Thursday, 12th December 2024

ಕೃತಕ ಬುದ್ಧಿಮತ್ತೆಯ ಸುತ್ತಮುತ್ತ

ಅವಲೋಕನ

ಗೋಪಾಲಕೃಷ್ಣ ಭಟ್. ಬಿ

ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಅಂದರೆ, ಮನುಷ್ಯ ದೈಹಿಕವಾಗಿ ಅಥವಾ ಬೌದ್ಧಿಕವಾಗಿ ನಿರ್ವಹಿಸಬಹುದಾದ ಕೆಲಸವನ್ನು, ತಂತ್ರಜ್ಞಾನ ಆಧರಿತ ಸಾಧನಗಳ ಮೂಲಕ ಮಾಡುವಂಥ ಅಥವಾ ಮಾಡಿಸುವಂಥ ಆವಿಷ್ಕಾರ. ‘ಎಐ’ ಇಂದು ಕ್ರಾಂತಿಕಾರಿ ತಂತ್ರಜ್ಞಾನ ವಾಗಿದೆ. ಇದು ಯಂತ್ರಗಳು ಮಾನವರ ಸಹಾಯದಿಂದ ಹೊಂದಿರುವ ಬುದ್ಧಿವಂತಿಕೆಯಾಗಿದ್ದು, ಅದರ ಅಡಿಯಲ್ಲಿ ಯಂತ್ರಗಳು ವಿವಿಧ  ಕಾರ್ಯ ಗಳನ್ನು ನಿರ್ವಹಿಸಲು ಸಾಧ್ಯವಿದೆ.

‘ಎಐ’ ಸಹಾಯದಿಂದ ಯಂತ್ರಗಳು ಕಲಿಯಲು, ಒಳಹರಿವುಗಳಿಗೆ ಸರಿಹೊಂದಿಸಲು, ಮಾನವ-ರೀತಿಯ ಕಾರ್ಯಗಳನ್ನು ನಿರ್ವಹಿಸಲು, ಸಮಸ್ಯೆಗಳನ್ನು ಪರಿಹರಿಸಲು, ವಿಷಯಗಳನ್ನು ಯೋಜಿಸಲು ಸಾಧ್ಯವಾಗುತ್ತದೆ. ಇದು ನೈಸರ್ಗಿಕ ಭಾಷಾ ಸಂಸ್ಕರಣೆ (ಎನ್ ಎಲ್‌ಪಿ), ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಗಳು ಮತ್ತು ಯಂತ್ರ ಕಲಿಕೆ (ಎಂ.ಎಲ್) ಇತ್ಯಾದಿಯನ್ನು ಒಳಗೊಂಡಿರುತ್ತದೆ.

ಎನ್‌ಎಲ್‌ಪಿ ಎಂದರೆ, ತಂತ್ರಜ್ಞಾನ ಲೋಕದಲ್ಲಿ ಮನುಷ್ಯ ಭಾಷೆಯನ್ನು ಯಂತ್ರಗಳಿಗೆ ಸರಳವಾಗಿ ಅರ್ಥಮಾಡಿಸುವ ಪ್ರಕ್ರಿಯೆ. ‘ಚಾಟ್ ಜಿಪಿಟಿ’ ಸಾಫ್ಟ್ ವೇರ್‌ ಬಂದ ನಂತರ ಈ ತಂತ್ರಜ್ಞಾನ ಮತ್ತಷ್ಟು ಮುಂದುವರಿದಿದೆ. ನಾವು ನೀಡುವ ಆಜ್ಞೆಯನ್ನು ಕ್ಷಣಮಾತ್ರದಲ್ಲೇ ಮುಗಿಸುವಂಥ ಮುಂದುವರಿದ ತಂತ್ರಜ್ಞಾನವು ಈಗ ಚಾಟ್ ಜಿಪಿಟಿಯಲ್ಲಿ ಬಳಕೆಯಲ್ಲಿದೆ. ಎಂ.ಎಲ್. ಎನ್ನುವುದು ಕೃತಕ ಬುದ್ಧಿಮತ್ತೆಯ ಒಂದು ಅಪ್ಲಿಕೇಷನ್ ಆಗಿದ್ದು, ಅದು ಅಪಾರ ಪ್ರಮಾಣದ ಡೇಟಾದಿಂದ ಕಲಿಯುವುದಕ್ಕೆ ಮತ್ತು ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಿಸ್ಟಮ್‌ಗಳಿಗೆ ಅನುವುಮಾಡಿಕೊಡುತ್ತದೆ.

