ಶ್ವೇತಪತ್ರ
ನಮ್ಮ ಕನಸಿನ ಬದುಕನ್ನು ಜೀವಿಸುವುದಕ್ಕೆ ಅಂದುಕೊಂಡ ಎಲ್ಲಾ ಆಸೆಗಳು, ಬೇಕುಗಳು ಬದುಕನ್ನು ತುಂಬಲಿಕ್ಕೆ ಸಾಧ್ಯವಿಲ್ಲ. ಈ ಆಲೋಚನೆಯನ್ನು ಬದಲಾಯಿಸಿದರೆ ಲೈಫ್ ಅದ್ಭುತ, ಸಂತೋಷದಿಂದಲೂ ಕೂಡಿರುತ್ತದೆ. ನೆಮ್ಮದಿ ಯಾಗಿ ಬದುಕುವುದು ಎಂದರೆ ಸಮಸ್ಯೆಗಳೇ ಇಲ್ಲದೆ ಬದುಕುವುದಲ್ಲ. ಆ ಸಮಸ್ಯೆಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು ನಮಗೆ ನಾವೇ ಸೂರ್ತಿ ತುಂಬಿಕೊಳ್ಳುತ್ತಾ, ಪ್ರೇರೇಪಿಸಿಕೊಳ್ಳುತ್ತಾ ಬದುಕಿಬಿಡುವುದು. ಆಕಾಶಕ್ಕೆ ಕಪ್ಪು ಮೋಡಗಳು ಆವರಿಸುವುದು ಎಷ್ಟು ಸಹಜವೋ, ನಮ್ಮೆಲ್ಲರ ಬದುಕಲ್ಲೂ ಸಮಸ್ಯೆಗಳು, ಸವಾಲುಗಳು, ಕಷ್ಟಗಳು, ಸೋಲುಗಳು ಬಂದೆರಗುವುದು ಅಷ್ಟೇ ಸಹಜ. ನಂಬಿಕೆ ಎಂಬ ಗಟ್ಟಿತನದೊಂದಿಗೆ ಬೆಳ್ಳಿರೇಖೆ ಮೂಡುವುದಕ್ಕೆ ಕಾಯಲೇಬೇಕು.
‘ಪರ್ಫೆಕ್ಟ್ ಲೈಫ್’ ಎನ್ನುವುದೊಂದಿಲ್ಲ; ಯಾರಾದರೂ ಹಾಗೆಂದುಕೊಂಡಿದ್ದರೆ ಅದು ಭ್ರಮೆಯಷ್ಟೇ. ಕೆಲವೊಮ್ಮೆ ಪುಳಕ, ಕೆಲವೊಮ್ಮೆ ಹತಾಶೆ, ಕೆಲವು ಸಲ ಸಾಧಿಸುವುದು, ಕೆಲವು ಸಲ ಕಳೆದುಕೊಳ್ಳುವುದು, ಇದು ಬದುಕು. ಇದರ ನಡುವೆಯೇ ಸಂತೋಷವಾಗಿರಬೇಕು ಎಂಬುದು ನಮ್ಮ ನಿರ್ಧಾರ ವಾಗಿರಬೇಕು. ಬದುಕಿನ ಬದಲಾವಣೆಗಳಿಗೆ ಮನಸ್ಸನ್ನು ಅಳವಡಿಸಿಕೊಳ್ಳೋಣ; ಏಕೆಂದರೆ ಬದಲಾವಣೆ ಅನಿವಾರ್ಯ. ಅದಕ್ಕೆ ಒಗ್ಗಿಕೊಂಡರೆ ಮ್ಮದಿ ಹಾಗೂ ಖುಷಿ ನಿರಂತರ. ಬದುಕು ಎಷ್ಟೇ ಅಪರಿಪೂರ್ಣವಾಗಿರಲಿ, ಆದರೆ ಬದುಕಲ್ಲಿ ಖುಷಿ ಕಡಿಮೆ ಯಾಗದಿರಲಿ. ನೆನಪಿರಲಿ, ನಮ್ಮ ಒಂದೇ ಒಂದು ಸಣ್ಣ ಆಲೋಚನೆ ಬದುಕನ್ನೇ ಬದಲಾಯಿಸಿ ಬಿಡಬಲ್ಲದು- ಪಾಸಿಟಿವ್ ಆಗಿಯೂ ನೆಗೆಟಿವ್ ಆಗಿಯೂ.
