ಸಂಗತ
ಡಾ.ವಿಜಯ್ ದರಡಾ
ಈ ದೇಶದ ಜನರಿಗೆ ಮತದಾನದಲ್ಲಿ ಯಾಕೆ ಈ ಪರಿಯ ನಿರಾಸಕ್ತಿಯಿದೆ ಎಂಬುದರ ಬಗ್ಗೆ ಗಂಭೀರವಾಗಿ ವಿಮರ್ಶೆ ಮಾಡುವ ಅಗತ್ಯವಿದೆ. ‘ನನ್ನ ಒಂದು ಮತದಿಂದ ಏನು ವ್ಯತ್ಯಾಸವಾಗುತ್ತದೆ’ ಎಂದುಕೊಂಡು ಕೆಲವರು ಮತದಾನದಿಂದ ದೂರ ಉಳಿಯುತ್ತಾರೆ. ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸದೆ ಇರುವ ಆಯ್ಕೆಯನ್ನು ಆಶ್ರಯಿಸಿದರೆ ಸರಕಾರವನ್ನು ಟೀಕಿಸುವ ಹಕ್ಕನ್ನೂ ಕಳೆದುಕೊಳ್ಳುತ್ತಾರೆ.
ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ೧೦೨ ಸ್ಥಾನಗಳಿಗೆ ಮತದಾನ ಮುಗಿದಿದೆ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ರಾಜಕೀಯ ವಿಮರ್ಶಕರು ಚರ್ಚೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಜಕೀಯ ಪಕ್ಷಗಳ ಒಳಗೆ ನಡೆಯುತ್ತಿರುವ ಆಂತರಿಕ ತುಮುಲಗಳ ಬಗ್ಗೆಯೂ ಅವರು ಗಮನ ಹರಿಸಿದ್ದಾರೆ. ಬಂಡೆದ್ದು ಸ್ಪರ್ಧಿಸಿರುವ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಸಮಾಧಾನ ಪಡಿಸಲು ನಾಯಕರು ಕೈಗೊಂಡಿರುವ ಕ್ರಮಗಳನ್ನೂ
ರಾಜಕೀಯ ಪಂಡಿತರು ಗಮನಿಸುತ್ತಿದ್ದಾರೆ.
ಅದಕ್ಕಿಂತ ಹೆಚ್ಚಾಗಿ ರಾಜಕೀಯ ವಿಶ್ಲೇಷಕರು ಮೊದಲ ಹಂತದ ಚುನಾವಣೆಯಲ್ಲಿ ಮತದಾನದ ಶೇಕಡಾವಾರನ್ನು ಗಮನಿಸುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆದ ಮತದಾನದ ಸರಾಸರಿಯನ್ನು ಕಳೆದ ಚುನಾವಣೆಗಳಿಗೆ ಹೋಲಿಸಿ ನೋಡುತ್ತಿದ್ದಾರೆ. ಈ ಬಾರಿ ಮತದಾನದ ಪ್ರಮಾಣ ಕಡಿಮೆಯಾಗಿ ದ್ದರೆ ಯಾರು ಗೆಲ್ಲಬಹುದು, ಕಳೆದ ಬಾರಿಗಿಂತ ಹೆಚ್ಚು ಮತದಾನವಾಗಿದ್ದರೆ ಯಾರು ಗೆಲ್ಲಬಹುದು ಎಂಬುದರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮತದಾನ ಮುಗಿದ ಮೇಲೆ ಈ ರೀತಿಯ ಲೆಕ್ಕಾಚಾರಗಳು ಸಹಜ. ಹಾಗೆಯೇ, ಜೂನ್ ೪ಕ್ಕೆ ಫಲಿತಾಂಶ ಪ್ರಕಟವಾಗುವವರೆಗೆ ಕುತೂಹಲ ಉಳಿಸಿಕೊಳ್ಳಲು ಚರ್ಚೆಗೆ ಏನಾದರೂ ಮಸಾಲೆ ಬೇಕಲ್ಲ! ಹೀಗಾಗಿ ಇಂಥ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಪ್ರತಿ ಹಂತದ ಮತದಾನ ಮುಗಿದ ಬಳಿಕವೂ ಅವು
ಸ್ವಲ್ಪ ಹೆಚ್ಚು ಕಾವು ಪಡೆಯುತ್ತವೆ. ಆದರೆ ನನಗಿರುವ ಬಹಳ ಮುಖ್ಯವಾದ ಕಳಕಳಿ ಮತ್ತು ಕಳವಳ ಇದಾವುದೂ ಅಲ್ಲ. ನಮ್ಮದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ. ಇಲ್ಲಿ ಚುನಾವಣೆ ಅಂದರೆ ಪ್ರಜಾಪ್ರಭುತ್ವದ ದೊಡ್ಡ ಹಬ್ಬ.
