Thursday, 12th December 2024

ಮನಕ್ಕೆ ಭಗವದ್ಗೀತೆ ತಲುಪಿಸಿದ ಚಿನ್ಮಯರು

ಸ್ಮರಣೆ

ಸ್ವಾಮಿ ಆದಿತ್ಯಾನಂದ

ಮಹಾಭಾರತದಲ್ಲಿ ಬಹಳ ಸೊಗಸಾದ ಒಂದು ಕಥೆಯಿದೆ. ಕಶ್ಯಪ ಋಷಿಗಳಿಗೆ ಹಲವಾರು ಜನ ಹೆಂಡತಿಯರು. ಜಗತ್ತಿನ ಪ್ರಾಣಿಗಳೆಲ್ಲವೂ ಕಶ್ಯಪರ ಸಂತಾನವೆಂದೇ ನಮ್ಮ ಪೂರ್ವಜರು ಹೇಳಿದ್ದಾರೆ.

ಭೂಮಿಗೂ ಸಹ ಕಾಶ್ಯಪಿಯೆಂಬ ಹೆಸರಿದೆ. ಅವರ ಹೆಂಡತಿಯರಲ್ಲಿ ವಿನತಾ ಪಕ್ಷಿಕುಲಕ್ಕೆ ತಾಯಿ. ಕದ್ರು ಸರ್ಪಕುಲಕ್ಕೆ ತಾಯಿ. ಒಮ್ಮೆ ಕದ್ರು ಹಾಗೂ ವಿನತಾ ಇವರ ನಡುವೆ ಇಂದ್ರನ ಕುದುರೆಯಾದ ಉಚ್ಛೈಶ್ರವಸ್ ಬಾಲದ ಕುರಿತು ವಾಗ್ವಾದ ನಡೆಯಿತು. ಅವರಿಬ್ಬರು ಒಂದು ಪಂದ್ಯವನ್ನು ಸಹ ತೊಟ್ಟರು. ಸೋತವರು ಗೆದ್ದವರಿಗೆ ದಾಸಿಯಾಗಬೇಕೆಂದು ನಿಯಮವಾಯಿತು. ಕದ್ರು ಕುದುರೆಯ ಬಾಲ ಕಪ್ಪು ಎಂದಳು, ಆದರೆ ವಿನತಾ ಅದು
ಬಿಳಿಯಾಗಿದೆ ಎಂದಳು. ವಾಸ್ತವದಲ್ಲಿ ಅದು ಬಿಳುಪಾಗಿದ್ದಿತು. ಇದನ್ನರಿತ ಕದ್ರು ಪಂದ್ಯದಲ್ಲಿ ಸೋಲುವ ಭಯ ದಿಂದ ತನ್ನ ಮಕ್ಕಳಿಗೆ ಬಾಲವನ್ನು
ಸುತ್ತುವಂತೆ ಹೇಳಿದಳು. ದೂರದಿಂದ ವಿನತಾ ಮತ್ತು ಕದ್ರು ಕುದುರೆಯನ್ನು ನೋಡಲು ಅದರ ಬಾಲ ಕಪ್ಪಾಗಿ ಕಂಡಿತು.

ಪಂದ್ಯದಲ್ಲಿ ಸೋತ ವಿನತಾ ಕದ್ರುವಿನ ದಾಸಿಯಾಗಿ ನಿಯುಕ್ತಗೊಂಡಳು. ವಿನತೆಯ ಮಗ ಗರುಡನಿಗೆ ತನ್ನ ತಾಯಿಯ ದಾಸ್ಯತ್ವವನ್ನು ನಿವಾರಿಸ ಬೇಕೆಂಬ ಇಚ್ಛೆಯಾಯಿತು. ಗರುಡ ಕದ್ರುವನ್ನು ತಾಯಿಯ ದಾಸ್ಯ ನಿವಾರಣೆಗೆ ತಾನೇನು ಮಾಡಬೇಕೆಂದು ಪ್ರಶ್ನಿಸಿದನು. ಆಗ ಕದ್ರು ಸರ್ಪಗಳಿಗಾಗಿ ಅಮೃತವನ್ನು ತಂದರೆ ನಿನ್ನ ತಾಯಿಯ ದಾಸ್ಯತ್ವ ಕೊನೆಗೊಳ್ಳುವುದು ಎಂದಳು. ಗರುಡ ಇಂದ್ರನೊಡನೆ ಯುದ್ಧಮಾಡಿ, ಅಮೃತವನ್ನು ತಂದು ಕದ್ರುವಿಗೆ ಕೊಟ್ಟು, ತನ್ನ ತಾಯಿಯನ್ನು ದಾಸ್ಯತ್ವದಿಂದ ವಿಮೋಚನೆ ಮಾಡಿದನು.