ನೆಗೆಟಿವ್ ಆಲೋಚನೆಗಳು ಒಂಥರಾ ಅಡಿಕ್ಷನ್‌ಗಳು, ಯಾವಾಗಲೂ ಅವುಗಳ ಬಗ್ಗೆ ಯೋಚಿಸುತ್ತಿದ್ದರೆ ಅವು ನಮಗೆ ಅಭ್ಯಾಸವಾಗಿಬಿಡುತ್ತವೆ. ಖುಷಿಯಾ ಗಿರುವುದಕ್ಕೆ ನಮಗೆ ‘ವರ್ಲ್ಡ್ ಹ್ಯಾಪಿನೆಸ್ ಡೇ’ನೇ ಬೇಕಾಗಿಲ್ಲ. ಬದುಕಿಗೆ ಪ್ರತಿದಿನವೂ ಸಂತೋಷವನ್ನು ತುಂಬಿಕೊಳ್ಳುತ್ತಾ ಹೋಗುವುದನ್ನು ಕಲಿಯ ಬೇಕಷ್ಟೇ. ಮನಸುಗಳು ಬದಲಾದರೆ ಬದುಕು ಬದಲಾಗುತ್ತದೆ. ಇದೊಂದೇ ನಮ್ಮಲ್ಲಿರುವ ಸದ್ಯದ ಮ್ಯಾಜಿಕ್ ಮಂತ್ರ. ಈ ಮಂತ್ರ ನಮ್ಮ ಈ ಕ್ಷಣದ ಅನುಭವಗಳನ್ನು ಒಪ್ಪಿಕೊಂಡು ಸಮತೋಲಿಸುತ್ತಾ ಸರಿದೂಗಿಸುವ ಪ್ರeಯನ್ನು ನಮ್ಮಲ್ಲಿ ತುಂಬುತ್ತಲೇ ಇರುತ್ತದೆ.
ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಎಂಬ ಚಿಂತೆಯನ್ನು ಬಿಟ್ಟುಬಿಡೋಣ. ವಾಸ್ತವದಲ್ಲಿ ಅವರು, ನಾವು ಅವರ ಬಗ್ಗೆ ಏನು ಯೋಚಿಸುತ್ತಿದ್ದೇವೆ ಎಂಬ ಚಿಂತೆಯಲ್ಲೇ ಇರುತ್ತಾರೆ. ನಮ್ಮೆಲ್ಲರಿಗೂ ಒಂದು ಮನಸ್ಸಿದೆ. ಅದು ಪ್ಯಾರಾಶೂಟ್‌ನಂತೆ ತೆರೆದರಷ್ಟೇ ಕೆಲಸ ಮಾಡುತ್ತದೆ. ಖಾಲಿ ಬಿಟ್ಟ ಬದುಕಿನ ಜಾಗಗಳನ್ನು ಹೊಸ ಹೊಸ ತಿಳಿವಳಿಕೆಯ ಮೂಲಕ, ಕಲಿಕೆಯ ಮೂಲಕ ಮರುತುಂಬುತ್ತ ಹೋಗೋಣ. ಎಲ್ಲ ತಿಳಿವಳಿಕೆ, ಕಲಿಕೆಗೂ ನಾವು ಮನಸ್ಸು ಮಾಡಬೇಕಷ್ಟೇ, ಮನಸ್ಸು ಬದಲಾದರೆ ಬದುಕು ಬದಲಾಗುತ್ತದೆ.
ಆಕರ್ಷಕ ಬದುಕು ನಮ್ಮೆಲ್ಲರ ಕನಸು. ಈ ಕನಸು ನನಸಾಗಬೇಕಾದರೆ ಖುಷಿ, ಪ್ರೀತಿ, ಸಹಕಾರ, ಸಂಭ್ರಮಗಳನ್ನು ಖಾಲಿ ಹಾಳೆಯ ಬದುಕಿಗೆ ಬಣ್ಣಗಳ ಹಾಗೇ ತುಂಬಿಸುತ್ತಾ ಹೋಗಬೇಕು. ಬದುಕಿನಲ್ಲಿ ನಮ್ಮ ಗುರಿಗಳೇನು ಎಂಬುದನ್ನು ಮರುಚೌಕಟ್ಟಾಗಿಸಿ ಹೊಸ ಸಾಧ್ಯತೆಯ ಹುಡುಕಾಟದಲ್ಲಿ
ತೊಡಗಿದರೆ ಬದುಕಿಗೆ ಅರ್ಥ ತಾನಾಗೇ ಮೂಡುತ್ತದೆ. ಮನಸ್ಸಿಗೆ ಪುನಃ ಚೈತನ್ಯಶಕ್ತಿ ತುಂಬಿಕೊಳ್ಳುತ್ತಾ ಮುಂದೆ ಸಾಗುವುದೇ ಕಳೆದುಕೊಳ್ಳುವಿಕೆ, ಬದಲಾವಣೆ, ಆಘಾತಗಳಿಗೆ ನಮಗೆ ನಾವೇ ಕೊಟ್ಟುಕೊಳ್ಳಬಹುದಾದ ಉತ್ತರಗಳಾಗಿರುತ್ತವೆ.
