Sunday, 15th December 2024

‘ಬ್ಲ್ಯೂಕಾರ್ನರ್’ ನೋಟಿಸ್

ಮಾಹಿತಿಕೋಶ

ಪ್ರಕಾಶ ಹೆಗಡೆ

‘ಸೊಂಪಾದಕೀಯ’ ವಿಭಾಗದಲ್ಲಿ (ವಿಶ್ವವಾಣಿ ಮೇ ೫) ಪ್ರಜ್ವಲ್ ರೇವಣ್ಣ ಅವರಿಗೆ ಇಂಟರ್‌ಪೋಲ್ ಮುಖಾಂತರ ‘ಬ್ಲ್ಯೂ ಕಾರ್ನರ್’ ನೋಟಿಸ್ ನೀಡಿರು ವುದರ ಬಗ್ಗೆ ಉಲ್ಲೇಖಿಸಲಾಗಿದೆ.

‘ಬ್ಲ್ಯೂ’ ಬಣ್ಣದ ಬಗ್ಗೆ ಹಲವು ವಿಧದಲ್ಲಿ ವಿಶ್ಲೇಷಣೆ ಯಾಗುತ್ತಿದ್ದು, ಈ ಕಿರುಬರಹದಲ್ಲೂ ‘ಲೈಂಗಿಕ ವಿಡಿಯೋಗಳನ್ನು ಬ್ಲ್ಯೂ ಫಿಲ್ಮ್ ಅನ್ನೋ ಕಾರಣಕ್ಕೆ, ಅಂಥ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಜ್ವಲ್ ಅವರಿಗೆ ಬ್ಲ್ಯೂ ಕಾರ್ನರ್ ನೋಟಿಸ್ ನೀಡಲಾಗಿದೆಯೇ ಅಂತ ಜನ ಕುಹಕದ ಮಾತಾಡ್ತಾ ಇದ್ದಾರೆ’ ಎಂದು ತಮಾಷೆಯಾಗಿ ಉಲ್ಲೇಖಿಸಲಾಗಿದೆ, ಇರಲಿ.

ಇಂಟರ್‌ಪೋಲ್ ಐದು ರೀತಿಯ ನೋಟಿಸ್‌ಗಳನ್ನು ಹೊರಡಿಸುತ್ತದೆ. ವಿವಿಧ ರೀತಿಯ ಹುಡುಕಾಟ ಮತ್ತು ದೇಶಭ್ರಷ್ಟರ ಬಗೆಗಿನ ಮಾಹಿತಿಯ ದ್ಯೋತಕ ವಾಗಿ ಹೀಗೆ ಕೆಂಪು, ನೀಲಿ, ಹಸಿರು, ಹಳದಿ ಮತ್ತು ಕಪ್ಪು ಎಂಬ ಸಾಂಕೇತಿಕ ಬಣ್ಣಗಳನ್ನು ಅದಕ್ಕೆ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ದೇಶಭ್ರಷ್ಟರನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ರೆಡ್ ನೋಟಿಸ್ ಸಹಾಯ ಮಾಡುತ್ತದೆ. ಬ್ಲ್ಯೂ ನೋಟಿಸ್‌ಗಳು ಅಪರಾಧಕ್ಕೆ ಸಂಬಂಧಿಸಿದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿದರೆ, ಗ್ರೀನ್ ನೋಟಿಸ್‌ಗಳು ಕ್ರಿಮಿನಲ್ ಬೆದರಿಕೆಗಳ ಬಗ್ಗೆ ಎಚ್ಚರಿಕೆ ನೀಡುತ್ತವೆ.

ಹಳದಿ ನೋಟಿಸ್‌ಗಳು ಕಾಣೆಯಾದ ವ್ಯಕ್ತಿಗಳನ್ನು, ಅದರಲ್ಲೂ ವಿಶೇಷವಾಗಿ ದುರ್ಬಲ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದರೆ, ಕಪ್ಪು ನೋಟಿಸ್‌ಗಳು ಗುರುತಿಸಲಾಗದ ದೇಹಗಳ ದತ್ತಾಂಶವನ್ನು ಒದಗಿಸುತ್ತವೆ. ಪ್ರಜ್ವಲ್ ರೇವಣ್ಣ ಅವರನ್ನು ಪತ್ತೆ ಹಚ್ಚಲು ಇಂಟರ್ ಪೋಲ್ ನೀಡಿರುವ ಹುಡುಕಾಟದ ಸೂಚನೆ ಬ್ಲ್ಯೂ ಕಾರ್ನರ್ ಕೋಡ್‌ನಲ್ಲಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬ್ಲ್ಯೂ ಕಾರ್ನರ್ ನೋಟಿಸ್ ಎಂದರೆ ಕ್ರಿಮಿನಲ್ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವುದು.

