ಮತಪರ್ವ
ಲಕ್ಷ್ಮೀ ಪತಯ್ಯ
ಒಡಿಶಾದ ಮಲ್ಕಾನಗರಿ ಜಿಲ್ಲೆಯ ಹಳ್ಳಿಯೊಂದಕ್ಕೆ ಸುಮಾರು ೯ ಮೈಲು ಕಾಡಿನಲ್ಲಿ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಯಿದ್ದು, ಇಲ್ಲಿಯೂ ಮತಗಟ್ಟೆಯ ವ್ಯವಸ್ಥೆ ಮಾಡಲಾಗಿದೆ. ಮತದಾನದ ಅವಕಾಶವು ಜನರಿಂದ ಕೈತಪ್ಪಿಹೋಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಹೀಗೆ ವಿಶೇಷ ಕಾಳಜಿ ವಹಿಸಿದೆ ಎಂಬುದನ್ನು ಪ್ರತಿಯೊಬ್ಬ ಮತದಾರರೂ ಅರಿಯಬೇಕಿದೆ.
ಭಾರತವಿಂದು ವಿಶ್ವದ ಅತಿದೊಡ್ಡ ಮತ್ತು ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದು ಪ್ರಜೆಗಳೇ ಪ್ರಭುಗಳು ಆಗಿರುವ ಕಾರಣ ದಿಂದ. ಇದು ಸಾಧ್ಯವಾಗಿರುವುದು ಮತದಾನದಿಂದ. ಜನತಂತ್ರದ ಪ್ರಮುಖ ಅಂಗ ಭಾಗವಾಗಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ
ಪಾಲ್ಗೊಂಡು ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯನ ಹಕ್ಕು ಮತ್ತು ಕರ್ತವ್ಯವಾಗಿದೆ.
ಬಡತನ ನಿರ್ಮೂಲನೆ, ಉದ್ಯೋಗಸೃಷ್ಟಿ, ಉತ್ತಮ ಸಮಾಜದ ನಿರ್ಮಾಣ, ಸಮಾನತೆ ಇವು ಭಾರತದಂಥ ದೇಶದಲ್ಲಿ ಕೈಗೂಡುವಂತಾಗುವಲ್ಲಿ ಮತ ದಾರರ ಮಹತ್ತರ ಯೋಗ ದಾನವಿರುತ್ತದೆ. ಹೀಗಾಗಿ ದೇಶದ ಅಭ್ಯುದಯಕ್ಕೆ ಪ್ರತಿಯೊಬ್ಬ ಅರ್ಹ ಮತದಾರನೂ ಮತ ಚಲಾಯಿಸಬೇಕಾದ್ದು ಅಗತ್ಯ ವಾಗಿದೆ. ದೇಶದ ೫೪೩ ಲೋಕಸಭಾ ಕ್ಷೇತ್ರಗಳಿಗೆ ಈ ಸಲ ೭ ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದಲ್ಲಿ ೧೪ ಕ್ಷೇತ್ರಗಳಿಗೆ ಏಪ್ರಿಲ್ ೨೬ರಂದು ಹಾಗೂ ಎರಡನೇ ಹಂತದಲ್ಲಿ ೧೪ ಕ್ಷೇತ್ರಗಳಿಗೆ ಮೇ ೭ರಂದು ಚುನಾವಣೆ ನಡೆಯಲಿದೆ.
