Sunday, 15th December 2024

ಚುನಾವಣೆಯ ನೆನಪಲ್ಲಿ ಸನ್ನಡತೆಯ ಕತ್ತು ಹಿಸುಕಬೇಡಿ !

ಸಂಗತ

ಡಾ.ವಿಜಯ್ ದರಡಾ

ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಎಷ್ಟೊಂದು ರಾಜಕಾರಣಿಗಳ ನಾಲಿಗೆ ಶಿಷ್ಟಾಚಾರವನ್ನೇ ಮರೆತುಬಿಟ್ಟಿದೆ. ಎಲ್ಲವನ್ನೂ ಸರ್ವನಾಶ ಮಾಡುವ ಸುಂಟರಗಾಳಿಯಂತೆ ಅವರ ಮಾತು ಅಬ್ಬರಿಸುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ರಾಜಕೀಯ ನಿಲುವುಗಳಲ್ಲಿ ವ್ಯತ್ಯಾಸವಿರುವುದು ತುಂಬಾ ಸಹಜ. ಆದರೆ ಅದು ವೈಷಮ್ಯವಾಗಬಾರದು. ಎಲ್ಲರೂ ಪರಸ್ಪರರನ್ನು ಸ್ನೇಹದಿಂದ ಕಾಣಬೇಕು.

ಲೋಕಸಭೆ ಚುನಾವಣೆ ನಡೆಯುತ್ತಿದೆ. ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ನಮಗೆಲ್ಲರಿಗೂ ಗೊತ್ತಿದೆ. ಪ್ರಚಾರ ಮಾಡುವಾಗ ಧಾರ್ಮಿಕ ಚಿಹ್ನೆಗಳನ್ನು ಬಳಸುವಂತಿಲ್ಲ. ಧರ್ಮದ ಆಧಾರದಲ್ಲಿ ಮತ ಕೇಳುವಂತಿಲ್ಲ. ಜಾತಿ ಹಾಗೂ ಪಂಥದ ಹೆಸರಿನಲ್ಲೂ ಪ್ರಚಾರ ಮಾಡು ವಂತಿಲ್ಲ. ಜನರ ಮಧ್ಯೆ ದ್ವೇಷ ಅಥವಾ ತಾರತಮ್ಯ ಭಾವನೆಯನ್ನು ಹುಟ್ಟುಹಾಕುವ ರೀತಿಯಲ್ಲಿ ಭಾಷಣ ಮಾಡುವುದು ನಿಷಿದ್ಧವಾಗಿದೆ. ದ್ವೇಷ ಭಾಷಣಕ್ಕೆ ಅವಕಾಶ ಇಲ್ಲ. ಇದು ಚುನಾವಣಾ ಆಯೋಗದ ನಿಯಮ.

ಆದರೆ ನಿಜವಾಗಿಯೂ ಪ್ರಚಾರದ ಕಣದಲ್ಲಿ ಆಗುತ್ತಿರುವುದು ಏನು? ಇದು ಎಲ್ಲರಿಗೂ ಗೊತ್ತಿರುವ ರಹಸ್ಯ. ರಾಜಕಾರಣಿಗಳು ತಮ್ಮ ನಾಲಗೆಯನ್ನು ಅನಿಯಂತ್ರಿತವಾಗಿ ಹರಿಬಿಡುತ್ತಿದ್ದಾರೆ. ಎಲ್ಲವನ್ನೂ ನಾಶಮಾಡುವ ಸುಂಟರಗಾಳಿಯಂತೆ ಅವರ ಮಾತು ಅಬ್ಬರಿಸುತ್ತಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ಪಕ್ಷಗಳು ಪರಸ್ಪರರ ಆಡಳಿತ ವೈಖರಿ ಹಾಗೂ ನೀತಿ-ಸಿದ್ಧಾಂತಗಳನ್ನು ಟೀಕಿಸುವುದು ಸಾಮಾನ್ಯವೇ ಆಗಿದ್ದರೂ, ಪರಸ್ಪರರ ಮೇಲೆ ಆಕ್ಷೇಪಾರ್ಹವಾದ ರೀತಿಯಲ್ಲಿ ಹೇಯ ಆರೋಪಗಳನ್ನು ಮಾಡುವುದು ಖಂಡಿತ ಸ್ವೀಕಾರಾರ್ಹವಲ್ಲ.

