Thursday, 12th December 2024

ಕಾರ್ಮಿಕ ದಿನಾಚರಣೆ: ಒಂದು ಅವಲೋಕನ

ತನ್ನಿಮಿತ್ತ

ಕೆ.ವಿ.ವಾಸು

ಕಾರ್ಮಿಕ ಬಾಂಧವರು ವಿಶ್ವಾದ್ಯಂತ ಮೇ ೧ರಂದು ಕಾರ್ಮಿಕ ದಿನವನ್ನು ಆಚರಿಸುವ ಮೂಲಕ, ಶ್ರಮಿಕ ವರ್ಗದ ಧೀಃಶಕ್ತಿಯನ್ನು ಅನಾವರಣ ಗೊಳಿಸುವುದು ವಾಡಿಕೆಯಾಗಿದೆ. ಕಾರ್ಮಿಕರ ಏಕತೆಯನ್ನು ಪ್ರದರ್ಶಿಸಲು ಕೂಡ ಈ ದಿನಾಚರಣೆ ಒಂದು ವೇದಿಕೆಯಾಗಬಲ್ಲದು.

ಭಾರತದಲ್ಲಿ ಕಾರ್ಮಿಕ ದಿನವನ್ನು ಪ್ರಪ್ರಥಮವಾಗಿ ೦೧.೦೫.೧೯೨೩ರಂದು ಮದ್ರಾಸಿನಲ್ಲಿ (ಇಂದಿನ ಚೆನ್ನೈ) ಆಚರಿಸಲಾಯಿತು. ಕಾರ್ಮಿಕ ಅಥವಾ ಶ್ರಮಿಕ ವರ್ಗ ಇಂದು ಹತ್ತು ಹಲವು ಸಂಕೋಲೆಗಳಿಂದ ಬಂಽಸಲ್ಪಟ್ಟಿದೆ. ದೇಶಾದ್ಯಂತ ತನ್ನ ಕರಾಳಹಸ್ತವನ್ನು ಚಾಚಿರುವ ನಿರುದ್ಯೋಗ ಸಮಸ್ಯೆಯು ಇಡೀ ಕಾರ್ಮಿಕ ವರ್ಗಕ್ಕೆ ನುಂಗಲಾರದ ತುತ್ತಾಗಿದೆ. ಇದರ ಜತೆಗೆ, ಲಾಕ್‌ಔಟ್, ಲೇ ಆಫ್ ಮುಂತಾದ ಉಪಕ್ರಮಗಳು ಕಾರ್ಮಿಕರ ಪಾಲಿಗೆ ವಿಷಮಕಾರಿ ಯಾಗಿ ಪರಿಣಮಿಸಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ೬ನೇ ವೇತನ ಆಯೋಗದ ಶಿಫಾರಸುಗಳನ್ನು ತಮಗೂ ಅನ್ವಯಿಸಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ೧೫ ದಿನಗಳ ಮುಷ್ಕರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ರೀತಿಯ ಮುಷ್ಕರಗಳು ದೇಶಾದ್ಯಂತ ನಡೆಯುತ್ತಲೇ ಇರುತ್ತವೆ. ಕಾರಣ, ಕಾರ್ಮಿಕ ಬಾಂಧವರು ಎಂದಿಗಿಂತ ಹೆಚ್ಚಿನ ರೀತಿಯ ಕಷ್ಟ-ನಷ್ಟಗಳಿಗೆ ತುತ್ತಾಗಿ ಒಂದು ರೀತಿಯ ಅತಂತ್ರದ ಬದುಕನ್ನು ಸಾಗಿಸುತ್ತಿದ್ದಾರೆ. ಕೆಲವು ಕಾರ್ಮಿಕ ಕಾನೂನುಗಳಿಗೆ ಇತ್ತೀಚೆಗೆ ತರಲಾದ ತಿದ್ದುಪಡಿಗಳು ದುಡಿಯುವ ವರ್ಗಕ್ಕೆ ಮಾರಕವಾಗಿವೆ.

