Thursday, 12th December 2024

ಅವಳ ನಿರ್ಧಾರವೇ ಅಂತಿಮ!

ಪ್ರತಿಸ್ಪಂದನ

ಶಂಕರನಾರಾಯಣ ಭಟ್

‘ಇದು ಬೆಳೆದ ಮಗಳನ್ನಿಟ್ಟುಕೊಂಡ ಎಲ್ಲ ತಾಯಂದಿರ ಸಮಸ್ಯೆ’ ಎಂಬ ‘ನೂರೆಂಟು ವಿಶ್ವ’ ಅಂಕಣ ಬರಹವು (ವಿಶ್ವವಾಣಿ ಮೇ.೨) ಇರುವ ಸಮಸ್ಯೆ ಗಳನ್ನು ಪರಿಹರಿಸದೆ ಇನ್ನಷ್ಟು ಹೆಚ್ಚು ಮಾಡಿದಂತೆ ಕಂಡಿತು. ಹೆಣ್ಣು ಪ್ರಾಯಪ್ರಬುದ್ಧಳಾದರೆ ತಾಯ್ತಂದೆಯರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದು ಎಷ್ಟು ನಿಜವೋ, ಮಗಳಿಗೆ ಸ್ವಾತಂತ್ರ್ಯ ಕೊಟ್ಟು ಅವಳಿಗೆ ಅವಳ ಜವಾಬ್ದಾರಿ ತಿಳಿಸಿ ಹೇಳುವುದೂ ಅಷ್ಟೇ ಮುಖ್ಯ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಇದು ಹೆಣ್ಣು ಮಕ್ಕಳಿಗಷ್ಟೇ ಅನ್ವಯವಾಗುವಂಥದ್ದಲ್ಲ; ನಿಜ ಹೇಳಬೇಕೆಂದರೆ, ಬೆಳೆದು
ನಿಂತ ಗಂಡು ಮಕ್ಕಳನ್ನು ಸಂಭಾಳಿಸುವುದು ಇನ್ನೂ ಕಷ್ಟದ ಕೆಲಸ. ಹೆಣ್ಣು, ಪಾಲಕರ ಮಾತನ್ನು ಅಷ್ಟೊಂದು ಅಲ್ಲಗಳೆಯಳು. ಅವಳಿಗೆ ತನ್ನ
ಯೌವನದ ಆಗು-ಹೋಗುಗಳ ಬಗ್ಗೆ ಸಂಪೂರ್ಣ ತಿಳಿವಳಿಕೆ ಇರುತ್ತದೆ. ಮನಸ್ಸು ಹೇಳಿದ್ದನ್ನೆಲ್ಲ ಮತ್ತೊಮ್ಮೆ ಪರಾಂಬರಿಸಿ, ಸಾಧಕ-ಬಾಧಕಗಳನ್ನೆಲ್ಲ ಅರಿತೇ ಮುಂದಿನ ಹೆಜ್ಜೆ ಇಡುತ್ತಾಳೆ.

ಇದೂ ಒಂದು ದೈವದತ್ತ ಕೊಡುಗೆ ಅಂದರೂ ತಪ್ಪಲ್ಲ. ಇಂದು ಬದಲಾಗುತ್ತಿರುವ ಸನ್ನಿವೇಶಗಳಲ್ಲಿ, ಹೆಣ್ಣು ವಹಿಸುತ್ತಿರುವಷ್ಟು ಕಾಳಜಿಯನ್ನು ಗಂಡು ವಹಿಸುತ್ತಿಲ್ಲ. ವಯಸ್ಸಿಗೆ ಬಂದ ಮಗಳು ತನ್ನ ಇಷ್ಟದವರೊಡನೆ ಸಲುಗೆಯಿಂದ ಇರುವುದೇ ಮಾರಕ ಎಂದು ತಾಯಿ ನಿರ್ಧರಿಸಿಬಿಡುತ್ತಾಳೆ. ತನ್ನ ಮಗಳಲ್ಲಿ ಇರುವ ಶಕ್ತಿ, ಮನೋಬಲಗಳನ್ನು ಅರಿಯುವ ಗೋಜಿಗೂ ಹೋಗದೇ, ಯಾರದ್ದೇ ಫೋನು-ಮೆಸೇಜು ಬಂದರೂ ಅದಕ್ಕೆ ತನ್ನದೇ ಆದ ಅರ್ಥ ಕಲ್ಪಿಸಿಕೊಂಡು, ಆಗಬಾರದ ಅಥವಾ ಆಗಲಾರದ ವಿಷಯಗಳ ಬಗ್ಗೆಯೇ ಚಿಂತಿಸುತ್ತಾ ಕೊರಗುವ ಅದೆಷ್ಟು ತಾಯಂದಿರನ್ನು ಇಂದು ನಾವು ಕಾಣು ತ್ತಿಲ್ಲ? ಒಂದಂತೂ ನಿಜ.

