ವಿದೇಶವಾಸಿ
dhyapaa@gmail.com
‘ಪುಷ್ಪ’- ಎಲ್ಲರಿಗೂ ನೆನಪಿದೆ ತಾನೆ? ಹೇಗೆ ಮರೆಯಲು ಸಾಧ್ಯ? ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಈ ಬಹುಭಾಷಾ ಚಿತ್ರ ನೆನಪಿನಲ್ಲಿರು ವುದು ಅದರ ಹಾಡು ಮತ್ತು ಹೊಡದಾಟದಿಂದ. ‘ಊ ಅಂಟಾವಾ…’, ‘ಶ್ರೀವಲ್ಲಿ…’, ‘ಸಾಮಿ, ಸಾಮಿ…’ ಎಲ್ಲರ ಬಾಯಲ್ಲೂ ಅದೇ ಹಾಡು, ಯಾವ ಕಾರ್ಯಕ್ರಮಕ್ಕೆ ಹೋದರೂ ಅದೇ ನೃತ್ಯ. ಕೋವಿಡ್ ಮಹಾಮಾರಿಯ ನಂತರ ಬಿಡುಗಡೆಯಾದ ಮೊದಲ ಸೂಪರ್‌ಹಿಟ್ ಚಿತ್ರ ಎಂಬ ಹೆಮ್ಮೆ ಬೇರೆ.
ಈ ಚಿತ್ರ ತೆರೆಕಂಡು ಒಂದು ತಿಂಗಳಲ್ಲೇ ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ೩೫೦ ಕೋಟಿ ರುಪಾಯಿ ಗಳಿಸಿ, ೧೦೦ ಕೋಟಿ ಗಳಿಸಿದ ಚಿತ್ರಗಳ ಸಾಲಿಗೆ ಸೇರ್ಪಡೆಯಾಯಿತು. ಈಗ ಈ ಚಿತ್ರದ ಎರಡನೆಯ ಭಾಗ ‘ಪುಷ್ಪ-೨’ ತೆರೆಗೆ ಬರಲಿದೆ. ಬಹುತೇಕ ಅದೇ ತಾರಾಗಣ, ಅದೇ ತಂತ್ರಜ್ಞರು, ಮುಂದುವರಿದ ಕಥಾಭಾಗ. ಚಿತ್ರ ಈ ವರ್ಷ ಅಗಸ್ಟ್ ೧೫ರಂದು ತೆರೆ ಕಾಣಲಿದೆ. ಅದರಲ್ಲೇನು ವಿಶೇಷ ಎನ್ನಬೇಡಿ. ಈ ಚಿತ್ರದ ಟೀಸರ್ ಬಿಡುಗಡೆಯಾದ ಹತ್ತು ದಿನದಲ್ಲಿ ಹತ್ತು ಕೋಟಿಗೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ.
ಅದು ವಿಶೇಷವಲ್ಲ, ಮೊನ್ನೆಯಷ್ಟೇ ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಚಿತ್ರದ ಒಂದು ಗೀತೆಯನ್ನು ಈಗಾಗಲೇ ನಾಲ್ಕು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾ ರಂತೆ, ಒಂದೇ ದಿನದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡು ಎಂಬ ಹೆಸರೂ ಇದಕ್ಕೆ ದಕ್ಕಿದೆ, ಅದೂ ವಿಶೇಷವಲ್ಲ. ಭಾರತವೂ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಈ ಹಾಡು ಈಗ ‘ಟ್ರೆಂಡ್’ ಆಗುತ್ತಿದೆಯಂತೆ, ಇದೂ ವಿಶೇಷವಲ್ಲ. ಈ ಚಿತ್ರ ಭಾರತದ ಆರು ಭಾಷೆ ಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ ಯಂತೆ.
