ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಸರ್ವೋಚ್ಚ ನ್ಯಾಯಾಲಯಕ್ಕೆ ಮಾರ್ಚ್ ೨೦೨೩ರಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸಂಘಟನೆ ಯು ‘ಮುಕ್ತ ಮತ್ತು ಪಾರದರ್ಶಕ ಚುನಾವಣೆ’ ನಡೆಯುವಂತಾಗಲು, ಇವಿಎಮ್ (Elect-ronic Voting Machine-EVM) ಯಂತ್ರಗಳನ್ನು ವಿವಿ-ಪ್ಯಾಟ್ (Voters Verified Paper Audit Trail- VVPAT) ಗಳೊಂದಿಗೆ ‘ಮರು ಪರಿಷ್ಕರಣೆ’ ಮಾಡು ವಂತೆ ಅರ್ಜಿ ಸಲ್ಲಿಸಿತು.
ಈ ಮೂಲಕ, ಇದೇ ಏಪ್ರಿಲ್ ೧೯ರಂದು ಮೊದಲ ಹಂತದ ಚುನಾವಣೆ ಸಿದ್ಧತೆಯಲ್ಲಿದ್ದಾಗಲೇ ಸರ್ವೋಚ್ಚ ನ್ಯಾಯಾಲಯವು ಶೇ.೧೦೦ರಷ್ಟು ವಿವಿ-ಪ್ಯಾಟ್ನೊಂದಿಗೆ ತಾಳೆ ಮಾಡುವ ವಿಚಾರವನ್ನು ಶೀಘ್ರವೇ ತೆಗೆದುಕೊಳ್ಳುವುದಾಗಿ ಹೇಳಿದೆ. ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿ ಉನ್ನತ ಮಟ್ಟದ ಉಪಕರಣಗಳ ಮೇಲೆ, ಒಂದು ಶ್ರೇಷ್ಠ ವ್ಯವಸ್ಥೆಯ ಮೇಲೆ ನಂಬಿಕೆ ಇಡದೇ ಹೋದರೆ ಇಂದಿನ ನವಯುವಕರಿಗೆ, ಮುಂದಿನ ತಲೆಮಾರಿಗೆ ನಾವು ಯಾವ ಮಾರ್ಗ ಹಾಕಿಕೊಡುತ್ತಿದ್ದೇವೆ ಎಂಬುದನ್ನು ಕೂಡ ಆಲೋಚಿಸಬೇಕಾಗುತ್ತದೆ.
ಹಾಗೆಯೇ, ವಿಜ್ಞಾನ, ತಂತ್ರಜ್ಞಾನವು ನಮ್ಮನ್ನು ಅಭಿವೃದ್ಧಿಯ ಜತೆಗೆ ಸತ್ಯಮಾರ್ಗದ ಕಡೆಗೆ ಕರೆದೊಯ್ಯುವಂತಾಗಬೇಕು ಎಂದು ಐನ್ಸ್ಟೀನ್ ಹೇಳುತ್ತಿದ್ದ ಮಾತು ನೆನಪಾಗುತ್ತದೆ. ನಾಗರಿಕತೆಯ ಪ್ರಾರಂಭದಿಂದ ಹಿಡಿದು ಆಧುನಿಕತೆಯವರೆಗೆ ಮಾನವ, ಮನುಷ್ಯನಾಗುವ ಹಾದಿಯಲ್ಲಿ ಹತ್ತು ಹಲವು ವ್ಯವಸ್ಥೆಗಳನ್ನು ಆರಂಭಿಸಿ ಪ್ರಯೋಗಿಸುತ್ತಲೇ ಬಂದಿದ್ದಾನೆ. ಇಂಥ ಸಾಮಾಜಿಕ, ಆಡಳಿತಾತ್ಮಕ ನಿರ್ವಹಣೆಯಲ್ಲಿ ಬಲಿಷ್ಠನೇ ಮಾಲೀಕ, ಉಳ್ಳವನೇ ಒಡೆಯ, ಕಮ್ಯುನಿಸ್ಟ್ ತತ್ವ ಸೇರಿದಂತೆ ವಿಶ್ವದ ೫ ಬಲಿಷ್ಠ
ವ್ಯವಸ್ಥೆಗಳಾದ ರಾಜಪ್ರಭುತ್ವ, ಪ್ರಜಾಪ್ರಭುತ್ವ, ಒಲಿಗಾರ್ಕಿ, ನಿರಂಕುಶಾಧಿಕಾರ ಮತ್ತು ನಿರಂಕುಶವಾದದಂಥ ವ್ಯವಸ್ಥೆಗಳನ್ನು
ಕಂಡುಕೊಂಡಿದ್ದರೂ ಇವುಗಳಲ್ಲಿ ಹೆಚ್ಚಾಗಿ ಗೆಲುವು ಕಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಮಾತ್ರ. ಸುಮಾರು ೧೮ನೇ ಶತಮಾನ ಗಳಿಂದೀಚೆಗೆ ಇದಕ್ಕೆ ಹೆಚ್ಚು ಪ್ರಾಮುಖ್ಯ ದೊರಕುತ್ತ ಬಂದಿತು.
ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ವಿಶ್ವದ ಅತ್ಯಂತ ಪುರಾತನ ಪ್ರಜಾಪ್ರಭುತ್ವ ಹೊಂದಿದ್ದ ಅಥೆನ್ಸ್ (ಕ್ರಿ.ಪೂ. ೫೨೫ರಲ್ಲಿ ಅಥೆನ್ಸ್ನಲ್ಲಿ ಪ್ರಜಾಪ್ರಭುತ್ವದ ಜನಕನೆಂದು ಕ್ಲೇಯಿಸ್ತೀನ್ ಹೆಸರು ದಾಖಲಾಗಿದೆ)ನಿಂದ ಹಿಡಿದು, ಇಂದಿನ ಶ್ರೀಮಂತ
ದೇಶಗಳ ಸಾಲಿನಲ್ಲಿರುವ ಅಮೆರಿಕ, ಇಂಗ್ಲೆಂಡ್, ಜಪಾನ್, ಇಟಲಿ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾದ ಜತೆಗೆ ೧೦ ಸಾವಿರ ಜನಸಂಖ್ಯೆ ಹೊಂದಿರುವ ಜಗತ್ತಿನ ಅತ್ಯಂತ ಪುಟ್ಟ ರಾಷ್ಟ್ರ, ೨೧ ಚದರ ಕಿ.ಮೀ. ವಿಸ್ತೀರ್ಣವುಳ್ಳ ನೌರು ಗಣರಾಜ್ಯ ಸೇರಿದಂತೆ ೧೫ಕ್ಕೂ ಹೆಚ್ಚು ದೇಶಗಳು ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿವೆ.
ಭಾರತವು ೧೯೪೭ರಲ್ಲಿ ಸ್ವತಂತ್ರಗೊಂಡ ನಂತರ, ತನ್ನದೇ ಆದ ಸಂವಿಧಾನವನ್ನು ರಚಿಸಿಕೊಳ್ಳುವ ಮೂಲಕ ಪ್ರಜಾಸತ್ತಾತ್ಮಕ ಗಣರಾಜ್ಯವುಳ್ಳ ಆಳುಗ ವ್ಯವಸ್ಥೆಯನ್ನು ಹೊಂದಿತು. ಭಾರತದಲ್ಲಿ ನಡೆಯುವ ಚುನಾವಣೆಯ ನೇತೃತ್ವ ವಹಿಸಿರುವ ಚುನಾವಣಾ
ಆಯೋಗದ ಕಾರ್ಯಶೈಲಿಯನ್ನು ಗಮನಿಸಿದಾಗ, ಜಗತ್ತಿನಲ್ಲಿ ಅತ್ಯಂತ ವೈರುಧ್ಯ, ವೈವಿಧ್ಯಮಯ ಸಂಸ್ಕೃತಿ, ಧರ್ಮಾಚರಣೆ
ಯುಳ್ಳ ಈ ದೇಶದ ಮತದಾರರನ್ನು ಸುರಕ್ಷಿತವಾಗಿ ಮತಗಟ್ಟೆಗೆ ಕರೆಯಿಸಿ ಅವರಿಂದ ಮತದಾನವಾಗುವಂತೆ ನೋಡಿಕೊಳ್ಳು ವುದು ಅಂದುಕೊಳ್ಳುವಷ್ಟು ಸುಲಭವಲ್ಲ ಎನಿಸುತ್ತದೆ.
ಭಾರತದಲ್ಲಿನ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಲ್ಲಿ ಚುನಾವಣಾ ಆಯೋಗವು ಶಾಶ್ವತ ಸಾಂವಿಧಾನಿಕ ಸಂಸ್ಥೆಯಾಗಿದ್ದು,
ಇದನ್ನು ಸಂವಿಧಾನದ ವಿಧಿಯ ಅನ್ವಯ ಜನವರಿ ೨೫, ೧೯೫೦ರಂದು ಸ್ಥಾಪಿಸಲಾಯಿತು. ಸ್ವತಂತ್ರ ಮತ್ತು ನಿಷ್ಪಕ್ಷಪಾತ
ಕಾರ್ಯನಿರ್ವಹಣೆಯನ್ನು ರಕ್ಷಿಸಲು ಮತ್ತು ಖಚಿತಪಡಿಸಿಕೊಳ್ಳಲು ನಿಬಂಧನೆಗಳನ್ನು ಒಳಗೊಂಡ ಭಾರತದ ಸಂವಿಧಾನದ
೩೨೪ನೇ ವಿಧಿಯು ಚುನಾವಣಾ ಆಯೋಗದ ಬಗ್ಗೆ ಉಲ್ಲೇಖಿಸುತ್ತದೆ. ಆರಂಭದಲ್ಲಿ ಏಕಸದಸ್ಯ ಸಂಸ್ಥೆಯಾಗಿ ರೂಪುಗೊಂಡು
ಪ್ರಸ್ತುತ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇಬ್ಬರು ಆಯುಕ್ತರನ್ನು ಈ ಸಂಸ್ಥೆ ಹೊಂದಿದೆ.