ದುರದೃಷ್ಟವಶಾತ್ ಈಗ ಆಗುತ್ತಿರುವುದು ಅದೇ. ಈ ಬೆಳವಣಿಗೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ತಳಪಾಯಕ್ಕೇ ದೊಡ್ಡ ಹಾನಿ ಉಂಟುಮಾಡುತ್ತಿದೆ.
ಚುನಾವಣಾ ಆಯೋಗವೇ ಬಿಡುಗಡೆ ಮಾಡಿದ ದತ್ತಾಂಶಗಳ ಪ್ರಕಾರ ಕಳೆದೊಂದೇ ವಾರದಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿ ದಂತೆ ೨೦೦ಕ್ಕೂ ಹೆಚ್ಚು ದೂರುಗಳು ಬಂದಿವೆ. ಅವುಗಳ ಪೈಕಿ ೧೬೯ ಪ್ರಕರಣಗಳಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಒಟ್ಟು ದಾಖಲಾದ ದೂರುಗಳ ಪೈಕಿ ಬಿಜೆಪಿಯ ವಿರುದ್ಧವೇ ೫೧ ದೂರುಗಳಿವೆ. ಅವುಗಳಲ್ಲಿ ೩೮ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷ ೫೯ ದೂರುಗಳನ್ನು
ದಾಖಲಿಸಿದೆ. ಅವುಗಳ ಪೈಕಿ ೫೧ ದೂರುಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಬೇರೆ ರಾಜಕೀಯ ಪಕ್ಷಗಳು ೯೦ ದೂರುಗಳನ್ನು ಸಲ್ಲಿಸಿವೆ.

ಅವುಗಳ ಪೈಕಿ ೮೦ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ಚುನಾವಣಾ ಆಯೋಗದ ಅಂಕಿ-ಅಂಶ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಚುನಾವಣಾ ಪ್ರಚಾರದ ಸಮಯದಲ್ಲಿ ನಮ್ಮ ರಾಜಕಾರಣಿಗಳು ಭಾಷೆಯನ್ನು ಎಷ್ಟೊಂದು ಹಾಳುಮಾಡಿದ್ದಾರೆಂದರೆ ಅವರಾಡಿದ ಪದಗಳನ್ನು ಈ ಅಂಕಣದಲ್ಲಿ ಬಳಸುವುದಕ್ಕೂ ನನಗೆ ಇಷ್ಟವಿಲ್ಲ. ಬಾಲ್ಯದಿಂದಲೂ ನಾನು ರಾಜಕಾರಣವನ್ನು ಗಮನಿಸುತ್ತಾ ಬಂದವನು. ರಾಜಕೀಯದಲ್ಲಿ ಸಾರ್ವತ್ರಿಕವಾಗಿ ಸ್ವೀಕಾರಾರ್ಹವಾದ ಒಂದು ಮಾದರಿಯಿದೆ. ಅದನ್ನು ನನ್ನ ರಾಜಕೀಯ ಜೀವನದಲ್ಲೂ ಅಳವಡಿಸಿಕೊಂಡಿದ್ದೇನೆ. ಇಲ್ಲಿ ಎರಡು
ಸಂಗತಿಗಳು ನೆನಪಾಗುತ್ತಿವೆ.

ಒಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ಬರುವವರಿದ್ದರು. ಅಲ್ಲಿ ಅವರು ನನ್ನ
ತಂದೆ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ದರಡಾ ಅಲಿಯಾಸ್ ಬಾಬುಜಿ ವಿರುದ್ಧ ಪ್ರಚಾರ ಮಾಡಬೇಕಿತ್ತು. ಆ ಕಾಲದಲ್ಲಿ ದೊಡ್ಡ ದೊಡ್ಡ ನಾಯಕರು ಕೂಡ ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಊರಿಗೆ ಬಂದ ಮೇಲೆ ತಮ್ಮ ಪಕ್ಷದ ಯಾವುದಾದರೂ ಕಾರ್ಯಕರ್ತರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ರೈಲು ಇಳಿದ ಮೇಲೆ ನಿಗದಿತ ಸ್ಥಳಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಆ ಕಾಲದಲ್ಲಿ ಕಾರುಗಳ ಸಂಖ್ಯೆ ಕೂಡ ಕಡಿಮೆ ಯಿತ್ತು.

ಅಟಲ್ ಬಿಹಾರಿ ವಾಜಪೇಯಿ ಅವರನ್ನು ರೈಲ್ವೆ ನಿಲ್ದಾಣದಿಂದ ಕರೆತರಲು ಸ್ಥಳೀಯ ನಾಯಕರು ಕಾರಿನ ವ್ಯವಸ್ಥೆ ಮಾಡಿದ್ದರು. ಧಮನ್‌ಗಾಂವ್ ರೈಲ್ವೆ ನಿಲ್ದಾಣದಿಂದ ಅವರನ್ನು ಯವತ್ಮಾಲ್ ಗೆ ಕಾರಿನಲ್ಲಿ ಕರೆತರಬೇಕಿತ್ತು. ಆದರೆ ಧಮನ್‌ಗಾಂವ್‌ಗೆ ಹೋಗುವುದಕ್ಕೂ ಮೊದಲೇ ಅವರನ್ನು ಕರೆತರ ಬೇಕಿದ್ದ ಕಾರು ಕೆಟ್ಟುಹೋಯಿತು. ವಾಜಪೇಯಿ ದೊಡ್ಡ ನಾಯಕರು. ಅವರು ರೈಲ್ವೆ ನಿಲ್ದಾಣದಲ್ಲಿ ಕಾಯುವಂತಾಗಬಾರದಲ್ಲ! ಪಾಪ, ಅವರ ಪಕ್ಷದ ಕಾರ್ಯಕರ್ತರು ಕಳವಳಕ್ಕೆ ಬಿದ್ದರು. ನಂತರ ಬಾಬುಜೀಯವರನ್ನು ಸಂಪರ್ಕಿಸಿ, ಹೀಗೆ ತಮ್ಮ ಕಾರು ಕೆಟ್ಟುಹೋಗಿದೆ, ಏನು ಮಾಡುವುದೋ ತಿಳಿಯುತ್ತಿಲ್ಲ ಎಂದು ಹೇಳಿದರು. ರೈಲು ಇನ್ನು ಹದಿನೈದೇ ನಿಮಿಷದಲ್ಲಿ ಧಮನ್ ಗಾಂವ್‌ಗೆ ಬರಲಿತ್ತು.