ಊಹೂಂ… ಇದ್ಯಾವುದೂ ವಿಶೇಷವಲ್ಲ. ಈ ಚಿತ್ರ ಬಿಡುಗಡೆಗೂ ಮೊದಲೇ ಒಂದು ಸಾವಿರ ಕೋಟಿ ರುಪಾಯಿ ಗಳಿಸಿದೆಯಂತೆ. ಸದ್ಯಕ್ಕೆ ಇದಂತೂ
ವಿಶೇಷ ಹೌದು! ಮುಂದಿನ ದಿನಗಳಲ್ಲಿ ಜೂನಿಯರ್ ಎನ್.ಟಿ.ಆರ್ ನಟಿಸುತ್ತಿರುವ ‘ದೇವರ’ ಚಿತ್ರವಾಗಲೀ ಅಥವಾ ಪ್ರಭಾಸ್, ಅಮಿತಾಭ್ ಬಚ್ಚನ್,
ಕಮಲ್ ಹಾಸನ್ ಅಭಿನಯಿಸುತ್ತಿರುವ ‘ಕಲ್ಕಿ ೨೮೯೮ ಎಡಿ’ಯಂಥ ಚಿತ್ರವಾಗಲಿ ಈ ದಾಖಲೆಯನ್ನು ಮುರಿಯಬಹುದು. ಆದರೆ ಅಲ್ಲಿಯವರೆಗಂತೂ
ಇದು ದಾಖಲೆಯಾಗಿ ಉಳಿಯುತ್ತದೆ. ಮೊದಲೆಲ್ಲ ನಿರ್ಮಾಪಕರು ಹಣ ಗಳಿಸಬೇಕು ಎಂದಾದರೆ ಚಿತ್ರ ಹೆಚ್ಚು ದಿನ ಓಡಬೇಕಿತ್ತು.
ಎಪ್ಪತ್ತೈದು ವಾರ, ಐವತ್ತು ವಾರ, ಇಪ್ಪತ್ತೈದು ವಾರ, ಕೊನೆ ಪಕ್ಷ ನೂರು ದಿನವಾದರೂ ಓಡಿದರೆ ನಿರ್ಮಾಪಕ, ನಿರ್ದೇಶಕ, ತಾರಾ ಬಳಗ, ಎಲ್ಲರೂ ನಿಟ್ಟುಸಿರು ಬಿಡುತ್ತಿದ್ದರು. ಕಳೆದ ಎರಡು ದಶಕಗಳಿಂದ ಈ ಟ್ರೆಂಡ್ ಬದಲಾಗಿದೆ. ನಟಿಸಿದ ಹತ್ತಾರು ಚಿತ್ರಗಳಲ್ಲಿ ಒಂದೇ ಒಂದು ಚಿತ್ರವೂ ನೂರು ದಿನ ಕಾಣದಿದ್ದರೂ ಕೆಲವರು ‘ಸ್ಟಾರ್’ಗಳಾಗುತ್ತಾರೆ. ನಾಲ್ಕು-ಐದು ವಾರ ಮಾತ್ರ ಚಿತ್ರ ಓಡಿದರೂ ನಿರ್ಮಾಪಕರು ಹಣ ಗಳಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ’12th FAIL’ ಸಿಲ್ವರ್ ಜುಬಿಲಿ ಕಂಡಿದೆ ಎಂಬ ವರದಿಯಿದೆ. ಅದಕ್ಕೂ ಮೊದಲು ೨೫ ವಾರ ಓಡಿದ ಚಿತ್ರ ಎಂದರೆ, ಸುಮಾರು ಹನ್ನೆರಡು ವರ್ಷದ ಹಿಂದೆ ತೆರೆಗೆ ಬಂದ ‘ಡರ್ಟಿ ಪಿಕ್ಚರ್’ ಸಿನಿಮಾ ಎಂಬ ಮಾಹಿತಿ ಇದೆ. ಈ ನಡುವೆ ಅದೆಷ್ಟು ಚಿತ್ರಗಳು ನೂರು, ಇನ್ನೂರು, ಐನೂರು, ಸಾವಿರ ಕೋಟಿ ಗಳಿಸಿದ ಸುದ್ದಿ ಕೇಳಿದ್ದೇವೆ.