ಲೋಕನಾಯಕ ಜಯಪ್ರಕಾಶ ನಾರಾಯಣರ ಕಾಲಘಟ್ಟದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುತ್ತ ದೇಶದ ಉನ್ನತ ಹುದ್ದೆ ಯವರೆಗೆ ಬೆಳೆದುಬಂದ ಲಾಲು ಸೇರಿದಂತೆ ಇತರೆ ಅಂದಿನ ನಾಯಕರು ನಡೆಸಿದ ದಬ್ಬಾಳಿಕೆಯು ದೇಶದ ಚುನಾವಣೆ ಅಧ್ಯಾಯ ಗಳಲ್ಲಿ ಮರೆಯಲಾಗದಂಥದ್ದು. ಮಾಧ್ಯಮಗಳ ಭರಾಟೆ ಇಲ್ಲದ ದಿನಗಳಲ್ಲಿ, ಅಂದಿನ ರಾಜಕೀಯ ನಾಯಕರು, ಬಲಿಷ್ಠರು ಆಡಿದ್ದೇ ಆಟ ಎಂಬಂತಾಗಿ ಹೋಗಿತ್ತು. ಜನರಿಗೂ ಇದು ಸಾಮಾನ್ಯ ವಿಷಯವಾಗಿತ್ತು.
ಸತ್ತವರ ಹೆಸರಿನಲ್ಲಿ ಮತಗಳು ಚಲಾವಣೆಯಾಗುತ್ತಿದ್ದವು. ಜನರು ಗುಂಪುಗುಂಪಾಗಿ ಬಂದು ಅಪರಿಚಿತ ಹಳ್ಳಿಗಳ ಮತಗಟ್ಟೆ
ಯಲ್ಲಿ ಮತ ಚಲಾಯಿಸುವುದು ಸರ್ವೇಸಾಮಾನ್ಯವಾಗಿತ್ತು. ಅಂದಿನ ಬಿಹಾರ, ಉತ್ತರಾಂಚಲ, ಅವಿಭಜಿತ ಉತ್ತರಪ್ರದೇಶಗಳಲ್ಲಿ ಬಂದೂಕುಧಾರಿಗಳು ಬಂದು ಬಲವಂತದ ಮತಗಳನ್ನು ಹಾಕಿಸಿ ಹೋಗುತ್ತಿದ್ದರು. ಅಂದಿನ ವ್ಯವಸ್ಥೆಯೂ ಇದಕ್ಕೆ ಹೊಂದಿ
ಕೊಂಡಂತಿತ್ತು. ಚುನಾವಣಾ ಫಲಿತಾಂಶದ ದಿನಗಳಲ್ಲಿಯಂತೂ ಉತ್ತರಭಾರತದ ಹಳ್ಳಿಯ ಜನರು ತಮ್ಮ ಬೆಂಬಲಿತ ಅಭ್ಯರ್ಥಿ
ಸೋತರೆ ಊರು ಬಿಡಬೇಕಾಗಿತ್ತು, ಹಾಗಿತ್ತು ಅಂದಿನ ಸ್ಥಿತಿ.
ಫಲಿತಾಂಶ ಏರುಪೇರಾಗುವ ಹಂತಕ್ಕೆ ಬಂದರೆ, ಎಣಿಕೆ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಮತ ಚಲಾಯಿಸಿದ ಮತಪೆಟ್ಟಿಗೆ ಗಳನ್ನೇ ಹೊತ್ತು ಓಡಿಬಿಡುತ್ತಿದ್ದರು, ಇಲ್ಲವೇ ನದಿ-ನೀರಿಗೆ ಎಸೆಯಲಾಗುತ್ತಿತ್ತು. ಇಂಥ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯೇ ರದ್ದಾದ ಪ್ರಸಂಗಗಳಿವೆ. ಈ ಹಿಂದೆ, ಕರ್ನಾಟಕದಲ್ಲೂ ಇಂಥ ಘಟನೆಗಳು ನಡೆದ ವರದಿಗಳು ಕೂಡ ಪ್ರಕಟವಾಗಿದ್ದವು. ಇತ್ತೀಚೆಗೆ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ವೇಳೆ, ಒಬ್ಬ ಯುವಕ ಮತಪೆಟ್ಟಿಗೆ ಕಸಿದುಕೊಂಡು ಓಡುತ್ತ ನದಿಗೆ ಎಸೆದ
ವಿಡಿಯೋ ಇಂದೂ ಈ ವ್ಯವಸ್ಥೆಯನ್ನು ಅಣುಕಿಸುವಂತೆ ಜಾಲತಾಣಗಳಲ್ಲಿ ಸದ್ದುಮಾಡುತ್ತಲೇ ಇದೆ.