ಚೆಸ್ ಆಡುವ ಕಂಪ್ಯೂಟರ್‌ಗಳಿಂದ ಮೊದಲ್ಗೊಂಡು ಸ್ವಯಂಚಾಲನಾ ಕಾರುಗಳವರೆಗೆ ಇಂದು ನಾವು ಕಾಣುವ ಹೆಚ್ಚಿನ ‘ಎಐ’ ಉದಾಹರಣೆಗಳು, ಆಳವಾದ ಕಲಿಕೆ ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈ ತಂತ್ರಜ್ಞಾನಗಳನ್ನು ಬಳಸಿಕೊಂಡು, ಹೆಚ್ಚಿನ
ಪ್ರಮಾಣದ ಡೇಟಾವನ್ನು ಸಂಸ್ಕರಿಸುವ ಮತ್ತು ಅದರಲ್ಲಿನ ಮಾದರಿಗಳನ್ನು ಗುರುತಿಸುವ ಮೂಲಕ, ನಿರ್ದಿಷ್ಟ ಕಾರ್ಯಗಳನ್ನು ಸಾಧಿಸಲು ಕಂಪ್ಯೂ ಟರ್‌ಗಳಿಗೆ ತರಬೇತಿ ನೀಡಬಹುದು. ದೃಷ್ಟಿ-ಧ್ವನಿ ಗುರುತಿಸುವಿಕೆ, ನಿರ್ಧಾರ ಮಾಡುವಿಕೆ ಮತ್ತು ಅನುವಾದ ಕಾರ್ಯವನ್ನು ಅವು ಒಳಗೊಂಡಿ ರುತ್ತವೆ.

ಮಿಲಿಟರಿ, ಕಾನೂನು, ಹಣಕಾಸು, ಆಟೋಮೋಟಿವ್, ಆಡಿಟ್, ಕಲೆ, ವೈದ್ಯಕೀಯ ತಪಾಸಣೆ, ಷೇರು ವ್ಯವಹಾರ, ಯಂತ್ರಮಾನವ ನಿಯಂತ್ರಣ, ಕಾನೂನು, ವೈಜ್ಞಾನಿಕ ಅನ್ವೇಷಣೆ, ಆಟಿಕೆಗಳು, ವಿಡಿಯೋ ಗೇಮ್‌ಗಳು ಮತ್ತು ವೆಬ್ ಶೋಧ ಯಂತ್ರಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ‘ಎಐ’ನ ವ್ಯಾಪಕ ಬಳಕೆಯಾಗುತ್ತಿದೆ.

ಕೃತಕ ಬುದ್ಧಿಮತ್ತೆಯ ಅನುಕೂಲಗಳು: ೧. ದೋಷಗಳು ಹಾಗೂ ಅಜಾಗರೂಕತೆ ಕಡಿಮೆ. ಉದಾಹರಣೆಗೆ, ರೋಬೋಟಿಕ್ ಸರ್ಜರಿ ವ್ಯವಸ್ಥೆಯು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿ ಗುರುತಿಸಲ್ಪಟ್ಟಿದೆ. ಇದರಿಂದ ಹಲವಾರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಾಧ್ಯವಾಗಿದೆ. ಮನುಷ್ಯ ಮಾಡಬಹುದಾದ ದೋಷಗಳನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ ಮತ್ತು ಇದು ಅಜಾಗರೂಕತೆಯನ್ನು ತಪ್ಪಿಸುತ್ತದೆ.

೨. ಬಾಂಬ್ ನಿಷ್ಕ್ರಿಯಗೊಳಿಸುವಿಕೆ, ಬಾಹ್ಯಾಕಾಶ ಯಾನ, ಸಾಗರಗಳ ಆಳವಾದ ಭಾಗಗಳ ಅನ್ವೇಷಣೆ ಇತ್ಯಾದಿ ಕಾರ್ಯಗಳಲ್ಲಿ ರೋಬೋಟ್‌ಗಳನ್ನು ಬಳಸುವುದರಿಂದ ಸಂಶೋಧನೆ ಮತ್ತು ರಕ್ಷಣಾ ಕಾರ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಪ್ಪಿಸಲು ಸಾಧ್ಯವಿದೆ.