ಹಾಗಾದರೆ ಒಂದು ಚಿತ್ರ ಹಣಗಳಿಸುವುದಕ್ಕೂ, ಚಿತ್ರಮಂದಿರದಲ್ಲಿ ಓಡುವುದಕ್ಕೂ ಸಂಬಂಧವೇ ಇಲ್ಲವೇ? ಚಿತ್ರ ಓಡದಿದ್ದರೂ ಹಣ ಗಳಿಸುವುದು ಹೇಗೆ? ಈಗ ಮೊದಲಿಗಿಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ ಎಂಬ ಮಾತನ್ನು ಒಪ್ಪೋಣ. ಹಿಂದಿ ಅಥವಾ ಭಾರತದ, ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು ವಿದೇಶದಲ್ಲೂ ಬಿಡುಗಡೆಗೊಳ್ಳುತ್ತವೆ ಎಂಬುದನ್ನೂ ಒಪ್ಪೋಣ. ಆದರೆ ‘ಬಾಕ್ಸ್ ಆಫೀಸ್’ ಕಲೆಕ್ಷನ್ ವರದಿಯನ್ನು ಸಂಪೂರ್ಣ ಒಪ್ಪಲೇಬೇಕೆಂದೇನೂ ಇಲ್ಲ.
ಅದೆಷ್ಟೋ ‘ಸೂಪರ್ ಹಿಟ್’ ಹಿಂದಿ ಚಿತ್ರಗಳನ್ನು ನಾನು ಬಹ್ರೈನ್‌ನ ಚಿತ್ರಮಂದಿರದಲ್ಲಿ ಒಬ್ಬನೇ ಕುಳಿತು ನೋಡಿದ್ದಿದೆ. ಅಂಥ ಸಂದರ್ಭದಲ್ಲಿ ‘ಈ ಸಿನಿಮಾ ಇಷ್ಟು ಕೋಟಿ ಗಳಿಸಲು ಸಾಧ್ಯವೇ?’ ಎಂಬ ಅನುಮಾನ ಮೂಡಿದ್ದೂ ಇದೆ. ಶಾರೂಖ್ ಖಾನ್ ಅಭಿನಯದ ‘ಜವಾನ್’ ಒಂದು ಸಾವಿರಕ್ಕೂ ಹೆಚ್ಚು ಕೋಟಿ ಹಣ ಸಂಗ್ರಹಿಸಿತಂತೆ, ರಣವೀರ್ ಸಿಂಗ್ ಅಭಿನಯಿಸಿದ ‘ರಾಕಿ ಔರ್ ರಾಣಿ’ ಮುನ್ನೂರು ಕೋಟಿ ಕಂಡಿತಂತೆ ಎಂದರೆ ಹೇಗೆ ನಂಬಬೇಕು? ಬಿಡುಗಡೆಯಾದ ದಿನ ವಿಶ್ವದಾದ್ಯಂತ ಹತ್ತು ಕೋಟಿ ಗಳಿಸಿದ ಈ ಸಿನಿಮಾ ಮುಂದಿನ ಆರು ದಿನದಲ್ಲಿ ಗಳಿಸಿದ್ದು ಮೂವತ್ತು ಕೋಟಿ. ಹೋಗಲಿ ಬಿಡಿ, ಸಲ್ಮಾನ್ ಖಾನ್ ಅಭಿನಯಿಸಿದ ‘ರೇಸ್-೩’ ಯಾವ ರೇಸ್‌ನಲ್ಲೂ ಇರಲಿಲ್ಲ. ಈ ಚಿತ್ರದ ಐಎಮ್‌ಡಿಬಿ ರೇಟಿಂಗ್ ಹತ್ತಕ್ಕೆ ಎರಡು.
ಚಲನಚಿತ್ರಗಳ ಗುಣಮಟ್ಟಕ್ಕೆ ಅಂಕ ನೀಡುವ ಸಂಸ್ಥೆ Rotten Tomato ‘ರೇಸ್ -೩’ಗೆ ನೂರಕ್ಕೆ ಇಪ್ಪತ್ತಕ್ಕೂ ಕಮ್ಮಿ ಅಂಕ ನೀಡಿತ್ತು. ಆದರೂ ನಿರ್ಮಾಪ ಕರ ಪ್ರಕಾರ ಈ ಚಿತ್ರ ಮುನ್ನೂರು ಕೋಟಿ ರುಪಾಯಿ ಗಳಿಸಿದೆಯಂತೆ. ಹೃತಿಕ್ ರೋಷನ್ ಅಭಿನಯದ ‘ಕ್ರಿಶ್-೩’, ರಜನಿಕಾಂತ್ ನಟಿಸಿದ ‘ಕಬಾಲಿ’, ಇತ್ತೀಚೆಗೆ ಬಿಡುಗಡೆಯಾದ ‘ಎನಿಮಲ್’ ಚಿತ್ರಗಳ ಗಲ್ಲಾ ಪೆಟ್ಟಿಗೆಯ ಗಳಿಕೆಯ ಅಂಕಿ-ಅಂಶಗಳ ವಿಷಯದಲ್ಲೂ ಇದೇ ರೀತಿ ಗೋಲ್ ಮಾಲ್ ಆಗಿದೆ ಎಂಬ ಮಾತಿದೆ.
