ಗಂಟಾಘೋಷ
ಗುರುರಾಜ್ ಗಂಟಿ
ನಾವಿಂದು ಸಮರ್ಥ ಸಮಾಜ, ಸಮೃದ್ಧ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಿದೆ. ಯುವಮನಸ್ಸುಗಳು ಅತಿಯಾದ ಮತಾಂಧತೆಗೆ, ಉಗ್ರತನಕ್ಕೆ, ಜಿಹಾದಿ ಮನಸ್ಥಿತಿಗೆ ತೆರೆದುಕೊಳ್ಳದಂತೆ ಎಚ್ಚರ ವಹಿಸಬೇಕಿದೆ. ನನಗೆ ಸಿಗದೇಹೋದರೆ ಇನ್ಯಾರಿಗೂ ಸಿಗಬಾರದು ಎಂಬ ವಿಕೃತ ಮನಸ್ಸುಗಳನ್ನು ದಮನಿಸಬೇಕಿದೆ.
ಬಹುಶಃ ದೇಶದಲ್ಲಿ ಅತಿಹೆಚ್ಚು ಪೊಲೀಸ್ ಪದಕಗಳನ್ನು, ರಾಷ್ಟ್ರಪತಿ ಪುರಸ್ಕಾರಗಳನ್ನು ಪಡೆಯುತ್ತಿದ್ದುದು ನಮ್ಮ ಕರ್ನಾಟಕದ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳು. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಂಥ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ‘ಕ್ರೈಮ್ ರೇಟ್’ ತುಂಬಾ ಕಮ್ಮಿ ಅಥವಾ ಇಲ್ಲವೇ ಇಲ್ಲ ಎನ್ನುವಂತಿತ್ತು ಅಂದಿನ ನಮ್ಮ ಕಾನೂನು-ಸುವ್ಯವಸ್ಥೆ. ಎಂತೆಂಥ ದಕ್ಷ ಅಧಿಕಾರಿಗಳನ್ನು, ಪೊಲೀಸ್ ಪಡೆಯನ್ನು ನಮ್ಮ ನಾಡು
ಕಂಡಿದೆ. ಆದರೀಗ, ‘ಏನಾಗಿದೆ ಈ ರಾಜ್ಯಕ್ಕೆ? ಎಂಬ ವಿಡಂಬನಾತ್ಮಕ ಪ್ರಶ್ನೆಯನ್ನು ನಮ್ಮ ಜನರು ಕೇಳುವಂತಾಗಿದೆ.
ಸುಮಾರು ೮೦-೯೦ರ ದಶಕದಲ್ಲಿ ದಕ್ಷಿಣ ಭಾರತ ಭಾಗದಿಂದ ಪುಣ್ಯಕ್ಷೇತ್ರ ಕಾಶಿಗೆ ಕಾಲ್ನಡಿಗೆಯಲ್ಲಿ ಹೋಗುವ ಒಂದು ಪರಿಪಾಠವಿತ್ತು. ಆ ಸಮಯದಲ್ಲಿ
ಹದಿಹರೆಯದವರ ಪ್ರಯಾಣ ನಿಷಿದ್ಧ. ಕಾರಣ, ದಟ್ಟ ಅರಣ್ಯದಲ್ಲೋ, ಜನರಿಲ್ಲದ ಭಾಗದಲ್ಲೋ ದರೋಡೆಗಳು, ಅನ್ಯಾಯ-ಅತ್ಯಾಚಾರಗಳು ನಡೆಯುವುದು ಸಾಮಾನ್ಯವಾಗಿತ್ತು. ಹಾಗಾಗಿ ವಯಸ್ಸಾದವರು, ‘ನಾವು ಬದುಕಿದರೆ ವಿಶ್ವೇಶ್ವರನ ದರ್ಶನ ಮಾಡುತ್ತೇವೆ, ಇಲ್ಲದಿದ್ದರೆ ಶಿವನ ಪಾದ ಸೇರುತ್ತೇವೆ; ಹೇಗೂ ಕಾಡಿಗೆ ಹೋಗುವ ಸಮಯ, ಹೇಗಾದರೇನಂತೆ?’ ಎನ್ನುತ್ತಿದ್ದರು. ಇದು ಅಂದಿನ ಆ ಭಾಗದ ಕಾನೂನು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು. ಕಾಲ ಬದಲಾದಂತೆ, ರಾಜಕೀಯ ಸ್ಥಿತಿಗತಿಗಳು ಬದಲಾದವು. ಜನರ ಸಾಕ್ಷರತೆ, ಜವಾಬ್ದಾರಿ ಮತ್ತು ಸಾಮಾಜಿಕ ಪ್ರಜ್ಞೆ ಜಾಗೃತವಾದಂತೆ, ನಮಗೆ ಯಾವುದು ಮತ್ತು ಏನು ಅವಶ್ಯವಿದೆ ಎಂಬುದನ್ನು ಸ್ಥಳೀಯರು ಅರಿಯುತ್ತಾ ಬಂದರು.