ಮತದಾರರಿಗೆ ಇದೊಂದು ಸಂಭ್ರಮಾಚರಣೆ. ಈ ಸಲ ಹೆಚ್ಚು ಮತದಾನ ಆಗಬೇಕು ಎಂದು ಚುನಾವಣಾ ಆಯೋಗ ಕೂಡ ಸಾಕಷ್ಟು ಪ್ರಯತ್ನಪಟ್ಟು ಮತದಾರರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದೆ. ತನ್ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ಕರೆತರುವ ಪ್ರಯತ್ನ ಮಾಡಿದೆ. ಆದರೂ ಮೊದಲ ಹಂತದಲ್ಲಿ ಅಷ್ಟೊಂದು ಕಡಿಮೆ ಮತದಾನವಾಗಿದ್ದು ಏಕೆ? ಮೊದಲ ಹಂತದ ಮತದಾನಕ್ಕಿಂತ ಮೊದಲು ನಾನು ಎರಡು ದಿನಗಳ ಕಾಲ ದೇಶದ ಬೇರೆ ಬೇರೆ ಕಡೆ ೧,೪೦೦ ಕಿ. ಮೀ. ದೂರವನ್ನು ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದ್ದೇನೆ.
ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಜನಸಾಮಾನ್ಯರ ಜತೆ ಮಾತನಾಡಿ, ಹರಟೆ ಹೊಡೆದು, ಅವರ ಭಾವನೆಗಳನ್ನು ಅರ್ಥ ಮಾಡಿ ಕೊಳ್ಳುವ ಪ್ರಯತ್ನ ಮಾಡಿದ್ದೇನೆ. ವಿಶೇಷವಾಗಿ ಯುವಕರ ಮನಸ್ಥಿತಿ ನನ್ನ ಗಮನ ಸೆಳೆದಿದೆ. ೨೦೧೪ರಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಜಯಭೇರಿ ಬಾರಿಸಿದ ಚುನಾವಣೆಯಲ್ಲಿ ಮೋದಿ ಬಗ್ಗೆ ಯುವಕರಿಗೆ ಇದ್ದ ಕುತೂಹಲ ಹಾಗೂ ಕ್ರೇಜ್ ಈಗ ಇಲ್ಲ.
ಅದೇನಾದರೂ ಇರಲಿ, ಮತದಾರರ ಒಟ್ಟಾರೆ ಉತ್ಸಾಹಕ್ಕೆ ಏನಾಯಿತು? ಯುವಕರೇ ನಮ್ಮ ದೇಶದ ಭವಿಷ್ಯ. ಅವರ ಕೈಲೇ ಭಾರತದ ಅಭಿವೃದ್ಧಿಯ ಸೂತ್ರವಿದೆ. ಅವರನ್ನು ಅನ್ಯಮನಸ್ಕತೆಯು ಸೆಳೆದರೆ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಏಕೆಂದರೆ ನವಭಾರತವನ್ನು ರೂಪಿಸುವವರೇ ಅವರು! ಈ ಸಲದ ಚುನಾವಣೆಯಲ್ಲಿ ಕಡಿಮೆ ಮತದಾನವಾಗುತ್ತದೆ ಎಂದು ನಾನು ಮೊದಲೇ ಊಹಿಸಿದ್ದೆ. ದುರದೃಷ್ಟವಶಾತ್ ಅದು ಹಾಗೇ ಆಗಿದೆ. ಮತದಾನದ ಪ್ರಮಾಣ ಎರಡರಿಂದ ಮೂರು ಪ್ರತಿಶತ ಕಡಿಮೆಯಾಗಿದೆ. ನಮ್ಮ ದೇಶದಲ್ಲಿ ಎರಡು ರೀತಿಯ ಮತದಾರರಿದ್ದಾರೆ. ಒಂದು, ನಗರ ಪ್ರದೇಶದಲ್ಲಿ
ವಾಸಿಸುವ ಮತದಾರರು. ಎರಡು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮತದಾರರು.