೩. ಮನುಷ್ಯ ದಿನಕ್ಕೆ ೫ರಿಂದ ೬ ಗಂಟೆಗಳ ಕಾಲ ಮಾತ್ರ ಉತ್ಸಾಹದಿಂದ ಕಾರ್ಯನಿರ್ವಹಿಸಬಲ್ಲ ಎಂಬುದನ್ನು ಪುಷ್ಟೀಕರಿಸುವ ಅನೇಕ ಅಧ್ಯಯನ ವರದಿಗಳಿವೆ. ಜತೆಗೆ ಆತನಿಗೆ ತನ್ನ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ವಿರಾಮದ ಅಗತ್ಯವಿರುತ್ತದೆ. ಆದರೆ ಕೃತಕ ಬುದ್ಧಿಮತ್ತೆಯನ್ನೊಳಗೊಂಡ ಸಾಧನಗಳು ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಬೇಸರದ, ಪುನರಾವರ್ತಿತ ಕೆಲಸ ಗಳನ್ನು ಇದರಿಂದ ಸರಳವಾಗಿ ಸಾಽಸಲು ಸಾಧ್ಯವಿದೆ.

೪. ತಾಂತ್ರಿಕವಾಗಿ ಮುಂದುವರಿದ ಕೆಲವು ಕಂಪನಿಗಳು ಡಿಜಿಟಲ್ ಸಹಾಯಕಗಳನ್ನು ಬಳಸಿಕೊಂಡು ಗ್ರಾಹಕರೊಂದಿಗೆ ಸಂವಹನ ನಡೆಸುತ್ತವೆ. ಕರೆ ಅಥವಾ ಸಂದೇಶಗಳಿಗೆ ಸೂಕ್ತ ಉತ್ತರವನ್ನು ನೀಡಲು ಇದು ಸಹಕಾರಿಯಾಗಿದೆ. ಅಲ್ಲದೆ ವೆಬ್‌ಸೈಟ್‌ಗಳಲ್ಲೂ ತಮಗೆ ಬೇಕಾದ ಮಾಹಿತಿಗಳನ್ನು
ಹುಡುಕಿ ಪಡೆಯಬಹುದಾದ ವ್ಯವಸ್ಥೆ ಸಹ ಲಭ್ಯವಿದೆ.

೫. ಕೃತಕ ಬುದ್ಧಿಮತ್ತೆಯೆಂಬುದು ಪ್ರಾಯೋಗಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಹಲವಾರು ಆವಿಷ್ಕಾರಗಳ ಹಿಂದಿನ ಶಕ್ತಿಯಾಗಿದೆ. ವೈದ್ಯಕೀಯ ಲೋಕದಲ್ಲಿ ಸವಾಲಾಗಿ ಪರಿಣಮಿಸಿರುವ ಎಷ್ಟೋ ಕಾಯಿಲೆಗಳನ್ನು ಪತ್ತೆ ಹಚ್ಚಲು ಇದು ಬಹಳಷ್ಟು ಸಹಕಾರಿಯಾಗಿದೆ. ಸ್ವಯಂಚಾಲಿತ ಕಾರುಗಳು ಮಾನವ ಹಸ್ತಕ್ಷೇಪವಿಲ್ಲದೆ ಕ್ಯಾಮೆರಾ ಹಾಗೂ ತಂತ್ರಜ್ಞಾನದ ಮೂಲಕ ಸಂಚರಿಸುವ ಶಕ್ತಿ ಹೊಂದಿವೆ. ಇದರಿಂದ ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ಸಂಚಾರಿ ದಟ್ಟಣೆಯನ್ನು ತಗ್ಗಿಸಲು ಸಾಧ್ಯ ಮತ್ತು ಇದು ವಿಕಲಚೇತನರಿಗೂ ಅನುಕೂಲಕಾರಿ. ವಾಹನಗಳಲ್ಲಿನ ‘ಎಐ’ ನಿಯಂತ್ರಿತ ವ್ಯವಸ್ಥೆಯು ಅಪ
ಘಾತಗಳ ಸಂಖ್ಯೆಯನ್ನು ತಗ್ಗಿಸಲು ಸಹಕಾರಿಯಾಗಬಲ್ಲದು.

೬. ಕೃತಕ ಬುದ್ಧಿಮತ್ತೆಗೆ ಯಾವುದೇ ಪಕ್ಷಪಾತದ ದೃಷ್ಟಿಕೋನಗಳಿಲ್ಲ. ಇದರಿಂದಾಗಿ ಹೆಚ್ಚು ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲ ವಾಗುತ್ತದೆ.