ತಮ್ಮ ಮನೆಮಕ್ಕಳು ಮತ್ತು ಅವರ ಜೀವ-ಜೀವನ ಬಹುಮುಖ್ಯ ಎಂಬುದನ್ನು ಕಂಡುಕೊಂಡ ಜನರು, ತಮ್ಮ ರಕ್ತರಹಿತ ಮತದಾನ ಕ್ರಾಂತಿಯ ಮೂಲಕ ‘ಯೋಗ್ಯ’ರನ್ನು ಚುನಾಯಿಸುತ್ತಾ ಬಂದರು. ಈ ಮೂಲಕ, ದಟ್ಟ ಕಾಡಿನಲ್ಲಡಗಿದ್ದ ಠಕ್ಕರ ಗುಂಪು, ಕುಖ್ಯಾತ ಚಂಬಲ್ ಕಣಿವೆಯ ಡಕಾಯಿತರು, ಮೀಸೆ ತಿರುವುತ್ತ ಜನವಸತಿಗಳಲ್ಲಿ ತೆರೆದ ಜೀಪುಗಳಲ್ಲಿ ಕೋವಿ ಹಿಡಿದು ಗುಂಡು ಹಾರಿಸುತ್ತ ‘ಡಾನ್’ಗಳಾಗಿ ಮೆರೆಯುತ್ತಿದ್ದವರನ್ನೆಲ್ಲ ಮಣ್ಣಾಗಿಸಿದ ಘಟನೆಗಳು ನಮ್ಮ ಕಣ್ಮುಂದೆಯೇ ಇತಿಹಾಸದ ಪುಟ ಸೇರುತ್ತಿವೆ. ಹಾಗೆಯೇ, ಈ ಭಾಗದ ರಾಜ್ಯಗಳು ಆಧುನಿಕತೆಗೆ, ಬದಲಾವಣೆಗೆ, ಅಭಿವೃದ್ಧಿಯ ಹಾದಿಗೆ ತೆರೆದುಕೊಳ್ಳುತ್ತಿವೆ. ಜನರು ಕಷ್ಟ-ತೊಂದರೆಗಳನ್ನು ಹಂಚಿಕೊಂಡರೆ, ಜಾಲತಾಣಗಳ ಮೂಲಕ ದೂರು, ಸಮಸ್ಯೆಗಳನ್ನು ‘ಟ್ಯಾಗ್’ ಮಾಡಿದರೆ, ಉತ್ತರಪ್ರದೇಶ ಮತ್ತು ಗೋವಾ ರಾಜ್ಯಗಳ ಪೊಲೀಸರು ಕೆಲ ಕ್ಷಣಗಳಲ್ಲಿಯೇ ಸಕಾರಾತ್ಮಕವಾಗಿ ಸ್ಪಂದಿಸುವ, ಕಷ್ಟಕ್ಕೆ ಸಹಾಯಕ ರಾಗಿ ನಿಲ್ಲುವ ಮೂಲಕ ಉತ್ತಮ ಹೆಸರು, ಜನಮನ್ನಣೆ ಗಳಿಸುತ್ತಿದ್ದಾರೆ ಎಂದು ಹಲವು ಘಟನೆಗಳು, ಪತ್ರಿಕಾ ವರದಿಗಳು ಹೇಳುತ್ತಿವೆ.