ಜೂನ್ ೪ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಪ್ರಸ್ತುತ ೫,೪೨,೫೪,೫೦೦ ಮತದಾರರಿದ್ದು, ಇದರಲ್ಲಿ ೨,೭೧,೬೬,೨೦೦ ಪುರುಷರು ಮತ್ತು ೨,೭೦,೮೮,೩೦೦ ಮಹಿಳೆಯರಿದ್ದಾರೆ. ಕೆಲವೇ ಸಂಖ್ಯೆಯಲ್ಲಿ ತೃತೀಯ ಲಿಂಗಿಗಳೂ ಇದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಮಹಿಳಾ ಮತದಾರರು ಪಾಲ್ಗೊಳ್ಳುವ ಪ್ರಮಾಣವು ಕ್ರಮೇಣ ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆ (೧೯೯೯ರಲ್ಲಿ ದಾಖಲಾದ ಮಹಿಳೆಯರ ಮತದಾನ ಪ್ರಮಾಣ ಶೇಕಡ ೫೧ರಷ್ಟಿದ್ದರೆ, ೨೦೦೪ರಲ್ಲಿ ಶೇ.೫೩, ೨೦೦೯ರಲ್ಲಿ ಶೇ.೫೫, ೨೦೧೪ರಲ್ಲಿ ಶೇ.೬೫ ಮತ್ತು ೨೦೧೯ರಲ್ಲಿ ಶೇ.೬೭ರಷ್ಟು ಮತದಾನವಾಗಿದೆ). ಈ ಬಾರಿ, ಮೊದಲ
ಸಲದ ಮಹಿಳಾ ಮತದಾರರ ಸಂಖ್ಯೆ ೮೫.೩ ಲಕ್ಷದಷ್ಟಿದೆ.
ಬೆಂಗಳೂರು ಉತ್ತರ ಕ್ಷೇತ್ರವು ರಾಜ್ಯದ ಅತಿಹೆಚ್ಚು ಮತದಾರರು ಇರುವ (೩೧,೭೪,೦೯೮) ಲೋಕಸಭಾ ಕ್ಷೇತ್ರವಾಗಿದ್ದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರು (೧೫,೭೨,೯೫೮) ಇದ್ದಾರೆ. ರಾಜ್ಯದಲ್ಲಿ ಒಟ್ಟು ೫೮,೮೩೪ ಮತಗಟ್ಟೆಗಳಿದ್ದು, ಆ ಪೈಕಿ ೨೧,೫೯೫ ನಗರ ಪ್ರದೇಶ ದಲ್ಲಿ, ೩೭,೨೩೯ ಗ್ರಾಮೀಣ ಪ್ರದೇಶದಲ್ಲಿ ಇವೆ. ಅತಿಹೆಚ್ಚು ಮತಗಟ್ಟೆಗಳು ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ (೨೯೧೧) ಇದ್ದರೆ, ಉಡುಪಿ-ಚಿಕ್ಕಮಗ ಳೂರು ಕ್ಷೇತ್ರದಲ್ಲಿ ಒಟ್ಟು ೧,೮೪೨ ಮತಗಟ್ಟೆಗಳಿವೆ. ರಾಜ್ಯದಲ್ಲಿ ಒಟ್ಟು ೩ ಲಕ್ಷ ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸಲಿದ್ದಾರೆ.
ಹೇಳಿಕೇಳಿ ಇದು ತಂತ್ರಜ್ಞಾನ ಯುಗ. ಮತದಾನದ ಪ್ರಕ್ರಿಯೆಯು ಸುಗಮವಾಗಿ ನೆರವೇರಲೆಂದು ಚುನಾವಣಾ ಆಯೋಗವು ಹಲವು ಆಪ್‌ಗಳನ್ನು ಅಭಿವೃದ್ಧಿಪಡಿಸಿದ್ದು ಅವು ಹೀಗಿವೆ: ೧)೧೯೫೦ ಸಹಾಯವಾಣಿ: ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಈ ಉಚಿತ ಸಹಾಯವಾಣಿ ಒದಗಿಸುತ್ತದೆ.
೨) ವೋಟರ್ ಹೆಲ್ಪ್‌ಲೈನ್ ಆಪ್: ಹೊಸ ಮತದಾರರು ನೋಂದಣಿ, ತಿದ್ದುಪಡಿ ಮಾಡುವುದಕ್ಕೆ ಇದನ್ನು ಬಳಸಬಹುದು.
