Thursday, 12th December 2024

ದಯವಿಟ್ಟು ಇಲ್ಲಿ ಪ್ರಾಣಿಗಳಂತೆ ವರ್ತಿಸಿ !

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ಪರ್ವತದಿಂದ ಹಿಡಿದು ಸಮುದ್ರದವರೆಗೆ ಗೆಲ್ಲುವವರು ಯಾರು? ಊಹೆ ಮಾಡುವುದು ಅಪಾಯಕಾರಿ. ಆದರೆ ಅಪಾಯದ ಜತೆ ಆಟವಾಡ ದಿದ್ದರೆ ಅಂಕಣ ಬರೆದಾದರೂ ಏನು ಪ್ರಯೋಜನ? ಪರ್ವತ ಪ್ರದೇಶಗಳು ಮತ್ತು ಅಕ್ಕಪಕ್ಕದ ಊರುಗಳು ನರೇಂದ್ರ ಮೋದಿಯವರ ಜತೆಗಿವೆ. ನದಿಯ ಪೂರ್ವ ಭಾಗಗಳು ಮಮತಾ ಬ್ಯಾನರ್ಜಿಯ ಜತೆಗಿವೆ. ಬಂಗಾಳದ ಇನ್ನುಳಿದ ಕಡೆಗಳಲ್ಲಿ ಜನಾಂಗೀಯ ರಾಜಕಾರಣವೇ ಉತ್ತಮ ಆಡಳಿತಕ್ಕಿಂತ ಹೆಚ್ಚು ಪ್ರಭಾವ ಬೀರುತ್ತದೆ.

ಇಂದಿರಾ ಗಾಂಧಿ ತಮ್ಮ ರಾಜಕೀಯ ವೃತ್ತಿ ಬದುಕಿನ ಅತ್ಯಂತ ನಾಟಕೀಯ ಚುನಾವಣೆಯನ್ನು ಗೆದ್ದಿದ್ದು ೧೯೮೦ರಲ್ಲಿ. ೧೯೬೬ರಲ್ಲೇ ಪ್ರಧಾನಿಯಾಗಿ ದ್ದರೂ ಅದ್ಭುತ ರಾಜಕೀಯ ಅಲೆಯೊಂದಿಗೆ ಅವರ ಯುಗ ಆರಂಭಗೊಂಡಿದ್ದು ೧೯೭೧ರಲ್ಲಿ. ಆ ವರ್ಷ ಅವರು ತಮ್ಮ ಪ್ರಸಿದ್ಧ ‘ಗರೀಬಿ ಹಟಾವೋ (ಬಡತನ ನಿರ್ಮೂಲನೆ ಮಾಡಿ) ಭರವಸೆಯಿಂದಾಗಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಹುಟ್ಟು ಜಾದೂ ಇದ್ದಂತೆ, ಆದರೆ ಮರುಹುಟ್ಟು
ಪವಾಡ. ೧೯೭೭ರಲ್ಲಿ ಕಂಡಿದ್ದ ಅವಸಾನದಿಂದ ಕಾಂಗ್ರೆಸ್ ಪಕ್ಷವನ್ನು ಇಂದಿರಾ ಗಾಂಧಿ ೧೯೮೦ರಲ್ಲಿ ಮತ್ತೆ ಪವಾಡಸದೃಶ ರೀತಿಯಲ್ಲಿ ಮೇಲೆತ್ತಿ ನಿಲ್ಲಿಸಿದರು.

ಆಗಷ್ಟೇ ತಲೆ ಎತ್ತುತ್ತಿದ್ದ ಉತ್ತರ ಭಾರತದ ಕಾಂಗ್ರೆಸ್ಸೇತರ ಪಕ್ಷಗಳ ಮೈತ್ರಿಕೂಟವಾಗಿದ್ದ ಜನತಾ ಪಾರ್ಟಿಯನ್ನು ಮಕಾಡೆ ಮಲಗಿಸಿ ಅವರು ಕಾಂಗ್ರೆಸ್ಸನ್ನು ಪುನರುತ್ಥಾನಗೊಳಿಸಿದ್ದರು. ಈಗ ಇದನ್ನು ಅಷ್ಟಾಗಿ ಯಾರೂ ನೆನಪಿಸಿಕೊಳ್ಳುವುದಿಲ್ಲ; ರಾಜಕೀಯದಲ್ಲಿ ಐದು ದಶಕವೆಂಬುದು ತುಂಬಾ ಸುದೀರ್ಘ ಅವಧಿ. ೧೯೮೦ರಲ್ಲಿನ ಇಂದಿರಾ ಗಾಂಧಿಯವರ ಚುನಾವಣಾ ಚಿಹ್ನೆ ೧೯೭೭ರ ಚುನಾವಣಾ ಚಿಹ್ನೆಗಿಂತ ಭಿನ್ನವಾಗಿತ್ತು ಎಂಬುದು ಕೂಡ
ಈಗ ಮರೆತೇಹೋಗಿದೆ. ಮೊದಲಿಗೆ ಹಸು ಮತ್ತು ಕರು ಅವರ ಚಿಹ್ನೆಯಾಗಿತ್ತು. ಅದರ ಜಾಗಕ್ಕೆ ೧೯೮೦ರಲ್ಲಿ ಹಸ್ತ ಬಂದಿತು. ಲಕ್ಷಾಂತರ ಭಾರತೀಯರಿಗೆ ಹಸು ಮತ್ತು ಕರುವಿನ ಚಿಹ್ನೆಯು ಪ್ರಜಾಪ್ರಭುತ್ವದಲ್ಲಿ ಒಂದು ಕುಟುಂಬದ ಆಳ್ವಿಕೆಯ ಚಿಹ್ನೆಯಂತೆ ತೋರುತ್ತಿತ್ತು.