ಈ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಬಹುಮತದ ಆಧಾರದ ಮೇಲೆ, ಬಹುಸಂಖ್ಯೆಯ ಅಭಿಪ್ರಾಯಗಳ ಮೇಲೆ ತನ್ನ ಕಾರ್ಯವೈಖರಿಯನ್ನು ರೂಪಿಸಿಕೊಂಡು ನಡೆಯುತ್ತಿದೆ. ಅದು ಚುನಾವಣೆ ಇರಬಹುದು ಅಥವಾ ಸದನಗಳಲ್ಲಿ ಕಾನೂನು/ಮಸೂದೆಗಳನ್ನು ಜಾರಿಗೊಳಿಸುವ ಸಂದರ್ಭ ಗಳಿರಬಹುದು, ಈ ಎಲ್ಲ ಪ್ರಕ್ರಿಯೆಗಳು ನಮ್ಮ ಬಹುಮತ ವ್ಯವಸ್ಥೆಗೆ ಸಾಕ್ಷಿಪ್ರಜ್ಞೆಯಾಗಿ ನಿಂತಿವೆ. ವಾಸ್ತವಾಂಶ ಹೀಗಿದ್ದಾಗ, ಸಮಸ್ತ ಜನರ ಮನದಿಂಗಿತ
ಅರಿಯದೇ ಆಡಳಿತ ನಡೆಸುತ್ತ ಹೋದರೆ, ಅವರ ವಿಶ್ವಾಸ ಮತ್ತು ಬೆಂಬಲವನ್ನು ನಿಧಾನವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಇಂದಿನ ವ್ಯವಸ್ಥೆಗಳು ಬಹುಬೇಗ ಅರಿತರೆ ಒಳ್ಳೆಯದು.
ಸರಕಾರವೊಂದು ಅದೆಷ್ಟೇ ಜನಾನುರಾಗಿ ಯೋಜನೆ, ಸ್ಕೀಮು, ಗ್ಯಾರಂಟಿಗಳನ್ನು ಕೊಡುತ್ತ ಬಂದರೂ, ನಮ್ಮ ಸಂವಿಧಾನದಲ್ಲಿ ಮೇಳೈಸಿರುವ ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ತನ್ನ ಆಡಳಿತದಲ್ಲಿ ತರದೇಹೋದಲ್ಲಿ, ಅಕ್ಷರಶಃ ಜನವಿರೋಧಿ ಅಲೆಯನ್ನು ಎದುರಿಸಬೇಕಾಗುತ್ತದೆ. ನಾಡಿನ
ಸಮಸ್ತ ಜನರು (ಮತ ಹಾಕಿದವರು/ಹಾಕದವರು), ಅಲ್ಪ ಸಂಖ್ಯಾತರು, ಬಹುಸಂಖ್ಯಾತರು, ಮೇಲ್ವರ್ಗದವರು, ಕೆಳವರ್ಗದವರು, ಜಾತಿಗಣತಿಯ ಮೂಲಕ ಇನ್ನೂ ಕೆಲವರ ಜಾತಿಗಳನ್ನು ಗುರುತಿಸಿದ ಆ ‘ವರ್ಗ’ದವರಿಗೂ ಈ ಸರಕಾರ ಸೇರಿದ್ದು ಎಂಬ ಸಾಮಾನ್ಯ ಪ್ರಜ್ಞೆ ತಾನಾಗಿಯೇ
ಮೂಡುತ್ತದೆ.
ಸರಕಾರವು ರಾಜ್ಯದ್ದೇ ಇರಲಿ ಕೇಂದ್ರದ್ದೇ ಇರಲಿ, ಸರಕಾರ ಎಂಬ ವ್ಯವಸ್ಥೆ ಇರುವುದೇಕೆ? ಎಂಬ ಪ್ರಶ್ನೆ ಹಾಕಿಕೊಳ್ಳುವ ಅಗತ್ಯವಿಂದು ಎದುರಾಗಿದೆ. ಆಳುಗ ವ್ಯವಸ್ಥೆಯೊಂದು ಕಾಲ ಸರಿದಂತೆ, ತನ್ನನ್ನು ತಾನು ಜನಾನುರಾಗಿ ಸಂಸ್ಥೆಯಾಗಿ, ಒಂದು ಉತ್ತಮ ವ್ಯವಸ್ಥೆಯಾಗಿ ಮಾರ್ಪಡಿಸಿಕೊಂಡು ಗೌರವ ಉಳಿಸಿಕೊಳ್ಳುತ್ತ ಬರಬೇಕಾದುದು ಅದರ ಆದ್ಯಕರ್ತವ್ಯಗಳಲ್ಲೊಂದು. ಆ ವ್ಯವಸ್ಥೆಯ ಚುಕ್ಕಾಣಿ ಹಿಡಿದವರು ಇದನ್ನು ಮರೆಯಬಾರದು. ಟಾಟಾ ಅವರ ಸಿಂಗೂರ್ ನ್ಯಾನೊ ಫ್ಯಾಕ್ಟರಿ ಸ್ಥಾಪನೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಗೆ ಇಳಿದ ಮಮತಾ ಬ್ಯಾನರ್ಜಿ, ಜನರ ಒಲವು ಗಳಿಸಿ ಪಶ್ಚಿಮ ಬಂಗಾಳದ
ಆಡಳಿತದ ಚುಕ್ಕಾಣಿಯನ್ನು ಕಮ್ಯುನಿಸ್ಟರ ಬಿಗಿಮುಷ್ಟಿಯಿಂದ ತಮ್ಮ ತೆಕ್ಕೆಗೆ ತೆಗೆದುಕೊಂಡರು.
