ಸ್ಮರಣೆ
ಕೆ.ವಿ.ವಾಸು
ಕನ್ನಡದ ಕುಳ್ಳ ಎಂದೇ ಪ್ರಖ್ಯಾತರಾಗಿದ್ದ ಹಿರಿಯ ಚಿತ್ರನಟ ನಿರ್ಮಾಪಕ ಹಾಗೂ ನಿರ್ದೇಶಕ ಶ್ರೀ ಬಿ.ಎಸ್.ದ್ವಾರಕೀಶ್ ತಮ್ಮ ೮೧ ನೇ ವಯಸ್ಸಿನಲ್ಲಿ ನಿಧನ ಹೊಂದಿರುವುದು ಕನ್ನಡ ಚಿತ್ರರಂಗಕ್ಕೆ ಉಂಟಾದ ತೀವ್ರ ನಷ್ಟವಾಗಿದೆ. ತಮ್ಮ ಸೋದರ ಮಾವ ಚಿತ್ರಬ್ರಹ್ಮ ದಿವಂಗತ ಹುಣಸೂರು ಕೃಷ್ಣಮೂರ್ತಿಯವರ ನಿರ್ದೇಶನದಲ್ಲಿ ತೆರೆಕಂಡ ವೀರ ಸಂಕಲ್ಪ (೧೯೬೪) ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ದ್ವಾರಕೀಶ್, ಓರ್ವ ಹಾಸ್ಯ ನಟನಾಗಿ, ಅಂದಿನ ಪ್ರಖ್ಯಾತ ಹಾಸ್ಯ ನಟರಾದ ನರಸಿಂಹ ರಾಜು, ಬಾಲಕೃಷ್ಣ, ರತ್ನಾಕರ್, ಬೆಂಗಳೂರು ನಾಗೇಶ್, ಎಸ್.ಶಿವರಾಂ ಮುಂತಾದವರ ಜೊತೆಜೊತೆಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದರು.
ಅವರು ನಟಿಸಿರುವ ಚಿತ್ರಗಳ ಸಂಖ್ಯೆ ೩೦೦ ಕ್ಕೂ ಹೆಚ್ಚಿದೆ. ವೀರ ಸಂಕಲ್ಪ ಚಿತ್ರದ ನಂತರ ದ್ವಾರಕೀಶ್ ರವರಿಗೆ ಬಹುದೊಡ್ಡ
ಹೆಸರು ತಂದುಕೊಟ್ಟ ಚಿತ್ರ ಸತ್ಯ ಹರಿಶ್ಚಂದ್ರ. ಈ ಚಿತ್ರದಲ್ಲಿ ಕಾಲ ಕೌಶಿಕನ ನಾಲ್ವರು ಶಿಷ್ಯರ ಪೈಕಿ ಓರ್ವ ಶಿಷ್ಯನಾಗಿ ನಟಿಸಿದ್ದ ದ್ವಾರಕೀಶ್, ತಮ್ಮ ಅತ್ಯುತ್ತಮ ಹಾಸ್ಯ ನಟನೆಯಿಂದ ಮತ್ತು ಹಾವ ಭಾವಗಳಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿ ದ್ದರು.
ರವಿ ನಿರ್ದೇಶನದ ಲಗ್ನ ಪತ್ರಿಕೆ ಚಿತ್ರದಲ್ಲಿ ಕೂಡ ಅವರು ನರಸಿಂಹ ರಾಜು ರವರಿಗೆ ಸರಿಸಮನಾಗಿ ಅಭಿನಯಿಸಿದ್ದರು. ಕೇವಲ ಹಾಸ್ಯನಟನಾಗಿ ಉಳಿಯಲು ಇಷ್ಟಪಡದ ದ್ವಾರಕೀಶ್, ಅದೇ ಹೃದಯ ಅದೇ ಹೃದಯ ಅದೇ ಮಮತೆ ಎಂಬ ಚಿತ್ರವನ್ನು ನಿರ್ಮಿಸಿದರು. ಮುಂದೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ದ್ವಾರಕೀಶ್ ಚಿತ್ರ ಲಾಂಛನದಲ್ಲಿ ೫೦ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ ದ್ವಾರಕೀಶ್, ಡಾ.ರಾಜಕುಮಾರ್ ನಾಯಕತ್ವದ ಮೇಯರ್ ಮುತ್ತಣ್ಣ (೧೯೬೯) ಎಂಬ ಚಿತ್ರವನ್ನು ೧೯೬೯ ರಲ್ಲಿ ನಿರ್ಮಿಸಿದರು.
