Friday, 22nd November 2024

ನೇಪಾಳದ ಹೊಸ ನೂರು ರೂಪಾಯಿಗೆ ಆಕ್ಷೇಪ: ಆರ್ಥಿಕ ಸಲಹೆಗಾರ ರಾಜೀನಾಮೆ

ಠ್ಮಂಡು: ನೇಪಾಳದ ಹೊಸ ನೂರು ರೂಪಾಯಿ ಮುಖಬೆಲೆಯ ನೋಟಿನಲ್ಲಿ ದೇಶದ ಸಂಸತ್ತು ಅಂಗೀಕರಿಸಿದ ಹೊಸ ನಕ್ಷೆಯನ್ನು ಮುದ್ರಿಸದಿರುವು ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ದೇಶದ ಅಧ್ಯಕ್ಷರ ಆರ್ಥಿಕ ಸಲಹೆಗಾರ ಚಿರಂಜೀವಿ ನೇಪಾಳ ಸೋಮವಾರ ರಾಜೀನಾಮೆ ನೀಡಿದ್ದಾರೆ.

ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌದೆಲ್ ಅವರು ಚಿರಂಜೀವಿ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ.

ನೇಪಾಳ ಸರ್ಕಾರವು ಇತ್ತೀಚೆಗೆ ದೇಶದ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಕಾಲಪಾನಿ, ಲಿಪುಲೇಖ್‌ ಹಾಗೂ ಲಿಂಪಿಯಾಧುರ ಭಾಗಗಳು ಸೇರಿವೆ. ಆದರೆ ಹೊಸ ನೋಟಿನಲ್ಲಿ ಹಳೆಯ ನಕ್ಷೆಯೇ ಹೋಗಿರುವುದು ವಿವಾದಕ್ಕೆ ಕಾರಣವಾಗಿದೆ.

ನೇಪಾಳದ ಹೊಸ ನೋಟಿನಲ್ಲಿ ಕಾಲಾಪಾನಿ, ಲಿಪುಲೇಖ್‌ ಹಾಗೂ ಲಿಂಪಿಯಾಧುರ ಪ್ರಾಂತ್ಯಗಳನ್ನು ಸೇರಿಸಲಾಗಿದೆ. ಆದರೆ ಈ ಪ್ರಾಂತ್ಯಗಳು ತನಗೆ ಸೇರಿದ್ದು ಎಂದು ಭಾರತ ಪ್ರತಿಪಾದಿಸಿದೆ. ಜತೆಗೆ ನೇಪಾಳದ ಕ್ರಮಕ್ಕೆ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಿದ್ದರೂ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಭಾರತದ ಈ ಮೂರು ಪ್ರಾಂತ್ಯಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ನೇಪಾಳ ಸರ್ಕಾರ ಅಂಗೀಕರಿಸಿದೆ.

ಕೃತಕವಾಗಿ ದೇಶದ ನಕ್ಷೆ ಹಿಗ್ಗಿಸಿರುವುದು ಸರಿಯಾದ ಕ್ರಮವಲ್ಲ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ನೇಪಾಳವು ಸದ್ಯ ಭಾರತದೊಂದಿಗೆ 1,850 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಗಡಿಗಳೂ ಸೇರಿವೆ.