೩) ಸಕ್ಷಮ ಆಪ್: ವಿಶೇಷ ಚೇತನರು ಮತ ಚಲಾಯಿಸಲು ನೋಂದಣಿ ಮಾಡಿಕೊಳ್ಳುವುದಕ್ಕೆ ಇದು ಸಹಕಾರಿಯಾಗಿದೆ. ಹಿರಿಯ ನಾಗರಿಕರಿಗೆ ಇದು ಅಗತ್ಯದ ಮಾಹಿತಿಯನ್ನು ನೀಡುತ್ತದೆ.
೪) ವಿ.ಎಚ್.ಎ.: ಪ್ರತಿಯೊಬ್ಬ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಲು ಇದು ಸಹಕಾರಿಯಾಗಿದೆ.
ಜಗತ್ತಿನ ೩೬ ಪ್ರಜಾಪ್ರಭುತ್ವ ದೇಶಗಳಲ್ಲಿ ಅತಿಹೆಚ್ಚು ಮತದಾರರು ಇರುವ ದೇಶ ಭಾರತ. ಈ ಹಿನ್ನೆಲೆಯಲ್ಲಿ ನಮ್ಮ ಮತದಾರರ ಮೇಲೆ ಇಡೀ ವಿಶ್ವದ ಗಮನವಿದೆ. ದೇಶದ ಹಿಮಾಚಲ ಪ್ರದೇಶ ರಾಜ್ಯದ ಗ್ರಾಮವೊಂದು ೧೫,೨೫೬ ಅಡಿ ಎತ್ತರದಲ್ಲಿದ್ದು ಈ ಸ್ಥಳದಲ್ಲಿಯೂ ಮತಗಟ್ಟೆ ಸ್ಥಾಪಿತವಾಗಬೇಕಿದೆ. ಮೊಸಳೆ ಕಾಟವಿರುವ ಅಂಡಮಾನ್ -ನಿಕೋಬಾರ್ ದ್ವೀಪದಲ್ಲಿನ ಜನರು ಮತದಾನದಿಂದ ವಂಚಿತರಾಗಬಾರದೆಂದು ಅಲ್ಲಿಯೂ ಮತಗಟ್ಟೆ ಸ್ಥಾಪಿಸ ಲಾಗಿದೆ. ಒಡಿಶಾದ ಮಲ್ಕಾನಗರಿ ಜಿಲ್ಲೆಯ ಹಳ್ಳಿಯೊಂದಕ್ಕೆ ಸುಮಾರು ೯ ಮೈಲು ಕಾಡಿನಲ್ಲಿ ನಡೆದುಕೊಂಡು ಹೋಗ ಬೇಕಾದ ಅನಿವಾರ್ಯತೆಯಿದ್ದು, ಇಲ್ಲಿಯೂ ಮತಗಟ್ಟೆಯ ವ್ಯವಸ್ಥೆ ಮಾಡಲಾಗಿದೆ.
ಮತದಾನದ ಅವಕಾಶವು ಜನರಿಂದ ಕೈತಪ್ಪಿಹೋಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಹೀಗೆ ವಿಶೇಷ ಕಾಳಜಿ ವಹಿಸಿದೆ ಎಂಬುದನ್ನು
ಪ್ರತಿಯೊಬ್ಬ ಮತದಾರರೂ ಅರಿಯಬೇಕಿದೆ. ಒಂದೊಂದು ಮತಕ್ಕೂ ಮಹತ್ವವಿದೆ ಎಂಬುದನ್ನು ಮತದಾರರು ಇತಿಹಾಸದ ಪುಟಗಳಿಂದ ತಿಳಿಯಬೇಕಾ ಗಿದೆ. ೨೦೦೮ರಲ್ಲಿ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಸಿ.ವಿ.ಜೋಶಿ ಎಂಬ ಅಭ್ಯರ್ಥಿ ಒಂದು ಮತದಿಂದ ಸೋತರು. ಆ ಚುನಾವಣೆಯಲ್ಲಿ ಅವರ ತಾಯಿಯೇ ಮತದಾನ ಮಾಡಿರಲಿಲ್ಲ. ಅದೇ ರೀತಿಯಲ್ಲಿ, ೨೦೦೪ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಆರ್.ಧ್ರುವನಾರಾ ಯಣ್ ಅವರು, ಎ.ಆರ್. ಕೃಷ್ಣಮೂರ್ತಿ ಅವರ ವಿರುದ್ಧ ಕೇವಲ ಒಂದು ಮತದಿಂದ ಗೆದ್ದಿದ್ದರು.
ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ಎಂ.ಭಾರತ್ ದಾಸ್ ಎಂಬ ವ್ಯಕ್ತಿ ನೆಲೆಸಿದ್ದಾರೆ. ಇವರ ಒಂದು ವೋಟಿಗಾಗಿಯೇ ಮತಯಂತ್ರದೊಂದಿಗೆ ಐವರು ಅಧಿಕಾರಿಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೆ ನಿಯೋಜಿಸಲಾಗುತ್ತಿದೆ. ಒಂದೊಂದು ಮತವೂ ಎಷ್ಟೊಂದು ಮುಖ್ಯ ಮತ್ತು ಮತದಾನವೆಂಬುದು ಅದೆಷ್ಟು ಹೊಣೆಗಾರಿಕೆಯ ಕಾರ್ಯ ಎಂಬುದು ಇದರಿಂದ ಅರ್ಥವಾಗುತ್ತದೆ. ಆದರೆ, ಮತದಾನದಂದು ನೀಡುವ ರಜೆಯನ್ನು ಗ್ರಾಮೀಣ ಭಾಗದ
ಜನರು ಅದೇ ಉದ್ದೇಶಕ್ಕೆ ಬಳಸಿದರೆ, ನಗರ ಪ್ರದೇಶದ ಸುಶಿಕ್ಷಿತರು ಎನಿಸಿಕೊಂಡ ಕೆಲವರು ಆ ರಜೆಯನ್ನು ಪ್ರವಾಸ/ ವಿಹಾರಕ್ಕೆಂದು ಬಳಸುತ್ತಾರೆ. ಆದ್ದರಿಂದ, ಜವಾಬ್ದಾರಿ ಮತ್ತು ಬದ್ಧತೆಯೊಂದಿಗೆ ಮತದಾನ ಮಾಡುವುದಾಗಿ ಪ್ರತಿಯೊಬ್ಬ ನಾಗರಿಕರೂ ಸಂಕಲ್ಪಿಸಬೇಕು.
ಈ ಹಿಂದಿನ ಚುನಾವಣೆಗಳಲ್ಲಿದ್ದಂತೆ, ಮತದಾನಕ್ಕೆ ಅವಶ್ಯವಿರುವ ಗುರುತಿನ ಚೀಟಿಯ ದಾಖಲೆಯೊಂದಿಗೆ ಮತಗಟ್ಟೆಗೆ ತೆರಳಿ ಅಮೂಲ್ಯವಾದ ಮತವನ್ನು ಚಲಾಯಿಸಬೇಕು. ಮತವು ಮಾರಾಟದ ವಸ್ತುವಲ್ಲ, ಅದು ಪವಿತ್ರವಾಗಿರುವಂಥದ್ದು ಎಂಬುದನ್ನು ಅರಿಯಬೇಕು. ಮತದಾನದ ಬಗ್ಗೆ ಯುವಜನರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.
ಪ್ರತಿಯೊಬ್ಬರೂ ಮತದಾನ ಮಾಡುವಂತೆ ಮನೆಯಲ್ಲಿ ಒಬ್ಬರಿಗೊಬ್ಬರು ಮನವರಿಕೆ ಮಾಡಿಕೊಳ್ಳಬೇಕು. ಹಿರಿಯ ನಾಗರಿಕರು, ವಿಶೇಷ ಚೇತನರು
ಮನೆಯಿಂದಲೇ ಮತ ಚಲಾಯಿಸುವುದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತೃತೀಯ ಲಿಂಗಿಗಳು ತಾವು ಬಯಸಿ ದಂತೆ ಹೆಣ್ಣು/ ಗಂಡು ಎಂದು ನಮೂದಿಸಲು ಅವಕಾಶವಿದೆ.