ಇದಾದ ನಂತರ ಇವರ ಆಡಳಿತದಡಿ ನಡೆದ, ನಡೆಯುತ್ತಿರುವ ಅನ್ಯಾಯ- ಅತ್ಯಾಚಾರಗಳನ್ನು ಕಂಡು ಸ್ವತಃ ಹೈಕೋರ್ಟ್ ಹಲವು ಬಾರಿ ಛೀಮಾರಿ ಹಾಕಿದೆ. ಮನಮೋಹನ್ ಸಿಂಗ್-ನರಸಿಂಹರಾವ್ ಜೋಡಿ, ಅಂದು ದೇಶವನ್ನು ತಕ್ಕಮಟ್ಟಿಗೆ ಉಸಿರಾಡುವಂತೆ ಮಾಡಿದ್ದ ಮುಕ್ತ ಮಾರುಕಟ್ಟೆ ಮತ್ತು ದೇಶಿ-ವಿದೇಶಿ ಹೂಡಿಕೆ ವ್ಯವಸ್ಥೆಯನ್ನು, ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದ ಮಮತಾ ಬ್ಯಾನರ್ಜಿ ಕಟುವಾಗಿ ವಿರೋಧಿಸಿದ್ದರು. ಹೀಗಿದ್ದರೂ, ಅವರು ಇಂದು ಅದೇ ಪಕ್ಷದ ನೇತೃತ್ವದ ಮೈತ್ರಿಕೂಟದ ಭಾಗವಾಗಿದ್ದಾರೆ.
ಅಂದರೆ, ಇವರಿಗೆ ದೇಶದ ಜನರ ಹಿತದೃಷ್ಟಿ, ಅಭಿವೃದ್ಧಿಯ ವಿಚಾರಗಳಿಗಿಂತ ಆಯಾ ಸಂದರ್ಭಕ್ಕನುಗುಣವಾಗಿ ಸ್ವಹಿತದ ನಿರ್ಧಾರಗಳನ್ನು ತೆಗೆದು ಕೊಳ್ಳುವುದೇ ಮುಖ್ಯ. ಇದರಿಂದಾಗಿ ಪಶ್ಚಿಮ ಬಂಗಾಳವಿಂದು ಅಕ್ರಮವಾಗಿ ಒಳನುಸುಳುವವರಿಗೆ ಹೆಬ್ಬಾಗಿಲಾಗಿ ಮಾರ್ಪಟ್ಟಿದೆ. ಇದು ದೇಶದ ಭದ್ರತೆಗೆ ಎಷ್ಟು ಅಪಾಯಕಾರಿ ಎಂಬುದು ಇವರಿಗೆ ಗೊತ್ತಿದ್ದರೂ, ರಾಜಕೀಯ ಸ್ವಾರ್ಥದಲ್ಲಿ ದೇಶದ ಹಿತ ಮುಚ್ಚಿಹೋಗುತ್ತಿದೆ. ಇನ್ನು, ಪಕ್ಕದ ಕೇರಳದಲ್ಲಿ ಯಂತೂ ‘ಲವ್ ಜಿಹಾದ್’ ಎಂಬ ಒಂದು ವ್ಯವಸ್ಥಿತ ಅಂತಾರಾಷ್ಟ್ರೀಯ ಸಂಚಿನ ಜಾಲ ಬೆಳಕಿಗೆ ಬಂದ ಮೇಲೆ, ಇಡೀ ಮಹಿಳಾ ಸಮುದಾ ಯವೇ ಬೆಚ್ಚಿ ಬೀಳುವಂತಾಗಿದೆ. ನೂರಾರು ಯುವತಿಯರು ಕಣ್ಮರೆಯಾದ ವಿಚಾರವಂತೂ ಎಂಥವರನ್ನೂ ಗಾಬರಿಗೊಳಿಸುವಂಥದ್ದು.
