಎಂಬುದು ಇಲ್ಲವೇ ಇಲ್ಲ. ಪಯಣದ ಆರಂಭದಲ್ಲಿ ಒಂದು ಪ್ರಶ್ನೆ ಎಸೆದು ಸುಮ್ಮನೆ ಕುಳಿತುಕೊಂಡರೆ, ಪ್ರಯಾಣದುದ್ದಕ್ಕೂ ಮನಸೋ ಇಚ್ಛೆ ಮಾತು-ಕತೆ, ಉಪಕತೆ, ದೃಷ್ಟಾಂತ, ಹರಟೆ, ಜೋಕು. ಒಟ್ಟಾರೆ ರಸಗವಳ ತರ್ಪಣ. ಅದನ್ನು ಮೊಗೆದುಕೊಳ್ಳುವ ಧಾರಣಶಕ್ತಿಯಿದ್ದವನೇ ಅದೃಷ್ಟವಂತ. ದಕ್ಕದಿದ್ದವನು ಮಹಾಪಾಪಿ.

ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಲೋಕಸಂಚಾರ ನಿಜಕ್ಕೂ ರೋಚಕವೇ. ಗುಟ್ಟು ಬಿಟ್ಟು ಕೊಡದ ಮತದಾರನ ಮನಸ್ಸನ್ನು ಅರಿಯುವುದು ಸವಾಲೇ ಸರಿ. ಒಂದು ಪ್ರದೇಶದಲ್ಲಿ ಹತ್ತಾರು ಮಂದಿ ಕಾಂಗ್ರೆಸ್ ವಿರುದ್ಧ ಮಾತಾಡಿದರೆ, ಅಲ್ಲಿಂದ ಇನ್ನೂರು ಮೀಟರ್ ಅಂತರದಲ್ಲಿ ಬಿಜೆಪಿ ವಿರುದ್ಧ ಮಾತಾಡಿದಾಗ, ಮತದಾರರ ಒಲವು-ನಿಲುವು ಏನಿರಬಹುದು ಎಂದು ಲೆಕ್ಕಾಚಾರ ಹಾಕುವುದು ಸುಲಭವಲ್ಲ.

ಕೆಲವೆಡೆ ಮತದಾರರ ಜತೆ ಮಾತಾಡಿದಾಗ, ಅವರ ನಿಲುವು ಎತ್ತ ಎಂದು ನಿರ್ಧರಿಸಲು ಆಗದಷ್ಟು ಜಟಿಲ. ಅಲ್ಲಿನ ಸಮಸ್ಯೆ, ಜನರ ಗೋಳು, ಸಂಕಟಗಳು ಸಹ ಮತದಾರರ ಇಂಗಿತವನ್ನು ಬಿಟ್ಟು ಕೊಡುತ್ತವೆ. ಆದರೆ ಕೆಲವು ಪ್ರದೇಶಗಳಲ್ಲಿ ಆ ಮಾನದಂಡ  ವ್ಯತಿರಿಕ್ತವಾಗಿರುತ್ತದೆ. ಹೀಗಾಗಿ ಮತದಾರ ಪ್ರಭುವಿನ ಮನದಾಳದೊಳಗೆ ಇಳಿದು ಅಂತರಂಗ ಅರಿಯುವುದು ಎಂಥವರಿ ಗಾದರೂ ಕಷ್ಟವೇ.

ಕೊನೆ ಕ್ಷಣದ ತನಕವೂ ಮತದಾರ ತನ್ನ ಗುಟ್ಟು ಬಿಟ್ಟು ಕೊಡುವುದಿಲ್ಲ. ಅದರಲ್ಲೂ ನಾವು ಪತ್ರಕರ್ತರು ಎಂದು ಗೊತ್ತಾದರೆ ಸಾಕು, ಅವರೂ ಶಾಣ್ಯಾ ಆಗಿ ಬಿಡುತ್ತಾರೆ. ಎಷ್ಟೋ ಸಲ ಮತದಾರ ಹೇಳುವುದೇ ಒಂದು, ಮತಗಟ್ಟೆ ಮುಂದೆ ನಿಂತಾಗ ಮಾಡು ವುದೇ ಇನ್ನೊಂದು. ಒಟ್ಟಾರೆ ಒಂದು ಕ್ಷೇತ್ರದ ಫಲಿತಾಂಶ ಹೀಗೆ ಎಂದು ಹೇಳುವುದು ಕಷ್ಟವೇ. ನಾವು ಏನಿದ್ದರೂ, ಒಂದಷ್ಟು ಲೆಕ್ಕಾಚಾರ ಹಾಕಿ, ಧಾರಾಳವಾಗಿ ಊಹೆ ಮಾಡಬಹುದಷ್ಟೆ.

