ತುಮಕೂರು: ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ಕೊಲೆಯಲ್ಲಿ ಲವ್ ಜಿಹಾದ್ ಕಂಡುಬಂದಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳ ಲಾಗಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿನಿ ಹತ್ಯೆ ಪ್ರಕರಣಕ್ಕೂ, ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದರು.
ಇಬ್ಬರ ನಡುವೆ ಲವ್ ಅಫೇರ್ ಇತ್ತೆಂಬ ಮಾಹಿತಿ ತಿಳಿದು ಬಂದಿದೆ. ಇಬ್ಬರು ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದು, ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಾ ಇದ್ದರು. ನಂತರ ಇದ್ದಕ್ಕಿದ್ದಂತೆ ಆ ಹೆಣ್ಣು ಮಗಳು ದೂರ ಆಗೋದಕ್ಕೆ ಪ್ರಯತ್ನಿಸಿದಾಗ ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಕುಲಂಕಷ ತನಿಖೆ ನಡೆಸಿ, ಕೊಲೆಗಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಗಳನ್ನು ಫಾಲೋ ಮಾಡ್ತಾ ಇದ್ದ ತಾಯಿ ಮೇಲೂ ಹಲ್ಲೆ ಮಾಡಿದ್ದಾರೆ. ಅವರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ ಘಟನೆ ಲವ್ ಜಿಹಾದ್ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ, ಅದು ಇಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿದೆ. ಯಾವಾಗ ಆ ಹೆಣ್ಣು ಮಗಳು ದೂರ ಹೋಗಲು ಶುರು ಮಾಡಿದ್ದಳೋ ಆ ಹುಡುಗ ಹೋಗಿ ಚುಚ್ಚಿದ್ದಾನೆ. ಅದೆಲ್ಲಿ ಲವ್ ಜಿಹಾದ್? ನನಗೆ ಕಾಣಿಸಿಲ್ಲ. ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ತಾಳೋ ಏನೋ ಅಂದುಕೊಂಡು, ಹೀಗೆ ಆಗಿದೆ. ನನಗೆ ಇದರ ಪೂರ್ತಿ ಮಾಹಿತಿ ಗೊತ್ತಿಲ್ಲ ಎಂದು ಹೇಳಿದರು.