ಪ್ರತಿಸ್ಪಂದನ
ಶಂಕರನಾರಾಯಣ ಭಟ್
‘ಕಾಫಿ ಖರೀದಿಸಿದರೆ ಟಾಯ್ಲೆಟ್ ಫ್ರೀ’ ಎಂಬ ಶೀರ್ಷಿಕೆಯ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣ ಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯ, ಆಚಾರ-ವಿಚಾರಗಳಿರುತ್ತವೆ ಎಂಬುದನ್ನು ಅವರು ಸುಂದರವಾಗಿ ವಿವರಿಸಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ, ಪಾಶ್ಚಾತ್ಯರು ಬೆಳ್ಳಂಬೆಳಗ್ಗೆ ಬಿಯರ್ ಕುಡಿಯುವುದು ನಮಗೆಲ್ಲ ಅಸಹಜ ಅನ್ನಿಸಿದರೆ, ನಾವು ಬೆಳಗ್ಗೆಯೇ ಚಿತ್ರಾನ್ನ
ತಿನ್ನುವುದು ಅವರಿಗೂ ಅಸಹಜವೆನ್ನಿಸಬಹುದು ಎಂಬ ಹೋಲಿಕೆ ಚೆನ್ನಾಗಿದೆ. ಒಟ್ಟಾರೆ ಹೇಳುವುದಾದರೆ, ಒಬ್ಬರು ಇನ್ನೊಬ್ಬರಂತೆ ಇರುವುದಿಲ್ಲ ಎಂಬುದು ಎಷ್ಟು ಸತ್ಯವೋ, ಆಚಾರ-ವಿಚಾರ, ಹವ್ಯಾಸ-ಅಭ್ಯಾಸಗಳೂ ದೇಶದಿಂದ ದೇಶಕ್ಕೆ ಭಿನ್ನವಾಗುತ್ತಾ ಹೋಗುತ್ತವೆ ಎಂಬುದೂ ಅಷ್ಟೇ ಸತ್ಯ.
ಆದರೆ, ನಮ್ಮ ವರ್ತನೆ- ವ್ಯವಹಾರಗಳು ಇತರರಿಗೆ ತೊಂದರೆ ಕೊಡುವಂತಿರಬಾರದು ಎಂಬುದು ಮುಖ್ಯ. ಜತೆಗೆ ಎಲ್ಲವನ್ನೂ ಕೇವಲ ನಮ್ಮ ದೃಷ್ಟಿಕೋನ ದಿಂದಲೇ ಗ್ರಹಿಸಕೂಡದು ಎಂಬುದೂ ನಿಜ. ಕೆಲವು ದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಎಂಬುದೇ ಇರುವುದಿಲ್ಲ ಎಂದು ಲೇಖಕರು ಹೇಳಿದ್ದನ್ನು ಓದಿ ಆಶ್ಚರ್ಯವೆನಿಸಿತು. ಇದರರ್ಥ, ಯಾರಿಗಾದರೂ ನೈಸರ್ಗಿಕ ಕರೆಯನ್ನು ಪೂರೈಸಿಕೊಳ್ಳಬೇಕೆಂದರೆ ಹೋಟೆಲ್‌ನಲ್ಲಿ ಕಾಫಿ ಕುಡಿಯ ಬೇಕು, ಇಲ್ಲವೇ ಬಾರ್ ನಲ್ಲಿ ಬಿಯರ್ ಹೀರಬೇಕು; ಆಗ ಮಾತ್ರವೇ ಅವರಿಗೆ ಟಾಯ್ಲೆಟ್ ಭಾಗ್ಯ ಒದಗುತ್ತದೆ!
ಒಂದು ರೀತಿಯಲ್ಲಿದು ವಿಚಿತ್ರವಾದರೂ, ಇಂಥ ಪದ್ಧತಿಯಿರುವ ದೇಶಗಳು ವಾತಾವರಣವು ಗಲೀಜಾಗುವುದನ್ನು ತಡೆಯುವುದರ ಜತೆಗೆ ಆದಾಯ ಗಳಿಕೆಗೂ ಮಾರ್ಗ ಮಾಡಿಕೊಂಡಿವೆಯಲ್ಲ ಎಂದೂ ಅನಿಸಿದ್ದು ನಿಜ. ನಮ್ಮಲ್ಲೂ ಬಸ್ ನಿಲ್ದಾಣ ಗಳಲ್ಲಿ ಸಾರ್ವಜನಿಕ ಶೌಚಾಲಯ ಇರುತ್ತದೆಯಾ ದರೂ ಅಲ್ಲೂ ‘ಪೇ ಆಂಡ್ ಯೂಸ್’ ಬೋರ್ಡು ಹಾಕಿರುತ್ತಾರೆ; ಆದರೆ ನಮ್ಮಲ್ಲೊಂದು ಅನುಕೂಲವೆಂದರೆ, ಅಂಥ ಸಣ್ಣ ಪುಟ್ಟ ಕೆಲಸಕ್ಕೆ ಬಸ್ ನಿಲ್ದಾಣಕ್ಕೇ ಹೋಗಬೇಕೆಂದೇನೂ ಇಲ್ಲ, ಎಲ್ಲೋ ಒಂದು ಸುರಕ್ಷಿತ ಮೂಲೆಯನ್ನು ಹುಡುಕಿಯೂ ಆ ಕೆಲಸವನ್ನು ಪೂರೈಸಿಕೊಳ್ಳಬಹುದು!