ಸರಿಸುಮಾರು ೧ ವರ್ಷಕ್ಕಿಂತ ಹೆಚ್ಚು ಕಾಲ ಭಾರತ ಸೇರಿದಂತೆ ಇಡೀ ವಿಶ್ವವನ್ನೇ ಕಾಡಿದ ಕೊರೋನಾ ಪಿಡುಗು ಕಾರ್ಮಿಕರ ಪಾಲಿಗಂತೂ ನುಂಗಲಾರದ ತುತ್ತಾಗಿ ಪರಿಣಮಿಸಿತು. ಕೊರೋನಾ ಸೋಂಕನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ಗೆ ಶರಣಾಗಿ ದ್ದನ್ನು/ಶರಣಾಗುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ೧೪ ದಿನಗಳ ಕ್ಲೋಸ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಮಿಕ್ಕೆಲ್ಲರಿಗಿಂತ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಹೊಡೆತ ಬಿದ್ದಿತು ಎಂದರೆ ತಪ್ಪಾಗಲಾರದು.

ರಸ್ತೆಬದಿ ವ್ಯಾಪಾರಿಗಳು, ತಳ್ಳುಗಾಡಿಗಳಲ್ಲಿ ಹೂವು- ಹಣ್ಣು-ತರಕಾರಿ ಮಾರುವವರು, ರಸ್ತೆ ಬದಿಯಲ್ಲಿ ಕ್ಯಾಂಟೀನ್ ಇತ್ಯಾದಿ ನಡೆಸುವವರು ಹೀಗೆ ಅಸಂಘಟಿತ ವಲಯದಲ್ಲಿ ಕಾರ್ಮಿಕರ ದೊಡ್ಡ ಗುಂಪೇ ಇದೆ. ದೇಶದಲ್ಲಿ ನೂರಾರು ಕಾರ್ಖಾನೆಗಳು ಮುಚ್ಚುತ್ತಿವೆ, ತೆರೆದಿರುವ ಕಾರ್ಖಾನೆಗಳಲ್ಲಿ ಕೂಡ ಉತ್ಪಾದನೆ ಕುಂಠಿತವಾಗುತ್ತಿದೆ. ಇದರ ನೇರ ಪರಿಣಾಮವನ್ನು ಕಾರ್ಮಿಕರು ಎದುರಿಸಬೇಕಾಗಿ ಬಂದಿದೆ. ಸಂಘಟಿತ ವಲಯದ ಕಾರ್ಮಿಕರಿಗೆ ಸರಕಾರ ಮತ್ತು ಕಾರ್ಖಾನೆಯ ಮಾಲೀಕರಿಂದ ಕೆಲವು ಸೌಲಭ್ಯಗಳು ದೊರಕುತ್ತಿವೆಯಾದರೂ, ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಗೋಳನ್ನು ಕೇಳುವವರೇ ಇಲ್ಲವಾಗಿದೆ.