ರಾಷ್ಟ್ರೀಯ ಮತದಾರರ ದಿನ ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಪ್ರತಿವರ್ಷ ಜನವರಿ ೨೫ರಂದು ಆಚರಿಸಲಾಗುತ್ತದೆ. ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೆಚ್ಚಿನ ಮತದಾರರನ್ನು ಉತ್ತೇಜಿಸಲು ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಭಾರತದಲ್ಲಿ ವಸ್ತುನಿಷ್ಠವಾಗಿ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯುವಂತಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಭಾರತದ ಚುನಾವಣಾ ಆಯೋಗದ ಸಂಘಟನಾ ದಿನವನ್ನು ಗುರುತಿಸಲು ಈ ವಿಶೇಷ ದಿನವನ್ನು ೨೦೧೧ರ ಜನವರಿ ೨೫ರಂದು ಮೊದಲ ಬಾರಿಗೆ ಆಚರಿಸಲಾಯಿತು.
ಭಾರತದ ಮೊದಲ ಲೋಕಸಭಾ ಚುನಾವಣೆಯಲ್ಲಿ ೧೭ ಕೋಟಿ ಮತದಾರರಿಂದ ಶೇ.೪೨ರಷ್ಟು ಮತದಾನವಾಗಿದ್ದರೆ, ಕಳೆದ ಬಾರಿಯ ಚುನಾವಣೆಯಲ್ಲಿ ಒಟ್ಟಾರೆ ಮತದಾನ ಶೇ.೬೭ರಷ್ಟಾಗಿದೆ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ‘ಮತದಾನ’ವೇ ಬುನಾದಿ. ಆದ್ದರಿಂದ ಪ್ರತಿಯೊಬ್ಬ ಅರ್ಹ ನಾಗರಿಕರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ತನ್ಮೂಲಕ ಹೊಣೆಗಾರಿಕೆಯನ್ನು ಮೆರೆಯಬೇಕು. ಮತದಾನ ಮಾಡುವುದರಿಂದ ರಾಷ್ಟ್ರದ ಭವಿಷ್ಯವು ಉಜ್ವಲ ವಾಗುವುದಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂಬುದನ್ನು ಮರೆಯದಿರೋಣ.
ಮತದಾನದ ಬಗ್ಗೆ ಜಾಗೃತಿ
ರಾಜ್ಯದ ೫೬೬೧ ಮತಗಟ್ಟೆಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ಮತದಾನವಾಗುತ್ತಿಲ್ಲ. ಇದರಲ್ಲಿ ಬೆಂಗಳೂರು ಮತ್ತು ಮಂಗಳೂರು ನಗರ ಭಾಗದ ಮತದಾರರೇ
ಹೆಚ್ಚಿದ್ದಾರೆ ಎನ್ನುವ ಅಂಶವನ್ನು ರಾಜ್ಯ ಸ್ವೀಪ್ ಸಮಿತಿ ಬಹಿರಂಗಪಡಿಸಿದೆ. ೨೦೧೯ರ ಲೋಕಸಭೆ ಚುನಾವಣೆ ಮತ್ತು ೨೦೨೩ರ ವಿಧಾನಸಭೆ ಚುನಾ ವಣೆಯ ಲೆಕ್ಕಾಚಾರದ ಪ್ರಕಾರ, ೫ ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಕಡಿಮೆಯಾಗುತ್ತಿದ್ದು, ಇಲ್ಲಿ ಈ ಬಾರಿಯಾದರೂ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯು ಹೊಸ ಉಪಕ್ರಮಕ್ಕೆ ಮುಂದಾಗಿದೆ.