೭. ಇಂದು ನಮ್ಮ ದೈನಂದಿನ ಜೀವನವು ಮೊಬೈಲ್ ಸಾಧನಗಳು ಮತ್ತು ಅಂತರ್ಜಾಲವನ್ನು ಬಹುತೇಕವಾಗಿ ಅವಲಂಬಿಸಿದೆ. ವ್ಯಕ್ತಿಯೊಬ್ಬ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವಾಗ ಮಾರ್ಗಗಳನ್ನು ಹುಡುಕಲು ಹಾಗೂ ಹವಾಮಾನದ ವೈಪರೀತ್ಯಗಳನ್ನು ಲೆಕ್ಕಾಚಾರ ಹಾಕಲು ‘ಎಐ’
ಆಧರಿತ ಸಾಧನಗಳನ್ನು ಬಳಸಲಾಗುತ್ತದೆ. ಇದರಿಂದ ನಮ್ಮ ಕೆಲಸಗಳು ಸರಾಗವಾಗಿ ನೆರವೇರುತ್ತವೆ.

೮. ಗಣಿಗಾರಿಕೆ ಪ್ರದೇಶಗಳಲ್ಲಿ ಮತ್ತು ವಿಕಿರಣಗಳನ್ನು ಹೊರಸೂಸುವ ಜಾಗಗಳಲ್ಲಿ ‘ಎಐ’ ಆಧರಿತ ಸಾಧನಗಳನ್ನು ಬಳಸುವುದರಿಂದಾಗಿ ಮನುಷ್ಯರಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ದೂರಮಾಡಬಹುದು. ಸೇನೆ ಹಾಗೂ ಭದ್ರತಾ ವ್ಯವಸ್ಥೆಗಳಲ್ಲಿ ‘ಎಐ’ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು.

೯. ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಮೊದಲ್ಗೊಂಡು, ಔಷಧ ಶೋಧನೆ ಹಾಗೂ ಕ್ಲಿನಿಕಲ್ ಪ್ರಯೋಗಗಳವರೆಗಿನ ರೋಗಿಗಳ ಡೇಟಾವನ್ನು ವಿಶ್ಲೇಷಿಸಲು ‘ಎಐ’ ಸಹಕಾರಿಯಾಗಿದೆ. ಅಲ್ಲದೆ ಸಂಭಾವ್ಯ ಆರೋಗ್ಯ-ಅಪಾಯಗಳನ್ನು ಗುರುತಿಸಿ ಮುನ್ಸೂಚನೆ ನೀಡುವಂಥ ಸಾಧನವಾಗಿ ‘ಎಐ’ ಬಳಕೆಯಾಗುತ್ತಿದೆ.

೧೦. ಹೆಚ್ಚಿನ ಪ್ರಮಾಣದ ಡೇಟಾವನ್ನು ವಿಶ್ಲೇಷಿಸುವ ಮತ್ತು ಪ್ರವೃತ್ತಿಗಳನ್ನು ಗುರುತಿಸುವ ಸಾಮರ್ಥ್ಯದೊಂದಿಗೆ, ಗ್ರಾಹಕರ ನಡವಳಿಕೆ, ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಇತರೆ ಪ್ರಮುಖ ಅಂಶಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ವಾಣಿಜ್ಯ ಸಂಸ್ಥೆಗಳಿಗೆ ‘ಎಐ’ ನೆರವಾಗುತ್ತದೆ. ಇದರಿಂದಾಗಿ
ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ವ್ಯಾಪಾರ-ವ್ಯವಹಾರದ ಫಲಿತಾಂಶಗಳನ್ನು ಸುಧಾರಿಸಬಹುದು.

ಕೃತಕ ಬುದ್ಧಿಮತ್ತೆಯ ಅನನುಕೂಲಗಳು:
೧. ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳಬಲ್ಲ ಯಂತ್ರಗಳನ್ನು ರಚಿಸುವುದು ಸಣ್ಣ ಸಾಧನೆಯಲ್ಲ. ಇದಕ್ಕೆ ಸಾಕಷ್ಟು ಸಮಯ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ. ಈ ಸಾಧನಗಳನ್ನು ಕಾಲಾನುಕಾಲಕ್ಕೆ ನವೀಕರಿಸಬೇಕಾಗುತ್ತದೆ ಮತ್ತು ಇತ್ತೀಚಿನ ಅವಶ್ಯಕತೆಗಳನ್ನು ಪೂರೈಸಲು ಅಪ್‌ಡೇಟ್ ಮಾಡಬೇಕಾಗುತ್ತದೆ.