ಇದನ್ನು ಒಂದು ವೇಳೆ ನಂಬಿದರೂ, ಭಾರತದಲ್ಲಿ ಆರು ನೂರು ಕೋಟಿ ಗಳಿಸಿದ ಅಮಿರ್ ಖಾನ್‌ನ ‘ದಂಗಲ್’ ಚೀನಾದಲ್ಲಿ ಎರಡು ಸಾವಿರ ಕೋಟಿ
ಗಳಿಸಿದೆ ಎಂದರೆ, ಹೆಸರೇ ಇಲ್ಲದ ಹೊಸ ನಟರು ನಟಿಸಿದ ‘ಸೂಪರ್ ಸ್ಟಾರ್’ ಭಾರತದಲ್ಲಿ ನೂರು ಕೋಟಿ, ಚೀನಾದಲ್ಲಿ ಒಂಬೈನೂರು ಕೋಟಿ ಗಳಿಸಿತು
ಎಂದರೆ ಹೇಗೆ ನಂಬುವುದು? ಚೀನಾದಲ್ಲಿ ಎಷ್ಟು ಜನ ಭಾರತೀಯರಿದ್ದಾರೆ? ಭಾರತ ಸರಕಾರವೇ ಹೇಳುವಂತೆ ಐವತ್ತೈದು ಸಾವಿರ ಜನ. ಇನ್ನು ಚೀನಾ
ಪ್ರವಾಸಕ್ಕೆ ಹೋಗುವವರೆಷ್ಟು? ಚೀನಾ ಹೇಳುವ ಪ್ರಕಾರ, ವರ್ಷಕ್ಕೆ ಒಂದೂವರೆಯಿಂದ ಒಂದೂಮುಕ್ಕಾಲು ಲಕ್ಷ. ಅಲ್ಲಿರುವವರು, ಪ್ರವಾಸಕ್ಕೆ ಹೋದವರೆಲ್ಲರೂ ಸಿನಿಮಾ ನೋಡುವುದಿಲ್ಲ, ಆ ವಿಷಯ ಬೇರೆ.
ಒಂದು ವೇಳೆ ಚೀನಾದ ಭಾಷೆ ಮ್ಯಾಂಡರಿನ್‌ಗೆ ಭಾಷಾಂತರಗೊಂಡರೂ ಅಷ್ಟೊಂದು ಜನ ನೋಡುತ್ತಾರೆಯೇ? ಹೌದು ಎಂದಾದರೆ ಚೀನಿಯರಿಗೆ ಭಾರತದ ಸಿನಿಮಾಗಳ ಮೇಲೆ, ಅದರಲ್ಲೂ ಹಿಂದಿ ಸಿನಿಮಾಗಳ ಮೇಲೆ ಅಷ್ಟೊಂದು ಪ್ರೀತಿ ಏಕೆ? ಅಲ್ಲದೆ, ಹಿಂದಿ ಹೊರತು ಪಡಿಸಿ, ಭಾರತದ ಅನ್ಯ ಭಾಷೆಯ ಚಿತ್ರಗಳೇಕೆ ಚೀನಾದಲ್ಲಿ ಪ್ರದರ್ಶನಗೊಳ್ಳುವುದಿಲ್ಲ? ಒಂದು ವೇಳೆ ಪ್ರದರ್ಶನ ಕಂಡರೂ ಅವುಗಳ ಸಂಖ್ಯೆ ಎಷ್ಟು? ಅದೇ ರೀತಿ ಚೀನಾದಲ್ಲಿ ತಯಾರಾದ ಸಿನಿಮಾ ಭಾರತಕ್ಕೆ ಏಕೆ ಬರುವುದಿಲ್ಲ? ಅಲ್ಲೂ ಸಿನಿಮಾ ತಯಾರಾಗುತ್ತದೆ, ಬಿಡುಗಡೆಯಾಗುತ್ತದೆ. ಈ ಮಾತು ಕೊಲ್ಲಿ ರಾಷ್ಟ್ರಗಳು, ಪೂರ್ವ ಮತ್ತು ಪಶ್ಚಿಮದ ದೇಶಗಳಿಗೂ ಅನ್ವಯ.