ನಮ್ಮೆಲ್ಲರಿಗೂ ನಮ್ಮವೇ ಆದ ನಿರಾಸೆಗಳಿರುತ್ತವೆ. ಅದನ್ನು ಮೀರಿ ಗಟ್ಟಿಯಾಗುತ್ತಾ ಹೋಗಬೇಕು. ಗಟ್ಟಿಗೊಳ್ಳುತ್ತಾ ನಮ್ಮ ಭಯಗಳನ್ನು ಬಹಳ ಪಾಸಿಟಿವಿಟಿಯೊಂದಿಗೆ ಗೆಲ್ಲಬೇಕು. ಬದಲಾವಣೆ ಬದುಕಿನ ನಿಯಮ, ಅನೇಕ ಬದಲಾವಣೆಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ಈ ಬದಲಾವಣೆಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಎಂಬುದು ನಮ್ಮನ್ನು ಮಾನಸಿಕವಾಗಿ ಗಟ್ಟಿಯಾಗಿಸುತ್ತಾ ಹೋಗುತ್ತದೆ. ಸೀಮಿತ ನಿರಾಶೆಗಳನ್ನು ಒಪ್ಪಿಕೊಳ್ಳೋಣ, ಆದರೆ ಅನಂತ ಭರವಸೆಗಳನ್ನು ಎಂದಿಗೂ ಕಳೆದುಕೊಳ್ಳದಿರೋಣ. ಭರವಸೆಯು ನಾವು ಮಾಡುವ ಯೋಚನೆಯ ಪ್ರತಿಬಿಂಬವೇ ಆಗಿರುತ್ತದೆ.
ಬದುಕಿನ ಪ್ರತಿಯೊಂದು ಪುಟ್ಟ ಪುಟ್ಟ ಸಂಗತಿಗಳನ್ನೂ ಸಂಭ್ರಮಿಸೋಣ, ಪ್ರತಿಕ್ಷಣ, ಪ್ರತಿಗಳಿಗೆಯನ್ನು ಸೆಲೆಬ್ರೇಟ್ ಮಾಡೋಣ, ಬದುಕನ್ನು ತುಂಬು ಜೀವಿಸೋಣ. ಪ್ರತಿ ವರ್ಷ ನಾವೆಲ್ಲ ನಮ್ಮ ಇನ್‌ಕಮ್ ಟ್ಯಾಕ್ಸ್‌ನ ಫೂಲ್ ಮಾಡುತ್ತೇವೆ. ನಮ್ಮ ಇನ್‌ಕಮ್ ಟ್ಯಾಕ್ಸ್ ಇಷ್ಟು, ಸಂಬಳ ಇಷ್ಟು ಅಂತ ಅದಕ್ಕೆ ಟ್ಯಾಕ್ಸ್ ಕೂಡ ಕಟ್ಟುತ್ತೇವೆ. ವ್ಯಾವಹಾರಿಕ ಆದಾಯಗಳಾದ ಮನೆ, ಕಾರು, ಸೈಟು, ಚೀಟಿ, ಮ್ಯೂಚುವಲ್ ಫ್ರೆಂಡ್ಸ್ ಹೀಗೆ ಹೂಡಿಕೆ ಮಾಡುತ್ತಾ ಹೋಗುತ್ತೇವೆ. ನಮ್ಮ ಖುಷಿ, ಸಂತೋಷಗಳಿಗೆ ಅರ್ಥ ಬರಬೇಕಾದರೆ ನಾವು ಮಾನಸಿಕ ಆದಾಯದ ಮೇಲೂ ಹೂಡಿಕೆ ಮಾಡಬೇಕು. ಏನಿದು ಮಾನಸಿಕ
ಆದಾಯದ ಹೂಡಿಕೆ ಎನ್ನುತ್ತೀರಾ? ಜೀವನ ತೃಪ್ತಿ, ನನ್ನ ಬದುಕಿಗೆ ಸಂಪೂರ್ಣ ಅರ್ಥವಿದೆ ಎಂಬ ನಂಬಿಕೆ, ಆಸಕ್ತಿದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ, ಜೀವನದ ಮುಖ್ಯವಾದ ಗುರಿಗಳನ್ನು ಅನ್ವೇಷಿಸುವುದು, ಸಕಾರಾತ್ಮಕ ಭಾವನೆಗಳನ್ನು, ಸಂವೇದನೆಗಳನ್ನು ಅನುಭವಿಸುವುದು-ಅನುಭಾವಿಸುವುದು, ‘ನಾನು’ ಅನ್ನುವುದಕ್ಕಿಂತ ‘ನಾವು’ ಎಂಬ ಅಧ್ಯಾತ್ಮದ ಜತೆ ಕನೆಕ್ಟ್ ಆಗುತ್ತಾ ಹೋಗುವುದೇ ಮಾನಸಿಕ ಆದಾಯದ ಹೂಡಿಕೆ. ಈ ಕ್ಷಣದಿಂದಲೇ ಮಾನಸಿಕ ಆದಾಯದಲ್ಲಿ ಹೂಡಿಕೆ ಮಾಡಲು ಶುರು ಮಾಡಿ, ನೀವು ಕಣ್ಣು ಮುಚ್ಚಿ ಕಣ್ಣು ತೆಗೆಯುವಷ್ಟರಲ್ಲಿ ಅದು ದ್ವಿಗುಣಗೊಂಡಿರುತ್ತದೆ.