ಒಮ್ಮೆ ಅನುಮಾನದ ದೃಷ್ಟಿಯಿಂದಲೇ ಮಗಳ ನಡವಳಿಕೆಯನ್ನು ನೋಡಲು ಪ್ರಾರಂಭಿಸಿದರೆ, ಅದೇ ತೊಡಕಾಗಿ ಪರಿಣಮಿಸುತ್ತದೆ. ಮೊಬೈಲ್, ಕಂಪ್ಯೂಟರ್ ಯಾವುದೇ ಇರಲಿ, ಅವುಗಳ ಬಳಕೆಯ ಇತಿಮಿತಿಯನ್ನು ಹೆಣ್ಣು ಮಕ್ಕಳೇ ಚೆನ್ನಾಗಿ ಅರಿತು ವ್ಯವಹರಿಸುತ್ತಾರೆ. ಆದರೆ, ಒಂದು ಹೆಣ್ಣು
ಇನ್ನೊಂದು ಗಂಡಿನ ಜತೆ ಸಹಜವಾಗಿ ವ್ಯವಹರಿಸಿ ದರೂ ಅದಕ್ಕೆ ‘ಲವ್’ ಎಂಬ ಹಣೆಪಟ್ಟಿ ಹಚ್ಚಿಬಿಡುತ್ತಾರೆ. ಕಾಲೇಜಿನಿಂದ ಬರುವಾಗ ಒಬ್ಬನ ಜತೆ ಪಠ್ಯಗಳ ಬಗ್ಗೆ ವಿಚಾರಿಸಿದರೂ, ಅದನ್ನು ಕಂಡವರು ಆ ಭೆಟ್ಟಿಗೆ ತಮ್ಮದೇ ಆದ ಅರ್ಥ ಕಲ್ಪಿಸಿ ವರದಿ ಒಪ್ಪಿಸುವುದೂ ಇದೆ.

ಇದನ್ನೇ ನಿಜವೆಂದುಕೊಳ್ಳುವ ತಾಯಂದಿರಿಗೂ ಕೊರತೆಯಿಲ್ಲ. ಹಾಗೆ ನೋಡಿದರೆ, ತಮ್ಮ ಮಕ್ಕಳ ಸಹಜ ಪರಿಚಯ/ಒಡನಾಟವನ್ನೂ ‘ಲವ್’ಗೆ
ಪರಿವರ್ತಿಸುವವರೂ ಕೆಲವು ಪಾಲಕರೇ! ಮಕ್ಕಳಲ್ಲಿ ಆ ರೀತಿಯ ಭಾವ ಇಲ್ಲದಿದ್ದರೂ, ಅದೇ ಅರ್ಥ ಬರುವಂತೆ ಮಕ್ಕಳಿಗೆ ಸಮಜಾಯಿಷಿ ಹೇಳ ಹೊರಟರೆ ಒಳಿತಿಗಿಂತ ಕೆಡುಕೇ ಜಾಸ್ತಿ. ಹಾಗೆ ನೋಡಿದರೆ, ಇಂದು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ. ತಾವೇನು ಮಾಡಲು ಹೊರಟಿದ್ದೇವೆ ಎಂಬುದರ ಅರಿವು ಅವರಿಗಿದ್ದಷ್ಟು ಗಂಡು ಮಕ್ಕಳಿಗಿರುವುದಿಲ್ಲ. ಹೀಗಾಗಿ ಯಾವ ತಾಯಿಯೂ ಬೆಳೆದ ಹೆಣ್ಣು ಮಗಳನ್ನು ಮನೆಯಲ್ಲಿಟ್ಟುಕೊಂಡು ಚಿಂತಿಸುವ ಅವಶ್ಯಕತೆಯೇ ಇಲ್ಲ.