ಹೀಗಾಗಿ ತುರ್ತಾಗಿ ಅವರಿಗೆ ಸಹಾಯ ಬೇಕಿತ್ತು. ಬಾಬುಜೀಯವರನ್ನು ಎಲ್ಲರೂ ಪ್ರೀತಿಯಿಂದ ಭಯ್ಯಾಜಿ ಎಂದು ಕರೆಯುತ್ತಿದ್ದರು. ‘ಭಯ್ಯಾಜಿ, ನೀವೇ
ಏನಾದರೂ ಮಾಡಬೇಕು’ ಎಂದು ಸ್ಥಳೀಯ ಮುಖಂಡರು ಅಲವತ್ತುಕೊಂಡರು. ಆಗ ತಂದೆಯವರು ಅವರಿಗೆ ಅಭಯ ನೀಡಿ, ‘ಏನೂ ಹೆದರಬೇಡಿ. ಇನ್ನೊಂದು ಕಾರಿನ ವ್ಯವಸ್ಥೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು. ತಕ್ಷಣ ಅವರು ಬಿರ್ಲಾ ಜಿನ್ನಿಂಗ್ ಮಿಲ್‌ನ ಭಟ್ಟಾದ್‌ಜಿ ಅವರನ್ನು ಸಂಪರ್ಕಿಸಿ
ಒಂದು ಕಾರು ಕಳುಹಿಸುವಂತೆ ಮನವಿ ಮಾಡಿದರು. ಅಟಲ್ ಜೀಯವರಿಗಾಗಿ ಬಾಬುಜಿ ಕಾರಿನ ವ್ಯವಸ್ಥೆ ಮಾಡಬೇಕೆಂದು ಕೇಳುತ್ತಿದ್ದಾರೆಂದು ಎಲ್ಲರಿಗೂ ಆಶ್ಚರ್ಯವಾಗಿತ್ತು.

ಯಾವುದಕ್ಕೂ ಇರಲಿ ಎಂದು ತಂದೆಯವರು ಹತ್ತಿ ಬಿಸಿನೆಸ್ ನಲ್ಲಿದ್ದ ಸ್ನೇಹಿತ ಜೈರಾಮ್‌ದಾಸ್ ಭಾಗಚಂದ್ ಅವರನ್ನೂ ಸಂಪರ್ಕಿಸಿ ಇನ್ನೊಂದು ಕಾರು ಕಳುಹಿಸುವಂತೆಯೂ ಮನವಿ ಮಾಡಿದರು. ಅದರಂತೆ ಎರಡೂ ಕಾರುಗಳು ಧಮನ್‌ಗಾಂವ್ ರೈಲ್ವೆ ನಿಲ್ದಾಣವನ್ನು ತಲುಪಿದವು. ಅಟಲ್‌ಜೀಯವರು ರೈಲಿನಿಂದ ಇಳಿದು ನೋಡಿದರೆ ಅಲ್ಲಿ ಎರಡು ಕಾರುಗಳು ನಿಂತಿವೆ! ಏಕೆ ಎರಡೆರಡು ಕಾರು ತರಿಸಿದ್ದೀರಿ ಎಂದು ತಮ್ಮ ಪಕ್ಷದ ಮುಖಂಡರನ್ನು ಕೇಳಿದರು. ಅವುಗಳನ್ನು ದರಡಾಜೀ ಕಳುಹಿಸಿದ್ದಾರೆ ಎಂಬ ಉತ್ತರ ಬಂತು. ಯಾವುದಾದರೂ ಒಂದು ಕಾರು ಕೆಟ್ಟುಹೋದರೆ ಇನ್ನೊಂದು ಕಾರು
ಉಪಯೋಗಕ್ಕೆ ಬರುತ್ತದೆ, ಯಾವುದೇ ಕಾರಣಕ್ಕೂ ಅಟಲ್ ಜೀಯವರಿಗೆ ತೊಂದರೆಯಾಗಬಾರದು, ಅವರು ಸಮಯಕ್ಕೆ ಸರಿಯಾಗಿ ಸಮಾವೇಶದ ಸ್ಥಳಕ್ಕೆ ತಲುಪಬೇಕು ಎಂಬುದು ಬಾಬುಜೀಯವರ ಉದ್ದೇಶವಾಗಿತ್ತು.