ಅದು ವಂಶಪಾರಂಪರ್ಯ ರಾಜಕಾರಣದ ಪ್ರತೀಕವಾಗಿತ್ತು. ಐದು ದಶಕಗಳ ನಂತರ ಕುಟುಂಬ ರಾಜಕಾರಣವೆಂಬುದು ಸಾಂಕ್ರಾಮಿಕವಾಯಿತು. ಕಾಂಗ್ರೆಸ್, ಉತ್ತರ ಪ್ರದೇಶದ ಎಸ್‌ಪಿ ಮತ್ತು ಬಿಎಸ್‌ಪಿ, ಬಂಗಾಳದ ತೃಣಮೂಲ ಕಾಂಗ್ರೆಸ್, ಮಹಾರಾಷ್ಟ್ರದ ಎನ್‌ಸಿಪಿ ಮತ್ತು ಶಿವಸೇನೆ (ಠಾಕ್ರೆ), ಪಂಜಾಬಿನ ಅಕಾಲಿಗಳು ಹಾಗೂ ದಕ್ಷಿಣ ಭಾರತದ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದೊಂದು ಕುಟುಂಬಕೇಂದ್ರಿತವಾಗಿ ಕೆಲಸ ಮಾಡುತ್ತಿವೆ. ಈ ಪಿಡುಗಿನಿಂದ ಹೊರತಾಗಿರುವುದು ಬಿಜೆಪಿ ಮತ್ತು ಮಾರ್ಕ್ಸಿಸ್ಟ್‌ಗಳು ಮಾತ್ರ.

ಆದರೆ ಇವು ಕೂಡ ಸಮಗ್ರವಾಗಿ ಕುಟುಂಬ ರಾಜಕಾರಣದಿಂದ ಹೊರತಾಗೇನೂ ಇಲ್ಲ. ಅಲ್ಲಲ್ಲಿ ಇವುಗಳಿಗೂ ಆ ಸೋಂಕು ಅಂಟಿದೆ. ೨೦೨೪ರಲ್ಲಿ ಈ ವಿಚಾರದ ಬಗ್ಗೆ ಮತದಾರರಿಗೆ ಏನಾದರೂ ಅನ್ನಿಸುತ್ತದೆಯೇ? ಫಲಿತಾಂಶ ಬರುವವರೆಗೆ ಕಾಯೋಣ.

ಬಂಗಾಳದಲ್ಲಿ ಚುನಾವಣಾ ಪ್ರಚಾರದ ಬ್ಯಾನರ್ ಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗಿಂತ ತಮ್ಮ ಮುಖವನ್ನು ಎದ್ದು ಕಾಣಿಸುವಂತೆ ತೋರಿ ಸುವ ಧಾರ್ಷ್ಟ್ಯವಿರುವುದು ಕೇವಲ ಒಬ್ಬನೇ ವ್ಯಕ್ತಿಗೆ. ಆತ ಮಮತಾರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ. ಈ ವಿಷಯ ನಿಮ್ಮ ಗಮನಕ್ಕೆ ಬಂದಿಲ್ಲ ಅಂತಾದರೆ ಇಲ್ಲಿ ಕೇಳಿ; ತಮ್ಮ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಒಂದಕ್ಕೊಂದು ಬೆನ್ನುಹತ್ತುವಂತೆ ಇವರು ದೊಡ್ಡ ದೊಡ್ಡ ಹೋರ್ಡಿಂಗ್‌ ಗಳನ್ನು ಹಾಕಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲೇ ಇವು ದೈತ್ಯಾಕಾರದ ರಾಕ್ಷಸನಂತೆ ತಲೆಯೆತ್ತಿ ನಿಂತಿವೆ.