ಮೊನ್ನೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಕ್ಷೆ ನಿಮಿತ್ತ ಅಲ್ಲಿನ ಬೆಂಗಾಡಿನಲ್ಲಿ ಸಂಚರಿಸುವಾಗ ದೇಶದ ಹಿರಿಯ ಮತ್ತು ಅನುಭವಿ ಪತ್ರಕರ್ತ, ಸಂಪಾದಕ ಎಂ.ಜೆ.ಅಕ್ಬರ್ ಜತೆ ಇದೇ ವಿಷಯದ ಕುರಿತು ನಾನು ಚರ್ಚಿಸುತ್ತಿದ್ದೆ. ಜತೆಯಲ್ಲಿ ರಾಜ್ಯದ ಹಿರಿಯ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರ್ ಸಹ ಇದ್ದರು. ಚುನಾವಣೆ ಸಂದರ್ಭದಲ್ಲಿ ನಾವು ಮೂವರು ಮತದಾರರ ಜತೆ ಕುಶಲೋಪರಿ ನಡೆಸಲು ಹತ್ತಾರು ಕ್ಷೇತ್ರಗಳಲ್ಲಿ ಸಂಚರಿಸುವ ಪರಿಪಾಠವನ್ನು ರೂಢಿಸಿಕೊಂಡಿದ್ದೇವೆ.

ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ನಾವು ಮೂವರು ಹನ್ನೊಂದು ದಿನಗಳ ಕಾಲ ಸುತ್ತಾಡಿದ್ದೆವು. ಕಳೆದ
ಐವತ್ತು ವರ್ಷಗಳಿಂದ ಅಕ್ಬರ್, ದೇಶದ ಉದ್ದಗಲಕ್ಕೂ ಸಂಚರಿಸಿ ಚುನಾವಣಾ ಸಮೀಕ್ಷೆ ಮಾಡಿದವರು. ಪ್ರಾಯಶಃ ಅವರು ಚುನಾವಣೆ ನಿಮಿತ್ತ ಯಾವ ರಾಜ್ಯವನ್ನೂ ಸುತ್ತದೇ ಬಿಟ್ಟವರಲ್ಲ. ಚುನಾವಣೆಯ ಹಿನ್ನೋಟ, ಲೆಕ್ಕಾಚಾರಗಳೆಲ್ಲ ಅವರಿಗೆ ಅಂಗೈ ಮೇಲಿನ ಗೆರೆಗಳಷ್ಟೇ ಪರಿಚಿತ. ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅವರು ಸುದ್ದಿಮನೆಯ ಹೊರಗೆ ಬಂದು, ಕಂಡಕಂಡ ಕಡೆಗಳಲ್ಲಿ ಸುತ್ತಿದವರು, ಸುತ್ತುವವರು.

ನಾಯಕರ ಚುಂಗು ಹಿಡಿದು ಅವರನ್ನು ಬೆಂಬೆತ್ತಿ ಸಂದರ್ಶನ, ನೇರಾನೇರ ಮಾತುಕತೆ ಮಾಡಿದವರು. ಕಳೆದ ಅರ್ಧ ಶತಮಾನ ದಲ್ಲಿ ದೇಶದ ಎಲ್ಲ ಪಕ್ಷಗಳ ನಾಯಕರೊಂದಿಗೆ ಒಡನಾಡಿದವರು. ಅಕ್ಬರ್ ಅವರಲ್ಲಿ ಇನ್ನೊಂದು ವಿಶೇಷವಿದೆ. ಅದೇನೆಂದರೆ
ಅವರು ಖುದ್ದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದು ಲೋಕಸಭೆ ಪ್ರವೇಶಿಸಿದ ಅನುಭವವುಳ್ಳವರು. ೧೯೮೯ ರಲ್ಲಿ ಅವರು ಬಿಹಾರದ ಕಿಶನ್ ಗಂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ, ಸಯ್ಯದ್ ಶಹಾಬುದ್ದೀನ್ ವಿರುದ್ಧ ಸ್ಪರ್ಧಿಸಿ ಗೆದ್ದರು. ಅದಾಗಿ ಎರಡು ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಪರಾಭವಗೊಂಡರು.

ಪ್ರಧಾನಿ ರಾಜೀವ ಗಾಂಧಿ ಅವರ ಅಧಿಕೃತ ವಕ್ತಾರರಾಗಿ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡಿದರು. ೧೯೯೨ ರಲ್ಲಿ
ರಾಜಕೀಯ ತೊರೆದು ಸುದ್ದಿಮನೆಯನ್ನು ಮರುಪ್ರವೇಶಿಸಿ, ‘ಏಶಿಯನ್ ಏಜ್’ ಪತ್ರಿಕೆಯನ್ನು ಕಟ್ಟಿದರು. ಮುಂದಿನ ಇಪ್ಪತ್ತೆರಡು ವರ್ಷಗಳ ಕಾಲ ಅಕ್ಬರ್ ಕರ್ಮಯೋಗಿಯಂತೆ ಬೇರೆ ಬೇರೆ ಸಂಸ್ಥೆಗಳ ಸುದ್ದಿಮನೆಯಲ್ಲಿ ಕೆಲಸ ಮಾಡಿ, ೨೦೧೪ ರಲ್ಲಿ ಮತ್ತೊಮ್ಮೆ ರಾಜಕೀಯಕ್ಕೆ ಮರಳಿದರು. ಈ ಸಲ ಅವರು ಕಾಣಿಸಿಕೊಂಡಿದ್ದು ಬಿಜೆಪಿಯ ಅಂಗಳದಲ್ಲಿ. ಜಾರ್ಖಂಡದಿಂದ ರಾಜ್ಯಸಭೆ ಪ್ರವೇಶಿಸಿ, ಮೋದಿ ಸರಕಾರದಲ್ಲಿ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದರು.

ಕಳೆದ ಐದು ವರ್ಷಗಳಿಂದ ಮತ್ತೆ ಸಂಪಾದಕರಾಗಿ, ಅಂಕಣಕಾರರಾಗಿ ಕ್ರಿಯಾಶೀಲರಾಗಿರುವ ಅಕ್ಬರ್, ರಾಜಕೀಯ ಮತ್ತು ಪತ್ರಿಕೋದ್ಯಮ ಈ ಎರಡೂ ಕ್ಷೇತ್ರಗಳಲ್ಲಿ ಸಮ-ಸಮವಾಗಿ ಮಿಂದೆದ್ದವರು. ಅವರಿಗೆ ಆ ಎರಡೂ ಕ್ಷೇತ್ರಗಳಲ್ಲಿ ಸಹೋದ್ಯೋಗಿ ಗಳು, ಸಹಪಥಿಕರು ಇದ್ದಾರೆ. ಈ ರೀತಿಯ ಅನುಭವ ಇರುವ ಪತ್ರಕರ್ತರು ಮತ್ತು ರಾಜಕಾರಣಿಗಳು ತೀರಾ ವಿರಳ. ಇಷ್ಟಾಗಿಯೂ ಅಕ್ಬರ್ ಇಷ್ಟವಾಗುವುದು ಪತ್ರಕರ್ತರಾಗಿ, ಸಂಪಾದಕರಾಗಿ, ಲೇಖಕರಾಗಿ ಮತ್ತು ಪಕ್ಕಾ ಕಸುಬಿಯಾಗಿ. ಅವರು ತಾವು ಸಂಸ್ಥಾಪಕ ಸಂಪಾದಕರಾಗಿದ್ದ ಕೋಲ್ಕೊತಾದ ‘ದಿ ಟೆಲಿಗ್ರಾಫ್’ ಪತ್ರಿಕೆಯನ್ನು ಬಿಟ್ಟು ಮೂವತ್ತು ವರ್ಷಗಳಾದರೂ, ಇಂದಿಗೂ ಆ ಪತ್ರಿಕೆ ಅಕ್ಬರ್ ಛಾಪನ್ನು ಬಿಟ್ಟುಕೊಟ್ಟಿಲ್ಲ.