ನೂರಕ್ಕೂ ಹೆಚ್ಚು ರಾಷ್ಟ್ರೀಯ ಪೊಲೀಸ್ ಪಡೆಗಳ ಸಂಘವಾದ ‘ಇಂಟರ್‌ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಷನ್’ (ಇಂಟರ್‌ಪೋಲ್), ಮುಖ್ಯವಾಗಿ ಅಂತಾರಾಷ್ಟ್ರೀಯ ಅಪರಾಧಗಳ ವಿರುದ್ಧ ಹೋರಾಡಲು ಮೀಸಲಾಗಿರುವಂಥದ್ದು. ಫ್ರಾನ್ಸ್‌ನ ಲಿಯಾನ್ ಎಂಬಲ್ಲಿ ಇದರ ಪ್ರಧಾನ ಕಚೇರಿಯಿದೆ. ಭಯೋತ್ಪಾದನೆ, ಸೈಬರ್ ಅಪರಾಧ, ಸಂಘಟಿತ ಅಪರಾಧ, ಆರ್ಥಿಕ ಅಪರಾಧ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಂಬಂಧಿ ಸಿದ ರಾಷ್ಟ್ರೀಯ ಪ್ರಯತ್ನಗಳನ್ನು ಈ ಪರಿಣತಿಯು ಬೆಂಬಲಿಸುತ್ತದೆ.

ಪ್ರತಿ ವಿಶೇಷ ಅಪರಾಧ ಪ್ರದೇಶದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಂಬಂಧಿತ ಸದಸ್ಯರೊಂದಿಗೆ ವಿವಿಧ ತನಿಖೆಗಳನ್ನು ನಡೆಸುತ್ತಾರೆ. ಅಂತೆಯೇ ಇಂಟರ್‌ಪೋಲ್ ಒಂದು ವಿಶೇಷ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಇದು ಜಾಗತಿಕವಾಗಿ ಪೊಲೀಸ್ ಮಾಹಿತಿಯನ್ನು ಹಂಚಿಕೊಳ್ಳುವ ಆದೇಶ ಮತ್ತು ತಾಂತ್ರಿಕ ಮೂಲಸೌಕರ್ಯವನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ.

ಎಲ್ಲಾ ೧೯೫ ಸದಸ್ಯ ರಾಷ್ಟ್ರಗಳು ‘ಐ-೨೪/೭’ ಎಂಬ ಸುರಕ್ಷಿತ ಸಂವಹನ ವ್ಯವಸ್ಥೆಯ ಮೂಲಕ ಪರಸ್ಪರ ಮತ್ತು ಜನರಲ್ ಸೆಕ್ರೆಟರಿಯೇಟ್‌ಗೆ ಸಂಪರ್ಕ ಹೊಂದಿವೆ. ಇದು ವಿವಿಧ ದೇಶಗಳ ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಂಪರ್ಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಮಾಹಿತಿ ವಿನಿಮಯವನ್ನು ಸುಗಮ ಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇಂಟರ್‌ಪೋಲ್ ತನ್ನದೇ ಆದ ಯಾವುದೇ ಪೊಲೀಸ್ ಪಡೆಯನ್ನು ಹೊಂದಿಲ್ಲ, ಅದರ ಬಳಿ ಯಾವುದೇ ಶಸ್ತ್ರಾಸ್ತ್ರಗಳ ಸಂಗ್ರಹವಿಲ್ಲ ಮತ್ತು ಒಳಗೆ ನುಗ್ಗಿ ಅಪರಾಧಿಗಳನ್ನು ಮೇಲ್ಚಾವಣಿಗಳಿಂದ ಹೊರತೆಗೆಯಬಲ್ಲ ಯಾವುದೇ ಹೆಲಿಕಾಪ್ಟರ್ ಗಳಿಲ್ಲ.

ಇದರ ಅಧಿಕಾರವು ಬಹುತೇಕವಾಗಿ, ಸದಸ್ಯರಾಷ್ಟ್ರಗಳು ಹಂಚಿಕೊಳ್ಳುವ ಮಾಹಿತಿಯ ಮೇಲೆ ಅವಲಂಬಿತವಾಗಿದೆ. ವ್ಯಕ್ತಿಗಳನ್ನು ಬಂಧಿಸುವ ಅಧಿಕಾರ ಕೂಡ ಇಂಟರ್‌ಪೋಲ್‌ಗೆ ಇಲ್ಲ.  ಪ್ರಜ್ವಲ್‌ರ ವಿಷಯದಲ್ಲಿ ಇಂಟರ್‌ಪೋಲ್‌ನ ಬ್ಲ್ಯೂ ಕಾರ್ನರ್ ನೋಟಿಸ್ ಹೇಗೆ ಯಶಸ್ವಿಯಾಗುವುದೆಂದು ಕಾದು ನೋಡೋಣ.

(ಲೇಖಕರು ಹವ್ಯಾಸಿ ಬರಹಗಾರರು)