ಹಿತೋಪದೇಶ
ಅಜಯ್ ಅಂಗಡಿ
ಚುನಾವಣೆ ಎಂಬುದು ಒಂದು ದೇಶದ ಅಭಿವೃದ್ಧಿಯ ಹಾದಿಯಲ್ಲಿ ತುಂಬಾ ಮಹತ್ವದ ಪ್ರಕ್ರಿಯೆ. ಆದರೆ ನಾವು ಭಾರತೀಯರು ಈ ಪ್ರಕ್ರಿಯೆಯಲ್ಲಿ ಎಷ್ಟರ ಮಟ್ಟಿಗೆ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂಬುದು ಯೋಚಿಸಬೇಕಾದ ಸಂಗತಿ. ಸ್ವಾತಂತ್ರ್ಯಪೂರ್ವದ ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾದ ನಮಗೆ ರಾಷ್ಟ್ರ ನಿರ್ಮಾಣದ ಪಥದಲ್ಲಿ ಮುನ್ನಡೆಯಲು ಸಮರ್ಥ ನಾಯಕರೊಬ್ಬರ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ಹಲವು ಎಡರುತೊಡರುಗಳಾದವು. ಅದರಿಂದಾಗಿ
ಭಾರತದ ಭೂಪಟದಲ್ಲಿ ಹಲವು ಪಲ್ಲಟಗಳಾದದ್ದು ದುರಂತದ ಮತ್ತು ವಿಷಾದನೀಯ ಸಂಗತಿ.
ಸ್ವಾತಂತ್ರ್ಯಾ ನಂತರದಿಂದ ಇಂದಿನವರೆಗಿನ ಕಾಲಘಟ್ಟದಲ್ಲಿ ಚುನಾವಣೆಯಿಂದ ಚುನಾವಣೆಗೆ ಮತದಾರ ಕೂಡ ಅಪ್‌ಡೇಟ್ ಆಗುತ್ತಾ ಹೋದ. ಅದೇ ರೀತಿಯಲ್ಲಿ ರಾಜಕಾರಣಿಗಳು ಒಡ್ಡುವ ಬಗೆಬಗೆಯ ಆಮಿಷಗಳಿಗೂ ಬಲಿಯಾಗುತ್ತಾ ಹೋದ. ಮೊದಮೊದಲು ಕೆಲವರಿಗಷ್ಟೇ ಮೀಸಲಾಗಿದ್ದ ಮತ ಚಲಾವಣೆಯ ಹಕ್ಕು, ತದನಂತರದಲ್ಲಿ ಪ್ರಜ್ಞಾವಂತ ಅಽಕಾರಿಗಳು ಮತ್ತು ಮುತ್ಸದ್ದಿಗಳಿಂದ ಹೊಮ್ಮಿದ ಮುಂದಾಲೋಚನೆಯ ಫಲವಾಗಿ ಈಗ ಹದಿನೆಂಟು ವರ್ಷ ಮೇಲ್ಪಟ್ಟಿರುವ ಎಲ್ಲ ಅರ್ಹ ನಾಗರಿಕರಿಗೂ ಸಿಕ್ಕಿದೆ.
ಇವಿಷ್ಟು ಬೆಳವಣಿಗೆಗಳ ನಡುವೆ ಹಲವು ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಹಲವು ಸರಕಾರಗಳು ಅಽಕಾರವನ್ನು ಹಿಡಿದು, ಒಂದಷ್ಟು ಜನಪರ, ಮತ್ತೊಂದಿಷ್ಟು ಜನವಿರೋಽ ನೀತಿಗಳು, ನಿಯಮಗಳು ಜಾರಿಯಾದದ್ದು ವಿಪರ್ಯಾಸ. ಶಾಂತವೇರಿ ಗೋಪಾಲಗೌಡ ಮತ್ತು ಜಯಪ್ರಕಾಶ್ ನಾರಾಯಣ್‌ರಂಥ (ಜೆಪಿ) ಜನಪ್ರಿಯ ಹಾಗೂ ಜನಪರ ನಿಲುವಿನ ಹಲವು ನಾಯಕರು ಪ್ರಜಾಪ್ರಭುತ್ವದ ಹಾದಿಯಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದರು. ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿ ಹಲವು ಯುವ ಹಾಗೂ ಮಹತ್ವಾಕಾಂಕ್ಷಿ ನೇತಾರರು ಉದಯಿಸಿದ್ದು ಭಾರತದ ಪಾಲಿಗೆ ಒದಗಿದ ವರ ಎಂದೇ ಹೇಳಬೇಕು. ಒಂದು ಪಕ್ಷದ ಆಚೆಗೆ, ಸಮಾನಾಂತರವಾಗಿ ತೃತೀಯ ರಂಗ ಹಾಗೂ ಹಲವು ಪಕ್ಷಗಳು ಅಽಕಾರದ ಗದ್ದುಗೆ ಏರಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದವು.