ಹೀಗಿದ್ದ ಹೊತ್ತಿನಲ್ಲಿ ೧೯೯೦ರಲ್ಲಿ ಟಿ.ಎನ್. ಶೇಷನ್ ಎಂಬ ಪ್ರಜ್ಞಾವಂತ ವ್ಯಕ್ತಿ, ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ
ವಹಿಸಿಕೊಂಡಾಗ, ಈ ಎಲ್ಲ ಅವ್ಯವಸ್ಥೆಗಳು ಅವರ ಗಮನಕ್ಕೆ ಬರುತ್ತವೆ. ಈ ವ್ಯಕ್ತಿಯ ದೆಸೆಯಿಂದ ಭಾರತೀಯ ಚುನಾವಣಾ
ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಯ ಪರ್ವ ಆರಂಭಗೊಳ್ಳುತ್ತದೆ. ಸುಧಾರಣಾ ಪ್ರಕ್ರಿಯೆಯ ಮೊದಲ ಹೆಜ್ಜೆಯಂಬಂತೆ,
೧೯೯೩ರಲ್ಲಿ ಜಾರಿಗೆ ತಂದದ್ದೇ ‘ಎಪಿಕ್ ಕಾರ್ಡ್’ ವ್ಯವಸ್ಥೆ. Elector’s Photo Identity Card (EPIC) ಎಂದು ಕರೆಯಲ್ಪಡುವ ಈ ಗುರುತಿನ ಚೀಟಿಯನ್ನು ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಹೊಂದಿರಬೇಕೆಂದು ತಿಳಿಸಲಾಯಿತು. ಇದು ಮತದಾನ ಪದ್ಧತಿಯಲ್ಲಿನ ಬದಲಾವಣೆಗೆ ಬಹುದೊಡ್ಡ ಕ್ರಾಂತಿ ಕಾರಕ ಹೆಜ್ಜೆಯಾಯಿತು ಎನ್ನಬಹುದು.
ಆಗಲೂ ನೇತಾರರು, ರಾಜಕೀಯ ಪಕ್ಷಗಳು ಇದನ್ನು ಬಲವಾಗಿ ವಿರೋಧಿಸಿದವು. ಸ್ವತಃ ಶೇಷನ್ ಅವರನ್ನೇ ಹಿಟ್ಲರ್ ಎಂದು ಕೆಲವರು ಜರಿದರು. ಆದರೂ, ಇದಕ್ಕೆ ಅವರು ತಲೆಕೆಡಿಸಿಕೊಳ್ಳದೆ ಈ ವ್ಯವಸ್ಥೆಯನ್ನು ದೇಶಾದ್ಯಂತ ಯಶಸ್ವಿಯಾಗಿ ಜಾರಿಗೆ ತಂದರು. ನಂತರದಲ್ಲಿ, ವಿವಿಧ ಯೋಜನೆಗಳನ್ನು ಹೊಂದಲು, ಪಾಸ್ಪೋರ್ಟ್ ಸೇವೆ ಇತ್ಯಾದಿಗಳಿಗೆ ಪ್ರಾಥಮಿಕ ಗುರುತಿನಪತ್ರವಾಗಿ ನೀಡುವವರೆಗೆ ಎಪಿಕ್ ಕಾರ್ಡ್ ಅಧಿಕೃತವೆಂದು ಪರಿಗಣಿಸಲ್ಪಟ್ಟಿತು.
ಇಷ್ಟೆಲ್ಲ ಸುದೀರ್ಘ ಪಯಣವನ್ನು ಯಾಕೆ ಮೆಲುಕು ಹಾಕಬೇಕಾಯಿತೆಂದರೆ, ಅಂದಿನಂತೆ ಇಂದೂ ಚುನಾವಣಾ ಆಯೋಗ ವನ್ನು ದೂರುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಮಾತ್ರ ಪ್ರಸ್ತುತದಲ್ಲಿ ಬಳಸಲಾಗುತ್ತಿರುವ ವಿವಿ-ಪ್ಯಾಟ್ ಎಂಬ ಅತ್ಯಾಧುನಿಕ ಮತಯಂತ್ರ. ಈ ಒಂದು ವಿವಿ-ಪ್ಯಾಟ್ ಯಂತ್ರವು ಮತ ಹಾಕುವ ಇವಿಎಂ ಯಂತ್ರಕ್ಕೆ ಸಂಪರ್ಕಗೊಂಡಿರುತ್ತದೆ.