ಹೂಗ್ಲಿ ನದಿಯು (ಅಥವಾ ಆದಿ ಗಂಗಾ, ನಿಜವಾದ ಗಂಗಾ) ಬಂಗಾಳ ಕೊಲ್ಲಿಗೆ ಪ್ರಶಾಂತವಾಗಿ ಸೇರುವ ಜಾಗದಲ್ಲಿ ಇವರ ಕ್ಷೇತ್ರ ಬಾಯಿ ತೆರೆದು ಕೊಂಡಿದೆ. ಕೊಲ್ಕತ್ತಾದ ಹೃದಯಭಾಗಕ್ಕೂ ಈ ಜಾಗಕ್ಕೂ ೬೦ ಕಿ.ಮೀ.ಗಿಂತ ಹೆಚ್ಚು ದೂರವಿಲ್ಲ. ಆದರೆ ಕಾರಿನಲ್ಲಿ ಹೋದರೆ ಕೊಲ್ಕತ್ತಾದಿಂದ ದೆಹಲಿಗೆ ವಿಮಾನದಲ್ಲಿ ಹೋಗಿದ್ದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಏಕೆಂದರೆ ರಸ್ತೆ ಹಾಗಿದೆ. ಸರಿಯಾದ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಮಾಡಿದರೆ ಮತ್ತು ಪ್ಲಾಸ್ಟಿಕ್ ಬಿಟ್‌ಗಳ ಬದಲು ಅಚ್ಚುಕಟ್ಟಾದ ಕಾಂಕ್ರೀಟ್ ಡಿವೈಡರ್‌ಗಳನ್ನು ನಿರ್ಮಾಣ ಮಾಡಿದರೆ ವಾಹನ ಸವಾರರನ್ನು ಕಂಗೆಡಿಸುವ ಬಾಟಲ್ ನೆಕ್‌ಗಳನ್ನೆಲ್ಲ ತೆಗೆಯಬಹುದು. ಆದರೆ ಅದೆಲ್ಲ ಯಾರಿಗೆ ಬೇಕಾಗಿದೆ? ಉತ್ತಮ ಆಡಳಿತದ ಬದಲು ಜನಾಂಗೀಯ ಭಾವನಾತ್ಮಕ ತಂತುಗಳನ್ನು ಮೀಟುವ ಮೂಲಕ ಚುನಾವಣೆಯನ್ನು ಸುಲಭವಾಗಿ ಗೆಲ್ಲುವುದಾದರೆ ಅಭಿವೃದ್ಧಿಯನ್ನು ಕಟ್ಟಿಕೊಂಡು ಏನಾಗಬೇಕಿದೆ? ಕೆಟ್ಟ ಆಡಳಿತಕ್ಕೆ ಸಾಕ್ಷಿಗಳು ಸಾಕಷ್ಟು ಇರುತ್ತವೆ.

ಅವುಗಳಲ್ಲಿ ಬಡತನದ ಕರಾಳ ದರ್ಶನವೂ ಒಂದು. ಬಡತನ ಕೂಡ ಹಲವು ಮುಖಗಳಲ್ಲಿ ಕಾಣಿಸಿಕೊಳ್ಳುತ್ತದೆ. ಗುಡಿಸಲಿನಂಥ ಅಂಗಡಿಗಳಲ್ಲಿ ಬಡವ ರಿಗೆ ಮಾತ್ರ ಕೈಗೆಟಕುವ ದರದಲ್ಲಿ ಸಿಗುವ ಕೆಲಸಕ್ಕೆ ಬಾರದ ಅಸ್ತವ್ಯಸ್ತ ಬಟ್ಟೆಗಳ ಮುಂದೆ ನಿಂತು ಜನರು ರಂಜಾನ್‌ಗೆ ಶಾಪಿಂಗ್ ಮಾಡುತ್ತಿದ್ದ ದೃಶ್ಯ ನೋಡುವಾಗ ಮನಸ್ಸು ಅಯ್ಯೋ ಎನ್ನುತ್ತಿತ್ತು. ಈ ದೃಶ್ಯ ನಿಮಗೆ ಕಾಣಿಸುವುದಿಲ್ಲ ಎಂದಾದರೆ ನೀವು ತುಂಬಾ ವೇಗವಾಗಿ ಹೋಗುತ್ತಿದ್ದೀ ರೆಂದರ್ಥ. ಇದರಲ್ಲಿ ಎಲ್ಲೋ ಒಂದೆಡೆ ಒಂದು ರೂಪಕ ಅಡಗಿದೆ. ಅದನ್ನು ನೀವೇ ಹುಡುಕಿಕೊಳ್ಳಿ.

ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಸಂದೇಶವನ್ನು ಬಂಗಾಳದ ಉತ್ತರದ ತುತ್ತತುದಿಯಲ್ಲಿರುವ, ಪೂರ್ವ ಹಿಮಾಲಯ ಪರ್ವತಗಳ ಸಾಲಿನಲ್ಲಿ ಬರುವ, ಕರ್ಸಿ ಯಾಂಗ್‌ನಿಂದ ಡಾರ್ಜಿಲಿಂಗ್‌ವರೆಗೆ ಹರಡಿಕೊಂಡಿರುವ ಸೆಂಚಲ್ ವನ್ಯಜೀವಿ ಧಾಮದ ಒಂದು ಕಡೆ ಬೋರ್ಡ್‌ನಲ್ಲಿ ಬರೆದಿಟ್ಟಿದ್ದಾರೆ. ತುಂಬಾ ಸರಳ ಹಾಗೂ ಸ್ಪಷ್ಟವಾದ ಸಂದೇಶ: ‘ದಯವಿಟ್ಟು ಇಲ್ಲಿ ಪ್ರಾಣಿಗಳಂತೆ ವರ್ತಿಸಿ’. ಎಷ್ಟು ಬೇಕೋ ಅಷ್ಟನ್ನು ಕರಾರುವಾಕ್ಕಾಗಿ ಇದರಲ್ಲಿ ಹೇಳಿದ್ದಾರೆ. ಏಕೆಂದರೆ ಪ್ರಾಣಿಗಳು ಕಸ ಎಸೆಯುವುದಿಲ್ಲ, ಪಕ್ಷಿಗಳು ಪ್ಲಾಸ್ಟಿಕ್ ಚೆಲ್ಲುವುದಿಲ್ಲ. ಟೈಗರ್ ಹಿಲ್‌ನಿಂದ ಸಾಗರಮಾತಾದ ಶೃಂಗ ನಿಮಗೆ ಕಾಣಿಸುತ್ತದೆ. ಸಾಗರಮಾತಾ ಅಂದರೆ ಆಕಾಶದ ಅಧಿದೇವತೆ.

ಇಂಗ್ಲಿಷರು ಈ ಪರ್ವತದ ಹೆಸರನ್ನು ಮೌಂಟ್ ಎವರೆಸ್ಟ್ ಎಂದು ತಿರುಚಿದ್ದಾರೆ. ಉಳಿದೆಲ್ಲಾ ಪರ್ವತಗಳು ಮಂಜು ಹಾಗೂ ಮೋಡಗಳಿಂದ ಆಚ್ಛಾದಿತ ವಾಗಿರುತ್ತವೆ. ಆದರೆ ಸಾಗರಾಮಾತಾ ಪರ್ವತವನ್ನು ನೋಡಿದ ತಕ್ಷಣ ನಾವು ಅದರ ಗುರುತು ಹಿಡಿದುಬಿಡುತ್ತೇವೆ. ಅದಕ್ಕೆ ಕಾರಣ ಈ ಹಿಂದೆ ನೋಡಿದ
ಫೋಟೋಗಳಲ್ಲ, ಬದಲಿಗೆ ಆಕಾಶದೆತ್ತರಕ್ಕೆ ಚಿಮ್ಮಿ ನಿಂತಿರುವ ಏಕೈಕ ಪರ್ವತ ಅದು. ಬಂಗಾಳದ ೨೦೨೪ರ ರಾಜಕೀಯ ಪ್ರಶ್ನೆ ಏನೆಂದರೆ: ಪರ್ವತ ದಿಂದ ಹಿಡಿದು ಸಮುದ್ರದವರೆಗೆ ಗೆಲ್ಲುವವರು ಯಾರು? ಊಹೆ ಮಾಡುವುದು ಅಪಾಯಕಾರಿ. ಆದರೆ ಅಪಾಯದ ಜತೆ ಆಟವಾಡದಿದ್ದರೆ ಅಂಕಣ ಬರೆದಾದರೂ ಏನು ಪ್ರಯೋಜನ? ಪರ್ವತ ಪ್ರದೇಶಗಳು ಮತ್ತು ಅಕ್ಕಪಕ್ಕದ ಊರುಗಳು ನರೇಂದ್ರ ಮೋದಿಯವರ ಜತೆಗಿವೆ. ನದಿಯ ಪೂರ್ವ ಭಾಗಗಳು ಮಮತಾ ಬ್ಯಾನರ್ಜಿಯ ಜತೆಗಿವೆ. ಬಂಗಾಳದ ಇನ್ನುಳಿದ ಕಡೆಗಳಲ್ಲಿ ಜನಾಂಗೀಯ ರಾಜಕಾರಣವೇ ಉತ್ತಮ ಆಡಳಿತಕ್ಕಿಂತ ಹೆಚ್ಚು ಪ್ರಭಾವ ಬೀರುತ್ತದೆ. ಇಲ್ಲಿನ ಲೋಕಸಭೆ ಚುನಾವಣೆಯ ಸಮರವನ್ನು ನೋಡಿದರೆ ರೋಮನ್ ಸಂತ ಸೆನೆಕಾನ ಮಾತು ನೆನಪಾಗುತ್ತದೆ: ‘ಯುದ್ಧದ ಸಮಯದಲ್ಲಿ ಕಾನೂನು ಸುಮ್ಮನಾಗುತ್ತದೆ’.

