ಗಾಂಧಿನಗರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಸ್ಥಾನವನ್ನು ಗೆದ್ದುಕೊಂಡಿದೆ. . ಗುಜರಾತ್ನ ಸೂರತ್ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಈ ಮೂಲಕ ಗುಜರಾತ್ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಂತಾಗಿದೆ.
ಭಾನುವಾರ ಸೂರತ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ರದ್ದಾಗಿತ್ತು. ನಂತರ ಸ್ವತಂತ್ರ ಅಭ್ಯರ್ಥಿಗಳು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಹಾಗಾಗಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ದಲಾಲ್ ಅವರಿಗೆ ಶುಭ ಕೋರಿದ್ದು, ‘ಅವಿರೋಧವಾಗಿ ಆಯ್ಕೆಯಾದ ಸೂರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮುಖೇಶ್ ಭಾಯ್ ದಲಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂದು ಹೇಳಿದ್ದಾರೆ. ಇದು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ʼಐತಿಹಾಸಿಕ ವಿಜಯʼದ ಪ್ರಾರಂಭ ಎಂದು ಭೂಪೇಂದ್ರ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ನಿಲೇಶ್ ಕುಂಭಾನಿ ಅವರ ಮೂವರು ಅನುಮೋದಕರ ದಾಖಲೆಗಳಲ್ಲಿನ ಸಹಿಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಸೌರಭ್ ಪರ್ಘಿ ತಿರಸ್ಕರಿಸಿದ್ದರು.
1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 36 (2)ರ ಅಡಿಯಲ್ಲಿ ಪಾರ್ಘಿ ಅವರು ನಾಮಪತ್ರವನ್ನು ತಿರಸ್ಕರಿಸಿದ್ದಾರೆ.