ಮತದಾನ ಮಾಡಿದ ಬಳಿಕ, ಮತದಾರನಿಗೆ ಮತಹಾಕಿದ ಚಿಹ್ನೆಯ ಮುದ್ರಿತ ಚೀಟಿಯೊಂದನ್ನು ಸುಮಾರು ೭ ಸೆಕೆಂಡುಗಳ ಕಾಲ
ಪ್ರದರ್ಶಿಸಿದ ನಂತರ, ವ್ಯವಸ್ಥಿತವಾಗಿ ಮೊದಲೇ ಜೋಡಿಸಿರುವ ಸಂಗ್ರಹ ಪೆಟ್ಟಿಗೆಯೊಳಗೆ ಬೀಳುತ್ತದೆ. ಇದರಲ್ಲಿ, ಅಭ್ಯರ್ಥಿಯ
ಕ್ರಮಸಂಖ್ಯೆ, ಹೆಸರು, ಪಕ್ಷದ ಚಿಹ್ನೆಯ ಕುರಿತ ಮಾಹಿತಿ ಮುದ್ರಿತವಾಗಿರುತ್ತದೆ.
ಹಾಗೆ ನೋಡಿದರೆ, ಇವಿಎಮ್ ಯಂತ್ರದ ಪ್ರಯೋಗವನ್ನು ಚುನಾವಣಾ ಆಯೋಗವು ೧೯೮೨ರಲ್ಲಿಯೇ ಕೇರಳದ ಉತ್ತರ ಪರವುರ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ ಮೊತ್ತಮೊದಲ ಬಾರಿಗೆ ಉಪಯೋಗಿಸಿತ್ತು. ಮೊದಲಿನಿಂದಲೂ ದೇಶದ ಮತದಾರ ಮತ್ತು ರಾಜಕೀಯ ಪಕ್ಷಗಳು ಈ ಒಂದು ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಗೌರವಯುತವಾಗಿ ಕಾಣುತ್ತ ಬಂದಿವೆ. ಹೀಗಿದ್ದ ಮೇಲೆ ಯಾಕೆ ಆಧುನಿಕ ಯಂತ್ರ ವ್ಯವಸ್ಥೆಯನ್ನು ಚುನಾವಣಾ ಆಯೋಗವು ಪರಿಚಯಿಸಿತು ಎಂಬುದನ್ನು ವಿವೇಚಿಸಿದಾಗ, ಮೊದಲು ೨೦೧೦ರಲ್ಲಿ ಆಯೋಗವು ಸರ್ವಪಕ್ಷ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಿತು.
ಮೂಲ ಮಾದರಿಯಂತ್ರ ಸಿದ್ಧಗೊಂಡ ಬಳಿಕ, ಪ್ರಾಯೋಗಿಕವಾಗಿ ದೇಶದ ವಿವಿಧ ಭಾಗಗಳಾದ ಲಡಾಖ್, ತಿರುವನಂತಪುರಂ, ಚಿರಾಪುಂಜಿ, ಪೂರ್ವ ದಿಲ್ಲಿ ಹಾಗೂ ಜೈಸಲ್ಮೇರ್ನಲ್ಲಿ ಜುಲೈ ೨೦೧೧ರಲ್ಲಿ ಬಳಸಲಾಯಿತು. ಅತ್ಯಂತ ಸಮರ್ಪಕ ನಿರ್ವಹಣೆ ಮತ್ತು ಉತ್ತಮ -ಲಿತಾಂಶ ಕಂಡುಬಂದ ಮೇಲೆ, ದೇಶಾದ್ಯಂತ ಹಳ್ಳಿಹಳ್ಳಿಗಳಿಗೂ ಸಾಗಾಣಿಕೆಗೆ ಅನುಕೂಲವಾಗುವಂತೆ ಯಂತ್ರಗಳ ವಿನ್ಯಾಸ ಇತ್ಯಾದಿಗಳನ್ನು ಮರುಪರಿಶೀಲಿಸಲಾಯಿತು. ಎಲ್ಲ ಪಕ್ಷಗಳ ಅಭಿಪ್ರಾಯ ಪಡೆಯುವುದರ ಜತೆಗೆ ಆಯೋಗದ ನುರಿತ ತಜ್ಞರ ಕಮಿಟಿಯಿಂದ ೨೦೧೩ರಲ್ಲಿ ಅನುಮೋದನೆ ಪಡೆಯಲಾಯಿತು.