ಅದು ನಮ್ಮ ದೇಶದ ಪ್ರಪ್ರಥಮ ಆಧುನಿಕ, ವಿನ್ಯಾಸಕ್ಕೆ ಹೆಚ್ಚು ಒತ್ತುಕೊಟ್ಟ ಪತ್ರಿಕೆ. ಅಕ್ಬರ್ ರೂಪಿಸಿದ ವಿನ್ಯಾಸದಿಂದ ಕಳಚಿ ಕೊಳ್ಳಲು ಆ ಪತ್ರಿಕೆಗೆ ಇಂದಿಗೂ ಸಾಧ್ಯವಾಗಿಲ್ಲ. ಹಾಗೆ ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ‘ಸಂಡೇ’ ವಾರಪತ್ರಿಕೆ ಕೂಡ ಭಾರತದ ಪತ್ರಿಕೋದ್ಯಮದಲ್ಲಿ ಒಂದು ಮೈಲಿಗಲ್ಲು. ಅದಾದ ಬಳಿಕ ಅವರು ’ಇಂಡಿಯಾ ಟುಡೇ’, ‘ಹೆಡ್ ಲೈ ಟುಡೇ’, ‘ಡೆಕ್ಕನ್ ಕ್ರಾನಿಕಲ್’, ‘ದಿ ಸಂಡೇ ಗಾರ್ಡಿಯನ್’ ಪತ್ರಿಕೆಗಳಿಗೆ ಸಹ ಸಂಪಾದಕರಾಗಿದ್ದರು. ಈ ಎಲ್ಲ ಕಾರಣಗಳಿಂದ ಭಾರತೀಯ ಪತ್ರಿಕೋ ದ್ಯಮದಲ್ಲಿ ಅಕ್ಬರ್ ಅವರಿಗೆ ಅವರದ್ದೇ ಆದ ವಿಶಿಷ್ಟ ಸ್ಥಾನವಿದೆ. ತಮ್ಮ ಇಪ್ಪತ್ತೈದನೇ ವರ್ಷದಲ್ಲಿ ಸಂಪಾದಕರಾದ ಅಕ್ಬರ್, ಈ ತನಕವೂ ಒಂದಿಂದು ಸುದ್ದಿ ಸಂಸ್ಥೆಯ ಸಂಪಾದಕರಾಗಿ ತಮ್ಮ ಪ್ರಸ್ತುತತೆಯನ್ನು ಕಾಪಾಡಿಕೊಂಡಿರುವುದು ಗಮನಾರ್ಹ.

ಅದೇ ರೀತಿ ಕರ್ನಾಟಕದ ಹೆಮ್ಮೆಯ ಪೊಲೀಸ್ ಅಧಿಕಾರಿ ಗೋಪಾಲ ಹೊಸೂರ್. ವೀರಪ್ಪನ್ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದು ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬಂದು, ಧೈರ್ಯ ಮೆರೆದ, ಅದಕ್ಕಾಗಿ ರಾಷ್ಟ್ರಪತಿ ಪದಕವನ್ನೂ ಪಡೆದ ಹೊಸೂರ್, ತಮಗೆ ವಹಿಸಿದ ಜವಾಬ್ದಾರಿ ಸ್ಥಾನಗಳಲ್ಲಿ ದಕ್ಷತೆ ಮೆರೆದ ಅಪರೂಪದ ಅಧಿಕಾರಿ. ಇಂದಿಗೂ ರಾಜ್ಯದ ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಹೊಸೂರ್, ಗೌರವ-ಆದರ ಹೊಂದಿದ್ದಾರೆ. ರಾಜ್ಯದ ನಾಲ್ವರು ಮುಖ್ಯಮಂತ್ರಿಗಳಿಗೆ ಇಂಟೆಲಿಜೆ ಮುಖ್ಯಸ್ಥರಾಗಿ ಕೆಲಸ ಮಾಡಿದ ಅಗ್ಗಳಿಕೆ ಅವರದ್ದು. ಇಂಥ ಅನುಭವ ಹೊಂದಿದ ಮತ್ತೊಬ್ಬ ಅಧಿಕಾರಿ ಇರಲಿಕ್ಕಿಲ್ಲ. ತಮ್ಮ ಸುದೀರ್ಘ ಪೊಲೀಸ್ ವೃತ್ತಿಯಲ್ಲಿ ತರೇಹವಾರಿ ಅನುಭವ ಹೊಂದಿದ ಹೊಸೂರ್ ಜತೆ ಚರ್ಚಿಸುವುದು ಯಾವತ್ತೂ ಆಸಕ್ತಿದಾಯಕವೇ.