ಪ್ರೀತಿ, ಮದುವೆ, ಮಕ್ಕಳನ್ನು ಪಡೆಯುವುದು ಯಾವಾಗ, ಎಷ್ಟು ಎಂಬುದನ್ನೆಲ್ಲ ತೀರ್ಮಾನಿಸುವವಳು ಹೆಣ್ಣೇ. ಅವಳ ನಿರ್ಧಾರವೇ ಅಂತಿಮ!
ಕೆಲ ಹೆಣ್ಣು ಮಕ್ಕಳು, ತಮ್ಮನ್ನು ಚುಡಾಯಿಸಲು ಬಂದ ಗಂಡುಗಳಿಗೆ ಎಂಥ ಅವಸ್ಥೆ ಉಂಟುಮಾಡುತ್ತಾರೆ ಎಂಬುದು ಸಾಕಷ್ಟು ಕಡೆ ವರದಿಯಾಗಿದ್ದಿದೆ. ಇದರರ್ಥ, ಇಂದು ಹೆಣ್ಣು ಅಬಲೆಯಲ್ಲ, ನಿಸ್ಸಹಾಯಕಳಲ್ಲ. ತನಗೆ ಬೇಡವಾದುದನ್ನು ಹೇಗೆ ತಿರಸ್ಕರಿಸಬೇಕು ಎಂಬುದು ಆಕೆಗೆ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ಯಾವ ಗಂಡೂ, ಯಾವ ಕಾಲಕ್ಕೂ ಇಂಥ ದುಸ್ಸಾಹಸಕ್ಕೆ ಮುಂದಾಗಲಾರ. ಕೆಲ ಪ್ರಕೃತಿ ಸಹಜ ಗುಣಗಳನ್ನೂ ತನಗಿಷ್ಟವಾದ ರೀತಿಯಲ್ಲಿ ಹೇಗೆ ಪರಿವರ್ತಿಸಿಕೊಳ್ಳಬಹುದು ಎಂಬುದೂ ಹೆಣ್ಣಿಗೆ ಗೊತ್ತಿದೆ.

ಇನ್ನು, ಸೆಕ್ಸ್ ವಿಚಾರದಲ್ಲಿ ನ್ಯಾಯಾಲಯ ಏನೇ ತೀರ್ಪು ಕೊಟ್ಟಿದ್ದರೂ, ಅದರಿಂದಾಗಬಹುದಾದ ಅವಘಡಗಳ ಸಂಪೂರ್ಣ ಅರಿವು ಇಂದಿನ ಬೆಳೆದ ಹೆಣ್ಣು ಮಕ್ಕಳಿಗಿದೆ. ಹೀಗಾಗಿ ತಾಯಂದಿರು ನಿಶ್ಚಿಂತರಾಗಿದ್ದು, ಯಾವುದೇ ಆತಂಕ, ಭಯಕ್ಕೆ ಒಳಗಾಗದೆ ಮಗಳನ್ನು ನೋಡಿಕೊಳ್ಳಬಹುದು! ತಾಯಂದಿರಿಗೆ ಯಾವ ಕೌನ್ಸಿಲಿಂಗ್ ಅವಶ್ಯಕತೆಯೂ ಬಾರದು! ‘ಮಗಳು ದೊಡ್ಡವಳಾಗಿದ್ದಾಳೆ’ ಎಂದು ಪರಿತಪಿಸುವ ಬದಲು, ನೆಮ್ಮದಿಯಿಂದ ಅವಳ ಗೆಳತಿಯಂತೆ ವರ್ತಿಸಿದರೆ ಯಾವ ಪಿಡುಗೂ ಹತ್ತಿರ ಸುಳಿಯದು!

(ಲೇಖಕರು ಹವ್ಯಾಸಿ ಬರಹಗಾರರು)