ಮತದಾನ ಕಡಿಮೆಯಾಗಿರುವ ಮತಗಟ್ಟೆಗಳಲ್ಲಿ ವೋಟರ‍್ಸ್ ಗೈಡ್ ಮತ್ತು ಮತದಾರರ ಚೀಟಿ ನೀಡುವ ವೇಳೆ ಬಿಎಲ್‌ಒಗಳ ಜತೆ ಅಧಿಕಾರಿಗಳು ತಂಡವಾಗಿ ಆ ಭಾಗದ ಪ್ರತಿ ಮನೆಗೂ ತೆರಳಿ, ಐದು ನಿಮಿಷವಾದರೂ ಮತದಾನದ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಲಿ ದ್ದಾರೆ. ಮತದಾರರಿಗೆ ಮತಗಟ್ಟೆಯ ಪರಿಚಯ ಮಾಡಿಸಲು ಏಪ್ರಿಲ್ ೨೧ರಿಂದ ಧ್ವಜಾರೋಹಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬಿಎಲ್
ಒಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮಹಿಳಾ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗವು ವಿಶೇಷವಾಗಿ ‘ಸಖಿ ಬೂತ್’ ಸ್ಥಾಪನೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆಯುವ ಈ ಚುನಾವಣಾ ಹಬ್ಬದ ರಥ ಎಳೆಯುವ ಅವಕಾಶ ದಶಕದಿಂದ ಸಿಕ್ಕರೂ, ಈ ನಿಟ್ಟಿನಲ್ಲಿ ಕೈಜೋಡಿಸಿದ ಸಾಗರೋತ್ತರ/ ಅನಿವಾಸಿ ಭಾರತೀಯರ ಪ್ರಮಾಣ ಶೇ.೧ಕ್ಕಿಂತಲೂ ಕಡಿಮೆಯಿದೆ. ಭಾರತೀಯ ಪ್ರಜಾಪ್ರತಿನಿಧಿ ಕಾಯ್ದೆಗೆ ೨೦೧೦ರಲ್ಲಿ ತಿದ್ದುಪಡಿ ಮಾಡುವ ಮೂಲಕ, ಅನಿವಾಸಿ ಭಾರತೀಯರಿಗೆ ಮತದಾರರ ಪಟ್ಟಿಯಲ್ಲಿ ಸೇರಿಕೊಂಡು ಮತ ಚಲಾಯಿಸುವ ಹಕ್ಕು ನೀಡಲಾಗಿದೆ.
ಒಟ್ಟಾರೆ ಹೇಳುವುದಾದರೆ, ಮತದಾನದ ಕುರಿತಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಗ್ರಾಮ ಪಂಚಾಯಿತಿಗಳು, ನಗರಸಭೆಗಳು ಮಾತ್ರವಲ್ಲದೆ ಸಹಕಾರಿ ಕ್ಷೇತ್ರದ ಪ್ರತಿಯೊಂದು ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. ನಾನು ಕೂಡ ಸಹಕಾರ ಇಲಾಖೆಯ ಅಽಕಾರಿಯಗಿ, ಭಾರತದ ಪ್ರಜೆಯಾಗಿ ಈ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುತ್ತೇನೆ. ತಾವು ಕೂಡ ಮತದಾನಕ್ಕಿರುವ ಮಹತ್ವದ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದರ ಜತೆಗೆ ಕಡ್ಡಾಯವಾಗಿ ಮತದಾನ ಮಾಡಬೇಕೆಂಬುದೇ ಎಲ್ಲರ
ಆಶಯವಾಗಿದೆ.
(ಲೇಖಕರು ಸಹಕಾರ ಸಂಘಗಳ ಜಂಟಿ ನಿಬಂಧಕರು
ಹಾಗೂ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಹಕಾರ
ಮಹಾಮಂಡಳ ನಿಯಮಿತ)