ಈ ಮದ್ಯೆ ತಾವೇ ನಾಯಕನಾಗಿ ಕುಳ್ಳ ಏಜೆಂಟ್ ೦೦೦, ಕೌಬಾಯ್ ಕುಳ್ಳ ಮುಂತಾದ ಚಿತ್ರಗಳನ್ನು ನಿರ್ಮಿಸಿದರು. ನಂತರ ತಮ್ಮ ಭಾವ ಮೈದುನ ಹೆಚ್ ಆರ್.ಭಾರ್ಗವ ನಿರ್ದೇಶನದಲ್ಲಿ ಭಾಗ್ಯವಂತರು ಎಂಬ ಚಿತ್ರವನ್ನು ೧೯೭೬ ರಲ್ಲಿ ನಿರ್ಮಿಸಿದರು. ಈ ಎರಡು ಚಿತ್ರಗಳು ಬಾP ಆಫಿಸಿನಲ್ಲಿ ಯಶಸ್ವಿಯಾಯಿತು. ನಂತರ, ವಿಷ್ಣುವರ್ಧನ್ ನಾಯಕತ್ವದಲ್ಲಿ ಗುರುಶಿಷ್ಯರು ಸಿಂಗಾಪುರ್ ನಲ್ಲಿ ರಾಜಾಕುಳ್ಳ, ಮನೆ ಮನೆ ರಾಮಾಯಣ ಸೇರಿದಂತೆ ಹಲವಾರು ಯಶಸ್ಬಿ ಚಿತ್ರಗಳನ್ನು ನಿರ್ಮಿಸಿದ ದ್ವಾರಕೀಶ್.
ಓರ್ವ ಪ್ರಯೋಗ ಶೀಲ ನಿರ್ಮಾಪಕರಾಗಿ ಕನ್ನಡ ಚಿತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸದಾ ಹೊಸದನ್ನು ಅನ್ವೇಷಿಸುತ್ತಿದ್ದ ದ್ವಾರಕೀಶ್ ಕಣ್ಣಿಗೆ ಅಂದಿನ ಆಂಗ್ರಿ ಯಂಗಮನ್ ಶಂಕರನಾಗ್ ಬಿದ್ದಾಗ, ಅವರನ್ನೇ ನಾಯಕನ್ನಾಗಿಸಿ, ‘ನ್ಯಾಯ ಎಲ್ಲಿದೆ’ ಹಾಗೂ ‘ಪ್ರೀತಿ ಮಾಡು ತಮಾಷೆ ನೋಡು’ ಎಂಬ ಹಿಟ್ ಚಿತ್ರಗಳನ್ನು ನಿರ್ಮಿಸಿದರು.೧೯೮೫ ರಲ್ಲಿ ವಿಷ್ಣುವರ್ಧನ್ ನಾಯಕತ್ವದ ‘ನೀ ಬರೆದ ಕಾದಂಬರಿ’ ಎಂಬ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕರಾಗಿಯೂ ಬಡ್ತಿ ಹೊಂದಿದ ದ್ವಾರಕೀಶ್, ವೈವಿದ್ಯಮಯ ಪಾತ್ರಗಳ ಮೂಲಕ ತಮ್ಮ ಕಲಾಕೌಶಲ್ಯತೆ ಹಾಗೂ ಸೃಜನಶೀಲತೆಯನ್ನು ಅನಾವರಣಗೊಳಿಸುತ್ತಿದ್ದರು.
ವಿಷ್ಣುವರ್ಧನ್ ಜೊತೆ ಕೆಲವು ವರ್ಷಗಳ ಕಾಲ ಮುನಿಸಿಕೊಂಡಿದ್ದ ದ್ವಾರಕೀಶ್, ಆಪ್ತ ಮಿತ್ರ ಚಿತ್ರದ ಮೂಲಕ ಮತ್ತೇ ಒಂದಾ ದರು. ಆನಂತರವೂ ಬೇರಾವೋ ಕಾರಣಕ್ಕೆ ವಿಷ್ಣು ಜೊತೆ ಮತ್ತೇ ಠೂ ಬಿಟ್ಟಿದ್ದ ದ್ವಾರ್ಕಿ, ಮತ್ತೆ ಒಂದಾಗಲೇ ಇಲ್ಲ. ಆದರೆ ವಿಷ್ಣು ನಿಧನ ಹೊಂದಿದಾ ತೀವ್ರ ನೊಂದುಕೊಂಡ ದ್ವಾರ್ಕಿ, ವಿಷ್ಣು ಮೃತ ದೇಹಕ್ಕೆ ಹೆಗಲು ನೀಡಿ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.
‘ಡ್ಯಾ ರಾಜ ಡ್ಯಾ’ ಚಿತ್ರದ ಮೂಲಕ ಹಿರಿಯ ನಟಿ ದಿವಂಗತ ಲೀಲಾವತಿಯವರ ಮಗ ವಿನೋದ್ ರಾಜ್‌ರವರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ. ಇದೇ ರೀತಿ ಹಲವಾರು ಹೊಸ ಪ್ರತಿಭೆಗಳಿಗೆ ತಮ್ಮ ಚಿತ್ರಗಳಲ್ಲಿ ಅವಕಾಶ ನೀಡಿದ್ದಾರೆ. ಸಿಂಗಪುರ್‌ನಲ್ಲಿವ ರಾಜಕುಳ್ಳ (೧೯೭೮) ಎಂಬ ಅವರ ಚಿತ್ರವು ವಿದೇಶದಲ್ಲಿ ಚಿತ್ರಣಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿ ಚರಣ್ ರಾಜ್ ನಾಯಕತ್ವದಲ್ಲಿ ಆಫ್ರಿಕಾದಲ್ಲಿ ಶೀಲ ಎಂಬ ಮತ್ತೊಂದು ಚಿತ್ರ ನಿರ್ಮಿಸಿದ ದ್ವಾರಕೀಶ್, ಚಿತ್ರರಂಗದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ.