ಇದರೊಟ್ಟಿಗೆ ಬದಲಾದದ್ದು ಸಿದ್ಧಾಂತ ಆಧರಿತ ರಾಜಕಾರಣ. ಮುಂಚೆಯೆಲ್ಲಾ ಸಿದ್ಧಾಂತ ನಂಬಿ ರಾಜಕೀಯ ಅಖಾಡಕ್ಕೆ ಧುಮುಕುವುದು ವಾಡಿಕೆಯಾಗಿತ್ತು. ಆದರೆ ಈಗ ಎಲ್ಲದಕ್ಕೂ ಹಣವೇ ಮೂಲ, ಹಣವೇ ಸರ್ವಸ್ವ. ಅದರ ಎದುರು ಗುಣಕ್ಕೆ ಬೆಲೆಯಿಲ್ಲ! ರಾಮಕೃಷ್ಣ ಹೆಗಡೆ, ಎಸ್.ನಿಜಲಿಂಗಪ್ಪ, ಅಟಲ್ ಬಿಹಾರಿ
ವಾಜಪೇಯಿ, ಎಲ್.ಕೆ. ಆಡ್ವಾಣಿ ಅವರಂಥ ರಾಜಕೀಯ ಮುತ್ಸದ್ದಿಗಳು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂಥ ಖ್ಯಾತಿ ಮತ್ತು ಛಾತಿಯನ್ನು ಹೊಂದಿದ್ದರು. ತಾವು ಸ್ವತಃ ಉದಾತ್ತ ನಾಯಕರಾಗಿದ್ದುದರ ಜತೆಗೆ, ಮತ್ತೊಂದು ಸ್ತರದ ನಾಯಕತ್ವವನ್ನು ಬೆಳೆಸುವುದಕ್ಕೂ ಅವರೆಲ್ಲಾ ಒತ್ತು ನೀಡಿದ್ದರು. ಜನರು ಕೂಡ ಅವರನ್ನು ಗೌರವಾದರಗಳೊಂದಿಗೆ ಕಾಣುತ್ತಿದ್ದರು, ಅವರಾಡುವ ಮಾತುಗಳನ್ನು ನಂಬುತ್ತಿದ್ದರು, ಅವರ ಸಿದ್ಧಾಂತಗಳಿಗೆ ಸಮ್ಮತಿಸುತ್ತಿದ್ದರು.
ಆದರೆ ಈಗ ಅಂಥ ವಾತಾವರಣವೂ ಇಲ್ಲ, ಆ ರೀತಿಯ ಧೀಮಂತ ರಾಜಕಾರಣಿಗಳನ್ನು ಹುಡುಕಿದರೂ ಸಿಗುವುದು ವಿರಳ. ಆಗೆಲ್ಲಾ ರಾಜಕೀಯ ಸಂಬಂಽತ ಟೀಕೆ-ಟಿಪ್ಪಣಿಗಳೇನೇ ಹೊಮ್ಮಿದರೂ, ಹೋರಾಟ/ಚಳವಳಿಗಳು ನಡೆದರೂ ಅದರ ಹಿಂದೆ ರಾಷ್ಟ್ರದ ಹಿತವನ್ನು ಕಾಯುವ ಉದ್ದೇಶವಿರುತ್ತಿತ್ತು. ಈಗಿನ
ಜಮಾನಾದಲ್ಲಿ ಎಲ್ಲವೂ ವಿಚಿತ್ರವಾಗಿವೆ ಮತ್ತು ವೈರುದ್ಧ್ಯಗಳಿಂದ ಕೂಡಿವೆ. ವೈಯಕ್ತಿಕ ನೆಲೆಯಲ್ಲಿ ಮಾಡಲಾಗುವ ತೇಜೋವಧೆಯೇ ಈಗಿನ ರಾಜಕಾರಣದ ಮುಖವಾಣಿ ಮತ್ತು ಅಸ. ಅದಕ್ಕಾಗಿ ಎಂಥ ಕೀಳುಮಟ್ಟಕ್ಕೆ ಇಳಿಯಲೂ ಈಗಿನ ಬಹುತೇಕ ನಾಯಕರು ಸಿದ್ಧರಾಗಿರುತ್ತಾರೆ. ಇದು ಪಕ್ಷಾತೀತವಾಗಿ ಕಾಣಬರುವ ವಸ್ತುಸ್ಥಿತಿ. ಈಗ ಎಲ್ಲ ಮಾತೂ, ಎಲ್ಲ ಕೃತಿಯೂ ರಾಜಕೀಯ ಲೇಪಿತ. ಅರ್ಥವಿಲ್ಲದ ಮಾತುಗಳನ್ನು ಆಡುತ್ತಾ, ನೆರವೇರಿಸಲಾಗದ/ ಅಪ್ರಾಯೋಗಿಕ ಭರವಸೆಗಳನ್ನು ನೀಡುತ್ತಾ, ಒಬ್ಬರನ್ನೊಬ್ಬರು ಟೀಕಿಸುತ್ತಾ, ಒಳಗೊಳಗೇ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ತಮ್ಮ ಹಿತಕ್ಕೆಂದು ಜನಹಿತವನ್ನು ಬಲಿಕೊಡುವ ರಾಜಕಾರಣಿಗಳೇ ಇಂದು ಹೆಚ್ಚೆಚ್ಚು ಕಂಡುಬರುತ್ತಾರೆ.
ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರಿಂದ ಮೊದಲ್ಗೊಂಡು ಇಂದಿನ ಪ್ರಧಾನಿ ನರೇಂದ್ರ ಮೋದಿಯವರವರೆಗೆ ಭಾರತದ ಚುಕ್ಕಾಣಿ ಹಿಡಿದಿದ್ದವರ ಪ್ರವರಗಳೆಲ್ಲಾ ದೇಶದ ಪ್ರಜೆಗಳಿಗೆ ತಿಳಿದಿರುವಂಥದ್ದೇ. ಈ ಯಾದಿಯಲ್ಲಿ ಹಲವರು ಹಲವು ಕಾರಣಗಳಿಗೆ ನೆನಪಾಗಬಹುದು; ಆದರೆ ವಿಶೇಷವಾಗಿ ಸದಾಕಾಲವೂ ಸ್ಮೃತಿಯಲ್ಲೇ ಉಳಿಯುವವರು ಬೆರಳೆಣಿಕೆಯಷ್ಟು ನೇತಾರರು ಮಾತ್ರ. ಹಾಗೆ ಚಿರಕಾಲ ನೆನಪಿನಲ್ಲಿ ಉಳಿಯುವಂಥ ನೇತಾರರು ನಮಗೆ ಇನ್ನಷ್ಟು ಬೇಕೆಂದರೆ, ನಾವು ಯೋಚಿಸಿ ಮತ ಚಲಾಯಿಸಬೇಕು. ಯಾವ ಅಭ್ಯರ್ಥಿಯು ಅಭಿವೃದ್ಧಿ ಮಾಡಬಲ್ಲ, ಯಾವ ರಾಜಕೀಯ ಪಕ್ಷವು ಅಭಿವೃದ್ಧಿಯ ಜತೆಜತೆಗೆ ಜನರ ರಕ್ಷಣೆಗಾಗಿಯೂ ಹೋರಾಟ ಮಾಡಬಲ್ಲದು ಎಂಬ ಗ್ರಹಿಕೆ ನಮಗಿರಬೇಕು.
ಸಮಾಜದಲ್ಲಿ ಕಾಲಾನುಕಾಲಕ್ಕೆ ನಡೆಯುವ ಪ್ರತಿಯೊಂದು ಘಟನೆಗೆ ರಾಜಕೀಯದ ಬಣ್ಣ ಬಳಿಯುವ, ತನ್ಮೂಲಕ ಸಮಾಜದಲ್ಲಿ ಒಡಕನ್ನು ಉಂಟುಮಾಡುವ, ಜನರ ಶಾಂತಿ-ನೆಮ್ಮದಿಗಳಿಗೆ ಭಂಗ ತರುವ ನಾಯಕರನ್ನು ಮುಲಾಜಿಲ್ಲದೆ ದೂರವಿಡೋಣ. ರಾಷ್ಟ್ರದ ಹಿತವನ್ನು ಕಾಪಾಡುವ ಹಾಗೂ ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧವಿರುವ ಅಭ್ಯರ್ಥಿ ಯಾರೆಂದು ಅರಿತು ಮತ ಚಲಾಯಿಸೋಣ. ನಿಕೃಷ್ಟ ಮನಸ್ಥಿತಿಯವರ ಹೇಳಿಕೆಗಳಿಗೆ ಮಹತ್ವ ನೀಡದೆ ಮತದಾನವೆಂಬ ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸೋಣ.
ಪ್ರಗತಿಪರರು ಎನಿಸಿಕೊಂಡ ಅನೇಕರು, ಹಲವಾರು ರೀತಿಯಲ್ಲಿ ಸಮರ್ಥರನ್ನು ನಿಂದಿಸಿ, ಹೀಗಳೆದು ತಮ್ಮ ಜಿಹ್ವಾಚಾಪಲ್ಯವನ್ನು ತೀರಿಸಿಕೊಳ್ಳುತ್ತಿರುವುದನ್ನು ನೋಡುತ್ತಲೇ ಬಂದಿದ್ದೇವೆ. ಚುನಾವಣೆಯಲ್ಲಿ ಸಮರ್ಥರಿಗೆ ದಕ್ಕುವ ಗೆಲುವೇ ಇಂಥವರಿಗೆ ಉತ್ತರವಾಗಬಲ್ಲದು. ಮತ ಚಲಾಯಿಸುವುದನ್ನು ಮರೆಯಬೇಡಿ.
ನಮ್ಮ ಪ್ರಜಾಪ್ರಭುತ್ವ ಗೆಲ್ಲಲಿ, ತನ್ಮೂಲಕ ಭಾರತ ಗೆಲ್ಲಲಿ.
(ಲೇಖಕರು ಹವ್ಯಾಸಿ ಬರಹಗಾರರು)