ಇದ್ದಕ್ಕಿದ್ದಂತೆ ಭಾರತದ, ಅದರಲ್ಲೂ ಬಾಲಿವುಡ್ ಸಿನಿಮಾ ಕೋಟಿ ಕೋಟಿ ಗಳಿಸುತ್ತಿರುವುದು ಹೇಗೆ ಎಂದು ತಿಳಿಯಲು ಎರಡು ಮೂರು ಜನರ ಸಂದರ್ಶನ ನೋಡಿದರೆ ಸಾಕು. ‘ಬುದ್ಧ ಇನ್ ಎ ಟ್ರಾಫಿಕ್ ಜಾಮ್’, ‘ದಿ ತಾಶ್ಕೆಂಟ್ ಫೈಲ್ಸ್’, ‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ನಿರ್ಮಾಪಕ-ನಿರ್ದೇಶಕ ವಿವೇಕ ಅಗ್ನಿಹೋತ್ರಿಯವರ ಪ್ರಕಾರ ಬಾಲಿವುಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಎನ್ನುವುದು ಬರೀ ‘ಬಕ್ವಾಸ್’. ಬಹುತೇಕ ಸೂಪರ್‌ಹಿಟ್ ಚಿತ್ರಗಳ ಗಳಿಕೆಯ ಅಂಕಿ-ಅಂಶಗಳು ತಿರುಚಲ್ಪಟ್ಟಿದ್ದು, ನಂಬಲು ಅರ್ಹವಲ್ಲದ್ದು.
ಕಳೆದವರ್ಷ ಹಿಂದಿ ಚಿತ್ರರಂಗದ ಹೆಸರಾಂತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಸಂದರ್ಶನವೊಂದರಲ್ಲಿ ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದರು, ‘ನನಗೆ ನನ್ನ ಸಿನಿಮಾ ಸೋಲುತ್ತದೆ ಎಂಬ ಭಯವೇ ಇಲ್ಲ. ಒಂದು ವೇಳೆ ನನ್ನ ಸಿನಿಮಾ ಸೋತರೂ, ಸೋತ ಸಿನಿಮಾವನ್ನೇ ಗೆದ್ದಿದೆ ಎಂದು ತೋರಿಸುವ ಪಿಆರ್ (ಸಾರ್ವಜನಿಕ ಸಂಪರ್ಕ) ತಂಡ ನನ್ನ ಬಳಿ ಇದೆ’. ಅಂದರೆ, ಅವರ ಸಿನಿಮಾ ಸೋತರೂ, ಕಾಗದದ ಮೇಲೆ ಹೇರಾಫೇರಿ ಮಾಡಿಯಾದರೂ ಚಿತ್ರ ಯಶಸ್ವಿ ಯಾಗಿದೆ ಎಂದು ಜನರ ಮುಂದೆ ಇಡುತ್ತಾರೆ ಎಂದಾಯಿತಲ್ಲ.