ಒಂದು ಚಿತ್ರ ಸಾವಿರ ಪದಗಳಿಗೆ ಸಮವಾದರೆ, ಒಂದು ವಾಸ್ತವ ಸಾವಿರ ಕತೆಗಳಿಗೆ ಸಮ. ಪಶ್ಚಿಮ ಬಂಗಾಳದ ಬಿರ್‌ಭೂಮ್‌ನ ರಾಮಪುರಹತ್ ಮೆಡಿಕಲ್
ಕಾಲೇಜು ಮತ್ತು ಭೋಲ್ಪುರದ ಮಹಾಕುಮಾ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹ ಖಾಲಿಯಾಗಿದೆ ಎಂದು ಕೊಲ್ಕತ್ತಾದ ದಿನಪತ್ರಿಕೆಯೊಂದು ಏಪ್ರಿಲ್ ೧೦ರಂದು
ವರದಿ ಮಾಡಿತ್ತು. ಏಕೆ? ನಿಯತವಾಗಿ ‘ರಕ್ತದಾನ’ ಮಾಡುವವರು ಬೇರೆ ಕಡೆ ಬ್ಯುಸಿಯಾಗಿದ್ದಾರೆ. ಎಲ್ಲಿ? ಅದನ್ನು ದಿನಪತ್ರಿಕೆ ಹೇಳಿಲ್ಲ. ಆದರೆ ನನ್ನ ಊಹೆ ಏನೆಂದರೆ, ಅವರು ರಾಜಕೀಯದ ಕೆಲಸಗಳಲ್ಲಿ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ನಿದ್ರಾವಸ್ಥೆಗೆ ಮರಳಿದ ಮೇಲೆ ಅವರು ಮತ್ತೆ ರಕ್ತದ ಮಾರಾಟಕ್ಕೆ ಬರುತ್ತಾರೆ.

ದಿನಪತ್ರಿಕೆಗಳಲ್ಲಿ ಏನೇನೋ ಪ್ರಕಟವಾಗುತ್ತದೆ. ಆದರೆ ಅದರಿಂದ ವೋಟು ಬರುತ್ತದೆಯೇ? ಅಪವಾದಗಳನ್ನು ಬದಿಗಿಡೋಣ. ಈ ಹಿಂದಿನ ಚುನಾವಣೆ ಗಳಂತೆ ಈ ಚುನಾವಣೆಯ ಫಲಿತಾಂಶವೂ ಭಾವನಾತ್ಮಕ ಆಟಗಳ ಬದಲು ಆಡಳಿತದ ಮಾನದಂಡದಿಂದ ನಿರ್ಧರಿಸಲ್ಪಡುತ್ತದೆ ಎಂಬ ವಿಶ್ವಾಸ ನನ್ನದು. ಅಧಿಕೃತ ಅಂಕಿ-ಅಂಶಗಳು ಜ್ಯೋತಿಷಿಯ ಭವಿಷ್ಯಕ್ಕಿಂತ ಅಥವಾ ರಾಜಕೀಯ ವದಂತಿಗಳಿಗಿಂತ ಹೆಚ್ಚು ನಿಖರವಾಗಿರುತ್ತವೆ. ಕಳೆದ ಐದು ವರ್ಷಗಳಲ್ಲಿ ಭಾರತದ ಅಭಿವೃದ್ಧಿ ದರ ಶೇ.೭.೭ನ್ನು ತಲುಪಿದೆ. ಇದು ಜಿ-೨೦ ದೇಶಗಳಲ್ಲೇ ಅತ್ಯಧಿಕ. ನಮ್ಮ ನಂತರದ ಸ್ಥಾನದಲ್ಲಿ ಶೇ.೫.೨ರ ಅಭಿವೃದ್ಧಿ ದರದೊಂದಿಗೆ ಚೀನಾ ಇದೆ. ಭಾರತದಲ್ಲಿ ಈ ಅವಧಿಯಲ್ಲಿ ಜನರ ವೇತನ ಶೇ.೫ರ ನೈಜ ದರದಲ್ಲಿ ವೃದ್ಧಿಯಾಗಿದೆ. ಸರಕಾರಕ್ಕೆ ಬರುವ ಆದಾಯದಲ್ಲಿ ಖರ್ಚು ಮಾಡುವ ಬಂಡವಾಳ ವೆಚ್ಚವನ್ನು ಲೆಕ್ಕಹಾಕಿದರೆ ಶೇಕಡಾವಾರು ಲೆಕ್ಕದಲ್ಲಿ ಅದು ೨೦೧೦ರಲ್ಲಿ ಇದ್ದುದಕ್ಕಿಂತ ದುಪ್ಪಟ್ಟಾಗಿದೆ. ನಮ್ಮ ನಂತರದ ಜನಸಂಖ್ಯೆಯಿರುವ ನಾಲ್ಕು ದೇಶಗಳನ್ನು ಒಟ್ಟು ಸೇರಿಸಿದರೂ ಅದಕ್ಕಿಂತ ಹೆಚ್ಚು ಡಿಜಿಟಲ್ ಪೇಮೆಂಟ್‌ಗಳು ಭಾರತದಲ್ಲಿ ಆಗುತ್ತಿವೆ.