ಆಡಳಿತ ಮತ್ತು ವಿರೋಧ ಪಕ್ಷಗಳು ಈ ವಿಷಯದಲ್ಲಿ ನಡೆಸಿರುವ ಆರೋಪ ಪ್ರತ್ಯಾರೋಪಗಳ ಚರ್ಚೆಗೆ ನಾನು ಹೋಗುವುದಿಲ್ಲ. ಆದರೆ ಈ ಎರಡೂ
ವರ್ಗದ ಮತದಾರರಲ್ಲಿ ಮತದಾನದ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ನಾಗ್ಪುರ ಕ್ಷೇತ್ರದ ಉದಾಹರಣೆ ತೆಗೆದುಕೊಳ್ಳೋಣ. ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರು ಪ್ರತಿನಿಧಿಸುವ ಕ್ಷೇತ್ರವಿದು. ಅವರು ‘ವಿಕಾಸ್ ಪುರುಷ’ ಎಂಬ ಹಣೆಪಟ್ಟಿ ಯೊಂದಿಗೆ ಸ್ಪರ್ಧಿಸುತ್ತಿದ್ದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಠಾಕ್ರೆ ತಮ್ಮನ್ನು ತಾವು ಜನಸಾಮಾನ್ಯರ ಪ್ರತಿನಿಧಿ ಎಂದು ಬಿಂಬಿಸಿ ಕೊಳ್ಳುತ್ತಿದ್ದಾರೆ.
ಆದರೆ ಇಲ್ಲಿ ಮತದಾನದ ಪ್ರಮಾಣ ಬಹಳ ಕಡಿಮೆ ಆಗಿದೆ. ತುಂಬಾ ಬೇಸರದ ವಿಷಯವಿದು. ಹೆಚ್ಚಿನ ವಾರ್ಡುಗಳಲ್ಲಿ ಕೇವಲ ಶೇ.೪೨ ಅಥವಾ ಶೇ.೪೩ರಷ್ಟು ಮತದಾನವಾಗಿದೆ. ಇದು ಏನನ್ನು ಸೂಚಿಸುತ್ತದೆ? ಹಾಗೆ ನೋಡಿದರೆ ನಮ್ಮ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಮತದಾನದ ಪ್ರಮಾಣದಲ್ಲಿ ಈಗ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಈಗಿನ ಮತದಾನದ ಪ್ರಮಾಣದ ಬಗ್ಗೆ ನಾವು ತೃಪ್ತಿ ಪಡಬೇಕೇ
ಬೇಡವೇ ಎಂಬುದು ಪ್ರಶ್ನೆ.