‘ಬಾಹುಬಲಿ’ ಖ್ಯಾತಿಯ ನಿರ್ದೇಶಕ ರಾಜಮೌಳಿಯವರ ಮಾತು ಮತ್ತು ನಡತೆಯೂ ಇದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತದೆ. ಅವರು ನಿರ್ದೇಶಿಸಿದ ‘ಸಿಂಹಾದ್ರಿ’ ಮತ್ತು ‘ಮಗಧೀರ’ ನಿಜಕ್ಕೂ ಮೆಗಾ ಹಿಟ್ ಸಿನಿಮಾಗಳಾಗಿದ್ದವೇ? ಆಗಿದ್ದೇ ಹೌದಾದರೆ, ಅದರ ‘ಸಕ್ಸಸ್ ಪಾರ್ಟಿ’ಗೆ ರಾಜಮೌಳಿ ಏಕೆ ಹೋಗ ಲಿಲ್ಲ? ಅವರೇ ಹೇಳುವಂತೆ, ‘ಸಿಂಹಾದ್ರಿ’ ಸಿನಿಮಾ ಯಶಸ್ವಿಯಾಗಿತ್ತಾದರೂ ಮಾಧ್ಯಮದವರು ಹೇಳುವಷ್ಟಾಗಿರಲಿಲ್ಲ. ಸಿಂಹಾದ್ರಿ ಸಿನಿಮಾ ನೂರು ದಿನ ಪೂರೈಸಿತ್ತು ನಿಜ. ಆದರೆ ನಿರ್ಮಾಪಕ ಅಲ್ಲು ಅರವಿಂದ್, ‘ಸಿನಿಮಾ ಇಪ್ಪತ್ತೈದು ವಾರ ಪೂರ್ತಿಗೊಳಿಸಿದೆ’ ಎಂದು ಹೇಳಿಕೆ ನೀಡಿದ್ದು ರಾಜಮೌಳಿಗೆ ಸರಿಬರಲಿಲ್ಲ. ರಾಜಮೌಳಿ ಅದನ್ನು ನಿರ್ಮಾಪಕರಿಗೆ ತಿಳಿಸಿದ್ದರು, ಮುಂದೆ ಹೀಗಾಗುವುದಿಲ್ಲ ಎಂದು ನಿರ್ಮಾಪಕರೂ ಭರವಸೆ ಕೊಟ್ಟಿದ್ದರು.
ಆದರೆ ‘ಮಗಧೀರ’ ಚಿತ್ರ ಜಯಭೇರಿ ಬಾರಿಸಿದ ಸಂದರ್ಭದಲ್ಲೂ ಅಲ್ಲು ಅರವಿಂದ್ ಅದೇ ತಪ್ಪನ್ನು ಪುನರಾವರ್ತಿಸಿದ್ದು ರಾಜಮೌಳಿಗೆ ಬೇಸರವಾಗಿತ್ತು. ಅವರು ಆ ‘ಪಾರ್ಟಿ’ಗೂ ಹೋಗಿರಲಿಲ್ಲ. ಸಿಸಿಐ (Competition Commission of India) ಸಿನಿಮಾ ವಿತರಣೆಯ ಕುರಿತು ಒಂದು ವರದಿ ಸಲ್ಲಿಸಿತ್ತು. ಅದರಲ್ಲಿ, ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಅಥವಾ ಗಲ್ಲಾ ಪೆಟ್ಟಿಗೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ತಿಳಿಸಿತ್ತು. ಒಂದು ಸಿನಿಮಾ ಎಷ್ಟು ಚಿತ್ರ ಮಂದಿರದಲ್ಲಿ ಪ್ರದರ್ಶನವಾಗುತ್ತಿದೆ, ಎಷ್ಟು ಪ್ರದರ್ಶನಗಳನ್ನು ಕಾಣುತ್ತಿದೆ ಅಥವಾ ಕಂಡಿದೆ, ಎಷ್ಟು ಗಳಿಸಿದೆ ಎನ್ನುವುದಕ್ಕೆ ಅಧಿಕೃತ ದಾಖಲೆಗಳಿಲ್ಲ. ನಮ್ಮ ದೇಶದಲ್ಲಿ ಜನರಿಗೆ ಸಿನಿಮಾ ಹೇಗೆ ತಲುಪುತ್ತದೆ ಎನ್ನುವುದನ್ನು ತಿಳಿಯಬೇಕು.
ಸಿನಿಮಾ ವಿತರಣೆಗೆ ಸಂಬಂಽಸಿದಂತೆ, ಭಾರತದಲ್ಲಿ ಮುಂಬೈ, ದೆಹಲಿ, ಮೈಸೂರು, ರಾಜಸ್ಥಾನ, ಪಂಜಾಬ್ ಹೀಗೆ ಒಟ್ಟು ಹನ್ನೊಂದು ಪ್ರಾಂತ್ಯಗಳಿವೆ.