ಯುವಕರಲ್ಲಿ ನಿರುದ್ಯೋಗದ ಸಮಸ್ಯೆ ಮಾತ್ರ ಆತಂಕಕಾರಿಯಾಗಿಯೇ ಇದೆ. ಆದರೆ ಅದು ಕೂಡ ೨೦೧೯ಕ್ಕೆ ಹೋಲಿಸಿದರೆ ಸಾಕಷ್ಟು ಸುಧಾರಿಸಿದೆ. ಇವೆಲ್ಲಕ್ಕಿಂತ ನಿರ್ಣಾಯಕವಾದ ಇನ್ನೊಂದು ಸಂಖ್ಯೆ ಬಹಳ ಸುಲಭವಾಗಿ ಕೈಗೆ ಸಿಗುತ್ತಿದೆ. ಅದೇನೆಂದರೆ, ಸುಮಾರು ೮೦ ಕೋಟಿ ಭಾರತೀಯರು ದೇಶಾದ್ಯಂತ ಯಾವುದೇ ತಾರತಮ್ಯವಿಲ್ಲದೆ ಆಹಾರವನ್ನು ಪಡೆಯುತ್ತಿದ್ದಾರೆ. ಮಹಿಳೆಯರು ಮತದಾನ ಮಾಡಲು ಪ್ರೇರಣೆ ನೀಡುವ ಅತ್ಯಂತ
ಪ್ರಮುಖ ಸಂಗತಿ ಇದು. ೨೦೨೪ರ ಚುನಾವಣೆಯ ಫಲಿತಾಂಶದ ಮೇಲೆ ಗಮನಾರ್ಹ ಪ್ರಭಾವ ಬೀರುವ ಸಂಗತಿಯೂ ಇದೇ ಆಗಿದೆ. ದುರ್ಬಲ ವರ್ಗ ದವರ ಮೂಲಭೂತ ಅಗತ್ಯಗಳನ್ನು ಪೂರೈಸುವ ಸರಕಾರ ಭಾರತೀಯರಿಗೆ ಬೇಕಾಗಿದೆ. ಹೇಗೆ ಬದುಕಬೇಕು ಎಂಬುದನ್ನು ಉಪದೇಶ ಮಾಡುವವರು ಬೇಕಾಗಿಲ್ಲ.