ಹೊಸೂರ್ ಅವರ ಸ್ಮರಣ ಶಕ್ತಿ ಅಗಾಧವಾದುದು. ಯಾವುದೇ ವ್ಯಕ್ತಿ, ವಿಷಯ, ಪ್ರಕರಣದ ಬಗ್ಗೆ ಹೇಳಿದರೂ, ನಮಗೆ ಗೊತ್ತಿಲ್ಲದ ಕೆಲವು ಹೊಸ ವಿಷಯಗಳನ್ನಾದರೂ ಅವರು ಪೋಣಿಸುತ್ತಾರೆ. ಪ್ರತಿ ಘಟನೆಗೂ ತಮ್ಮಲ್ಲಿರುವ ವಿವರಗಳೊಂದಿಗೆ ಹೊಸ ಆಯಾಮ ಕಟ್ಟಿಕೊಡುತ್ತಾರೆ. ಅವರ ವಿಶ್ಲೇಷಕ ಶಕ್ತಿಯೂ ಅನನ್ಯವಾದುದು. ಒಂದು ಘಟನೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ, ವಿಶ್ಲೇಷಿಸುವ, ತನಿಖೆ-ಸಂಶೋಧನಾತ್ಮಕ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ಅವರಲ್ಲಿ ಸಿನಿಕತನ, ದರ್ಪ, ತಾನು ಕಂಡಿದ್ದೇ ಸತ್ಯ ಎಂಬ ಮೇಲುಸ್ತುವಾರಿಭಾವ ಇಲ್ಲ.

ತಮ್ಮ ವಾದಕ್ಕೆ ಭಿನ್ನವಾದ ವಾದ ಎದುರಾದಾಗ, ಪಕ್ಕಕ್ಕೆ ಸರಿದು, ಅದಕ್ಕೆ ದಾರಿ ಮಾಡಿಕೊಡುವ ಧಾರಾಳತನ ಎಂಥವರಿಗೂ ಇಷ್ಟವಾಗುತ್ತದೆ. ಅವರಿಗೆ ಊರೆಲ್ಲ ಗೆಳೆಯರು, ಪರಿಚಿತರು. ವೃತ್ತಿ ಸಂಬಂಧಿ-ಒಡನಾಟ ಸಂಬಂಧಿ ಸ್ನೇಹಿತರು, ಆಪ್ತರು. ಯಾವುದೇ ಊರಿಗೆ ಹೋದರೂ, ಅಲ್ಲಿ ಕೆಲವರನ್ನಾದರೂ ಅವರು ಬಲ್ಲರು. ಮೊನ್ನೆ ಕೋಲ್ಕೊತಾಕ್ಕೆ ಹೋದಾಗ, ರೂಪಕ್ ಕುಮಾರ ದತ್ತಾ ಅವರನ್ನು ಹೊಸೂರ್ ಡಿನ್ನರ್‌ಗೆ ಆಮಂತ್ರಿಸಿದ್ದರು. ಮೂಲತಃ ದತ್ತಾ ಕರ್ನಾಟಕ ಕೇಡರ್ ಅಧಿಕಾರಿ.

