Sunday, 15th December 2024

ಐತಿಹಾಸಿಕ ಕೆರೆ ನೀರು ಕಲುಷಿತ: ಸತ್ತು ತೇಲುತ್ತಿವೆ ಮೀನುಗಳು

ರ್ಮಪುರ: ಭಾರಿ ಮಳೆಯಿಂದಾಗಿ 43 ವರ್ಷಗಳ ಬಳಿಕ ಕೋಡಿ ಹರಿದಿದ್ದ ಐತಿಹಾಸಿಕ ಕೆರೆಯಲ್ಲಿ ನೀರು ಕಲುಷಿತಗೊಂಡಿದ್ದು, ಸಾಕಣೆಗೆ ಬಿಡಲಾಗಿದ್ದ ಮೀನುಗಳು ಸತ್ತು ತೇಲುತ್ತಿವೆ.

ಕೆರೆಯಲ್ಲಿ 42 ವರ್ಷಗಳ ಕಾಲ ನೀರು ಇಲ್ಲದೇ ಇದ್ದುದರಿಂದ ಯಥೇಚ್ಛವಾಗಿ ಬಳ್ಳಾರಿ ಜಾಲಿ ಬೆಳೆದಿತ್ತು. ಎರಡು ವರ್ಷಗಳ ಹಿಂದೆ ಉತ್ತಮ ಮಳೆ ಯಾಗಿದ್ದರಿಂದ ಕೆರೆ ತುಂಬ ನೀರು ಸಂಗ್ರಹವಾಗಿತ್ತು. ಆದರೆ ಇದೀಗ ನೀರು ಮಲಿನಗೊಂಡು ಸಮಸ್ಯೆ ತಂದೊಡ್ಡಿದೆ.

ಇಂಗುವಿಕೆ ಹಾಗೂ ಬಿಸಿಲಿನ ತಾಪಕ್ಕೆ ಆವಿಯಾಗಿರುವ ಕಾರಣ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಜತೆಗೆ ಬಳ್ಳಾರಿ ಜಾಲಿಯ ಸೊಪ್ಪು ಸಂಪೂರ್ಣ ಕಳಚಿ ಬಿದ್ದು ನೀರು ಮಲಿನವಾಗಿ ದುರ್ನಾತ ಬೀರುತ್ತಿದೆ. ಇದರಿಂದ ಲಕ್ಷಾಂತರ ಮೀನುಗಳು ಮೃತಪಟ್ಟು ದಡದಲ್ಲಿ ತೇಲಾಡುತ್ತಿವೆ.

ಮೀನುಗಳ ಸಾಕಣೆಯ ಗುತ್ತಿಗೆ ಪಡೆದವರಿಗೆ ಇದರಿಂದ ತೀವ್ರ ನಷ್ಟ ಎದುರಾಗಿದೆ. ದುರ್ವಾಸನೆಯಿಂದ ಎದುರಾಗಿರುವ ತೊಂದರೆಯನ್ನು ನೀಗಿಸಲು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.