ಐಸಿಸ್‌ನಂಥ ಉಗ್ರ ಸಂಘಟನೆಗಳ ಸಂಪರ್ಕಜಾಲವೂ ಬೆಳಕಿಗೆ ಬಂತು (ಈ ಕುರಿತಂತೆ ಹಲವು ಆಯೋಗಗಳು ಹುಟ್ಟಿಕೊಂಡವು ಎನ್ನಿ). ಇದರೊಟ್ಟಿಗೆ
ಸಾಮಾನ್ಯವೆಂಬಂತೆ, ಜಾತಿ-ಧರ್ಮಾಧಾರಿತ ಗಲಭೆಗಳು, ಹಲ್ಲೆಗಳು, ಹತ್ತು ಹಲವು ಅಮಾನವೀಯ ಘಟನೆಗಳು ಇದೇ ಕೇರಳದಲ್ಲಿ ನಡೆದವು. ಈ ಎಲ್ಲ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡು ಕೇರಳ ಹೈಕೋರ್ಟ್ ಕೂಡ ವಿವಿಧ ಸಂದರ್ಭಗಳ ತೀರ್ಪುಗಳಲ್ಲಿ ಇವುಗಳನ್ನು ಉಲ್ಲೇಖಿಸಿದೆ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆಯನ್ನೂ ಕೊಟ್ಟಿದೆ.
ಹೀಗೆ ಕಾನೂನು-ಸುವ್ಯವಸ್ಥೆ ಆಯಾ ರಾಜ್ಯಗಳ ಪ್ರಮುಖ ಆಡಳಿತಾತ್ಮಕ ಭಾಗಗಳಲ್ಲಿ ಒಂದಾಗಿದ್ದರೂ, ತಮ್ಮದೇ ಜನರ ಸುರಕ್ಷತೆಯ ಬಗ್ಗೆ ಸ್ಥಳೀಯ ಸರಕಾರಗಳು ನಿರ್ಲಕ್ಷ್ಯ ತೋರುವುದೇಕೆ? ಎಂಬುದೇ ಜನಸಾಮಾನ್ಯರ ಪ್ರಶ್ನೆಯಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಶಾಂತಿ, ಸುವ್ಯವಸ್ಥೆ, ಸಾಮಾಜಿಕ ಸಾಮರಸ್ಯಗಳಿಗೇನೂ ಕೊರತೆಯಿರಲಿಲ್ಲ. ಅದರಲ್ಲೂ ಕರ್ನಾಟಕವು ಎಲ್ಲರನ್ನೂ ಒಳಗೊಂಡಂತೆ ಬದುಕು ಕಟ್ಟಿಕೊಡುವುದರಲ್ಲಿ ಸದಾ ಮುಂದು. ದೂರದ ಈಶಾನ್ಯ ಗಡಿರಾಜ್ಯದವರಿರಬಹುದು, ದಿಲ್ಲಿ, ಕೇರಳದಿಂದ ಬಂದಿರುವವರಿರಬಹುದು, ಎಲ್ಲರಿಗೂ ಆಶ್ರಯದಾತನಂತೆ ನಿಂತಿದೆ ಕನ್ನಡ ನಾಡು. ಈ ಮಟ್ಟಿಗಿನ ಸೌಹಾರ್ದ-ಸಂಸ್ಕೃತಿ- ಸಮೃದ್ಧಿಯನ್ನು ಹೊಂದಿರುವ ಕರ್ನಾಟಕಕ್ಕೆ ಇತ್ತೀಚೆಗೆ ಒಂದು ರೀತಿಯ ಮಂಕು ಕವಿದಿದೆಯೇ ಎಂದು ನಮಗೇ ಅನಿಸುತ್ತಿದೆ. ಕಾರಣ, ದಿನಕ್ಕೊಂದು ದುರ್ಘಟನೆ ವರದಿಯಾಗುತ್ತಿದೆ.