ದೇಶಾದ್ಯಂತ ಹಂಗಾಮಿ ಕಾರ್ಮಿಕರಾಗಿ, ದಿನಗೂಲಿ ನೌಕರರಾಗಿ ಲಕ್ಷಾಂತರ ಮಂದಿ ಕೆಲಸ ಮಾಡುತ್ತಿದ್ದಾರೆ. ಸ್ನಾತಕೋತ್ತರ ಪದವಿ ಪಡೆದವರು ಕೂಡ ಹಂಗಾಮಿ ಉಪನ್ಯಾಸಕರಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇವರಿಗೆ ಯಾವುದೇ ರೀತಿಯ ಸೌಲಭ್ಯವೂ ಇಲ್ಲ. ಮತ್ತೆ ಕೆಲವರಿಗೆ ಒಂದು ಸೌಲಭ್ಯ ಸಿಕ್ಕರೆ ಮತ್ತೊಂದು ಸಿಗಲಾರದು. ಹಾಗಂತ ಇರುವ ಕೆಲಸವನ್ನು ಬಿಟ್ಟು ಬಾಯಿಗೆ ಮಣ್ಣುಹಾಕಿಕೊಳ್ಳಲು ಇವರಿಗೆ ಇಷ್ಟವಿಲ್ಲ; ಹಾಗೋ ಹೀಗೋ ಅದಕ್ಕೇ ಜೋತುಬಿದ್ದಿರುತ್ತಾರೆ. ಮಹಿಳೆಯರು ಕೂಡ ‘ಆಶಾ’ ಮತ್ತು ‘ಅಂಗನವಾಡಿ’ ಕಾರ್ಯಕರ್ತೆಯರಾಗಿ ಪುರುಷರಿಗೆ ಸರಿಸಮನಾಗಿ, ಮೂಗಿಗೆ ಕವಡೆ ಕಟ್ಟಿ ಕೊಂಡವರ ಹಾಗೇ ದುಡಿಯುತ್ತಿದ್ದಾರೆ.

ಇವರಿಗೆ ಬರುವ ಅಲ್ಪವೇತನದಲ್ಲಿ ಮನೆಯ ಎಲ್ಲಾ ಸದಸ್ಯರ ತುತ್ತಿನ ಚೀಲ ತುಂಬಿಸಬೇಕಾದ ದಾರುಣ ಪರಿಸ್ಥಿತಿ ಎಷ್ಟೋ ಕುಟುಂಬಗಳಲ್ಲಿದೆ. ಸರಕಾರಿ
ಒಡೆತನದ ಅನೇಕ ಕಾರ್ಖಾನೆಗಳು ಖಾಸಗೀಕರಣದ ಹೆಸರಲ್ಲಿ ಖಾಸಗಿಯವರ ಪಾಲಾಗುತ್ತಿವೆ. ಭಾರತೀಯ ನೌಕರ ಇಂದು ಅತ್ಯಂತ ಅಗ್ಗಕ್ಕೆ ಸಿಗುವ
ವಸ್ತುವಾಗಿಬಿಟ್ಟಿದ್ದಾನೆಂಬುದು ನಂಬಲೇಬೇಕಾದ ಘೋರಸತ್ಯ. ಹಾಗಂತ, ಕಾರ್ಮಿಕರು ಮಾಡುವುದೆಲ್ಲಾ ಸರಿ ಎಂದು ನಾನು ಹೇಳುವುದಿಲ್ಲ. ಅಶಿಸ್ತು, ಸೋಮಾರಿತನ, ಅವಿಧೇಯತೆ ಮುಂತಾದ ಅವಗುಣಗಳಿಂದ ಕಾರ್ಮಿಕರು ಹೊರಬರಬೇಕಾಗಿದೆ. ಹಕ್ಕುಗಳಿಗಾಗಿ ಹೋರಾಡುವ ಅವರು ತಮ್ಮ
ಕರ್ತವ್ಯಗಳನ್ನೂ ಮರೆಯಬಾರದು. ಎಷ್ಟೋ ಕಾರ್ಖಾನೆಗಳಲ್ಲಿ ಕಾರ್ಮಿಕರ ಅಶಿಸ್ತು ಮತ್ತು ಬೇಜವಾಬ್ದಾರಿಯಿಂದಾಗಿ ಉತ್ಪಾದನೆ ಕುಂಠಿತಗೊಳ್ಳು ತ್ತಿರುವ ನಿದರ್ಶನಗಳಿವೆ.

ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ಕೊಡುವುದು, ಉತ್ಪಾದನೆಯನ್ನು ಕುಂಠಿತಗೊಳಿಸುವುದು, ಮಾಲೀಕರ ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟುವುದು, ಕಾರ್ಮಿಕ ಸಂಘಟನೆಯ ಹೆಸರಿನಲ್ಲಿ ಕೆಲಸದ ಸ್ಥಳಗಳಲ್ಲಿ ಅರಾಜಕತೆಯನ್ನು ಸೃಷ್ಟಿಸುವುದು ಮುಂತಾದ ಪರಿ
ಪಾಠಗಳಿಂದ ಕಾರ್ಮಿಕರು ಹೊರಬರಬೇಕಾಗಿದೆ. ಎಷ್ಟೋ ಕಾರ್ಖಾನೆಗಳಲ್ಲಿ ಕಾರ್ಮಿಕರು ಮತ್ತು ಮಾಲೀಕರ ನಡುವೆ ಸೌಹಾರ್ದಯುತ ಸಂಬಂಧವಿದೆ. ಕೆಲವು ಕಾರ್ಖಾನೆಗಳಲ್ಲಿ ಕಾರ್ಮಿಕರ ದಿನ, ರಾಜ್ಯೋತ್ಸವ ಮುಂತಾದವುಗಳನ್ನು ಆಡಳಿತ ವರ್ಗ ಮತ್ತು ಕಾರ್ಮಿಕ ವರ್ಗ ಒಗ್ಗೂಡಿ ಆಚರಿಸಿರುವ ಉದಾಹರಣೆಗಳಿವೆ.

ಮಾಲೀಕರು ಮತ್ತು ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದ್ದರೆ ಎರಡೂ ವರ್ಗಕ್ಕೂ ಕ್ಷೇಮ. ಆದರೂ, ಖಾಸಗಿ ವಲಯದಲ್ಲಿ ಕಾರ್ಮಿಕರ ಶೋಷಣೆ ಹೆಚ್ಚಿನ ರೀತಿಯಲ್ಲಿ ನಡೆಯುತ್ತದೆ. ಇಂದು ಬಹುತೇಕ ಕಾರ್ಮಿಕರನ್ನು ಅಭದ್ರತೆ ಹೆಚ್ಚಿನ ರೀತಿಯಲ್ಲಿ ಕಾಡುತ್ತದೆ. ಇಂದು ಕೆಲಸದಲ್ಲಿ ಇದ್ದವನು ನಾಳೆಯೂ ಇರುತ್ತಾನೆ ಎಂಬ ಯಾವ ಭರವಸೆಯೂ ಇಲ್ಲ. ಬೆಂಗಳೂರು, ಮುಂಬೈಯಂಥ ಮಹಾ ಮತ್ತು ಮಾಯಾನಗರಿಗಳ ಸಾಫ್ಟ್ ವೇರ್ ಕಂಪನಿ ಗಳಲ್ಲಿ ಲಕ್ಷಾಂತರ ರುಪಾಯಿ ಸಂಬಳ ಪಡೆಯುವ ಅಧಿಕಾರಿಗಳನ್ನು ಕೂಡ ಕೆಲಸದ ಅಭದ್ರತೆ ಬೆಂಬಿಡದೇ ಕಾಡುತ್ತಿದೆ ಎಂದರೆ ಇದರ ತೀವ್ರತೆಯನ್ನು ನೀವೇ ಊಹಿಸಿಕೊಳ್ಳಿ.

ಕಾರ್ಮಿಕ ದಿನವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುವ ಮನಸ್ಥಿತಿ ಇಂದು ಯಾವುದೇ ಕಾರ್ಮಿಕನಲ್ಲಿ ಉಳಿದಿಲ್ಲವೆಂದು ಹೇಳಬಹುದು. ಆದರೂ ಈ ಶುಭಸಂದರ್ಭದಲ್ಲಿ ದೇಶದ ಎಲ್ಲಾ ಕಾರ್ಮಿಕರ ಸ್ಥಿತಿಗತಿಗಳು ಸುಧಾರಿಸಲಿ ಮತ್ತು ಅವರ ಬದುಕು ಹಸನಾಗಲಿ ಎಂದು ಹಾರೈಸೋಣ.

(ಲೇಖಕರು ವಕೀಲರು ಮತ್ತು ನೋಟರಿ)