ಹೀಗಾಗಿ ಎರಡು ಕಾರು ಕಳುಹಿಸಿದ್ದರು. ಈ ವಿಷಯ ಕೇಳಿ ಅಟಲ್‌ಜೀ ಅಧೀರರಾದರು. ತಾನು ಯಾರ ವಿರುದ್ಧ ಪ್ರಚಾರ ಮಾಡಲು ಹೊರಟಿದ್ದೆನೋ ಅದೇ ವ್ಯಕ್ತಿ ತನಗಾಗಿ ಎರಡೆರಡು ಕಾರು ಕಳಿಸಿದ್ದಾರೆ! ಎಲ್ಲಾದರೂ ಉಂಟೇ! ಸಮಾವೇಶದ ಬಳಿಕ ಅಟಲ್‌ಜೀ ಖುದ್ದಾಗಿ ನಮ್ಮ ಮನೆಗೆ ಬಂದು
ಬಾಬುಜೀಯವರನ್ನು ಭೇಟಿ ಮಾಡಿದ್ದರು. ಇನ್ನೊಂದು ಘಟನೆ ಹೇಳುತ್ತೇನೆ. ಚುನಾವಣಾ ಪ್ರಚಾರಕ್ಕೆ ನಾನು ಬಾಬುಜೀಯವರ ಜತೆಗೆ ಹೋಗುತ್ತಿದ್ದೆ. ಒಮ್ಮೆ ನಾವು ಯವತ್ಮಾಲ್ ಜಿಲ್ಲೆಯ ದರ್‌ವಾ ತಾಲೂಕನ್ನು ಹಾದು ಹೋಗುತ್ತಿದ್ದೆವು. ಅಲ್ಲೆಲ್ಲೋ ಬಾಬುಜೀಯವರಿಗೆ ಬುಕ್ಕೇಜಿ ಕಾಣಿಸಿದರು.

ತಂದೆಯವರ ವಿರುದ್ಧ ಬುಕ್ಕೇಜಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರೀಗ ರಸ್ತೆಯ ಪಕ್ಕ ಬಿಸಿಲಿನಲ್ಲಿ ಆತಂಕಗೊಂಡು ನಿಂತಿದ್ದರು. ಬಾಬುಜೀ ಮರುಯೋಚನೆ ಮಾಡದೆ ಕಾರು ತಿರುಗಿಸಲು ಹೇಳಿದರು. ಬುಕ್ಕೇಜಿ ಬಳಿ ಹೋಗಿ ಏನಾಯಿತು ಎಂದು ಕೇಳಿದರು. ಅವರ ಕಾರು ಕೆಟ್ಟುಹೋಗಿತ್ತು. ರಾಜಕೀಯ ವೈರವನ್ನೂ ಲೆಕ್ಕಿಸದೆ ಬಾಬುಜೀಯವರು ಬುಕ್ಕೇಜಿ ಬಳಿ ನಮ್ಮ ಕಾರಿನಲ್ಲೇ ಹೋಗೋಣ ಬನ್ನಿ ಎಂದು ಮನವಿ ಮಾಡಿದರು. ನಂತರ ಅವರನ್ನು ಅತಿಥಿಯಂತೆ ನೋಡಿಕೊಂಡು, ಕಾರಿನಲ್ಲಿ ಕುಳ್ಳಿರಿಸಿಕೊಂಡು, ಸ್ವತಃ ತಾವೇ ಹೋಗಿ ಸಮಾರಂಭದ ಸ್ಥಳಕ್ಕೆ ಡ್ರಾಪ್ ಮಾಡಿದರು. ಸೈದ್ಧಾಂತಿಕ
ಭಿನ್ನಾಭಿಪ್ರಾಯ ಅಥವಾ ರಾಜಕೀಯ ಮೇಲಾಟ ಏನೇ ಇರಲಿ, ಆ ಕಾಲದ ನಾಯಕರು ಪರಸ್ಪರರ ಬಗ್ಗೆ ಆಳವಾದ ಗೌರವ ಹೊಂದಿರುತ್ತಿದ್ದರು.