ಮರುವರ್ಷವೇ ನಡೆಯಲಿದ್ದ ಚುನಾವಣೆಯಲ್ಲಿ ಇವಿಎಮ್ -ವಿವಿಪ್ಯಾಟ್ ಯಂತ್ರಗಳನ್ನು ಬಳಸಲು ಅನುಕೂಲವಾಗುವಂತೆ ‘ಚುನಾವಣಾ ಪ್ರಕ್ರಿಯೆ ಅಽನಿಯಮ-೧೯೬೧’ ನಿಯಮವನ್ನು ತಿದ್ದುಪಡಿ ಮಾಡಲಾಯಿತು. ಈ ಮೂಲಕ ಮೊಟ್ಟಮೊದಲ ಬಾರಿಗೆ ೨೦೧೩ರಲ್ಲಿ ನಡೆದ ನಾಗಾಲ್ಯಾಂಡ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ೨೧ ಮತದಾನ ಕೇಂದ್ರಗಳಲ್ಲಿ ಈ ಯಂತ್ರಗಳನ್ನು ಬಳಸಲಾಯಿತು. ಜೂನ್ ೨೦೧೭ರ ನಂತರವೇ ವಿವಿಪ್ಯಾಟ್ ಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಲು
ನಿರ್ಧರಿಸಲಾಯಿತು.
ಇಲ್ಲಿಯವರೆಗೆ ಎಲ್ಲವೂ ಸುಸೂತ್ರವೇ, ವಿಶ್ವಾಸಾರ್ಹವೇ. ಆದರೆ, ದೂರು, ಅಪನಂಬಿಕೆ, ಏನೋ ನಡೆಯುತ್ತಿದೆ ಎಂದು ರಾಜಕೀಯ ಪಕ್ಷಗಳು, ಚುನಾವಣೆಯಲ್ಲಿ ಸೋತ ವ್ಯಕ್ತಿಗಳು, ಈ ಒಂದು ಪ್ರಕ್ರಿಯೆಯ ಮೇಲೆ ಮೆಲ್ಲಗೆ ಗುಮ್ಮನನ್ನು ಕೂರಿಸಲು
ಪ್ರಾರಂಭಿಸಿದರು. ಒಮ್ಮೆ ಗಮನಿಸಿದರೆ, ಭಾರತದೊಂದಿಗೆ ಬೆಲ್ಜಿಯಂ, ವೆನಿಜುವೆಲಾ, ಯುಎಇ, ಜೋರ್ಡಾನ್, ಮಾಲ್ಡೀವ್ಸ್,
ಈಜಿಪ್ಟ್, ಭೂತಾನ್ ಮತ್ತು ನೇಪಾಳ ದೇಶಗಳು ಕೂಡ ಆಧುನಿಕ ಮತಯಂತ್ರಗಳನ್ನು ಬಳಸುತ್ತಿವೆ.
ಹೀಗಾಗಿ, ಚುನಾವಣಾ ಆಯೋಗವು ಭಾರತೀಯ ಅಂಕಿ- ಅಂಶ ಸಂಸ್ಥೆ (ISI) ಯನ್ನು ಉತ್ತಮ, ಅತ್ಯಂತ ನಿಖರ ಮತ್ತು ದೃಢ ವಾದ ಪ್ರಾಯೋಗಿಕ ಮಾದರಿಯನ್ನು ಒದಗಿಸಿಕೊಡುವಂತೆ ಕೇಳಿಕೊಂಡಿತು. ಇದರ ಪೂರ್ಣ ವಿವರಗಳೊಂದಿಗೆ ಆಯೋ ಗವು ಸರ್ವೋಚ್ಚ ನ್ಯಾಯಾಲಯಕ್ಕೆ ೨೦೧೮ರಲ್ಲಿ ತನ್ನ ಅಫಿಡವಿಟ್ ಸಲ್ಲಿಸಿತು ಕೂಡ. ಫೆಬ್ರುವರಿ ೨೦೧೮ರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ‘ರ್ಯಾಂಡಮ್’ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಪ್ಯಾಟ್ ಮತಚೀಟಿಗಳ ಎಣಿಕೆಯನ್ನು ಚುನಾವಣಾ ಆಯೋಗವು ಕಡ್ಡಾಯ ಗೊಳಿಸಿತು.