೧೦೦ ಜನರು ಮತದಾನ ಮಾಡಬೇಕಾದ ಜಾಗದಲ್ಲಿ ೪೨-೪೩ ಜನರು ಮತದಾನ ಮಾಡಿದರೆ ಸಾಕಾ? ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು ೧೯೫೧ರ ಅಕ್ಟೋಬರ್ ತಿಂಗಳಿನಿಂದ ೧೯೫೨ರ ಫೆಬ್ರವರಿಯವರೆಗೆ. ಲೋಕಸಭೆಯ ೪೮೯ ಕ್ಷೇತ್ರಗಳು ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಯ ೪,೦೧೧ ಕ್ಷೇತ್ರಗಳಿಗೆ ಆಗ ಒಟ್ಟಿಗೇ ಚುನಾವಣೆ ನಡೆದಿತ್ತು. ಆಗ ದೇಶದಲ್ಲಿ ಇದ್ದುದು ಒಟ್ಟು ೧೭.೩೨ ಕೋಟಿ ಮತದಾರರು. ಅವರ ಪೈಕಿ ಹೆಚ್ಚುಕಮ್ಮಿ ಶೇ.೪೪ರಷ್ಟು ಜನರು ಮಾತ್ರ ಮತದಾನ ಮಾಡಿದ್ದರು. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೩೬೪ ಸೀಟು ಪ್ರಾಪ್ತವಾಗಿತ್ತು. ಬಹುತೇಕ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಗೆದ್ದಿತ್ತು. ಆ ಐತಿಹಾಸಿಕ ಪ್ರಥಮ ಚುನಾವಣೆ ನಡೆದು ಈಗ ಏಳು ದಶಕಗಳು ಕಳೆದಿವೆ.
ಈಗಲೂ ಸರಾಸರಿ ಮತದಾನದ ಪ್ರಮಾಣ ಶೇ.೭೦ಕ್ಕಿಂತ ಕಡಿಮೆ ಇದೆ. ಏಕೆ ಮತದಾನದ ಪ್ರಮಾಣ ಜಾಸ್ತಿಯಾಗಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಹಾಗೆ
ನೋಡಿದರೆ ಕೆಲ ರಾಜ್ಯಗಳು, ವಿಶೇಷವಾಗಿ ಈಶಾನ್ಯ ಭಾರತದ ರಾಜ್ಯಗಳು, ಈ ವಿಷಯದಲ್ಲಿ ಮುಂದಿವೆ. ಅಲ್ಲಿ ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಚುನಾವಣೆಗಳಲ್ಲಿ ಹೆಚ್ಚು ಮತದಾನವಾಗುತ್ತದೆ. ಆದರೆ ಮತದಾನದ ಪ್ರಮಾಣದಲ್ಲಿ ಇರುವ ಈ ವ್ಯತ್ಯಾಸಕ್ಕೆ ಏನು ಕಾರಣ? ಏಕೆ ದೇಶಾದ್ಯಂತ ಒಂದೇ ಪ್ರಮಾಣದಲ್ಲಿ ಮತದಾನವಾಗುವುದಿಲ್ಲ? ಉದಾಹರಣೆಗೆ, ಇತ್ತೀಚೆಗೆ ನಡೆದ ಮೊದಲ ಹಂತದ ಮತದಾನವನ್ನೇ ಗಮನಿಸಿದರೆ ತ್ರಿಪುರಾದಲ್ಲಿ ಅತಿ ಹೆಚ್ಚು
ಶೇ.೮೦ರಷ್ಟು ಮತದಾನವಾಗಿದೆ.