ಸುದೀರ್ಘ ಅವಧಿಗೆ ಸಿಬಿಐನಲ್ಲಿ  ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ, ಕರ್ನಾಟಕದ ಡಿಜಿಪಿಯಾಗಿ ನಿವೃತ್ತರಾಗಿ, ಈಗ ಪಶ್ಚಿಮ
ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹೆಗಾರರಾಗಿದ್ದಾರೆ. ಅವರೊಂದಿಗೆ ಕಳೆದ ಮೂರು ಗಂಟೆ ಸಮಯ ಹತ್ತಾರು ವಿಷಯಗಳ ಹಾಸು. ಇವರಿಬ್ಬರ ಜತೆ ಇದ್ದಾಗ ನೀರಸ ಕ್ಷಣ ಎಂಬುದು ಇಲ್ಲವೇ ಇಲ್ಲ. ಪಯಣದ ಆರಂಭದಲ್ಲಿ ಒಂದು ಪ್ರಶ್ನೆ ಎಸೆದು ಸುಮ್ಮನೆ ಕುಳಿತುಕೊಂಡರೆ, ಪ್ರಯಾಣದುದ್ದಕ್ಕೂ ಮನಸೋ ಇಚ್ಛೆ ಮಾತು-ಕತೆ, ಉಪಕತೆ, ದೃಷ್ಟಾಂತ, ಹರಟೆ, ಜೋಕು. ಒಟ್ಟಾರೆ ರಸಗವಳ ತರ್ಪಣ. ಅದನ್ನು ಮೊಗೆದುಕೊಳ್ಳುವ ಧಾರಣಶಕ್ತಿಯಿದ್ದವನೇ ಅದೃಷ್ಟವಂತ. ದಕ್ಕದಿದ್ದವನು ಮಹಾ ಪಾಪಿ. ಅಕ್ಬರ್ ಎಲ್ಲ ವಾದವನ್ನೂ ಒಪ್ಪುವವರಲ್ಲ.

ಯಾರನ್ನೋ ಮೆಚ್ಚಿಸಲು ಗೋಣು ಹಾಕುವವರಲ್ಲ. ತಮಗೆ ಸರಿ ಕಾಣದ್ದಕ್ಕೆ ಸೌಜನ್ಯಕ್ಕೂ ಸಹಮತ ವ್ಯಕ್ತಪಡಿಸುವವರಲ್ಲ.
ಅವರದ್ದು ಯಾವತ್ತೂ ಹೆzರಿಯಲ್ಲಿ ಕವಲುದಾರಿ. ಪುನಃ ರಾಜಮಾರ್ಗದಲ್ಲಿ ಮುಂದಿನ ಪಯಣ. ಯಾವ ವಿಷಯದ ಬಗ್ಗೆ ಕೇಳಿದರೂ ಸವಿಸ್ತಾರವಾಗಿ ಹೇಳುವ, ಸುಸ್ತಾಗದ ಕಥನ ಕಲೆ ಅವರದು. ಎಲ್ಲೂ ಬಳಲಿಕೆ ಇಲ್ಲ, ವಿವರಗಳ ಲೋಪವೂ ಇಲ್ಲ. ಎಲ್ಲ ಸಂಗತಿಗಳೂ ಕರಾರುವಾಕ್ಕು. ನೆನಪು ಹರಿತ ಶುಭ್ರ. ನೆನಪಿಸಿಕೊಳ್ಳಲು ತಲೆ ಕೆರೆಯುವವರಲ್ಲ. ಏನೇ ಹೇಳಿದರೂ ಪಕ್ಕಾ. ಕೆಲವು ವಿಷಯಗಳಲ್ಲಿ end point ತಲುಪಿದಾಗ, ಹಿಂದಕ್ಕೆ ಬಂದು ವಿಹರಿಸುವ, ಪಕ್ವತೆಗೆ ತೆರೆದುಕೊಳ್ಳುವ, ವಿಶಾಲ ಗುಣ ಅವರದ್ದು. ಅಕ್ಬರ್ ಅವರಿಗೆ ಗೊತ್ತಿಲ್ಲದ ವ್ಯಕ್ತಿಗಳಿಲ್ಲ. ಅವರದ್ದೇ ಖಚಿತ ಅಭಿಪ್ರಾಯಗಳಿಲ್ಲದ ವಿಷಯಗಳೂ ಇಲ್ಲ. ಕೆಲವು ವಿಷಯಗಳ ಬಗ್ಗೆ ಅವರ ಅಭಿಪ್ರಾಯ ಸಮತಟ್ಟು.