ಸ್ವಾಮಿ ಚಿನ್ಮಯಾನಂದರೂ ಸಹ, ಮನೆಯ ಪೂಜಾಕೋಣೆಯಲ್ಲಿ ಬಟ್ಟೆಯಿಂದ ಬಂಧಿಸಲ್ಪಟ್ಟಿದ್ದ ಭಗವದ್ಗೀತೆ ಗ್ರಂಥವನ್ನು ಕೇವಲ ಆ ಗ್ರಂಥ ಪೂಜಿಸಲು ಮಾತ್ರವಲ್ಲ ಎಂದರಿತು, ಜನರ ಮನಗಳಲ್ಲಿ ನಿಲ್ಲುವಂತೆ ಮಾಡಿದರು. ಜ್ಞಾನ ಭಾರ್ಗವರಾಗಿ ಜಗತ್ತಿನಲ್ಲಿ ವಿರಾಜಿಸಿದರು. ಶ್ರೀಮದ್ ಭಗವದ್ಗೀತೆಯು ನಮಗೆ ಬದುಕುವ ಕಲೆಯನ್ನು ತಿಳಿಸುತ್ತದೆ. ಅದರ ಜ್ಞಾನವು ನಮಗೆ ಆತ್ಯಂತಿಕ ಆನಂದವನ್ನು ನೀಡುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂಬುದು ಸ್ವಾಮೀ ಚಿನ್ಮಯರ ದೃಢ ನಂಬಿಕೆಯಾಗಿತ್ತು.

ಸ್ವಾಮಿ ಚಿನ್ಮಯಾನಂದರು ಮೂಲತಃ ಕೇರಳ ರಾಜ್ಯದವರು. ೧೯೧೬ರ ಮೇ ಎಂಟರಂದು ಕೇರಳದ ಎರ್ನಾಕುಲಂ ಊರಲ್ಲಿ ಅವರು ಜನಿಸಿದರು. ಅವರ ತಂದೆ ತಾಯಿಗಳಿಟ್ಟ ಹೆಸರು ಬಾಲಕೃಷ್ಣ ಮೆನನ್. ಪ್ರಾಥಮಿಕ ವಿದ್ಯಾಭ್ಯಾಸ ಕೇರಳದಲ್ಲಿ ಹಾಗೂ ಹೆಚ್ಚಿನ ವ್ಯಾಸಂಗವನ್ನು ಲಖ್ನೋನಲ್ಲಿ ಮಾಡಿದರು. ತಂದೆಯ ಇಚ್ಛೆಯಂತೆ ಸ್ನಾತಕೋತ್ತರ ವಕೀಲ ಪದವಿಯನ್ನು ಪಡೆದರು. ಆದರೆ ಬಾಲಕೃಷ್ಣ ಮೆನನ್‌ರ ಆಸಕ್ತಿಯಿದ್ದದ್ದು ಪತ್ರಿಕೋದ್ಯಮದಲ್ಲಿ. ದೆಹಲಿಯ ನ್ಯಾಷನಲ್ ಹೆರಾಲ್ಡ ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿಯನ್ನು ಮಾಡತೊಡಗಿದರು.