ಏಪ್ರಿಲ್ ೨೦೧೯ರಲ್ಲಿ ಚಂದ್ರಬಾಬು ನಾಯ್ಡು ಎಂಬುವವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಮೇರೆಗೆ
ಪ್ರತಿ ವಿಧಾನಸಭಾ ಸ್ಥಾನಕ್ಕೆ ಐದು ಮತಗಟ್ಟೆಗಳಿಗೆ ಇದನ್ನು ಹೆಚ್ಚಿಸಲಾಯಿತು. ಇಷ್ಟಾಗಿಯೂ, ವಿರೋಧ ಪಕ್ಷಗಳು ರ್ಯಾಂಡಮ್ ಆಯ್ಕೆ ಪದ್ಧತಿ ಯಲ್ಲಿ ಸಹ ಅನುಮಾನ ವ್ಯಕ್ತಪಡಿಸುತ್ತವೆ. ಆದರೆ, ಆಯೋಗವು ಹೇಳುವುದೇ ಬೇರೆ. ನಮ್ಮ ಪ್ರಕ್ರಿಯೆಯು ಅತ್ಯಂತ ಪಾರದರ್ಶಕ ಮತ್ತು ಮುಕ್ತವಾಗಿದ್ದು, ಪ್ರತಿ ಹಂತವನ್ನೂ ಆಯಾ ಪಕ್ಷದ ಬೂತ್ ಏಜೆಂಟ್ ಸೇರಿದಂತೆ ನಿಯುಕ್ತಿಗೊಳಿಸಿದ ಅಧಿಕಾರಿಗಳು, ವಿವಿಧ ಜವಾಬ್ದಾರಿ ಹೊಂದಿರುವವರ ಸಮ್ಮುಖದಲ್ಲಿಯೇ ಪೂರ್ಣಗೊಳಿಸಲಾಗುತ್ತದೆ. ಚುನಾವಣೆ ಮುಗಿದ ಮೇಲೂ ಅಷ್ಟೇ, ಸೇನಾ ಭದ್ರತೆಯಲ್ಲಿ ಮತಯಂತ್ರಗಳನ್ನು ಕಾವಲಿರಿಸಿ, ಆಯ್ಕೆ ಪ್ರಕ್ರಿಯೆಗಳನ್ನು ಆರಂಭಿಸಿ, ನೇರ ಅಂಕಿ-ಸಂಖ್ಯೆಗಳನ್ನು ಘೋಷಿಸುತ್ತ ಬರಲಾಗುತ್ತದೆ. ಇದರಲ್ಲಿ ಯಾವ ಹಂತದಲ್ಲೂ ಅಕ್ರಮವೆಸಗುವುದು ಸಾಧ್ಯವೇ ಇಲ್ಲ ಎಂದು ದೃಢವಾಗಿಯೇ ಹೇಳುತ್ತದೆ.
ಇನ್ನು, ಇವಿಎಮ್ಗಳ ಮೇಲೆ ಅನುಮಾನಿಸುವವರ ಕುರಿತಂತೆ ಚುನಾವಣಾ ಆಯೋಗವು ಬಹಿರಂಗವಾಗಿ ಮತ್ತು ಯಾವುದೇ
ವೇದಿಕೆಯಲ್ಲಿ ಈ ಯಂತ್ರಗಳ ದೋಷಗಳನ್ನು ಪತ್ತೆಹಚ್ಚಿ ತನ್ನ ಗಮನಕ್ಕೆ ತರಲು ದೇಶಾದ್ಯಂತ ಮನವಿಯನ್ನೂ ಮಾಡಿತ್ತು. ಆ
ಸಂದರ್ಭದಲ್ಲಿ ವಿವಿಧ ಪಕ್ಷಗಳು, ಸಂಸ್ಥೆಗಳು ಇದನ್ನು ಪರೀಕ್ಷೆಗೊಳಪಡಿಸಿ ನಮಗೆ ಯಾವುದೇ ಸಂದೇಹವಿಲ್ಲ ಎಂದೂ ಆಯೋಗಕ್ಕೆ ತಿಳಿಸಿದ್ದವು ಕೂಡ. ಅಂದಿನ ಇದರ ಮಾಹಿತಿಯನ್ನು ಆಯೋಗವು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದೆ.
ಪ್ರಸ್ತುತ ವಿರೋಧ ಪಕ್ಷಗಳು, ರಾಜಕೀಯ ನಾಯಕರುಗಳು ನಮಗೆ ಈ ಯಂತ್ರಗಳು ಬೇಡ. ಹಿಂದಿನಂತೆ ಮತಪತ್ರಗಳನ್ನು ಮರು ಜಾರಿಗೆ ತರಬೇಕು. ನಮಗೆ ಮುದ್ರಿತ ಪ್ರತಿಗಳ ಮೇಲೆ ವಿಶ್ವಾಸವೆಂದು ಹೊಸ ರಾಗ ತೆಗೆದಿವೆ. ಈ ಮೂಲಕ, ದೇಶದ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನೂ ತಟ್ಟಿವೆ. ಇದೇ ಸಮಯದಲ್ಲಿ ಚುನಾವಣಾ ಆಯೋಗವು ಸಂಸದರ ಸ್ಥಾನಕ್ಕೆ ಚುನಾವಣೆಯನ್ನು ಘೋಷಿಸಿದ್ದು, ಏಪ್ರಿಲ್ ೧೯ರಿಂದ ಆರಂಭಗೊಂಡು ದೇಶಾದ್ಯಂತ ಒಟ್ಟು ೭ ಹಂತಗಳಲ್ಲಿ ಚುನಾವಣೆಯನ್ನು ನಡೆಸಲು ಯೋಜಿಸಿದೆ. ಜೂನ್ ೧ಕ್ಕೆ ಕೊನೆಯ ಹಂತದ ಚುನಾವಣೆ ಮುಗಿದು, ಜೂನ್ ೪ ರಂದು ಫಲಿತಾಂಶವನ್ನು ಅದು ಪ್ರಕಟಿಸಲಿದೆ.