ಶತಶತಮಾನಗಳ ಹಿಂದೆ ಭಾರತೀಯರ ಹೃದಯ ಎಲ್ಲಿತ್ತೋ ಈಗಲೂ ಅಲ್ಲೇ ಇದೆ. ಮತ್ತು ಅದು ಸರಿಯಾದ ಜಾಗದಲ್ಲೇ ಇದೆ. ಏಪ್ರಿಲ್ ೧೨ರಂದು
ಪ್ರಕಟವಾದ ಸಿಎಸ್‌ಡಿಎಸ್-ಲೋಕನೀತಿ ಚುನಾವಣಾ ಪೂರ್ವ ಸಮೀಕ್ಷೆಯು ಭಾರತೀಯರ ಮನಸ್ಸನ್ನು ಸರಿಯಾಗಿ ತೆರೆದಿಡುತ್ತದೆ. ಶೇ.೭೯ರಷ್ಟು ಭಾರತೀಯರು ತಮ್ಮ ದೇಶ ಪ್ರತಿಯೊಂದು ಧರ್ಮಕ್ಕೂ ಸಮಾನವಾಗಿ ಸೇರುತ್ತದೆ ಎಂದು ನಂಬುತ್ತಾರೆ. ೧೦ರಲ್ಲಿ ಎಂಟು ಹಿಂದೂಗಳು ಬಹುತ್ವದಲ್ಲಿ ತಮಗೆ ಆಳವಾದ ನಂಬಿಕೆಯಿದೆ ಎಂದಿದ್ದಾರೆ. ಅಲ್ಪಸಂಖ್ಯಾತರಲ್ಲೂ ಈ ಪ್ರಮಾಣ ಇಷ್ಟೇ ಇದೆ. ಹಳ್ಳಿಗಳಲ್ಲಿ ಶೇ.೭೭ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ನಗರಗಳಲ್ಲಿ ಶೇ.೮೫ರಷ್ಟು ಜನರು ಇದಕ್ಕೆ ಮುದ್ರೆಯೊತ್ತಿದ್ದಾರೆ. ಅಶಿಕ್ಷಿತರು ಮತ್ತು ಸುಶಿಕ್ಷಿತರ ನಡುವೆ ಮಾತ್ರ ಈ ಅಭಿಪ್ರಾಯದಲ್ಲಿ ಸ್ವಲ್ಪ ಹೆಚ್ಚು ವ್ಯತ್ಯಾಸವಿದೆ. ಇದು ನಾಗರಿಕತೆಯ ಚಿತ್ರಣ.

ಇದು ಭಾರತದ ಶ್ರೀಮಂತರು ಹಾಗೂ ಬಡವರು, ಇಲ್ಲಿನ ಪ್ರತಿಯೊಂದು ಧರ್ಮದವರ ಸಿದ್ಧಾಂತ. ಅನಾದಿ ಕಾಲದಿಂದಲೂ ಭಾರತೀಯರಿಗೆ
ಸಾಮರಸ್ಯದಲ್ಲಿ ನಂಬಿಕೆಯಿದೆ. ಭವಿಷ್ಯವನ್ನು ಎಲ್ಲರೂ ಒಟ್ಟಾಗಿ ಕಟ್ಟಿಕೊಳ್ಳುವುದರಲ್ಲಿ ವಿಶ್ವಾಸವಿದೆ. ತಾವೇ ಶ್ರೇಷ್ಠ ಎಂದುಕೊಂಡು ಉಪದೇಶ ಮಾಡುವವರು ಭಾರತದ ಹೃದಯ ಬಡಿತದಿಂದ ತಾವೆಷ್ಟು ದೂರ ಬಂದಿದ್ದೇವೆ ಎಂಬುದನ್ನು ಸದ್ಯದಲ್ಲೇ ತಿಳಿದುಕೊಳ್ಳುತ್ತಾರೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸಿಬಿಡುತ್ತದೆ ಎಂಬ ಕೃತಕ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಖಡಕ್ ಮಾತಿನ ಮೂಲಕ ಇತಿಶ್ರೀ ಹಾಡಿದ್ದಾರೆ. ಏಪ್ರಿಲ್ ೧೩ರಂದು ಬಾಡ್ಮೇರ್‌ನ ಭಾಷಣದಲ್ಲಿ ಅವರು ನೀಡಿದ ಹೇಳಿಕೆಯಿದು: ‘ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಸರಕಾರಕ್ಕೆ ಸಂವಿಧಾನವೇ ಭಗವದ್ಗೀತೆ, ರಾಮಾಯಣ, ಮಹಾಭಾರತ, ಬೈಬಲ್ ಮತ್ತು ಕುರಾನ್ ಇದ್ದಂತೆ’.