ಬುಲ್ಡೋಜರ್ ಹಾಯಿಸಿ ಪೆಟ್ಮಣಿಸಿದ ಹಾಗೆ. ಅದೂ ಸರಿ, ಇದೂ ಸರಿ, ಎಲ್ಲವೂ ಸರಿ ಎಂಬ ಸಮಪಾತಳಿ ನ್ಯಾಯವಲ್ಲ. ಇದು ತಪ್ಪು ಎಂದು ಹೇಳುವ ಖಡಾಖಡಿ ನಿಷ್ಠುರತ್ವ. ಅಕ್ಬರ್ ಅವರಾಗಲಿ, ಹೊಸೂರ್ ಅವರಾಗಲಿ, ಪ್ರಯಾಣದಲ್ಲಿ ತೂಕಡಿಸು ವವರಲ್ಲ, ನಿದ್ದೆ ಮಾಡುವವರಲ್ಲ. ದಿನವಿಡೀ ಪ್ರಯಾಣಿಸಿದರೂ ಮಾತುಕತೆಗೆ ಬರವಿಲ್ಲ. ನಾವು ಮಕೈಬಾರಿಯಿಂದ ಡಾರ್ಜಿ ಲಿಂಗ್ ಗೆ ಹೊರಟಾಗ, ಒಂದು ಮುರುಕಿಯಲ್ಲಿ ನಮ್ಮ ವಾಹನ ನಿಧಾನವಾಗಿ ಚಲಿಸಿದಾಗ, ‘ಮೂವತ್ತೆಂಟು ವರ್ಷಗಳ ಹಿಂದೆ, ಇದೇ ಇದೇ ಸ್ಥಳದಲ್ಲಿ ಸುಭಾಷ್ ಸಿಂಗ್ ನೇತೃತ್ವದ ಗೋರ್ಖಾ ರಾಷ್ಟ್ರೀಯ ವಿಮೋಚನಾ ರಂಗದ ಕಾರ್ಯಕರ್ತರು ಪೊಲೀಸ್ ವಾಹನಗಳ ಮೇಲೆ ಗ್ರೆನೇಡ್ ದಾಳಿ ಮಾಡಿದರು.

ಆ ಘಟನೆಯ ವರದಿಗೆಂದು ನಾನು ಕೋಲ್ಕೊತಾದಿಂದ ಬಂದಿದ್ದೆ’ ಎಂದು ಅಕ್ಬರ್ ಹೇಳಿದರು. ಆಗ ಗೋಪಾಲ ಹೊಸೂರ್, ‘ಆ
ಸಂದರ್ಭದಲ್ಲಿ ಜಿ.ಎಂ.ಪಿ.ರೆಡ್ಡಿ ಎಂಬುವವರು ಡಾರ್ಜಿಲಿಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಮೂಲತಃ ಅವರು ಕರ್ನಾಟಕದವರು. ಆ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡರೂ, ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ನಂತರ ರೆಡ್ಡಿಯವರು ೨೦೧೩ ರಿಂದ ೨೦೧೬ ರವರೆಗೆ ಪಶ್ಚಿಮ ಬಂಗಾಳದ ಡಿಜಿಪಿಯಾಗಿ ಸೇವೆ ಸಲ್ಲಿಸಿ, ನಿವೃತ್ತ ರಾದ ಬಳಿಕ ಆ ರಾಜ್ಯದ ಇನಾರ್ಮಶನ್ ಕಮಿಷನ್‌ನ ಅಧ್ಯಕ್ಷರಾಗಿದ್ದರು’ ಎಂದು ಮಾಹಿತಿ ಜಾಲವನ್ನು ಬಿಚ್ಚುತ್ತಾ ಹೋದರು.