ಸಂದರ್ಭಗಳನ್ನು ಬದಲಾಯಿಸಿಬಿಡಬಹುದು- ಸಂತೋಷವೆಂಬ, ಆತ್ಮವಿಶ್ವಾಸವೆಂಬ, ದೃಢತೆಯೆಂಬ ಸಕಾರಾತ್ಮಕತೆಯ ಮೂಲಕ. ಸಕಾರಾತ್ಮಕತೆ ಯಾವುದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಸಾಧ್ಯ. ಜತೆಗೆ ಉಚಿತವೂ ಹೌದು! ಅದಕ್ಕೆ ವಯಸ್ಸು, ಸೌಂದರ್ಯ, ಕೆಲಸ, ಆದಾಯ ಇದಾವುದರ ಹಂಗೂ ಇಲ್ಲ. ಸಕಾರಾತ್ಮಕತೆ ಎಲ್ಲರಿಗೂ ಸಲ್ಲುವಂಥದ್ದು. ಹಿಂದೆ ಏನಾಗಿತ್ತು? ಮುಂದೆ ಏನಾಗಬಹುದು? ಎಂದು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಬೇಕು; ಬದುಕಲ್ಲಿ ಏನಿದೆಯೋ ಅದನ್ನು ಒಪ್ಪಿಕೊಳ್ಳ ಬೇಕು. ಇದೆಲ್ಲವನ್ನೂ ಕೃತಜ್ಞರಾಗಿ ಪ್ರಶಂಸಿಸುವುದಷ್ಟೇ ನಮ್ಮ ಮನಸ್ಥಿತಿಯಾಗಬೇಕು. ಈ ಕ್ಷಣ ಅದು ನಿಮ್ಮದು; ಪ್ರಶಂಸಿಸಿ, ಕಾಳಜಿ ವಹಿಸಿ, ನಿಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ಅಭಿವ್ಯಕ್ತಿಸಿ. ಆಗ ಬದುಕಲ್ಲಿ ಎಲ್ಲವೂ ಸಮೃದ್ಧವಾಗಿ ಕಾಣತೊಡಗುತ್ತದೆ. ಲೈಫ್ ಇನ್ನಷ್ಟು ಸುಂದರವೂ ಹಾಗೂ ಅಮೂಲ್ಯವೂ ಎನಿಸುತ್ತದೆ.
ಇಂದು ನಮ್ಮೆಲ್ಲರ ಮನೆ ತುಂಬಿದೆ, ಮನಸ್ಸು ಖಾಲಿಯಾಗಿದೆ. ಇವತ್ತಿನ ಆಧುನಿಕ ಮನಸ್ಸಂತೂ ಏನಾದರೂ ತೊಂದರೆ ಎದುರಾಗಿಬಿಡಬಹುದಾ? ಎಂದು ಎದುರು ನೋಡುತ್ತಲೇ ತಾನು ಸಂಧಿಸುವ ಪ್ರತಿ ವಿಚಾರಗಳನ್ನು, ವಿಷಯಗಳನ್ನು, ವ್ಯಕ್ತಿಗಳನ್ನು ಜಡ್ಜ್ ಮಾಡುತ್ತಾ ಇದು ಸರಿಯಾ-ತಪ್ಪಾ?
ಸುರಕ್ಷಿತವಾ ಅಪಾಯಕಾರಿಯಾ? ಸಹಾಯಕಾರಿಯಾ? ಎಂದು ನಿರ್ಣಯಿಸುವ ಗೊಂದಲದಲ್ಲೇ ಇರುತ್ತದೆ. ಜತೆಗೆ ನಮ್ಮ ಆಧುನಿಕ ಮನಸ್ಸಿಗೆ ನಿರಾಕ ರಣೆ ಮತ್ತು ಹೋಲಿಕೆಗಳ ಗೀಳು. ಬೇರೆಯವರು ನಮ್ಮನ್ನು ಇಷ್ಟಪಡುತ್ತಾರೋ ಇಲ್ಲವೋ? ನಾವು ಅವರಿಗೆ ಸರಿಸಮಾನವಾಗಿ ಇದ್ದೀವೋ ಇಲ್ಲವೋ? ಹೀಗೆ ನಿರಂತರ ಯೋಚನೆಗಳ ನಡುವೆ ನಮ್ಮೆಲ್ಲರ ನೆಮ್ಮದಿಗೆ ಜಾಗವೆಲ್ಲಿ? ನಮ್ಮಲ್ಲಿನ ಕೆಟ್ಟದ್ದನ್ನು ನಾವೇ ಸೋಲಿಸಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ಸಂತೃಪ್ತ ಸಂಬಂಧಗಳನ್ನು ಹೆಣೆಯಬೇಕು, ಒತ್ತಡ ಮತ್ತು ಚಿಂತೆಗಳನ್ನು ಕಡಿಮೆಗೊಳಿಸಿಕೊಳ್ಳಬೇಕು.