ಚರ್ಚೆಗೋಸ್ಕರ ಈ ವಿಷಯವನ್ನು ನಮ್ಮಲ್ಲಿನ ವ್ಯವಸ್ಥೆಯೊಂದಿಗೆ ತುಲನೆ ಮಾಡೋಣ. ನಮ್ಮ ದೇಶದಲ್ಲಿ ಸಾಕಷ್ಟು ಸಾರ್ವಜನಿಕ ಶೌಚಾಲಯಗಳಿವೆ; ಆದರೆ ಅವುಗಳ ಪಾಡು ಯಾರಿಗೂ ಬೇಡ. ಪ್ರಾರಂಭದಲ್ಲಿ ಕೆಲ ದಿನಗಳು ನೀರು, ಸ್ವಚ್ಛತೆ ಕಂಡಿದ್ದನ್ನು ಬಿಟ್ಟರೆ ನಂತರ ಅವುಗಳ ನಿರ್ವಹಣೆಯನ್ನು ಕೇಳುವವರಿರುವುದಿಲ್ಲ. ಸಾರ್ವಜನಿಕರು ಅವನ್ನು ಬಳಸುವುದು ಒತ್ತಟ್ಟಿಗಿರಲಿ, ಅವುಗಳ ಸಮೀಪವೂ ಹೋಗುವಂತಿರುವುದಿಲ್ಲ. ಹೆಸರಿಗೆ ಕೆಲ ‘ಹೈಟೆಕ್’
ಶೌಚಾಲಯಗಳೂ ಇವೆ; ಆದರೆ ಅಲ್ಲಿ ಕನಿಷ್ಠಪಕ್ಷ ನೀರಿನ ಅನುಕೂಲತೆಯೂ ಇರುವುದಿಲ್ಲ. ಇನ್ನು ಕೆಲವು ಕಡೆ ‘ಪೇ ಆಂಡ್ ಯೂಸ್’ ಬೋರ್ಡ್ ಹಾಕಿಕೊಂಡು, ಹಣವನ್ನು ಪಡೆದೂ ಸಮರ್ಪಕ ನಿರ್ವಹಣೆ ಮಾಡದಿರುವ ನಿದರ್ಶನಗಳು ಸಾಕಷ್ಟು ಸಿಗುತ್ತವೆ.
ಇದಕ್ಕೆಲ್ಲ ಮೂಲಕಾರಣ, ನಾವು ಶೌಚಾಲಯ ವ್ಯವಸ್ಥೆಗೆ ಏನೇನೂ ಪ್ರಾಧಾನ್ಯ ಕೊಡದಿರುವುದು. ಇವುಗಳ ನಿರ್ವಹಣೆ ಇಲ್ಲದಿದ್ದರೂ ನಡೆಯುತ್ತದೆ ಎಂಬ ಭಾವ! ಕೆಲವು ಸಭಾಂಗಣಗಳಲ್ಲಂತೂ ಉಳಿದೆಲ್ಲ ಅನುಕೂಲತೆಗಳಿದ್ದರೂ ಶೌಚಾಲಯವೇ ಇರುವುದಿಲ್ಲ, ಇದ್ದರೂ ಬಳಕೆಗೆ ಯೋಗ್ಯ ವಾಗಿರುವು ದಿಲ್ಲ. ಆ ಮಟ್ಟಿಗಿನ ನಿರ್ಲಕ್ಷ್ಯ. ಹೀಗಾದಾಗಲೇ ಜನರು ‘ವಿಶಾಲಮನಸ್ಕ’ರಾಗಿ ವಿಶಾಲವಾದ ಬಯಲನ್ನೇ ಈ ಕಾರ್ಯಕ್ಕೆ ಅನಿವಾರ್ಯವಾಗಿ ಬಳಸಿಕೊಳ್ಳಬೇಕಾ ಗುತ್ತದೆ. ನಮ್ಮ ಕೆಲ ಶಾಲಾ-ಕಾಲೇಜುಗಳಲ್ಲಿ ಈಗಲೂ ವ್ಯವಸ್ಥಿತ ಶೌಚಾಲಯಗಳ ಕೊರತೆಯಿದೆ; ಇದರಿಂದಾಗಿ ಹೆಣ್ಣು ಮಕ್ಕಳಿಗೆ
ಎಷ್ಟೊಂದು ಸಮಸ್ಯೆಯಾಗುತ್ತದೆ ಎಂಬುದರ ಅರಿವೂ ಸಂಬಂಧಪಟ್ಟ ವರಿಗೆ ಇಲ್ಲದಿರುವುದು ವಿಷಾದನೀಯ.
(ಲೇಖಕರು ಹವ್ಯಾಸಿ ಬರಹಗಾರರು)