ಅದು ಸ್ವಾತಂತ್ರ್ಯ ಸಂಗ್ರಾಮದ ಕಾಲ. ಬಾಲ ಕೃಷ್ಣ ಮೆನನ್ ಸಂಪೂರ್ಣವಾಗಿ ತಮ್ಮನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಬ್ರಿಟಿಷರ ತೊಂದರೆ ಗಳಿಂದ ತಪ್ಪಿಸಿಕೊಳ್ಳಲು ಪಂಜಾಬ್ ರಾಜ್ಯವನ್ನು ಮೊರೆಹೊಕ್ಕರು. ಸ್ವಾತಂತ್ರೋತ್ತರದಲ್ಲಿ ಮತ್ತೆ ಪತ್ರಿಕೋದ್ಯಮದಲ್ಲಿ ತೊಡಗಿಸಿ ಕೊಂಡು ಜೀವನ ಮುನ್ನಡೆಸಿದರು. ಭಾರತದ ಆರ್ಥಿಕ ಹಿನ್ನಡೆಗೆ ಸಾಧು ಸಂತರೇ ಕಾರಣ. ಅವರುಗಳು ದುಡಿದರೆ ದೇಶಕ್ಕೆ ಹಿತವೆಂಬ ಮನೋಭಾವದಿಂದ ಸಂತ ಮಹಾಂತರ ಜೀವನವನ್ನು ಹಾಗೂ ಕಾಪಟ್ಯವನ್ನು ಜಗತ್ತಿಗೆ ಪರಿಚಯಿಸುತ್ತೇನೆ ಎಂಬ ದೃಢವಿಶ್ವಾಸ ದಿಂದ ದೆಹಲಿಯಿಂದ ಹೃಷೀಕೇಶಕ್ಕೆ ಬಂದು ಸ್ವಾಮಿ ಶಿವಾನಂದರ ದಿವ್ಯಜೀವನಸಂಘದಲ್ಲಿ ತಂಗಿದರು.

ಸ್ವಾಮಿ ಶಿವಾನಂದರು ಮೂಲತಃ ತಮಿಳುನಾಡಿನವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಇವರು ಮಲೇಶಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆತ್ಮಜ್ಞಾನ ದಲ್ಲಿ ಜಿಜ್ಞಾಸೆ ಹೊಂದಿದವರಾಗಿ ಭಾರತಕ್ಕೆ ಹಿಂತಿರುಗಿ ಬಂದು ವಿಽವತ್ತಾಗಿ ಸನ್ಯಾಸ ಸ್ವೀಕರಿಸಿ, ಹೃಷೀಕೇಶದಲ್ಲಿ ದಿವ್ಯಜೀವನ ಸಂಘವನ್ನು
ಸ್ಥಾಪಿಸಿದರು. ಬಾಲಕೃಷ್ಣ ಮೆನನ್ ಪೂಜ್ಯ ಸ್ವಾಮಿ ಶಿವಾನಂದರ ಜೀವನ ಹಾಗೂ ಅವರ ಕಾರ್ಯಗಳನ್ನು ನೋಡಿ ತಮ್ಮ ಮನಸ್ಸಿನಲ್ಲಿದ್ದ ತಪ್ಪು ತಿಳುವಳಿಕೆಯನ್ನು ಬದಲಿಸಿಕೊಂಡು, ಕೆಲಕಾಲ ಅಲ್ಲಿಯೇ ವಾಸಿಸತೊಡಗಿದರು.

ಅಧ್ಯಾತ್ಮ ಗ್ರಂಥಗಳೆಂದರೆ ಸತ್ತ ಮೇಲಿನ ವಿಚಾರವನ್ನು ಏನೋ ಹೇಳುತ್ತವೆ ಎಂದು ತಿಳಿದುಕೊಂಡಿದ್ದ ಚಿನ್ಮಯರಿಗೆ ಪರಮಾಶ್ಚರ್ಯ ಕಾದಿತ್ತು. ಸ್ವಾಮಿ ಶಿವಾನಂದರು ಇಂಗ್ಲಿಷ್ ಭಾಷೆ ಯಲ್ಲಿ ಪ್ರವಚನ ಮಾಡುತ್ತಿದ್ದರಿಂದ ಇವರಿಗೆ ನಮ್ಮ ಶಾಸ್ತ್ರಗಳ ಸರಿಯಾದ ಪರಿಚಯವಾಯಿತು. ಸನಾತನ ಗ್ರಂಥಗಳು ಮಾನವನ ವ್ಯಕ್ತಿತ್ವ ನಿರ್ಮಾಣ ಮಾಡುವ ಪುಸ್ತಕಗಳು ಎಂಬುದು ಸ್ಪಷ್ಟವಾಯಿತು. ಬಾಲಕೃಷ್ಣ ಮೆನನ್‌ಗೆ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗತೊಡಗಿತು. ನಿತ್ಯವೂ ಸ್ವಾಮಿ ಶಿವಾನಂದರೊಡನೆ ಸಂವಾದವನ್ನು ಮಾಡುತ್ತಿದ್ದರು. ಇವರ ಆಸಕ್ತಿಯನ್ನು ಗುರುತಿಸಿ ಸ್ವಾಮಿ ಶಿವಾನಂದರು ೧೯೪೬ರ ಶಿವರಾತ್ರಿಯ ಶುಭದಿನದಂದು ಬಾಲಕೃಷ್ಣ ಮೆನನ್‌ಗೆ ಸನ್ಯಾಸವನ್ನು ನೀಡಿ, ಸ್ವಾಮಿ ಚಿನ್ಮಯಾನಂದ ಸರಸ್ವತಿ ಎಂಬ ನಾಮಧೇಯವನ್ನು ನೀಡಿದರು.