ಹೀಗೆ ಬದುಕಿಗೆ ಪರಿಪೂರ್ಣವಾದ ಅರ್ಥವನ್ನು ತುಂಬುತ್ತಾ ಹೋದ ಹಾಗೆ ನೆಮ್ಮದಿ, ಖುಷಿ, ಆತ್ಮವಿಶ್ವಾಸ, ಸಕಾರಾತ್ಮಕತೆ ಒಡಮೂಡುತ್ತವೆ.
ಬದುಕಿನ ಓಟದಲ್ಲಿ ಜವಾಬ್ದಾರಿಗಳನ್ನು ಹೆಗಲಿಗೆರಿಸಿಕೊಂಡು ಖುಷಿ, ಸಂತೃಪ್ತಿಗಳನ್ನು ನಮ್ಮದಾಗಿಸಿಕೊಳ್ಳಲು ಸಮತೋಲನದ ಅಗತ್ಯವಿದೆ. ಯಾವುದು ಹೆಚ್ಚಾದರೂ ಕಡಿಮೆಯಾದರೂ ಸಮತೋಲನ ತಪ್ಪುತ್ತದೆ, ಎಚ್ಚರವಿರಲಿ! ಇದೇ ಬದುಕಿನ ಸೀಕ್ರೆಟ್. ಇನ್ನು ಭಯಗಳು ನಮ್ಮ ಮನಸ್ಸನ್ನು ಆ ಮೂಲಕ ನಮ್ಮ ಸಕಾರಾತ್ಮಕತೆಯನ್ನು, ಸಂತೋಷವನ್ನು ಕಲಕುತ್ತವೆ. ದೇಹ- ಮನಸುಗಳಿಗೆ ಜೋಮು ಹಿಡಿಸುವ ಖುಣಾತ್ಮಕ ಶಕ್ತಿ ಭಯಗಳಿಗಿದೆ. ನಮ್ಮ ಕನಸುಗಳನ್ನು ಕಸಿದು ನಾವು ಅಸಾಧಾರಣತೆಯಿಂದ ಸಾಧಾರಣತೆಗೆ ಹೊಂದಿಕೊಳ್ಳುವಂತೆ ಅವು ಮಾಡಿಬಿಡುತ್ತವೆ. ಭಯವು ಅಡಿಕ್ಷನ್ ಇದ್ದ ಹಾಗೆ.
ಅದನ್ನು ಮೀರದೆ ಹೋದರೆ, ನಮ್ಮ ಬದುಕನ್ನು ಅದು ನಿಯಂತ್ರಿಸತೊಡಗುತ್ತದೆ. ಬದುಕಲ್ಲಿ ಎಲ್ಲವೂ ನಮಗೇ ಸಂಭವಿಸುತ್ತಿಲ್ಲ, ಬದಲಾಗಿ ಅವು ನಮಗಾಗೇ ಸಂಭವಿಸಿವೆ ಎಂಬುದನ್ನು ಅರಿಯುವ ಬಾಗುವ ಮನಸ್ಥಿತಿ ನಮ್ಮದಾಗಬೇಕೇ ಹೊರತು ಸ್ಥಿರ ಮನಸ್ಥಿತಿಯಲ್ಲ. ಸವಾಲುಗಳಿಗೆ ಹೆದರಿ ಸಮರ್ಪಿತವಾಗುವುದಲ್ಲ. ಸೆಟಲ್ಮೆಂಟ್ ಆಚೆಗಿನ ಸಲ್ಯೂಷನ್ ಹುಡುಕಿ ಭಯಗಳಿಂದ ಹೊರಬರಬೇಕು. ಭಯ ಅಥವಾ ಸೋಲಿಗಿಂತ ನಮ್ಮ ಖುಷಿಗಳನ್ನು, ಕನಸುಗಳನ್ನು ಜೀವಂತವಾಗಿಸಿಕೊಳ್ಳಬೇಕು. ಬದುಕಿನ ಕತೆಯನ್ನು ಬದಲಾಯಿಸಿಕೊಳ್ಳಬೇಕು. ಹಾಗಾಗಿ ಇವತ್ತು ನಿಮ್ಮ ನಿರ್ಧಾರ ಬದಲಾಗಲಿ, ಮನಸ್ಸು ಭಯ ಮತ್ತು ಸೋಲುಗಳನ್ನು ಗೆಲ್ಲುವಂತಾಗಲಿ. ಆ ಮೂಲಕ ಅತ್ಯಂತ ಖುಷಿಯ, ಯಶಸ್ವಿ ವ್ಯಕ್ತಿ ನೀವಾಗಿ.
