ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಿಗೆ ಮತದಾನಕ್ಕೆ ತೆರಳುವವರಿಗೆ ಬಸ್ ಟಿಕೆಟ್ ದರ ಏರಿಕೆ ಬಿಸಿ ತಟ್ಟಿದೆ.
ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್ ಗಳು ಟಿಕೆಟ್ ದರ ಹೆಚ್ಚಿಸುವುದು ಸಾಮಾನ್ಯ. ಚುನಾವಣೆ ಸಂದರ್ಭದಲ್ಲಿಯೂ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
ಬೆಂಗಳೂರು, ಮಂಗಳೂರು ಸೇರಿ ವಿವಿಧೆಡೆಯಿಂದ ಬರುವ ಮತದಾರರಿಗೆ ಬಸ್ ಟಿಕೆಟ್ ದರ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯವಾಗಿ 700- 800 ರೂ. ಇದ್ದ ಖಾಸಗಿ ಬಸ್ ಟಿಕೆಟ್ ದರ ದುಪಟ್ಟಾಗಿದೆ. ಬೆಂಗಳೂರು -ಗದಗ ಮಧ್ಯೆ ಸಾಮಾನ್ಯ ದಿನಗಳಲ್ಲಿ ಖಾಸಗಿ ಬಸ್ ಗಳು 600 ರಿಂದ 800ರೂ.ವರೆಗೂ ಟಿಕೆಟ್ ದರ ವಿಧಿಸುತ್ತವೆ. ಮೇ 6ರ ಟಿಕೆಟ್ ದರ 1250 ರೂ.ನಿಂದ 1400 ರೂ.ವರೆಗೆ ಹೆಚ್ಚಳವಾಗಿದೆ.
ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ ಮೊದಲಾದ ನಗರಗಳಿಗೆ 2500 ರೂ. ವರೆಗೂ ಟಿಕೆಟ್ ದರ ಏರಿಕೆ ಮಾಡಿರುವುದರಿಂದ ಮತದಾನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಚುನಾವಣಾ ಆಯೋಗ, ಸ್ವೀಪ್ ಸಮಿತಿ ಮತದಾನ ಹೆಚ್ಚಳಕ್ಕೆ ಅನೇಕ ಕಾರ್ಯಕ್ರಮ ಕೈಗೊಂಡು ಜಾಗೃತಿ ಮೂಡಿಸುತ್ತಿವೆ. ದೂರದ ಊರುಗಳಿಂದ ಮತದಾನ ಮಾಡಲು ಬರುವವರಿಗೆ ಬಸ್ ಪ್ರಯಾಣದ ದುಬಾರಿಯಾಗದಂತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಈಗಾಗಲೇ ಬಹುತೇಕ ಬಸ್ ಗಳ ಮುಂಗಡ ಟಿಕೆಟ್ ಭರ್ತಿಯಾಗಿವೆ. ಖಾಸಗಿ ಬಸ್ ಗಳಲ್ಲಿ ದುಬಾರಿ ದರ ವಿಧಿಸಿರುವುದರಿಂದ ಕೆಲವರು ಮತದಾನದಿಂದ ದೂರ ಉಳಿಯುವ ಸಾಧ್ಯತೆ ಕೂಡ ಇದೆ.
ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ನಡೆದಿದ್ದು, ರಾಜ್ಯದ ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ಮುಕ್ತಾಯವಾಗಿದೆ.