ಸನ್ಯಾಸಿಯಾದರೂ ಚಿನ್ಮಯಾನಂದರ ಜ್ಞಾನದಾಹ ಇಂಗಲಿಲ್ಲ. ಇದನ್ನರಿತ ಶಿವಾನಂದರು ಚಿನ್ಮಯಾನಂದರನ್ನು ಉತ್ತರಕಾಶಿಯಲ್ಲಿದ್ದ ಸ್ವಾಮೀ ತಪೋವನ ಮಹರಾಜರ ಬಳಿ ಹೆಚ್ಚಿನ ವ್ಯಾಸಂಗಕ್ಕಾಗಿ ಕಳುಹಿಸಿದರು. ಸ್ವಾಮಿ ತಪೋವನ ಮಹರಾಜರು ಸಂಸ್ಕೃತ ಪಂಡಿತರು ಮಾತ್ರವಲ್ಲ, ಶ್ರೋತ್ರಿ ಯರೂ, ಬ್ರಹ್ಮನಿಷ್ಠರಾಗಿದ್ದರು. ಅವರನ್ನು ಜನರು ‘ಹಿಮವದ್ ವಿಭೂತಿ’ ಎಂದು ಗೌರವಿಸುತ್ತಿದ್ದರು. ಸ್ವಾಮಿ ಚಿನ್ಮಯಾನಂದರು ಹಲವಾರು
ವರ್ಷ ತಪೋವನ ಮಹರಾಜರ ಬಳಿ ವೇದಾಂತ ವನ್ನು ಕಲಿತರು. ಉತ್ತರಕಾಶಿ ತಪೋವನ ಮಹರಾ ಜರು ವಾಸಿಸುತ್ತಿದ್ದ ಊರು. ಅಲ್ಲಿ ಕೇವಲ ಚಳಿಗಾ ಲದಲ್ಲಿ ಮಾತ್ರವಿದ್ದು ಬೇಸಿಗೆಯಲ್ಲಿ ಗಂಗೆಯ ಮೂಲವಾದ ಗೋಮುಖದಲ್ಲಿ ಇರುತ್ತಿದ್ದರು.