ಬದುಕು ಬರಿಯೇ ಆರೋಹಣ ಅಥವಾ ಬರಿಯೇ ಅವರೋಹಣವಲ್ಲ, ಇವೆರಡರ ನಡುವಿನ ಸಮತೋಲನ. ಬದುಕಿನ ಅರ್ಥವೇನು ಎಂದು ಕೇಳುವುದನ್ನು ನಾವೆಲ್ಲ ನಿಲ್ಲಿಸಬೇಕು. ಬದಲಾಗಿ ಪ್ರತಿ ಕ್ಷಣಗಳ ಅರಿವಿನೊಂದಿಗೆ ಖುಷಿಯನ್ನು ಆಲೋಚಿಸಬೇಕು. ಆಗ ಬದುಕು ಇನ್ನಷ್ಟು ಸುಂದರ. ನಮ್ಮೊಳಗಿರುವ ಬದುಕಿಗೆ ಅರ್ಥ ತುಂಬವ ಶಕ್ತಿಯನ್ನು ನಾವೆಲ್ಲ ಕಂಡುಕೊಳ್ಳಬೇಕು. ದೈಹಿಕ, ಆರ್ಥಿಕ ಇನ್ಯಾವುದೇ ಅನಾರೋಗ್ಯಗಳ ನಡುವೆಯೂ ಹೇಗಾದರೂ ಬದುಕಬೇಕೆಂದು ನಿರ್ಧರಿಸಿದ ವ್ಯಕ್ತಿಗೆ ಹೇಗೆ ಬದುಕುತ್ತೀಯಾ ಎಂಬ ಎಷ್ಟೇ ಸವಾಲುಗಳು ಎದುರಾದರು ಅದನ್ನು ತಾಳಿಬಿಡುತ್ತಾನೆ. ಇದೇ ಬದುಕಿಗೆ ಉದ್ದೇಶವಿದೆ, ಅರ್ಥವಿದೆ ಎಂಬ ಅನಿವಾರ್ಯತೆಯ ಜತೆಗೆ ಜೀವಿಸಿಬಿಡುವ ಪ್ಲಸ್ ಪಾಯಿಂಟ್ .
ಭರವಸೆ ನಮ್ಮನ್ನು ಹತಾಶೆಯಿಂದ ತಕ್ಷಣವೇ ಪಾರು ಮಾಡಿಬಿಡುವ ಮುಖ್ಯ ಸಂಗತಿ. ಭರವಸೆ ನಮ್ಮಲ್ಲಿ ಹರ್ಷವನ್ನು, ನೆಮ್ಮದಿಯನ್ನು, ಖುಷಿಯನ್ನು ತುಂಬುತ್ತದೆ. ಈ ಖುಷಿಗಳು ನಮ್ಮ ಹೊಳಪನ್ನು ಜಾಸ್ತಿ ಮಾಡುತ್ತವೆ. ಪ್ರತಿಕ್ಷಣವೂ ಹೊಸ ಸಾಧ್ಯತೆ, ಭರವಸೆಗಳೊಂದಿಗೆ ಬದುಕುವುದೇ ನಾವೆಲ್ಲರೂ
ಪಡೆದುಕೊಳ್ಳಬಹುದಾದ ನಿಜವಾದ ಮೋಕ್ಷ. ಬದಲಾವಣೆ ಇಲ್ಲದೇ ಯಾವ ಬೆಳವಣಿಗೆಯೂ ಇಲ್ಲ. ಪ್ರತಿ ಕಲಿಕೆಯೂ ನಮ್ಮಲ್ಲಿ ಬದಲಾವಣೆಯನ್ನು ಮೂಡಿಸಲೇಬೇಕು. ಇಂದು ನೆನ್ನೆಯಲ್ಲ, ನಾವೆಲ್ಲ ಬದಲಾಗಿದ್ದೇವೆ. ಈ ಸಮಯದಲ್ಲಿ ನಮ್ಮ ಕೆಲಸಗಳು ಆಲೋಚನೆಗಳು ಅಗತ್ಯವಾದ ಬದಲಾವಣೆಯ ಉದ್ದೇಶವನ್ನು ಹೊಂದಿದ್ದರೆ ಅವನ್ನು ಮುಂದುವರಿಸಬಹುದು.