ತಮ್ಮ ಹಲವಾರು ಸ್ವಂತ ಮನೆಗಳನ್ನು ಮಾರಿ ಚಿತ್ರ ಚಿತ್ರ ನಿರ್ಮಾಣಕ್ಕಾಗಿ ಸರ್ವಸ್ವವನ್ನು ಕಳೆದುಕೊಂಡ ದ್ವಾರಕೀಶ್ ಛಲವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಅಂತಿಮ ದಿನಗಳಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಿದ್ದ ದ್ವಾರಕೀಶ್, ಅಂತಹ ವಿಷಮ ಪರಿಸ್ಥಿತಿಯಲ್ಲಿ ಕೂಡ ಯಾರನ್ನೂ ಸಹಾಯ ಬೇಡಲಿಲ್ಲ. ಅವರ ಇಬ್ಬರು ಗಂಡು ಮಕ್ಕಳು ಕೆಲವು ಚಿತ್ರಗಳನ್ನು ನಿರ್ಮಿಸಿ ಕೈಸುಟ್ಟುಕೊಂಡರೇ ವಿನಹ ತಂದೆಗೆ ಊರುಗೋಲಾಗಲಿಲ್ಲ. ದ್ವಾರಕೀಶ್, ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠವಾದ ಸ್ಥಾನವನ್ನು ಹೊಂದಿದ್ದರು. ರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತರಾಗಿದ್ದ ದ್ವಾರಕೀಶ್, ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿ ದ್ದರು. ಅವರ ಹಿರಿಯ ಹೆಂಡತಿ ಅಂಬುಜಾ ಕೆಲ ವರ್ಷಗಳ ಹಿಂದೆ ನಿಧನ ಹೊಂದಿದ್ದರು.
ಅಂಬುಜಾ ಬಗ್ಗೆ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದ ದ್ವಾರ್ಕಿ, ಮತ್ತೊಂದು ಹೆಣ್ಣಿನ ಮೋಹ ಪಾಶಕ್ಕೆ ಏಕೆ ಸಿಲುಕಿದರು ಎಂಬುದು ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಕಳೆದ ೪-೫ ವರ್ಷಗಳಿಂದ ಚಿತ್ರರಂಗದಿಂದ ದೂರವಾಗಿದ್ದರೂ ಸಹ, ದ್ವಾರ್ಕಿ ತಮ್ಮ ಚಲನಶಕ್ತಿಯನ್ನು ಕಳೆದುಕೊಳ್ಳದೇ, ಹಲವಾರು ಯೂ ಟ್ಯೂಬ್ ಚಾನಲ್‌ಗಳಲ್ಲಿ ತಮ್ಮ ಅನುಭವಗಳನ್ನು ಹಂಚಿ ಕೊಳ್ಳುತ್ತಿದ್ದರು. ಬದುಕಿನ ಮೈನಸ್ ಪಾಯಿಂಟ್ ಅನ್ನು ಪ್ಲಸ್ ಪಾಯಿಂಟ್ ಮಾಡಿಕೊಂಡ ನಟ ಕೂಡ ದ್ವಾರಕೀಶ್ ಆಗಿದ್ದಾರೆ.
ಅವರ ನಿಧನ ದೊಂದಿಗೆ ಕನ್ನಡ ಚಿತ್ರರಂಗದ ಒಂದು ಶಕೆ ಮುಗಿದು ಹೋಗಿದೆ. ಬಾಲಕೃಷ್ಣ, ನರಸಿಂಹ ರಾಜು, ರತ್ನಾಕರ್, ಶಿವರಾಂ ಮುಂತಾದವರನ್ನು ಚಿತ್ರಪಟಗಳಲ್ಲಿ ನೋಡುವ ಹಾಗೆ ದ್ವಾರಕೀಶ್ ರವರನ್ನು ಸಹ ಇನ್ನು ಮುಂದೆ ಚಿತ್ರಪಟದಲ್ಲಿ. ನೋಡಬೇಕಿದೆ. ಅದಕ್ಕಾಗಿ ತುಂಬಾ ಬೇಸರವಾಗಿದೆ. ಕನ್ನಡದ ಕುಳ್ಳನಿಗೆ ಕೆಚ್ಚೆದೆಯ ಕುಳ್ಳನಿಗೆ, ಅಪ್ರತಿಮ ಸಾಹಸಿ ಕುಳ್ಳನಿಗೆ ಅಂತಿಮ ನಮನಗಳು.
(ಲೇಖಕರು: ವಕೀಲರು)