೨. ಕೃತಕ ಬುದ್ಧಿಮತ್ತೆಯು ತನ್ನ ಮಿತಿಯೊಳಗಷ್ಟೇ ಕಾರ್ಯನಿರ್ವಹಿಸುತ್ತದೆ, ಅದರಾಚೆಗೆ ಯೋಚಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ಈಗಾಗಲೇ ಒದಗಿಸಲಾದ ಡೇಟಾ ಮತ್ತು ಮಾಹಿತಿಗಳನ್ನು ಮಾತ್ರ ಅದು ಒಳಗೊಂಡಿರುತ್ತದೆ.

೩. ‘ಎಐ’ ರೋಬೋಟ್‌ಗಳು ಮನುಷ್ಯರ ಕೆಲಸವನ್ನು ಕಸಿಯುವ ಸಾಧ್ಯತೆ ಎದ್ದುಕಾಣುತ್ತದೆ. ಉದಾಹರಣೆಗೆ, ಜಪಾನ್ ನಂಥ ತಾಂತ್ರಿಕವಾಗಿ ಮುಂದು ವರಿದ ಕೆಲವು ರಾಷ್ಟ್ರಗಳಲ್ಲಿ ಕೈಗಾರಿಕಾ ಕಾರ್ಯಗಳಲ್ಲಿ ಮಾನವ ಸಂಪನ್ಮೂಲದ ಬದಲು ರೋಬೋಟ್‌ಗಳನ್ನು ಬಳಸಲಾಗುತ್ತದೆ. ಇದು ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

೪. ಕೃತಕ ಬುದ್ಧಿಮತ್ತೆಯ ಅಪ್ಲಿಕೇಷನ್‌ಗಳ ಹೆಚ್ಚಿನ ಬಳಕೆಯಿಂದ ಮನುಷ್ಯನ ಮಿದುಳಿಗೆ ಕೆಲಸ ಕಡಿಮೆಯಾಗಿ, ಆತನ ಬೌದ್ಧಿಕ ಸಾಮರ್ಥ್ಯ ಕುಂಠಿತ ಗೊಳ್ಳುವ ಸಾಧ್ಯತೆ ಹೆಚ್ಚಿದೆ. ೫. ನೈತಿಕತೆಯು ಮಾನವನ ಪ್ರಮುಖ ಲಕ್ಷಣವಾಗಿದೆ; ಆದರೆ ಈ ಗುಣವನ್ನು ‘ಎಐ’ಗೆ ಅಳವಡಿಸಲು ಕಷ್ಟವಾಗುತ್ತದೆ.

‘ಎಐ’ ಮುಂದೊಂದು ದಿನ ಅನಿಯಂತ್ರಿತವಾಗಿ ಬೆಳೆಯುತ್ತದೆ. ಯುದ್ಧ ಮತ್ತು ಸೇನಾ ಕಾರ್ಯಾಚರಣೆಗಳಲ್ಲಿನ ‘ಎಐ’ ಬಳಕೆಯು ಮಹಾವಿನಾಶಕ್ಕೆ ಕಾರಣವಾಗಬಹುದು. ಕಂಪ್ಯೂಟರ್‌ಗಳು ಮತ್ತು ‘ಎಐ’ ಆಧರಿತ ಯಂತ್ರಗಳು ಮನುಷ್ಯರಂತೆ ಭಾವನೆಗಳನ್ನು ಹೊಂದಿಲ್ಲ. ಒಟ್ಟಾರೆ ಹೇಳುವುದಾದರೆ, ಕೃತಕ ಬುದ್ಧಿಮತ್ತೆಯು ಪ್ರಪಂಚದ ಭವಿಷ್ಯವಾಗಲು ಸಿದ್ಧವಾಗಿದ್ದು, ಸದ್ಯದಲ್ಲೇ ಮಾನವ ಜೀವನದ ಒಂದು ಭಾಗ ಮತ್ತು ಅಂಶವಾಗಲಿದೆ ಎನ್ನುತ್ತಾರೆ
ತಜ್ಞರು. ಸಮಕಾಲೀನ ಪ್ರಪಂಚದಲ್ಲಿ ‘ಎಐ’ ತಂತ್ರಜ್ಞಾನವು ಮಾನವ ಜೀವನದ ಎಲ್ಲಾ ಮಗ್ಗುಲುಗಳನ್ನೂ ಪ್ರವೇಶಿಸಿದೆ. ಇದು ಆಧುನಿಕ ಯುಗದ ಒಂದು ಅವಿಭಾಜ್ಯ ಘಟಕವಾಗಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲೂ ಅನಿವಾರ್ಯವಾಗಬಹುದು ಎಂಬುದು ತಜ್ಞರ ಅಭಿಮತ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)