ಅದೆಲ್ಲೋ ಮನೆಯ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೋಪಗೊಂಡು, ಗುಂಪುಗೂಡಿ ಮನೆಯ ಮೇಲೆ ದಾಳಿಮಾಡಿದ ರಾಕ್ಷಸ ಪ್ರವೃತ್ತಿಯಿರಬಹುದು,
ಬ್ಯಾನರ್‌ನಲ್ಲಿ ಜಿಹಾದಿ ಬರಹವುಳ್ಳ ಸಾಲುಗಳನ್ನು ರಸ್ತೆ-ವೃತ್ತಗಳಲ್ಲಿ ಪ್ರದರ್ಶಿಸುವುದಿರಬಹುದು, ಕನ್ನಡವರಾಗಿ ಕನ್ನಡ ಮಾತನಾಡಿದರೂ ಪ್ರಾಣಕ್ಕೆ ಪಾಯವಾಗುವ ರೀತಿಯಲ್ಲಿ ನಡೆಯುತ್ತಿರುವ ಹಲ್ಲೆಗಳಿರಬಹುದು, ಬೇರೆ ರಾಜಕೀಯ ಸಿದ್ಧಾಂತಗಳನ್ನು ನಂಬಿ ಆಚರಿಸಿದರೆ ಅಪರಾಧವೆಂದು ಕೇಸು ದಾಖಲಿಸುವ ಘಟನೆಗಳಿರಬಹುದು, ಹನುಮಾನ್ ಚಾಲೀಸ ಕೇಳುವುದೇ ಅಪರಾಧವೆಂದು ಕೇಸು ಹಾಕುವುದಿರಬಹುದು- ಇವೆಲ್ಲವೂ ಜಾತಿ ಮತ್ತು ಧರ್ಮಾಧಾರಿತ, ವಿಘಟನಾತ್ಮಕ, ಪ್ರಾಯೋಜಿತ ಪ್ರಯೋಗಗಳೇ ಆಗಿವೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಪ್ರೀತಿ-ಸ್ನೇಹವೆಂಬುದು ಯಾವಾಗ ಬೇಕಾದರೂ ಘಟಿಸುವಂಥ ಮತ್ತು ಬೇರ್ಪಡುವಂಥ ಸೂಕ್ಷ್ಮ ಸಂಬಂಧವೂ ಹೌದು. ಹಾಗೆಯೇ, ಇಂಥ ಘಟನೆಗಳು ನಡೆದಾಗ, ಸರಕಾರಗಳು ಮತ್ತು ಅದರ ಮಂತ್ರಿಗಳು ಕೊಡುವ ಹೇಳಿಕೆಗಳೂ ಪರಿಗಣನೆಗೆ ಬರುತ್ತವೆ ಎಂಬುದನ್ನು ಆ ಸ್ಥಾನದಲ್ಲಿರುವವರು ಮೊದಲು
ಅರ್ಥಮಾಡಿಕೊಳ್ಳಬೇಕಿದೆ. ನಡೆದ ಘಟನೆಗಳಿಗೆ ಗಂಭೀರವಾಗಿ ಪ್ರತಿಸ್ಪಂದಿಸುವ ಮತ್ತು ನೊಂದವರೂ ನಮ್ಮ ಜನರೇ ಎಂದು ಭಾವಿಸುವ ಸಂವೇದನೆ ಇಂದಿನ ಮಂತ್ರಿವರ್ಯರುಗಳಿಗೆ ಅತ್ಯಗತ್ಯವಾಗಿ ಇರಬೇಕಿದೆ.
ಇನ್ನು, ನನಗೆ ಸಿಗದೇಹೋದರೆ ಇನ್ಯಾರಿಗೂ ಸಿಗಬಾರದು ಎಂಬ ವಿಕೃತ ಮನಸ್ಸುಗಳನ್ನು ನಾವಿಂದು ದಮನಿಸಬೇಕಿದೆ. ಇದರ ಹಿಂದೆ ಅಡಗಿರುವ ನ್ಯೂನತೆಗಳಲ್ಲಿ ಅವರ ಪೋಷಕರ ಪಾತ್ರವೂ ಇರುತ್ತದೆ, ಹಾಗೆಯೇ ಅಸಮತೋಲಿತ ಸಮಾಜದ ಪ್ರಭಾವವೂ ಇರುತ್ತದೆ. ಆದ್ದರಿಂದ ನಾವಿಂದು
ಸಮರ್ಥ ಸಮಾಜ, ಸಮೃದ್ಧ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಿದೆ. ಯುವಮನಸ್ಸುಗಳು ಅತಿಯಾದ ಮತಾಂಧತೆಗೆ, ಉಗ್ರತನಕ್ಕೆ, ಜಿಹಾದಿ ಎಂಬ ಮನೋರೋಗ ಸ್ಥಿತಿಗೆ ತೆರೆದುಕೊಳ್ಳದಂತೆ ನಾವೆಲ್ಲ ಎಚ್ಚರ ವಹಿಸಬೇಕಿದೆ.