ಇನ್ನುಳಿದಂತೆ ಶೇ.೭೦ಕ್ಕಿಂತ ಹೆಚ್ಚು ಮತದಾನವಾಗಿರುವುದು ಪಶ್ಚಿಮ ಬಂಗಾಳ, ಮೇಘಾಲಯ, ಅಸ್ಸಾಂ, ಸಿಕ್ಕಿಂ ಮತ್ತು ಪುದುಚೇರಿಯಲ್ಲಿ ಮಾತ್ರ. ನಾನೊಂದು ಸಂಗತಿ ಗಮನಿಸಿದ್ದೇನೆ. ಬಹುಶಃ ನೀವೂ ಗಮನಿಸಿರುತ್ತೀರಿ. ತುಂಬಾ ಜನರು ಮತದಾನದ ದಿನವನ್ನು ರಜೆಯ ದಿನ ಎಂದುಕೊಳ್ಳುತ್ತಾರೆ. ಆವತ್ತು ಮತದಾನ ಮಾಡಲೆಂದು ಸರಕಾರ ರಜೆ ನೀಡಿದರೆ, ಇವರು ಹಾಯಾಗಿ ಕಾಲ ಕಳೆಯಲು ರಜೆ ಸಿಕ್ಕಿದೆ ಎಂದುಕೊಳ್ಳುತ್ತಾರೆ. ಅವರಲ್ಲಿ ಅನೇಕರು ‘ನನ್ನ ಒಂದು ಮತದಿಂದ ಏನು ವ್ಯತ್ಯಾಸವಾಗುತ್ತದೆ’ ಎಂದುಕೊಂಡು ಮತದಾನದಿಂದ ದೂರ ಉಳಿಯುತ್ತಾರೆ. ದುರದೃಷ್ಟವಶಾತ್ ಬಹಳ ಜನರು ಹೀಗೇ ಅಂದುಕೊಂಡು ಮತ ಚಲಾಯಿಸದೆ ಇರುವುದರಿಂದ ದೊಡ್ಡ ಪ್ರಮಾಣದ ಜನರು ಮತದಾನ ಮಾಡದೆ ಉಳಿದಂತಾಗುತ್ತದೆ.
ಶೇ.೩೦ರಷ್ಟು ಬೃಹತ್ ಪ್ರಮಾಣದ ಜನರು ಮತದಾನದಿಂದ ದೂರವುಳಿದರೆ ಅದರರ್ಥ ಅಷ್ಟು ಜನರು ದೇಶದ ಆಡಳಿತದಲ್ಲಿ ಭಾಗವಹಿಸುತ್ತಿಲ್ಲ ಎಂದು. ನೀವು ನಿಮ್ಮ ಮತದಾನದ ಹಕ್ಕನ್ನು ಚಲಾಯಿಸದೆ ಇರುವ ಆಯ್ಕೆಯನ್ನು ಆಶ್ರಯಿಸಿದರೆ ಸರಕಾರವನ್ನು ಟೀಕಿಸುವ ಹಕ್ಕನ್ನು ಕೂಡ ಕಳೆದು ಕೊಳ್ಳುತ್ತೀರಿ. ವೈಯಕ್ತಿಕವಾಗಿ ನನಗೆ ಅನ್ನಿಸುವುದೇನೆಂದರೆ, ಒಬ್ಬ ಮತದಾರ ಯಾವುದೇ ಗಂಭೀರವಾದ ಕಾರಣವಿಲ್ಲದೆ ಮತದಾನ ಮಾಡುವುದಿಲ್ಲ
ಅಂತಾದರೆ ಅವನಿಗೆ ಸರಕಾರ ನೀಡುವ ಸೌಕರ್ಯಗಳು ಬೇಕು, ಆದರೆ ಸರಕಾರವನ್ನು ಚುನಾಯಿಸುವ ಜವಾಬ್ದಾರಿ ಬೇಡ ಎಂದರ್ಥ. ಪುಕ್ಕಟೆಯಾಗಿ ಸರಕಾರದ ಸವಲತ್ತುಗಳನ್ನು ಅನುಭವಿಸುವುದೇ ಅವನಿಗಿಷ್ಟ.