ಅದರಲ್ಲಿ ಮುಂಬೈನಿಂದ ಮೂವತ್ತೈದು ಪ್ರತಿಶತ, ದೆಹಲಿಯಿಂದ ಇಪ್ಪತ್ತು ಪ್ರತಿಶತ ಆದಾಯ ಬರುತ್ತದೆ. ಅಂದರೆ, ಅರ್ಧಕ್ಕಿಂತ ಹೆಚ್ಚು ಈ ಎರಡೇ ಪ್ರಾಂತ್ಯದಿಂದ ಬರುತ್ತದೆ. ಇರಲಿ, ಸಿನಿಮಾ ತಯಾರಾದ ನಂತರ ನಿರ್ಮಾಪಕರು ಚಿತ್ರವನ್ನು ಆಯಾ ಪ್ರಾಂತ್ಯದ ವಿತರಕರಿಗೆ ನೀಡುತ್ತಾರೆ. ವಿತರಕರಿಂದ ಸಿನಿಮಾ ಚಿತ್ರಮಂದಿರಕ್ಕೆ ಹೋಗಿ, ಪ್ರದರ್ಶನಗೊಳ್ಳುತ್ತದೆ. ಆದಾಯದ ವಿಷಯದಲ್ಲಿ ಇದೇ ದಾರಿ ಹಿಂದೆ-ಮುಂದಾಗುತ್ತದೆ. ಚಿತ್ರಮಂದಿರದವರು ಹಣದ ಲೆಕ್ಕಾಚಾರವನ್ನು ವಿತರಕರಿಗೆ, ವಿತರಕರು ನಿರ್ಮಾಪಕರಿಗೆ ನೀಡುತ್ತಾರೆ. ಚಿತ್ರದ ಗಲ್ಲಾ ಪೆಟ್ಟಿಗೆ ತಿಳಿಯಲು ಇರುವುದು ಇದೊಂದೇ ಮಾರ್ಗ.
ನಿರ್ಮಾಪಕರು ತನ್ನ ಚಿತ್ರದ ಗಳಿಕೆ ಇಂತಿಷ್ಟು ಎಂದು ಹೇಳಿದರೆ (ಜತೆಗೆ ವಿತರಕರಿಗೆ, ಥೇಟರ್‌ನವರಿಗೆ ಕಮಿಷನ್ ಕೊಟ್ಟರೆ) ಮುಗಿಯಿತು. ಇದು ಹೇಗೆ ಸಾಧ್ಯ? ಭಾರತದ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆಗಳು ಗಲ್ಲಾಪೆಟ್ಟಿಗೆಯ ಕುರಿತು ಮಾಹಿತಿ ನೀಡುತ್ತವಲ್ಲ. ಅದು ಸುಳ್ಳೇ? ಒಂದು ವಿಷಯ ತಿಳಿದಿರಲಿ, ಯಾವುದೇ ದಿನಪತ್ರಿಕೆ ಪ್ರತಿನಿತ್ಯ ಚಿತ್ರಮಂದಿರಕ್ಕೆ ಹೋಗಿ ವರದಿ ಪಡೆಯುವುದಿಲ್ಲ. ಬಹುತೇಕ ಪತ್ರಿಕೆಗಳು ಆನ್‌ಲೈನ್ ಪ್ರಕಾಶಕರ ಮಾಹಿತಿಯನ್ನೇ ಎರವಲು ಪಡೆಯುತ್ತವೆ.