ಬದಲಾವಣೆಗೆ ಸಿದ್ಧಗೊಂಡ ಮನಸ್ಸು ಬಹಳ ಬಾಗಿರುತ್ತದೆ ಮತ್ತು ಬೇರೆಯವರಿಂದ ಪ್ರೋತ್ಸಾಹಕ್ಕೆ ಒಳಗಾಗಿರುತ್ತದೆ. ಒಂದಂತೂ ನೆನಪಿರಲಿ- ಹೊರಗಿ ನಿಂದ ನಾವೆಷ್ಟೇ ನಿರುತ್ಸಾಹಕ್ಕೆ ಒಳಗಾಗಿದ್ದರೂ, ಒಳಗಿನಿಂದ ಪ್ರಯತ್ನಪಡುತ್ತಾ ಬಂದರೆ ಯಾವುದೂ ಅಸಾಧ್ಯವಲ್ಲ! ಬದಲಾವಣೆಗೆ ಬೇಕಿರುವುದು ಬರೀ ಯಶಸ್ಸಷ್ಟೇ ಅಲ್ಲ, ಪ್ರತಿದಿನದ ನಮ್ಮ ಉತ್ತಮ ಪ್ರಯತ್ನವೂ ಹೌದು! ನಾವು ಹಾಗೂ ನಮ್ಮ ಮನಸ್ಥಿತಿ ಬದಲಾಗದ ಹೊರತು ಯಾವ ಕಲಿಕೆಯೂ ನಮ್ಮನ್ನು ಬದಲಾಯಿಸಲು ಸಾಧ್ಯವಿಲ್ಲ. ನಮಗೆ ಬದುಕೆಂದರೆ ನಮ್ಮದೇ ಆದ ಕಲ್ಪನೆಗಳಿರುತ್ತವೆ, ನಮ್ಮದೇ ಆದ ನಿರೀಕ್ಷೆಗಳು, ನಿರಾಶೆಗಳು, ವಿಷಾದಗಳು ಇನ್ನು ಏನೇನೋ ಇರುತ್ತವೆ.
ನಮ್ಮನ್ನು ನಾವು ಒಪ್ಪಿಕೊಂಡು ವಾಸ್ತವದ ಜತೆ ಹೊಂದಿಕೊಂಡು ಹೋಗದ ಹೊರತು ಬದುಕು ಎಂದಿಗೂ ಅಪೂರ್ಣವೇ ಆಗಿ ಉಳಿದುಬಿಡುತ್ತದೆ, ಜೋಪಾನ. ನಮ್ಮೊಳಗೊಂದು ಕಲ್ಪನೆಯ ಜಗತ್ತಿದೆ. ಆ ಜಗತ್ತಿನಲ್ಲಿ ಅನೇಕ ಜಗಮಗಿಸುವ ಆಸೆಗಳಿವೆ. ನೋಡಿರುವ ಆಸೆಗಳು, ಕೇಳಿರುವ ಆಸೆಗಳು, ಬಯಕೆಯ ಆಸೆಗಳು. ಈ ಆಸೆಗಳು, ಬಯಕೆಗಳು ನಮ್ಮನ್ನು ನಾವಿರುವಂತೆಯೇ, ಬದುಕನ್ನು ಅದಿರುವಂತೆಯೇ ವಾಸ್ತವದ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳಲು ಬಿಡುವುದಿಲ್ಲ. ನಮ್ಮನ್ನು ನಾವು ಇನ್ನೊಬ್ಬರಿಗೆ ಹೋಲಿಸಿ ನೋಡಿಕೊಳ್ಳುವುವಾಗ ಮುಖ್ಯವಾಗಿ ಮರೆತು ಬಿಡುವ ಸಂಗತಿ ಏನು ಗೊತ್ತಾ- ನಾವು ಪರ್ಫೆಕ್ಟ್ ಎಂದುಕೊಂಡ ವ್ಯಕ್ತಿಯಲ್ಲೂ ನ್ಯೂನತೆಗಳಿವೆ ಎಂಬುದನ್ನು.