ಇತ್ತೀಚೆಗೆ ಸಿಂಗಾಪುರಕ್ಕೊಂದು ಸಣ್ಣ ಭೇಟಿ ನೀಡಿದ್ದೆ. ಸಾಮಾನ್ಯ ಜ್ಞಾನವನ್ನು ಕೂಡ ಸೋಲಿಸುವ ಒಂದು ಸಂಗತಿ ಅಲ್ಲಿ ಪತ್ತೆಯಾಯಿತು. ಕೋವಿಡ್ ಬಂದ ಮೇಲೆ ಸಾಕಷ್ಟು ಸಂಗತಿಗಳು ಇತಿಹಾಸ ಸೇರಿರುವುದು ನಮಗೆ ಗೊತ್ತೇ ಇದೆ. ಅದು ಮನುಷ್ಯರನ್ನು ಮಾತ್ರ ಬಲಿ ಪಡೆದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಏರ್‌ಲೈನ್ಸ್‌ಗಳಲ್ಲಿ ಒಂದು ಎಂಬ ಹೆಸರು ಪಡೆದಿರುವ ಸಿಂಗಾಪುರ ಏರ್‌ಲೈನ್ಸ್ ಈ ಹಿಂದಿನಂತೆ ಈಗ ಇಸ್ಪೀಟ್ ಕಾರ್ಡ್ಸ್ ನೀಡುವುದನ್ನು ನಿಲ್ಲಿಸಿಬಿಟ್ಟಿದೆ. ಕೋವಿಡ್ ಸಮಯದಲ್ಲಿ ಅದರ ಮೂಲಕ ವೈರಸ್ ಹರಡುತ್ತದೆ ಎಂದು ಕಾರ್ಡ್ಸ್ ನಿಲ್ಲಿಸಿದ ಬಳಿಕ ಮತ್ತೆ ಕೊಡುವ
ಗೋಜಿಗೆ ಹೋಗಿಲ್ಲ. ಅದರ ಬದಲು ಜ್ಯಾಪಿ ಹೆಸರಿನ ‘ಅಲ್ಟಿಮೇಟ್ ಆಂಟಿಸೆಪ್ಟಿಕ್ ವೈಪ್ಸ್’ ಅನ್ನು ಪ್ರಯಾಣಿಕರಿಗೆ ನೀಡುತ್ತದೆ. ಜ್ಯಾಪಿ ಕಂಪನಿ ತಮ್ಮ
ವೈಪ್ಸ್ ಯುಕೆ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು, ಶೇ.೯೯.೯೯ ಕೀಟಾಣುಗಳನ್ನು ನಾಶಪಡಿಸುತ್ತವೆ ಎಂದು ಹೇಳಿಕೊಳ್ಳುತ್ತದೆ.

ನನಗೀಗ ಒಂದು ಕುತೂಹಲ ಅಂಟಿಕೊಂಡಿದೆ. ಅನಾಮಧೇಯ ‘ಯುಕೆ ಲ್ಯಾಬ್’ ಹೇಳುವಂತೆ ಜ್ಯಾಪಿ ಕಂಪನಿಯ ವೈಪ್ಸ್‌ಗೂ ಸಿಗದೆ ತಪ್ಪಿಸಿಕೊಳ್ಳುವ ಆ
ಶೇ.೦೦.೦೧ ಕೀಟಾಣು ಯಾವುದು? ಅದು ಈ ಭೂಮಿಯ ಮೇಲಿರುವ ಅತ್ಯಂತ ಶಕ್ತಿಶಾಲಿ ಅಲ್ಪಸಂಖ್ಯಾತನಾಗಿರಬಹುದು. ಬಲಿಷ್ಠವಾದ ‘ಯುಕೆ
ಲ್ಯಾಬ್’ನ ಕಣ್ಣಿಗೂ ಕಾಣದೆ ಅದು ಹಾರಾಡುತ್ತಿದೆ ಅಂದರೆ ಅದು ಇನ್ನೆಂಥಾ ಚಾಲಾಕಿ ಇರಬೇಡ! ಈ ಸಂಸ್ಥೆ ತನ್ನನ್ನು ತಾನು ‘ಲ್ಯಾಬೋರೇಟರಿ’ ಎಂದು ಹೇಳಿಕೊಳ್ಳುವ ಬದಲು ‘ಲ್ಯಾಬ್’ ಎಂದು ಕರೆದುಕೊಂಡಿದೆ. ಸಾಮಾನ್ಯ ಇಂಗ್ಲಿಷ್ ಜ್ಞಾನವಿರುವವರಿಗೆ ಈ ನಿಗೂಢ ಅರ್ಥವಾಗುತ್ತಿಲ್ಲ. ನನ್ನ ಇನ್ನೊಂದು ಗುರಿ ಏನೆಂದರೆ, ಏನಾದರೂ ಮಾಡಿ ‘ಯುಕೆ ಲ್ಯಾಬ್’ನಲ್ಲಿ ಕೆಲಸ ಮಾಡುವ ವಿಜ್ಞಾನಿಗಳನ್ನು ನಾನು ಭೇಟಿ ಮಾಡಲೇಬೇಕು. ಉದ್ದೇಶ ಮತ್ತೇನಿಲ್ಲ, ಅರ್ಥವಿಲ್ಲದ ಶಬ್ದ ಬಳಕೆಗಾಗಿ ಅವರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕಿದೆ. ಇಂಥ ಕೆಲಸಕ್ಕೆ ಬಾರದ ಬುಡಬುಡಿಕೆಗಳನ್ನು ಜಗತ್ತಿನ ಅತ್ಯುತ್ತಮ ಕಾರ್ಪೊರೇಟ್ ಕಂಪನಿಗಳು ಕೂಡ ಏಕೆ ಮತ್ತು ಹೇಗೆ ನಂಬುತ್ತವೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

(ಲೇಖಕರು ಹಿರಿಯ ಪತ್ರಕರ್ತರು)