ಕೊಲ್ಹಾರ: ಸತಿಪತಿಯರಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಸಂಸಾರ ನೌಕೆ ಸರಾಗವಾಗಿ ಸಾಗುತ್ತದೆ ಎಂದು ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಬಿಜೆಪಿ ಮುಖಂಡ ಟಿ.ಟಿ ಹಗೇದಾಳ ಹಾಗೂ ಸಹೋದರ ಲಕ್ಷಣ ಹಗೇದಾಳ ಸಹೋದರರ 25 ನೇಯ ವರ್ಷದ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಆಸಂಗಿ ರಸ್ತೆಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಜಿಗಳ ವೃತ್ತ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಸನಾತನ ಪರಂಪರೆಯಲ್ಲಿ ದಾಂಪತ್ಯಕ್ಕೆ, ಕೂಡೂಕುಟುಂಬಕ್ಕೆ ಅಪಾರ ಮಹತ್ವವಿದೆ. ದಾಂಪತ್ಯ ಜೀವನ ಸರಾಗವಾಗಿ ಸಾಗಲು ಸಂಸ್ಕಾರ, ಹೊಂದಾಣಿಕೆ ಅಗತ್ಯವಾಗಿರುತ್ತದೆ, ನಾವುಗಳು ಆದರ್ಶ ಪ್ರಾಯರಾಗಿ ಬದುಕುವ ಮೂಲಕ ಯುವ ಸಮೂಹಕ್ಕೆ ದಾಂಪತ್ಯ ಜೀವನದ ಮಹತ್ವವನ್ನು ಪ್ರಚೂರ ಪಡಿಸಬೇಕು ಎಂದರು.
ಗಿರಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಮಾತನಾಡುತ್ತಾ ವೈದಿಕ ಪರಂಪರೆಯಲ್ಲಿ “ಯಂತ್ರ ನಾರ್ಯಸ್ತು, ಪೂಜ್ಯಂತೆ, ರಮಂತೆ ತತ್ರ ದೇವತಾಹ” ಎನ್ನುವ ಮೂಲಕ ಎಲ್ಲಿ ಮಹಿಳೆಯರ ಆರಾಧನೆ ನಡೆಯುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಸಂಸ್ಕೃತ ಶ್ಲೋಕದಂತೆ ಹಿಂದು ಧರ್ಮದಲ್ಲಿ ಮಹಿಳೆಯರನ್ನು ದೇವತೆಗಳ ಸ್ಥಾನ ನೀಡಲಾಗಿದೆ ಜೊತೆಗೆ ಗೃಹಸ್ತಾಶ್ರಮಕ್ಕೆ ಸನಾತನ ಧರ್ಮದಲ್ಲಿ ಪ್ರಾಥಮಿಕ ಆದ್ಯತೆ ನೀಡಲಾಗಿದೆ ಎಂದರು.
ಸತಿ ಪತಿಗಳು ಕಾಯಕ ಹಾಗೂ ದಾಸೋಹ ಪದ್ದತಿಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅದು ಇತರರಿಗೆ ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಬೆಳ್ಳುಬ್ಬಿ ಹಿರೇಮಠದ ಈರಯ್ಯ ಹಿರೇಮಠ, ಟಿ.ಟಿ ಹಗೇದಾಳ ಗೀತಾ ಹಗೇದಾಳ, ಲಕ್ಷಣ ಹಗೇದಾಳ ಶೋಭಾ ಹಗೇದಾಳ ದಂಪತಿಗಳು ಹಾಗೂ ಇನ್ನಿತರು ಇದ್ದರು.