ಭಾರತದಲ್ಲಿ ‘ಬಾಲಿವುಡ್ ಹಂಗಾಮ’, ‘ಬಾಕ್ಸ್ ಆಫೀಸ್ ಇಂಡಿಯಾ’, ‘ಕೊಯಿಮೊಯಿ’ ಇತ್ಯಾದಿಗಳು ಚಲನಚಿತ್ರಗಳ ಗಳಿಕೆ ತಿಳಿಸುವ ಆನ್‌ಲೈನ್ ಪಬ್ಲಿಷರ್‌ಗಳು. ಅವರಾದರೂ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಾರೆಯೇ ಎಂದರೆ ಅದೂ ಇಲ್ಲ. ಅವರು ಮಾಹಿತಿ ಪಡೆಯುವುದೂ ವಿತರಕರಿಂದ ಅಥವಾ ನಿರ್ಮಾಪಕರಿಂದಲೇ. ಈ ಲೆಕ್ಕ ಯಾಕೆ ಸರಿಯಲ್ಲ ಎನ್ನುವುದಕ್ಕೆ ಇನ್ನೂ ಒಂದು ಕಾರಣ ಕೊಡುತ್ತೇನೆ. ದೇಶದಲ್ಲಿ ಒಟ್ಟು ಎಷ್ಟು ಚಿತ್ರಮಂದಿರಗಳಿವೆ ಎಂಬ ಸರಿಯಾದ ಲೆಕ್ಕವೇ ಇಲ್ಲ. ಭಾರತದಲ್ಲಿ ಚಿತ್ರಮಂದಿರಗಳು ಸರಕಾರದ ನಿಯಂತ್ರಣದಲ್ಲಿಲ್ಲ. ಇದನ್ನು ಹೇಳುವ ಏಜನ್ಸಿಗಳೂ ಒಂದಕ್ಕೊಂದು ತಾಳ-ತಂತಿ ಇಲ್ಲದ
ಲೆಕ್ಕ ಹೇಳುತ್ತವೆ. ಕೆಪಿಎಂಜಿ-ಎ-ಐಸಿಸಿಐ ಸಂಸ್ಥೆ ಯು ದೇಶದಲ್ಲಿ ಒಟ್ಟು ಎಂಟು ಸಾವಿರ ಚಿತ್ರಮಂದಿರಗಳಿವೆ ಎಂದರೆ, ಇನ್ನೊಂದು ಸಂಸ್ಥೆ ಎಸ್ಸೆಲ್
ವಿಶನ್ ಪ್ರೊಡಕ್ಷನ್ ಹದಿಮೂರು ಸಾವಿರ ಚಿತ್ರಮಂದಿರಗಳಿವೆ ಎಂಬ ಲೆಕ್ಕ ಕೊಡುತ್ತದೆ.
ಎರಡು ಸಂಸ್ಥೆಗಳ ನಡುವೆಯೇ ಐದು ಸಾವಿರದಷ್ಟು ವ್ಯತ್ಯಾಸವಿದೆ ಎಂದಾದರೆ, ಇನ್ನು ಚಿತ್ರಮಂದಿರದಿಂದ ಬರುವ ಆದಾಯದ ವಿಷಯದಲ್ಲಿ ಎಷ್ಟು
ಹೈಗೈ ಇರಬಹುದು? ಒಂದು ಪ್ರಾಂತ್ಯದಲ್ಲಿ ಸಿನಿಮಾ ತೋಪಾದರೆ, ಇನ್ನೊಂದು ಕಡೆ ಲಾಭವಾಯಿತು ಎಂದರಾಯಿತು, ದೇಶದ ಎಲ್ಲ ಕಡೆಯೂ ಮಣ್ಣು
ಮುಕ್ಕಿದರೆ ವಿದೇಶದಲ್ಲಿ ಹಣ ಗಳಿಸಿತು ಎಂದರಾಯಿತು, ಅಲ್ಲವೇ? ಹಾಗಾದರೆ ಈ ಅಂಕಿ-ಅಂಶಗಳನ್ನು ಎಷ್ಟು ನಂಬಬೇಕು? ಹೇಗೆ ನಂಬಬೇಕು?
ಹಾಗಾದರೆ ನಾವು ಏನು ಮಾಡಬೇಕು? ಏನೂ ಮಾಡುವುದು ಬೇಡ, ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಇಷ್ಟು ಗಳಿಸಿದೆ, ಅಷ್ಟು ಗಳಿಸಿದೆ ಎನ್ನುವ ಬೋಗಸ್
ಲೆಕ್ಕದ ಬಲೆಗೆ ಬೀಳದೆ, ನೋಡಬೇಕು ಎಂದು ಅನಿಸಿದ ಚಿತ್ರ ನೋಡಬೇಕು.
ಬಾಕ್ಸ್ ಆಫೀಸ್‌ನಲ್ಲಿ ಸೋತ ಎಷ್ಟೋ ಚಿತ್ರಗಳನ್ನು ನೋಡಿ ಇಷ್ಟಪಟ್ಟಿಲ್ಲವೇ? ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಎಷ್ಟೋ ಸಿನಿಮಾ ನೋಡಿ ಬೈಯುತ್ತ ಹೊರಬಂದಿಲ್ಲವೇ? ಬಾಕ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮಿಷ್ಟದ ಚಿತ್ರ ನೋಡಿ.