ವ್ಯಕ್ತಿಗಳಾಗಿ ನಾವೆಲ್ಲ ನಮ್ಮ ಬಯಲಾಜಿಕಲ್ ಮೇಕಪ್ ಗಳಲ್ಲಿ ಭಿನ್ನ. ಹಾಗೆಯೇ ಮಾನಸಿಕ ಮೇಕಪ್‌ಗಳಲ್ಲೂ ವಿಭಿನ್ನ ವಾಗಿರಬೇಕು! ಆಗಲೇ ನಾವು ವಿಶಿಷ್ಟವೆನಿಸುವುದು. ನಮ್ಮ ನಮ್ಮ ಮನಸ್ಸುಗಳನ್ನು ನಾವೆಲ್ಲರೂ ಪುನರ್ನಿರ್ಮಾಣ ಮಾಡಿಕೊಳ್ಳುವುದನ್ನು, ಮರುಧ್ವನಿಸುವುದನ್ನು, ಮರುಸಾಣೆ ಹಿಡಿಯುವು ದನ್ನು ಕಲಿಯಬೇಕು. ಹಿಂದೆ ನಾವು ಸಂಪೂರ್ಣ ಅಂದುಕೊಂಡಿದ್ದು ಇಂದು ಬಳಕೆಯಲ್ಲೇ ಇರುವುದಿಲ್ಲ. ಈ ಬಳಕೆಯಲ್ಲಿ ಇಲ್ಲದ ಆಲೋಚನೆಗಳೇ ನಮಗೆ ಬ್ಲಾಕೇಜ್ ಆಗಿ ಕಾಡುವಅಪಾಯವಿದೆ. ಬದುಕೆಂಬುದು ಡಬ್ಬಿಯ ಮುಚ್ಚಳ, ಖುಷಿ ಎಂಬುದು ಪಾಸಿಟಿವ್ ಥಿಂಕಿಂಗ್ ಆದರೆ, ಡಬ್ಬಿಯೊಳಗೆ ಇರಬೇಕಾದದ್ದು ಕನಸನ್ನು ನನಸು ಮಾಡುವ ಸಂಕಲ್ಪ, ಸೋಲನ್ನು ಗೆಲುವಾಗಿಸುವ ದೃಢತೆ, ಖುಷಿಯನ್ನು ಪೂರ್ಣವಾಗಿಸಿಕೊಳ್ಳುವ ಸಾಧ್ಯತೆ. ಹೊಸ ನಾಳೆ, ಹೊಸ ಅವಕಾಶ, ಹೊಸ ಸವಾಲು, ಹೊಸ ಕನಸು ಎಲ್ಲಾ ಕೊನೆಗಳ ಎದುರು ನಿಲ್ಲುವ ಹೊಸ ಸಾಧ್ಯತೆಗಳಿವು.
ನಿಮ್ಮೊಳಗೆ, ನೀವೇ ನಿರ್ಲಕ್ಷಿಸಿರಬಹುದಾದ ಅಸಾಧಾರಣ ಪ್ರತಿಭೆಗಳಿವೆ. ಇವೆಲ್ಲ ನಿಮ್ಮೊಳಗೆ ನಿಮ್ಮೆದುರೇ ಇರಬಹುದಾದ ಸ್ವತ್ತುಗಳು. ಅವುಗಳ ಬಾಗಿಲು ತೆಗೆದು ಜಿಗಿಯಬೇಕಷ್ಟೇ, ಎಲ್ಲ ಅಡೆತಡೆಗಳನ್ನು ಮೀರಿ, ಹೊಸದರೊಂದಿಗೆ ಮರುಹುಟ್ಟುತ್ತ… ಎಲ್ಲಾ ಹೊಸದರ ಶುರುವಿಗೂ ಬೇಕಿರುವುದು ನಮ್ಮ ರೆಡಿನೆಸ್ ಅಷ್ಟೇ. ನಮ್ಮ ವೈಯಕ್ತಿಕ ಜೀವನದ ಸಿಇಒಗಳು ನಾವುಗಳೇ, ನಾವೇ ನಮ್ಮ ಬದುಕಿನ ಮುಖ್ಯ ಡಿಸೈನರ್ಸ್, ನಾವೇ ನಮ್ಮ ಬದುಕಿನ ಟಾಪ್ ಎಂಜಿನಿಯರ್ಸ್, ನಾವೇ ನಮ್ಮ ಬದುಕಿನ ಸೀನಿಯರ್ ಕ್ರಿಯೇಟರ್ಸ್. ಪ್ರತಿದಿನವೂ ನಾವೆಲ್ಲ ನಮ್ಮಲ್ಲೇನಿದೆಯೋ ಅದನ್ನು ಸಂಭ್ರಮಿಸಬೇಕು. ಈ ಸಂಭ್ರಮಗಳಿಂದ ಹುಟ್ಟುವುದೇ ಆತ್ಮವಿಶ್ವಾಸ, ಆಸೆ, ನಂಬಿಕೆ, ಪ್ರೀತಿ, ಸಹಾನುಭೂತಿ, ಭರವಸೆ. ಏನಂತೀರಿ? ಎಂಬ ಪ್ರಶ್ನೆಯನ್ನು ನಿಮ್ಮೆದುರಿಗಿಡುತ್ತಾ ನನ್ನ ಎರಡು ವರ್ಷಗಳ ‘ಶ್ವೇತಪತ್ರ’ ಅಂಕಣವನ್ನು ಇಂದಿಗೆ ಕೊನೆಗೊಳಿಸುತ್ತಿದ್ದೇನೆ. ಈ ಎರಡು ವರ್ಷಗಳಲ್ಲಿ ನೀವು ನನ್ನ ಬರವಣಿಗೆಗೆ ತೋರಿದ
ಅದಮ್ಯ ಪ್ರೀತಿಗೆ ಆತ್ಮೀಯ ಧನ್ಯವಾದಗಳು. ನಂಬಿ, ಬದುಕು ಬದಲಿಸಬಹುದು!