ಹೊಸೂರ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅದೇ ಜಾಗದಿಂದ, ರೆಡ್ಡಿಯವರಿಗೆ ಫೋನ್ ಕರೆ ಮಾಡಿ ಮಾತಾಡಿದರು. ‘ರೆಡ್ಡಿಯವರೇ, ನಾವು ಈಗ ಎಲ್ಲಿದ್ದೇವೆ ಎಂಬುದನ್ನು ಹೇಳಿದರೆ ನಿಮಗೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ, ಊಹೆ ಮಾಡಬಲ್ಲೀರಾ?’ ಎಂದು ಕೇಳಿದರು. ನಾವಿರುವ ತಾಣವನ್ನು ರೆಡ್ಡಿಯವರು ಊಹೆ ಮಾಡುವುದು ಸಾಧ್ಯವಿರಲಿಲ್ಲ. ಕಾರಣ ಹೊಸೂರ್ ಅಲ್ಲಿರುವು ದನ್ನು ರೆಡ್ಡಿಯವರು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಕೊನೆಗೆ ಹೊಸೂರ್, ತಾವು ಇರುವ ಜಾಗ ಯಾವುದೆಂದು ಹೇಳಿದಾಗ, ರೆಡ್ಡಿಯವರಿಗೆ ಅಚ್ಚರಿ.

ಫೋನಿನಲ್ಲಿ ನನ್ನನ್ನೂ ಪರಿಚಯಿಸಿ, ಮಾತಾಡುವಂತೆ ಹೇಳಿದರು. ಆಗ ರೆಡ್ಡಿಯವರು ಮೂವತ್ತೆಂಟು ವರ್ಷಗಳ ಹಿಂದಿನ  ಘಟನೆಯನ್ನು ನೆನಪು ಮಾಡಿಕೊಂಡರು. ಈ ಘಟನೆ ಆ ದಿನಗಳಲ್ಲಿ ರಾಷ್ಟ್ರೀಯ ಸುದ್ದಿಯಾಗಿತ್ತು. ಆ ಘಟನೆಯ ನೈಜ ಪಾತ್ರಧಾರಿ ಯಿಂದ ಕಣ್ಣಿಗೆ ಕಟ್ಟುವಂತೆ ವಾಸ್ತವ ಸಂಗತಿಗಳ ವೀಕ್ಷಕ ವಿವರಣೆ ಪಡೆದಿದ್ದು ಅಮೋಘವಾಗಿತ್ತು. ಬಹಳ ವರ್ಷಗಳ ಬಳಿಕ ರೆಡ್ಡಿಯವರು ಆ ಘಟನೆ ಮತ್ತು ಜಾಗಕ್ಕೆ ಟ್ಞ್ಞಛ್ಚಿಠಿ ಆಗಿದ್ದರು. ನಮಗೂ ಆ ದಿನಗಳ ಹಿಂಸಾಚಾರದ ಒಂದು ಝಲಕ್‌ನ್ನು ಕಟ್ಟಿ ಕೊಟ್ಟಿದ್ದರು.

ನಮ್ಮ ಪಯಣದಲ್ಲಿ ಹಾದುಹೊದ ವಿಷಯಗಳನ್ನೆಲ್ಲ ಸೇರಿಸಿದರೆ ಅದೊಂದು ಸ್ವಾರಸ್ಯಕರ, ಅದ್ಭುತ ಕತೆಬುತ್ತಿಯಾಗಬಹುದು. ಅಲ್ಲಿ ಹಾದು ಹೋಗದ ವಿಷಯಗಳಿಲ್ಲ, ವ್ಯಕ್ತಿಗಳಿಲ್ಲ. ಅದೊಂದು ಸಪ್ತಸಾಗರಸದೃಶ ಪಯಣ. ಎಂಟು ದಿನಗಳಲ್ಲಿ ಚರ್ಚಿಸಿದ ವಿಷಯಗಳು ಸಾವಿರದೆಂಟು. ಅದನ್ನು ಆಗಾಗ ಮೆಲುಕು ಹಾಕುತ್ತಾ ನಿಮ್ಮೊಂದಿಗೂ ಹಂಚಿಕೊಳ್ಳಬಹುದು, ನೋಡೋಣ.