ಒಟ್ಟಾರೆ, ಆಯೋಗವು ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತದಿಂದ ನಿರ್ವಹಿಸಬೇಕೆಂಬುದು ದೇಶದ ಮತದಾರರ ಆಶಯ.
ಇಷ್ಟಾಗಿಯೂ, ಈ ಸಂಸ್ಥೆಯ ಮೇಲೆ ಹತ್ತು-ಹಲವು ಸವಾಲುಗಳಿವೆ. ಹಣದ ಪ್ರಭಾವದ ಅಡಿಯಲ್ಲಿ ಹೆಚ್ಚಿದ ಹಿಂಸಾಚಾರ ಮತ್ತು ಚುನಾವಣಾ ದುಷ್ಕೃತ್ಯವೆಸಗುವವರನ್ನು ಚುನಾವಣಾ ಆಯೋಗ ಬಂಧಿಸಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಪಕ್ಷಗಳನ್ನು ನಿಯಂತ್ರಿಸಲು ಆಯೋಗವು ಸಮರ್ಪಕವಾಗಿ ಸಜ್ಜಾಗಿಲ್ಲ. ಪಕ್ಷದ ಆಂತರಿಕ ಮತ್ತು ಹಣಕಾಸಿನ ನಿಯಂತ್ರಣ ಮಾಡುವಲ್ಲಿ ಯಾವುದೇ ಅಧಿಕಾರ ಹೊಂದಿಲ್ಲ.
ಇವಿಎಂಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ, ಹ್ಯಾಕ್ ಆಗುತ್ತಿವೆ ಮತ್ತು ಮತಗಳನ್ನು ನೋಂದಾಯಿಸಿಲ್ಲ ಎಂಬ
ಆರೋಪಗಳು ಆಯೋಗದ ಮೇಲಿನ ಜನಸಾಮಾನ್ಯರ ನಂಬಿಕೆಯನ್ನು ಹುಸಿಗೊಳಿಸುತ್ತವೆ. ಇವುಗಳನ್ನು ಅತ್ಯಂತ ಸ್ಪಷ್ಟ ರೀತಿಯಲ್ಲಿ ತೊಡೆದುಹಾಕುವ ಮೂಲಕ, ರಾಜಕೀಯ ಹೇಳಿಕೆಗಳು ಸಂಸ್ಥೆಯ ಮೇಲೆ ಬರದಂತೆ ನೋಡಿಕೊಳ್ಳಬೇಕಾಗಿರುವುದು ಇಂದು ಅತ್ಯಂತ ಅವಶ್ಯಕವಾಗಿದೆ.
ಹೆರಾಲ್ಡ್ ಲಾಸ್ಕಿ ಹೇಳುವಂತೆ, ‘ಆಡಳಿತವು ಕಟ್ಟಕಡೆಯ ವ್ಯಕ್ತಿಯು ಪರಿಪೂರ್ಣತೆ ಹೊಂದುವ ವಾತಾವರಣ ಕಲ್ಪಿಸಬೇಕು. ಹಕ್ಕುಗಳ ಇರುವಿಕೆಯಿಂದ ಮಾತ್ರವೇ ವ್ಯಕ್ತಿಯ ವ್ಯಕ್ತಿತ್ವವು ಪರಿಪೂರ್ಣವಾಗುತ್ತದೆ’. ಇಂಥ ಒಂದು ಪವಿತ್ರ ಹಕ್ಕನ್ನು ನಮಗೆ ನಮ್ಮ ಸಂವಿಧಾನ ಕೊಟ್ಟಿದೆ. ದೇಶದ ಜವಾಬ್ದಾರಿಯುತ ನಾಗರಿಕರಾಗಿ ನಾವು ನಮ್ಮ ಕರ್ತವ್ಯವನ್ನು ತಪ್ಪದೇ ನೆರವೇರಿಸೋಣ. ಪ್ರಜಾಪ್ರಭುತ್ವ ಉತ್ಸವದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ ತಪ್ಪದೇ ಮತ ಚಲಾಯಿಸೋಣ.