ಇಂದಿಗೂ ಗೋ ಮುಖದಿಂದ ಹದಿನಾಲ್ಕು ಕಿಲೋಮೀಟರ್ದೂರ ದಲ್ಲಿ ತಪೋವನ ಎಂಬ ಸ್ಥಳವಿದೆ. ಇದು ಅವರ ತಪೋಭೂಮಿ. ಗಂಗೆ ಹಿಮಾಲಯದ ಜನರಿಗೆ ಪರಮ ಪವಿತ್ರ ನದಿ. ಸ್ವಾಮಿ ಚಿನ್ಮಯಾನಂದರೂ ಗಂಗೆಯಿಂದ ಉತ್ತೇಜಿತರಾದರು. ಗೋಮುಖದಲ್ಲಿ ಹುಟ್ಟಿದ ಗಂಗೆ ಕೊನೆಗೆ ಕೊಲ್ಕತ್ತಾದಲ್ಲಿ ಗಂಗಾಸಾಗರವನ್ನು ಸೇರುತ್ತದೆ. ಹುಟ್ಟಿದ ಜಾಗದಿಂದ ಸೇರುವ ಜಾಗದ ನಡುವೆ ಹಲವಾರು ಪುಣ್ಯಕ್ಷೇತ್ರಗಳಿವೆ. ಗಂಗೆಯನ್ನು ವ್ಯವಸಾಯಕ್ಕೆ ಉಪಯೋಗಿಸುವ ರೈತರಿಗಂತೂ ಗಂಗೆ ಜೀವನದಿ. ಸಾಧು ಸಂತರಿಗೆ ಪರಮ ಪವಿತ್ರ ನದಿ. ಸ್ವಾಮೀಜಿಯವರು ನಿತ್ಯವೂ ಉತ್ತರಕಾಶಿಯಲ್ಲಿ ಗಂಗೆಯನ್ನು ನೋಡುತ್ತಿದ್ದರು. ಗಂಗೆ ಯ ಹಲವಾರು ಕಾರ್ಯಗಳನ್ನು ಗಮನಿಸಿದ ಗುರುದೇವರಿಗೆ ನಾನೇಕೆ ಈ ಜ್ಞಾನಗಂಗೆಯನ್ನು ಭಾರತದಲ್ಲಿ ಹಂಚಬಾರದು ಎಂಬ ಆಲೋಚನೆ ಬಂದಿತು. ಸ್ವಾಮಿ ತಪೋವನ ಮಹರಾಜರಿಂದ  ಅನುಮತಿ ಪಡೆದು ಹಿಮಾಲಯದಿಂದ ದಕ್ಷಿಣದತ್ತ ಪ್ರಯಾಣ ಬೆಳೆಸಿದರು.

೧೯೫೧ರ ಡಿಸೆಂಬರ್ ೩೧ ರಂದು ಪುಣೆಯಲ್ಲಿ ತಮ್ಮ ಮೊದಲ ಪ್ರವಚನವನ್ನು ಪ್ರಾರಂಭಿಸಿದರು. ಹೀಗೆ ಆರಂಭವಾದ ಅವರ ಪ್ರವಚನಮಾಲೆ ಅವಿರತವಾಗಿ ೪೩ ವರ್ಷಗಳ ಕಾಲ ನಡೆಯಿತು. ಸ್ವಾಮೀಜಿಯವರು ದೇಶವಿದೇಶಗಳಲ್ಲಿ ವಿಖ್ಯಾತ ರಾದರು. ೨೦೨೪ನೇ ಇಸವಿಯಲ್ಲಿ ಇಡೀ ವಿಶ್ವದಾ ದ್ಯಂತ ಪೂಜ್ಯ ಗುರುದೇವ ಸ್ವಾಮಿ ಚಿನ್ಮಯಾನಂದರ ೧೦೮ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ೧೦೦೮ ಮನೆಗಳಲ್ಲಿ ಸ್ವಾಮೀಜಿ ಯವರ ಪಾದುಕಾಪೂಜೆ ಯನ್ನು ಆಯೋಜಿಸಲಾಯಿತು. ಈ ಪೂಜೆಯ ಸಮಾರೋಪ ಸಮಾರಂಭವನ್ನು ಮೇ ೮ ರಿಂದ ೧೨ರ ವರೆಗೆ ಬೆಂಗಳೂರಿನ ಜೆ.ಪಿ ನಗರದ ೪ನೇ ಹಂತದಲ್ಲಿರುವ ಚಿನ್ಮಯ ಮಿಷನ್ನಿನ ಶ್ರಿ ಪಾದಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿನಾಂಕ ಮೇ ೧೨ರ ಭಾನುವಾರದಂದು ಬೆಳಿಗ್ಗೆ ೧೦ ರಿಂದ ೧ ರವರೆಗೆ ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರರು ಹಾಗೂ ಬೆಂಗಳೂರು ರಾಜರಾಜೇಶ್ವರೀ ನಗರದ ಶ್ರೀ ಕೈಲಾಸ ಆಶ್ರಮದ ಜಗದ್ಗುರು ಶ್ರೀ ಜಯೇಂದ್ರ ಪುರಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಮಹೋತ್ಸವವು
ಸಮಾರೋಪಗೊಳ್ಳಲಿದೆ.

(ಲೇಖಕರು : ಮಂಡ್ಯ ಚಿನ್ಮಯ ಮಿಷನ್‌ನ
ಪ್ರಮುಖರು)