ಇನ್ನೊಂದು ಸಂಗತಿ ಗಮನಿಸಿದ್ದೀರಾ? ಗುಡ್ಡಗಾಡು ಪ್ರದೇಶದಲ್ಲಿ, ಬುಡಕಟ್ಟು ಜನರು ವಾಸಿಸುವ ಭಾಗಗಳಲ್ಲಿ ಮತದಾನ ಹೆಚ್ಚಾಗುತ್ತಿದೆ. ರಾಜಕೀಯದ ಬಗ್ಗೆ ತಿಳಿದುಕೊಂಡಿರುವ ಸುಶಿಕ್ಷಿತರು ಇರುವ ಸ್ಥಳಗಳಲ್ಲಿ ಮತದಾನ ಕಡಿಮೆ ಯಾಗುತ್ತಿದೆ. ಬಿಹಾರವನ್ನು ನಾವು ರಾಜಕೀಯವಾಗಿ ಜಾಗೃತಗೊಂಡ ಜನರು ಇರುವ ರಾಜ್ಯವೆಂದು ಹೇಳುತ್ತೇವಲ್ಲವೇ? ಆದರೆ ಅಲ್ಲಿ ಮೊದಲ ಹಂತದಲ್ಲಿ ಶೇ.೫೦ಕ್ಕಿಂತ ಕಡಿಮೆ ಮತದಾನವಾಗಿದೆ. ಕೆಲವರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ನೋಟಾ ಒತ್ತಿದವರ ಸಂಖ್ಯೆ ಶೇ.೧ಕ್ಕಿಂತ ಹೆಚ್ಚಿತ್ತು. ಮತದಾನದ ಪ್ರಮಾಣ ಕಡಿಮೆಯಾಗಲು ಜನರಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ಚುನಾವಣೆಯ ಸಮಯದಲ್ಲಿ ತೆರಳುವುದಕ್ಕೆ ಇರುವ ಸಮಸ್ಯೆಯೂ ಒಂದು ಕಾರಣ.
ದೂರದ ಊರು ಹಾಗೂ ನಗರಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರು ಮತದಾನದ ದಿನ ತಮ್ಮ ಹಕ್ಕು ಚಲಾಯಿಸಲು ನಿಗದಿತ ಮತಗಟ್ಟೆಗೆ ಹೋಗ ಬೇಕಾಗತ್ತದೆ. ಅದು ನೂರಾರು ಕಿ.ಮೀ. ದೂರವಿರಬಹುದು. ಅಂಥವರಿಗೆ ತಾವು ಇರುವಲ್ಲಿಂದಲೇ ಬ್ಯಾಲೆಟ್ ಪೇಪರಿನಲ್ಲಿ
ಮತದಾನ ಮಾಡಲು ಅವಕಾಶ ಕಲ್ಪಿಸಿದರೆ ಮತದಾನದ ಪ್ರಮಾಣ ಹೆಚ್ಚಬಹುದು. ಇಂದಿನ ತಂತ್ರಜ್ಞಾನ ಪ್ರಗತಿಯ ಯುಗದಲ್ಲಿ ಇದು ಅಸಾಧ್ಯ ವೇನಲ್ಲ.
ನನಗೆ ಈ ಚುನಾವಣೆಯಲ್ಲಿ ಖುಷಿ ಕೊಟ್ಟ ಒಂದು ಸಂಗತಿಯೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಶೊಂಪೆನ್ ಬುಡಕಟ್ಟು ಸಮುದಾ ಯದ ಏಳು ಜನರು ಈ ಬಾರಿ ಮೊದಲ ಸಲ ಮತ ಚಲಾಯಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ಅಮೂಲ್ಯ ಮತದಿಂದ ದೇಶದ ಪ್ರಜಾಪ್ರಭುತ್ವ ಕ್ಕೂ ಒಳ್ಳೆಯದಾಗಲಿ. ಚುನಾವಣೆಯಲ್ಲಿ ಮತ ಚಲಾವಣೆ ಮಾಡದ ಒಬ್ಬನೇ ಒಬ್ಬ ವ್ಯಕ್ತಿ ನಮ್ಮ ದೇಶದಲ್ಲಿ ಇಲ್ಲ ಎಂಬಂಥ ದಿನ ಬರಲಿ ಎಂದು ಆಶಿಸುತ್ತೇನೆ. ಆಗ ಮಾತ್ರ ನಾವು ಇನ್ನೂ ಹೆಚ್ಚು ಜೋರಾಗಿ, ಹೆಮ್ಮೆಯಿಂದ ಹೇಳಬಹುದು… ಜೈ ಹಿಂದ್!
(ಲೇಖಕರು ಹಿರಿಯ ಪತ್ರಕರ್ತರು)