ಜಾರ್ಜ್ ಫೆರ್ನಾಂಡಿಸ್, ಮಧು ದಂಡವತೆ, ಮಧು ಲಿಮಯೆ ಹಾಗೂ ಅಸಂಖ್ಯಾತ ನಾಯಕರು ಬಾಬುಜೀಯವರನ್ನು ಭೇಟಿ ಮಾಡಲು ನಮ್ಮ ಮನೆಗೆ
ಬರುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ವೈಯಕ್ತಿಕವಾಗಿ ನಾನು ಇವತ್ತಿಗೂ ರಾಜಕೀಯ ವಿರೋಧಿಗಳು ಹಾಗೂ ವಿಭಿನ್ನ ರಾಜಕೀಯ ಸಿದ್ಧಾಂತ ಹೊಂದಿರುವವರ ಜತೆಗೆ ಸೌಹಾರ್ದಯುತ ಸಂಬಂಧ ಹೊಂದಿದ್ದೇನೆ. ಅವರನ್ನು ನನ್ನ ಸ್ನೇಹಿತರಂತೆಯೇ ಕಾಣುತ್ತೇನೆ. ನನ್ನ ಸಿದ್ಧಾಂತ ಏನೆಂದರೆ,
ರಾಜಕೀಯ ನಿಲುವುಗಳಲ್ಲಿ ವ್ಯತ್ಯಾಸವಿರುವುದು ತುಂಬಾ ಸಹಜ. ಆದರೆ ಅದು ವೈಷಮ್ಯವಾಗಬಾರದು. ಎಲ್ಲರೂ ಪರಸ್ಪರರನ್ನು ಸ್ನೇಹದಿಂದ ಕಾಣಬೇಕು. ದುರದೃಷ್ಟವಶಾತ್ ಇಂದು ಚುನಾವಣಾ ಪ್ರಚಾರದ ಗುಣಮಟ್ಟ ತುಂಬಾ ಅಧೋಗತಿಗೆ ಕುಸಿದಿದೆ.

ಪ್ರಜಾಪ್ರಭುತ್ವದ ಮೂಲ ಸಿದ್ಧಾಂತ ಹಾಗೂ ತಳಹದಿಯನ್ನೇ ಮರೆತು ರಾಜಕಾರಣಿಗಳು ಮಾತನಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ನಾವು
ವಿರೋಧಿಗಳನ್ನು ಎಷ್ಟೇ ತೀಕ್ಷ್ಣವಾಗಿ ಟೀಕಿಸಿದರು ಕೂಡ ನಮ್ಮ ಭಾಷೆ ಯಾವತ್ತೂ ಗೌರವಯುತವಾಗಿರಬೇಕು ಎಂಬುದು ನನ್ನ ನಿಲುವು. ನಾಲಿಗೆಯ ಮೇಲೆ ಯಾವತ್ತೂ ಹಿಡಿತ ಕಳೆದುಕೊಳ್ಳಬಾರದು. ಖ್ಯಾತ ಕವಿ ಬಶೀರ್ ಬದ್ರ್ ಅವರ ಕವಿತೆಯ ಸಾಲುಗಳು ನೆನಪಾಗುತ್ತವೆ: ದುಷ್ಮನಿ ಜಮ್ ಕರ್ ಕರೋ
ಲೇಖಿನ್ ಯೇ ಗುಂಜಾಯಿಷ್ ರಹೇ, ಜಬ್ ಕಭೀ ಹಮ್ ದೋಸ್ತ್ ಹೋ ಜಾಯೇ ತೋ ಶರ್ಮಿಂದಾ ನ ಹೋ. (ದ್ವೇಷ ಬೇಕಾದರೆ ಭರ್ಜರಿಯಾಗಿ ಮಾಡಿ
ಆದರೆ ಒಂದು ಅವಕಾಶ ಉಳಿಸಿಕೊಳ್ಳಿ ಯಾವಾಗಾದರೂ ನೀವು ಗೆಳೆಯರಾದರೆ ನಾಚಿಕೆಯಾಗದಂತೆ ನೋಡಿಕೊಳ್ಳಿ)

ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ನಾಡಿನವರು ನಾವು. ಕರ್ಮಯೋಗಿ ಶ್ರೀ ಕೃಷ್ಣನ ನಾಡಿನಲ್ಲಿ ಜನಿಸಿದವರು ನಾವು. ಆ ಮಹಾನ್ ಪೌರಾಣಿಕ ವ್ಯಕ್ತಿಗಳು ಕಲಿಸಿದ ಜೀವನ ಪಾಠಕ್ಕೆ ತಕ್ಕಂತೆ ಬದುಕುತ್ತಿದ್ದೇವೆಯೇ ಎಂಬುದನ್ನು ಅನುಕ್ಷಣವೂ ಯೋಚಿಸಬೇಕು. ಭಗವಾನ್ ಮಹಾವೀರ, ಭಗವಾನ್ ಬುದ್ಧ, ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಗಾಂಧಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸುವ ನಾವು ಅವರ ನಡೆ ಹಾಗೂ ನುಡಿಯನ್ನೂ ಅನುಸರಿಸುವ ಅಗತ್ಯವಿದೆ. ಅದಕ್ಕೆ ಅಗತ್ಯಬಿದ್ದರೆ ನಮ್ಮ ನಡತೆಯನ್ನು ತಿದ್ದಿಕೊಳ್ಳಬೇಕು. ಈಗ ಚುನಾವಣೆ ನಡೆಯುತ್ತಿದೆ. ನಾಳೆ ಅದು ಮುಗಿಯುತ್ತದೆ.

ರಾಜಕೀಯಕ್ಕಾಗಿ ಬೆಳೆಸಿಕೊಂಡ ವೈರತ್ವ ಶಾಶ್ವತವಾಗಿ ನಮ್ಮ ನಡುವೆ ಇರುವಂತಾಗಬಾರದು. ಹೀಗಾಗಿ ಪರಸ್ಪರರ ವಿರುದ್ಧ ವಿಷಕಾರಿ ಮಾತುಗಳನ್ನು ಖಂಡಿತ ಬಳಸಬಾರದು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಮಾತಿನಿಂದ ಇನ್ನೊಬ್ಬರಿಗೆ ಉಂಟುಮಾಡಿದ ಗಾಯ
ಯಾವತ್ತೂ ಮಾಯುವುದಿಲ್ಲ. ಈ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ಇಡೀ ದೇಶ ನಮ್ಮ ನಡತೆಯನ್ನು ಗಮನಿಸುತ್ತಿರುತ್ತದೆ. ಚುನಾವಣೆಗಳು ಹಾಗೂ ನಂತರ ಸಿಗುವ ಅಧಿಕಾರವು ಖಂಡಿತ ಈ ದೇಶದ ಗೌರವಕ್ಕಿಂತ
ದೊಡ್ಡದಲ್ಲ ಎಂಬುದನ್ನು ಮರೆಯದಿರೋಣ. ಸನ್ನಡತೆ ಹಾಗೂ ಶಿಷ್ಟಾಚಾರವೇ ನಮ್ಮ ಪ್ರಜಾಪ್ರಭುತ್ವದ ಜೀವಾಳ.

ದೇಶ ಎಲ್ಲಕ್ಕಿಂತ ಮೊದಲು. ಇನ್ನೆಲ್ಲದಕ್ಕೂ ನಂತರದ ಸ್ಥಾನ. ನಮ್ಮ ಈ ಪ್ರೀತಿಯ ಭಾರತಾಂಬೆಯ ನಾಗರಿಕತೆಯನ್ನು ಕೊಳಕು ಮಾತುಗಳಿಂದ ಉಸಿರುಗಟ್ಟಿಸದಿರೋಣ. ಒಳ್ಳೆಯ ಮಾತನ್ನೇ ಆಡೋಣ, ಒಳ್ಳೆಯದನ್ನೇ ಎಲ್ಲರಿಗೂ ಹಂಚೋಣ.

(ಲೇಖಕರು ಹಿರಿಯ ಪತ್ರಕರ್ತರು)