ಲೂಧಿಯಾನ: ಜಮ್ಮುವಿಗೆ ತೆರಳಬೇಕಿದ್ದ ರೈಲಿನ ಬೋಗಿಗಳು ಎಂಜಿನ್‌ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ಸಂಭವಿಸಿದೆ.
ಸರ್‌ಹಿಂದ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಬೋಗಿಗಳು ಇಲ್ಲದೆ ಎಂಜಿನ್ ಸುಮಾರು ಮೂರು ಕಿಲೋ ಮೀಟರ್ ದೂರ ಚಲಿಸಿದೆ.
ದೆಹಲಿ-ಕತ್ರಾ ರೈಲ್ವೆ ಮಾರ್ಗದಲ್ಲಿ ಕೆಲಸ ನಿರತ ಕೀಮ್ಯಾನ್ ಒಬ್ಬರು ಬೋಗಿಗಳು ಇಲ್ಲದೆ ಎಂಜಿನ್ ಚಲಿಸುತ್ತಿರುವುದನ್ನು ಲೋಕೊ ಪೈಲಟ್ ಗಮನಕ್ಕೆ ತಂದರು. ಬಳಿಕ ಎಂಜಿನ್ ಹಿಂದಿರುಗಿ ಬಂದಿದೆ. ನಂತರ ಬೋಗಿಗಳನ್ನು ಜೋಡಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಎಂಜಿನ್‌ನೊಂದಿಗೆ ಬೋಗಿಗಳನ್ನು ಸಡಿಲವಾಗಿ ಜೋಡಿಸಿದ್ದರಿಂದ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಉತ್ತರ ರೈಲ್ವೆ ವಲಯದ ವಿಭಾಗೀಯ ವ್ಯವಸ್ಥಾಪಕ ನವೀನ್ ಕುಮಾರ್ ತಿಳಿಸಿದ್ದಾರೆ.