Thursday, 12th December 2024

ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ಸ್ಯಾಮ್ಸನ್‌ ಬಳಗ ಸವಾಲು ಇಂದು

ಖನೌ: ಲಖನೌ ಸೂಪರ್‌ಜೈಂಟ್ಸ್ ತಂಡವು ತನ್ನ ತವರಿನಲ್ಲಿ ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.

2008ರ ಚಾಂಪಿಯನ್‌ ರಾಜಸ್ಥಾನ ತಂಡವು ಈ ಋತುವಿನಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೆ.ಎಲ್‌. ರಾಹುಲ್‌ ಪಡೆಯು ಎಂಟು ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿದೆ. ಕೊನೆಯ ಎರಡು ಪಂದ್ಯಗಳನ್ನು ಗೆದ್ದಿರುವ ತಂಡವು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ.

ಮಾರ್ಚ್‌ 24ರಂದು ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ತಂಡವನ್ನು 20 ರನ್‌ಗಳಿಂದ ಮಣಿಸಿದ್ದ ಸಂಜು ಪಡೆ ಮತ್ತೆ ಪಾರಮ್ಯ ಮೆರೆಯುವ ತವಕದಲ್ಲಿದೆ.

ಎದುರಾಳಿ ತಂಡಕ್ಕೆ ಹೋಲಿಸಿದರೆ ರಾಜಸ್ಥಾನ ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದೆ. ಅಸ್ಸಾಂ ಬ್ಯಾಟರ್ ರಿಯಾನ್ ಪರಾಗ್ ತಂಡಕ್ಕೆ ಪ್ರಮುಖ ಅಸ್ತ್ರವಾಗಿದ್ದಾರೆ. 22 ವರ್ಷದ ಅವರು ಏಳು ಇನ್ನಿಂಗ್ಸ್‌ಗಳಲ್ಲಿ 63ರ ಸರಾಸರಿಯಲ್ಲಿ 318 ರನ್‌ ಸೇರಿಸಿ ತಂಡದ ಗರಿಷ್ಠ ಸ್ಕೋರರ್‌ ಆಗಿದ್ದಾರೆ.

ಯಶಸ್ವಿ ಜೈಸ್ವಾಲ್‌ ಫಾರ್ಮ್‌ಗೆ ಮರಳಿರುವುದು ತಂಡದ ಬ್ಯಾಟಿಂಗ್‌ ಶಕ್ತಿಯನ್ನು ಹೆಚ್ಚಿಸಿದೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ 180 ರನ್‌ಗಳ ಗುರಿ ಬೆನ್ನಟ್ಟಿದ್ದ ತಂಡಕ್ಕೆ ಜೈಸ್ವಾಲ್‌ ಆಸರೆಯಾಗಿದ್ದರು. ಅವರು 60 ಎಸೆತಗಳಲ್ಲಿ ಔಟಾಗದೆ 104 ರನ್‌ ಸಿಡಿಸಿ, 9 ವಿಕೆಟ್‌ಗಳ ಸುಲಭ ಜಯವನ್ನು ತಂದುಕೊಟ್ಟಿದ್ದರು.

ಜೋಸ್‌ ಬಟ್ಲರ್‌ ಎರಡು ಶತಕ ಹೊಡೆದಿದ್ದು ಅಮೋಘ ಲಯದಲ್ಲಿದ್ದಾರೆ.

ಅನುಭವಿ ಟ್ರೆಂಟ್ ಬೌಲ್ಟ್, ಅವೇಶ್ ಖಾನ್ ಮತ್ತು ಸಂದೀಪ್ ಶರ್ಮಾ ಎದುರಾಳಿ ತಂಡದ ರನ್‌ ಕಡಿವಾಣಕ್ಕೆ ಅಸ್ತ್ರವಾಗಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಸಂದೀಪ್‌ ಐದು ವಿಕೆಟ್‌ ಗೊಂಚಲು ಸಾಧನೆ ಮೆರೆದಿದ್ದರು.

ಲಖನೌ ತಂಡದ ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ಬರುತ್ತಿಲ್ಲ. ಅನುಭವಿ ಕ್ವಿಂಟನ್‌ ಡಿ ಕಾಕ್‌ ಮತ್ತು ರಾಹುಲ್‌ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಸಾಮಥ್ಯವಿರುವ ಆಟಗಾರರು. ನಿಕೊಲಸ್ ಪೂರನ್ ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್‌ನಿಂದಾಗಿ ಮಧ್ಯಮ ಕ್ರಮಾಂಕವು ಉತ್ತಮವಾಗಿದೆ.