ಹಾಗೆಯೇ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸರಕಾರಗಳು ಜನರ, ರಾಜ್ಯದ ಸುರಕ್ಷತೆಯ ಜತೆಗೆ ಆಟವಾಡುವಂಥ ನಡೆಗಳನ್ನು ಮೊದಲು ಬಿಡಬೇಕು. ಚುನಾವಣೆಯಲ್ಲಿ ಇನ್ಯಾರನ್ನೋ ಓಲೈಸಿ ಮತಗಳಿಸುವುದಾದರೆ ಮತ್ತು ಇತರೆ ವೈಯಕ್ತಿಕ ಲಾಭಗಳನ್ನೇ ಇಟ್ಟುಕೊಂಡು ಅಧಿಕಾರ ನಡೆಸುವುದಾದರೆ ಅದು ಎಲ್ಲರ ಸರಕಾರ ಹೇಗಾಗುತ್ತದೆ?! ಆದ್ದರಿಂದ, ಜನರೂ ಇಂಥ ಸರಕಾರಗಳನ್ನು ಸೂಕ್ಷ್ಮವಾಗಿ ಗಮನಿಸುವ, ಮತದಾನದ ಸಮಯದಲ್ಲಿ ತಮ್ಮ ವಿವೇಚನೆಯನ್ನು ‘ಸರಿಯಾಗಿ’ ಬಳಸುವ ಮೂಲಕ ‘ಅಪ್ರಯೋಜಕ’ರನ್ನು ಅಧಿಕಾರದಿಂದ ದೂರವಿಡಬಹುದಾಗಿದೆ.
ದಟ್ಟಕಾಡಿನಲ್ಲಿ ಲಕ್ಷಾಂತರ ಪ್ರಭೇದಗಳ ಪ್ರಾಣಿ- ಪಕ್ಷಿಗಳು ತಮ್ಮದೇ ಆದ ಒಂದು ಚೌಕಟ್ಟಿನೊಳಗೆ ಸಾಧ್ಯವಾದಷ್ಟು ಅನ್ಯೋನ್ಯವಾಗೇ ಬದುಕುತ್ತಿವೆ. ಆದರೆ, ಲೋಕ-ಪರಲೋಕಗಳನ್ನು ಅರಿಯಲು ಶಕ್ಯರಾದ ಮನುಷ್ಯರು, ಜಾತಿ-ಮತ, ಪಂಥ-ಧರ್ಮಗಳನ್ನು ಮೀರಿ ಸಹಜ, ಸಾಮರಸ್ಯಯುತ, ಸಾಮಾನ್ಯ ಜೀವನ ನಡೆಸುವುದನ್ನು ಶತಶತಮಾನ ಕಳೆದರೂ ಕಲಿಯುತ್ತಿಲ್ಲವಲ್ಲಾ? ಎಂಬುದು ಇಂದಿನ ಯಕ್ಷಪ್ರಶ್ನೆಯಾಗಿದೆ ಮತ್ತು ಈ ಪ್ರಶ್ನೆ
ಮುಂದೆಯೂ ಹಾಗೇ ಉಳಿದಿರುತ್ತದೇನೋ ಎಂದು ಭಾಸವಾಗುತ್ತಿದೆ. ಬದುಕು ಅದೆಷ್ಟು ಸುಂದರ ಮತ್ತು ಸರಳವೆಂದರೆ, ಒಮ್ಮೆ ನಿಸ್ವಾರ್ಥ ಮತ್ತು ವಿಶ್ವಾತ್ಮಕ ಪ್ರೀತಿಯನ್ನು ಅನುಭವಿಸಿ ನೋಡಿ, ಮತ್ತೊಬ್ಬರಿಗಾಗಿ ನಮ್ಮ ಇಡೀ ಬದುಕನ್ನೇ ತ್ಯಾಗಮಾಡುವ, ಗಂಧದಂತೆ ತೇಯ್ದು ಮಾಯವಾಗುವ ಅರ್ಪಣಾತ್ಮಕ ಜೀವನ ತೆರೆದುಕೊಳ್ಳುತ್ತದೆ.